ನಮ್ಮ ಪವಿತ್ರ ಕೂಟಗಳಿಗೆ ಗೌರವ ತೋರಿಸುವುದು
“ಅವರೆಲ್ಲರನ್ನೂ ನಾನು ನನ್ನ ಪವಿತ್ರಪರ್ವತಕ್ಕೆ ಬರಮಾಡಿ ನನ್ನ ಪ್ರಾರ್ಥನಾಲಯದಲ್ಲಿ ಉಲ್ಲಾಸಗೊಳಿಸುವೆನು.”—ಯೆಶಾಯ 56:7.
1. ನಮ್ಮ ಕೂಟಗಳಿಗೆ ಯೋಗ್ಯ ಗೌರವ ತೋರಿಸಲು ಯಾವ ಶಾಸ್ತ್ರಾಧಾರಿತ ಕಾರಣಗಳು ನಮಗಿವೆ?
ಯೆಹೋವನು ತನ್ನ ಜನರನ್ನು, ಅಂದರೆ ಅಭಿಷಿಕ್ತ ಕ್ರೈಸ್ತರನ್ನು ಮತ್ತು ಅವರ ಸಂಗಡಿಗರನ್ನು ತನ್ನ “ಪವಿತ್ರಪರ್ವತ”ದಲ್ಲಿ ತನ್ನನ್ನು ಆರಾಧಿಸಲಿಕ್ಕಾಗಿ ಒಟ್ಟುಗೂಡಿಸಿದ್ದಾನೆ. ಇವರು ಆತನ ‘ಪ್ರಾರ್ಥನಾಲಯದಲ್ಲಿ’ ಅಂದರೆ ಆತನ ಆಧ್ಯಾತ್ಮಿಕ ಆಲಯದೊಳಗೆ ಹರ್ಷಿಸುವಂತೆ ಮಾಡುತ್ತಿದ್ದಾನೆ ಮತ್ತು ಇದು ‘ಎಲ್ಲಾ ಜನಾಂಗಗಳಿಗೂ ಪ್ರಾರ್ಥನಾಲಯ’ ಆಗಿದೆ. (ಯೆಶಾಯ 56:7; ಮಾರ್ಕ 11:17) ಆರಾಧನೆಗಾಗಿ ತನ್ನ ಜನರನ್ನು ಒಟ್ಟುಗೂಡಿಸಲು ಯೆಹೋವನು ಏನನ್ನು ಮಾಡಿದ್ದಾನೊ ಅದು ಈ ಆರಾಧನೆಯು ಪವಿತ್ರ, ಶುದ್ಧ ಮತ್ತು ಉನ್ನತವಾಗಿದೆ ಎಂಬುದನ್ನು ಸೂಚಿಸುತ್ತದೆ. ಅಧ್ಯಯನ ಹಾಗೂ ಆರಾಧನೆಗಾಗಿ ನಾವು ಕೂಡಿಬರುವಂಥ ಕೂಟಗಳಿಗೆ ಯೋಗ್ಯ ಗೌರವ ತೋರಿಸುವ ಮೂಲಕ, ಪವಿತ್ರ ವಿಷಯಗಳ ಬಗ್ಗೆ ಯೆಹೋವನ ನೋಟ ನಮಗೂ ಇದೆಯೆಂದು ನಾವು ರುಜುಪಡಿಸುತ್ತೇವೆ.
2. ಯೆಹೋವನು, ತಾನು ಆರಾಧನೆಗಾಗಿ ಆಯ್ಕೆಮಾಡಿದ್ದ ಸ್ಥಳವನ್ನು ಪವಿತ್ರವಾಗಿ ಎಣಿಸುತ್ತಿದ್ದನೆಂದು ಯಾವುದು ಸೂಚಿಸುತ್ತದೆ, ಮತ್ತು ಯೇಸು ಸಹ ಅದನ್ನು ಪವಿತ್ರವಾಗಿ ಎಣಿಸುತ್ತಿದ್ದನೆಂದು ಹೇಗೆ ತೋರಿಸಿದನು?
2 ಪ್ರಾಚೀನಕಾಲದ ಇಸ್ರಾಯೇಲಿನಲ್ಲಿ, ಯೆಹೋವನು ತನ್ನ ಆರಾಧನೆಗಾಗಿ ಆಯ್ಕೆಮಾಡಿದ ಸ್ಥಳವನ್ನು ಜನರು ಪವಿತ್ರವಾದದ್ದಾಗಿ ಪರಿಗಣಿಸಬೇಕಾಗಿತ್ತು. ದೇವಗುಡಾರ, ಅದರಲ್ಲಿನ ಉಪಕರಣಗಳು ಮತ್ತು ಪಾತ್ರೆಗಳು ‘ಅತಿ ಪರಿಶುದ್ಧವಾಗುವಂತೆ’ ಅವುಗಳನ್ನು ಅಭಿಷೇಕಿಸಿ, ಪ್ರತಿಷ್ಠಿಸಬೇಕಾಗಿತ್ತು. (ವಿಮೋಚನಕಾಂಡ 30:26-29) ದೇವಗುಡಾರದ ಎರಡು ವಿಭಾಗಗಳನ್ನು “ಪವಿತ್ರಸ್ಥಾನ” ಮತ್ತು “ಅತಿಪವಿತ್ರಸ್ಥಾನ” ಎಂದು ಕರೆಯಲಾಗುತ್ತಿತ್ತು. (ಇಬ್ರಿಯ 9:2, 3) ಕಾಲಾನಂತರ ದೇವಗುಡಾರಕ್ಕೆ ಬದಲಾಗಿ ಯೆರೂಸಲೇಮಿನ ದೇವಾಲಯವು ಯೆಹೋವನ ಆರಾಧನೆಯ ಕೇಂದ್ರವಾಯಿತು. ಹೀಗಿರುವುದರಿಂದ ಯೆರೂಸಲೇಮನ್ನು “ಪವಿತ್ರನಗರ” ಎಂದು ಕರೆಯಲಾಯಿತು. (ನೆಹೆಮೀಯ 11:1; ಮತ್ತಾಯ 27:53) ಸ್ವತಃ ಯೇಸುವೇ, ತನ್ನ ಭೂಶುಶ್ರೂಷೆಯ ಸಮಯದಲ್ಲಿ ದೇವಾಲಯಕ್ಕೆ ತಕ್ಕದಾದ ಗೌರವ ತೋರಿಸಿದನು. ಜನರು ಅಗೌರವದಿಂದ ಆಲಯದ ಕ್ಷೇತ್ರವನ್ನು ವ್ಯಾಪಾರದ ಉದ್ದೇಶಗಳಿಗಾಗಿ ಮತ್ತು ಯೆರೂಸಲೇಮಿನ ಒಂದು ಕಡೆಯಿಂದ ಇನ್ನೊಂದು ಕಡೆಗೆ ಸಾಮಾನುಗಳನ್ನು ಒಯ್ಯಲು ಅಡ್ಡದಾರಿಯಾಗಿ ಬಳಸುತ್ತಿದ್ದ ಕಾರಣಕ್ಕಾಗಿ ಅವನು ಕೋಪೋದ್ರಿಕ್ತನಾದನು.—ಮಾರ್ಕ 11:15, 16.
3. ಇಸ್ರಾಯೇಲ್ಯರು ಸಭೆಯಾಗಿ ಕೂಡಿಬರುತ್ತಿದ್ದ ಸಂದರ್ಭಗಳು ಪವಿತ್ರವಾಗಿದ್ದವೆಂಬುದನ್ನು ಯಾವುದು ತೋರಿಸುತ್ತದೆ?
