“ಬದುಕಿಕೊಳ್ಳುವಂತೆ ಜೀವವನ್ನೇ ಆದುಕೊಳ್ಳಿರಿ”
‘ನಾನು ಜೀವಮರಣಗಳನ್ನೂ ಆಶೀರ್ವಾದಶಾಪಗಳನ್ನೂ ಈಗ ನಿಮ್ಮ ಮುಂದೆ ಇಟ್ಟಿದ್ದೇನೆ; ನೀವು ಬದುಕಿಕೊಳ್ಳುವಂತೆ ಜೀವವನ್ನೇ ಆದುಕೊಳ್ಳಿರಿ.’—ಧರ್ಮೋಪದೇಶಕಾಂಡ 30:19.
1, 2. ಯಾವ ವಿಧಗಳಲ್ಲಿ ಮಾನವನು ದೇವರ ಸ್ವರೂಪದಲ್ಲಿ ಸೃಷ್ಟಿಸಲ್ಪಟ್ಟಿದ್ದನು?
“ನಮ್ಮ ಸ್ವರೂಪದಲ್ಲಿ ನಮ್ಮ ಹೋಲಿಕೆಗೆ ಸರಿಯಾಗಿ ಮನುಷ್ಯರನ್ನು ಉಂಟುಮಾಡೋಣ.” ದೇವರು ನುಡಿದ ಈ ಮಾತುಗಳು ಬೈಬಲಿನ ಪ್ರಥಮ ಅಧ್ಯಾಯದಲ್ಲಿ ದಾಖಲಿಸಲ್ಪಟ್ಟಿವೆ. ಅದಕ್ಕನುಸಾರ, “ದೇವರು ಮನುಷ್ಯನನ್ನು ತನ್ನ ಸ್ವರೂಪದಲ್ಲಿ ಉಂಟುಮಾಡಿದನು; ದೇವಸ್ವರೂಪದಲ್ಲಿ ಅವನನ್ನು ಉಂಟುಮಾಡಿದನು” ಎಂದು ಆದಿಕಾಂಡ 1:26, 27 ವರದಿಸುತ್ತದೆ. ಈ ವಿಧದಲ್ಲಿ, ಪ್ರಥಮ ಮಾನವನು ಭೂಮಿಯ ಮೇಲಿದ್ದ ಬೇರೆಲ್ಲ ಸೃಷ್ಟಿಗಿಂತ ಭಿನ್ನನಾಗಿದ್ದನು. ಅವನು ತನ್ನ ಸೃಷ್ಟಿಕರ್ತನನ್ನು ಹೋಲುತ್ತಿದ್ದ ಕಾರಣ, ವಿವೇಚಿಸುವುದರಲ್ಲಿ ಮತ್ತು ಪ್ರೀತಿ, ನ್ಯಾಯ, ವಿವೇಕ ಹಾಗೂ ಶಕ್ತಿಯನ್ನು ಪ್ರದರ್ಶಿಸುವುದರಲ್ಲಿ ದೇವರಿಗಿರುವ ಮನೋಭಾವವನ್ನು ಪ್ರತಿಬಿಂಬಿಸಲು ಅವನಿಗೆ ಸಾಧ್ಯವಿತ್ತು. ಅವನಲ್ಲಿದ್ದ ಮನಸ್ಸಾಕ್ಷಿಯ ಸಹಾಯದಿಂದ ಅವನು ತನಗೆ ಪ್ರಯೋಜನ ತರುವಂಥ ಮತ್ತು ತನ್ನ ಸ್ವರ್ಗೀಯ ತಂದೆಯನ್ನು ಮೆಚ್ಚುವಂಥ ನಿರ್ಣಯಗಳನ್ನು ಮಾಡಸಾಧ್ಯವಿತ್ತು. (ರೋಮಾಪುರ 2:15) ಚುಟುಕಾಗಿ ಹೇಳಬೇಕಾದರೆ, ಆದಾಮನಿಗೆ ಇಚ್ಛಾಸ್ವಾತಂತ್ರ್ಯವಿತ್ತು. ಯೆಹೋವನು, ಭೂಮಿಯ ಮೇಲಿನ ತನ್ನ ಈ ಪುತ್ರನ ವಿನ್ಯಾಸವನ್ನು ಅವಲೋಕಿಸುತ್ತಾ, ತನ್ನ ಕೈಕೆಲಸದ ಬಗ್ಗೆ ‘ಬಹು ಒಳ್ಳೇದಾಗಿದೆ’ ಎಂದು ಹೇಳಿದನು.—ಆದಿಕಾಂಡ 1:31; ಕೀರ್ತನೆ 95:6.
2 ಆದಾಮನ ವಂಶಜರಾಗಿರುವುದರಿಂದ ನಾವು ಸಹ ದೇವರ ಸ್ವರೂಪದಲ್ಲಿ ಮತ್ತು ಹೋಲಿಕೆಯಲ್ಲಿದ್ದೇವೆ. ಆದರೆ, ನಾವು ಏನನ್ನು ಮಾಡಬಹುದು ಎಂಬದನ್ನು ನಿಜವಾಗಿಯೂ ಆಯ್ಕೆಮಾಡಬಹುದೊ? ಹೌದು. ಏಕೆಂದರೆ, ಏನು ಸಂಭವಿಸಲಿಕ್ಕಿದೆ ಎಂಬುದನ್ನು ಮುಂದಾಗಿಯೇ ತಿಳಿಯುವ ಸಾಮರ್ಥ್ಯವು ಯೆಹೋವನಲ್ಲಿದೆಯಾದರೂ, ಆತನು ನಮ್ಮ ವ್ಯಕ್ತಿಗತ ಕ್ರಿಯೆಗಳನ್ನು ಹಾಗೂ ಅವುಗಳ ಪರಿಣಾಮವನ್ನು ಮುಂದಾಗಿಯೇ ಗೊತ್ತುಪಡಿಸುವುದಿಲ್ಲ. ತನ್ನ ಭೂಮಕ್ಕಳ ಬದುಕು ಮುಂದಾಗಿಯೇ ನಿರ್ಧರಿಸಲ್ಪಟ್ಟಿರುವ ಸಂಗತಿಗಳಿಂದ ನಿರ್ದೇಶಿಸಲ್ಪಡುವಂತೆ ಆತನು ಅನುಮತಿಸುವುದಿಲ್ಲ. ನಮ್ಮ ಇಚ್ಛಾಸ್ವಾತಂತ್ರ್ಯವನ್ನು ಸರಿಯಾದ ಆಯ್ಕೆಗಳನ್ನು ಮಾಡಲಿಕ್ಕಾಗಿ ಉಪಯೋಗಿಸುವ ಮಹತ್ವವನ್ನು ಗ್ರಹಿಸಲು ನಾವು ಮೊದಲಾಗಿ ಇಸ್ರಾಯೇಲ್ ಜನಾಂಗದಿಂದ ಒಂದು ಪಾಠವನ್ನು ಕಲಿತುಕೊಳ್ಳೋಣ.—ರೋಮಾಪುರ 15:4.
ಇಸ್ರಾಯೇಲ್ಯರಿಗಿದ್ದ ಆಯ್ಕೆಮಾಡುವ ಸ್ವಾತಂತ್ರ್ಯ
3. ದಶಾಜ್ಞೆಗಳಲ್ಲಿ ಮೊದಲ ಆಜ್ಞೆ ಯಾವುದಾಗಿತ್ತು, ಮತ್ತು ನಂಬಿಗಸ್ತ ಇಸ್ರಾಯೇಲ್ಯರು ಅದಕ್ಕೆ ಹೇಗೆ ವಿಧೇಯರಾಗಲು ಆಯ್ಕೆಮಾಡಿದರು?
