ಯೆಹೋವನ ದಿನಕ್ಕಾಗಿ ನೀವು ಸಿದ್ಧರಾಗಿದ್ದೀರೋ?
“ಯೆಹೋವನ ಮಹಾದಿನವು ಹತ್ತಿರವಾಯಿತು, ಸಮೀಪಿಸಿತು, ಬಹು ತ್ವರೆಯಾಗಿ ಬರುತ್ತಿದೆ.”—ಚೆಫನ್ಯ 1:14.
ಯೆಹೋವನ ಮಹಾ ದಿನವು 24 ತಾಸುಗಳ ಒಂದು ದಿನವಲ್ಲ. ಬದಲಿಗೆ ಯೆಹೋವನು ದುಷ್ಟರ ಮೇಲೆ ತನ್ನ ತೀರ್ಪನ್ನು ಜಾರಿಗೆತರುವ ಒಂದು ದೀರ್ಘ ಸಮಯಾವಧಿ ಅದಾಗಿದೆ. ಕತ್ತಲೆ, ರೌದ್ರ, ಶ್ರಮಸಂಕಟ ಹಾಗೂ ಹಾಳುಪಾಳುಮಾಡುವ ಆ ದಿನದ ಬಗ್ಗೆ ಭಕ್ತಿಹೀನರು ಹೆದರಲು ಕಾರಣವಿದೆ. (ಯೆಶಾಯ 13:9; ಆಮೋಸ 5:18-20; ಚೆಫನ್ಯ 1:15) ಯೋವೇಲನ ಪ್ರವಾದನೆ ಹೇಳುವುದು: “ಯೆಹೋವನ ದಿನವು ಸಮೀಪಿಸಿತು; ಅಯ್ಯೋ, ದಿನವೇ! ಅದು ಸರ್ವಶಕ್ತನಿಂದ ನಾಶನದಿನವಾಗಿಯೇ ಬರುವದು.” (ಯೋವೇಲ 1:15) ಆದರೆ ಆ ಮಹಾ ದಿನದಂದು ದೇವರು “ಯಥಾರ್ಥ” ಜನರ ರಕ್ಷಕನಾಗಿರುವನು.—ಕೀರ್ತನೆ 7:10.
2 “ಯೆಹೋವನ ದಿನ” ಎಂಬ ಅಭಿವ್ಯಕ್ತಿಯು ವಿಭಿನ್ನ ಸಮಯಗಳಲ್ಲಿ ದೇವರ ತೀರ್ಪಿನ ಜಾರಿಗೊಳಿಸುವಿಕೆಗೆ ಅನ್ವಯಿಸುತ್ತದೆ. ಉದಾಹರಣೆಗೆ, “ಯೆಹೋವನ ದಿನ” ಮೊದಲ ಬಾರಿ ಸಾ.ಶ.ಪೂ. 607ರಲ್ಲಿ ಯೆರೂಸಲೇಮಿನ ನಿವಾಸಿಗಳ ಮೇಲೆ ಬಂತು. (ಚೆಫನ್ಯ 1:4-7) ಇದೇ ರೀತಿಯ ದೇವರ ತೀರ್ಪು ಸಾ.ಶ. 70ರಲ್ಲೂ ಜಾರಿಗೆಬಂತು. ಆ ಸಮಯದಲ್ಲಿ ದೇವರು, ತನ್ನ ಕುಮಾರನನ್ನು ತಿರಸ್ಕರಿಸಿದ್ದ ಯೆಹೂದಿ ಜನಾಂಗದ ಮೇಲೆ ತೀರ್ಪನ್ನು ಜಾರಿಗೊಳಿಸಲಿಕ್ಕಾಗಿ ರೋಮನರನ್ನು ಬಳಸಿದನು. (ದಾನಿಯೇಲ 9:24-27; ಯೋಹಾನ 19:15) ಬೈಬಲು ಮುಂತಿಳಿಸುವಂಥ ಇನ್ನೊಂದು “ಯೆಹೋವನ ದಿನ”ದಲ್ಲಿ ಆತನು ಸಕಲ ‘ಜನಾಂಗಗಳ ಸಂಗಡ ಕಾದಾಡುವನು.’ (ಜೆಕರ್ಯ 14:1-3, NIBV) ಪವಿತ್ರಾತ್ಮದಿಂದ ಪ್ರೇರಿತನಾಗಿ ಅಪೊಸ್ತಲ ಪೌಲನು ಈ ದಿನವನ್ನು ಯೇಸು 1914ರಲ್ಲಿ ಸ್ವರ್ಗೀಯ ರಾಜನಾಗಿ ಸಿಂಹಾಸನಾರೂಢನಾದಾಗ ಆರಂಭವಾದ ಕ್ರಿಸ್ತನ ಸಾನ್ನಿಧ್ಯದೊಂದಿಗೆ ಜೋಡಿಸಿದನು. (2 ಥೆಸಲೊನೀಕ 2:1, 2) ಯೆಹೋವನ ದಿನವು ಹೊಸ್ತಿಲಲ್ಲೇ ಇರುವುದರಿಂದ ಯೆಹೋವನ ಸಾಕ್ಷಿಗಳ 2007ರ ವರ್ಷವಚನವಾದ “ಯೆಹೋವನ ಮಹಾದಿನವು ಹತ್ತಿರವಾಯಿತು” ಎಂಬ ಚೆಫನ್ಯ 1:14ರ ಮಾತುಗಳು ವಿಶೇಷವಾಗಿ ಸೂಕ್ತವಾಗಿದ್ದವು.
