“ಮಂದೆಗೆ ಮಾದರಿ” ಆಗಿರುವ ಕುರುಬರು
“ನಿಮ್ಮಲ್ಲಿರುವ ದೇವರ ಮಂದೆಯನ್ನು ಕಾಯಿರಿ. . . . ಇಷ್ಟಪೂರ್ವಕವಾಗಿಯೂ . . . ಸಿದ್ಧಮನಸ್ಸಿನಿಂದಲೂ ಮೇಲ್ವಿಚಾರಣೆಮಾಡಿರಿ. . . . ಮಂದೆಗೆ ಮಾದರಿಯಾಗಿಯೇ ನಡೆದುಕೊಳ್ಳಿರಿ.”—1 ಪೇತ್ರ 5:2, 3.
1, 2. (ಎ) ಯೇಸು ಪೇತ್ರನಿಗೆ ಯಾವ ನೇಮಕವನ್ನು ಕೊಟ್ಟನು, ಮತ್ತು ಯೇಸು ಅವನಲ್ಲಿಟ್ಟ ಭರವಸೆಯು ಏಕೆ ವ್ಯರ್ಥವಾಗಿರಲಿಲ್ಲ? (ಬಿ) ನೇಮಿಸಲ್ಪಟ್ಟಿರುವ ಕುರುಬರ ಬಗ್ಗೆ ಯೆಹೋವನಿಗೆ ಹೇಗನಿಸುತ್ತದೆ?
ಇದು ಸಾಮಾನ್ಯ ಶಕ 33ರ ಪಂಚಾಶತ್ತಮ ದಿನದ ಸ್ವಲ್ಪ ಸಮಯ ಮುಂಚೆ ನಡೆದ ಘಟನೆಯಾಗಿದೆ. ಪೇತ್ರ ಮತ್ತು ಇತರ ಆರು ಮಂದಿ ಶಿಷ್ಯರು ಗಲಿಲಾಯ ಸಮುದ್ರ ತೀರದಲ್ಲಿ ಯೇಸುವಿನಿಂದ ತಯಾರಿಸಲ್ಪಟ್ಟ ಬೆಳಗ್ಗಿನ ಉಪಾಹಾರವನ್ನು ತಿನ್ನುತ್ತಿದ್ದರು. ಪೇತ್ರನು ಪುನರುತ್ಥಾನಗೊಳಿಸಲ್ಪಟ್ಟಿರುವ ಯೇಸುವನ್ನು ನೋಡುತ್ತಿರುವುದು ಇದು ಮೊದಲ ಬಾರಿ ಏನಲ್ಲ ಮತ್ತು ಯೇಸು ಜೀವಂತವಾಗಿದ್ದಾನೆ ಎಂಬ ವಿಚಾರದಿಂದ ಅವನು ಪುಳಕಿತನಾಗಿದ್ದನು ಎಂಬುದರಲ್ಲಿ ಯಾವುದೇ ಸಂದೇಹವಿಲ್ಲ. ಆದರೆ ಪೇತ್ರನ ಮನಸ್ಸಿನಲ್ಲಿ ಸ್ವಲ್ಪ ಅಳುಕು ಕೂಡ ಇದ್ದಿರಸಾಧ್ಯವಿದೆ. ಏಕೆಂದರೆ ಕೇವಲ ಕೆಲವೇ ದಿನಗಳ ಹಿಂದೆ ತನಗೆ ಯೇಸುವಿನ ಪರಿಚಯವೇ ಇಲ್ಲ ಎಂದು ಅವನು ಬಹಿರಂಗವಾಗಿ ಅಲ್ಲಗಳೆದಿದ್ದನು. (ಲೂಕ 22:55-60; 24:34; ಯೋಹಾನ 18:25-27; 21:1-14) ಪಶ್ಚಾತ್ತಾಪಪಟ್ಟ ಪೇತ್ರನಲ್ಲಿದ್ದ ನಂಬಿಕೆಯ ಕೊರತೆಗಾಗಿ ಯೇಸು ಅವನನ್ನು ಗದರಿಸಿದನೋ? ಇಲ್ಲ. ಅದರ ಬದಲಿಗೆ, ತನ್ನ “ಕುರಿಮರಿಗಳನ್ನು” ಮೇಯಿಸುವ ಮತ್ತು ಕಾಯುವ ನೇಮಕವನ್ನು ಯೇಸು ಅವನಿಗೆ ಕೊಟ್ಟನು. (ಯೋಹಾನ 21:15-17) ಪ್ರಥಮ ಶತಮಾನದ ಕ್ರೈಸ್ತ ಸಭೆಯ ಇತಿಹಾಸದ ಕುರಿತಾದ ಬೈಬಲ್ ದಾಖಲೆಯು ತೋರಿಸುವಂತೆ, ಯೇಸು ಪೇತ್ರನಲ್ಲಿಟ್ಟ ಭರವಸೆಯು ವ್ಯರ್ಥವಾಗಲಿಲ್ಲ. ಇತರ ಅಪೊಸ್ತಲರು ಮತ್ತು ಯೆರೂಸಲೇಮಿನಲ್ಲಿದ್ದ ಹಿರೀಪುರುಷರ ಜೊತೆಗೆ, ಪೇತ್ರನು ಕ್ರೈಸ್ತ ಸಭೆಯನ್ನು ತೀವ್ರವಾದ ಪರೀಕ್ಷೆ ಮತ್ತು ಶೀಘ್ರಗತಿಯ ವಿಸ್ತರಣೆಯ ಸಮಯದಲ್ಲಿ ಕಾಯುತ್ತಾ ಬಂದನು.—ಅ. ಕೃತ್ಯಗಳು 1:15-26; 2:14; 15:6-9.
2 ಇಂದು ಯೆಹೋವನು ಯೇಸು ಕ್ರಿಸ್ತನ ಮೂಲಕವಾಗಿ ಅರ್ಹ ಪುರುಷರನ್ನು ಆಧ್ಯಾತ್ಮಿಕ ಕುರುಬರಾಗಿ ಸೇವೆಸಲ್ಲಿಸುವಂತೆ ನೇಮಿಸಿದ್ದಾನೆ. ಮಾನವ ಇತಿಹಾಸದ ಅತಿ ಕಷ್ಟಕರವಾದ ಈ ಸಮಯಗಳಲ್ಲಿ ತನ್ನ ಮಂದೆಯನ್ನು ನಡೆಸುವಂತೆ ಆತನು ಇವರನ್ನು ನೇಮಿಸಿದ್ದಾನೆ. (ಎಫೆಸ 4:11, 12; 2 ತಿಮೊಥೆಯ 3:1) ಯೆಹೋವನು ಅವರ ಮೇಲಿಟ್ಟಿರುವ ಭರವಸೆಯು ವ್ಯರ್ಥವಾಗಿದೆಯೋ? ಲೋಕವ್ಯಾಪಕವಾಗಿ ಅಸ್ತಿತ್ವದಲ್ಲಿರುವ ಶಾಂತಿಭರಿತ ಕ್ರೈಸ್ತ ಸಹೋದರತ್ವವು ಈ ಭರವಸೆಯು ವ್ಯರ್ಥವಾಗಿಲ್ಲ ಎಂಬುದನ್ನು ರುಜುಪಡಿಸುತ್ತದೆ. ಪೇತ್ರನಂತೆ ಈ ಕುರುಬರು ಸಹ ತಪ್ಪುಮಾಡುವ ವ್ಯಕ್ತಿಗಳಾಗಿದ್ದಾರೆ ಎಂಬುದು ಸತ್ಯವೇ. (ಗಲಾತ್ಯ 2:11-14; ಯಾಕೋಬ 3:2) ಹಾಗಿದ್ದರೂ, ಯೆಹೋವನು “ತನ್ನ ಸ್ವಂತ ಕುಮಾರನ ರಕ್ತದಿಂದ ಸಂಪಾದಿಸಿಕೊಂಡ” ಕುರಿಗಳನ್ನು ಅವರು ಕಾಯುವರು ಎಂಬ ಭರವಸೆಯನ್ನಿಟ್ಟಿದ್ದಾನೆ. (ಅ. ಕೃತ್ಯಗಳು 20:28, NW) ಯೆಹೋವನಿಗೆ ಈ ಪುರುಷರಲ್ಲಿ ಆಳವಾದ ವಾತ್ಸಲ್ಯವಿದೆ ಮತ್ತು ಅವರು “ಇಮ್ಮಡಿಯಾದ ಮಾನಕ್ಕೆ ಯೋಗ್ಯರೆಂದು” ಆತನೆಣಿಸುತ್ತಾನೆ.—1 ತಿಮೊಥೆಯ 5:17.
