ಹೆದರಬೇಡಿರಿ ಯೆಹೋವನು ನಿಮ್ಮೊಂದಿಗಿದ್ದಾನೆ!
“ನಾವು ಭಯವನ್ನು ಸೇವಿಸಿ, ಭಯದಲ್ಲಿ ನಿದ್ರಿಸಿ, ಭಯದಲ್ಲಿ ಜೀವಿಸಿ, ಭಯದಲ್ಲಿ ಸಾಯಲಿದ್ದೇವೆ” ಎಂಬುದಾಗಿ ಮೊದಲ ನ್ಯೂಕ್ಲಿಯರ್ ಬಾಂಬ್ ಸ್ಫೋಟಗೊಂಡ ಸ್ವಲ್ಪ ಸಮಯದ ಅನಂತರ, ಅಂದರೆ 50 ಕ್ಕಿಂತಲೂ ಹೆಚ್ಚು ವರುಷಗಳ ಹಿಂದೆ ನೋಬೆಲ್ ಪಾರಿತೋಷಕ ವಿಜೇತರಾದ ವಿಜ್ಞಾನಿ ಹ್ಯಾರಲ್ಡ್ ಸಿ. ಯುರೀ ಭವಿಷ್ಯತ್ತಿನ ಬಗ್ಗೆ ತಿಳಿಸಿದರು. ಇಂದು ನಮ್ಮ ಲೋಕವು ಭಯದಲ್ಲಿ ಮುಳುಗಿಹೋಗಿದೆ ಮತ್ತು ಇದು ಆಶ್ಚರ್ಯದ ಸಂಗತಿಯೇನಲ್ಲ! ಪ್ರತಿ ದಿನ ವಾರ್ತಾಪತ್ರಿಕೆಗಳು ಭಯೋತ್ಪಾದನೆ, ಹಿಂಸಾತ್ಮಕ ಪಾತಕಗಳು ಮತ್ತು ವಿಚಿತ್ರವಾದ ರೋಗಗಳ ಕುರಿತು ಭಯಂಕರ ಸುದ್ದಿಗಳನ್ನು ಪ್ರಕಟಿಸುತ್ತಿವೆ.
ಆದರೆ ಈ ಎಲ್ಲ ಪರಿಸ್ಥಿತಿಗಳು ಏನನ್ನು ಸೂಚಿಸುತ್ತವೆ ಎಂಬುದು ಕ್ರೈಸ್ತರಾದ ನಮಗೆ ತಿಳಿದಿದೆ. ಬೈಬಲ್ ಮುಂತಿಳಿಸಿದ ‘ಕಠಿನಕಾಲಗಳಿಂದ’ ಗುರುತಿಸಲ್ಪಡುವ ಈ ದುಷ್ಟ ವ್ಯವಸ್ಥೆಯ “ಕಡೇ ದಿವಸಗಳಲ್ಲಿ” ನಾವು ಜೀವಿಸುತ್ತಿದ್ದೇವೆ ಎಂದು ಈ ಪರಿಸ್ಥಿತಿಗಳು ಸೂಚಿಸುತ್ತವೆ. (2 ತಿಮೊಥೆಯ 3:1) ನೀತಿಯು ವಾಸವಾಗಿರುವ ನೂತನಭೂಮಂಡಲವನ್ನು ಯೆಹೋವನು ಬೇಗನೆ ಸ್ಥಾಪಿಸಲಿದ್ದಾನೆ ಎಂಬ ನಮ್ಮ ಭರವಸೆಯು ಇನ್ನೂ ಬಲಗೊಂಡಿದೆ. (2 ಪೇತ್ರ 3:13) ಆದರೆ ಅಲ್ಲಿಯ ವರೆಗೆ ಕ್ರೈಸ್ತರು ಭಯದಿಂದ ವಿನಾಯಿತಿಪಡೆದಿದ್ದಾರೊ?
ಭಯ ಮತ್ತು ದೇವರ ಸೇವಕರು
ಅಪಾಯಕಾರಿ ಸನ್ನಿವೇಶಗಳನ್ನು ಎದುರಿಸಿದಾಗ ಸ್ವಲ್ಪಮಟ್ಟಿನ ಭಯವನ್ನು ಅನುಭವಿಸಿದ ಯೆಹೋವನ ಸೇವಕರಲ್ಲಿ ಯಾಕೋಬ, ದಾವೀದ ಮತ್ತು ಎಲೀಯರು ಸೇರಿದ್ದಾರೆ. (ಆದಿಕಾಂಡ 32:6, 7; 1 ಸಮುವೇಲ 21:11, 12; 1 ಅರಸುಗಳು 19:2, 3) ಈ ಪುರುಷರಲ್ಲಿ ನಂಬಿಕೆಯ ಕೊರತೆಯಿರಲಿಲ್ಲ. ಇದಕ್ಕೆ ವ್ಯತಿರಿಕ್ತವಾಗಿ, ಅವರು ಯೆಹೋವನ ಮೇಲೆ ಸ್ಥಿರವಾದ ಅವಲಂಬನೆಯನ್ನು ಪ್ರದರ್ಶಿಸಿದ್ದರು. ಆದರೂ, ಯಾಕೋಬ, ದಾವೀದ ಮತ್ತು ಎಲೀಯರು ನಮ್ಮ ಹಾಗೆ ಮನುಷ್ಯರಾಗಿದ್ದ ಕಾರಣ ಅವರು ಸಹ ಭಯದಿಂದ ಪ್ರಭಾವಿತರಾದರು. “ಎಲೀಯನು ನಮ್ಮಂಥ ಸ್ವಭಾವವುಳ್ಳವನಾಗಿದ್ದನು” ಎಂಬುದಾಗಿ ಶಿಷ್ಯ ಯಾಕೋಬನು ಬರೆದನು.—ಯಾಕೋಬ 5:17.