3 ದೇವರ ಮಹಾ ದಿನವು ಹತ್ತಿರವಿರುವುದರಿಂದ, ನೀವು ಸಿದ್ಧರಾಗಿದ್ದೀರೆಂದು ತೋರಿಸಿಕೊಳ್ಳುವ ಸಮಯ ಇದೇ ಆಗಿದೆ. ಆ ದಿನಕ್ಕಾಗಿ ನೀವು ಹೇಗೆ ಸಿದ್ಧತೆಗಳನ್ನು ಮಾಡಬಲ್ಲಿರಿ? ಯೆಹೋವನ ದಿನಕ್ಕೆ ಸಿದ್ಧರಾಗಲಿಕ್ಕಾಗಿ ನೀವು ಇನ್ಯಾವ ಹೆಚ್ಚಿನ ಕ್ರಮಗಳನ್ನು ತೆಗೆದುಕೊಳ್ಳಬೇಕು?
ಸಿದ್ಧವಾಗಿರ್ರಿ
4 ಯೇಸು ಕ್ರಿಸ್ತನು, ವಿಷಯಗಳ ವ್ಯವಸ್ಥೆಯ ಸಮಾಪ್ತಿಯ ಕುರಿತಾಗಿ ಕೊಟ್ಟ ಪ್ರವಾದನೆಯಲ್ಲಿ ತನ್ನ ಶಿಷ್ಯರಿಗೆ “ಸಿದ್ಧವಾಗಿರ್ರಿ” ಎಂದು ಹೇಳಿದನು. (ಮತ್ತಾಯ 24:44) ಆ ಹೇಳಿಕೆಯನ್ನು ಮಾಡಿದಾಗ ಅವನೇ ಒಂದು ಕಠಿನ ಪರೀಕ್ಷೆಗಾಗಿ, ಅಂದರೆ ವಿಮೋಚನಾ ಮೌಲ್ಯದ ಯಜ್ಞವಾಗಿ ಸಾಯುವುದಕ್ಕೆ ಸಿದ್ಧನಾಗಿದ್ದನು. (ಮತ್ತಾಯ 20:28) ಇದಕ್ಕಾಗಿ ಯೇಸು ತನ್ನನ್ನು ಸಿದ್ಧಗೊಳಿಸಿದ ರೀತಿಯಿಂದ ನಾವೇನು ಕಲಿಯಬಲ್ಲೆವು?