3. ಆಧ್ಯಾತ್ಮಿಕ ಕುರುಬರು ಇಷ್ಟಪೂರ್ವಕವಾದ ಸಿದ್ಧಮನಸ್ಸನ್ನು ಹೇಗೆ ಕಾಪಾಡಿಕೊಳ್ಳುತ್ತಾರೆ?
3 ಆಧ್ಯಾತ್ಮಿಕ ಕುರುಬರು ಇಷ್ಟಪೂರ್ವಕವಾದ ಸಿದ್ಧಮನಸ್ಸನ್ನು ಕಾಪಾಡಿಕೊಳ್ಳುವುದರಲ್ಲಿ ಹೇಗೆ ಮಂದೆಗೆ ಮಾದರಿಯಾಗಿ ನಡೆದುಕೊಳ್ಳುತ್ತಾರೆ? ಪೇತ್ರನು ಮತ್ತು ಪ್ರಥಮ ಶತಮಾನದ ಇತರ ಅಪೊಸ್ತಲರಂತೆ, ಈ ಆಧ್ಯಾತ್ಮಿಕ ಕುರುಬರು ದೇವರ ಪವಿತ್ರಾತ್ಮದ ಮೇಲೆ ಅವಲಂಬಿಸಿರುತ್ತಾರೆ ಮತ್ತು ಅವರ ಜವಾಬ್ದಾರಿಯ ಹೊರೆಯನ್ನು ಹೊತ್ತುಕೊಳ್ಳಲು ಬೇಕಾಗಿರುವ ಶಕ್ತಿಯನ್ನು ಪವಿತ್ರಾತ್ಮವು ಅವರಿಗೆ ಒದಗಿಸುತ್ತದೆ. (2 ಕೊರಿಂಥ 4:7) ಪವಿತ್ರಾತ್ಮವು ಅವರಲ್ಲಿ ಪ್ರೀತಿ, ಸಂತೋಷ, ಸಮಾಧಾನ, ದೀರ್ಘಶಾಂತಿ, ದಯೆ, ಉಪಕಾರ [ಒಳ್ಳೇತನ], ನಂಬಿಕೆ, ಸಾಧುತ್ವ [ಸೌಮ್ಯಭಾವ] ಮತ್ತು ಶಮೆದಮೆ [ಆತ್ಮನಿಯಂತ್ರಣ]ದಂಥ ಫಲವನ್ನು ಉಂಟುಮಾಡುತ್ತದೆ. (ಗಲಾತ್ಯ 5:22, 23) ಆಧ್ಯಾತ್ಮಿಕ ಕುರುಬರು ಪಾಲನೆ ಮಾಡುವಂತೆ ತಮಗೆ ವಹಿಸಲ್ಪಟ್ಟಿರುವ ದೇವರ ಮಂದೆಯನ್ನು ಕಾಯುವಾಗ ಈ ಫಲವನ್ನು ಪ್ರದರ್ಶಿಸಸಾಧ್ಯವಿರುವ ಕೆಲವು ನಿರ್ದಿಷ್ಟ ವಿಧಗಳನ್ನು ನಾವೀಗ ಪರಿಗಣಿಸೋಣ.
ಇಡೀ ಮಂದೆಯನ್ನು ಮತ್ತು ಪ್ರತಿಯೊಬ್ಬ ವ್ಯಕ್ತಿಯನ್ನು ಪ್ರೀತಿಸಿರಿ
4, 5. (ಎ) ಯೆಹೋವನೂ ಯೇಸುವೂ ಮಂದೆಗಾಗಿರುವ ತಮ್ಮ ಪ್ರೀತಿಯನ್ನು ಹೇಗೆ ತೋರ್ಪಡಿಸುತ್ತಾರೆ? (ಬಿ) ಆಧ್ಯಾತ್ಮಿಕ ಕುರುಬರು ಮಂದೆಗಾಗಿರುವ ತಮ್ಮ ಪ್ರೀತಿಯನ್ನು ತೋರ್ಪಡಿಸುವ ಕೆಲವು ವಿಧಗಳು ಯಾವುವು?
4 ದೇವರಾತ್ಮದಿಂದ ಉಂಟಾಗುವ ಪ್ರಪ್ರಧಾನ ಗುಣವು ಪ್ರೀತಿಯಾಗಿದೆ. ಯೆಹೋವನು ಯಥೇಷ್ಟವಾಗಿ ಆಧ್ಯಾತ್ಮಿಕ ಆಹಾರವನ್ನು ಒದಗಿಸುವ ಮೂಲಕ ಇಡೀ ಮಂದೆಯ ಮೇಲೆ ತಾನಿಟ್ಟಿರುವ ಪ್ರೀತಿಯನ್ನು ವ್ಯಕ್ತಪಡಿಸುತ್ತಾನೆ. (ಯೆಶಾಯ 65:13, 14; ಮತ್ತಾಯ 24:45-47) ಆತನು ಮಂದೆಯನ್ನು ಉಣಿಸುವುದಕ್ಕಿಂತ ಹೆಚ್ಚಿನದ್ದನ್ನು ಮಾಡುತ್ತಾನೆ. ಆತನು ಪ್ರತಿಯೊಂದು ಕುರಿಯ ಬಗ್ಗೆ ಪ್ರೀತಿಭರಿತ ಕಾಳಜಿವಹಿಸುತ್ತಾನೆ. (1 ಪೇತ್ರ 5:6, 7) ಯೇಸು ಸಹ ಮಂದೆಯನ್ನು ಪ್ರೀತಿಸುತ್ತಾನೆ. ಅವನು ಮಂದೆಗೋಸ್ಕರ ತನ್ನ ಪ್ರಾಣವನ್ನು ಕೊಟ್ಟನು ಮತ್ತು ಪ್ರತಿಯೊಂದು ಕುರಿಯ ವೈಯಕ್ತಿಕ ಪರಿಚಯವನ್ನು ಹೊಂದಿರುವ ಅವನು ಅದನ್ನು “ಹೆಸರು ಹೇಳಿ” ಕರೆಯುತ್ತಾನೆ.—ಯೋಹಾನ 10:3-4, 14-16.
5 ಆಧ್ಯಾತ್ಮಿಕ ಕುರುಬರು ಯೆಹೋವನನ್ನೂ ಯೇಸುವನ್ನೂ ಅನುಕರಿಸುತ್ತಾರೆ. ‘ಉಪದೇಶವನ್ನು ಮಾಡುವದರಲ್ಲಿ ಆಸಕ್ತರಾಗಿರುವ’ ಮೂಲಕ ಅವರು ದೇವರ ಇಡೀ ಮಂದೆಗೆ ಪ್ರೀತಿಯನ್ನು ತೋರಿಸುತ್ತಾರೆ. ಅವರ ಬೈಬಲಾಧಾರಿತ ಭಾಷಣಗಳು ಮಂದೆಯನ್ನು ಪೋಷಿಸಿ ಕಾಪಾಡುವುದರಲ್ಲಿ ಸಹಾಯಮಾಡುತ್ತವೆ ಮತ್ತು ಇದಕ್ಕಾಗಿ ಅವರು ಕಷ್ಟಪಟ್ಟು ಕೆಲಸಮಾಡುವುದು ಎಲ್ಲರಿಗೂ ಗೋಚರವಾಗಿರುತ್ತದೆ. (1 ತಿಮೊಥೆಯ 4:13, 16) ಆದರೆ, ಸಭಾ ಕೂಟಗಳು ಮತ್ತು ಇತರ ಚಟುವಟಿಕೆಗಳು “ಮರ್ಯಾದೆಯಿಂದಲೂ ಕ್ರಮದಿಂದಲೂ” ನಡೆಯುತ್ತವೆ ಎಂಬುದನ್ನು ಖಚಿತಪಡಿಸಿಕೊಳ್ಳಲಿಕ್ಕಾಗಿ ಸಭೆಯ ರೆಕಾರ್ಡ್ಸ್ ಅನ್ನು ಸದ್ಯೋಚಿತವಾಗಿ ಇಟ್ಟುಕೊಳ್ಳುವುದರಲ್ಲಿ, ಪತ್ರವ್ಯವಹಾರವನ್ನು ನಿರ್ವಹಿಸುವುದರಲ್ಲಿ, ಶೆಡ್ಯೂಲ್ಗಳನ್ನು ಮಾಡುವುದರಲ್ಲಿ ಮತ್ತು ಇತರ ಅನೇಕ ವಿಷಯಗಳನ್ನು ನೋಡಿಕೊಳ್ಳುವುದರಲ್ಲಿ ಅವರು ವ್ಯಯಿಸುವ ಸಮಯವು ಅಷ್ಟೊಂದು ಗಮನಕ್ಕೆ ಬರುವುದಿಲ್ಲ. (1 ಕೊರಿಂಥ 14:40) ಮಾಡಲ್ಪಡುವ ಈ ಎಲ್ಲ ಕೆಲಸಗಳು ಹೆಚ್ಚಿನಾಂಶ ಜನರ ಕಣ್ಣಿಗೆ ಬೀಳುವುದಿಲ್ಲ ಮತ್ತು ಅಷ್ಟು ಪರಿಗಣನೆಗೆ ಬರಲಿಕ್ಕಿಲ್ಲ. ಆದುದರಿಂದ, ಇದು ನಿಜವಾಗಿಯೂ ಪ್ರೀತಿಯ ಪರಿಶ್ರಮವಾಗಿದೆ.—ಗಲಾತ್ಯ 5:13.