ಒಂದುವೇಳೆ ನಾವು ಸಹ ಈಗ ಎದುರಿಸುತ್ತಿರಬಹುದಾದ ಇಲ್ಲವೆ ಭವಿಷ್ಯತ್ತಿನಲ್ಲಿ ಎದುರಿಸಬಹುದಾದ ಅಡ್ಡಿಯಿಂದಾಗಿ ಭಯಭೀತರಾಗಬಹುದು. ಅಂಥ ಭಯವು ಸಹಜವಾಗಿದೆ. ಪಿಶಾಚನಾದ ಸೈತಾನನು ‘ದೇವರ ಆಜ್ಞೆಗಳನ್ನು ಕೈಕೊಂಡು ನಡೆದು ಯೇಸುವಿನ ವಿಷಯವಾದ ಸಾಕ್ಷಿಯನ್ನು ಹೇಳುವವರ ಮೇಲೆ ಯುದ್ಧ ಮಾಡುವದಕ್ಕೆ’ ದೃಢನಿಶ್ಚಿತನಾಗಿದ್ದಾನೆ ಎಂದು ಬೈಬಲ್ ಹೇಳುತ್ತದೆ. (ಪ್ರಕಟನೆ 12:17) ಈ ಮಾತುಗಳು ನಿರ್ದಿಷ್ಟವಾಗಿ ಅಭಿಷಿಕ್ತ ಕ್ರೈಸ್ತರಿಗೆ ಅನ್ವಯಿಸುವುದಾದರೂ, ಪೌಲನು ಬರೆದದ್ದು: “ಕ್ರಿಸ್ತ ಯೇಸುವಿನಲ್ಲಿ ಸದ್ಭಕ್ತರಾಗಿ ಜೀವಿಸುವದಕ್ಕೆ ಮನಸ್ಸು ಮಾಡುವವರೆಲ್ಲರೂ ಹಿಂಸೆಗೊಳಗಾಗುವರು.” (2 ತಿಮೊಥೆಯ 3:12) ಆದರೂ, ನಮಗೆ ಸಮಸ್ಯೆಗಳು ಎದುರಾದಾಗ ಭಯವು ನಮ್ಮನ್ನು ಆವರಿಸಿಬಿಡುವಂತೆ ನಾವು ಅನುಮತಿಸಬಾರದು. ಏಕೆ?
“ರಕ್ಷಣೆಯ ದೇವರಾಗಿದ್ದಾನೆ”
ಕೀರ್ತನೆಗಾರನಾದ ದಾವೀದನು ಬರೆದದ್ದು: “ನಮ್ಮ ದೇವರಾಗಿರುವಾತನು ರಕ್ಷಣೆಯ ದೇವರಾಗಿದ್ದಾನೆ.” (ಕೀರ್ತನೆ 68:20, NIBV) ಯೆಹೋವನು ಪದೇ ಪದೇ ತನ್ನ ಜನರ ಕಡೆಗೆ ತನ್ನ ರಕ್ಷಣಾ ಸಾಮರ್ಥ್ಯವನ್ನು ಪ್ರದರ್ಶಿಸಿದ್ದಾನೆ. ತನ್ನ ಜನರನ್ನು ಅಪಾಯಕರ ಸನ್ನಿವೇಶಗಳಿಂದ ಪಾರುಮಾಡುವ ಇಲ್ಲವೆ ಅವುಗಳನ್ನು ಸಹಿಸಲು ಶಕ್ತಿಯನ್ನು ಕೊಡುವ ಮೂಲಕ ಆತನು ಇದನ್ನು ಮಾಡಿದ್ದಾನೆ. (ಕೀರ್ತನೆ 34:17; ದಾನಿಯೇಲ 6:22; 1 ಕೊರಿಂಥ 10:13) ಬೈಬಲಿನ ನಿಮ್ಮ ಅಧ್ಯಯನದಿಂದ ಅಂಥ ‘ರಕ್ಷಣೆಯ’ ಕಾರ್ಯಗಳಲ್ಲಿ ಎಷ್ಟನ್ನು ನೀವು ಜ್ಞಾಪಿಸಿಕೊಳ್ಳಬಲ್ಲಿರಿ?
