ಇಂದು ದೇವರ ಉದ್ದೇಶವನ್ನು ಅನುಸರಿಸುವುದು
“ಜೀವಿಸುವವರು ಇನ್ನು ಮೇಲೆ ತಮಗಾಗಿ ಜೀವಿಸದೆ ತಮಗೋಸ್ಕರ ಸತ್ತು ಎದ್ದು ಬಂದಾತನಿಗಾಗಿ ಜೀವಿಸಬೇಕೆಂತಲೇ ಆತನು [ಕ್ರಿಸ್ತನು] ಎಲ್ಲರಿಗೋಸ್ಕರ ಸತ್ತನು.”—2 ಕೊರಿಂಥ 5:15.
“ಆಂತರಿಕಯುದ್ಧ ಕೊನೆಗೊಂಡ ಬಳಿಕ ಆ ದೂರದ ಆಫ್ರಿಕನ್ ಹಳ್ಳಿಯನ್ನು ಪ್ರವೇಶಿಸಿದ ಮೊದಲ ನಾಗರಿಕ ವಾಹನ ನಮ್ಮದಾಗಿತ್ತು. ಅಲ್ಲಿದ್ದ ಚಿಕ್ಕ ಸಭೆಯೊಂದಿಗಿನ ನಮ್ಮ ಸಂಪರ್ಕವು ಕಡಿದುಹೋಗಿತ್ತು. ಆದರೆ ಅಲ್ಲಿನ ಸಹೋದರರ ಅಗತ್ಯಗಳನ್ನು ನಾವು ಪೂರೈಸಬೇಕಿತ್ತು. ಆಹಾರ, ಬಟ್ಟೆ ಮತ್ತು ಬೈಬಲ್ ಸಾಹಿತ್ಯದ ಜೊತೆಗೆ, ಯೆಹೋವನ ಸಾಕ್ಷಿಗಳು—ಆ ಹೆಸರಿನ ಹಿಂದಿರುವ ಸಂಘಟನೆ ಎಂಬ ವಿಡಿಯೊಪ್ರತಿಯನ್ನು ತೆಗೆದುಕೊಂಡು ನಾವು ಅಲ್ಲಿಗೆ ಹೋದೆವು.a ಆ ಹಳ್ಳಿಯ ‘ಥಿಯೇಟರ್ಗೆ’ ಅಂದರೆ, ವಿಸಿಆರ್ ಮತ್ತು ಟಿವಿಯಿದ್ದ ಹುಲ್ಲಿನ ಒಂದು ದೊಡ್ಡ ಗುಡಿಸಲಿಗೆ ಅನೇಕ ಆಸಕ್ತ ಜನರು ಹಿಂಡುಹಿಂಡಾಗಿ ಬಂದರು. ಆದುದರಿಂದ ನಾವು ಆ ವಿಡಿಯೋವನ್ನು ಎರಡು ಸಲ ತೋರಿಸಬೇಕಾಯಿತು. ಪ್ರತಿ ಸಲದ ದೇಖಾವೆಯ ಬಳಿಕ ಅನೇಕ ಬೈಬಲ್ ಅಧ್ಯಯನಗಳನ್ನು ಆರಂಭಿಸಲಾಯಿತು. ನಮ್ಮ ಎಲ್ಲ ಪ್ರಯತ್ನಗಳು ಸಾರ್ಥಕವಾಗಿದ್ದವು.” ಇವು, ಏರನ್b ಎಂಬ ಮಿಷನೆರಿ ಜ್ಞಾಪಿಸಿಕೊಂಡ ವಿಷಯಗಳಾಗಿದ್ದವು.
2 ಏರನ್ ಮತ್ತವನ ಸಂಗಡಿಗರು ಈ ಕಷ್ಟಕರ ಕೆಲಸವನ್ನು ಕೈಗೆತ್ತಿಕೊಂಡದ್ದೇಕೆ? ಏಕೆಂದರೆ, ಯೇಸು ಕ್ರಿಸ್ತನ ವಿಮೋಚನಾ ಯಜ್ಞಕ್ಕಾಗಿ ಕೃತಜ್ಞತೆ ಸೂಚಿಸುತ್ತಾ ಅವರು ತಮ್ಮ ಜೀವನವನ್ನು ದೇವರಿಗೆ ಸಮರ್ಪಿಸಿದ್ದಾರೆ ಮತ್ತು ಅದನ್ನು ದೇವರ ಉದ್ದೇಶಕ್ಕೆ ಹೊಂದಿಕೆಯಲ್ಲಿ ಬಳಸಲು ಬಯಸುತ್ತಾರೆ. ಅವರಂತೆಯೇ ಎಲ್ಲ ಸಮರ್ಪಿತ ಕ್ರೈಸ್ತರು ‘ತಮಗಾಗಿ ಜೀವಿಸದೆ’ ‘ಸುವಾರ್ತೆಗೋಸ್ಕರ’ ತಮ್ಮಿಂದ ಸಾಧ್ಯವಿರುವುದೆಲ್ಲವನ್ನೂ ಮಾಡಲು ದೃಢಸಂಕಲ್ಪಮಾಡಿದ್ದಾರೆ. (2 ಕೊರಿಂಥ 5:15; 1 ಕೊರಿಂಥ 9:23) ಈ ವಿಷಯಗಳ ವ್ಯವಸ್ಥೆಯು ಅಂತ್ಯಗೊಳ್ಳುವಾಗ ಲೋಕದ ಹಣಕ್ಕಾಗಲಿ, ಅಂತಸ್ತಿಗಾಗಲಿ ಯಾವುದೇ ಮೌಲ್ಯವಿರುವುದಿಲ್ಲ ಎಂದು ಅವರಿಗೆ ತಿಳಿದಿದೆ. ಆದುದರಿಂದ ತಮ್ಮ ಜೀವ ಹಾಗೂ ತಮಗಿರುವ ತಕ್ಕಮಟ್ಟಿಗಿನ ಆರೋಗ್ಯ ಎಂಬ ಸೊತ್ತುಗಳನ್ನು ದೇವರ ಉದ್ದೇಶಕ್ಕೆ ಹೊಂದಿಕೆಯಲ್ಲಿ ಉಪಯೋಗಿಸಲು ಅವರು ಬಯಸುತ್ತಾರೆ. (ಪ್ರಸಂಗಿ 12:1) ನಾವಿದನ್ನು ಹೇಗೆ ಮಾಡಬಲ್ಲೆವು? ಇದಕ್ಕಾಗಿ ಬೇಕಾಗಿರುವ ಧೈರ್ಯ ಮತ್ತು ಬಲವನ್ನು ನಾವೆಲ್ಲಿ ಕಂಡುಕೊಳ್ಳಬಲ್ಲೆವು? ನಮಗೆ ಯಾವ ಸೇವಾ ಅವಕಾಶಗಳು ಲಭ್ಯವಾಗಿವೆ?