3 ಇಸ್ರಾಯೇಲ್ಯರು, ಯೆಹೋವನನ್ನು ಆರಾಧಿಸಲು ಮತ್ತು ಆತನ ಧರ್ಮಶಾಸ್ತ್ರದ ವಾಚನಕ್ಕೆ ಕಿವಿಗೊಡಲು ಕ್ರಮವಾಗಿ ಒಟ್ಟುಸೇರುತ್ತಿದ್ದರು. ಅವರ ಉತ್ಸವಗಳಲ್ಲಿ ಕೆಲವೊಂದು ದಿನಗಳನ್ನು ‘ಪರಿಶುದ್ಧ ಸಭಾಕೂಟ’ ಇಲ್ಲವೆ ‘ಗಂಭೀರ ಸಭೆ’ ಎಂದು ಕರೆಯಲಾಗುತ್ತಿತ್ತು. ಇದು ಆ ಕೂಟಗಳು ಪವಿತ್ರವಾಗಿದ್ದವೆಂಬುದನ್ನು ಸೂಚಿಸುತ್ತಿತ್ತು. (ಯಾಜಕಕಾಂಡ 23:2, 3, 36, 37, NIBV) ಎಜ್ರ ಮತ್ತು ನೆಹೆಮೀಯರ ದಿನಗಳಲ್ಲಿ ಒಂದು ಸಾರ್ವಜನಿಕ ಸಭೆಕೂಡಿದಾಗ ಲೇವಿಯರು “ಧರ್ಮಶಾಸ್ತ್ರವನ್ನು ಜನರು ಗ್ರಹಿಸುವಂತೆ ಮಾಡಿದರು.” “ಜನರೆಲ್ಲರೂ ಧರ್ಮೋಪದೇಶವಾಕ್ಯಗಳನ್ನು ಕೇಳುತ್ತಾ ಅಳುತ್ತಿದ್ದದರಿಂದ” ಲೇವಿಯರು ಅವರಿಗೆ ‘‘ಈ ದಿನವು . . . ಪರಿಶುದ್ಧದಿನವಾಗಿರುವದರಿಂದ ನೀವು ದುಃಖಿಸುತ್ತಾ ಅಳುತ್ತಾ ಇರಬೇಡಿರಿ” ಎಂದು ಹೇಳಿದರು. ಬಳಿಕ ಇಸ್ರಾಯೇಲ್ಯರು ಏಳು ದಿನಗಳ ಪರ್ಣಶಾಲೆಗಳ ಜಾತ್ರೆಯನ್ನು ‘ಬಹು ಸಂತೋಷದಿಂದ’ ಆಚರಿಸಿದರು. ಅಲ್ಲದೆ, ‘ಮೊದಲನೆಯ ದಿನದಿಂದ ಕಡೆಯ ದಿನದ ವರೆಗೆ ಪ್ರತಿದಿನವೂ ದೇವರ ಧರ್ಮಶಾಸ್ತ್ರದ ಪಾರಾಯಣವಿತ್ತು. ಏಳು ದಿನಗಳ ವರೆಗೂ ಜಾತ್ರೆನಡೆಯಿತು. ನೇಮದ ಪ್ರಕಾರ ಎಂಟನೆಯ ದಿನದಲ್ಲಿ ದೇವಾರಾಧನೆಗಾಗಿ ಸಭೆಕೂಡಿತು.’ (ನೆಹೆಮೀಯ 8:7-11, 17, 18) ಇವು ನಿಜವಾಗಿಯೂ ಪವಿತ್ರವಾದ ಸಂದರ್ಭಗಳಾಗಿದ್ದು, ಅಲ್ಲಿ ಹಾಜರಿದ್ದವರು ಗೌರವಪೂರ್ವಕ ಗಮನಕೊಡಬೇಕಿತ್ತು.
ನಮ್ಮ ಕೂಟಗಳು ಪವಿತ್ರವಾಗಿವೆ
4, 5. ನಮ್ಮ ಕೂಟಗಳ ಯಾವ ವೈಶಿಷ್ಟ್ಯಗಳು ಅವು ಪವಿತ್ರವಾಗಿವೆ ಎಂಬುದನ್ನು ರುಜುಪಡಿಸುತ್ತವೆ?
4 ಇಂದು ಯೆಹೋವನಿಗೆ ಭೂಮಿಯ ಮೇಲೆ ಅಕ್ಷರಶಃವಾಗಿ ಒಂದು ಪವಿತ್ರ ನಗರವಾಗಲಿ, ಅದರಲ್ಲಿ ತನ್ನ ಆರಾಧನೆಗಾಗಿ ಸಮರ್ಪಿತವಾದ ಒಂದು ವಿಶೇಷ ಆಲಯವಾಗಲಿ ಇಲ್ಲವೆಂಬುದು ನಿಜ. ಹಾಗಿದ್ದರೂ, ಯೆಹೋವನ ಆರಾಧನೆಗಾಗಿರುವ ಕೂಟಗಳು ಪವಿತ್ರವಾಗಿವೆ ಎಂಬ ಸಂಗತಿಯನ್ನು ನಾವೆಂದಿಗೂ ಮರೆಯಬಾರದು. ಬೈಬಲನ್ನು ಓದಿ ಅಧ್ಯಯನಮಾಡಲಿಕ್ಕಾಗಿ ನಾವು ವಾರದಲ್ಲಿ ಮೂರು ಬಾರಿ ಕೂಡಿಬರುತ್ತೇವೆ. ನೆಹೆಮೀಯನ ದಿನದಲ್ಲಿ ಮಾಡಲ್ಪಟ್ಟಂತೆಯೇ ಅಲ್ಲಿ ಯೆಹೋವನ ವಾಕ್ಯದ ‘ತಾತ್ಪರ್ಯವನ್ನು ವಿವರಿಸಲಾಗುತ್ತದೆ.’ (ನೆಹೆಮೀಯ 8:8) ಎಲ್ಲ ಕೂಟಗಳು ಪ್ರಾರ್ಥನೆಯೊಂದಿಗೆ ಆರಂಭವಾಗಿ ಪ್ರಾರ್ಥನೆಯೊಂದಿಗೆ ಸಮಾಪ್ತಿಗೊಳ್ಳುತ್ತವೆ ಮತ್ತು ಹೆಚ್ಚಿನ ಕೂಟಗಳಲ್ಲಿ ನಾವು ಯೆಹೋವನಿಗೆ ಸ್ತುತಿಗೀತೆಗಳನ್ನು ಸಹ ಹಾಡುತ್ತೇವೆ. (ಕೀರ್ತನೆ 26:12) ಸಭಾ ಕೂಟಗಳು ನಿಜವಾಗಿಯೂ ನಮ್ಮ ಆರಾಧನೆಯ ಭಾಗವಾಗಿವೆ ಮತ್ತು ಅಲ್ಲಿರುವಾಗ ನಮಗೆ ಭಕ್ತಿಪೂರ್ಣ ಮನೋಭಾವವಿರಬೇಕು ಹಾಗೂ ನಾವು ಗೌರವಪೂರ್ವಕ ಗಮನವನ್ನು ಕೊಡಬೇಕು.