5 ಯೆಹೋವನನ್ನು ಹಾಗೂ ಆತನ ನೀತಿಭರಿತ ಮಟ್ಟಗಳನ್ನು ಯೇಸು ಪೂರ್ಣಹೃದಯದಿಂದ ಪ್ರೀತಿಸಿದನು. ಅವನ ಬಗ್ಗೆ ಇಬ್ರಿಯ 1:9 ತಿಳಿಸುವುದು: “ನೀನು ಧರ್ಮವನ್ನು ಪ್ರೀತಿಸಿದಿ, ಅಧರ್ಮವನ್ನು ದ್ವೇಷಿಸಿದಿ; ಆದದರಿಂದ ದೇವರು, ನಿನ್ನ ದೇವರೇ, ನಿನ್ನನ್ನು ನಿನ್ನ ಜೊತೆಗಾರರಿಗಿಂತ ಉನ್ನತಸ್ಥಾನಕ್ಕೆ ಏರಿಸಿ ಪರಮಾನಂದತೈಲದಿಂದ ಅಭಿಷೇಕಿಸಿದ್ದಾನೆ.” ಯೇಸು ತನ್ನ ಸ್ವರ್ಗೀಯ ತಂದೆಯನ್ನು ಪ್ರೀತಿಸಿದ್ದರಿಂದಲೇ ಸಮಗ್ರತೆ ತೋರಿಸಿದನು. ನಮಗೂ ದೇವರ ಮೇಲೆ ಅದೇ ರೀತಿಯ ಪ್ರೀತಿ ಇದ್ದು ನಾವಾತನ ಆವಶ್ಯಕತೆಗಳಿಗೆ ಹೊಂದಿಕೆಯಲ್ಲಿ ಜೀವಿಸುವಲ್ಲಿ ಆತನು ನಮ್ಮನ್ನು ಕಾಪಾಡುವನು. (ಕೀರ್ತನೆ 31:23) ಅಂಥ ಪ್ರೀತಿ ಹಾಗೂ ವಿಧೇಯತೆಯು ನಾವು ಯೆಹೋವನ ಮಹಾ ದಿನಕ್ಕಾಗಿ ಸಿದ್ಧರಾಗಿರುವಂತೆ ಸಹಾಯ ಮಾಡುವುದು.
6 ಜನರ ಮೇಲಣ ಪ್ರೀತಿಯು ಯೇಸುವಿನ ವ್ಯಕ್ತಿತ್ವದ ಪ್ರಮುಖ ಲಕ್ಷಣವಾಗಿತ್ತು. ಹೌದು, ಆತನು “ಜನರ ಗುಂಪುಗಳನ್ನು ನೋಡಿ ಅವರು ಕುರುಬನಿಲ್ಲದ ಕುರಿಗಳ ಹಾಗೆ ತೊಳಲಿ ಬಳಲಿ ಹೋಗಿದ್ದಾರಲ್ಲ ಎಂದು ಅವರ ಮೇಲೆ ಕನಿಕರಪಟ್ಟನು.” (ಮತ್ತಾಯ 9:36) ಆದ್ದರಿಂದ ಯೇಸು ಜನರಿಗೆ ಸುವಾರ್ತೆಯನ್ನು ಸಾರಿದನು. ಇಂದು ಅದೇ ಪ್ರೀತಿಯು ನಾವು ಸಹ ನಮ್ಮ ನೆರೆಯವರಿಗೆ ರಾಜ್ಯ ಸಂದೇಶವನ್ನು ಘೋಷಿಸುವಂತೆ ಪ್ರಚೋದಿಸುತ್ತದೆ. ದೇವರ ಮೇಲೆ ಮತ್ತು ನಮ್ಮ ನೆರೆಯವರ ಮೇಲೆ ಪ್ರೀತಿಯು ನಾವು ಕ್ರೈಸ್ತ ಶುಶ್ರೂಷಕರಾಗಿ ಕ್ರಿಯಾಶೀಲರಾಗಿರುವಂತೆ ಮಾಡುತ್ತದೆ ಮತ್ತು ಹೀಗೆ ನಾವು ಯೆಹೋವನ ಮಹಾ ದಿನಕ್ಕಾಗಿ ಸಿದ್ಧರಾಗಲು ಸಹಾಯ ಮಾಡುತ್ತದೆ.—ಮತ್ತಾಯ 22:37-39.
7 ಯೆಹೋವನ ಚಿತ್ತ ಮಾಡಲು ಯೇಸು ಹರ್ಷಿಸಿದನು. (ಕೀರ್ತನೆ 40:8) ನಮಗೂ ಅದೇ ರೀತಿಯ ಮನೋಭಾವ ಇರುವಲ್ಲಿ ದೇವರಿಗೆ ಪವಿತ್ರ ಸೇವೆ ಸಲ್ಲಿಸಲು ನಾವು ಆನಂದಿಸುವೆವು. ಯೇಸುವಿನಂತೆ ನಾವು ನಿಸ್ವಾರ್ಥವಾಗಿ ಕೊಡುವವರಾಗಿರುವೆವು ಮತ್ತು ಇದು ನಮಗೆ ನಿಜ ಸಂತೋಷವನ್ನು ಕೊಡುವುದು. (ಅ. ಕೃತ್ಯಗಳು 20:35) ಹೌದು, “ಯೆಹೋವನ ಆನಂದವೇ [ನಮ್ಮ] ಆಶ್ರಯವಾಗಿದೆ.” ಆ ಆನಂದದಿಂದಾಗಿ ನಾವು ದೇವರ ಮಹಾ ದಿನಕ್ಕಾಗಿ ಹೆಚ್ಚು ಉತ್ತಮವಾಗಿ ಸಿದ್ಧರಾಗಿರುವೆವು.—ನೆಹೆಮೀಯ 8:10.