ಪ್ರಗತಿಪರ, ಪ್ರಾಯೋಗಿಕ ಹೆಜ್ಜೆಗಳನ್ನು ತೆಗೆದುಕೊಳ್ಳುವುದು
3 ದೇವರ ಚಿತ್ತವನ್ನು ಮಾಡುವುದು ಸತ್ಕ್ರೈಸ್ತರಿಗೆ ಜೀವನಪರ್ಯಂತದ ಕಾರ್ಯವಾಗಿದೆ. ಸಾಮಾನ್ಯವಾಗಿ ಇದು, ದೇವಪ್ರಭುತ್ವಾತ್ಮಕ ಶುಶ್ರೂಷಾ ಶಾಲೆಯಲ್ಲಿ ದಾಖಲಾಗುವುದು, ಬೈಬಲನ್ನು ದಿನಾಲೂ ಓದುವುದು, ಸಾರುವ ಕೆಲಸದಲ್ಲಿ ಪಾಲ್ಗೊಳ್ಳುವುದು ಮತ್ತು ದೀಕ್ಷಾಸ್ನಾನದತ್ತ ಪ್ರಗತಿಮಾಡುವುದೇ ಮುಂತಾದ ಮೂಲಭೂತ ಹೆಜ್ಜೆಗಳಿಂದ ಆರಂಭವಾಗುತ್ತದೆ. ಪ್ರಗತಿ ಮಾಡುತ್ತಾ ಹೋದಂತೆ ನಾವು ಅಪೊಸ್ತಲ ಪೌಲನ ಈ ಮಾತುಗಳನ್ನು ಮನಸ್ಸಿನಲ್ಲಿಡುತ್ತೇವೆ: “ಈ ಕಾರ್ಯಗಳನ್ನು ಸಾಧಿಸಿಕೊಳ್ಳುವದರಲ್ಲಿ ಆಸಕ್ತನಾಗಿರು. ಇದರಿಂದ ನಿನ್ನ ಅಭಿವೃದ್ಧಿಯು ಎಲ್ಲರಿಗೂ ಪ್ರಸಿದ್ಧವಾಗುವದು.” (1 ತಿಮೊಥೆಯ 4:15) ಇಂಥ ಅಭಿವೃದ್ಧಿಯು ನಮ್ಮನ್ನೇ ಮೇಲಕ್ಕೇರಿಸಿಕೊಳ್ಳಲು ಅಲ್ಲ ಬದಲಾಗಿ ದೇವರ ಚಿತ್ತವನ್ನು ನಿಸ್ವಾರ್ಥದಿಂದ ಮಾಡಬೇಕೆಂಬ ನಮ್ಮ ದೃಢನಿಶ್ಚಯವನ್ನು ವ್ಯಕ್ತಪಡಿಸಲಿಕ್ಕಾಗಿ ಇದೆ. ಇಂಥ ಮಾರ್ಗಕ್ರಮವನ್ನು ತೆಗೆದುಕೊಳ್ಳುವುದು, ನಾವು ಜೀವನದ ಎಲ್ಲ ವಿಷಯಗಳಲ್ಲಿ ದೇವರು ನಮ್ಮ ಹೆಜ್ಜೆಗಳನ್ನು ಮಾರ್ಗದರ್ಶಿಸುವಂತೆ ಬಿಡುತ್ತೇವೆಂದು ತೋರಿಸುತ್ತದೆ. ಏಕೆಂದರೆ ಆತನು ನಮಗಿಂತ ಎಷ್ಟೋ ಹೆಚ್ಚು ಉತ್ತಮವಾಗಿ ನಮ್ಮನ್ನು ಮಾರ್ಗದರ್ಶಿಸಶಕ್ತನು.—ಕೀರ್ತನೆ 32:8.
4 ಹಿಂಜರಿಕೆ ಇಲ್ಲವೇ ನಮ್ಮ ಬಗ್ಗೆಯೇ ಅತಿಯಾಗಿ ಚಿಂತಿಸಿಕೊಳ್ಳುವುದು ದೇವರ ಸೇವೆಯಲ್ಲಿ ನಮ್ಮ ಪ್ರಗತಿಗೆ ಒಂದು ತಡೆ ಆಗಿರುವುದು. (ಪ್ರಸಂಗಿ 11:4) ಹೀಗೆ, ದೇವರ ಮತ್ತು ಇತರರ ಸೇವೆಮಾಡುವುದರಲ್ಲಿ ನಾವು ನಿಜ ಸಂತೋಷವನ್ನು ಪಡೆಯಬೇಕಾದರೆ ಮೊದಲು ನಾವು ನಮ್ಮ ಸ್ವಂತ ಚಿಂತೆಗಳನ್ನು ಜಯಿಸಬೇಕಾದೀತು. ಉದಾಹರಣೆಗೆ, ಎರಿಕ್ ಎಂಬವನು ಒಂದು ವಿದೇಶೀ-ಭಾಷಾ ಸಭೆಯಲ್ಲಿ ಸೇವೆಮಾಡಲು ಯೋಚಿಸಿದನು. ಆದರೆ ಅವನಿಗಿದ್ದ ಚಿಂತೆಯೇನೆಂದರೆ, ‘ನಾನು ಆ ಸಭೆಯವರೊಂದಿಗೆ ಬೆರೆಯುವೆನೋ? ಅಲ್ಲಿನ ಸಹೋದರರು ನನಗೆ ಇಷ್ಟವಾಗುವರೋ? ಅವರು ನನ್ನನ್ನು ಇಷ್ಟಪಡುವರೋ?’ ಅವನು ಹೇಳುವುದು: “ಕೊನೆಗೆ ನಾನು ಗ್ರಹಿಸಿದ ಸಂಗತಿಯೇನೆಂದರೆ, ನನಗಿಂತ ಹೆಚ್ಚಾಗಿ ನಾನು ಸಹೋದರರ ಕುರಿತಾಗಿ ಚಿಂತಿಸಬೇಕೆಂದೇ. ನಾನು ಚಿಂತೆಮಾಡುವುದನ್ನು ನಿಲ್ಲಿಸಿ, ನಿಸ್ವಾರ್ಥಭಾವದಿಂದ ನನ್ನಿಂದ ಸಾಧ್ಯವಿರುವಷ್ಟನ್ನು ಮಾಡಲು ದೃಢವಾಗಿ ಸಂಕಲ್ಪಿಸಿದೆ. ಸಹಾಯಕ್ಕಾಗಿ ಪ್ರಾರ್ಥಿಸಿ ನನ್ನ ಯೋಜನೆಗಳೊಂದಿಗೆ ಮುಂದುವರಿದೆ. ಈಗ ಆ ಸಭೆಯಲ್ಲಿನ ನನ್ನ ಸೇವೆಯಲ್ಲಿ ಬಹಳಷ್ಟು ಆನಂದಿಸುತ್ತಿದ್ದೇನೆ.” (ರೋಮಾಪುರ 4:20) ಹೌದು, ನಾವು ಎಷ್ಟರ ಮಟ್ಟಿಗೆ ದೇವರ ಮತ್ತು ಇತರರ ಸೇವೆಯನ್ನು ನಿಸ್ವಾರ್ಥಭಾವದಿಂದ ಮಾಡುತ್ತೇವೊ ಅಷ್ಟರ ಮಟ್ಟಿಗೆ ಆನಂದ ಹಾಗೂ ಸಂತೃಪ್ತಿಯನ್ನು ಪಡೆದುಕೊಳ್ಳುವೆವು.