5 ಯೆಹೋವನ ಜನರು ಆತನನ್ನು ಆರಾಧಿಸಲು, ಆತನ ವಾಕ್ಯದ ಅಧ್ಯಯನ ಮಾಡಲು ಮತ್ತು ಹಿತಕರವಾದ ಕ್ರೈಸ್ತ ಒಡನಾಟದಲ್ಲಿ ಆನಂದಿಸಲಿಕ್ಕಾಗಿ ಕೂಡಿಬರುವಾಗ ಆತನು ಅವರನ್ನು ಆಶೀರ್ವದಿಸುತ್ತಾನೆ. ಒಂದು ಕೂಟವು ನಡೆಯುತ್ತಿರುವಾಗ ‘ಅಲ್ಲಿ ಆಶೀರ್ವಾದವು ಇರಬೇಕೆಂದು ಯೆಹೋವನು ಆಜ್ಞಾಪಿಸುತ್ತಾನೆ’ ಎಂಬ ನಿಶ್ಚಯ ನಮಗಿರಬಲ್ಲದು. (ಕೀರ್ತನೆ 133:1, 3) ನಾವು ಅಲ್ಲಿ ಹಾಜರಿದ್ದು, ಆಧ್ಯಾತ್ಮಿಕ ಕಾರ್ಯಕ್ರಮಕ್ಕೆ ಗಮನಕೊಟ್ಟು ಆಲಿಸುವುದಾದರೆ ಆ ಆಶೀರ್ವಾದವನ್ನು ಹೊಂದುವೆವು. ಅಲ್ಲದೆ ಯೇಸು ಹೇಳಿದ್ದು: “ಇಬ್ಬರು ಮೂವರು ನನ್ನ ಹೆಸರಿನಲ್ಲಿ ಎಲ್ಲಿ ಕೂಡಿಬಂದಿರುತ್ತಾರೋ ಅಲ್ಲಿ ಅವರ ನಡುವೆ ನಾನು ಇದ್ದೇನೆ.” ಈ ಹೇಳಿಕೆಯು ಅದರ ಪೂರ್ವಾಪರ ವಚನಗಳಿಗನುಸಾರ, ಕೆಲವು ವ್ಯಕ್ತಿಗಳ ನಡುವೆ ಎದ್ದಿರುವ ಗಂಭೀರ ಸಮಸ್ಯೆಗಳನ್ನು ನಿರ್ವಹಿಸಲಿಕ್ಕಾಗಿ ಕ್ರೈಸ್ತ ಹಿರಿಯರು ಕೂಡಿಬರುವ ಸಂದರ್ಭಕ್ಕೆ ಅನ್ವಯಿಸುತ್ತದೆ. ಆದರೆ ತತ್ತ್ವತಃ ಇದು ನಮ್ಮ ಕೂಟಗಳಿಗೂ ಅನ್ವಯವಾಗುತ್ತದೆ. (ಮತ್ತಾಯ 18:20) ಕ್ರಿಸ್ತನ ಹೆಸರಿನಲ್ಲಿ ಕ್ರೈಸ್ತರು ಕೂಡಿಬರುವಾಗಲೆಲ್ಲ ಅವನು ಪವಿತ್ರಾತ್ಮದ ಮುಖಾಂತರ ಅಲ್ಲಿ ಉಪಸ್ಥಿತನಿರುವುದರಿಂದ ಅಂಥ ಕೂಟಗಳನ್ನು ನಾವು ಎಷ್ಟು ಪವಿತ್ರವೆಂದು ಪರಿಗಣಿಸಬೇಕು!
6. ಚಿಕ್ಕದ್ದಾಗಿರಲಿ ದೊಡ್ಡದ್ದಾಗಿರಲಿ ನಮ್ಮ ಕೂಟದ ಸ್ಥಳಗಳ ಕುರಿತು ಏನು ಹೇಳಸಾಧ್ಯವಿದೆ?
6 ಯೆಹೋವನು ಮಾನವನಿರ್ಮಿತ ಆಲಯಗಳಲ್ಲಿ ವಾಸಿಸುವುದಿಲ್ಲವೆಂಬುದು ನಿಜ. ಹಾಗಿದ್ದರೂ, ನಮ್ಮ ರಾಜ್ಯ ಸಭಾಗೃಹಗಳು ಸತ್ಯಾರಾಧನೆಯ ಸ್ಥಳಗಳಾಗಿವೆ. (ಅ. ಕೃತ್ಯಗಳು 7:48; 17:24) ನಾವು ಅಲ್ಲಿ ಯೆಹೋವನ ವಾಕ್ಯದ ಅಧ್ಯಯನ ಮಾಡಲು, ಆತನಿಗೆ ಪ್ರಾರ್ಥಿಸಲು ಮತ್ತು ಆತನಿಗೆ ಸ್ತುತಿಗೀತೆಗಳನ್ನು ಹಾಡಲು ಕೂಡಿಬರುತ್ತೇವೆ. ಇದು ನಮ್ಮ ಸಮ್ಮೇಳನ-ಸಭಾಗೃಹಗಳ ವಿಷಯದಲ್ಲೂ ಸತ್ಯವಾಗಿದೆ. ನಮ್ಮ ಅಧಿವೇಶನಗಳಿಗಾಗಿ ನಾವು ಬಾಡಿಗೆಗೆ ತೆಗೆದುಕೊಳ್ಳುವ ಸಭಾಂಗಣಗಳು, ವಸ್ತುಪ್ರದರ್ಶನ ಹಾಲ್ಗಳು ಇಲ್ಲವೆ ಕ್ರೀಡಾಂಗಣಗಳಂಥ ದೊಡ್ಡ ಸೌಕರ್ಯಗಳು ಸಹ, ನಮ್ಮ ಪವಿತ್ರ ಕೂಟಗಳಿಗಾಗಿ ಉಪಯೋಗಿಸಲ್ಪಡುವ ಸಮಯದಲ್ಲಿ ಆರಾಧನಾ ಸ್ಥಳಗಳಾಗುತ್ತವೆ. ನಾವು ಆರಾಧನೆಗಾಗಿ ಕೂಡಿಬರುವ ಅಂಥ ಸಂದರ್ಭಗಳು ಚಿಕ್ಕದ್ದಾಗಿರಲಿ ದೊಡ್ಡದ್ದಾಗಿರಲಿ ಅವು ನಮ್ಮ ಗೌರವಕ್ಕೆ ಅರ್ಹವಾಗಿವೆ. ಅವುಗಳಿಗಾಗಿ ನಮಗಿರುವ ಗೌರವವನ್ನು ನಾವು ನಮ್ಮ ಮನೋಭಾವ ಹಾಗೂ ನಡೆವಳಿಕೆಯಲ್ಲಿ ಪ್ರತಿಬಿಂಬಿಸಬೇಕು.
ನಮ್ಮ ಕೂಟಗಳಿಗಾಗಿ ಗೌರವ ತೋರಿಸುವ ವಿಧಗಳು
7. ನಮ್ಮ ಕೂಟಗಳಿಗಾಗಿ ನಾವು ಗೌರವವನ್ನು ತೋರಿಸಬಲ್ಲ ಸ್ಪಷ್ಟವಾದ ವಿಧವು ಯಾವುದು?