3 “ನೀನು ದಾಸತ್ವದಲ್ಲಿದ್ದ ಐಗುಪ್ತದೇಶದೊಳಗಿಂದ ನಿನ್ನನ್ನು ಬಿಡುಗಡೆಮಾಡಿದ ಯೆಹೋವನೆಂಬ ನಿನ್ನ ದೇವರು ನಾನೇ” ಎಂದು ಯೆಹೋವನು ಇಸ್ರಾಯೇಲ್ಯರಿಗೆ ತಿಳಿಸಿದನು. (ಧರ್ಮೋಪದೇಶಕಾಂಡ 5:6) ಸಾ.ಶ.ಪೂ. 1513ರಲ್ಲಿ ಇಸ್ರಾಯೇಲ್ ಜನಾಂಗವು ಐಗುಪ್ತ ಬಂಧಿವಾಸದಿಂದ ಅದ್ಭುತಕರ ರೀತಿಯಲ್ಲಿ ಬಿಡಿಸಲ್ಪಟ್ಟದ್ದರಿಂದ ಈ ಮಾತುಗಳನ್ನು ಶಂಕಿಸಲು ಅವರಿಗೆ ಯಾವುದೇ ಕಾರಣವಿರಲಿಲ್ಲ. ದಶಾಜ್ಞೆಗಳ ಮೊದಲನೆಯ ಆಜ್ಞೆಯಲ್ಲಿ ಯೆಹೋವನು ತನ್ನ ಪ್ರತಿನಿಧಿಯಾದ ಮೋಶೆಯ ಮುಖಾಂತರ “ನಾನಲ್ಲದೆ ನಿನಗೆ ಬೇರೆ ದೇವರುಗಳು ಇರಬಾರದು” ಎಂದು ಘೋಷಿಸಿದನು. (ವಿಮೋಚನಕಾಂಡ 20:1, 3) ಆ ಸಂದರ್ಭದಲ್ಲಿ, ಇಸ್ರಾಯೇಲ್ ಜನಾಂಗವು ವಿಧೇಯತೆ ತೋರಿಸಲು ಆಯ್ಕೆಮಾಡಿತು. ಅವರು ಯೆಹೋವನಿಗೆ ಸಿದ್ಧಮನಸ್ಸಿನಿಂದ ಸಂಪೂರ್ಣ ಭಕ್ತಿಯನ್ನು ಸಲ್ಲಿಸಿದರು.—ವಿಮೋಚನಕಾಂಡ 20:5; ಅರಣ್ಯಕಾಂಡ 25:11.
4. (ಎ) ಮೋಶೆ ಇಸ್ರಾಯೇಲ್ಯರ ಮುಂದೆ ಯಾವ ಆಯ್ಕೆಯನ್ನಿಟ್ಟನು? (ಬಿ) ನಮ್ಮ ಮುಂದೆ ಇಂದು ಯಾವ ಆಯ್ಕೆಯಿದೆ?
4 ಸುಮಾರು 40 ವರ್ಷಗಳ ತರುವಾಯ, ಮೋಶೆಯು ಇಸ್ರಾಯೇಲ್ಯರ ಮತ್ತೊಂದು ಸಂತತಿಗೆ ಅವರ ಮುಂದಿದ್ದ ಆಯ್ಕೆಯ ಕುರಿತು ಬಲವತ್ತಾದ ರೀತಿಯಲ್ಲಿ ಮರುಜ್ಞಾಪಿಸಿದನು. “ನಾನು ಜೀವಮರಣಗಳನ್ನೂ ಆಶೀರ್ವಾದಶಾಪಗಳನ್ನೂ ಈಗ ನಿಮ್ಮ ಮುಂದೆ ಇಟ್ಟಿದ್ದೇನೆ; ಇದಕ್ಕೆ ಭೂಮ್ಯಾಕಾಶಗಳು ಸಾಕ್ಷಿಗಳಾಗಿರಲಿ. ಆದದರಿಂದ ನೀವೂ ನಿಮ್ಮ ಸಂತತಿಯವರೂ ಬದುಕಿಕೊಳ್ಳುವಂತೆ ಜೀವವನ್ನೇ ಆದುಕೊಳ್ಳಿರಿ” ಎಂದವನು ಹೇಳಿದನು. (ಧರ್ಮೋಪದೇಶಕಾಂಡ 30:19) ತದ್ರೀತಿಯಲ್ಲಿ ಇಂದು ನಾವು ಸಹ ಆಯ್ಕೆಮಾಡಸಾಧ್ಯವಿದೆ. ಹೌದು, ನಿತ್ಯಜೀವವನ್ನು ದೃಷ್ಟಿಯಲ್ಲಿಟ್ಟುಕೊಂಡು ನಾವು ಯೆಹೋವನನ್ನು ನಂಬಿಗಸ್ತಿಕೆಯಿಂದ ಸೇವಿಸುವ ಆಯ್ಕೆಮಾಡಸಾಧ್ಯವಿದೆ ಅಥವಾ ಆತನಿಗೆ ಅವಿಧೇಯರಾಗುವ ಆಯ್ಕೆಮಾಡಿ ಅದರ ಫಲಿತಾಂಶಗಳನ್ನು ಅನುಭವಿಸಸಾಧ್ಯವಿದೆ. ತದ್ವಿರುದ್ಧವಾದ ಆಯ್ಕೆಗಳನ್ನು ಮಾಡಿದ ಜನರ ಎರಡು ಉದಾಹರಣೆಗಳನ್ನು ಪರಿಗಣಿಸಿರಿ.
5, 6. ಯೆಹೋಶುವನು ಯಾವ ಆಯ್ಕೆಮಾಡಿದನು, ಮತ್ತು ಅದರ ಫಲಿತಾಂಶ ಏನಾಗಿತ್ತು?
5 ಸಾ.ಶ.ಪೂ. 1473ರಲ್ಲಿ ಯೆಹೋಶುವನು ಇಸ್ರಾಯೇಲ್ಯರನ್ನು ವಾಗ್ದತ್ತ ದೇಶದೊಳಗೆ ನಡೆಸಿದನು. ತಾನು ಸಾಯುವುದಕ್ಕಿಂತ ಮುಂಚೆ ಇಡೀ ಜನಾಂಗವನ್ನು ತುಂಬ ಹುರುಪಿನಿಂದ ಪ್ರೋತ್ಸಾಹಿಸುತ್ತಾ ಅವನು ಹೇಳಿದ್ದು: “ಯೆಹೋವನನ್ನು ಸೇವಿಸುವದು ನಿಮಗೆ ಸರಿಕಾಣದಿದ್ದರೆ ಯಾರನ್ನು ಸೇವಿಸಬೇಕೆಂದಿದ್ದೀರಿ? ಈ ಹೊತ್ತೇ ಆರಿಸಿಕೊಳ್ಳಿರಿ. ನಿಮ್ಮ ಪೂರ್ವಿಕರು [ಯೂಫ್ರೇಟೀಸ್] ನದಿಯ ಆಚೆಯಲ್ಲಿ ಸೇವಿಸುತ್ತಿದ್ದ ದೇವತೆಗಳೋ ಈ ದೇಶದ ಮೂಲನಿವಾಸಿಗಳಾದ ಅಮೋರಿಯರ ದೇವತೆಗಳೋ, ಹೇಳಿರಿ.” ನಂತರ ತನ್ನ ಕುಟುಂಬದ ಕುರಿತು ತಿಳಿಸುತ್ತಾ ಅವನು ಹೀಗಂದನು: “ನಾನೂ ನನ್ನ ಮನೆಯವರೂ ಯೆಹೋವನನ್ನೇ ಸೇವಿಸುವೆವು.”—ಯೆಹೋಶುವ 24:15.