5 ದೇವರ ಉದ್ದೇಶವನ್ನು ಯಶಸ್ವಿಯಾಗಿ ಅನುಸರಿಸಲಿಕ್ಕೋಸ್ಕರ ನಮ್ಮ ವ್ಯವಹಾರಗಳನ್ನು ಜಾಗ್ರತೆಯಿಂದ ಯೋಜಿಸುವುದೂ ಅಗತ್ಯ. ನಾವು ವಿವೇಕಿಗಳಾಗಿ, ತುಂಬ ಸಾಲಗಳನ್ನು ಮಾಡುವುದರಿಂದ ದೂರವಿರುತ್ತೇವೆ. ಏಕೆಂದರೆ ಸಾಲಗಳು ನಮ್ಮನ್ನು ಈ ವ್ಯವಸ್ಥೆಗೆ ದಾಸರನ್ನಾಗಿ ಮಾಡುತ್ತವೆ ಮತ್ತು ದೇವರ ಕೆಲಸವನ್ನು ಮಾಡುವ ನಮ್ಮ ಸ್ವಾತಂತ್ರ್ಯವನ್ನು ಮಿತಗೊಳಿಸುತ್ತವೆ. ಬೈಬಲ್ ನಮಗೆ ಜ್ಞಾಪಕಹುಟ್ಟಿಸುವುದು: “ಸಾಲಗಾರನು ಸಾಲಕೊಟ್ಟವನಿಗೆ ಸೇವಕ.” (ಜ್ಞಾನೋಕ್ತಿ 22:7) ಯೆಹೋವನಲ್ಲಿ ಭರವಸೆಯಿಡುವುದು ಮತ್ತು ಆಧ್ಯಾತ್ಮಿಕ ವಿಷಯಗಳನ್ನು ಪ್ರಥಮ ಸ್ಥಾನದಲ್ಲಿಡುವುದು ನಾವು ಬೇರೆ ವಿಷಯಗಳನ್ನು ಅವುಗಳ ತಕ್ಕಸ್ಥಾನದಲ್ಲಿಡಲು ಸಹಾಯಮಾಡುವುದು. ದೃಷ್ಟಾಂತಕ್ಕಾಗಿ ಗ್ವಾಮಿಂಗ್, ಅವನ ಇಬ್ಬರು ಸಹೋದರಿಯರು ಮತ್ತು ತಾಯಿ ವಾಸಿಸುವಂಥ ವಠಾರದಲ್ಲಿ ಮನೆ-ಬಾಡಿಗೆ ತುಂಬ ಜಾಸ್ತಿ ಹಾಗೂ ಕಾಯಂ ಉದ್ಯೋಗ ಸಿಗುವುದು ಸಹ ಕಷ್ಟ. ಆದರೆ ಹಣವನ್ನು ಜಾಗ್ರತೆಯಿಂದ ಬಳಸಿ, ಖರ್ಚುಗಳನ್ನು ಹಂಚಿಕೊಳ್ಳುವುದರಿಂದ ಅವರಲ್ಲಿ ಕೆಲವರಿಗೆ ಉದ್ಯೋಗ ಇಲ್ಲದಿರುವಾಗಲೂ ಅವರು ಸುಧಾರಿಸಿಕೊಳ್ಳಲು ಶಕ್ತರಾಗಿದ್ದಾರೆ. “ಕೆಲವೊಮ್ಮೆ ನಮಗೆ ಎಲ್ಲರ ಸಂಬಳ ಸಿಗುವುದಿಲ್ಲ, ಆದರೂ ನಾವು ಪಯನೀಯರ್ ಸೇವೆಯಲ್ಲಿ ಮುಂದುವರಿದು ಅದೇ ಸಮಯದಲ್ಲಿ ತಾಯಿಯನ್ನು ಉತ್ತಮವಾಗಿ ನೋಡಿಕೊಳ್ಳಬಲ್ಲೆವು. ಅವರಿಗಾಗಿ ನಾವು ಜೀವನದ ಸುಖಸೌಕರ್ಯಗಳನ್ನು ಒದಗಿಸುವಂತೆ ಆಧ್ಯಾತ್ಮಿಕ ಚಟುವಟಿಕೆಗಳನ್ನು ಬಿಟ್ಟುಕೊಡಲು ನಮ್ಮ ತಾಯಿ ಅಪೇಕ್ಷಿಸದೇ ಇರುವುದಕ್ಕೂ ನಾವು ಕೃತಜ್ಞರು.”—2 ಕೊರಿಂಥ 12:14; ಇಬ್ರಿಯ 13:5.
6 ಹಣಕಾಸಿನ ಇಲ್ಲವೇ ಬೇರಾವುದೇ ರೀತಿಯ ಚಟುವಟಿಕೆಗಳಲ್ಲಿ ನೀವು ಅತಿಯಾಗಿ ಒಳಗೂಡಿರುವಲ್ಲಿ ದೇವರ ಉದ್ದೇಶವನ್ನು ಪ್ರಥಮವಾಗಿಡಲಿಕ್ಕಾಗಿ ದೊಡ್ಡದಾದ ಹೊಂದಾಣಿಕೆಗಳನ್ನು ಮಾಡಬೇಕಾದೀತು. ಅಂಥ ಬದಲಾವಣೆಗಳನ್ನು ದಿನಬೆಳಗಾಗುವುದರೊಳಗೆ ಮಾಡಲಾಗದು. ಅಷ್ಟುಮಾತ್ರವಲ್ಲದೆ, ಆರಂಭದ ಪ್ರಯತ್ನಗಳಲ್ಲಿ ನೀವು ತಪ್ಪಿಬಿದ್ದರೆ ಅದನ್ನು ಸೋಲಾಗಿಯೂ ಎಣಿಸಬಾರದು. ಕೋಯಿಚಿ ಎಂಬವನನ್ನು ಪರಿಗಣಿಸಿರಿ. ಮನೋರಂಜನೆಗಾಗಿ ಬಹಳಷ್ಟು ಸಮಯವನ್ನು ಕಳೆಯುವ ಸಮಸ್ಯೆ ಅವನಿಗಿತ್ತು. ಅವನು ಹದಿವಯಸ್ಕನಾಗಿದ್ದಾಗ ಬೈಬಲ್ ಅಧ್ಯಯನ ಮಾಡಿದ್ದನು. ಆದರೆ ಅನೇಕ ವರ್ಷಗಳ ವರೆಗೆ ವಿಡಿಯೋ ಗೇಮ್ಸ್ಗಳೇ ಅವನ ಜೀವನದಲ್ಲಿ ಪ್ರಮುಖ ಸ್ಥಾನ ಪಡೆದಿದ್ದವು. ಒಂದು ದಿನ ಕೋಯಿಚಿ ತನ್ನನ್ನೇ ಹೀಗೆ ಕೇಳಿದನು: ‘ನನಗೀಗ 30 ದಾಟಿದೆ. ಆದರೆ ನಾನೇನು ಮಾಡುತ್ತಿದ್ದೇನೆ? ಈ ವರೆಗೂ ಯಾವುದೇ ಉದ್ದೇಶಭರಿತ ಕೆಲಸವನ್ನು ಮಾಡಿಲ್ಲ!’ ಕೋಯಿಚಿ ಪುನಃ ಒಮ್ಮೆ ತನ್ನ ಬೈಬಲ್ ಅಧ್ಯಯನವನ್ನು ಆರಂಭಿಸಿದನು ಮತ್ತು ಸಭೆಯಿಂದ ಸಹಾಯವನ್ನು ಪಡೆದುಕೊಂಡನು. ಬದಲಾವಣೆ ನಿಧಾನವಾಗಿದ್ದರೂ ಅವನು ಬಿಟ್ಟುಕೊಡಲಿಲ್ಲ. ಬೇರೆಯವರ ಪ್ರಾರ್ಥನೆಗಳು ಹಾಗೂ ಪ್ರೀತಿಭರಿತ ಬೆಂಬಲದಿಂದಾಗಿ ಅವನು ಕೊನೆಗೂ ತನ್ನ ಗೀಳಿನಿಂದ ಮುಕ್ತನಾದನು. (ಲೂಕ 11:9) ಕೋಯಿಚಿ ಈಗ ಸಂತೋಷದಿಂದ ಶುಶ್ರೂಷಾ ಸೇವಕನಾಗಿ ಸೇವೆಮಾಡುತ್ತಿದ್ದಾನೆ.
