ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • w06 3/1 ಪು. 28-29
  • ವಾಚಕರಿಂದ ಪ್ರಶ್ನೆಗಳು

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ವಾಚಕರಿಂದ ಪ್ರಶ್ನೆಗಳು
  • ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2006
  • ಅನುರೂಪ ಮಾಹಿತಿ
  • ಸಭೆಯು ಯೆಹೋವನನ್ನು ಸ್ತುತಿಸಲಿ
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2007
  • ಕ್ರೈಸ್ತ ಕೂಟಗಳ ಭಕ್ತಿವೃದ್ಧಿಯಲ್ಲಿ ನೀವು ಪಾಲಿಗರೊ?
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2010
  • ಸಹೋದರಿಯರಿಗೆ ಬೆಂಬಲ ಕೊಡಿ
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಅಧ್ಯಯನ)—2020
  • ಸಭೆಯು ಭಕ್ತಿಯಲ್ಲಿ ಬೆಳೆಯಲಿ
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2007
ಇನ್ನಷ್ಟು
ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2006
w06 3/1 ಪು. 28-29

ವಾಚಕರಿಂದ ಪ್ರಶ್ನೆಗಳು

ಸ್ತ್ರೀಯರು “ಸಭೆಯ ಕೂಟಗಳಲ್ಲಿ ಸುಮ್ಮಗಿರಬೇಕು” ಎಂಬುದಾಗಿ ಅಪೊಸ್ತಲ ಪೌಲನು ಹೇಳಿದಾಗ ಅವನು ಏನನ್ನು ಉದ್ದೇಶಿಸಿದನು?

ಕೊರಿಂಥದಲ್ಲಿದ್ದ ಕ್ರೈಸ್ತ ಸಭೆಗೆ ಪೌಲನು ಹೀಗೆ ಬರೆದನು: “ದೇವಜನರ ಎಲ್ಲಾ ಸಭೆಗಳ ಮರ್ಯಾದೆಯ ಪ್ರಕಾರ ಸ್ತ್ರೀಯರು ಸಭೆಯ ಕೂಟಗಳಲ್ಲಿ ಸುಮ್ಮಗಿರಬೇಕು; ಮಾತಾಡುವದಕ್ಕೆ ಅವರಿಗೆ ಅಪ್ಪಣೆಯಿಲ್ಲ.” (1 ಕೊರಿಂಥ 14:​34) ಇದನ್ನು ಸರಿಯಾಗಿ ಅರ್ಥಮಾಡಿಕೊಳ್ಳಲು, ಪೌಲನ ಸಲಹೆಯ ಪೂರ್ವಾಪರವನ್ನು ಪರಿಗಣಿಸುವುದು ಸಹಾಯಕಾರಿಯಾಗಿರುವುದು.

ಒಂದನೇ ಕೊರಿಂಥ 14ನೇ ಅಧ್ಯಾಯದಲ್ಲಿ ಪೌಲನು ಕ್ರೈಸ್ತ ಸಭೆಯ ಕೂಟಗಳಿಗೆ ಸಂಬಂಧಿಸಿದ ವಿಚಾರಗಳನ್ನು ಚರ್ಚಿಸಿದನು. ಕೂಟಗಳಲ್ಲಿ ಯಾವೆಲ್ಲ ವಿಚಾರಗಳನ್ನು ಚರ್ಚಿಸಬೇಕು ಮತ್ತು ಕೂಟಗಳನ್ನು ಹೇಗೆ ನಡೆಸಬೇಕು ಎಂಬುದನ್ನು ಅವನು ವರ್ಣಿಸಿದನು. (1 ಕೊರಿಂಥ 14:​1-6, 26-34) ಮಾತ್ರವಲ್ಲದೆ, ಕ್ರೈಸ್ತ ಕೂಟಗಳ ಮುಖ್ಯ ಉದ್ದೇಶವನ್ನು ಸಹ ಅವನು ಒತ್ತಿಹೇಳಿದನು. ‘ಸಭೆಯ ಭಕ್ತಿವೃದ್ಧಿಯೇ’ ಆ ಮುಖ್ಯ ಉದ್ದೇಶವಾಗಿದೆ.​—1 ಕೊರಿಂಥ 14:​4, 5, 12, 26.