6 ಯೆಹೋವನು ಈ ಮುಂಚೆ ಯೆಹೋಶುವನಿಗೆ ಸ್ಥಿರಚಿತ್ತನೂ ಧೈರ್ಯಶಾಲಿಯೂ ಆಗಿರುವಂತೆ ಪ್ರೋತ್ಸಾಹಿಸಿದನು ಮತ್ತು ಧರ್ಮಶಾಸ್ತ್ರಕ್ಕೆ ವಿಧೇಯನಾಗುವ ವಿಷಯದಲ್ಲಿ ದಾರಿತಪ್ಪದಂತೆ ಉಪದೇಶಿಸಿದನು. ಧರ್ಮಶಾಸ್ತ್ರವನ್ನು ಹಗಲಿರುಳು ಓದಿ ಧ್ಯಾನಿಸುವ ಮೂಲಕ ಯೆಹೋಶುವನು ತನ್ನ ಮಾರ್ಗವನ್ನು ಸಫಲಗೊಳಿಸಸಾಧ್ಯವಿತ್ತು. (ಯೆಹೋಶುವ 1:7, 8) ಯೆಹೋಶುವನು ಈ ಮಾತಿಗೆ ಕಿವಿಗೊಟ್ಟನು ಮತ್ತು ಸಫಲನಾದನು. ಯೆಹೋಶುವನು ಮಾಡಿದ ಆಯ್ಕೆಯಿಂದಾಗಿ ಅವನಿಗೆ ಆಶೀರ್ವಾದಗಳು ದೊರಕಿದವು. “[ಯೆಹೋವನು] ಇಸ್ರಾಯೇಲ್ಯರಿಗೆ ಮಾಡಿದ ಅತಿ ಶ್ರೇಷ್ಠವಾಗ್ದಾನಗಳಲ್ಲಿ ಒಂದೂ ತಪ್ಪಿಹೋಗಲಿಲ್ಲ. ಎಲ್ಲಾ ನೆರವೇರಿದವು” ಎಂದವನು ಘೋಷಿಸಿದನು.—ಯೆಹೋಶುವ 21:45.
7. ಯೆಶಾಯನ ದಿನದಲ್ಲಿ ಕೆಲವು ಇಸ್ರಾಯೇಲ್ಯರು ಯಾವ ಆಯ್ಕೆಮಾಡಿದರು, ಮತ್ತು ಇದರ ಫಲಿತಾಂಶವೇನಾಗಿತ್ತು?
7 ಇದಕ್ಕೆ ವ್ಯತಿರಿಕ್ತವಾಗಿ, 700 ವರ್ಷಗಳ ತರುವಾಯ ಇಸ್ರಾಯೇಲಿನಲ್ಲಿದ್ದ ಪರಿಸ್ಥಿತಿಯನ್ನು ಪರಿಗಣಿಸಿರಿ. ಈ ಸಮಯದಷ್ಟಕ್ಕೆ, ಅನೇಕ ಇಸ್ರಾಯೇಲ್ಯರು ವಿಧರ್ಮಿ ಪದ್ಧತಿಗಳನ್ನು ಪಾಲಿಸುತ್ತಿದ್ದರು. ಉದಾಹರಣೆಗೆ, ವರ್ಷದ ಕೊನೆಯ ದಿನದಂದು ಜನರು ಬಗೆಬಗೆಯ ರುಚಿಕರ ಆಹಾರ ಮತ್ತು ಸಿಹಿ ದ್ರಾಕ್ಷಾಮದ್ಯವಿರುತ್ತಿದ್ದ ಔತಣಕ್ಕೆ ಕೂಡಿಬರುತ್ತಿದ್ದರು. ಇದು ಕೇವಲ ಒಂದು ಕುಟುಂಬ ಸಮಾರಂಭವಾಗಿರಲಿಲ್ಲ. ಇದು ಎರಡು ವಿಧರ್ಮಿ ದೇವತೆಗಳ ಗೌರವಾರ್ಥವಾಗಿ ನಡೆಸಲಾಗುತ್ತಿದ್ದ ಒಂದು ಧಾರ್ಮಿಕ ಆಚರಣೆಯಾಗಿತ್ತು. ಈ ಅಪನಂಬಿಗಸ್ತಿಕೆಯ ಕುರಿತು ದೇವರಿಗೆ ಹೇಗನಿಸಿತು ಎಂಬುದನ್ನು ಪ್ರವಾದಿಯಾದ ಯೆಶಾಯನು ದಾಖಲಿಸಿದನು: ‘ನೀವು ಯೆಹೋವನಾದ ನನ್ನನ್ನು ತೊರೆದು ನನ್ನ ಪವಿತ್ರಪರ್ವತವನ್ನು ಮರೆತು ಶುಭದಾಯಕದೇವತೆಗೆ ಔತಣವನ್ನು ಅಣಿಮಾಡಿ ಗತಿದಾಯಕದೇವತೆಗೆ ಮದ್ಯವನ್ನು ತುಂಬಾ ಬೆರಸಿದ್ದೀರಿ.’ ವರ್ಷದ ಸುಗ್ಗಿಯು ಯೆಹೋವನ ಆಶೀರ್ವಾದದ ಮೇಲಲ್ಲ ಬದಲಿಗೆ “ಶುಭದಾಯಕದೇವತೆ” ಮತ್ತು “ಗತಿದಾಯಕದೇವತೆ”ಯನ್ನು ಮೆಚ್ಚುವುದರ ಮೇಲೆ ಹೊಂದಿಕೊಂಡಿದೆ ಎಂದು ಆ ಇಸ್ರಾಯೇಲ್ಯರು ನಂಬುತ್ತಿದ್ದರು. ಆದರೆ ವಾಸ್ತವದಲ್ಲಿ ಅವರ ದಂಗೆಕೋರ ಮಾರ್ಗಕ್ರಮ ಹಾಗೂ ಅವರ ಈ ಇಚ್ಛಾಪೂರ್ವಕ ಆಯ್ಕೆಯು ಅವರ ದುರ್ಗತಿಯನ್ನು ನಿಶ್ಚಯಿಸಿತು. “ನಿಮಗೆ ಕತ್ತಿಯನ್ನೇ ಗತಿಯಾಗಮಾಡುವೆನು. ನೀವೆಲ್ಲರೂ ಕೊಲೆಗೊಳಗಾಗಿ ಬೀಳುವಿರಿ; ಏಕಂದರೆ ನಾನು ಕೂಗಲು ನೀವು ಉತ್ತರಕೊಡಲಿಲ್ಲ. ನಾನು ಹೇಳಲು ನೀವು ಕೇಳಲಿಲ್ಲ; ನನ್ನ ಚಿತ್ತಕ್ಕೆ ವಿರುದ್ಧವಾದದ್ದನ್ನು ನಡಿಸಿ ನನಗೆ ಇಷ್ಟವಲ್ಲದ್ದನ್ನು ಆರಿಸಿಕೊಂಡಿರಿ” ಎಂದು ಯೆಹೋವನು ಹೇಳಿದನು. (ಯೆಶಾಯ 65:11, 12) ಅವರ ವಿವೇಕಹೀನ ಆಯ್ಕೆಯು ಅವರ ಮೇಲೆ ನಾಶನವನ್ನು ಬರಮಾಡಿತು ಮತ್ತು ಆ ಶುಭದಾಯಕ ಹಾಗೂ ಗತಿದಾಯಕ ದೇವತೆಗಳಿಂದ ಈ ನಾಶನವನ್ನು ತಡೆಯಲಾಗಲಿಲ್ಲ.
ಸರಿಯಾದ ಆಯ್ಕೆಮಾಡುವುದು
8. ಧರ್ಮೋಪದೇಶಕಾಂಡ 30:20ಕ್ಕನುಸಾರ, ಸರಿಯಾದ ಆಯ್ಕೆಮಾಡುವುದರಲ್ಲಿ ಏನು ಒಳಗೂಡಿದೆ?
8 ಜೀವವನ್ನು ಆದುಕೊಳ್ಳುವಂತೆ ಮೋಶೆ ಇಸ್ರಾಯೇಲ್ಯರಿಗೆ ಪ್ರೋತ್ಸಾಹಿಸಿದಾಗ, ಅವರು ತೆಗೆದುಕೊಳ್ಳಬೇಕಾದ ಮೂರು ಹೆಜ್ಜೆಗಳ ಕುರಿತು ಅವನು ತಿಳಿಸಿದನು: “ನಿಮ್ಮ ದೇವರಾದ ಯೆಹೋವನನ್ನು ಪ್ರೀತಿಮಾಡಿ ಆತನ ಮಾತನ್ನು ಕೇಳಿ ಆತನನ್ನು ಹೊಂದಿಕೊಂಡೇ ಇರಿ.” (ಧರ್ಮೋಪದೇಶಕಾಂಡ 30:20, NIBV) ನಾವು ಸರಿಯಾದ ಆಯ್ಕೆಮಾಡಲು ಸಾಧ್ಯವಾಗುವಂತೆ ಈ ಮೂರು ಹೆಜ್ಜೆಗಳನ್ನು ಒಂದೊಂದಾಗಿ ಪರಿಗಣಿಸೋಣ.