ಸಮತೋಲನದಿಂದಿರಲು ಕಲಿಯಿರಿ
7 ದೇವರ ಉದ್ದೇಶವನ್ನು ಅನುಸರಿಸಲಿಕ್ಕಾಗಿ ಪೂರ್ಣಪ್ರಾಣದ ಪ್ರಯತ್ನ ಅಗತ್ಯ. ಈ ಕೆಲಸದಲ್ಲಿ ನಮ್ಮನ್ನು ವಿನಿಯೋಗಿಸಿಕೊಳ್ಳಲು ನಾವು ಹಿಂದೆಮುಂದೆ ನೋಡಬಾರದು ಅಥವಾ ಆಲಸ್ಯ ತೋರಿಸಬಾರದು. (ಇಬ್ರಿಯ 6:11, 12) ಆದರೆ ನಾವು ಶಾರೀರಿಕ, ಮಾನಸಿಕ, ಭಾವನಾತ್ಮಕ ರೀತಿಯಲ್ಲಿ ಸುಸ್ತಾಗಿಹೋಗುವಷ್ಟರ ಮಟ್ಟಿಗೆ ಕೆಲಸಮಾಡಬೇಕೆಂದು ಯೆಹೋವನು ಬಯಸುವುದಿಲ್ಲ. ನಮ್ಮ ಸ್ವಂತ ಬಲದಿಂದ ನಾವು ದೇವರ ಕೆಲಸವನ್ನು ಮಾಡಲಾರೆವೆಂಬುದನ್ನು ವಿನಮ್ರತೆಯಿಂದ ಒಪ್ಪಿಕೊಳ್ಳುವುದು ದೇವರನ್ನು ಮಹಿಮೆಪಡಿಸುತ್ತದೆ ಮತ್ತು ನಮ್ಮ ಸಮತೋಲನವನ್ನು ತೋರಿಸುತ್ತದೆ. (1 ಪೇತ್ರ 4:11) ತನ್ನ ಚಿತ್ತವನ್ನು ಮಾಡಲಿಕ್ಕಾಗಿ ನಮಗೆ ಬೇಕಾದ ಬಲವನ್ನು ಕೊಡುವುದಾಗಿ ಯೆಹೋವನು ಮಾತುಕೊಡುತ್ತಾನೆ. ಆದರೆ ನಾವು ನಮ್ಮ ಮಿತಿಗಳಿಂದಾಚೆ ಹೋಗಬಾರದು, ಅಂದರೆ ಆತನು ನಮ್ಮಿಂದ ನಿರೀಕ್ಷಿಸದಂಥ ಕೆಲಸಗಳನ್ನು ಮಾಡಲು ಪ್ರಯತ್ನಿಸಬಾರದು. (2 ಕೊರಿಂಥ 4:7) ದೇವರ ಸೇವೆಯಲ್ಲಿ ಸುಸ್ತಾಗಿಹೋಗದಂತೆ, ನಾವು ಯಾವ್ಯಾವ ಕೆಲಸಕ್ಕಾಗಿ ಎಷ್ಟೆಷ್ಟು ಶಕ್ತಿಯನ್ನು ವ್ಯಯಿಸುವೆವೆಂದು ವಿವೇಕದಿಂದ ನಿರ್ಧರಿಸಬೇಕು.
8 ದೃಷ್ಟಾಂತಕ್ಕಾಗಿ, ಪೂರ್ವ ಏಷಿಯಾದಲ್ಲಿ ವಾಸಿಸುತ್ತಿರುವ ಜೀ ಹೀ ಎಂಬಾಕೆ ಎರಡು ವರ್ಷಗಳ ವರೆಗೆ ಮಾಡಿದ ಉದ್ಯೋಗವು ಆಕೆಯ ಸಮಯ ಹಾಗೂ ಶಕ್ತಿಯನ್ನು ಹೀರುತ್ತಿತ್ತು. ಈ ಉದ್ಯೋಗದೊಂದಿಗೆ ಅವಳು ಪಯನೀಯರ್ ಸೇವೆಯನ್ನೂ ಮಾಡುತ್ತಿದ್ದಳು. ಅವಳನ್ನುವುದು: “ನಾನು ಯೆಹೋವನಿಗೂ ಲೋಕಕ್ಕೂ ನನ್ನ ಸರ್ವೋತ್ಕೃಷ್ಟವನ್ನು ಕೊಡಲು ಪ್ರಯತ್ನಿಸಿದೆ. ರಾತ್ರಿ ನನಗೆ ಕೇವಲ ಐದು ತಾಸುಗಳ ನಿದ್ದೆ ಸಿಗುತ್ತಿತ್ತು. ಕಟ್ಟಕಡೆಗೆ ಆಧ್ಯಾತ್ಮಿಕ ವಿಷಯಗಳಿಗಾಗಿ ನನ್ನಲ್ಲಿ ಯಾವುದೇ ಮಾನಸಿಕ ಶಕ್ತಿ ಉಳಿದಿರಲಿಲ್ಲ ಮತ್ತು ಅವುಗಳಲ್ಲಿ ನನಗಿದ್ದ ಆನಂದವು ಕಡಿಮೆಯಾಯಿತು.” ಆದುದರಿಂದ ಜೀ ಹೀ ತನ್ನ ‘ಪೂರ್ಣಹೃದಯ, ಪ್ರಾಣ, ಬುದ್ಧಿ, ಹಾಗೂ ಶಕ್ತಿಯಿಂದ’ ಯೆಹೋವನ ಸೇವೆಮಾಡಲಿಕ್ಕಾಗಿ, ಕಡಿಮೆ ಸಮಯ ಹಾಗೂ ಶಕ್ತಿಯನ್ನು ಅವಶ್ಯಪಡಿಸುವಂಥ ಉದ್ಯೋಗಕ್ಕಾಗಿ ಹುಡುಕಿದಳು. (ಮಾರ್ಕ 12:30) ಆಕೆ ಹೇಳಿದ್ದು: “ನಾನು ತುಂಬ ಹಣಮಾಡಬೇಕೆಂದು ಕುಟುಂಬದಿಂದ ಒತ್ತಡವಿದ್ದರೂ ದೇವರ ಉದ್ದೇಶವನ್ನು ಪ್ರಥಮವಾಗಿಟ್ಟೆ. ಈಗಲೂ, ಸಭ್ಯವಾದ ಉಡುಪು ಮುಂತಾದ ಮೂಲಭೂತ ಆವಶ್ಯಕತೆಗಳಿಗಾಗಿ, ಸಾಕಾಗುವಷ್ಟು ಹಣ ಸಂಪಾದಿಸುತ್ತೇನೆ. ಅಲ್ಲದೆ ನನಗೆ ಸಾಕಷ್ಟು ನಿದ್ದೆಯೂ ಸಿಗುತ್ತಿರುವುದರಿಂದ ನನ್ನಲ್ಲಿ ಹೆಚ್ಚಿನ ಚೈತನ್ಯವಿದೆ! ನನಗೀಗ ಶುಶ್ರೂಷೆಯಲ್ಲಿ ಆನಂದವಿದೆ ಮತ್ತು ಆಧ್ಯಾತ್ಮಿಕವಾಗಿಯೂ ಹೆಚ್ಚು ಬಲವಿದೆ. ಇದಕ್ಕೆ ಕಾರಣವೇನೆಂದರೆ, ನನಗೀಗ ಈ ಪ್ರಪಂಚದ ಆಕರ್ಷಣೆ ಹಾಗೂ ಅಪಕರ್ಷಣೆಗಳಿಗೆ ಸಮಯವಿಲ್ಲ.”—ಪ್ರಸಂಗಿ 4:6; ಮತ್ತಾಯ 6:24, 28-30.