ನೋಹನ ದಿನದ ಭೌಗೋಳಿಕ ಪ್ರಳಯ, ಸೊದೋಮ್ ಗೊಮೋರ ಪಟ್ಟಣಗಳಿಂದ ಲೋಟ ಹಾಗೂ ಅವನ ಹೆಣ್ಣುಮಕ್ಕಳ ರಕ್ಷಣೆ, ಐಗುಪ್ತದಿಂದ ಇಸ್ರಾಯೇಲ್ಯರ ಬಿಡುಗಡೆ ಮತ್ತು ಕೆಂಪು ಸಮುದ್ರದಿಂದ ದಾಟಿಬರುವಿಕೆ, ಇಲ್ಲವೆ ಯೆಹೂದ್ಯರನ್ನು ನಾಶಮಾಡಬೇಕೆಂಬ ಹಾಮಾನನ ಒಳಸಂಚು ಮುಂತಾದ ನಿಜಜೀವನ ಘಟನೆಗಳನ್ನು ವಾಚ್ ಟವರ್ ಪಬ್ಲಿಕೇಷನ್ಸ್ ಇಂಡೆಕ್ಸ್a ಅನ್ನು ಉಪಯೋಗಿಸಿ ಏಕೆ ಸಂಶೋಧನೆ ಮಾಡಬಾರದು? ಇಂಥ ಘಟನೆಗಳನ್ನು ಓದಿ ಧ್ಯಾನಿಸುವಾಗ, ಯೆಹೋವನು ರಕ್ಷಣೆಯ ದೇವರಾಗಿದ್ದಾನೆ ಎಂಬ ನಿಮ್ಮ ನಂಬಿಕೆಯನ್ನು ಅವು ಮತ್ತಷ್ಟು ಬಲಗೊಳಿಸುತ್ತವೆ. ನಿಮಗೆ ಎದುರಾಗುವ ನಂಬಿಕೆಯ ಪರೀಕ್ಷೆಯನ್ನು ಧೈರ್ಯದಿಂದ ನಿಭಾಯಿಸುವಂತೆ ಅವು ಸಹಾಯಮಾಡುತ್ತವೆ.
ಆಧುನಿಕ ದಿನದ ಉದಾಹರಣೆಗಳು
ನೀವಿರುವ ಕ್ಷೇತ್ರದಲ್ಲಿ ತಾಳ್ಮೆಯನ್ನು ಪ್ರದರ್ಶಿಸಿರುವ ವ್ಯಕ್ತಿಗಳನ್ನು ನೀವು ನೆನಪುಮಾಡಿಕೊಳ್ಳಬಲ್ಲಿರೊ? ಒಂದುವೇಳೆ ದೇವರಿಗೆ ನಂಬಿಗಸ್ತನಾಗಿದ್ದ ಕಾರಣ ಸೆರೆಮನೆಗೆ ಹಾಕಲ್ಪಟ್ಟ ವ್ಯಕ್ತಿ ಅವನಾಗಿರಬಹುದು. ಇಲ್ಲವೆ, ತನ್ನ ಅನಾರೋಗ್ಯದ ನಡುವೆಯೂ ಯೆಹೋವನನ್ನು ಸೇವಿಸುತ್ತಿರುವ ವೃದ್ಧ ಕ್ರೈಸ್ತನಾಗಿರಬಹುದು. ಶಾಲಾ ಸಹಪಾಠಿಗಳಿಂದ ಬಹಳಷ್ಟು ಒತ್ತಡಗಳನ್ನು ಎದುರಿಸಿದ ಹೊರತಾಗಿಯೂ ಲೋಕದಿಂದ ಪ್ರತ್ಯೇಕವಾಗಿ ಉಳಿದಿರುವ ಯುವ ಜನರ ಕುರಿತಾಗಿ ತುಸು ಯೋಚಿಸಿರಿ. ಅಷ್ಟುಮಾತ್ರವಲ್ಲದೆ, ಸಂಗಾತಿಯ ಸಹಾಯವಿಲ್ಲದೆ ತಮ್ಮ ಮಕ್ಕಳನ್ನು ಬೆಳೆಸುತ್ತಿರುವ ಒಂಟಿ ಹೆತ್ತವರು ಸಹ ಇದ್ದಾರೆ ಅಥವಾ ಒಂಟಿತನದ ಭಾವನೆಗಳನ್ನು ಎದುರಿಸುತ್ತಿರುವುದಾದರೂ ಯೆಹೋವನನ್ನು ಸೇವಿಸುತ್ತಿರುವ ಅವಿವಾಹಿತ ವ್ಯಕ್ತಿಗಳು ಸಹ ಇದ್ದಾರೆ. ಇಂಥವರಿಂದ ನೀವೇನನ್ನು ಕಲಿಯುತ್ತೀರಿ? ಇಂಥವರ ನಂಬಿಗಸ್ತ ಜೀವನ ರೀತಿಯ ಕುರಿತು ಆಲೋಚಿಸುವಾಗ, ನೀವು ಸಹ ನಿಮ್ಮ ಮುಂದೆ ಯಾವುದೇ ಪರೀಕ್ಷೆಗಳು ಎದುರಾದರೂ ತಾಳ್ಮೆಯಿಂದ ಮತ್ತು ಧೈರ್ಯದಿಂದ ಉಳಿಯುವಂತೆ ಅದು ಸಹಾಯಮಾಡುತ್ತದೆ.