9. ಯೆಹೋವನ ಮೇಲೆ ನಮಗಿರುವ ಪ್ರೀತಿಯನ್ನು ಹೇಗೆ ತೋರಿಸಸಾಧ್ಯವಿದೆ?
9 ನಮ್ಮ ದೇವರಾದ ಯೆಹೋವನನ್ನು ಪ್ರೀತಿಸುವ ಮೂಲಕ: ನಾವು ಯೆಹೋವನನ್ನು ಪ್ರೀತಿಸುವುದರಿಂದ ಆತನ ಸೇವೆಮಾಡುವ ಆಯ್ಕೆಮಾಡಿದ್ದೇವೆ. ಇಸ್ರಾಯೇಲಿನ ಕಾಲದ ಎಚ್ಚರಿಕೆಯ ಮಾದರಿಗಳಿಂದ ಪಾಠವನ್ನು ಕಲಿತು, ಅನೈತಿಕತೆಯಲ್ಲಿ ಒಳಗೂಡುವಂತೆ ಬರುವ ಎಲ್ಲ ಪ್ರಲೋಭನೆಗಳನ್ನು ನಾವು ಪ್ರತಿರೋಧಿಸುತ್ತೇವೆ ಮತ್ತು ಈ ಲೋಕದ ಪ್ರಾಪಂಚಿಕತೆಯೆಂಬ ಕೆಸರಿನ ಹೊಂಡದೊಳಗೆ ಮುಳುಗುವಂತೆ ಮಾಡುವ ಜೀವನ ಶೈಲಿಗಳಿಂದ ದೂರವಿರುತ್ತೇವೆ. (1 ಕೊರಿಂಥ 10:11; 1 ತಿಮೊಥೆಯ 6:6-10) ನಾವು ಯೆಹೋವನಿಗೆ ಅಂಟಿಕೊಂಡು ಆತನ ನಿಬಂಧನೆಗಳನ್ನು ಕೈಗೊಳ್ಳುತ್ತೇವೆ. (ಯೆಹೋಶುವ 23:8; ಕೀರ್ತನೆ 119:5, 8) ಇಸ್ರಾಯೇಲ್ಯರು ವಾಗ್ದತ್ತ ದೇಶವನ್ನು ಪ್ರವೇಶಿಸುವುದಕ್ಕಿಂತ ಮುಂಚೆ ಮೋಶೆ ಅವರನ್ನು ಹೀಗೆ ಉತ್ತೇಜಿಸಿದನು: “ನೀವು ಸ್ವಾಧೀನಮಾಡಿಕೊಳ್ಳುವದಕ್ಕೆ ಹೋಗುವ ದೇಶದಲ್ಲಿ ಅನುಸರಿಸಬೇಕಾದ ಆಜ್ಞಾವಿಧಿಗಳನ್ನು ನನ್ನ ದೇವರಾದ ಯೆಹೋವನು ನನಗೆ ಆಜ್ಞಾಪಿಸಿದಂತೆಯೇ ನಿಮಗೆ ಬೋಧಿಸಿದ್ದೇನೆ. ಇವುಗಳನ್ನು ಕೈಕೊಂಡು ಅನುಸರಿಸಿರಿ. ಅನುಸರಿಸಿದರೇ ಅನ್ಯಜನಗಳು ನಿಮ್ಮನ್ನು ಜ್ಞಾನಿಗಳೂ ವಿವೇಕಿಗಳೂ ಎಂದು ತಿಳಿಯುವರು.” (ಧರ್ಮೋಪದೇಶಕಾಂಡ 4:5, 6) ನಮ್ಮ ಜೀವನದಲ್ಲಿ ಯೆಹೋವನ ಚಿತ್ತಕ್ಕೆ ಪ್ರಥಮ ಸ್ಥಾನವನ್ನು ಕೊಡುವ ಮೂಲಕ ಆತನ ಮೇಲೆ ನಮಗಿರುವ ಪ್ರೀತಿಯನ್ನು ತೋರಿಸುವ ಸಮಯವು ಇದೇ ಆಗಿದೆ. ನಾವು ಈ ಆಯ್ಕೆಮಾಡುವುದಾದರೆ ಖಂಡಿತವಾಗಿ ಆಶೀರ್ವದಿಸಲ್ಪಡುವೆವು.—ಮತ್ತಾಯ 6:33.
10-12. ನೋಹನ ದಿನಗಳಲ್ಲಿ ಏನು ಸಂಭವಿಸಿತೊ ಅದರ ಚರ್ಚೆಯಿಂದ ನಾವು ಯಾವ ಪಾಠಗಳನ್ನು ಕಲಿಯುತ್ತೇವೆ?
10 ದೇವರ ಮಾತನ್ನು ಕೇಳುವ ಮೂಲಕ: ನೋಹನು ‘ಸುನೀತಿಯನ್ನು ಸಾರುವವನಾಗಿದ್ದನು.’ (2 ಪೇತ್ರ 2:5) ಜಲಪ್ರಳಯಕ್ಕೆ ಮುಂಚೆ ಜೀವಿಸುತ್ತಿದ್ದ ಬಹುಮಟ್ಟಿಗೆ ಎಲ್ಲ ಜನರು ಬೇರೆ ವಿಷಯಗಳಿಂದ ಅಪಕರ್ಷಿತರಾಗಿದ್ದು, ಅವನು ಕೊಟ್ಟ ಎಚ್ಚರಿಕೆಗಳಿಗೆ ಕಿಂಚಿತ್ತೂ ಗಮನಕೊಡಲಿಲ್ಲ. ಇದರ ಫಲಿತಾಂಶವೇನಾಗಿತ್ತು? ‘ಪ್ರಳಯದ ನೀರು ಬಂದು ಎಲ್ಲರನ್ನು ಬಡುಕೊಂಡುಹೋಯಿತು.’ ನಮ್ಮ ದಿನದಲ್ಲಿ ಅಂದರೆ “ಮನುಷ್ಯಕುಮಾರನು ಪ್ರತ್ಯಕ್ಷನಾಗುವ ಕಾಲದಲ್ಲಿಯೂ” ಪರಿಸ್ಥಿತಿಯು ಹಾಗೆಯೇ ಇರುವುದು ಎಂದು ಯೇಸು ಎಚ್ಚರಿಸಿದನು. ಇಂದು ದೇವರ ಸಂದೇಶಕ್ಕೆ ಕಿವಿಗೊಡದಿರಲು ಆಯ್ಕೆಮಾಡುವ ಜನರಿಗೆ, ನೋಹನ ದಿನದಲ್ಲಿ ಏನು ಸಂಭವಿಸಿತೊ ಅದು ಒಂದು ಪ್ರಬಲ ಎಚ್ಚರಿಕೆಯಾಗಿದೆ.—ಮತ್ತಾಯ 24:39.