9 ಎಲ್ಲರೂ ಪೂರ್ಣ ಸಮಯದ ಶುಶ್ರೂಷಕರಾಗಿ ದೇವರ ಸೇವೆಮಾಡಲಾರರು ನಿಜ. ನಿಮಗೆ ವೃದ್ಧಾಪ್ಯ, ಅನಾರೋಗ್ಯ ಇಲ್ಲವೇ ಬೇರಾವುದೇ ಇತಿಮಿತಿಗಳನ್ನು ನಿಭಾಯಿಸಲಿಕ್ಕಿರುವಲ್ಲಿ, ಯೆಹೋವನು ನಿಮ್ಮ ನಂಬಿಗಸ್ತಿಕೆಯನ್ನು ಮತ್ತು ನೀವು ನೀಡಬಲ್ಲ ಯಾವುದೇ ಪ್ರಮಾಣದ ಪೂರ್ಣಹೃದಯದ ಸೇವೆಯನ್ನು ಅಮೂಲ್ಯವೆಂದೆಣಿಸುತ್ತಾನೆ. (ಲೂಕ 21:2, 3) ನಮ್ಮ ಪ್ರಯತ್ನಗಳು ಬೇರೆಯವರ ಮೇಲೆ ಬೀರುವ ಪರಿಣಾಮಗಳನ್ನು ನಮ್ಮಲ್ಲಿ ಯಾರೂ ಕೀಳಂದಾಜುಮಾಡಬಾರದು. ಈ ಪ್ರಯತ್ನಗಳು ಒಂದುವೇಳೆ ಸೀಮಿತವಾಗಿದ್ದರೂ ಪರಿಣಾಮಬೀರಬಲ್ಲವು. ಉದಾಹರಣೆಗಾಗಿ, ನಾವು ಕೆಲವೇ ಮನೆಗಳನ್ನು ಸಂದರ್ಶಿಸಿರಬಹುದು. ಆದರೆ ಯಾರೂ ನಮ್ಮ ಸಂದೇಶದಲ್ಲಿ ಆಸಕ್ತಿ ತೋರಿಸಿರಲಿಕ್ಕಿಲ್ಲ. ನಾವು ಹೊರಟುಹೋದ ಬಳಿಕ ಆ ಮನೆಯವರು ನಮ್ಮ ಭೇಟಿಯ ಬಗ್ಗೆ ತಾಸುಗಟ್ಟಲೆ ಇಲ್ಲವೇ ದಿನಗಟ್ಟಲೆ ಮಾತಾಡಿಯಾರು! ನಮಗೆ ಬಾಗಿಲು ತೆರೆಯದೇ ಇದ್ದವರೂ ಇದನ್ನು ಮಾಡಿಯಾರು! ಸುವಾರ್ತೆಯನ್ನು ಕೇಳಿಸಿಕೊಂಡವರೆಲ್ಲರೂ ಉತ್ತಮ ಪ್ರತಿಕ್ರಿಯೆ ತೋರಿಸುವರೆಂದು ನಾವು ನಿರೀಕ್ಷಿಸುವುದಿಲ್ಲ. ಆದರೆ ಕೆಲವರಾದರೂ ಪ್ರತಿಕ್ರಿಯೆತೋರಿಸುವರು ನಿಶ್ಚಯ. (ಮತ್ತಾಯ 13:19-23) ಇತರರಾದರೊ ಕಾಲಾನಂತರ, ಲೋಕದಲ್ಲಿ ಅಥವಾ ತಮ್ಮ ಬದುಕಿನಲ್ಲಿ ಪರಿಸ್ಥಿತಿಗಳು ಬದಲಾದಾಗ ಪ್ರತಿಕ್ರಿಯಿಸಬಹುದು. ಏನೇ ಆಗಲಿ ಸಾರ್ವಜನಿಕ ಶುಶ್ರೂಷೆಯಲ್ಲಿ ನಮ್ಮಿಂದಾದುದೆಲ್ಲವನ್ನು ಮಾಡುವ ಮೂಲಕ ನಾವು ದೇವರ ಕೆಲಸವನ್ನು ಮಾಡುತ್ತಿದ್ದೇವೆ. ನಾವು “ದೇವರ ಜೊತೆಕೆಲಸದವರು.”—1 ಕೊರಿಂಥ 3:9.
10 ಅಷ್ಟುಮಾತ್ರವಲ್ಲದೆ, ನಮ್ಮ ಕುಟುಂಬ ಸದಸ್ಯರಿಗೆ ಹಾಗೂ ನಮ್ಮ ಆಧ್ಯಾತ್ಮಿಕ ಸಹೋದರ ಸಹೋದರಿಯರಿಗಂತೂ ನಾವೆಲ್ಲರೂ ಸಹಾಯಮಾಡುತ್ತೇವೆ. (ಗಲಾತ್ಯ 6:10) ಇತರರ ಮೇಲೆ ನಾವು ಬೀರುವ ಉತ್ತಮ ಪ್ರಭಾವವು ಗಾಢವಾದದ್ದೂ ಬಹುಕಾಲ ಉಳಿಯುವಂಥದ್ದೂ ಆಗಿರಬಲ್ಲದು. (ಪ್ರಸಂಗಿ 11:1, 6) ಹಿರಿಯರೂ ಶುಶ್ರೂಷಾ ಸೇವಕರೂ ತಮ್ಮ ಕರ್ತವ್ಯಗಳನ್ನು ಶ್ರದ್ಧೆಯಿಂದ ಪೂರೈಸುವಾಗ, ಅದು ಸಭೆಯ ಆಧ್ಯಾತ್ಮಿಕ ಆರೋಗ್ಯಕ್ಕೂ ಸ್ಥಿರತೆಗೂ ನೆರವುನೀಡುತ್ತದೆ ಮತ್ತು ಕ್ರೈಸ್ತ ಚಟುವಟಿಕೆಯು ಹೆಚ್ಚುತ್ತದೆ. ನಾವು ‘ಕರ್ತನ ಸೇವೆಯಲ್ಲಿ ಪ್ರಯಾಸಪಡುವಾಗ’ ನಮ್ಮ ಕೆಲಸವು ‘ನಿಷ್ಫಲವಾಗುವುದಿಲ್ಲ’ ಎಂಬ ಆಶ್ವಾಸನೆ ನಮಗಿದೆ.—1 ಕೊರಿಂಥ 15:58.
ದೇವರ ಉದ್ದೇಶವನ್ನು ಜೀವನವೃತ್ತಿಯಾಗಿ ಅನುಸರಿಸುವುದು
11 ಕ್ರೈಸ್ತರಾಗಿರುವ ನಾವು ಜೀವನವನ್ನು ಆನಂದಿಸುತ್ತೇವೆ. ನಾವು ಮಾಡುವ ಪ್ರತಿಯೊಂದು ವಿಷಯದಲ್ಲೂ ದೇವರಿಗೆ ಮಹಿಮೆತರಲು ಬಯಸುತ್ತೇವೆ. (1 ಕೊರಿಂಥ 10:31) ನಾವು ರಾಜ್ಯ ಸುವಾರ್ತೆಯನ್ನು ಸಾರುವುದಕ್ಕೂ ಯೇಸು ಆಜ್ಞಾಪಿಸಿದ್ದೆಲ್ಲವನ್ನೂ ಕಲಿಸುವುದಕ್ಕೂ ನಮ್ಮ ಪೂರ್ಣ ಗಮನ ಕೊಡುವಾಗ, ಅನೇಕ ಪ್ರತಿಫಲದಾಯಕ ಸೇವಾ ಅವಕಾಶಗಳು ನಮಗೆ ತೆರೆಯುವುದನ್ನು ನೋಡುವೆವು. (ಮತ್ತಾಯ 24:14; 28:19, 20) ಸ್ಥಳಿಕ ಸಭೆಯೊಂದಿಗೆ ಕೆಲಸಮಾಡುವುದಲ್ಲದೆ, ಬೇರೊಂದು ಟೆರಿಟೊರಿ, ಭಾಷೆ ಇಲ್ಲವೇ ದೇಶದಲ್ಲಿ ಸಾರುವವರ ಹೆಚ್ಚಿನ ಅಗತ್ಯವಿರಬಹುದು. ಅವಿವಾಹಿತರಾಗಿರುವ ಅರ್ಹ ಹಿರಿಯರು ಹಾಗೂ ಶುಶ್ರೂಷಾ ಸೇವಕರಿಗೆ ಶುಶ್ರೂಷಾ ತರಬೇತಿ ಶಾಲೆಗೆ ಹಾಜರಾಗುವ ಆಮಂತ್ರಣ ಸಿಗಬಹುದು. ತದನಂತರ ಅವರಿಗೆ, ಪ್ರೌಢ ಕ್ರೈಸ್ತರ ಸಹಾಯದ ಅಗತ್ಯವಿರುವಂಥ ತಮ್ಮ ಸ್ವದೇಶದಲ್ಲಾಗಲಿ ವಿದೇಶಗಳಲ್ಲಾಗಲಿ ಸೇವೆಮಾಡುವ ಕರೆ ಸಿಗಬಹುದು. ಪೂರ್ಣ ಸಮಯದ ಶುಶ್ರೂಷೆಯಲ್ಲಿರುವ ವಿವಾಹಿತ ಜೋಡಿಗಳು ಗಿಲ್ಯಡ್ ಮಿಷನೆರಿ ತರಬೇತಿಯನ್ನು ಪಡೆದು ವಿದೇಶೀ ನೇಮಕದಲ್ಲಿ ಸೇವೆಮಾಡಲು ಅರ್ಹರಾಗಬಹುದು. ಅಷ್ಟುಮಾತ್ರವಲ್ಲದೆ, ಬೆತೆಲಿನಲ್ಲಿ ವಿವಿಧ ಕೆಲಸಗಳನ್ನು ಮಾಡಲಿಕ್ಕಾಗಿ, ಕೂಟದ ಸ್ಥಳ ಹಾಗೂ ಬ್ರಾಂಚ್ ಆಫೀಸುಗಳ ನಿರ್ಮಾಣ ಮತ್ತು ಸುಸ್ಥಿತಿಯಲ್ಲಿಡುವ ಕೆಲಸಕ್ಕಾಗಿ ಸತತವಾಗಿ ಸ್ವಯಂಸೇವಕರ ಅಗತ್ಯ ಇದ್ದೇ ಇರುತ್ತದೆ.