7 ನಮ್ಮ ಕೂಟಗಳಿಗಾಗಿ, ಸ್ಪಷ್ಟವಾಗಿ ತೋರಿಬರುವ ವಿಧಗಳಲ್ಲಿ ನಾವು ಗೌರವತೋರಿಸಬಹುದು. ಇವುಗಳಲ್ಲಿ ಒಂದು ವಿಧ, ರಾಜ್ಯ ಗೀತೆಗಳು ಹಾಡಲ್ಪಡುವಾಗ ಉಪಸ್ಥಿತರಿರುವುದೇ ಆಗಿದೆ. ಈ ಗೀತೆಗಳಲ್ಲಿ ಹೆಚ್ಚಿನವುಗಳು ಪ್ರಾರ್ಥನಾ ರೂಪದಲ್ಲಿವೆ, ಆದುದರಿಂದಲೇ ಅವುಗಳನ್ನು ಪೂಜ್ಯಭಾವದಿಂದ ಹಾಡಬೇಕು. ಕೀರ್ತನೆ 22ನ್ನು ಉಲ್ಲೇಖಿಸುತ್ತಾ, ಅಪೊಸ್ತಲ ಪೌಲನು ಯೇಸುವಿನ ಕುರಿತು ಬರೆದುದು: “ನಿನ್ನ ನಾಮಮಹಿಮೆಯನ್ನು ನನ್ನ ಸಹೋದರರಿಗೆ ತಿಳಿಸುವೆನು; ಸಭಾಮಧ್ಯದಲ್ಲಿ ನಿನಗೆ ಸ್ತುತಿಪದಗಳನ್ನು ಹಾಡುವೆನು.” (ಇಬ್ರಿಯ 2:12) ಆದುದರಿಂದ ಅಧ್ಯಕ್ಷನು ಗೀತೆಯನ್ನು ಪರಿಚಯಿಸುವ ಮುಂಚೆಯೇ ನಾವು ನಮ್ಮ ಆಸನಗಳಲ್ಲಿ ಕುಳಿತುಕೊಂಡಿರಲು ಮತ್ತು ತದನಂತರ ಗೀತೆಯನ್ನು ಹಾಡುತ್ತಿರುವಾಗ ಅದರ ಪದಗಳ ಅರ್ಥದ ಮೇಲೆ ಗಮನವನ್ನು ಕೇಂದ್ರೀಕರಿಸುವ ರೂಢಿಯನ್ನು ಬೆಳೆಸಬೇಕು. ನಮ್ಮ ಹಾಡುವಿಕೆಯು ಕೀರ್ತನೆಗಾರನ ಈ ಭಾವನೆಗಳನ್ನು ಪ್ರತಿಬಿಂಬಿಸಲಿ: “ಯಾಹುವಿಗೆ ಸ್ತೋತ್ರ! ನಾನು ಯೆಹೋವನನ್ನು ಕೊಂಡಾಡುವೆನು; ಯಥಾರ್ಥರ ಕೂಟದಲ್ಲಿಯೂ ನೆರೆದ ಸಭೆಯಲ್ಲಿಯೂ ಮನಃಪೂರ್ವಕವಾಗಿ ಕೀರ್ತಿಸುವೆನು.” (ಕೀರ್ತನೆ 111:1) ಹೌದು, ಯೆಹೋವನಿಗೆ ಸ್ತುತಿಯನ್ನು ಹಾಡುವ ಕಾರಣಕ್ಕಾಗಿಯೇ ಕೂಟಗಳಿಗೆ ಬೇಗನೆ ಬರುವುದು ಮತ್ತು ಆಮೇಲೆ ಕೊನೆ ವರೆಗೂ ಉಳಿಯುವುದು ಒಂದು ಉತ್ತಮ ಸಂಗತಿಯಾಗಿದೆ.
8. ನಮ್ಮ ಕೂಟಗಳಲ್ಲಿನ ಪ್ರಾರ್ಥನೆಗಳಿಗೆ ಗೌರವಪೂರ್ವಕ ಗಮನಕೊಡುವುದು ಸೂಕ್ತವೆಂದು ಬೈಬಲಿನ ಯಾವ ಉದಾಹರಣೆಯು ತೋರಿಸುತ್ತದೆ?
8 ನಮ್ಮ ಎಲ್ಲ ಕೂಟಗಳನ್ನು ಆಧ್ಯಾತ್ಮಿಕವಾಗಿ ಸಂಪನ್ನಗೊಳಿಸುವ ಇನ್ನೊಂದು ವೈಶಿಷ್ಟ್ಯವು, ಅಲ್ಲಿ ಕೂಡಿಬಂದಿರುವವರೆಲ್ಲರ ಪರವಾಗಿ ಮಾಡಲಾಗುವ ಹೃತ್ಪೂಪೂರ್ವಕ ಪ್ರಾರ್ಥನೆ ಆಗಿದೆ. ಒಂದು ಸಂದರ್ಭದಲ್ಲಿ ಪ್ರಥಮ ಶತಮಾನದ ಕ್ರೈಸ್ತರು ಯೆರೂಸಲೇಮಿನಲ್ಲಿ ಕೂಡಿಬಂದಾಗ “ಏಕಮನಸ್ಸಾಗಿ ದೇವರನ್ನು ಗಟ್ಟಿಯಾದ ಧ್ವನಿಯಿಂದ” ಶ್ರದ್ಧಾಪೂರ್ವಕವಾಗಿ ಪ್ರಾರ್ಥಿಸಿದರು. ಇದರಿಂದಾಗಿ, ಹಿಂಸೆಯ ಮಧ್ಯೆಯೂ ಅವರು ‘ದೇವರ ವಾಕ್ಯವನ್ನು ಧೈರ್ಯದಿಂದ ಹೇಳುತ್ತಾ’ ಇರಲು ಶಕ್ತರಾದರು. (ಅ. ಕೃತ್ಯಗಳು 4:24-31) ಅಲ್ಲಿ ಹಾಜರಿದ್ದವರಲ್ಲಿ ಯಾರಾದರೂ ಆ ಪ್ರಾರ್ಥನೆಯ ಸಮಯದಲ್ಲಿ ತಮ್ಮ ಮನಸ್ಸು ಅಲೆದಾಡುವಂತೆ ಬಿಟ್ಟಿದ್ದನ್ನು ನಾವು ನೆನಸಲೂ ಸಾಧ್ಯವಿಲ್ಲ ಅಲ್ಲವೆ? ಅವರು ‘ಏಕಮನಸ್ಸಿನಿಂದ’ ಪ್ರಾರ್ಥಿಸಿದರೆಂಬುದು ನಿಸ್ಸಂದೇಹ. ನಮ್ಮ ಕೂಟಗಳಲ್ಲಿನ ಪ್ರಾರ್ಥನೆಗಳು ಹಾಜರಿರುವವರೆಲ್ಲರ ಭಾವನೆಗಳನ್ನು ಪ್ರತಿಬಿಂಬಿಸುತ್ತವೆ. ಆದುದರಿಂದ ಅವುಗಳಿಗೆ ನಾವು ಗೌರವಪೂರ್ವಕ ಗಮನಕೊಡುವುದು ಸೂಕ್ತ.
9. ನಮ್ಮ ಉಡುಗೆತೊಡುಗೆ ಹಾಗೂ ನಡವಳಿಕೆಯಿಂದ ಪವಿತ್ರ ಕೂಟಗಳಿಗೆ ನಾವು ಹೇಗೆ ಗೌರವ ತೋರಿಸಬಹುದು?