“ಸುಮ್ಮಗಿರಬೇಕು” ಎಂಬ ಪೌಲನ ಸಲಹೆಯು, 1 ಕೊರಿಂಥ 14ನೇ ಅಧ್ಯಾಯದಲ್ಲಿ ಒಟ್ಟು ಮೂರು ಬಾರಿ ಕಂಡುಬರುತ್ತದೆ. ಪ್ರತಿ ಬಾರಿ ಅದು ಸಭೆಯಲ್ಲಿರುವ ಬೇರೆ ಬೇರೆ ಗುಂಪಿಗೆ ಸಂಬೋಧಿಸಲಾಗಿದೆ. ಆದರೆ ಎಲ್ಲ ಸಂದರ್ಭಗಳಲ್ಲಿ, “ಎಲ್ಲವೂ ಮರ್ಯಾದೆಯಿಂದಲೂ ಕ್ರಮದಿಂದಲೂ ನಡೆಯಲಿ” ಎಂಬ ಒಂದೇ ಕಾರಣಕ್ಕಾಗಿ ಅದು ಕೊಡಲ್ಪಟ್ಟಿದೆ.​—1 ಕೊರಿಂಥ 14:40.

ಮೊದಲನೆಯದಾಗಿ, ಪೌಲನು ಹೇಳಿದ್ದು: “ವಾಣಿಯನ್ನಾಡುವದಾದರೆ ಇಬ್ಬರು ಅಥವಾ ಅವಶ್ಯಕವಿದ್ದರೆ ಮೂವರಿಗಿಂತ ಹೆಚ್ಚಿಲ್ಲದೆ ಒಬ್ಬೊಬ್ಬರಾಗಿ ಮಾತಾಡಬೇಕು; ಮತ್ತು ಒಬ್ಬನೇ ಅರ್ಥವನ್ನು ಹೇಳಬೇಕು. ಅರ್ಥವನ್ನು ಹೇಳುವವನಿಲ್ಲದಿದ್ದರೆ ವಾಣಿಯನ್ನಾಡುವವನು ಸಭೆಯಲ್ಲಿ ಸುಮ್ಮಗಿರಲಿ; ತನ್ನೊಂದಿಗೆಯೂ ದೇವರೊಂದಿಗೆಯೂ ಮಾತಾಡಿಕೊಳ್ಳಲಿ.” (1 ಕೊರಿಂಥ 14:27, 28) ಇದರರ್ಥ ಆ ವ್ಯಕ್ತಿಯು ಕೂಟಗಳಲ್ಲಿ ಮಾತಾಡಲೇಬಾರದು ಎಂದಲ್ಲ, ಆದರೆ ಅವನು ಸುಮ್ಮಗಿರಬೇಕಾದ ಸಮಯಗಳೂ ಇರುತ್ತಿದ್ದವು. ನೆನಪಿನಲ್ಲಿಡಿರಿ, ಕೂಟಗಳ ಮುಖ್ಯ ಉದ್ದೇಶವು ಒಬ್ಬರನ್ನೊಬ್ಬರು ಭಕ್ತಿವೃದ್ಧಿಮಾಡುವುದಾಗಿದೆ, ಆದುದರಿಂದ ಅವನು ಯಾರಿಗೂ ಅರ್ಥವಾಗದಂಥ ಭಾಷೆಯಲ್ಲಿ ಮಾತನಾಡಿದರೆ ಈ ಉದ್ದೇಶವನ್ನು ಪೂರೈಸಸಾಧ್ಯವಿರಲಿಲ್ಲ.