12 ಪೂರ್ಣ-ಸಮಯದ ಯಾವ ಸೇವೆಯನ್ನು ನೀವು ಅನುಸರಿಸಬೇಕು? ಯೆಹೋವನ ಸಮರ್ಪಿತ ಸೇವಕರಾಗಿ ನಿರ್ದೇಶನಕ್ಕಾಗಿ ಯಾವಾಗಲೂ ಆತನೆಡೆಗೆ ಮತ್ತು ಆತನ ಸಂಘಟನೆಯೆಡೆಗೆ ನೋಡಿರಿ. ಯೆಹೋವನ ‘ಒಳ್ಳೇ ಆತ್ಮವು’ ನಿಮಗೆ ಸರಿಯಾದ ನಿರ್ಣಯ ಮಾಡಲು ನೆರವುನೀಡುವುದು. (ನೆಹೆಮೀಯ 9:20) ಅನೇಕವೇಳೆ ಒಂದು ನೇಮಕವು ಇನ್ನೊಂದು ನೇಮಕಕ್ಕೆ ನಡೆಸುವುದು, ಮತ್ತು ಯಾವುದೇ ನೇಮಕದಲ್ಲಿ ನೀವು ಪಡೆಯುವ ಅನುಭವ ಹಾಗೂ ಕೌಶಲಗಳು ಮುಂದೆ ಇನ್ನೊಂದು ನೇಮಕದಲ್ಲಿ ನಿಮಗೆ ಉಪಯುಕ್ತವಾಗಿರಬಹುದು.
13 ದೃಷ್ಟಾಂತಕ್ಕಾಗಿ ಡೆನಿಸ್ ಮತ್ತು ಅವನ ಹೆಂಡತಿ ಜೆನ್ನಿ, ರಾಜ್ಯ ಸಭಾಗೃಹ ನಿರ್ಮಾಣ ಯೋಜನೆಗಳನ್ನು ಕ್ರಮವಾಗಿ ಬೆಂಬಲಿಸುತ್ತಾರೆ. ಕಟ್ರೀನಾ ಚಂಡಮಾರುತವು ಅಮೆರಿಕದ ದಕ್ಷಿಣ ಭಾಗಕ್ಕೆ ಅಪ್ಪಳಿಸಿದ ಬಳಿಕ ಅವರು ಪರಿಹಾರಕಾರ್ಯದಲ್ಲಿ ಕೆಲಸಮಾಡಲು ಮುಂದೆಬಂದರು. ಡೆನಿಸ್ ವರದಿಸುವುದು: “ರಾಜ್ಯ ಸಭಾಗೃಹಗಳನ್ನು ಕಟ್ಟುವಾಗ ನಾವು ಕಲಿತುಕೊಂಡಂಥ ಕೌಶಲಗಳನ್ನು ನಮ್ಮ ಸಹೋದರರಿಗೆ ಸಹಾಯಮಾಡಲು ಉಪಯೋಗಿಸುವುದು ತುಂಬ ಆನಂದವನ್ನು ತಂದಿತು. ನಾವು ಸಹಾಯಮಾಡಿದವರು ತೋರಿಸಿದ ಕೃತಜ್ಞತೆಯು ತುಂಬ ಮನಸ್ಪರ್ಶಿಸುವಂಥದ್ದು. ಪುನರ್ನಿರ್ಮಾಣದ ಕೆಲಸದಲ್ಲಿ ಬೇರೆ ಪರಿಹಾರಕಾರ್ಯದ ಗುಂಪುಗಳಲ್ಲಿ ಹೆಚ್ಚಿನವು ಪಡೆದ ಯಶಸ್ಸು ಕೊಂಚವೇ. ಯೆಹೋವನ ಸಾಕ್ಷಿಗಳಾದರೊ 5,300 ಮನೆಗಳನ್ನೂ ಹಲವಾರು ರಾಜ್ಯ ಸಭಾಗೃಹಗಳನ್ನೂ ಈಗಾಗಲೇ ರಿಪೇರಿಮಾಡಿದ್ದಾರೆ ಇಲ್ಲವೆ ಪುನಃ ಕಟ್ಟಿದ್ದಾರೆ. ಜನರು ಇದನ್ನು ಗಮನಿಸುತ್ತಾರೆ ಮತ್ತು ಈಗ ನಮ್ಮ ಸಂದೇಶದಲ್ಲಿ ಹಿಂದಿಗಿಂತಲೂ ಹೆಚ್ಚಿನ ಆಸಕ್ತಿಯನ್ನು ತೋರಿಸುತ್ತಾರೆ.”
14 ಪೂರ್ಣ ಸಮಯದ ಶುಶ್ರೂಷೆಯನ್ನು ನಿಮ್ಮ ಜೀವನವೃತ್ತಿಯಾಗಿ ಆಯ್ಕೆಮಾಡುವ ಮೂಲಕ ನೀವು ದೇವರ ಉದ್ದೇಶವನ್ನು ಅನುಸರಿಸಬಲ್ಲಿರೋ? ಹಾಗಿರುವಲ್ಲಿ ನೀವು ಅನೇಕ ಆಶೀರ್ವಾದಗಳನ್ನು ಪಡೆಯುವಿರಿ ನಿಶ್ಚಯ. ನಿಮ್ಮ ಸದ್ಯದ ಪರಿಸ್ಥಿತಿಗಳು ಅನುಮತಿಸದಿರುವಲ್ಲಿ, ಬಹುಶಃ ಹೊಂದಾಣಿಕೆಯನ್ನು ಮಾಡಬಹುದು. ನೆಹೆಮೀಯನು ಒಂದು ಪ್ರಮುಖ ನೇಮಕವನ್ನು ಕೈಗೆತ್ತಿಕೊಳ್ಳಲು ಹಾತೊರೆಯುತ್ತಿದ್ದಾಗ ಹೀಗೆ ಪ್ರಾರ್ಥಿಸಿದನು: ‘ಯೆಹೋವನೇ, ಇಂದು ನಿನ್ನ ಸೇವಕನಿಗೆ ವೃದ್ಧಿಯನ್ನು ಕೊಡು.’ ನೀವು ಸಹ ಹೀಗೆಯೇ ಪ್ರಾರ್ಥಿಸಬಹುದು. (ನೆಹೆಮೀಯ 1:11, NIBV) ತದನಂತರ ನೀವು, ‘ಪ್ರಾರ್ಥನೆಯನ್ನು ಕೇಳುವಾತನಲ್ಲಿ’ ಭರವಸೆಯಿಡುತ್ತಾ ನಿಮ್ಮ ವಿನಂತಿಯ ಪ್ರಕಾರ ಕ್ರಿಯೆಯನ್ನೂ ಕೈಗೊಳ್ಳಿ. (ಕೀರ್ತನೆ 65:2) ಯೆಹೋವನನ್ನು ಹೆಚ್ಚು ಪೂರ್ಣವಾಗಿ ಸೇವಿಸಲು ನೀವು ಮೊದಲು ಪ್ರಯತ್ನಗಳನ್ನು ಮಾಡಿದರೆ ಮಾತ್ರ ಆತನು ನಿಮ್ಮ ಆ ಪ್ರಯತ್ನಗಳನ್ನು ಹರಸುವನು. ಪೂರ್ಣ ಸಮಯದ ಶುಶ್ರೂಷೆಯನ್ನು ಆರಂಭಿಸಲು ಒಮ್ಮೆ ನೀವು ನಿರ್ಣಯ ಮಾಡಿದ ಮೇಲೆ ಅದಕ್ಕೆ ಅಂಟಿಕೊಳ್ಳಿರಿ. ಸಮಯ ದಾಟಿದಂತೆ ನಿಮ್ಮ ಅನುಭವ ಹೆಚ್ಚುವುದಲ್ಲದೆ ನಿಮ್ಮ ಆನಂದವೂ ವೃದ್ಧಿಯಾಗುವುದು.