11 ದೇವರ ಆಧುನಿಕ ದಿನದ ಸೇವಕರು ಕೊಡುವಂಥ ದೈವಿಕ ಎಚ್ಚರಿಕೆಗಳ ಬಗ್ಗೆ ಕುಚೋದ್ಯಮಾಡುವ ಜನರು ಆ ಎಚ್ಚರಿಕೆಗಳಿಗೆ ಕಿವಿಗೊಡದೆ ಹೋಗುವುದರಿಂದ ಏನು ಸಂಭವಿಸಲಿದೆ ಎಂಬುದನ್ನು ಗ್ರಹಿಸಿಕೊಳ್ಳಬೇಕಾಗಿದೆ. ಇಂತಹ ಕುಚೋದ್ಯಗಾರರ ಕುರಿತು ಅಪೊಸ್ತಲ ಪೇತ್ರನು ತಿಳಿಸಿದ್ದು: “ಹೀಗೆ ಮಾತಾಡುವವರು ಒಂದು ಸಂಗತಿಯನ್ನು ತಿಳಿದರೂ ಬೇಕೆಂದು ಮರೆತುಬಿಡುತ್ತಾರೆ; ಅದೇನಂದರೆ—ಪೂರ್ವಕಾಲದಲ್ಲಿದ್ದ ಭೂಮ್ಯಾಕಾಶಗಳು ದೇವರ ವಾಕ್ಯದ ಮೂಲಕ ನೀರಿನಿಂದ ಉಂಟಾಗಿ ನೀರಿನಿಂದ ಆಧಾರಗೊಂಡಿರುವಲ್ಲಿ ಆ ನೀರುಗಳಿಂದಲೇ ಆ ಕಾಲದಲ್ಲಿದ್ದ ಲೋಕವು ಜಲಪ್ರಲಯದಲ್ಲಿ ನಾಶವಾಯಿತು. ಆದರೆ ಈಗಿರುವ ಭೂಮ್ಯಾಕಾಶಗಳು ಅದೇ ವಾಕ್ಯದ ಬಲದಿಂದ ಬೆಂಕಿಯ ಮೂಲಕ ನಾಶವಾಗುವದಕ್ಕೆ ಇಡಲ್ಪಟ್ಟಿವೆ; ಮತ್ತು ಭಕ್ತಿಹೀನರ ಶಿಕ್ಷಾವಿಧಿಯೂ ನಾಶವೂ ಉಂಟಾಗುವ ದಿನಕ್ಕಾಗಿ ಆ ಬೆಂಕಿ ಸಿದ್ಧವಾಗಿದೆ.”—2 ಪೇತ್ರ 3:3-7.
12 ಈ ಜನರಿಗೆ ವ್ಯತಿರಿಕ್ತವಾಗಿ, ನೋಹ ಮತ್ತು ಅವನ ಕುಟುಂಬವು ಮಾಡಿದ ಆಯ್ಕೆಯನ್ನು ಪರಿಗಣಿಸಿರಿ. “ನಂಬಿಕೆಯಿಂದಲೇ ನೋಹನು ಅದು ವರೆಗೆ ಕಾಣದಿದ್ದ ಸಂಗತಿಗಳ ವಿಷಯವಾಗಿ ದೈವೋಕ್ತಿಯನ್ನು ಹೊಂದಿ ಭಯಭಕ್ತಿಯುಳ್ಳವನಾಗಿ . . . ನಾವೆಯನ್ನು ಕಟ್ಟಿ ಸಿದ್ಧಮಾಡಿದನು.” ದೇವರು ಕೊಟ್ಟ ಎಚ್ಚರಿಕೆಗೆ ನೋಹನು ಕಿವಿಗೊಟ್ಟ ಕಾರಣ ಅವನ ಇಡೀ ಕುಟುಂಬವು ರಕ್ಷಣೆಹೊಂದಿತು. (ಇಬ್ರಿಯ 11:7) ನಾವು ದೇವರ ಸಂದೇಶಕ್ಕೆ ಕಿವಿಗೊಡುವುದರಲ್ಲಿ ತೀವ್ರವಾಗಿರೋಣ ಮತ್ತು ಅದಕ್ಕೆ ವಿಧೇಯರಾಗೋಣ.—ಯಾಕೋಬ 1:19, 22-25.
13, 14. (ಎ) ‘ಯೆಹೋವನನ್ನು ಹೊಂದಿಕೊಂಡೇ ಇರುವುದು’ ಏಕೆ ಪ್ರಾಮುಖ್ಯವಾಗಿದೆ? (ಬಿ) ನಮ್ಮ “ಕುಂಬಾರ”ನಾಗಿರುವ ಯೆಹೋವನು ನಮ್ಮನ್ನು ರೂಪಿಸುವಂತೆ ನಾವು ಹೇಗೆ ಬಿಡಬೇಕು?
13 ಯೆಹೋವನನ್ನು ಹೊಂದಿಕೊಂಡಿರುವ ಮೂಲಕ: ನಾವು ‘ಜೀವವನ್ನು ಆದುಕೊಂಡು ಬದುಕಬೇಕಾದರೆ’ ನಾವು ಯೆಹೋವನನ್ನು ಪ್ರೀತಿಸಿ ಆತನ ಮಾತನ್ನು ಕೇಳಬೇಕು ಮಾತ್ರವಲ್ಲ, ನಾವು ‘ಆತನನ್ನು ಹೊಂದಿಕೊಂಡೇ ಇರಬೇಕು’ ಅಂದರೆ ಆತನ ಚಿತ್ತವನ್ನು ಪಟ್ಟುಹಿಡಿದು ಮಾಡಬೇಕು. “ನಿಮ್ಮ ಸೈರಣೆಯಿಂದ ನಿಮ್ಮ ಪ್ರಾಣಗಳನ್ನು ಪಡಕೊಳ್ಳುವಿರಿ” ಎಂದು ಯೇಸು ಹೇಳಿದನು. (ಲೂಕ 21:19) ವಾಸ್ತವದಲ್ಲಿ, ನಾವು ಈ ವಿಷಯದಲ್ಲಿ ಯಾವ ಆಯ್ಕೆಮಾಡುತ್ತೇವೋ ಅದು ನಮ್ಮ ಹೃದಯದಲ್ಲಿ ಏನಿದೆ ಎಂಬುದನ್ನು ಬಯಲುಪಡಿಸುತ್ತದೆ. “ಭಯದಿಂದ ನಡೆದುಕೊಳ್ಳುವವನು ಧನ್ಯನು; ಕಠಿನಹೃದಯನು ಕೇಡಿಗೆ ಸಿಕ್ಕಿಬೀಳುವನು” ಎಂದು ಜ್ಞಾನೋಕ್ತಿ 28:14 ಹೇಳುತ್ತದೆ. ಇದಕ್ಕೆ ಒಂದು ಉದಾಹರಣೆ ಪ್ರಾಚೀನ ಐಗುಪ್ತದ ಫರೋಹನಾಗಿದ್ದಾನೆ. ಹತ್ತು ಬಾಧೆಗಳು ಒಂದೊಂದಾಗಿ ಐಗುಪ್ತದ ಮೇಲೆರಗಿದಾಗ ಫರೋಹನು ದೈವಿಕ ಭಯವನ್ನು ತೋರಿಸುವ ಬದಲಿಗೆ ತನ್ನ ಹೃದಯವನ್ನು ಕಠಿನಮಾಡಿಕೊಂಡನು. ಫರೋಹನು ಅವಿಧೇಯನಾಗುವಂತೆ ಯೆಹೋವನು ಅವನನ್ನು ಒತ್ತಾಯಮಾಡಲಿಲ್ಲ, ಬದಲಿಗೆ ಆ ಗರ್ವಿಷ್ಠ ರಾಜನು ಏನು ಮಾಡಬೇಕೆಂಬುದನ್ನು ಸ್ವತಃ ಆಯ್ಕೆಮಾಡುವಂತೆ ಬಿಟ್ಟನು. ಅಂತೂ, ಯೆಹೋವನ ಚಿತ್ತವು ನೆರವೇರಿತು. ಇದನ್ನು ಅಪೊಸ್ತಲ ಪೌಲನು, ಫರೋಹನ ಬಗ್ಗೆ ಯೆಹೋವನಿಗಿದ್ದ ಅಭಿಪ್ರಾಯದ ಕುರಿತು ವಿವರಿಸಿದಾಗ ವ್ಯಕ್ತಪಡಿಸಿದನು: “ನಾನು ನಿನ್ನಲ್ಲಿ ನನ್ನ ಶಕ್ತಿಯನ್ನು ತೋರಿಸಿ ನನ್ನ ಹೆಸರನ್ನು ಲೋಕದಲ್ಲೆಲ್ಲಾ ಪ್ರಖ್ಯಾತ ಪಡಿಸಬೇಕೆಂಬ ಉದ್ದೇಶದಿಂದಲೇ ನಿನ್ನನ್ನು ಉನ್ನತ ಸ್ಥಾನಕ್ಕೆ ತಂದಿದ್ದೇನೆ.”—ರೋಮಾಪುರ 9:17.