ಎರಡನೆಯದಾಗಿ, ಪೌಲನು ಹೇಳಿದ್ದು: “ಪ್ರವಾದಿಗಳು ಇಬ್ಬರಾಗಲಿ ಮೂವರಾಗಲಿ ಮಾತಾಡಲಿ, ಮಿಕ್ಕಾದವರು ಕೇಳಿ ವಿವೇಚನೆಮಾಡಲಿ. ಕೂತಿರುವ ಮತ್ತೊಬ್ಬನಿಗೆ ಪ್ರಕಟನೆ ಉಂಟಾದರೆ ಮೊದಲಿನವನು ಸುಮ್ಮಗಾಗಲಿ.” ಇದರರ್ಥ ಮೊದಲನೇ ಪ್ರವಾದಿಯು ಕೂಟಗಳಲ್ಲಿ ಮಾತಾಡಲೇಬಾರದು ಎಂದಲ್ಲ, ಆದರೆ ಕೆಲವೊಮ್ಮೆ ಅವನು ಸುಮ್ಮಗಿರಬೇಕಾಗಿತ್ತು. ಆಗ ಅದ್ಭುತಕರವಾಗಿ ಪ್ರಕಟನೆಯನ್ನು ಹೊಂದಿದವನು ಸಭೆಯೊಂದಿಗೆ ಮಾತಾಡಸಾಧ್ಯವಿತ್ತು ಮತ್ತು ಹೀಗೆ, ‘ಎಲ್ಲರೂ ಎಚ್ಚರಿಕೆಹೊಂದಬೇಕೆಂಬ’ ಅಥವಾ ಉತ್ತೇಜಿಸಲ್ಪಡಬೇಕೆಂಬ ಕೂಟದ ಉದ್ದೇಶವು ಪೂರೈಸಲ್ಪಡುತ್ತಿತ್ತು.​—1 ಕೊರಿಂಥ 14:​26, 29-31.

ಮೂರನೆಯದಾಗಿ, ಪೌಲನು ಕ್ರೈಸ್ತ ಸ್ತ್ರೀಯರನ್ನು ಮಾತ್ರ ಸಂಬೋಧಿಸುತ್ತಾ ಹೇಳಿದ್ದು: “ಸ್ತ್ರೀಯರು ಸಭೆಯ ಕೂಟಗಳಲ್ಲಿ ಸುಮ್ಮಗಿರಬೇಕು; ಮಾತಾಡುವದಕ್ಕೆ ಅವರಿಗೆ ಅಪ್ಪಣೆಯಿಲ್ಲ; ಅವರು ಅಧೀನದಲ್ಲಿರಬೇಕು.” (1 ಕೊರಿಂಥ 14:34) ಪೌಲನು ಸಹೋದರಿಯರಿಗೆ ಈ ಆಜ್ಞೆಯನ್ನು ಏಕೆ ನೀಡಿದನು? ಸಭೆಯಲ್ಲಿ ಸುವ್ಯವಸ್ಥೆಯನ್ನು ಕಾಪಾಡಿಕೊಳ್ಳುವ ಉದ್ದೇಶದಿಂದಲೇ. ಅವನು ಹೇಳಿದ್ದು: “ಅವರು ಏನಾದರೂ ತಿಳುಕೊಳ್ಳುವದಕ್ಕೆ ಅಪೇಕ್ಷಿಸಿದರೆ ಮನೆಯಲ್ಲಿ ತಮ್ಮ ಗಂಡಂದಿರನ್ನು ಕೇಳಲಿ. ಸ್ತ್ರೀಯರು ಸಭೆಯಲ್ಲಿ ಮಾತಾಡುವದು ನಾಚಿಗೆಗೆಟ್ಟ ಕೆಲಸವಾಗಿದೆ.”​—1 ಕೊರಿಂಥ 14:35.