ವಿರೋಧ ಮತ್ತು ಹಿಂಸೆಯು ಬಂದಾಗ ಮಾತ್ರವಲ್ಲ, ನಮ್ಮ ಕಡೆಗೆ ಯೆಹೋವನಿಗಿರುವ ಪ್ರೀತಿಯ ಕುರಿತು ನಮ್ಮಲ್ಲಿ ಸಂಶಯವು ಉಂಟಾಗಲು ಆರಂಭಿಸಿದಾಗಲೂ ನಮಗೆ ಧೈರ್ಯದ ಅಗತ್ಯವಿದೆ. ಕ್ರಿಸ್ತನ ವಿಮೋಚನಾ ಮೌಲ್ಯವು ವೈಯಕ್ತಿಕವಾಗಿ ನಮಗೂ ಅನ್ವಯಿಸುತ್ತದೆ ಎಂಬುದರಲ್ಲಿ ನಾವು ಭರವಸೆಯನ್ನು ಬೆಳೆಸಿಕೊಳ್ಳಬೇಕು. (ಗಲಾತ್ಯ 2:20) ನಂತರ, ನಾವು ಯಾವುದೇ ಭಯ ಇಲ್ಲವೆ ಅಂಜಿಕೆಯಿಲ್ಲದೆ ಯೆಹೋವನನ್ನು ಸಮೀಪಿಸಬೇಕು. ಯೆಹೋವನ ಪ್ರೀತಿಗೆ ನಾವು ಅರ್ಹರಲ್ಲ ಎಂಬ ಭಾವನೆ ನಮ್ಮಲ್ಲಿ ಉಂಟಾದರೆ, ಯೇಸು ತನ್ನ ಶಿಷ್ಯರಿಗೆ ಹೇಳಿದ ಮಾತಿನ ಕುರಿತು ನಾವು ಧ್ಯಾನಿಸಸಾಧ್ಯವಿದೆ. ಅವನು ಹೇಳಿದ್ದು: “ದುಡ್ಡಿಗೆ ಎರಡು ಗುಬ್ಬಿಗಳನ್ನು ಮಾರುವದುಂಟಲ್ಲಾ; ಆದರೂ ನಿಮ್ಮ ತಂದೆಯ ಚಿತ್ತವಿಲ್ಲದೆ ಒಂದಾದರೂ ನೆಲಕ್ಕೆ ಬೀಳದು. ನಿಮ್ಮ ತಲೇಕೂದಲುಗಳು ಸಹ ಎಲ್ಲವೂ ಎಣಿಕೆಯಾಗಿವೆ. ಆದುದರಿಂದ ಹೆದರಬೇಡಿರಿ; ಬಹಳ ಗುಬ್ಬಿಗಳಿಗಿಂತ ನೀವು ಹೆಚ್ಚಿನವರು.”—ಮತ್ತಾಯ 10:29-31.
ಕಾವಲಿನಬುರುಜು ಮತ್ತು ಎಚ್ಚರ! ಪತ್ರಿಕೆಗಳು, ಧೈರ್ಯದಿಂದ ಪಂಥಾಹ್ವಾನಗಳನ್ನು ಎದುರಿಸಿದ ಆಧುನಿಕ ದಿನದ ಯೆಹೋವನ ಸಾಕ್ಷಿಗಳ ಅನುಭವಗಳನ್ನು ಪ್ರಕಟಿಸುತ್ತವೆ. ಇದರರ್ಥ ಅವರು ತಮ್ಮ ಕಷ್ಟಗಳ ಕುರಿತು ನಕಾರಾತ್ಮಕ ಭಾವನೆಗಳನ್ನು ತಾಳಲೇ ಇಲ್ಲ ಎಂದಲ್ಲ. ಆದರೆ ಅಂಥ ಭಾವನೆಗಳು ಯೆಹೋವನನ್ನು ಸೇವಿಸುವುದರಿಂದ ತಮ್ಮನ್ನು ತಡೆಯುವಂತೆ ಅವರು ಬಿಡಲಿಲ್ಲ. ಪ್ರಕಟಿಸಲ್ಪಟ್ಟಿರುವ ಅವರ ಅನುಭವಗಳು ನೀವು ಸಹ ಧೈರ್ಯದಿಂದ ತಾಳಿಕೊಂಡು ಹೋಗುವಂತೆ ನಿಮಗೆ ಸಹಾಯಮಾಡಬಲ್ಲವು. ಎರಡು ಅನುಭವಗಳನ್ನು ಪರಿಗಣಿಸಿರಿ.