8 ಯೇಸು ಮಾಡಿದ ಕಟ್ಟಾಸಕ್ತಿಯ ಪ್ರಾರ್ಥನೆಗಳು, ನಂಬಿಕೆಯ ಪರೀಕ್ಷೆಗಳಿಗೆ ಸಿದ್ಧನಾಗಲು ಅವನಿಗೆ ಸಹಾಯ ಮಾಡಿದವು. ಯೋಹಾನನು ಅವನಿಗೆ ದೀಕ್ಷಾಸ್ನಾನ ಕೊಡುತ್ತಿದ್ದಾಗ ಅವನು ಪ್ರಾರ್ಥನೆ ಮಾಡುತ್ತಿದ್ದನು. ಯೇಸು ತನ್ನ ಅಪೊಸ್ತಲರನ್ನು ಆಯ್ಕೆಮಾಡುವ ಮುಂಚೆ ಇಡೀ ರಾತ್ರಿ ಪ್ರಾರ್ಥಿಸಿದನು. (ಲೂಕ 6:12-16) ಮತ್ತು ತನ್ನ ಭೂಜೀವಿತದ ಕೊನೆ ರಾತ್ರಿಯಂದು ಯೇಸು ಮಾಡಿದ ಮನಃಪೂರ್ವಕ ಪ್ರಾರ್ಥನೆಗಳನ್ನು ಓದುವಾಗ ಯಾವ ಬೈಬಲ್ ವಾಚಕನು ಪ್ರಭಾವಿತನಾಗನು? (ಮಾರ್ಕ 14:32-42; ಯೋಹಾನ 17:1-26) ಯೇಸುವಿನಂತೆ ನೀವು ಸಹ ಸದಾ ಪ್ರಾರ್ಥಿಸುವ ವ್ಯಕ್ತಿ ಆಗಿದ್ದೀರೋ? ಹೆಚ್ಚೆಚ್ಚು ಸಲ ಯೆಹೋವನನ್ನು ಗೋಚರಿಸಿ, ಪ್ರಾರ್ಥನೆಯಲ್ಲಿ ನಿರತರಾಗಿರಿ, ಪವಿತ್ರಾತ್ಮದ ನಿರ್ದೇಶನಕ್ಕಾಗಿ ಬಿನ್ನೈಸಿರಿ ಮತ್ತು ನಿಮಗೆ ಮಾರ್ಗದರ್ಶನ ಸಿಗುತ್ತಿದೆಯೆಂದು ವ್ಯಕ್ತವಾಗುವಾಗ ಅದನ್ನು ಕೂಡಲೇ ಸ್ವೀಕರಿಸಿರಿ. ದೇವರ ಮಹಾ ದಿನವು ಧಾವಿಸಿ ಬರುತ್ತಿರುವ ಈ ಸಂದಿಗ್ಧ ಸಮಯದಲ್ಲಿ ನಮ್ಮ ಸ್ವರ್ಗೀಯ ತಂದೆಯೊಂದಿಗೆ ಬಲವಾದ ಸಂಬಂಧವು ಅತ್ಯಾವಶ್ಯಕ. ಆದುದರಿಂದ ಪ್ರಾರ್ಥನೆಯಲ್ಲಿ ಯೆಹೋವನಿಗೆ ಹೆಚ್ಚೆಚ್ಚು ಸಮೀಪವಾಗಲು ಹಿಂಜರಿಯದಿರ್ರಿ.—ಯಾಕೋಬ 4:8.