9 ಅಷ್ಟುಮಾತ್ರವಲ್ಲದೆ, ನಮ್ಮ ಕೂಟಗಳ ಪಾವಿತ್ರ್ಯತೆಯನ್ನು ನಾವೆಷ್ಟು ಗಾಢವಾಗಿ ಗೌರವಿಸುತ್ತೇವೆ ಎಂಬುದನ್ನು ನಮ್ಮ ಉಡುಗೆತೊಡುಗೆಯಿಂದಲೂ ತೋರಿಸಬಹುದು. ನಮ್ಮ ಉಡುಪು ಹಾಗೂ ಕೇಶಶೈಲಿಯ ಸಂಬಂಧದಲ್ಲಿ ನಮ್ಮ ಹೊರತೋರಿಕೆ ಸಹ ನಮ್ಮ ಕೂಟಗಳ ಘನತೆಯನ್ನು ಹೆಚ್ಚಿಸಬಲ್ಲದು. ಅಪೊಸ್ತಲ ಪೌಲನು ಸಲಹೆನೀಡಿದ್ದು: “ಪುರುಷರು ಎಲ್ಲಾ ಸ್ಥಳಗಳಲ್ಲಿ ಕೋಪವೂ ವಾಗ್ವಾದವೂ ಇಲ್ಲದವರಾಗಿ ಭಕ್ತಿಪೂರ್ವಕವಾಗಿಯೇ ಕೈಗಳನ್ನೆತ್ತಿ ಪ್ರಾರ್ಥಿಸಬೇಕೆಂದು ಅಪೇಕ್ಷಿಸುತ್ತೇನೆ. ಹಾಗೆಯೇ ಸ್ತ್ರೀಯರು ಮಾನಸ್ಥೆಯರಾಗಿಯೂ ಡಂಭವಿಲ್ಲದವರಾಗಿಯೂ ಇದ್ದು ಮರ್ಯಾದೆಗೆ ತಕ್ಕ ಉಡುಪನ್ನುಟ್ಟುಕೊಳ್ಳಬೇಕೆಂದು ಅಪೇಕ್ಷಿಸುತ್ತೇನೆ. ಅವರು ಜಡೆ ಚಿನ್ನ ಮುತ್ತು ಬೆಲೆಯುಳ್ಳ ವಸ್ತ್ರ ಮುಂತಾದವುಗಳಿಂದ ತಮ್ಮನ್ನು ಅಲಂಕರಿಸಿಕೊಳ್ಳದೆ ದೇವಭಕ್ತೆಯರೆನಿಸಿಕೊಳ್ಳುವ ಸ್ತ್ರೀಯರಿಗೆ ಯುಕ್ತವಾಗಿರುವ ಪ್ರಕಾರ ಸತ್ಕ್ರಿಯೆಗಳಿಂದಲೇ ಅಲಂಕರಿಸಿಕೊಳ್ಳಬೇಕು.” (1 ತಿಮೊಥೆಯ 2:8-10) ತೆರೆದ ಕ್ರೀಡಾಂಗಣಗಳಲ್ಲಿ ಜರಗುವ ದೊಡ್ಡ ಅಧಿವೇಶನಗಳಿಗೆ ಹಾಜರಾಗುತ್ತಿರುವಾಗ ನಮ್ಮ ಉಡುಗೆಯು ಹವಾಮಾನಕ್ಕನುಗುಣವಾಗಿ ಇರಬಹುದಾದರೂ, ಅದೇ ಸಮಯದಲ್ಲಿ ಮರ್ಯಾದೆಗೆ ತಕ್ಕಂಥದ್ದೂ ಆಗಿರಬೇಕು. ಅಲ್ಲದೆ, ಆ ಸಂದರ್ಭಕ್ಕಾಗಿ ನಮಗೆ ಗೌರವವಿರುವುದಾದರೆ, ಕಾರ್ಯಕ್ರಮವು ನಡೆಯುತ್ತಿರುವಾಗ ನಾವು ಏನಾದರೂ ತಿನ್ನುತ್ತಾ ಇರುವುದಿಲ್ಲ ಇಲ್ಲವೆ ಚೂಯಿಂಗ್ ಗಮ್ ಅಗಿಯುತ್ತಾ ಇರುವುದಿಲ್ಲ. ಕೂಟಗಳಿಗೆ ಹಾಜರಾಗುವಾಗ ನಾವು ಧರಿಸುವ ಯೋಗ್ಯ ಉಡುಗೆತೊಡುಗೆ ಹಾಗೂ ಅಲ್ಲಿರುವಾಗ ನಮ್ಮ ಯೋಗ್ಯ ನಡವಳಿಕೆಯು ಯೆಹೋವ ದೇವರನ್ನು, ನಮ್ಮ ಆರಾಧನೆಯನ್ನು ಮತ್ತು ನಮ್ಮ ಜೊತೆ ಆರಾಧಕರನ್ನು ಘನಪಡಿಸುತ್ತದೆ.
ದೇವರ ಮನೆತನಕ್ಕೆ ಒಪ್ಪುವಂಥ ನಡತೆ
10. ನಮ್ಮ ಕ್ರೈಸ್ತ ಕೂಟಗಳಲ್ಲಿ ಉನ್ನತ ಮಟ್ಟದ ನಡತೆಯು ಆವಶ್ಯಕವೆಂದು ಅಪೊಸ್ತಲ ಪೌಲನು ಹೇಗೆ ತೋರಿಸಿದನು?
10 ಅಪೊಸ್ತಲ ಪೌಲನು 1 ಕೊರಿಂಥ 14ನೇ ಅಧ್ಯಾಯದಲ್ಲಿ, ಕ್ರೈಸ್ತ ಕೂಟಗಳು ಹೇಗೆ ನಡೆಸಲ್ಪಡಬೇಕೆಂಬುದರ ಬಗ್ಗೆ ಕೊಟ್ಟಿರುವ ವಿವೇಕಯುತ ಸಲಹೆಯನ್ನು ನಾವು ಕಂಡುಕೊಳ್ಳಬಹುದು. ಕೊನೆಯಲ್ಲಿ ಅವನು ಹೇಳಿದ್ದು: “ಎಲ್ಲವೂ ಮರ್ಯಾದೆಯಿಂದಲೂ ಕ್ರಮದಿಂದಲೂ ನಡೆಯಲಿ.” (1 ಕೊರಿಂಥ 14:40) ನಮ್ಮ ಕೂಟಗಳು ಕ್ರೈಸ್ತ ಸಭೆಯಲ್ಲಿನ ಚಟುವಟಿಕೆಯ ಪ್ರಮುಖ ಭಾಗವಾಗಿರುವುದರಿಂದ ಅಲ್ಲಿ ಯೆಹೋವನ ಮನೆತನಕ್ಕೆ ಒಪ್ಪುವಂಥ ನಡತೆಯ ಮಟ್ಟವಿರುವುದು ಆವಶ್ಯಕ.
11, 12. (ಎ) ನಮ್ಮ ಕೂಟಗಳಿಗೆ ಹಾಜರಾಗುವ ಮಕ್ಕಳ ಮನಸ್ಸುಗಳಲ್ಲಿ ಏನನ್ನು ಅಚ್ಚೊತ್ತಿಸಬೇಕು? (ಬಿ) ಮಕ್ಕಳು ನಮ್ಮ ಕೂಟಗಳಲ್ಲಿ ಯಾವ ಸೂಕ್ತ ವಿಧದಲ್ಲಿ ತಮ್ಮ ನಂಬಿಕೆಯನ್ನು ವ್ಯಕ್ತಪಡಿಸಬಹುದು?