ಒಂದು ಗಾಯವು ಅವನ ಬದುಕನ್ನೇ ಬದಲಾಯಿಸಿತು
“ಒಂದು ಗಾಯವು ನನ್ನ ಬದುಕನ್ನೇ ಬದಲಾಯಿಸಿದ ವಿಧ” ಎಂಬ ಲೇಖನವು 2003, ಜುಲೈ-ಸೆಪ್ಟೆಂಬರ್ ಎಚ್ಚರ! ಪತ್ರಿಕೆಯಲ್ಲಿ ಬಂದಿತ್ತು. ಅದು ಸ್ಟ್ಯಾನ್ಲೀ ಆಂಬೀವಾ ಎಂಬ ಕೆನ್ಯದ ಒಬ್ಬ ಯೆಹೋವನ ಸಾಕ್ಷಿಯ ಅನುಭವವಾಗಿತ್ತು. ವೇಗವಾಗಿ ಧಾವಿಸುತ್ತಿದ್ದ ಒಂದು ವಾಹನವು ಅವನಿಗೆ ಢಿಕ್ಕಿಹೊಡೆದುದರಿಂದ ಅವನು ಎದುರಿಸಬೇಕಾಗಿ ಬಂದ ಅನೇಕ ಪಂಥಾಹ್ವಾನಗಳನ್ನು ಆ ಲೇಖನದಲ್ಲಿ ತಿಳಿಸಲಾಗಿತ್ತು. ಅವನ ಆರೋಗ್ಯವು ಕ್ಷೀಣಿಸುತ್ತಾ ಬಂದಂತೆ ಅವನು ತನ್ನ ಉದ್ಯೋಗವನ್ನೂ ಅದರಲ್ಲಿ ದೊರಕುತ್ತಿದ್ದ ಪ್ರಯೋಜನಗಳನ್ನೂ ಕಳೆದುಕೊಂಡನು. ಸಹೋದರ ಆಂಬೀವಾ ತಿಳಿಸಿದ್ದು: ‘ನನ್ನ ಪರಿಸ್ಥಿತಿಯ ಗಂಭೀರತೆಯನ್ನು ನಾನು ಕ್ರಮೇಣ ಮನಗಂಡಂತೆ, ನಾನು ನಕಾರಾತ್ಮಕ ಮನೋಭಾವದವನು, ಸ್ವವಿಚಾರಾಸಕ್ತನು, ಮತ್ತು ಮುಂಗೋಪಿಯಾದೆ. ಕೆಲವೊಮ್ಮೆ, [ನಾನು] ತುಂಬ ಕೋಪಗೊಳ್ಳುತ್ತಿದ್ದೆ ಮತ್ತು ಕಹಿಮನೋಭಾದವನಾಗಿರುತ್ತಿದ್ದೆ.’ ಇಂಥ ಕಷ್ಟಗಳ ಮಧ್ಯೆಯೂ ಈ ಕ್ರೈಸ್ತ ವ್ಯಕ್ತಿಯು ಧೈರ್ಯದಿಂದ ಉಳಿದನು. ತನಗುಂಟಾದ ನಿರಾಶೆಯು ತನ್ನನ್ನು ಆವರಿಸಿಬಿಟ್ಟು ತಾನು ಯೆಹೋವನನ್ನು ಬಿಟ್ಟುಬಿಡುವಂತೆ ಮಾಡಲು ಅವನು ಅನುಮತಿಸಲಿಲ್ಲ. ಬದಲಾಗಿ, ಅವನು ಯೆಹೋವನ ಮೇಲೆ ಅವಲಂಬಿಸಿದನು. ಸಹೋದರ ಆಂಬೀವಾ ತಿಳಿಸುವುದು: “ನಾನು ಅನುಭವಿಸಿರುವ ಎಲ್ಲಾ ಸಂಕಷ್ಟಗಳಲ್ಲಿ [ಯೆಹೋವನು] ಯಾವಾಗಲೂ ನನಗೆ ಸಹಾಯಹಸ್ತವನ್ನು ಚಾಚಿದನು. ಆತನು ನನಗೆ ಎಷ್ಟರ ಮಟ್ಟಿಗೆ ಸಹಾಯಮಾಡಿದ್ದನೆಂದರೆ, ಕೆಲವೊಮ್ಮೆ ನನಗೆ ನನ್ನ ಬಗ್ಗೆಯೇ ನಾಚಿಕೆಯೆನಿಸುತ್ತಿತ್ತು. ನನ್ನ ಸನ್ನಿವೇಶದಲ್ಲಿ ಸಾಂತ್ವನದಾಯಕವಾಗಿರುತ್ತದೆಂದು ನನಗೆ ಗೊತ್ತಿದ್ದ ಶಾಸ್ತ್ರವಚನಗಳನ್ನು ಓದಿ, ಅವುಗಳ ಕುರಿತು ಮನನ ಮಾಡುವ ದೃಢನಿರ್ಧಾರವನ್ನು ಮಾಡಿದೆ.”
ಸಹೋದರ ಆಂಬೀವಾರವರ ಮುಚ್ಚುಮರೆಯಿಲ್ಲದ ಹೇಳಿಕೆಗಳು, ಇತರರು ಸಹ ಕಷ್ಟಗಳನ್ನು ಧೈರ್ಯದಿಂದ ತಾಳಿಕೊಳ್ಳುವಂತೆ ಸಹಾಯಮಾಡಿತು. ಒಬ್ಬ ಕ್ರೈಸ್ತ ಸಹೋದರಿಯು ಬರೆದದ್ದು: “ಈ ಲೇಖನವನ್ನು ಓದಿದಾಗ ನಾನು ಅತ್ತುಬಿಟ್ಟೆ. ಈ ಲೇಖನದ ಮೂಲಕ ಯೆಹೋವನು ನನಗೆ ತನ್ನ ಪ್ರೀತಿ ಮತ್ತು ಕಾಳಜಿಯನ್ನು ಪ್ರದರ್ಶಿಸುತ್ತಿದ್ದಾನೆ ಮತ್ತು ಸಾಂತ್ವನವನ್ನು ಒದಗಿಸುತ್ತಿದ್ದಾನೆ ಎಂದು ನನಗನಿಸಿತು.” ಇನ್ನೊಬ್ಬ ಸಾಕ್ಷಿಯು ಬರೆದದ್ದು: “ಅಂಥದ್ದೇ ಸನ್ನಿವೇಶವನ್ನು ಅನುಭವಿಸುತ್ತಾ ಮೌನವಾಗಿ ಸಹಿಸುತ್ತಿರುವ ನಮಗೆ ಇಂಥ ಲೇಖನಗಳು ಮಹಾ ಉತ್ತೇಜನವನ್ನು ನೀಡುತ್ತವೆ.”