6, 7. (ಎ) ಆಧ್ಯಾತ್ಮಿಕ ಕುರುಬರು ಕುರಿಗಳಂತಿರುವ ಸಭೆಯ ಸದಸ್ಯರೊಂದಿಗೆ ಹೆಚ್ಚು ಪರಿಚಿತರಾಗುವ ಒಂದು ವಿಧ ಯಾವುದು? (ಬಿ) ಕೆಲವೊಮ್ಮೆ ನಮ್ಮ ಅನಿಸಿಕೆಗಳನ್ನು ಒಬ್ಬ ಹಿರಿಯನೊಂದಿಗೆ ಹಂಚಿಕೊಳ್ಳುವುದು ಏಕೆ ಪ್ರಯೋಜನಕರವಾಗಿದೆ?
6 ಪ್ರೀತಿಭರಿತ ಕ್ರೈಸ್ತ ಕುರುಬರು ಸಭೆಯಲ್ಲಿರುವ ಪ್ರತಿಯೊಂದು ಕುರಿಯ ಅಥವಾ ಪ್ರತಿಯೊಬ್ಬ ಸದಸ್ಯನ ವಿಷಯದಲ್ಲಿ ವೈಯಕ್ತಿಕ ಆಸಕ್ತಿಯನ್ನು ತೋರಿಸುತ್ತಾರೆ. (ಫಿಲಿಪ್ಪಿ 2:4) ಆಧ್ಯಾತ್ಮಿಕ ಕುರುಬರು ಸಭೆಯಲ್ಲಿರುವ ಸದಸ್ಯರ ವೈಯಕ್ತಿಕ ಪರಿಚಯವನ್ನು ಮಾಡಿಕೊಳ್ಳುವ ಒಂದು ವಿಧವು, ಸಾರ್ವಜನಿಕ ಸಾರುವಿಕೆಯ ಕಾರ್ಯದಲ್ಲಿ ಅವರೊಂದಿಗೆ ಜೊತೆಯಾಗಿ ಕೆಲಸಮಾಡುವ ಮೂಲಕವೇ ಆಗಿದೆ. ಯೇಸು ಸಾರುವ ಕೆಲಸದಲ್ಲಿ ತೊಡಗಿದ್ದಾಗ ಅನೇಕಸಲ ಅವನ ಹಿಂಬಾಲಕರು ಜೊತೆಯಲ್ಲಿದ್ದರು ಮತ್ತು ಅವನು ಇಂತಹ ಸಂದರ್ಭಗಳನ್ನು ಪ್ರೋತ್ಸಾಹವನ್ನು ನೀಡಲಿಕ್ಕಾಗಿ ಉಪಯೋಗಿಸಿದನು. (ಲೂಕ 8:1) ಒಬ್ಬ ಅನುಭವಸ್ಥ ಕ್ರೈಸ್ತ ಕುರುಬನು ಹೇಳುವುದು: “ಒಬ್ಬ ಸಹೋದರ ಅಥವಾ ಸಹೋದರಿಯ ಒಳ್ಳೆಯ ಪರಿಚಯವನ್ನು ಮಾಡಿಕೊಳ್ಳಲಿಕ್ಕಾಗಿ ಮತ್ತು ಪ್ರೋತ್ಸಾಹಿಸಲಿಕ್ಕಾಗಿರುವ ಅತ್ಯುತ್ತಮ ವಿಧಾನಗಳಲ್ಲಿ ಒಂದು, ಅವರೊಂದಿಗೆ ಸೇರಿ ಕ್ಷೇತ್ರ ಶುಶ್ರೂಷೆಯಲ್ಲಿ ಕೆಲಸಮಾಡುವುದೇ ಆಗಿದೆ ಎಂದು ನನಗನಿಸುತ್ತದೆ.” ನಿಮಗೆ ಹಿರಿಯರಲ್ಲೊಬ್ಬರೊಂದಿಗೆ ಇತ್ತೀಚೆಗೆ ಕ್ಷೇತ್ರ ಶುಶ್ರೂಷೆಯಲ್ಲಿ ಕೆಲಸಮಾಡಲು ಅವಕಾಶ ಸಿಕ್ಕಿರಲಿಲ್ಲವಾದರೆ, ಇದನ್ನು ಶೀಘ್ರದಲ್ಲೇ ಮಾಡಲು ಏಕೆ ಏರ್ಪಾಡುಗಳನ್ನು ಮಾಡಿಕೊಳ್ಳಬಾರದು?
7 ಪ್ರೀತಿಯು ತನ್ನ ಹಿಂಬಾಲಕರ ಸುಖದುಃಖಗಳಲ್ಲಿ ಪಾಲಿಗನಾಗುವಂತೆ ಯೇಸುವನ್ನು ಪ್ರಚೋದಿಸಿತು. ಉದಾಹರಣೆಗೆ, 70 ಮಂದಿ ಶಿಷ್ಯರು ಸಾರುವ ಕೆಲಸವನ್ನು ಮುಗಿಸಿಕೊಂಡು ಸಂತೋಷದಿಂದ ಹಿಂದಿರುಗಿದಾಗ ಯೇಸು ‘ಉಲ್ಲಾಸಗೊಂಡನು.’ (ಲೂಕ 10:17-21) ಆದರೆ, ಲಾಜರನ ಮರಣವು ಮರಿಯಳು ಮತ್ತು ಅವಳ ಕುಟುಂಬ ಸದಸ್ಯರು ಹಾಗೂ ಸ್ನೇಹಿತರ ಮೇಲೆ ಬೀರಿದ ಪರಿಣಾಮವನ್ನು ಗಮನಿಸಿದಾಗ “ಯೇಸು ಕಣ್ಣೀರು ಬಿಟ್ಟನು.” (ಯೋಹಾನ 11:33-35) ತದ್ರೀತಿಯಲ್ಲಿ, ಇಂದು ಕಾಳಜಿವಹಿಸುವ ಕುರುಬರು ಸಭೆಯ ಸದಸ್ಯರ ಭಾವನೆಗಳ ವಿಷಯದಲ್ಲಿ ಕಲ್ಲುಮನಸ್ಸಿನವರಾಗಿರುವುದಿಲ್ಲ. ಪ್ರೀತಿಯು ‘ಸಂತೋಷಪಡುವವರ ಸಂಗಡ ಸಂತೋಷಪಡುವಂತೆ’ ಮತ್ತು ‘ಅಳುವವರ ಸಂಗಡ ಅಳುವಂತೆ’ ಅವರನ್ನು ಪ್ರೇರಿಸುತ್ತದೆ. (ರೋಮಾಪುರ 12:15) ನೀವು ನಿಮ್ಮ ಜೀವನದಲ್ಲಿ ಸಂತೋಷ ಅಥವಾ ದುಃಖವನ್ನು ಅನುಭವಿಸುವುದಾದರೆ, ಕ್ರೈಸ್ತ ಕುರುಬರೊಂದಿಗೆ ನಿಮ್ಮ ಅನಿಸಿಕೆಗಳನ್ನು ಹಂಚಿಕೊಳ್ಳಲು ಹಿಂಜರಿಯಬೇಡಿ. ನಿಮ್ಮ ಸಂತೋಷದ ಕುರಿತು ತಿಳಿದುಕೊಂಡಾಗ ಅವರಿಗೆ ಪ್ರೋತ್ಸಾಹ ದೊರೆಯುವುದು. (ರೋಮಾಪುರ 1:11, 12) ನಿಮ್ಮ ಪರೀಕ್ಷೆಗಳ ಕುರಿತು ತಿಳಿದುಕೊಂಡಾಗ, ನಿಮಗೆ ಬಲ ಮತ್ತು ಸಾಂತ್ವನವನ್ನು ನೀಡಲು ಅವರಿಗೆ ಸಾಧ್ಯವಾಗುವುದು.—1 ಥೆಸಲೊನೀಕ 1:6; 3:1-3.