11 ವಿಶೇಷವಾಗಿ ಮಕ್ಕಳಿಗೆ, ಕೂಟಗಳಲ್ಲಿ ಹೇಗೆ ನಡೆದುಕೊಳ್ಳಬೇಕೆಂಬುದನ್ನು ಕಲಿಸಿಕೊಡುವ ಅಗತ್ಯವಿದೆ. ರಾಜ್ಯ ಸಭಾಗೃಹವಾಗಲಿ, ಸಭಾ ಪುಸ್ತಕ ಅಧ್ಯಯನ ನಡೆಯುವ ಸ್ಥಳವಾಗಲಿ ಆಟವಾಡುವ ಸ್ಥಳಗಳಲ್ಲ ಎಂಬುದನ್ನು ಕ್ರೈಸ್ತ ಹೆತ್ತವರು ತಮ್ಮ ಮಕ್ಕಳಿಗೆ ವಿವರಿಸಿಹೇಳಬೇಕು. ಅವು, ನಾವು ಯೆಹೋವನನ್ನು ಆರಾಧಿಸಲು ಮತ್ತು ಆತನ ವಾಕ್ಯವನ್ನು ಅಧ್ಯಯನಮಾಡಲಿಕ್ಕಾಗಿ ಕೂಡಿಬರುವ ಸ್ಥಳಗಳಾಗಿವೆ. ವಿವೇಕಿ ಅರಸನಾದ ಸೊಲೊಮೋನನು ಬರೆದುದು: “[“ದೇವರ ಆಲಯಕ್ಕೆ,” NIBV] ಹೋಗುವಾಗ ನಿನ್ನ ಹೆಜ್ಜೆಯನ್ನು ಗಮನಿಸು . . . ಸಾನ್ನಿಧ್ಯಕ್ಕೆ ಬಂದು ಕಿವಿಗೊಡುವದು ಲೇಸು.” (ಪ್ರಸಂಗಿ 5:1) ವಯಸ್ಕರು ಹಾಗೂ ‘ಮಕ್ಕಳ’ ಸಮೇತ ಇಸ್ರಾಯೇಲ್ಯರೆಲ್ಲರೂ ಕೂಡಿಬರುವಂತೆ ಮೋಶೆ ಕಲಿಸಿದನು. ಅವನಂದದ್ದು: “ಜನರನ್ನು . . . ಅವರು ಕೇಳಿ ಕಲಿತು ನಿಮ್ಮ ದೇವರಾದ ಯೆಹೋವನಿಗೆ ಭಯಪಟ್ಟು ಈ ನ್ಯಾಯಪ್ರಮಾಣದ ವಾಕ್ಯಗಳನ್ನೆಲ್ಲಾ ಕೈಕೊಂಡು ನಡೆಯುವ ಹಾಗೆ ಅವರೆಲ್ಲರನ್ನು ಒಂದು ಕಡೆ ಕೂಡಿಸು. ದೇವರ ಮಹಿಮೆಯನ್ನು ತಿಳಿಯದಿರುವ ಅವರ ಮಕ್ಕಳು ಸಹ ಕೇಳಿ . . . ಯೆಹೋವನಿಗೆ ಭಯಪಡುವುದಕ್ಕೆ ಕಲಿತುಕೊಳ್ಳಲಿ.”—ಧರ್ಮೋಪದೇಶಕಾಂಡ 31:12, 13, NIBV.
12 ಅದೇ ರೀತಿಯಲ್ಲಿ ಇಂದು, ನಮ್ಮ ಎಳೆಯರು ತಮ್ಮ ಹೆತ್ತವರೊಂದಿಗೆ ಕೂಟಗಳಿಗೆ ಹಾಜರಾಗುವುದು ಪ್ರಧಾನವಾಗಿ ಕೇಳಲಿಕ್ಕಾಗಿ ಮತ್ತು ಕಲಿಯಲಿಕ್ಕಾಗಿಯೇ. ಅವರು ಗಮನಕೊಡಲು ಮತ್ತು ಕಡಿಮೆಪಕ್ಷ ಬೈಬಲಿನ ಮೂಲಭೂತ ಸತ್ಯಗಳನ್ನು ಅರ್ಥಮಾಡಲು ಶಕ್ತರಾಗುವಾಗ, ಚಿಕ್ಕಪುಟ್ಟ ಉತ್ತರಗಳನ್ನು ಕೊಟ್ಟು ಪಾಲ್ಗೊಳ್ಳುವ ಮೂಲಕ ಅವರು ಸಹ ತಮ್ಮ ನಂಬಿಕೆಯ ‘ಅರಿಕೆಮಾಡಬಹುದು.’ (ರೋಮಾಪುರ 10:10) ಒಬ್ಬ ಚಿಕ್ಕ ಮಗು, ಅವನಿಗೆ ಅರ್ಥವಾಗುವ ಪ್ರಶ್ನೆಗೆ ಕೆಲವೇ ಮಾತುಗಳಲ್ಲಿ ಉತ್ತರಹೇಳುವ ಮೂಲಕ ಆರಂಭಿಸಬಹುದು. ಹೀಗೆ ಮಾಡಲು ಅವನು ಆರಂಭದಲ್ಲಿ ಉತ್ತರವನ್ನು ಓದಿಹೇಳಬೇಕಾದೀತು. ಆದರೆ ಕಾಲಾನಂತರ ಅವನು ತನ್ನ ಸ್ವಂತ ಮಾತುಗಳಲ್ಲಿ ಉತ್ತರಹೇಳಲು ಪ್ರಯತ್ನಿಸುವನು. ಈ ರೀತಿಯಲ್ಲಿ ಉತ್ತರಕೊಡುವುದು ಮಗುವಿಗೆ ಪ್ರಯೋಜನಕರವಾಗಿದೆ ಮತ್ತು ಅದು ಅವನಿಗೆ ಸಂತೋಷವನ್ನು ತರುವುದು. ಅಲ್ಲದೆ, ಅವನು ತಾನಾಗಿಯೇ ಕೊಡುವ ನಂಬಿಕೆಯ ಅಭಿವ್ಯಕ್ತಿಗಳು, ಹಾಜರಿರುವ ವಯಸ್ಕರಿಗೂ ಹರ್ಷವನ್ನು ತರುತ್ತವೆ. ಆದರೆ ಮೊದಲಾಗಿ ಸ್ವತಃ ಹೆತ್ತವರೇ ಉತ್ತರಕೊಡುವುದರಲ್ಲಿ ಮಾದರಿಯನ್ನಿಡಬೇಕು. ಅಲ್ಲದೆ, ಮಕ್ಕಳಿಗೆ ತಮ್ಮದೇ ಆದ ಬೈಬಲ್, ಗೀತೆಪುಸ್ತಕ ಹಾಗೂ ಅಭ್ಯಾಸಮಾಡಲಾಗುತ್ತಿರುವ ಪ್ರಕಾಶನವಿರುವುದು ಸಹ ಒಳ್ಳೇದು. ಅವರು ಅಂಥ ಪ್ರಕಾಶನಗಳಿಗಾಗಿ ಯೋಗ್ಯ ಗೌರವ ತೋರಿಸಲು ಕಲಿಯಬೇಕು. ಇದೆಲ್ಲವೂ, ನಮ್ಮ ಕೂಟಗಳು ಪವಿತ್ರವಾಗಿವೆ ಎಂಬ ಸಂಗತಿಯನ್ನು ಮಕ್ಕಳ ಮನಸ್ಸಿನಲ್ಲಿ ಅಚ್ಚೊತ್ತಿಸುವುದು.
13. ಪ್ರಥಮ ಬಾರಿ ನಮ್ಮ ಕೂಟಗಳಿಗೆ ಹಾಜರಾಗುವವರ ಪ್ರತಿಕ್ರಿಯೆ ಏನಾಗಿರಬೇಕೆಂದು ನಾವು ಬಯಸುತ್ತೇವೆ?