ಒಂದುವೇಳೆ ಸಭೆಯಲ್ಲಿ ಹೇಳಲ್ಪಡುತ್ತಿದ್ದ ವಿಷಯವನ್ನು ಕೆಲವು ಸಹೋದರಿಯರು ವಿರೋಧಿಸುತ್ತಿದ್ದಿರಬಹುದು. ಅಂಥ ಅಗೌರವದ ಮನೋಭಾವವನ್ನು ತ್ಯಜಿಸಿ, ಯೆಹೋವನು ಇಟ್ಟಿರುವ ತಲೆತನದ ಏರ್ಪಾಡನ್ನು, ಮುಖ್ಯವಾಗಿ ತಮ್ಮ ಗಂಡಂದಿರ ತಲೆತನವನ್ನು ದೀನಭಾವದಿಂದ ಸ್ವೀಕರಿಸುವಂತೆ ಪೌಲನ ಸಲಹೆಯು ಸಹೋದರಿಯರಿಗೆ ಸಹಾಯಮಾಡಿತು. (1 ಕೊರಿಂಥ 11:3) ಇದಕ್ಕೆ ಕೂಡಿಕೆಯಾಗಿ, ಸುಮ್ಮಗಿರುವ ಮೂಲಕ ತಾವು ಸಭೆಯಲ್ಲಿ ಬೋಧಿಸಲು ಬಯಸುವುದಿಲ್ಲ ಎಂಬುದನ್ನು ಸಹೋದರಿಯರು ತೋರಿಸಿಕೊಡುತ್ತಾರೆ. “ಉಪದೇಶಮಾಡುವದಕ್ಕಾಗಲಿ ಪುರುಷರ ಮೇಲೆ ಅಧಿಕಾರ ನಡಿಸುವದಕ್ಕಾಗಲಿ ಸ್ತ್ರೀಯರಿಗೆ ನಾನು ಅಪ್ಪಣೆಕೊಡುವದಿಲ್ಲ; ಅವರು ಮೌನವಾಗಿರಬೇಕು” ಎಂದು ಪೌಲನು ತಿಮೊಥೆಯನಿಗೆ ಬರೆದಾಗ, ಸಭೆಯಲ್ಲಿ ಬೋಧಿಸುವ ಪಾತ್ರವನ್ನು ಸ್ತ್ರೀಯರು ವಹಿಸುವುದು ತಪ್ಪಾಗಿದೆ ಎಂಬುದನ್ನು ತೋರಿಸಿಕೊಟ್ಟನು.​—1 ತಿಮೊಥೆಯ 2:12.

ಇದರರ್ಥ ಕ್ರೈಸ್ತ ಸ್ತ್ರೀಯು ಸಭಾ ಕೂಟದ ಸಮಯದಲ್ಲಿ ಮಾತಾಡಲೇಬಾರದು ಎಂದಾಗಿದೆಯೊ? ಇಲ್ಲ. ಪೌಲನ ದಿನಗಳಲ್ಲಿ, ಕ್ರೈಸ್ತ ಸ್ತ್ರೀಯರು ಒಂದುವೇಳೆ ಪವಿತ್ರಾತ್ಮದಿಂದ ಪ್ರೇರಿತರಾಗಿ ಸಭೆಯಲ್ಲಿ ಪ್ರಾರ್ಥಿಸಿದ ಇಲ್ಲವೆ ಪ್ರವಾದಿಸಿದ ಸಂದರ್ಭಗಳೂ ಇದ್ದವು. ಅಂಥ ಸಂದರ್ಭಗಳಲ್ಲಿ, ಅವರು ತಮ್ಮ ತಲೆಗೆ ಮುಸುಕು ಹಾಕಿಕೊಳ್ಳುವ ಮೂಲಕ ತಮ್ಮ ಸ್ಥಾನವನ್ನು ಅಂಗೀಕರಿಸಿದರು.a (1 ಕೊರಿಂಥ 11:5) ಅಷ್ಟುಮಾತ್ರವಲ್ಲದೆ ಪೌಲನ ದಿನಗಳಲ್ಲಿ ಮತ್ತು ಇಂದು, ಸಹೋದರರೊಂದಿಗೆ ಸಹೋದರಿಯರು ಸಹ ತಮ್ಮ ನಿರೀಕ್ಷೆಯನ್ನು ಬಹಿರಂಗವಾಗಿ ಅರಿಕೆಮಾಡುವಂತೆ ಇಲ್ಲವೆ ಪ್ರತಿಜ್ಞೆಮಾಡುವಂತೆ ಕೇಳಿಕೊಳ್ಳಲ್ಪಟ್ಟಿದ್ದಾರೆ. (ಇಬ್ರಿಯ 10:​23-25) ಇದನ್ನು ಸಹೋದರಿಯರು ಕ್ಷೇತ್ರ ಶುಶ್ರೂಷೆಯಲ್ಲಿ ಮಾಡುವುದು ಮಾತ್ರವಲ್ಲದೆ, ಸಭಾ ಕೂಟಗಳಲ್ಲಿ ಉತ್ತರಿಸುವಂತೆ ಆಮಂತ್ರಿಸಲ್ಪಟ್ಟಾಗ ಚೆನ್ನಾಗಿ ತಯಾರಿಸಲಾದ ಹೇಳಿಕೆಗಳನ್ನು ನೀಡುವ ಮೂಲಕ ಮತ್ತು ಪ್ರತ್ಯಕ್ಷಾಭಿನಯಗಳನ್ನು ಇಲ್ಲವೆ ವಿದ್ಯಾರ್ಥಿ ಭಾಷಣಗಳನ್ನು ನೀಡುವಂತೆ ದೊರೆತ ನೇಮಕಗಳನ್ನು ಸ್ವೀಕರಿಸುವ ಮೂಲಕವೂ ಮಾಡುತ್ತಾರೆ ಹಾಗೂ ಈ ಮೂಲಕ ಸಭೆಯಲ್ಲಿರುವ ಇತರರನ್ನು ಉತ್ತೇಜಿಸುತ್ತಾರೆ.