14 ಫರೋಹನ ನಿಯಂತ್ರಣದಿಂದ ಇಸ್ರಾಯೇಲನ್ನು ಬಿಡಿಸಿ ಶತಮಾನಗಳು ಕಳೆದ ಬಳಿಕ ಪ್ರವಾದಿಯಾದ ಯೆಶಾಯನು ಘೋಷಿಸಿದ್ದು: “ಯೆಹೋವನೇ, ನೀನು ನಮ್ಮ ತಂದೆಯಾಗಿದ್ದೀ; ನಾವು ಜೇಡಿಮಣ್ಣು, ನೀನು ಕುಂಬಾರ, ನಾವೆಲ್ಲರೂ ನಿನ್ನ ಕೈಕೆಲಸವೇ.” (ಯೆಶಾಯ 64:8) ಯೆಹೋವನ ವಾಕ್ಯವನ್ನು ವೈಯಕ್ತಿಕವಾಗಿ ಅಧ್ಯಯನಮಾಡುವ ಹಾಗೂ ಅನ್ವಯಿಸುವ ಮೂಲಕ ಆತನು ನಮ್ಮನ್ನು ರೂಪಿಸುವಂತೆ ನಾವು ಬಿಡುವಾಗ, ನಾವು ಕ್ರಮೇಣ ನೂತನ ವ್ಯಕ್ತಿತ್ವವನ್ನು ಧರಿಸಿಕೊಳ್ಳುತ್ತೇವೆ. ನಾವು ಹೆಚ್ಚು ನಮ್ರರೂ, ಸುಲಭವಾಗಿ ರೂಪಿಸಸಾಧ್ಯರೂ ಆಗುತ್ತೇವೆ. ಇದು ನಾವು ಯೆಹೋವನಿಗೆ ನಿಷ್ಠೆಯಿಂದ ಹೊಂದಿಕೊಂಡೇ ಇರುವುದನ್ನು ಸುಲಭಗೊಳಿಸುತ್ತದೆ, ಏಕೆಂದರೆ ಯೆಹೋವನನ್ನು ಮೆಚ್ಚಿಸಲು ನಾವು ಮನದಾಳದಿಂದ ಬಯಸುತ್ತೇವೆ.—ಎಫೆಸ 4:23, 24; ಕೊಲೊಸ್ಸೆ 3:8-10.
‘ನೀವು ತಿಳಿಸುತ್ತಾ ಹೋಗಬೇಕು’
15. ಧರ್ಮೋಪದೇಶಕಾಂಡ 4:9ಕ್ಕನುಸಾರ, ಮೋಶೆ ಇಸ್ರಾಯೇಲ್ಯರಿಗೆ ಯಾವ ಇಬ್ಬಗೆಯ ಜವಾಬ್ದಾರಿಯ ಕುರಿತು ಜ್ಞಾಪಕಹುಟ್ಟಿಸಿದನು?
15 ಇನ್ನೇನು ವಾಗ್ದತ್ತ ದೇಶವನ್ನು ಪ್ರವೇಶಿಸಲಿಕ್ಕಿದ್ದ ಇಸ್ರಾಯೇಲ್ ಜನಾಂಗವನ್ನು ಸಂಬೋಧಿಸುತ್ತಾ ಮೋಶೆ ಹೀಗಂದನು: “ನೀವು ಬಹು ಜಾಗರೂಕತೆಯಿಂದ ನಿಮ್ಮನಿಮ್ಮ ಮನಸ್ಸುಗಳನ್ನು ಕಾಪಾಡಿಕೊಳ್ಳುವವರಾಗಿ ನೀವು ನೋಡಿದ ಸಂಗತಿಗಳನ್ನು ಎಷ್ಟುಮಾತ್ರವೂ ಮರೆಯದೆ ಜೀವದಿಂದಿರುವ ವರೆಗೂ ಅವುಗಳನ್ನು ನೆನಪಿನಲ್ಲಿಟ್ಟುಕೊಂಡು ನಿಮ್ಮ ಮಕ್ಕಳಿಗೂ ಮೊಮ್ಮಕ್ಕಳಿಗೂ ತಿಳಿಸುತ್ತಾ ಹೋಗಬೇಕು.” (ಧರ್ಮೋಪದೇಶಕಾಂಡ 4:9) ಯೆಹೋವನ ಆಶೀರ್ವಾದವನ್ನು ಪಡೆದುಕೊಳ್ಳಲು ಮತ್ತು ತಾವು ಇನ್ನೇನು ಸ್ವಾಧೀನಮಾಡಿಕೊಳ್ಳಲಿಕ್ಕಿದ್ದ ದೇಶದಲ್ಲಿ ಏಳಿಗೆಹೊಂದಲು ಜನರು ತಮ್ಮ ದೇವರಾದ ಯೆಹೋವನ ಮುಂದೆ ಇಬ್ಬಗೆಯ ಜವಾಬ್ದಾರಿಯನ್ನು ಪೂರೈಸಬೇಕಾಗಿತ್ತು. ಅವರ ಕಣ್ಣಮುಂದೆ ಯೆಹೋವನು ಮಾಡಿದ್ದ ಅದ್ಭುತಕರ ವಿಷಯಗಳನ್ನು ಅವರು ಮರೆಯಬಾರದಿತ್ತು ಮತ್ತು ಅವುಗಳ ಕುರಿತು ತಮ್ಮ ಮುಂದಿನ ಸಂತತಿಗಳಿಗೆ ಬೋಧಿಸಬೇಕಿತ್ತು. ಇಂದು ದೇವಜನರಾಗಿರುವ ನಾವು ಸಹ ‘ಜೀವವನ್ನು ಆದುಕೊಂಡು ಬದುಕಬೇಕಾದರೆ’ ಇದನ್ನೇ ಮಾಡಬೇಕು. ಯೆಹೋವನು ನಮ್ಮ ಪರವಾಗಿ ಮಾಡಿರುವ ಯಾವ ವಿಷಯಗಳನ್ನು ನಾವು ಕಣ್ಣಾರೆ ನೋಡಿದ್ದೇವೆ?
16, 17. (ಎ) ಗಿಲ್ಯಡ್ ಶಾಲೆಯಿಂದ ತರಬೇತಿ ಪಡೆದುಕೊಂಡ ಮಿಷನೆರಿಗಳು ರಾಜ್ಯ ಸಾರುವ ಕೆಲಸದಲ್ಲಿ ಏನನ್ನು ಸಾಧಿಸಿದ್ದಾರೆ? (ಬಿ) ಹುರುಪನ್ನು ಕಾಪಾಡಿಕೊಂಡಿರುವವರ ಯಾವ ಉದಾಹರಣೆಗಳು ನಿಮಗೆ ತಿಳಿದಿವೆ?