ನಿಜವಾದ ಸಾರ್ಥಕ ಜೀವನ
15 ದೇವರ ಉದ್ದೇಶವನ್ನು ಅನುಸರಿಸುವುದರಿಂದ ನೀವು ಯಾವ ಫಲಿತಾಂಶಗಳನ್ನು ನಿರೀಕ್ಷಿಸಬಲ್ಲಿರಿ? ದೀರ್ಘಕಾಲದಿಂದ ಯೆಹೋವನ ಸೇವಕರಾಗಿರುವವರೊಂದಿಗೆ, ವಿಶೇಷವಾಗಿ ಅನೇಕ ವರ್ಷಗಳಿಂದ ಪೂರ್ಣ ಸಮಯದ ಶುಶ್ರೂಷೆಯಲ್ಲಿರುವವರೊಂದಿಗೆ ಮಾತಾಡಿರಿ. ಅವರ ಬದುಕು ಎಷ್ಟು ಸಮೃದ್ಧ ಹಾಗೂ ಉದ್ದೇಶಭರಿತವಾಗಿದೆ! (ಜ್ಞಾನೋಕ್ತಿ 10:22) ಕಷ್ಟಕರ ಪರಿಸ್ಥಿತಿಗಳಲ್ಲಿ ತಮಗೆ ನಿಜವಾಗಿ ಅಗತ್ಯವಿದ್ದದ್ದನ್ನು ಮತ್ತು ಅದಕ್ಕಿಂತ ಹೆಚ್ಚಿನದ್ದನ್ನೂ ಯೆಹೋವನು ತಪ್ಪದೇ ಕೊಟ್ಟಿದ್ದಾನೆಂದು ಅವರು ಹೇಳುವರು. (ಫಿಲಿಪ್ಪಿ 4:11-13) 1955ರಿಂದ 1961ರ ತನಕ ಕಾವಲಿನಬುರುಜು (ಇಂಗ್ಲಿಷ್) ಪತ್ರಿಕೆಯಲ್ಲಿ ನಂಬಿಗಸ್ತ ವ್ಯಕ್ತಿಗಳ ಜೀವನ ಕಥೆಗಳ ಸರಣಿಯನ್ನು, “ನನ್ನ ಜೀವನೋದ್ದೇಶವನ್ನು ಅನುಸರಿಸುವುದು” ಎಂಬ ಶೀರ್ಷಿಕೆಯಡಿಯಲ್ಲಿ ಪ್ರಕಾಶಿಸಲಾಯಿತು. ಅಂದಿನಿಂದ ಹಿಡಿದು, ನೂರಾರು ಇತರ ಜೀವನ ಕಥೆಗಳನ್ನು ಪ್ರಕಾಶಿಸಲಾಗಿದೆ. ಇವುಗಳಲ್ಲಿ ಪ್ರತಿಯೊಂದು ವೃತ್ತಾಂತವು, ಬೈಬಲಿನ ಅಪೊಸ್ತಲರ ಕೃತ್ಯಗಳ ಪುಸ್ತಕದಲ್ಲಿ ಕಂಡುಬರುವಂಥ ರೀತಿಯ ಹುರುಪು ಹಾಗೂ ಆನಂದದ ಆತ್ಮವನ್ನು ಪ್ರತಿಬಿಂಬಿಸುತ್ತದೆ. ಅಂಥ ಮನಸ್ಪರ್ಶಿಸುವ ಕಥೆಗಳನ್ನು ನೀವು ಓದುವಾಗ ‘ನನಗೂ ಅಂಥದ್ದೇ ಜೀವನ ಬೇಕು’ ಎಂದು ಖಂಡಿತವಾಗಿ ಹೇಳುವಿರಿ.
16 ಈ ಲೇಖನದ ಆರಂಭದಲ್ಲಿ ತಿಳಿಸಲಾದ ಏರನ್ ಜ್ಞಾಪಿಸಿಕೊಳ್ಳುವುದು: “ಆಫ್ರಿಕದಲ್ಲಿ, ಜೀವನೋದ್ದೇಶಕ್ಕಾಗಿ ಹುಡುಕುತ್ತಾ ದೇಶದಾದ್ಯಂತ ಅಲೆಯುತ್ತಿದ್ದ ಯುವ ಜನರನ್ನು ನಾನು ಅನೇಕವೇಳೆ ಭೇಟಿಯಾದೆ. ಆದರೆ ಅವರಲ್ಲಿ ಹೆಚ್ಚಿನವರಿಗೆ ಆ ಉದ್ದೇಶ ಸಿಗಲೇ ಇಲ್ಲ. ನಾವಾದರೋ, ರಾಜ್ಯದ ಸುವಾರ್ತೆಯನ್ನು ಸಾರುವುದರ ಮೂಲಕ ದೇವರ ಉದ್ದೇಶವನ್ನು ಅನುಸರಿಸುತ್ತಿದ್ದೆವು ಮತ್ತು ನಮಗೊಂದು ಪಂಥಾಹ್ವಾನದ ಹಾಗೂ ಅರ್ಥಪೂರ್ಣ ಬದುಕಿತ್ತು. ತೆಗೆದುಕೊಳ್ಳುವುದಕ್ಕಿಂತ ಕೊಡುವುದರಲ್ಲೇ ಹೆಚ್ಚಿನ ಸಂತೋಷವಿದೆ ಎಂಬುದನ್ನು ನಾವು ಪ್ರತ್ಯಕ್ಷವಾಗಿ ಅನುಭವಿಸಿದ್ದೇವೆ.”—ಅ. ಕೃತ್ಯಗಳು 20:35.
17 ನಿಮ್ಮ ಕುರಿತಾಗಿ ಏನು? ನೀವು ಯಾವ ಉದ್ದೇಶವನ್ನು ಅನುಸರಿಸುತ್ತಿದ್ದೀರಿ? ನಿಮಗೆ ಸ್ಪಷ್ಟವಾದ ಆಧ್ಯಾತ್ಮಿಕ ಗುರಿ ಇಲ್ಲದಿರುವಲ್ಲಿ, ಆ ಶೂನ್ಯ ಸ್ಥಳವನ್ನು ಇನ್ನಿತರ ಚಟುವಟಿಕೆಗಳು ಹೊಕ್ಕಿಬಿಡುವವು. ಸೈತಾನನ ವ್ಯವಸ್ಥೆಯು ಯಾವುದನ್ನು ಪ್ರಾಮುಖ್ಯವೆಂದು ಪ್ರವರ್ಧಿಸುತ್ತದೋ ಅಂಥ ವಿಷಯಗಳಲ್ಲಿ ನಿಮ್ಮ ಅಮೂಲ್ಯ ಬದುಕನ್ನು ಏಕೆ ಪೋಲುಮಾಡಬೇಕು? ಬಲುಬೇಗನೆ ‘ಮಹಾ ಸಂಕಟವು’ ಎರಗುವಾಗ ಭೌತಿಕ ಐಶ್ವರ್ಯಗಳೂ ಲೌಕಿಕ ಸ್ಥಾನಮಾನಗಳೂ ವ್ಯರ್ಥವಾಗಿಹೋಗುವವು. ಆ ಸಮಯದಲ್ಲಿ ಮುಖ್ಯ ಸಂಗತಿಯಾಗಿರುವುದು ಯೆಹೋವನೊಂದಿಗಿನ ನಮ್ಮ ಸಂಬಂಧವೇ. ನಾವು ದೇವರ ಹಾಗೂ ಇತರರ ಸೇವೆಮಾಡಿ ನಮ್ಮ ಜೀವನದಲ್ಲಿ ದೇವರ ಉದ್ದೇಶವನ್ನು ಪೂರ್ಣವಾಗಿ ಅನುಸರಿಸಿದ್ದಕ್ಕಾಗಿ ಆಗ ಎಷ್ಟು ಕೃತಜ್ಞರಾಗಿರುವೆವು!—ಮತ್ತಾಯ 24:21, 22; ಪ್ರಕಟನೆ 7:14, 15. (w07 10/1)
[ಪಾದಟಿಪ್ಪಣಿಗಳು]
a ಯೆಹೋವನ ಸಾಕ್ಷಿಗಳಿಂದ ಪ್ರಕಾಶಿತ.
b ಕೆಲವು ಹೆಸರುಗಳನ್ನು ಬದಲಾಯಿಸಲಾಗಿದೆ.