9 ಯೆಹೋವನ ಪರಿಶುದ್ಧ ನಾಮದ ಪವಿತ್ರೀಕರಣದ ಬಗ್ಗೆ ಯೇಸುವಿಗಿದ್ದ ಆಸಕ್ತಿ ಸಹ, ಆತನು ಸಂಕಷ್ಟಗಳನ್ನು ಎದುರಿಸಲು ಸಿದ್ಧನಾಗಿರುವಂತೆ ಆತನಿಗೆ ಸಹಾಯ ಮಾಡಿತು. ಆತನು ತನ್ನ ಹಿಂಬಾಲಕರಿಗೆ ತಮ್ಮ ಪ್ರಾರ್ಥನೆಗಳಲ್ಲಿ ಈ ವಿನಂತಿಯನ್ನೂ ಸೇರಿಸುವಂತೆ ಕಲಿಸಿದನು: “ನಿನ್ನ ನಾಮವು ಪರಿಶುದ್ಧವೆಂದು ಎಣಿಸಲ್ಪಡಲಿ.” (ಮತ್ತಾಯ 6:10) ಯೆಹೋವನ ಹೆಸರು ಪವಿತ್ರೀಕರಿಸಲ್ಪಡಬೇಕು ಇಲ್ಲವೇ ಪರಿಶುದ್ಧವೆಂದೆಣಿಸಲ್ಪಡಬೇಕು ಎಂಬ ಗಾಢ ಅಪೇಕ್ಷೆ ನಮಗಿರುವಲ್ಲಿ, ಆ ಹೆಸರಿಗೆ ಕಳಂಕ ತರುವಂಥ ಯಾವುದೇ ಕೆಲಸದಿಂದ ದೂರವಿರಲು ನಾವು ಪ್ರಯಾಸಪಡುವೆವು. ಫಲಿತಾಂಶವಾಗಿ ನಾವು ಯೆಹೋವನ ಮಹಾ ದಿನಕ್ಕಾಗಿ ಹೆಚ್ಚು ಉತ್ತಮ ರೀತಿಯಲ್ಲಿ ಸಿದ್ಧರಾಗಿರುವೆವು.
ನೀವು ಕೆಲವು ಬದಲಾವಣೆ ಮಾಡಬೇಕೋ?
10 ಒಂದುವೇಳೆ ಯೆಹೋವನ ದಿನ ನಾಳೆಯೇ ಬಂದರೆ ನೀವು ಅದಕ್ಕಾಗಿ ನಿಜವಾಗಿ ಸಿದ್ಧರಾಗಿರುವಿರೋ? ನಮ್ಮ ಯಾವುದೇ ಕ್ರಿಯೆಗಳನ್ನಾಗಲಿ, ನಮಗಿರುವ ಯಾವುದೇ ಮನೋಭಾವಗಳನ್ನಾಗಲಿ ಸರಿಹೊಂದಿಸಬೇಕೊ ಎಂದು ನಮ್ಮಲ್ಲಿ ಪ್ರತಿಯೊಬ್ಬರೂ ಪರಿಶೀಲಿಸುವುದು ಉತ್ತಮ. ಸದ್ಯದ ಜೀವನದ ಅಲ್ಪಾವಧಿ ಹಾಗೂ ಅನಿಶ್ಚಿತತೆಯನ್ನು ಮನಸ್ಸಿನಲ್ಲಿಟ್ಟು, ನಮ್ಮಲ್ಲಿ ಪ್ರತಿಯೊಬ್ಬರೂ ಪ್ರತಿದಿನ ಆಧ್ಯಾತ್ಮಿಕವಾಗಿ ಎಚ್ಚರವಾಗಿರಬೇಕು. (ಪ್ರಸಂಗಿ 9:11, 12; ಯಾಕೋಬ 4:13-15) ಆದುದರಿಂದ ನಮ್ಮ ಜೀವನದಲ್ಲಿ ನಾವು ಗಮನಕೊಡಬೇಕಾದ ಕೆಲವೊಂದು ಅಂಶಗಳನ್ನು ಪರಿಗಣಿಸೋಣ.
11 ಒಂದು ಮುಖ್ಯ ಅಂಶವು, ‘ನಂಬಿಗಸ್ತ ಆಳು’ ಬುದ್ಧಿವಾದಕೊಡುವಂತೆ ಬೈಬಲನ್ನು ದಿನಾಲೂ ಓದುವುದೇ ಆಗಿದೆ. (ಮತ್ತಾಯ 24:45) ಪ್ರತಿ ವರ್ಷ ಇಡೀ ಬೈಬಲನ್ನು ಆದಿಕಾಂಡದಿಂದ ಹಿಡಿದು ಪ್ರಕಟನೆಯ ವರೆಗೆ ಧ್ಯಾನಪೂರ್ವಕವಾಗಿ ಒಮ್ಮೆಯಾದರೂ ಓದುವುದನ್ನು ನಿಮ್ಮ ಗುರಿಯಾಗಿ ಮಾಡಿರಿ. ಪ್ರತಿ ದಿನ ನಾಲ್ಕು ಅಧ್ಯಾಯಗಳನ್ನು ಓದಿದರೆ, ಒಂದು ವರ್ಷದೊಳಗೆ ಬೈಬಲಿನ ಒಟ್ಟು 1,189 ಅಧ್ಯಾಯಗಳನ್ನು ಓದಬಹುದು. ಇಸ್ರಾಯೇಲಿನ ಪ್ರತಿಯೊಬ್ಬ ರಾಜನು “ತನ್ನ ಜೀವಮಾನದ ದಿನಗಳೆಲ್ಲಾ” ಯೆಹೋವನ ಧರ್ಮಶಾಸ್ತ್ರವನ್ನು ಓದಬೇಕಿತ್ತು. ಯೆಹೋಶುವನು ಸಹ ಇದನ್ನೇ ಮಾಡಿದನೆಂಬುದು ವ್ಯಕ್ತ. (ಧರ್ಮೋಪದೇಶಕಾಂಡ 17:14-20; ಯೆಹೋಶುವ 1:7, 8) ಆಧ್ಯಾತ್ಮಿಕ ಕುರಿಪಾಲರು ದೇವರ ವಾಕ್ಯವನ್ನು ದಿನಾಲೂ ಓದುವುದು ಎಷ್ಟು ಪ್ರಾಮುಖ್ಯ! ಅವರು ‘ಸ್ವಸ್ಥಬೋಧನೆ’ ಮಾಡುವಂತೆ ಇದು ಸಹಾಯ ಮಾಡುವುದು.—ತೀತ 2:1.