8, 9. (ಎ) ಒಬ್ಬ ಹಿರಿಯನು ತನ್ನ ಹೆಂಡತಿಗೆ ಹೇಗೆ ಪ್ರೀತಿಯನ್ನು ತೋರಿಸಿದನು? (ಬಿ) ಒಬ್ಬ ಕುರುಬನು ತನ್ನ ಕುಟುಂಬಕ್ಕೆ ಪ್ರೀತಿಯನ್ನು ತೋರಿಸುವುದು ಎಷ್ಟು ಪ್ರಾಮುಖ್ಯವಾಗಿದೆ?
8 ಒಬ್ಬ ಕುರುಬನಿಗೆ ಮಂದೆಯ ಮೇಲಿರುವ ಪ್ರೀತಿಯು ಅವನು ತನ್ನ ಕುಟುಂಬವನ್ನು ನಡೆಸುವ ರೀತಿಯಲ್ಲಿ ವಿಶೇಷವಾಗಿ ವ್ಯಕ್ತವಾಗುತ್ತದೆ. (1 ತಿಮೊಥೆಯ 3:1, 4) ವಿವಾಹಿತನಾಗಿರುವುದಾದರೆ, ಅವನು ತನ್ನ ಹೆಂಡತಿಗೆ ತೋರಿಸುವ ಪ್ರೀತಿ ಮತ್ತು ಸಲ್ಲಿಸುವ ಮಾನವು ಇತರ ಗಂಡಂದಿರು ಅನುಕರಿಸಲು ಒಂದು ಮಾದರಿಯಾಗಿ ಪರಿಣಮಿಸುತ್ತದೆ. (ಎಫೆಸ 5:25; 1 ಪೇತ್ರ 3:7) ಲಿಂಡ ಎಂಬ ಕ್ರೈಸ್ತ ಸ್ತ್ರೀಯ ಹೇಳಿಕೆಗಳನ್ನು ಪರಿಗಣಿಸಿರಿ. ಅವಳ ಗಂಡನು ಮೃತಪಡುವುದಕ್ಕಿಂತ ಮುಂಚೆ 20 ವರ್ಷಕಾಲ ಒಬ್ಬ ಮೇಲ್ವಿಚಾರಕನಾಗಿ ಸೇವೆಸಲ್ಲಿಸಿದ್ದನು. ಅವಳು ಹೇಳುವುದು: “ನನ್ನ ಗಂಡ ಸಭೆಯನ್ನು ಪರಿಪಾಲಿಸುವುದರಲ್ಲಿ ಯಾವಾಗಲೂ ತುಂಬ ಕಾರ್ಯಮಗ್ನರಾಗಿರುತ್ತಿದ್ದರು. ಆದರೆ ಅದರಲ್ಲಿ ನನ್ನದೂ ಪಾಲಿದೆ ಎಂದನಿಸುವಂತೆ ಅವರು ಮಾಡುತ್ತಿದ್ದರು. ನಾನು ನೀಡುತ್ತಿದ್ದ ಬೆಂಬಲಕ್ಕಾಗಿ ಅವರು ಅನೇಕಬಾರಿ ಗಣ್ಯತೆಯನ್ನು ವ್ಯಕ್ತಪಡಿಸುತ್ತಿದ್ದರು ಮತ್ತು ಅವರಿಗೆ ಸಿಕ್ಕಿದ ಬಿಡುವಿನ ಸಮಯವನ್ನು ನನ್ನೊಂದಿಗೆ ಕಳೆಯುತ್ತಿದ್ದರು. ಇದರಿಂದಾಗಿ, ನನ್ನನ್ನು ಪ್ರೀತಿಸಲಾಗುತ್ತಿದೆ ಎಂದು ನನಗನಿಸುತ್ತಿತ್ತು ಮತ್ತು ಅವರು ಸಭೆಗೆ ಸೇವೆಸಲ್ಲಿಸುವುದರಲ್ಲಿ ವ್ಯಯಿಸುತ್ತಿದ್ದ ಸಮಯದ ಬಗ್ಗೆ ನನಗೆ ಮತ್ಸರ ಹುಟ್ಟುತ್ತಿರಲಿಲ್ಲ.”
9 ಒಬ್ಬ ಕ್ರೈಸ್ತ ಕುರುಬನಿಗೆ ಮಕ್ಕಳಿರುವುದಾದರೆ, ಅವನು ತನ್ನ ಮಕ್ಕಳನ್ನು ಪ್ರೀತಿಯಿಂದ ಶಿಸ್ತಿಗೊಳಪಡಿಸುವುದು ಮತ್ತು ಕ್ರಮವಾಗಿ ಶ್ಲಾಘಿಸುವುದು ಇತರ ಹೆತ್ತವರು ಅನುಸರಿಸಬಲ್ಲ ಒಂದು ಮಾದರಿಯಾಗಿ ಪರಿಣಮಿಸುತ್ತದೆ. (ಎಫೆಸ 6:4) ವಾಸ್ತವದಲ್ಲಿ, ಅವನು ತನ್ನ ಕುಟುಂಬಕ್ಕಾಗಿ ತೋರಿಸುವಂಥ ಪ್ರೀತಿಯು, ಅವನು ಪವಿತ್ರಾತ್ಮದಿಂದ ಒಬ್ಬ ಕುರುಬನಾಗಿ ನೇಮಿಸಲ್ಪಟ್ಟಾಗ ಅವನಲ್ಲಿಡಲ್ಪಟ್ಟ ಭರವಸೆಗೆ ತಕ್ಕ ಹಾಗೆ ಅವನಿನ್ನೂ ಜೀವಿಸುತ್ತಿದ್ದಾನೆ ಎಂಬುದಕ್ಕೆ ಕೊಡಲ್ಪಡುವ ಮುಂದುವರಿದ ಸಾಕ್ಷ್ಯವಾಗಿರುವುದು.—1 ತಿಮೊಥೆಯ 3:4, 5.
ಸಂವಾದಮಾಡುವ ಮೂಲಕ ಸಂತೋಷ ಮತ್ತು ಸಮಾಧಾನವನ್ನು ಪ್ರವರ್ಧಿಸಿರಿ
10. (ಎ) ಸಭೆಯ ಸಂತೋಷ ಮತ್ತು ಸಮಾಧಾನದ ಮೇಲೆ ಯಾವುದು ನಕಾರಾತ್ಮ ಪ್ರಭಾವವನ್ನು ಬೀರಬಲ್ಲದು? (ಬಿ) ಯಾವ ವಿವಾದವು ಪ್ರಥಮ ಶತಮಾನದ ಸಭೆಯ ಸಮಾಧಾನವನ್ನು ಅಪಾಯಕ್ಕೊಡ್ಡಿತು, ಮತ್ತು ಆ ವಿವಾದವನ್ನು ಹೇಗೆ ಪರಿಹರಿಸಲಾಯಿತು?