ಆದುದರಿಂದ, ಕ್ರೈಸ್ತ ಸ್ತ್ರೀಯರು ಪುರುಷರ ಪಾತ್ರವನ್ನು ವಹಿಸುತ್ತಾ ಸಭೆಯಲ್ಲಿ ಬೋಧಿಸುವುದರಿಂದ ದೂರವಿರುವ ಮೂಲಕ ‘ಸುಮ್ಮಗಿರುತ್ತಾರೆ.’ ಸಭೆಯಲ್ಲಿ ಬೋಧಿಸುವ ಅಧಿಕಾರವನ್ನು ಹೊಂದಿರುವವರಿಗೆ ವಾಗ್ವಾದವನ್ನೆಬ್ಬಿಸುವಂಥ ಪ್ರಶ್ನೆಗಳನ್ನು ಕೇಳುವ ಮೂಲಕ ಅವರನ್ನು ವಿರೋಧಿಸುವುದಿಲ್ಲ. ಕ್ರೈಸ್ತ ಸಹೋದರಿಯರು ಸಭೆಯಲ್ಲಿ ತಮಗಿರುವ ಸೂಕ್ತ ಪಾತ್ರವನ್ನು ವಹಿಸುವ ಮೂಲಕ ಸಭೆಯ ಶಾಂತಿಗೆ ಬಹಳಷ್ಟನ್ನು ಕೂಡಿಸುವರು. ಹೀಗೆ ಮಾಡುವಾಗ, ಸಭೆಯಲ್ಲಿ ‘ಏನು ನಡಿಸಿದರೂ ಭಕ್ತಿವೃದ್ಧಿಗಾಗಿಯೇ ನಡಿಸಲ್ಪಡುತ್ತದೆ.’​—1 ಕೊರಿಂಥ 14:​26, 33.

[ಪಾದಟಿಪ್ಪಣಿ]

a ಆಧುನಿಕ ಸಮಯಗಳಲ್ಲಿ, ಒಬ್ಬ ಸ್ನಾತ ಪುರುಷನಿಂದ ನೋಡಿಕೊಳ್ಳಲ್ಪಡುವ ಸಭೆಗೆ ಸಂಬಂಧಿಸಿದ ವಿಷಯಗಳನ್ನು ಪ್ರೌಢ ಸಹೋದರಿಯರು ನೋಡಿಕೊಳ್ಳುವಲ್ಲಿ ಈ ಮಾದರಿಯನ್ನು ಅನುಕರಿಸುತ್ತಾರೆ.​—2002, ಜುಲೈ 15ರ ಕಾವಲಿನಬುರುಜು ಪು 26ನ್ನು ನೋಡಿರಿ.

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