13 ನಮ್ಮ ಕೂಟಗಳು ಕ್ರೈಸ್ತಪ್ರಪಂಚದ ಚರ್ಚುಗಳಲ್ಲಿನ ಆರಾಧನಾ ವಿಧಿಗಳನ್ನು ಹೋಲಬಾರದು ನಿಶ್ಚಯ. ಆ ಆರಾಧನಾ ವಿಧಿಗಳು, ಒಂದೊ ತುಂಬ ಭಾವಶೂನ್ಯ ಮತ್ತು ಧಾರ್ಮಿಕತೆಯ ಸೋಗಿನದ್ದಾಗಿರಬಹುದು ಇಲ್ಲವೆ ರಾಕ್ ಸಂಗೀತ ಕಛೇರಿಗಳಂತೆ ಗದ್ದಲಮಯವಾಗಿರಬಹುದು. ಆದಕ್ಕೆ ಬದಲಾಗಿ ರಾಜ್ಯ ಸಭಾಗೃಹಗಳಲ್ಲಿನ ನಮ್ಮ ಕೂಟಗಳು ಸ್ನೇಹಭಾವ ಹಾಗೂ ಆದರದಿಂದ ಕೂಡಿದವುಗಳು ಆಗಿರಬೇಕು. ಆದರೆ ಅದೇ ಸಮಯದಲ್ಲಿ ಅಲ್ಲಿ ಒಂದು ಸಾಮಾಜಿಕ ಕ್ಲಬ್ನಲ್ಲಿರುವಂಥ ವಾತಾವರಣವೂ ಇರಬಾರದು. ನಾವು ಯೆಹೋವನನ್ನು ಆರಾಧಿಸಲಿಕ್ಕಾಗಿ ಕೂಡಿಬರುವುದರಿಂದ ನಮ್ಮ ಕೂಟಗಳು ಯಾವಾಗಲೂ ಘನಭರಿತವಾಗಿರಬೇಕು. ಪ್ರಥಮ ಬಾರಿ ನಮ್ಮ ಕೂಟಗಳಿಗೆ ಹಾಜರಾಗುವವರು, ಪ್ರಸ್ತುತಪಡಿಸಲಾಗುವ ಮಾಹಿತಿಗೆ ಕಿವಿಗೊಟ್ಟು, ನಮ್ಮ ಹಾಗೂ ನಮ್ಮ ಮಕ್ಕಳ ನಡವಳಿಕೆಯನ್ನು ಗಮನಿಸಿದ ಬಳಿಕ ‘ದೇವರು ನಿಜವಾಗಿ ನಿಮ್ಮಲ್ಲಿದ್ದಾನೆ’ ಎಂದು ಹೇಳುವಂತೆ ಪ್ರೇರಿಸಲ್ಪಡಬೇಕೆಂಬುದು ನಮ್ಮ ಬಯಕೆ.—1 ಕೊರಿಂಥ 14:25.
ನಮ್ಮ ಆರಾಧನೆಯ ಕಾಯಂ ವೈಶಿಷ್ಟ್ಯ
14, 15. (ಎ) ನಾವು ಹೇಗೆ ‘ದೇವರ ಆಲಯವನ್ನು ಅಲಕ್ಷ್ಯಮಾಡ’ದಿರಬಹುದು? (ಬಿ) ಯೆಶಾಯ 66:23 ಈಗಾಗಲೇ ಹೇಗೆ ನೆರವೇರುತ್ತಿದೆ?
14 ಈ ಹಿಂದೆ ತಿಳಿಸಲ್ಪಟ್ಟಿರುವಂತೆ, ಯೆಹೋವನು ತನ್ನ ಜನರನ್ನು ಒಟ್ಟುಗೂಡಿಸುತ್ತಿದ್ದಾನೆ ಮತ್ತು ಆತನ ಆಧ್ಯಾತ್ಮಿಕ ಆಲಯವಾದ ತನ್ನ “ಪ್ರಾರ್ಥನಾಲಯದಲ್ಲಿ” ಹರ್ಷಿಸುವಂತೆ ಮಾಡುತ್ತಿದ್ದಾನೆ. (ಯೆಶಾಯ 56:7) ನಂಬಿಗಸ್ತ ಪುರುಷನಾದ ನೆಹೆಮೀಯನು ತನ್ನ ಜೊತೆ ಯೆಹೂದ್ಯರು ಅಕ್ಷರಶಃವಾದ ಆಲಯಕ್ಕೆ ಯೋಗ್ಯ ಗೌರವವನ್ನು, ಭೌತಿಕ ಬೆಂಬಲ ಕೂಡುವ ಮೂಲಕ ತೋರಿಸಬೇಕೆಂದು ನೆನಪುಹುಟ್ಟಿಸಿದನು. ಅವನು ಹೇಳಿದ್ದು: “ನಾವು ನಮ್ಮ ದೇವರ ಆಲಯವನ್ನು ಎಂದೂ ಅಲಕ್ಷ್ಯಮಾಡಬಾರದು.” (ನೆಹೆಮೀಯ 10:39, NW) ಇದಲ್ಲದೆ, ತನ್ನ ‘ಪ್ರಾರ್ಥನಾಲಯದಲ್ಲಿ’ ಆರಾಧಿಸುವಂತೆ ಯೆಹೋವನು ಕೊಡುವ ಆಮಂತ್ರಣವನ್ನು ನಾವು ಅಲಕ್ಷಿಸಬಾರದು.
15 ಆರಾಧನೆಗಾಗಿ ಕ್ರಮವಾಗಿ ಕೂಡಿಬರುವುದರ ಅಗತ್ಯವನ್ನು ತೋರಿಸುತ್ತಾ, ಯೆಶಾಯನು ಪ್ರವಾದಿಸಿದ್ದು: “ಪ್ರತಿಯೊಂದು ಅಮಾವಾಸ್ಯೆಯಲ್ಲಿಯೂ ಒಂದೊಂದು ಸಬ್ಬತ್ ದಿನದಲ್ಲಿಯೂ ಸಕಲ ನರಜನ್ಮದವರೂ ನನ್ನ ಸನ್ನಿಧಿಯಲ್ಲಿ ಎರಗುವದಕ್ಕೆ ಬರುವರು; ಇದು ಯೆಹೋವನ ನುಡಿ.” (ಯೆಶಾಯ 66:23) ಇದು ಇಂದು ಸಂಭವಿಸುತ್ತಾ ಇದೆ. ಸಮರ್ಪಿತ ಕ್ರೈಸ್ತರು ಯೆಹೋವನ ಆರಾಧನೆಗಾಗಿ ಪ್ರತಿ ತಿಂಗಳ ಪ್ರತಿ ವಾರ ಕ್ರಮವಾಗಿ ಕೂಡಿಬರುತ್ತಾರೆ. ಅವರು ಇದನ್ನು ಮಾಡುವ ಒಂದು ವಿಧ, ಕ್ರೈಸ್ತ ಕೂಟಗಳಿಗೆ ಹಾಜರಾಗುವ ಮೂಲಕ ಮತ್ತು ಬಹಿರಂಗ ಶುಶ್ರೂಷೆಯಲ್ಲಿ ಪಾಲ್ಗೊಳ್ಳುವ ಮೂಲಕವೇ. ಕ್ರಮವಾಗಿ ‘ಯೆಹೋವನ ಸನ್ನಿಧಿಯಲ್ಲಿ ಎರಗುವದಕ್ಕೆ ಬರುವವರಲ್ಲಿ’ ನೀವೂ ಒಬ್ಬರಾಗಿದ್ದೀರೊ?
16. ಕೂಟಗಳಿಗೆ ಕ್ರಮವಾಗಿ ಹಾಜರಾಗುವುದು ಈಗ ನಮ್ಮ ಜೀವನದ ಕಾಯಂ ವೈಶಿಷ್ಟ್ಯವಾಗಿರಬೇಕು ಏಕೆ?