16 ನಮ್ಮ ಸಾರುವ ಮತ್ತು ಶಿಷ್ಯರನ್ನಾಗಿ ಮಾಡುವ ಕೆಲಸವನ್ನು ಯೆಹೋವನು ಹೇಗೆ ಆಶೀರ್ವದಿಸಿದ್ದಾನೆ ಎಂಬುದನ್ನು ನೋಡಿ ನಾವು ರೋಮಾಂಚನಗೊಳ್ಳುತ್ತೇವೆ. 1943ರಲ್ಲಿ ವಾಚ್ಟವರ್ ಬೈಬಲ್ ಸ್ಕೂಲ್ ಆಫ್ ಗಿಲ್ಯಡ್ ಪ್ರಾರಂಭವಾದಂದಿನಿಂದ, ಮಿಷನೆರಿಗಳು ಅನೇಕ ದೇಶಗಳಲ್ಲಿ ಶಿಷ್ಯರನ್ನಾಗಿ ಮಾಡುವ ಕೆಲಸದಲ್ಲಿ ಮುಂದಾಳತ್ವ ವಹಿಸಿದ್ದಾರೆ. ಈ ಶಾಲೆಯ ಆರಂಭದ ಪದವೀಧರರಾಗಿದ್ದ ಕೆಲವರು ಇಳಿಯಸ್ಸಿನವರಾಗಿದ್ದರೂ ಮತ್ತು ಕೆಲವರಿಗೆ ಶಾರೀರಿಕ ಇತಿಮಿತಿಗಳಿರುವುದಾದರೂ ಅವರು ಇಂದಿನ ವರೆಗೂ ರಾಜ್ಯದ ಸಾರುವಿಕೆಗಾಗಿ ತಮ್ಮ ಹುರುಪನ್ನು ಕಾಪಾಡಿಕೊಂಡಿದ್ದಾರೆ. ಇದರ ಒಂದು ಉತ್ತಮ ಉದಾಹರಣೆಯು ಮೇರಿ ಓಲ್ಸನ್ ಅವರದ್ದಾಗಿದೆ. ಇವರು 1944ರಲ್ಲಿ ಗಿಲ್ಯಡ್ ಪದವೀಧರರಾದರು ಮತ್ತು ಮಿಷನೆರಿಯಾಗಿ ಮೊದಲು ಉರುಗ್ವೆಯಲ್ಲಿ, ನಂತರ ಕೊಲಂಬಿಯದಲ್ಲಿ ಮತ್ತು ಈಗ ಪೋರ್ಟರೀಕೊದಲ್ಲಿ ಸೇವೆಸಲ್ಲಿಸುತ್ತಿದ್ದಾರೆ. ಇಳಿವಯಸ್ಸಿನ ಶಾರೀರಿಕ ತೊಂದರೆಗಳಿಂದಾಗಿ ಅವರ ಸೇವೆಯು ಸ್ವಲ್ಪಮಟ್ಟಿಗೆ ಸೀಮಿತವಾಗಿರುವುದಾದರೂ, ಸಹೋದರಿ ಓಲ್ಸನ್ ಸಾರುವ ಕೆಲಸಕ್ಕಾಗಿರುವ ತಮ್ಮ ಉತ್ಸಾಹವನ್ನು ಕಾಪಾಡಿಕೊಂಡಿರುತ್ತಾರೆ. ಸ್ಪ್ಯಾನಿಷ್ ಭಾಷೆಯನ್ನು ಕಲಿತುಕೊಂಡಿರುವ ಅವರು ಪ್ರತಿ ವಾರ ಸ್ಥಳಿಕ ಪ್ರಚಾರಕರೊಂದಿಗೆ ಕ್ಷೇತ್ರ ಶುಶ್ರೂಷೆಯಲ್ಲಿ ಪಾಲ್ಗೊಳ್ಳಲು ಸಮಯವನ್ನು ಬದಿಗಿಡುತ್ತಾರೆ.
17 ಈಗ ವಿಧವೆಯಾಗಿರುವ ನ್ಯಾನ್ಸಿ ಪೋರ್ಟರ್ ಇನ್ನೂ ಬಹಾಮಸ್ನಲ್ಲಿ ಸೇವೆಸಲ್ಲಿಸುತ್ತಿದ್ದಾರೆ. ಇವರು 1947ರಲ್ಲಿ ಗಿಲ್ಯಡ್ ಶಾಲೆಯ ಪದವೀಧರರಾದರು. ಸಾರುವ ಕೆಲಸದಲ್ಲಿ ಈಗಲೂ ಕಾರ್ಯನಿರತರಾಗಿರುವ ಮಿಷನೆರಿಗಳಲ್ಲಿ ಇವರು ಇನ್ನೊಬ್ಬರು. “ಇತರರಿಗೆ ಬೈಬಲ್ ಸತ್ಯವನ್ನು ಕಲಿಸುವುದು ವಿಶೇಷವಾದ ಆನಂದದ ಮೂಲವಾಗಿದೆ. ಈ ಕೆಲಸವು ನನಗೆ ಕೊಡುವ ಕ್ರಮಬದ್ಧವಾದ ಆಧ್ಯಾತ್ಮಿಕ ರೂಢಿಯು, ನನ್ನ ಜೀವನವನ್ನು ರೂಪಿಸಿ ಸ್ಥಿರಗೊಳಿಸಿದೆ” ಎಂದು ಸಹೋದರಿ ಪೋರ್ಟರ್ ತಮ್ಮ ಜೀವನ ಕಥೆಯಲ್ಲಿ ತಿಳಿಸುತ್ತಾರೆ.a ಇವರು ಮತ್ತು ಇತರ ನಂಬಿಗಸ್ತ ಸೇವಕರು ತಮ್ಮ ಗತಕಾಲದ ಕುರಿತು ಆಲೋಚಿಸುವಾಗ, ಯೆಹೋವನು ಏನೇನು ಮಾಡಿದ್ದಾನೋ ಅದನ್ನು ಮರೆಯುವುದಿಲ್ಲ. ನಮ್ಮ ಕುರಿತಾಗಿ ಏನು? ನಮ್ಮ ಸುತ್ತಮುತ್ತಲೂ ಯೆಹೋವನು ರಾಜ್ಯ ಕೆಲಸವನ್ನು ಆಶೀರ್ವದಿಸಿರುವ ವಿಧವನ್ನು ನಾವು ಗಣ್ಯತಾಭಾವದಿಂದ ನೋಡುತ್ತೇವೋ?—ಕೀರ್ತನೆ 68:11.
18. ಮಿಷನೆರಿಗಳ ಜೀವನ ಕಥೆಗಳನ್ನು ಓದುವುದರಿಂದ ನಾವೇನನ್ನು ಕಲಿಯಬಲ್ಲೆವು?
18 ಯೆಹೋವನ ಸೇವೆಯಲ್ಲಿ ಅನೇಕಾನೇಕ ವರ್ಷಗಳನ್ನು ಕಳೆದಿರುವ ಈ ವ್ಯಕ್ತಿಗಳು ಸಾಧಿಸಿರುವಂಥ ಮತ್ತು ಇನ್ನೂ ಸಾಧಿಸುತ್ತಿರುವಂಥ ವಿಷಯಗಳನ್ನು ನೋಡಿ ನಾವು ಹರ್ಷಿಸುತ್ತೇವೆ. ಅವರ ಜೀವನ ಕಥೆಗಳನ್ನು ಓದುವುದು ನಮಗೆ ಪ್ರೋತ್ಸಾಹದ ಮೂಲವಾಗಿದೆ, ಏಕೆಂದರೆ ಯೆಹೋವನು ಈ ನಂಬಿಗಸ್ತ ವ್ಯಕ್ತಿಗಳಿಗಾಗಿ ಏನೇನು ಮಾಡಿದ್ದಾನೆ ಎಂಬುದನ್ನು ನಾವು ನೋಡುವಾಗ ಯೆಹೋವನನ್ನು ಸೇವಿಸಬೇಕೆಂಬ ನಮ್ಮ ದೃಢಸಂಕಲ್ಪವು ಇನ್ನಷ್ಟು ಬಲವಾಗುತ್ತದೆ. ಕಾವಲಿನಬುರುಜು ಪತ್ರಿಕೆಯಲ್ಲಿ ಛಾಪಿಸಲ್ಪಡುವ ಇಂತಹ ಪುಳಕಿತಗೊಳಿಸುವ ವೃತ್ತಾಂತಗಳನ್ನು ನೀವು ಕ್ರಮವಾಗಿ ಓದಿ ಅದರ ಕುರಿತು ಧ್ಯಾನಿಸುತ್ತೀರೋ?
19. ಕಾವಲಿನಬುರುಜುವಿನ ಸಂಚಿಕೆಗಳಲ್ಲಿ ಛಾಪಿಸಲ್ಪಡುವ ಜೀವನ ಕಥೆಗಳನ್ನು ಕ್ರೈಸ್ತ ಹೆತ್ತವರು ಹೇಗೆ ಸದುಪಯೋಗಿಸಸಾಧ್ಯವಿದೆ?