ಭಾವನಾತ್ಮಕ ಗೊಂದಲವನ್ನು ನಿಭಾಯಿಸುವುದು
ಮನತಟ್ಟುವಂಥ ಇನ್ನೊಂದು ಅನುಭವವು, “ನಾಳೆ ಏನಾಗುವುದೋ ನಿಮಗೆ ತಿಳಿಯದು” ಎಂಬ ಲೇಖನದಲ್ಲಿ ತಿಳಿಸಲಾಗಿರುವ ಹರ್ಬರ್ಟ್ ಜೆನಿಂಗ್ಸ್ರದ್ದಾಗಿದೆ.b ಸಹೋದರ ಜೆನಿಂಗ್ಸ್ ದ್ವಿಧ್ರುವ ವಿಕೃತಿ ಎಂಬ ರೋಗವನ್ನು ನಿಭಾಯಿಸುತ್ತಿದ್ದಾರೆ. ತನ್ನ ಅಸ್ವಸ್ಥತೆಯ ಆರಂಭದ ದಿನಗಳನ್ನು ನೆನಪುಮಾಡಿಕೊಳ್ಳುತ್ತಾ ಅವರು ಹೇಳುವುದು: “ಕ್ರೈಸ್ತ ಕೂಟಗಳಿಗೆ ಹಾಜರಾಗುವುದೇ ಒಂದು ದೊಡ್ಡ ಸಮಸ್ಯೆಯಾಯಿತು. ಆದರೆ, ಆಧ್ಯಾತ್ಮಿಕ ಸಹವಾಸವು ಎಷ್ಟು ಪ್ರಾಮುಖ್ಯವಾಗಿದೆ ಎಂಬುದು ನನಗೆ ತಿಳಿದಿತ್ತು. ಆದುದರಿಂದ ಈ ಸಮಸ್ಯೆಯನ್ನು ನಿಭಾಯಿಸಲು, ಎಲ್ಲರೂ ರಾಜ್ಯ ಸಭಾಗೃಹದಲ್ಲಿ ಕುಳಿತುಕೊಂಡ ಬಳಿಕವೇ ನಾನು ಸಭಾಗೃಹವನ್ನು ಪ್ರವೇಶಿಸುತ್ತಿದ್ದೆ. ಮತ್ತು ಕಾರ್ಯಕ್ರಮದ ಅಂತ್ಯಗೊಂಡ ನಂತರ ಜನರು ಕದಲಲು ಆರಂಭಿಸುವುದಕ್ಕೆ ಸ್ವಲ್ಪ ಮುಂಚೆಯೇ ನಾನು ಅಲ್ಲಿಂದ ಎದ್ದು ಬಂದುಬಿಡುತ್ತಿದ್ದೆ.”
ಸಾರುವ ಕೆಲಸದಲ್ಲಿ ಪಾಲ್ಗೊಳ್ಳುವುದು ಸಹ ಕಷ್ಟಕರವಾಗಿತ್ತು. ಸಹೋದರ ಜೆನಿಂಗ್ಸ್ ತಿಳಿಸುವುದು: ‘ಕೆಲವೊಮ್ಮೆ ನಾನು ಒಂದು ಮನೆಯ ಬಳಿ ನಿಂತುಕೊಳ್ಳುತ್ತಿದ್ದೆ, ಆದರೆ ನನಗೆ ಕರೆಗಂಟೆಯನ್ನು ಒತ್ತಲು ಧೈರ್ಯವೇ ಸಾಲುತ್ತಿರಲಿಲ್ಲ. ಆದರೂ ನಾನು ನನ್ನ ಮನೆಗೆ ಹಿಂದಿರುಗಿಹೋಗುತ್ತಿರಲಿಲ್ಲ, ಯಾಕೆಂದರೆ ನಮ್ಮ ಶುಶ್ರೂಷೆಯಿಂದಾಗಿ ನಮಗೆ ಮಾತ್ರವಲ್ಲ, ನಮ್ಮ ಸಂದೇಶಕ್ಕೆ ಒಳ್ಳೇ ಪ್ರತಿಕ್ರಿಯೆಯನ್ನು ತೋರಿಸುವವರಿಗೂ ರಕ್ಷಣೆ ಸಿಗುತ್ತದೆಂದು ನನಗೆ ಗೊತ್ತಿತ್ತು. (1 ತಿಮೊಥೆಯ 4:16) ಸ್ವಲ್ಪ ಸಮಯದ ನಂತರ, ನಾನು ನನ್ನ ಭಾವನೆಗಳನ್ನು ನಿಯಂತ್ರಿಸಲು ಶಕ್ತನಾಗುತ್ತಿದ್ದೆ. ಮತ್ತು ಆಗ ಮುಂದಿನ ಮನೆಗೆ ಹೋಗಿ ನಾನು ಪುನಃ ಪ್ರಯತ್ನಿಸುತ್ತಿದ್ದೆ. ಶುಶ್ರೂಷೆಯಲ್ಲಿ ಪಾಲ್ಗೊಳ್ಳುವುದನ್ನು ಮುಂದುವರಿಸುವ ಮೂಲಕ, ನನ್ನ ಆಧ್ಯಾತ್ಮಿಕ ಆರೋಗ್ಯವನ್ನು ತಕ್ಕಮಟ್ಟಿಗೆ ಕಾಪಾಡಿಕೊಂಡು ಹೋದೆ ಮತ್ತು ಇದು ನನ್ನ ವ್ಯಾಧಿಯನ್ನು ನಿಭಾಯಿಸುವ ಸಾಮರ್ಥ್ಯವನ್ನು ನನ್ನಲ್ಲಿ ಹೆಚ್ಚಿಸಿತು.’