10 ಪವಿತ್ರಾತ್ಮವು ವ್ಯಕ್ತಿಗತವಾಗಿ ಒಬ್ಬ ಕ್ರೈಸ್ತನ ಹೃದಯದಲ್ಲಿ, ಹಿರಿಯರ ಮಂಡಲಿಯಲ್ಲಿ ಮತ್ತು ಇಡೀ ಸಭೆಯಲ್ಲಿ ಸಂತೋಷ ಹಾಗೂ ಸಮಾಧಾನವನ್ನು ಉಂಟುಮಾಡಬಲ್ಲದು. ಆದರೆ, ಮುಕ್ತವಾದ ಸಂವಾದವು ಇಲ್ಲದಿರುವಲ್ಲಿ ಈ ಸಂತೋಷ ಮತ್ತು ಸಮಾಧಾನವು ಪ್ರತಿಕೂಲವಾಗಿ ಬಾಧಿಸಲ್ಪಡುವುದು. ಪುರಾತನ ಕಾಲದ ಸೊಲೊಮೋನನು ಅವಲೋಕಿಸಿದ್ದು: “ಯೋಚನೆ ಹೇಳುವವರಿಲ್ಲದೆ ಉದ್ದೇಶಗಳು ನೆರವೇರವು.” (ಜ್ಞಾನೋಕ್ತಿ 15:22) ಮತ್ತೊಂದು ಬದಿಯಲ್ಲಿ, ಗೌರವಪೂರ್ವಕವಾದ ಮುಕ್ತ ಸಂವಾದವು ಸಂತೋಷ ಮತ್ತು ಸಮಾಧಾನವನ್ನು ಪ್ರವರ್ಧಿಸುತ್ತದೆ. ಉದಾಹರಣೆಗೆ, ಸುನ್ನತಿಯ ವಿವಾದವು ಪ್ರಥಮ ಶತಮಾನದ ಸಭೆಯ ಸಮಾಧಾನವನ್ನು ಅಪಾಯಕ್ಕೊಡ್ಡಿದಾಗ, ಯೆರೂಸಲೇಮಿನಲ್ಲಿದ್ದ ಆಡಳಿತ ಮಂಡಲಿಯ ಸದಸ್ಯರು ಪವಿತ್ರಾತ್ಮದ ಮಾರ್ಗದರ್ಶನವನ್ನು ಕೋರಿದರು ಮತ್ತು ತಮಗೆ ಆ ವಿಚಾರದಲ್ಲಿದ್ದ ಭಿನ್ನ ಭಿನ್ನ ಅಭಿಪ್ರಾಯಗಳ ಕುರಿತೂ ಅವರು ತಿಳಿಸಿದರು. ಉತ್ಸುಕತೆಯಿಂದ ಕೂಡಿದ ದೀರ್ಘ ಸಂಭಾಷಣೆಯ ಬಳಿಕ ಅವರು ಒಂದು ತೀರ್ಮಾನಕ್ಕೆ ಬಂದರು. ತಾವು ಮಾಡಿದ ಏಕಮನಸ್ಸಿನ ತೀರ್ಮಾನದ ಕುರಿತು ಅವರು ಸಭೆಗಳಿಗೆ ತಿಳಿಸಿದಾಗ, ಸಹೋದರರು “ಅದರಿಂದ ಧೈರ್ಯ ತಂದುಕೊಂಡು ಸಂತೋಷಪಟ್ಟರು.” (ಅ. ಕೃತ್ಯಗಳು 15:6-23, 25, 31; 16:4, 5) ಹೀಗೆ ಸಂತೋಷ ಮತ್ತು ಸಮಾಧಾನವು ಪ್ರವರ್ಧಿಸಲ್ಪಟ್ಟಿತು.
11. ಹಿರಿಯರು ಸಭೆಯಲ್ಲಿ ಹೇಗೆ ಸಂತೋಷ ಮತ್ತು ಸಮಾಧಾನವನ್ನು ಪ್ರವರ್ಧಿಸಬಲ್ಲರು?
11 ತದ್ರೀತಿಯಲ್ಲಿ ಇಂದು, ಆಧ್ಯಾತ್ಮಿಕ ಕುರುಬರು ಒಳ್ಳೆಯ ಸಂವಾದಕರಾಗಿರುವ ಮೂಲಕ ಸಭೆಯ ಸಂತೋಷ ಮತ್ತು ಸಮಾಧಾನವನ್ನು ಪ್ರವರ್ಧಿಸುತ್ತಾರೆ. ಸಮಸ್ಯೆಗಳು ಸಭೆಯ ಸಮಾಧಾನವನ್ನು ಅಪಾಯಕ್ಕೊಡ್ಡುವಾಗ, ಅವರು ಒಟ್ಟಿಗೆ ಕೂಡಿಬಂದು ತಮ್ಮ ಅನಿಸಿಕೆಗಳನ್ನು ಮುಕ್ತವಾಗಿ ವ್ಯಕ್ತಪಡಿಸುತ್ತಾರೆ. ತಮ್ಮ ಜೊತೆ ಕುರುಬರು ಮಾಡುವ ಹೇಳಿಕೆಗಳಿಗೆ ಅವರು ಗೌರವಪೂರ್ವಕವಾಗಿ ಕಿವಿಗೊಡುತ್ತಾರೆ. (ಜ್ಞಾನೋಕ್ತಿ 13:10; 18:13) ಪವಿತ್ರಾತ್ಮಕ್ಕಾಗಿ ಪ್ರಾರ್ಥಿಸಿದ ಬಳಿಕ ಅವರು, ಬೈಬಲ್ ಮೂಲತತ್ತ್ವಗಳು ಮತ್ತು “ನಂಬಿಗಸ್ತನೂ ವಿವೇಕಿಯೂ ಆದಂಥ ಆಳು” ಪ್ರಕಟಿಸಿರುವ ಮಾರ್ಗದರ್ಶಕ ಸೂಚನೆಗಳ ಮೇಲಾಧಾರಿಸಿದ ನಿರ್ಣಯಗಳನ್ನು ಮಾಡುತ್ತಾರೆ. (ಮತ್ತಾಯ 24:45-47; 1 ಕೊರಿಂಥ 4:6) ಒಮ್ಮೆ ಹಿರಿಯರ ಮಂಡಲಿಯಿಂದ ಶಾಸ್ತ್ರಾಧಾರಿತವಾಗಿರುವ ಸರಿಯಾದ ನಿರ್ಣಯವು ಮಾಡಲ್ಪಟ್ಟ ಬಳಿಕ, ಪ್ರತಿಯೊಬ್ಬ ಹಿರಿಯನು—ಒಂದುವೇಳೆ ಅವನ ವೈಯಕ್ತಿಕ ಅಭಿಪ್ರಾಯವು ಅಧಿಕಾಂಶ ಮಂದಿಯಿಂದ ಅಂಗೀಕರಿಸಲ್ಪಡದಿದ್ದರೂ—ಆ ನಿರ್ಣಯಕ್ಕೆ ಬೆಂಬಲವನ್ನು ನೀಡುವ ಮೂಲಕ ಪವಿತ್ರಾತ್ಮದ ಮಾರ್ಗದರ್ಶನಕ್ಕೆ ಅಧೀನನಾಗುತ್ತಾನೆ. ಇಂತಹ ನಮ್ರತೆಯು ಸಂತೋಷ ಮತ್ತು ಸಮಾಧಾನವನ್ನು ಪ್ರವರ್ಧಿಸುತ್ತದೆ ಹಾಗೂ ದೇವರೊಂದಿಗೆ ಹೇಗೆ ನಡೆಯುವುದು ಎಂಬ ವಿಷಯದಲ್ಲಿ ಸಭೆಯ ಸದಸ್ಯರಿಗೆ ಉತ್ತಮ ಮಾದರಿಯನ್ನು ಒದಗಿಸುತ್ತದೆ. (ಮೀಕ 6:8) ಸಭೆಯಲ್ಲಿರುವ ಕುರುಬರಿಂದ ಮಾಡಲ್ಪಡುವ ಬೈಬಲಾಧಾರಿತ ತೀರ್ಮಾನಗಳಿಗೆ ನೀವು ನಮ್ರತೆಯಿಂದ ಸಹಕಾರವನ್ನು ತೋರಿಸುತ್ತೀರೋ?
ದೀರ್ಘಶಾಂತಿಯುಳ್ಳವರೂ ದಯೆಯುಳ್ಳವರೂ ಆಗಿರಿ
12. ಯೇಸು ತನ್ನ ಶಿಷ್ಯರೊಂದಿಗೆ ವ್ಯವಹರಿಸುವುದರಲ್ಲಿ ದೀರ್ಘಶಾಂತನೂ ದಯೆಯುಳ್ಳವನೂ ಆಗಿರಬೇಕಿತ್ತು ಏಕೆ?