19 ಯೆಹೋವನು ಇಸ್ರಾಯೇಲ್ಯರಿಗಾಗಿ ಮಾಡಿದ್ದೆಲ್ಲವನ್ನು ಅವರು ಮರೆಯಬಾರದೆಂದು ಮತ್ತು ಅದನ್ನು ಅವರು ಜೀವದಿಂದಿರುವ ವರೆಗೂ ನೆನಪಿನಲ್ಲಿಟ್ಟುಕೊಳ್ಳಬೇಕೆಂದು ಮೋಶೆ ಜ್ಞಾಪಕಹುಟ್ಟಿಸಿದನು. ಇದರ ಜೊತೆಗೆ ಅವರು ಮತ್ತೊಂದು ವಿಷಯವನ್ನೂ ಮಾಡಬೇಕಿತ್ತು. ಮೋಶೆ ಹೇಳಿದ್ದು: “ನೀವು ನೋಡಿದ ಸಂಗತಿಗಳನ್ನು . . . ನಿಮ್ಮ ಮಕ್ಕಳಿಗೂ ಮೊಮ್ಮಕ್ಕಳಿಗೂ ತಿಳಿಸುತ್ತಾ ಹೋಗಬೇಕು.” (ಧರ್ಮೋಪದೇಶಕಾಂಡ 4:9) ನಿಜ ಕಥೆಗಳಲ್ಲಿ ಒಂದು ವಿಶೇಷವಾದ ಆಕರ್ಷಣೆಯಿರುತ್ತದೆ. ಬೆಳೆಯುತ್ತಿರುವ ಯುವ ವ್ಯಕ್ತಿಗಳಿಗೆ ಒಳ್ಳೆಯ ಮಾದರಿಗಳ ಅಗತ್ಯವಿದೆ. ಕಾವಲಿನಬುರುಜುವಿನ ಸಂಚಿಕೆಗಳಲ್ಲಿ ಪ್ರಕಟಿಸಲ್ಪಡುವ ವೃದ್ಧ ಸಹೋದರಿಯರ ನಂಬಿಗಸ್ತ ಮಾದರಿಯಿಂದ ಅವಿವಾಹಿತ ಸಹೋದರಿಯರು ಪಾಠಗಳನ್ನು ಕಲಿಯಬಲ್ಲರು. ತಮ್ಮ ಸ್ವಂತ ದೇಶದ ಒಂದು ಪರಭಾಷಾ ಕ್ಷೇತ್ರದಲ್ಲಿ ಸೇವೆಮಾಡುವ ಮೂಲಕ ಸಹೋದರ ಸಹೋದರಿಯರಿಗೆ ಸುವಾರ್ತೆ ಸಾರುವುದರಲ್ಲಿ ಕಾರ್ಯಮಗ್ನರಾಗಿರಲು ಹೆಚ್ಚು ಅವಕಾಶಗಳು ದೊರಕುತ್ತವೆ. ಕ್ರೈಸ್ತ ಹೆತ್ತವರೇ, ನಿಮ್ಮ ಮಕ್ಕಳು ಪೂರ್ಣ ಸಮಯದ ಸೇವೆಯನ್ನು ಆಯ್ಕೆಮಾಡುವಂತೆ ಪ್ರೇರಿಸಲಿಕ್ಕಾಗಿ ನಂಬಿಗಸ್ತ ಗಿಲ್ಯಡ್ ಮಿಷನೆರಿಗಳ ಮತ್ತು ಇತರರ ಅನುಭವಗಳನ್ನು ಉಪಯೋಗಿಸಬಾರದೇಕೆ?
20. ‘ಜೀವವನ್ನೇ ಆದುಕೊಳ್ಳಲು’ ನಾವೇನು ಮಾಡಬೇಕು?
20 ಹಾಗಾದರೆ ನಮ್ಮಲ್ಲಿ ಪ್ರತಿಯೊಬ್ಬರು ಹೇಗೆ ‘ಜೀವವನ್ನೇ ಆದುಕೊಳ್ಳಸಾಧ್ಯವಿದೆ’? ನಾವು ಯೆಹೋವನನ್ನು ಪ್ರೀತಿಸುತ್ತೇವೆಂದು ತೋರಿಸಲು ಮತ್ತು ಆತನು ಅನುಮತಿಸುವ ವರೆಗೆ ಆತನ ಸೇವೆಯಲ್ಲಿ ನಮ್ಮಿಂದಾದಷ್ಟು ಅತ್ಯುತ್ತಮವಾದದ್ದನ್ನು ಮಾಡುತ್ತಾ ಇರಲು ಇಚ್ಛಾಸ್ವಾತಂತ್ರ್ಯವೆಂಬ ಅದ್ಭುತಕರ ಉಡುಗೊರೆಯನ್ನು ಉಪಯೋಗಿಸುವ ಮೂಲಕವೇ. ಏಕೆಂದರೆ ಮೋಶೆ ತಿಳಿಸಿದಂತೆ, ‘ನಾವು ಬದುಕಿಕೊಳ್ಳುವದಕ್ಕೂ ಬಹುಕಾಲ ಇರುವದಕ್ಕೂ ಯೆಹೋವನೇ ಆಧಾರ.’—ಧರ್ಮೋಪದೇಶಕಾಂಡ 30:19, 20.
[ಪಾದಟಿಪ್ಪಣಿ]
a ಜೂನ್ 1, 2001ರ ಕಾವಲಿನಬುರುಜುವಿನ ಪುಟ 23-7ರಲ್ಲಿ ಪ್ರಕಟಿಸಲ್ಪಟ್ಟಿರುವ “ಅತಿ ದುಃಖಕರ ನಷ್ಟದ ಮಧ್ಯೆಯೂ ಆನಂದಿತಳು ಹಾಗೂ ಕೃತಜ್ಞಳು” ಎಂಬ ಜೀವನ ಕಥೆಯನ್ನು ನೋಡಿ.
ಜ್ಞಾಪಿಸಿಕೊಳ್ಳಬಲ್ಲಿರೋ?
• ತದ್ವಿರುದ್ಧ ಆಯ್ಕೆಗಳನ್ನು ಮಾಡಿದ ಮಾದರಿಗಳ ಈ ಚರ್ಚೆಯಿಂದ ನೀವೇನನ್ನು ಕಲಿತಿದ್ದೀರಿ?
• ‘ಜೀವವನ್ನೇ ಆದುಕೊಳ್ಳಲಿಕ್ಕಾಗಿ’ ನಾವು ಯಾವ ಹೆಜ್ಜೆಗಳನ್ನು ತೆಗೆದುಕೊಳ್ಳಬೇಕು?
• ಯಾವ ಇಬ್ಬಗೆಯ ಜವಾಬ್ದಾರಿಯನ್ನು ಪೂರೈಸುವಂತೆ ನಮ್ಮನ್ನು ಪ್ರೋತ್ಸಾಹಿಸಲಾಗಿದೆ?
[ಪುಟ 26ರಲ್ಲಿರುವ ಚಿತ್ರ]
‘ನಾನು ಜೀವಮರಣಗಳನ್ನು ನಿಮ್ಮ ಮುಂದೆ ಇಟ್ಟಿದ್ದೇನೆ’
[ಪುಟ 29ರಲ್ಲಿರುವ ಚಿತ್ರ]
ದೇವರ ಮಾತನ್ನು ಕೇಳಿದ್ದು ನೋಹ ಮತ್ತು ಅವನ ಕುಟುಂಬಕ್ಕೆ ರಕ್ಷಣೆಯನ್ನು ತಂದಿತು
[ಪುಟ 30ರಲ್ಲಿರುವ ಚಿತ್ರ]
ಮೇರಿ ಓಲ್ಸನ್
[ಪುಟ 30ರಲ್ಲಿರುವ ಚಿತ್ರ]
ನ್ಯಾನ್ಸಿ ಪೋರ್ಟರ್