ನೀವು ವಿವರಿಸಬಲ್ಲಿರೋ?
• ನಾವು ಯೆಹೋವನಿಗೆ ಸಲ್ಲಿಸುವ ಸೇವೆಯ ಬಗ್ಗೆ ಆತನಿಗೆ ಹೇಗನಿಸುತ್ತದೆ?
• ದೇವರನ್ನು ಹಾಗೂ ಇತರರನ್ನು ಸೇವಿಸುವಂತೆ ಪ್ರಾಯೋಗಿಕತೆ ಮತ್ತು ಸಮತೋಲನ ಹೇಗೆ ಸಹಾಯ ಮಾಡುವುದು?
• ಯಾವ ಸೇವಾ ಅವಕಾಶಗಳು ನಮಗೆ ತೆರೆದಿವೆ?
• ನಿಜವಾಗಿಯೂ ಉದ್ದೇಶಭರಿತ ಜೀವನವನ್ನು ನಾವು ಈಗ ಹೇಗೆ ನಡೆಸಬಲ್ಲೆವು?
[ಅಧ್ಯಯನ ಪ್ರಶ್ನೆಗಳು]
1. ಒಬ್ಬ ಮಿಷನೆರಿಗೆ ಅವನ ನೇಮಕದಲ್ಲಾದ ಅನುಭವವನ್ನು ತಿಳಿಸಿರಿ.
2. (ಎ) ಕ್ರೈಸ್ತರು ತಮ್ಮ ಜೀವನವನ್ನು ದೇವರ ಸೇವೆಗಾಗಿ ಉಪಯೋಗಿಸಲು ಏಕೆ ದೃಢಸಂಕಲ್ಪಮಾಡಿದ್ದಾರೆ? (ಬಿ) ನಾವೀಗ ಯಾವ ಪ್ರಶ್ನೆಗಳನ್ನು ಪರಿಗಣಿಸಲಿದ್ದೇವೆ?
3. ದೇವರ ಚಿತ್ತವನ್ನು ಮಾಡುವ ಮೂಲಭೂತ ಹೆಜ್ಜೆಗಳು ಯಾವವು?
4. ನಾವು ಅನಗತ್ಯ ಚಿಂತೆಗಳನ್ನು ಹೇಗೆ ತೆಗೆದುಹಾಕಬಲ್ಲೆವು?
5. ದೇವರ ಉದ್ದೇಶವನ್ನು ಅನುಸರಿಸಲು ಜಾಗ್ರತೆಯ ಯೋಜನೆ ಏಕೆ ಅಗತ್ಯ? ದೃಷ್ಟಾಂತಿಸಿರಿ.
6. ನಮ್ಮ ಜೀವನವನ್ನು ದೇವರ ಉದ್ದೇಶಕ್ಕೆ ಹೊಂದಿಕೆಯಲ್ಲಿ ತರಬಹುದಾದ ವಿಧವನ್ನು ಯಾವ ಉದಾಹರಣೆ ತೋರಿಸುತ್ತದೆ?
7. ದೇವರ ಕೆಲಸವನ್ನು ಮಾಡುವುದರಲ್ಲಿ ನಾವೇಕೆ ಸಮತೋಲನದಿಂದಿರಬೇಕು?
8. ಒಬ್ಬ ಯುವ ಕ್ರೈಸ್ತಳು ಯೆಹೋವನಿಗೂ ಲೋಕಕ್ಕೂ ತನ್ನ ಸರ್ವೋತ್ಕೃಷ್ಟವನ್ನು ಕೊಡಲು ಪ್ರಯತ್ನಿಸಿದಾಗ ಏನಾಯಿತು, ಮತ್ತು ಅವಳು ಯಾವ ಹೊಂದಾಣಿಕೆಯನ್ನು ಮಾಡಿದಳು?
9. ನಮ್ಮ ಪ್ರಯತ್ನಗಳು ಕ್ಷೇತ್ರದಲ್ಲಿರುವ ಜನರ ಮೇಲೆ ಹೇಗೆ ಪರಿಣಾಮಬೀರಬಹುದು?
10. ಸಭೆಯಲ್ಲಿ ಎಲ್ಲರಿಗೂ ಯಾವ ಅವಕಾಶಗಳು ಇವೆ?
11. ಸ್ಥಳಿಕ ಸಭೆಯಿಂದಾಚೆ ನಿಮಗೆ ಯಾವ ಅವಕಾಶಗಳು ಇರಬಹುದು?
12, 13. (ಎ) ಯಾವ ಸೇವಾ ಅವಕಾಶಗಳನ್ನು ಅನುಸರಿಸಬೇಕೆಂದು ನೀವು ಹೇಗೆ ನಿರ್ಣಯಿಸಬಲ್ಲಿರಿ? (ಬಿ) ಒಂದು ನೇಮಕದಲ್ಲಿ ಪಡೆದಿರುವ ಅನುಭವವು ಇತರ ನೇಮಕಗಳಲ್ಲಿ ಹೇಗೆ ಉಪಯುಕ್ತವಾಗಿರಬಲ್ಲದು ಎಂಬುದನ್ನು ದೃಷ್ಟಾಂತಿಸಿರಿ.
14. ನೀವು ಪೂರ್ಣ ಸಮಯದ ಶುಶ್ರೂಷೆಯನ್ನು ಜೀವನವೃತ್ತಿಯಾಗಿ ಅನುಸರಿಸಲು ಬಯಸುವುದಾದರೆ ಏನು ಮಾಡಸಾಧ್ಯವಿದೆ?
15. (ಎ) ದೀರ್ಘಕಾಲದಿಂದ ದೇವರ ಸೇವಕರಾಗಿರುವವರೊಂದಿಗೆ ಮಾತಾಡುವುದರಿಂದ ಮತ್ತು ಅವರ ಕುರಿತು ಓದುವುದರಿಂದ ನಾವು ಹೇಗೆ ಪ್ರಯೋಜನ ಪಡೆಯಬಲ್ಲೆವು? (ಬಿ) ನಿಮ್ಮನ್ನು ವಿಶೇಷವಾಗಿ ಉತ್ತೇಜಿಸಿದಂಥ ಒಂದು ಜೀವನ ಕಥೆಯನ್ನು ತಿಳಿಸಿರಿ.
16. ಕ್ರೈಸ್ತನೊಬ್ಬನ ಜೀವನವು ಉದ್ದೇಶಭರಿತವೂ ಸಂತೋಷಭರಿತವೂ ಆಗುವುದು ಹೇಗೆ?
17. ನಾವು ಈಗ ದೇವರ ಉದ್ದೇಶವನ್ನು ಏಕೆ ಅನುಸರಿಸುತ್ತಿರಬೇಕು?
[ಪುಟ 24ರಲ್ಲಿರುವ ಚಿತ್ರಗಳು]
ಯೆಹೋವನನ್ನು ಪೂರ್ಣಪ್ರಾಣದಿಂದ ಸೇವಿಸುತ್ತಾ ಇರಲು ಸಮತೋಲನ ಅಗತ್ಯ
[ಪುಟ 25ರಲ್ಲಿರುವ ಚಿತ್ರಗಳು]
ಪವಿತ್ರ ಸೇವೆಯ ಹಲವಾರು ವಿಧಗಳು