12 ತನ್ನ ಶಿಷ್ಯರು ಪುನಃ ಪುನಃ ತಪ್ಪುಗಳನ್ನು ಮಾಡಿದಾಗಲೂ, ಯೇಸು ಅವರೊಂದಿಗೆ ದೀರ್ಘಶಾಂತಿಯಿಂದ ಮತ್ತು ದಯೆಯಿಂದ ವ್ಯವಹರಿಸಿದನು. ಉದಾಹರಣೆಗೆ, ದೀನತೆಯ ಆವಶ್ಯಕತೆಯನ್ನು ಅವರ ಮನಸ್ಸಿನಲ್ಲಿ ಅಚ್ಚೊತ್ತಿಸಲು ಯೇಸು ಅನೇಕಸಲ ಪ್ರಯತ್ನಿಸಿದನು. (ಮತ್ತಾಯ 18:1-4; 20:25-27) ಆದರೂ, ಯೇಸು ತನ್ನ ಭೂಜೀವಿತದ ಕೊನೆಯ ರಾತ್ರಿಯಂದು ಅವರ ಕಾಲುಗಳನ್ನು ತೊಳೆಯುವ ಮೂಲಕ ಅವರಿಗೆ ದೀನತೆಯ ಕುರಿತಾದ ಒಂದು ಪಾಠವನ್ನು ಕಲಿಸಿದ ಸ್ವಲ್ಪದರಲ್ಲೇ, “ತಮ್ಮಲ್ಲಿ ಯಾವನು ಹೆಚ್ಚಿನವನೆನಿಸಿಕೊಳ್ಳುವವನು ಎಂಬ ವಿಷಯದಲ್ಲಿ ಅವರೊಳಗೆ ಚರ್ಚೆ ಹುಟ್ಟಿತು.” (ಲೂಕ 22:24; ಯೋಹಾನ 13:1-5) ಯೇಸು ಇದಕ್ಕಾಗಿ ತನ್ನ ಶಿಷ್ಯರನ್ನು ಬೈದನೋ? ಇಲ್ಲ. ಅವನು ಹೀಗೆ ಹೇಳುವ ಮೂಲಕ ಅವರೊಂದಿಗೆ ದಯಾಪೂರ್ವಕವಾಗಿ ತರ್ಕಿಸಿದನು: “ಯಾವನು ಹೆಚ್ಚಿನವನು; ಊಟಕ್ಕೆ ಕೂತವನೋ ಸೇವೆಮಾಡುವವನೋ? ಊಟಕ್ಕೆ ಕೂತವನಲ್ಲವೇ. ಆದರೆ ನಾನು ನಿಮ್ಮಲ್ಲಿ ಸೇವೆ ಮಾಡುವವನಂತಿದ್ದೇನೆ.” (ಲೂಕ 22:27) ಯೇಸುವಿನ ದೀರ್ಘಶಾಂತಿ ಮತ್ತು ದಯೆಯೊಂದಿಗೆ ಅವನಿಟ್ಟ ಉತ್ತಮ ಮಾದರಿಯು ಕೊನೆಗೆ ಶಿಷ್ಯರ ಹೃದಯಗಳನ್ನು ಸ್ಪರ್ಶಿಸಿತು.
13, 14. ಕುರುಬರು ವಿಶೇಷವಾಗಿ ಯಾವಾಗ ದಯಾಭರಿತರಾಗಿರಬೇಕು?
13 ತದ್ರೀತಿಯಲ್ಲಿ, ಒಬ್ಬ ಆಧ್ಯಾತ್ಮಿಕ ಕುರುಬನು ಒಬ್ಬ ವ್ಯಕ್ತಿಯ ಒಂದು ನಿರ್ದಿಷ್ಟ ತಪ್ಪಿನ ಬಗ್ಗೆ ಪುನಃ ಪುನಃ ಬುದ್ಧಿವಾದವನ್ನು ನೀಡಬೇಕಾಗಿ ಬರಬಹುದು. ಕುರುಬನು ಆ ವ್ಯಕ್ತಿಯ ವಿಷಯದಲ್ಲಿ ಬೇಸತ್ತುಹೋಗಬಹುದು. ಆದರೆ, ‘ಅಕ್ರಮವಾಗಿ ನಡೆಯುವವನಿಗೆ ಬುದ್ಧಿಹೇಳುವಾಗ’ ಕುರುಬನು ತನ್ನ ಸ್ವಂತ ಕುಂದುಕೊರತೆಗಳನ್ನು ಮನಸ್ಸಿನಲ್ಲಿಟ್ಟುಕೊಳ್ಳುವುದಾದರೆ, ಆ ಸಹೋದರನಿಗೆ ದೀರ್ಘಶಾಂತಿ ಮತ್ತು ದಯೆಯನ್ನು ತೋರಿಸಲು ಶಕ್ತನಾಗುತ್ತಾನೆ. ಹೀಗೆ ಮಾಡುವಾಗ ಅವನು ಆಧ್ಯಾತ್ಮಿಕ ಕುರುಬರ ಸಮೇತ ಎಲ್ಲ ಕ್ರೈಸ್ತರಿಗೆ ದೀರ್ಘಶಾಂತಿ ಮತ್ತು ದಯೆಯನ್ನು ತೋರಿಸುವ ಯೇಸು ಮತ್ತು ಯೆಹೋವನನ್ನು ಅನುಕರಿಸುತ್ತಾನೆ.—1 ಥೆಸಲೊನೀಕ 5:14; ಯಾಕೋಬ 2:13.
14 ಕೆಲವೊಮ್ಮೆ, ಘೋರವಾದ ಪಾಪವನ್ನು ಮಾಡಿರುವ ಒಬ್ಬ ವ್ಯಕ್ತಿಗೆ ಹಿರಿಯರು ಬಲವಾದ ಬುದ್ಧಿವಾದವನ್ನು ಕೊಡಬೇಕಾಗಿ ಬರಬಹುದು. ಒಂದುವೇಳೆ ಆ ತಪ್ಪಿತಸ್ಥ ವ್ಯಕ್ತಿ ಪಶ್ಚಾತ್ತಾಪಪಡದಿದ್ದಲ್ಲಿ, ಕುರುಬರು ಅವನನ್ನು ಸಭೆಯಿಂದ ತೆಗೆದುಹಾಕಬೇಕು. (1 ಕೊರಿಂಥ 5:11-13) ಇಂತಹ ಸನ್ನಿವೇಶದಲ್ಲೂ, ಅವರು ಆ ವ್ಯಕ್ತಿಯೊಂದಿಗೆ ವ್ಯವಹರಿಸುವ ರೀತಿಯು ಅವರು ಆ ಪಾಪವನ್ನು ದ್ವೇಷಿಸುತ್ತಾರೆ, ಪಾಪಗೈದವನನ್ನಲ್ಲ ಎಂಬುದನ್ನು ತೋರಿಸುತ್ತದೆ. (ಯೂದ 23) ಕುರುಬರ ಈ ರೀತಿಯ ದಯಾಭರಿತ ವರ್ತನೆಯು, ದಾರಿತಪ್ಪಿಹೋಗುತ್ತಿರುವ ಕುರಿ ಕೊನೆಗೆ ಮಂದೆಯನ್ನು ಬಂದು ಸೇರುವುದನ್ನು ಸುಲಭಗೊಳಿಸಬಲ್ಲದು.—ಲೂಕ 15:11-24.
ಒಳ್ಳೆಯ ಕೃತ್ಯಗಳು ನಂಬಿಕೆಯಿಂದ ಪ್ರಚೋದಿಸಲ್ಪಡುತ್ತವೆ
15. ಕುರುಬರು ಯೆಹೋವನ ಒಳ್ಳೇತನವನ್ನು ಅನುಕರಿಸುವ ಒಂದು ವಿಧ ಯಾವುದು, ಮತ್ತು ಹೀಗೆ ಮಾಡುವಂತೆ ಅವರನ್ನು ಯಾವುದು ಪ್ರಚೋದಿಸುತ್ತದೆ?
15 “ಯೆಹೋವನು ಸರ್ವರಿಗೂ ಒಳ್ಳೆಯವನು.” ಆತನು ಮಾನವಕುಲಕ್ಕಾಗಿ ಏನನ್ನು ಮಾಡುತ್ತಾನೋ ಅದನ್ನು ಗಣ್ಯಮಾಡದವರಿಗೂ ಆತನು ಒಳ್ಳೆಯದನ್ನು ಮಾಡುತ್ತಾನೆ. (ಕೀರ್ತನೆ 145:9, NIBV; ಮತ್ತಾಯ 5:45) ಯೆಹೋವನ ಒಳ್ಳೇತನವು, ‘ಪರಲೋಕ ರಾಜ್ಯದ ಸುವಾರ್ತೆಯನ್ನು’ ಸಾರುವಂತೆ ಆತನು ತನ್ನ ಜನರನ್ನು ಕಳುಹಿಸುವುದರಲ್ಲಿ ವಿಶೇಷವಾಗಿ ವ್ಯಕ್ತವಾಗುತ್ತದೆ. (ಮತ್ತಾಯ 24:14) ಕುರುಬರು ಸಾರುವ ಕೆಲಸದಲ್ಲಿ ಮುಂದಾಳುತ್ವವನ್ನು ವಹಿಸುವ ಮೂಲಕ ದೇವರ ಒಳ್ಳೇತನವನ್ನು ಪ್ರತಿಬಿಂಬಿಸುತ್ತಾರೆ. ಈ ವಿಷಯದಲ್ಲಿ ಪಟ್ಟುಬಿಡದ ಪ್ರಯತ್ನವನ್ನು ಮಾಡುವಂತೆ ಅವರನ್ನು ಯಾವುದು ಪ್ರಚೋದಿಸುತ್ತದೆ? ಯೆಹೋವನಲ್ಲಿನ ಮತ್ತು ಆತನ ವಾಗ್ದಾನಗಳಲ್ಲಿನ ಬಲವಾದ ನಂಬಿಕೆಯೇ.—ರೋಮಾಪುರ 10:10, 13, 14.