12 ಯೆಹೋವನ ದಿನದ ಸಾಮೀಪ್ಯವು, ನೀವು ಕ್ರೈಸ್ತ ಕೂಟಗಳಿಗೆ ಕ್ರಮವಾಗಿ ಹಾಜರಾಗುವಂತೆ ಮತ್ತು ಅವುಗಳಲ್ಲಿ ಸಾಧ್ಯವಿರುವಷ್ಟು ಪೂರ್ಣ ರೀತಿಯಲ್ಲಿ ಪಾಲ್ಗೊಳ್ಳುವಂತೆ ಪ್ರಚೋದಿಸಬೇಕು. (ಇಬ್ರಿಯ 10:24, 25) ಇದು, ನಿತ್ಯಜೀವಕ್ಕೆ ನೇಮಿಸಲ್ಪಟ್ಟವರನ್ನು ಹುಡುಕಿ, ಅವರಿಗೆ ಸಹಾಯ ಮಾಡುವ ಒಬ್ಬ ರಾಜ್ಯ ಘೋಷಕರಾಗಿ ನಿಮ್ಮ ಕೌಶಲಗಳನ್ನು ಇನ್ನಷ್ಟು ಉತ್ತಮಗೊಳಿಸುವುದು. (ಅ. ಕೃತ್ಯಗಳು 13:48) ಬಹುಶಃ ಸಭೆಯಲ್ಲಿ ನೀವು ಇತರ ವಿಧಗಳಲ್ಲೂ, ಉದಾಹರಣೆಗೆ ವೃದ್ಧರಿಗೆ ಸಹಾಯ ಮಾಡುವುದು ಇಲ್ಲವೇ ಯುವಜನರನ್ನು ಉತ್ತೇಜಿಸುವುದರಲ್ಲಿ ಸಹ ಹೆಚ್ಚು ಸಕ್ರಿಯರಾಗಿರಸಾಧ್ಯವಿದೆ. ಈ ಚಟುವಟಿಕೆಗಳು ನಿಮಗೆ ಎಷ್ಟೊಂದು ತೃಪ್ತಿ ತರಬಲ್ಲವು!