16 ಯೆಶಾಯ 66:23, ಯೆಹೋವನ ವಾಗ್ದತ್ತ ಹೊಸ ಲೋಕದಲ್ಲಿನ ಜೀವನಕ್ಕೆ ಪೂರ್ಣವಾಗಿ ಅನ್ವಯವಾಗುವುದು. ಆ ಸಮಯದಲ್ಲಿ ‘ಸಕಲ ನರಜನ್ಮದವರು’ ಅಕ್ಷರಾರ್ಥದಲ್ಲಿ, ನಿತ್ಯತೆಗೂ ಪ್ರತಿ ವಾರ ಹಾಗೂ ಪ್ರತಿ ತಿಂಗಳು ಯೆಹೋವನ ‘ಸನ್ನಿಧಿಯಲ್ಲಿ ಎರಗುವದಕ್ಕೆ’ ಇಲ್ಲವೆ ಆರಾಧಿಸುವುದಕ್ಕೆ ಬರುತ್ತಿರುವರು. ಯೆಹೋವನನ್ನು ಆರಾಧಿಸಲಿಕ್ಕಾಗಿ ಕೂಡಿಬರುವುದು, ಹೊಸ ವಿಷಯಗಳ ವ್ಯವಸ್ಥೆಯಲ್ಲಿ ನಮ್ಮ ಆಧ್ಯಾತ್ಮಿಕ ಜೀವನದ ಒಂದು ಕಾಯಂ ವೈಶಿಷ್ಟ್ಯ ಆಗಿರಲಿರುವುದರಿಂದ, ನಮ್ಮ ಪವಿತ್ರ ಕೂಟಗಳಲ್ಲಿ ಕ್ರಮವಾಗಿ ಹಾಜರಿರುವುದನ್ನು ನಾವು ಈಗಲೇ ನಮ್ಮ ಜೀವನದ ಕಾಯಂ ವೈಶಿಷ್ಟ್ಯವನ್ನಾಗಿ ಮಾಡಬೇಕಲ್ಲವೇ?
17. ‘ಕರ್ತನ ಪ್ರತ್ಯಕ್ಷತೆಯ ದಿನವು ಸಮೀಪಿಸುತ್ತಾ ಬರುವುದನ್ನು ನಾವು ನೋಡುವುದರಿಂದ’ ನಮ್ಮ ಕೂಟಗಳು ನಮಗೆ ‘ಮತ್ತಷ್ಟು’ ಅಗತ್ಯವಿರುವುದು ಏಕೆ?
17 ಅಂತ್ಯವು ಸನ್ನಿಹಿತವಾಗುತ್ತಿದ್ದಂತೆ, ಆರಾಧನೆಗಾಗಿರುವ ನಮ್ಮ ಕ್ರೈಸ್ತ ಕೂಟಗಳಿಗೆ ಹಾಜರಾಗಲು ನಾವು ಹಿಂದೆಂದಿಗಿಂತಲೂ ಹೆಚ್ಚು ದೃಢಚಿತ್ತರಾಗಿರಬೇಕು. ನಮ್ಮ ಕೂಟಗಳ ಪಾವಿತ್ರ್ಯತೆಯನ್ನು ನಾವು ಗೌರವಿಸುತ್ತಿರುವುದರಿಂದ, ಐಹಿಕ ಕೆಲಸವಾಗಲಿ, ಶಾಲೆಯ ಹೋಂವರ್ಕ್ ಆಗಲಿ, ಸಾಯಂಕಾಲದ ಕ್ಲಾಸ್ಗಳಾಗಲಿ ನಾವು ನಮ್ಮ ಜೊತೆ ವಿಶ್ವಾಸಿಗಳೊಂದಿಗೆ ಕ್ರಮವಾಗಿ ಕೂಡಿಬರುವುದರಿಂದ ತಪ್ಪಿಸುವಂತೆ ನಾವು ಬಿಡುವುದಿಲ್ಲ. ಆ ಕೂಟಗಳಲ್ಲಿನ ಸಹವಾಸದಿಂದ ಸಿಗುವ ಬಲ ನಮಗೆ ಅತ್ಯಗತ್ಯ. ನಮ್ಮ ಸಭಾ ಕೂಟಗಳು ನಾವು ಪರಸ್ಪರರ ಪರಿಚಯಮಾಡಿಕೊಳ್ಳಲು, ಉತ್ತೇಜನ ಕೊಡಲು ಮತ್ತು ‘ಸತ್ಕಾರ್ಯಮಾಡಬೇಕೆಂದು ಒಬ್ಬರನ್ನೊಬ್ಬರು ಪ್ರೇರೇಪಿಸಲು’ ಅವಕಾಶವನ್ನು ಕೊಡುತ್ತದೆ. “ಕರ್ತನ ಪ್ರತ್ಯಕ್ಷತೆಯ ದಿನವು ಸಮೀಪಿಸುತ್ತಾ ಬರುತ್ತದೆಂದು [ನಾವು] ನೋಡುವುದರಿಂದ” ಇವೆಲ್ಲವನ್ನೂ ‘ಮತ್ತಷ್ಟು ಮಾಡಬೇಕು.’ (ಇಬ್ರಿಯ 10:24, 25) ಆದುದರಿಂದ ಕ್ರಮವಾದ ಹಾಜರಿ, ಯೋಗ್ಯ ಉಡುಗೆತೊಡುಗೆ ಮತ್ತು ಯೋಗ್ಯ ನಡವಳಿಕೆಯ ಮೂಲಕ ನಾವು ನಮ್ಮ ಪವಿತ್ರ ಕೂಟಗಳಿಗಾಗಿ ಯಾವಾಗಲೂ ಸೂಕ್ತ ಗೌರವವನ್ನು ತೋರಿಸೋಣ. ಹಾಗೆ ಮಾಡುವ ಮೂಲಕ, ಪವಿತ್ರ ವಿಷಯಗಳ ಬಗ್ಗೆ ಯೆಹೋವನ ನೋಟ ನಮಗೂ ಇದೆಯೆಂದು ನಾವು ತೋರಿಸುವೆವು. (w06 11/01)
ಪುನರ್ವಿಮರ್ಶೆಗಾಗಿ
• ಯೆಹೋವನ ಜನರ ಕೂಟಗಳು ಪವಿತ್ರವೆಂದೆಣಿಸಲ್ಪಡಬೇಕೆಂದು ಯಾವುದು ತೋರಿಸುತ್ತದೆ?
• ನಮ್ಮ ಕೂಟಗಳ ಯಾವ ವೈಶಿಷ್ಟ್ಯಗಳು ಅವು ಪವಿತ್ರವಾಗಿವೆ ಎಂಬುದನ್ನು ರುಜುಪಡಿಸುತ್ತವೆ?
• ನಮ್ಮ ಕೂಟಗಳ ಪಾವಿತ್ರ್ಯತೆಯನ್ನು ತಾವು ಗೌರವಿಸುತ್ತೇವೆಂದು ಮಕ್ಕಳು ಹೇಗೆ ತೋರಿಸಬಲ್ಲರು?
• ಕೂಟಗಳಿಗೆ ಕ್ರಮವಾಗಿ ಹಾಜರಾಗುವುದನ್ನು ನಮ್ಮ ಜೀವನದ ಕಾಯಂ ವೈಶಿಷ್ಟ್ಯವನ್ನಾಗಿ ಏಕೆ ಮಾಡಬೇಕು?
[ಪುಟ 30ರಲ್ಲಿರುವ ಚಿತ್ರಗಳು]
ಯೆಹೋವನನ್ನು ಆರಾಧಿಸಲಿಕ್ಕಾಗಿರುವ ಕೂಟಗಳು ಎಲ್ಲಿಯೇ ನಡೆಸಲ್ಪಡಲಿ ಅವು ಪವಿತ್ರವಾಗಿವೆ