16. ಕುರುಬರು ಸಭೆಯ ಸದಸ್ಯರಿಗೆ ಹೇಗೆ ‘ಒಳ್ಳೇದನ್ನು ಮಾಡಬಲ್ಲರು’?
16 ಸಾರುವ ಮೂಲಕ ‘ಎಲ್ಲರಿಗೆ ಒಳ್ಳೇದನ್ನು ಮಾಡುವುದರ’ ಜೊತೆಗೆ, “ಮುಖ್ಯವಾಗಿ ಒಂದೇ ಮನೆಯವರಂತಿರುವ ಕ್ರಿಸ್ತನಂಬಿಕೆಯುಳ್ಳವರಿಗೆ” ಒಳ್ಳೇದನ್ನು ಮಾಡುವುದು ಕುರುಬರ ಜವಾಬ್ದಾರಿಯಾಗಿದೆ. (ಗಲಾತ್ಯ 6:10) ಅವರಿದನ್ನು ಮಾಡುವ ಒಂದು ವಿಧವು ಪ್ರೋತ್ಸಾಹಕರವಾದ ಕುರಿಪಾಲನಾ ಭೇಟಿಗಳನ್ನು ಮಾಡುವ ಮೂಲಕವೇ ಆಗಿದೆ. “ಕುರಿಪಾಲನಾ ಭೇಟಿಗಳನ್ನು ಮಾಡುವುದರಲ್ಲಿ ನಾನು ಆನಂದಿಸುತ್ತೇನೆ. ಅವು ಸಹೋದರ ಸಹೋದರಿಯರು ಮಾಡುತ್ತಿರುವ ಪ್ರಯತ್ನಗಳಿಗಾಗಿ ಅವರನ್ನು ಶ್ಲಾಘಿಸಲು ಮತ್ತು ಅವರ ಪರಿಶ್ರಮವನ್ನು ಗಣ್ಯಮಾಡಲಾಗುತ್ತದೆ ಎಂಬುದನ್ನು ಗ್ರಹಿಸುವಂತೆ ಅವರಿಗೆ ಸಹಾಯಮಾಡಲು ಅವಕಾಶವನ್ನು ಮಾಡಿಕೊಡುತ್ತವೆ” ಎಂದು ಒಬ್ಬ ಹಿರಿಯನು ಹೇಳುತ್ತಾನೆ. ಕೆಲವೊಮ್ಮೆ, ಒಬ್ಬ ವ್ಯಕ್ತಿಯು ಯೆಹೋವನಿಗೆ ಸಲ್ಲಿಸುತ್ತಿರುವ ತನ್ನ ಸೇವೆಯನ್ನು ಉತ್ತಮಗೊಳಿಸಸಾಧ್ಯವಿರುವ ಕೆಲವು ವಿಧಗಳ ಕುರಿತು ಕುರುಬರು ತಿಳಿಸಬಹುದು. ಹೀಗೆ ಮಾಡುವುದರಲ್ಲಿ, ವಿವೇಕಿಗಳಾದ ಕುರುಬರು ಅಪೊಸ್ತಲ ಪೌಲನನ್ನು ಅನುಕರಿಸುತ್ತಾರೆ. ಥೆಸಲೊನೀಕದಲ್ಲಿದ್ದ ಸಹೋದರರಿಗೆ ಅವನು ಮನವಿಮಾಡಿಕೊಂಡ ರೀತಿಯನ್ನು ಗಮನಿಸಿರಿ: “ನಾವು ಆಜ್ಞಾಪಿಸುವ ಪ್ರಕಾರ ನೀವು ಮಾಡುತ್ತೀರೆಂತಲೂ ಮುಂದೆಯೂ ಮಾಡುವಿರೆಂತಲೂ ನಿಮ್ಮ ವಿಷಯದಲ್ಲಿ ಕರ್ತನ ಮೂಲಕವಾಗಿ ನಮಗೆ ಭರವಸವುಂಟು.” (2 ಥೆಸಲೊನೀಕ 3:4) ಭರವಸೆಯನ್ನು ವ್ಯಕ್ತಪಡಿಸುವ ಇಂತಹ ರೀತಿಯ ಅಭಿವ್ಯಕ್ತಿಗಳು ಸಭೆಯ ಸದಸ್ಯರ ಒಳ್ಳೆಯ ಪ್ರವೃತ್ತಿಗಳಿಗೆ ಇಂಬುಕೊಡುತ್ತವೆ ಮತ್ತು ‘ಸಭಾನಾಯಕರ ಮಾತನ್ನು ಕೇಳುವುದನ್ನು’ ಸುಲಭಗೊಳಿಸುತ್ತದೆ. (ಇಬ್ರಿಯ 13:17) ನಿಮಗೆ ಪ್ರೋತ್ಸಾಹದಾಯಕವಾದ ಒಂದು ಕುರಿಪಾಲನಾ ಭೇಟಿಯು ಮಾಡಲ್ಪಟ್ಟಾಗ, ಅದಕ್ಕಾಗಿ ಏಕೆ ಗಣ್ಯತೆಯನ್ನು ವ್ಯಕ್ತಪಡಿಸಬಾರದು?
ಸೌಮ್ಯಭಾವವು ಆತ್ಮನಿಯಂತ್ರಣವನ್ನು ಅವಶ್ಯಪಡಿಸುತ್ತದೆ
17. ಪೇತ್ರನು ಯೇಸುವಿನಿಂದ ಯಾವ ಪಾಠವನ್ನು ಕಲಿತನು?
17 ಯೇಸುವನ್ನು ಜನರು ಕೆಣಕಿದಾಗಲೂ ಅವನು ಸಾತ್ವಿಕನಾಗಿದ್ದನು ಅಥವಾ ಸೌಮ್ಯಭಾವವನ್ನು ತೋರಿಸಿದನು. (ಮತ್ತಾಯ 11:29) ಯೂದನು ಯೇಸುವಿಗೆ ದ್ರೋಹಮಾಡಿ ಅವನನ್ನು ಹಿಡುಕೊಟ್ಟಾಗ, ಯೇಸು ಸೌಮ್ಯಭಾವ ಮತ್ತು ಅತ್ಯಧಿಕವಾದ ಆತ್ಮನಿಯಂತ್ರಣವನ್ನು ತೋರಿಸಿದನು. ಪೇತ್ರನು ದುಡುಕಿ ಒಂದು ಕತ್ತಿಯನ್ನು ತೆಗೆದುಕೊಂಡು ಪ್ರತಿಭಟಿಸಿದನು. ಆದರೆ ಯೇಸು ಅವನಿಗೆ ಮರುಜ್ಞಾಪಿಸಿದ್ದು: “ನಾನು ನನ್ನ ತಂದೆಯನ್ನು ಬೇಡಿಕೊಳ್ಳಲಾರೆನೆಂದೂ ಬೇಡಿಕೊಂಡರೆ ಆತನು ನನಗೆ ಈಗಲೇ ಹನ್ನೆರಡು ಗಣಗಳಿಗಿಂತ ಹೆಚ್ಚು ಮಂದಿ ದೇವದೂತರನ್ನು ಕಳುಹಿಸಿ ಕೊಡುವದಿಲ್ಲವೆಂದೂ ನೆನಸುತ್ತೀಯಾ?” (ಮತ್ತಾಯ 26:51-53; ಯೋಹಾನ 18:10) ಪೇತ್ರನು ಆ ಪಾಠವನ್ನು ಮನಸ್ಸಿಗೆ ತೆಗೆದುಕೊಂಡನು ಮತ್ತು ತರುವಾಯ ಕ್ರೈಸ್ತರಿಗೆ ಜ್ಞಾಪಿಸಿದ್ದು: ‘ಕ್ರಿಸ್ತನು ನಿಮಗೋಸ್ಕರ ಬಾಧೆಯನ್ನನುಭವಿಸಿ ನೀವು ತನ್ನ ಹೆಜ್ಜೆಯ ಜಾಡಿನಲ್ಲಿ ನಡೆಯಬೇಕೆಂದು ಮಾದರಿಯನ್ನು ತೋರಿಸಿ ಹೋದನು. ಬೈಯುವವರನ್ನು ಆತನು ಪ್ರತಿಯಾಗಿ ಬೈಯಲಿಲ್ಲ; ಆತನು ಬಾಧೆಯನ್ನನುಭವಿಸಿದಾಗ ಯಾರನ್ನೂ ಬೆದರಿಸಲಿಲ್ಲ.’—1 ಪೇತ್ರ 2:21-23.