ಇತರರೊಂದಿಗಿನ ನಿಮ್ಮ ಸಂಬಂಧ
13 ಯೆಹೋವನ ದಿನವು ಸಮೀಪವಾಗಿರುವುದರಿಂದ, ‘ದೇವರ ಹೋಲಿಕೆಯ ಮೇರೆಗೆ ಸತ್ಯಾನುಗುಣವಾದ ನೀತಿಯುಳ್ಳದ್ದಾಗಿಯೂ ದೇವಭಯವುಳ್ಳದ್ದಾಗಿಯೂ ನಿರ್ಮಿಸಲ್ಪಟ್ಟಿರುವ ನೂತನ ಸ್ವಭಾವವನ್ನು ಧರಿಸಿಕೊಳ್ಳಲು’ ನೀವು ಇನ್ನೂ ಹೆಚ್ಚಿನ ಪ್ರಯತ್ನ ಮಾಡುವ ಅಗತ್ಯವಿದೆಯೋ? (ಎಫೆಸ 4:20-24) ನೀವು ದೈವಿಕ ಗುಣಗಳನ್ನು ಬೆಳೆಸುತ್ತಾ ಹೋದಂತೆ ‘ಪವಿತ್ರಾತ್ಮವನ್ನು ಅನುಸರಿಸಿ ನಡೆದುಕೊಂಡು’ ಅದರ ಫಲವನ್ನು ತೋರಿಸುತ್ತಿರುವುದು ಇತರರ ಗಮನಕ್ಕೆ ಬರುವುದು. (ಗಲಾತ್ಯ 5:16, 22-25) ನೀವೂ ನಿಮ್ಮ ಕುಟುಂಬವೂ ನೂತನ ಸ್ವಭಾವವನ್ನು ಧರಿಸಿಕೊಂಡಿದ್ದೀರೆಂದು ತೋರಿಸುವ ನಿರ್ದಿಷ್ಟ ಕೃತ್ಯಗಳನ್ನು ತಿಳಿಸಬಲ್ಲಿರೋ? (ಕೊಲೊಸ್ಸೆ 3:9, 10) ಉದಾಹರಣೆಗಾಗಿ, ಜೊತೆ ವಿಶ್ವಾಸಿಗಳಿಗೂ ಹೊರಗಿನವರಿಗೂ ಉಪಕಾರ ಕೃತ್ಯಗಳನ್ನು ಮಾಡುವವರೆಂಬ ಹೆಸರು ನಿಮಗಿದೆಯೋ? (ಗಲಾತ್ಯ 6:10) ಬೈಬಲನ್ನು ಕ್ರಮವಾಗಿ ಅಧ್ಯಯನ ಮಾಡುವುದರಿಂದ, ಯೆಹೋವನ ದಿನಕ್ಕಾಗಿ ನಿಮ್ಮನ್ನು ಸಿದ್ಧಗೊಳಿಸುವ ದೈವಿಕ ಗುಣಗಳನ್ನು ಬೆಳೆಸಲು ನಿಮಗೆ ಸಹಾಯ ಸಿಗುವುದು.
14 ನೀವು ಮುಂಗೋಪಿಗಳೋ, ನಿಮಗೆ ಬೇಗನೆ ಸಿಟ್ಟುಬರುತ್ತದೋ? ಇನ್ನಷ್ಟು ಸ್ವನಿಯಂತ್ರಣದ ಅಗತ್ಯವಿದೆ ಎಂದು ನಿಮಗನಿಸುತ್ತದೋ? ದೇವರ ಪವಿತ್ರಾತ್ಮ ನಿಮ್ಮಲ್ಲಿ ಬೆಳೆಸಬಹುದಾದ ಫಲಗಳಲ್ಲಿ ಸ್ವನಿಯಂತ್ರಣ ಒಂದಾಗಿದೆ. ಆದುದರಿಂದ ಯೇಸುವಿನ ಈ ಮಾತುಗಳಿಗೆ ಹೊಂದಿಕೆಯಲ್ಲಿ ಪವಿತ್ರಾತ್ಮಕ್ಕಾಗಿ ಪ್ರಾರ್ಥಿಸಿರಿ: “ಬೇಡಿಕೊಳ್ಳಿರಿ, ನಿಮಗೆ ದೊರೆಯುವದು; ಹುಡುಕಿರಿ, ನಿಮಗೆ ಸಿಕ್ಕುವದು, ತಟ್ಟಿರಿ, ನಿಮಗೆ ತೆರೆಯುವದು. . . . ಕೆಟ್ಟವರಾದ ನೀವು ನಿಮ್ಮ ಮಕ್ಕಳಿಗೆ ಒಳ್ಳೇ ಪದಾರ್ಥಗಳನ್ನು ಕೊಡಬಲ್ಲವರಾದರೆ ಪರಲೋಕದಲ್ಲಿರುವ ನಿಮ್ಮ ತಂದೆಯು ತನ್ನನ್ನು ಬೇಡಿಕೊಳ್ಳುವವರಿಗೆ ಎಷ್ಟೋ ಹೆಚ್ಚಾಗಿ ಪವಿತ್ರಾತ್ಮವರವನ್ನು ಕೊಡುವನಲ್ಲವೇ.”—ಲೂಕ 11:9-13.