ಸಹೋದರ ಜೆನಿಂಗ್ಸ್ರವರ ಮುಚ್ಚುಮರೆಯಿಲ್ಲದ ವೃತ್ತಾಂತವು, ಅನೇಕ ಓದುಗರು ತಮ್ಮ ಕಷ್ಟಗಳನ್ನು ಅದೇ ರೀತಿಯಲ್ಲಿ ಧೈರ್ಯದಿಂದ ತಾಳಿಕೊಳ್ಳುವಂತೆ ಸಹಾಯಮಾಡಿತು. ಉದಾಹರಣೆಗೆ, ಒಬ್ಬ ಕ್ರೈಸ್ತ ಸಹೋದರಿಯು ಬರೆದದ್ದು: “ನಾನು 28 ವರುಷಗಳಿಂದ ಕಾವಲಿನಬುರುಜು ಮತ್ತು ಎಚ್ಚರ! ಪತ್ರಿಕೆಗಳನ್ನು ಓದುತ್ತಿದ್ದೇನೆ, ಆದರೆ ಈ ಲೇಖನದಂತೆ ಬೇರೆ ಯಾವ ಲೇಖನವೂ ನನ್ನನ್ನು ಇಷ್ಟೊಂದು ಪ್ರೇರೇಪಿಸಿಲ್ಲ. ನನ್ನ ಪರಿಸ್ಥಿತಿಯ ಕಾರಣ ನಾನು ನನ್ನ ಪೂರ್ಣ ಸಮಯದ ಸೇವೆಯನ್ನು ಬಿಡಲೇಬೇಕಾಯಿತು ಮತ್ತು ಇದರಿಂದಾಗಿ ನನ್ನಲ್ಲಿ ಅತಿಯಾದ ದೋಷಿ ಮನೋಭಾವ ಉಂಟಾಯಿತು. ನನ್ನಲ್ಲಿ ಹೆಚ್ಚು ನಂಬಿಕೆಯಿರುವುದಾದರೆ ನಾನು ನನ್ನ ಸೇವೆಯಲ್ಲಿ ಮುಂದುವರಿಯುತ್ತಿದ್ದೆ ಎಂದು ನನಗನಿಸತೊಡಗಿತು. ಸಹೋದರ ಜೆನಿಂಗ್ಸ್ರವರು ಅಸ್ವಸ್ಥತೆಯ ಕಾರಣ ತಮ್ಮ ನೇಮಕವನ್ನು ಹೇಗೆ ಬಿಟ್ಟುಬಿಡಬೇಕಾಯಿತು ಎಂಬುದನ್ನು ಓದಿದಾಗ ನನಗೆ ಸಮತೋಲನವನ್ನು ಬೆಳೆಸಿಕೊಳ್ಳಲು ಸಾಧ್ಯವಾಯಿತು. ಇದು ನಿಜವಾಗಿಯೂ ನನ್ನ ಪ್ರಾರ್ಥನೆಗೆ ಉತ್ತರವಾಗಿತ್ತು!”
ಇದೇ ರೀತಿಯಲ್ಲಿ ಒಬ್ಬ ಕ್ರೈಸ್ತ ಸಹೋದರನು ಬರೆದದ್ದು: “ಸಭೆಯಲ್ಲಿ ಹತ್ತು ವರುಷ ಹಿರಿಯನಾಗಿ ಸೇವೆಸಲ್ಲಿಸಿದ ನಂತರ ಮಾನಸಿಕ ಅನಾರೋಗ್ಯದ ಕಾರಣ ನಾನು ನನ್ನ ಸುಯೋಗವನ್ನು ಬಿಟ್ಟುಕೊಡಬೇಕಾಯಿತು. ನನಗೆ ಇದರಿಂದಾಗಿ ಎಷ್ಟೊಂದು ಸೋಲಿನ ಭಾವನೆಯಾಗುತ್ತಿತ್ತೆಂದರೆ, ಯೆಹೋವನ ಜನರ ಅಸಾಧಾರಣ ಸಾಧನೆಗಳ ಕುರಿತು ಹೆಚ್ಚಾಗಿ ತಿಳಿಸುವ ಜೀವನ ಕಥೆಗಳ ಲೇಖನಗಳನ್ನು ನಾನು ಓದುತ್ತಿರಲಿಲ್ಲ. ಆದರೆ ಸಹೋದರ ಜೆನಿಂಗ್ಸ್ರವರ ಪ್ರಯತ್ನವು ನನಗೆ ಪ್ರೋತ್ಸಾಹದಾಯಕವಾಗಿತ್ತು. ಎಣಿಸಲಾರದಷ್ಟು ಬಾರಿ ನಾನು ಈ ಲೇಖನವನ್ನು ಓದಿದ್ದೇನೆ.”