18, 19. (ಎ) ವಿಶೇಷವಾಗಿ ಯಾವಾಗ ಹಿರಿಯರು ಸೌಮ್ಯಭಾವ ಮತ್ತು ಆತ್ಮನಿಯಂತ್ರಣವನ್ನು ತೋರಿಸಬೇಕು? (ಬಿ) ಮುಂದೆ ನಾವು ಯಾವ ಪ್ರಶ್ನೆಗಳನ್ನು ಪರಿಗಣಿಸುವೆವು?
18 ತದ್ರೀತಿಯಲ್ಲಿ, ಪರಿಣಾಮಕಾರಿಯಾದ ಕುರುಬರು ದುರುಪಚರಿಸಲ್ಪಟ್ಟಾಗಲೂ ಸೌಮ್ಯಭಾವವನ್ನು ತೋರಿಸುತ್ತಾರೆ. ಉದಾಹರಣೆಗೆ, ಸಭೆಯಲ್ಲಿ ಅವರು ಯಾರಿಗೆ ಸಹಾಯಮಾಡಲು ಬಯಸುತ್ತಾರೋ ಅವರು ಸಕಾರಾತ್ಮಕವಾಗಿ ಪ್ರತಿಕ್ರಿಯಿಸದೆ ಇರಬಹುದು. ಸಹಾಯದ ಅಗತ್ಯದಲ್ಲಿರುವ ವ್ಯಕ್ತಿಯು ಆಧ್ಯಾತ್ಮಿಕವಾಗಿ ದುರ್ಬಲನಾಗಿರುವುದಾದರೆ ಅಥವಾ ಅಸ್ವಸ್ಥನಾಗಿರುವುದಾದರೆ ಕೊಡಲ್ಪಡುವ ಬುದ್ಧಿವಾದಕ್ಕೆ ಅವನು “ಕತ್ತಿತಿವಿದ ಹಾಗೆ ದುಡುಕಿ ಮಾತಾಡುವ” ಮೂಲಕ ಪ್ರತಿಕ್ರಿಯಿಸಬಹುದು. (ಜ್ಞಾನೋಕ್ತಿ 12:18) ಆದರೂ, ಯೇಸುವಿನಂತೆ ಕುರುಬರು ಚುಚ್ಚುಮಾತುಗಳು ಅಥವಾ ಸೇಡುತೀರಿಸಿಕೊಳ್ಳುವ ಕೃತ್ಯಗಳಿಂದ ತಿರುಗೇಟು ನೀಡುವುದಿಲ್ಲ. ಅದರ ಬದಲಿಗೆ, ಅವರು ಸ್ವನಿಯಂತ್ರಣವನ್ನು ತೋರಿಸುತ್ತಾರೆ ಮತ್ತು ಅದೇ ಸಮಯದಲ್ಲಿ ಸಹಾನುಭೂತಿಯನ್ನೂ ತೋರಿಸುತ್ತಾರೆ; ಇದು ಸಹಾಯದ ಅಗತ್ಯದಲ್ಲಿರುವವರಿಗೆ ಒಂದು ಆಶೀರ್ವಾದವಾಗಿ ಪರಿಣಮಿಸಬಹುದು. (1 ಪೇತ್ರ 3:8, 9) ನೀವು ಹಿರಿಯರ ಮಾದರಿಯನ್ನು ಅನುಕರಿಸುತ್ತಾ ಬುದ್ಧಿವಾದವು ಕೊಡಲ್ಪಡುವಾಗ ಸೌಮ್ಯಭಾವ ಮತ್ತು ಆತ್ಮನಿಯಂತ್ರಣವನ್ನು ತೋರಿಸುತ್ತೀರೋ?
19 ಲೋಕವ್ಯಾಪಕವಾಗಿರುವ ಮಂದೆಯನ್ನು ಪರಾಮರಿಸಲು ಸಾವಿರಾರು ಮಂದಿ ಕುರುಬರು ಪಡುವ ಶ್ರಮವನ್ನು ಯೆಹೋವನೂ ಯೇಸುವೂ ತುಂಬ ಗಣ್ಯಮಾಡುತ್ತಾರೆ ಎಂಬುದರಲ್ಲಿ ಸಂಶಯವೇ ಇಲ್ಲ. ‘ದೇವಜನರಿಗೆ ಉಪಚಾರಮಾಡುವುದರಲ್ಲಿ’ ಹಿರಿಯರಿಗೆ ಬೆಂಬಲ ನೀಡುವಂಥ ಸಾವಿರಾರು ಮಂದಿ ಶುಶ್ರೂಷಾ ಸೇವಕರ ಮೇಲೆ ಸಹ ಯೆಹೋವನಿಗೆ ಮತ್ತು ಆತನ ಪುತ್ರನಿಗೆ ಆಳವಾದ ವಾತ್ಸಲ್ಯವಿದೆ. (ಇಬ್ರಿಯ 6:10) ಹಾಗಾದರೆ, ಸ್ನಾತ ಸಹೋದರರಲ್ಲಿ ಕೆಲವರು ಈ “ಒಳ್ಳೇ ಕೆಲಸ”ವನ್ನು ಎಟಕಿಸಿಕೊಳ್ಳಲು ಹಿಂಜರಿಯಬಹುದೇಕೆ? (1 ತಿಮೊಥೆಯ 3:1) ಮತ್ತು ಯೆಹೋವನು ಯಾರನ್ನು ಕುರುಬರಾಗಿ ನೇಮಿಸುತ್ತಾನೋ ಅವರಿಗೆ ಹೇಗೆ ತರಬೇತಿ ನೀಡುತ್ತಾನೆ? ಮುಂದಿನ ಲೇಖನದಲ್ಲಿ ನಾವು ಈ ಪ್ರಶ್ನೆಗಳನ್ನು ಪರಿಗಣಿಸುವೆವು.
ನಿಮಗೆ ನೆನಪಿದೆಯೆ?
• ಕುರುಬರು ಮಂದೆಗೆ ಪ್ರೀತಿಯನ್ನು ತೋರಿಸುವಂಥ ಕೆಲವು ವಿಧಗಳು ಯಾವುವು?
• ಸಭೆಯಲ್ಲಿರುವ ಎಲ್ಲರೂ ಸಂತೋಷ ಮತ್ತು ಸಮಾಧಾನವನ್ನು ಹೇಗೆ ಪ್ರವರ್ಧಿಸಸಾಧ್ಯವಿದೆ?
• ಬುದ್ಧಿವಾದವನ್ನು ನೀಡುವಾಗ ಕುರುಬರು ಏಕೆ ದೀರ್ಘಶಾಂತಿಯುಳ್ಳವರೂ ದಯೆಯುಳ್ಳವರೂ ಆಗಿರುತ್ತಾರೆ?
• ಹಿರಿಯರು ಒಳ್ಳೇತನ ಮತ್ತು ನಂಬಿಕೆಯನ್ನು ಹೆ
[ಪುಟ 18ರಲ್ಲಿರುವ ಚಿತ್ರ]
ಸಭೆಯ ಸೇವೆಮಾಡಲು ಹಿರಿಯರು ಪ್ರೀತಿಯಿಂದ ಪ್ರಚೋದಿಸಲ್ಪಡುತ್ತಾರೆ
[ಪುಟ 18ರಲ್ಲಿರುವ ಚಿತ್ರಗಳು]
ಅವರು ಮನೋರಂಜನೆಯಲ್ಲಿ . . .
. . . ಮತ್ತು ಶುಶ್ರೂಷೆಯಲ್ಲಿ ತಮ್ಮ ಕುಟುಂಬಗಳೊಂದಿಗೆ ಸಮಯವನ್ನು ಕಳೆಯುತ್ತಾರೆ
[ಪುಟ 20ರಲ್ಲಿರುವ ಚಿತ್ರ]
ಹಿರಿಯರ ನಡುವಣ ಒಳ್ಳೇ ಸಂವಾದವು ಸಭೆಯಲ್ಲಿ ಸಂತೋಷ ಮತ್ತು ಸಮಾಧಾನವನ್ನು ಪ್ರವರ್ಧಿಸುತ್ತದೆ