ಭರವಸೆಯಿಂದ ಮುಂದೊತ್ತುವುದು
ಸಹೋದರರಾದ ಆಂಬೀವಾ ಮತ್ತು ಜೆನಿಂಗ್ಸ್ರಂತೆ ಅನೇಕ ಯೆಹೋವನ ಸಾಕ್ಷಿಗಳು ಅತಿ ಕಷ್ಟಕರ ಸನ್ನಿವೇಶಗಳ ಹೊರತಾಗಿಯೂ ಯೆಹೋವ ದೇವರನ್ನು ಧೈರ್ಯದಿಂದ ಆರಾಧಿಸುತ್ತಾ ಮುಂದುವರಿಯುತ್ತಿದ್ದಾರೆ. ನೀವು ಅವರಲ್ಲಿ ಒಬ್ಬರಾಗಿರುವುದಾದರೆ, ನಿಮ್ಮನ್ನು ಶ್ಲಾಘಿಸಲೇಬೇಕಾಗಿದೆ. “ದೇವಜನರಿಗೆ ಉಪಚಾರ ಮಾಡಿದಿರಿ, ಇನ್ನೂ ಮಾಡುತ್ತಾ ಇದ್ದೀರಿ. ಈ ಕೆಲಸವನ್ನೂ ಇದರಲ್ಲಿ ನೀವು ದೇವರ ನಾಮದ ವಿಷಯವಾಗಿ ತೋರಿಸಿದ ಪ್ರೀತಿಯನ್ನೂ [ದೇವರು] ಮರೆಯುವದಕ್ಕೆ ಅನ್ಯಾಯಸ್ಥನಲ್ಲ” ಎಂಬ ಆಶ್ವಾಸನೆ ನಿಮಗಿರಲಿ.—ಇಬ್ರಿಯ 6:10.
ಯೆಹೋವನು ತನ್ನ ಪುರಾತನ ಕಾಲದ ನಂಬಿಗಸ್ತ ಜನರಿಗೆ ಅವರು ತಮ್ಮ ವೈರಿಗಳನ್ನು ಜಯಿಸಲು ಸಹಾಯಮಾಡಿದಂತೆ, ನಿಮಗೆ ಎದುರಾಗಬಹುದಾದ ಯಾವುದೇ ಅಡ್ಡಿತಡೆಗಳನ್ನು ಜಯಿಸುವಂತೆ ಆತನು ಸಹಾಯಮಾಡುವನು. ಆದುದರಿಂದ, ಯೆಹೋವನು ಪ್ರವಾದಿಯಾದ ಯೆಶಾಯನ ಮೂಲಕ ಆಡಿದ ಮಾತುಗಳನ್ನು ಹೃದಯಕ್ಕೆ ತೆಗೆದುಕೊಳ್ಳಿರಿ: “ನಾನೇ ನಿನ್ನೊಂದಿಗಿದ್ದೇನೆ; ದಿಗ್ಭ್ರಮೆಗೊಳ್ಳದಿರು, ನಾನೇ ನಿನ್ನ ದೇವರು; ನಾನು ನಿನ್ನನ್ನು ಬಲಪಡಿಸುತ್ತೇನೆ; ಹೌದು, ನಿನಗೆ ಸಹಾಯಕೊಡುತ್ತೇನೆ; ನನ್ನ ಧರ್ಮದ ಬಲಗೈಯನ್ನು ನಿನಗೆ ಆಧಾರಮಾಡುತ್ತೇನೆ.”—ಯೆಶಾಯ 41:10.
[ಪಾದಟಿಪ್ಪಣಿಗಳು]
a ಯೆಹೋವನ ಸಾಕ್ಷಿಗಳಿಂದ ಪ್ರಕಟಿಸಲ್ಪಟ್ಟಿದೆ.
b ಇಸವಿ 2000, ಡಿಸೆಂಬರ್ 1ರ ಕಾವಲಿನಬುರುಜು ಪತ್ರಿಕೆಯ ಪುಟ 24-8ನ್ನು ನೋಡಿರಿ.
[ಪುಟ 16ರಲ್ಲಿರುವ ಚಿತ್ರಗಳು]
ಸ್ಟ್ಯಾನ್ಲೀ ಆಂಬೀವಾ (ಮೇಲೆ) ಮತ್ತು ಹರ್ಬರ್ಟ್ ಜೆನಿಂಗ್ಸ್ (ಬಲಬದಿ)ರಂತೆ ಅನೇಕರು ಯೆಹೋವನನ್ನು ಧೈರ್ಯದಿಂದ ಸೇವಿಸುತ್ತಿದ್ದಾರೆ
[ಪುಟ 14ರಲ್ಲಿರುವ ಚಿತ್ರ ಕೃಪೆ]
USAF photo