15 ನಿಮ್ಮ ಹಾಗೂ ಜೊತೆ ವಿಶ್ವಾಸಿಯೊಬ್ಬರ ನಡುವೆ ಮನಸ್ತಾಪವಿದೆ ಎಂದಿಟ್ಟುಕೊಳ್ಳಿ. ಆ ಒಡಕನ್ನು ಸರಿಪಡಿಸಲಿಕ್ಕಾಗಿ ನಿಮ್ಮಿಂದಾಗುವ ಎಲ್ಲ ಪ್ರಯತ್ನ ಮಾಡಿ. ಇದು ಸಭೆಯಲ್ಲಿನ ಸಮಾಧಾನ ಹಾಗೂ ಐಕ್ಯಕ್ಕೆ ಇಂಬುಕೊಡುವುದು. (ಕೀರ್ತನೆ 133:1-3) ಮತ್ತಾಯ 5:23, 24 ಇಲ್ಲವೇ ಮತ್ತಾಯ 18:15-17ರಲ್ಲಿ ದಾಖಲಾಗಿರುವ ಯೇಸುವಿನ ಸಲಹೆಯನ್ನು ಅನ್ವಯಿಸಿರಿ. ಸೂರ್ಯನು ಮುಳುಗಿದ ಮೇಲೂ ನಿಮ್ಮ ಸಿಟ್ಟು ಮುಂದುವರಿಯುವಂತೆ ನೀವು ಈ ವರೆಗೆ ಬಿಡುತ್ತಿದ್ದಲ್ಲಿ ತ್ವರೆಪಟ್ಟು ನಿಮ್ಮನ್ನು ತಿದ್ದಿಕೊಳ್ಳಿ. ಹೆಚ್ಚಾಗಿ ಸಮಸ್ಯೆಯನ್ನು ಬಗೆಹರಿಸಲು ಬೇಕಾಗಿರುವಂಥದ್ದು ಕ್ಷಮಿಸಲಿಕ್ಕಾಗಿರುವ ಸಿದ್ಧಮನಸ್ಸೇ. ಪೌಲನು ಬರೆದುದು: “ಒಬ್ಬರಿಗೊಬ್ಬರು ಉಪಕಾರಿಗಳಾಗಿಯೂ ಕರುಣೆಯುಳ್ಳವರಾಗಿಯೂ ಕ್ಷಮಿಸುವವರಾಗಿಯೂ ಇರ್ರಿ. ದೇವರು ನಿಮಗೆ ಕ್ರಿಸ್ತನಲ್ಲಿ ಕ್ಷಮಿಸಿದನಲ್ಲಾ. ಆದದರಿಂದ ದೇವರ ಪ್ರಿಯರಾದ ಮಕ್ಕಳಿಗೆ ತಕ್ಕ ಹಾಗೆ ಆತನನ್ನು ಅನುಸರಿಸುವವರಾಗಿರಿ.”—ಎಫೆಸ 4:25, 26, 32; 5:1.
16 ದಾಂಪತ್ಯದಲ್ಲಿ ಗಂಡಹೆಂಡರಿಬ್ಬರೂ ಕೋಮಲ ಕರುಣೆ ತೋರಿಸುವ ಮತ್ತು ಆಗಾಗ್ಗೆ ಒಬ್ಬರಿಗೊಬ್ಬರು ಕ್ಷಮಿಸುವ ಅಗತ್ಯವಿರುತ್ತದೆ. ನೀವು ನಿಮ್ಮ ವಿವಾಹ ಸಂಗಾತಿಗೆ ಹೆಚ್ಚು ಪ್ರೀತಿ ಮತ್ತು ಕರುಣೆ ತೋರಿಸುವ ಅಗತ್ಯವಿರುವಲ್ಲಿ, ದೇವರ ಹಾಗೂ ಆತನ ವಾಕ್ಯದ ಸಹಾಯದಿಂದ ಇದನ್ನು ಸಾಧಿಸಲು ಪ್ರಯತ್ನಮಾಡಿರಿ. ಮಾನಸಿಕ ಒತ್ತಡವನ್ನು ಕಡಿಮೆಗೊಳಿಸಲಿಕ್ಕಾಗಿ ಮತ್ತು ದಾಂಪತ್ಯದ್ರೋಹವನ್ನು ತಪ್ಪಿಸಲಿಕ್ಕಾಗಿ 1 ಕೊರಿಂಥ 7:1-5ಕ್ಕೆ ಹೊಂದಿಕೆಯಲ್ಲಿ ವರ್ತಿಸಲು ನೀವು ಏನಾದರೂ ಮಾಡುವ ಅಗತ್ಯವಿದೆಯೋ? ಜೀವನದ ಈ ಕ್ಷೇತ್ರದಲ್ಲಿ ಪತಿಪತ್ನಿಯರು ನಿಶ್ಚಯವಾಗಿಯೂ ಕೋಮಲ ‘ಕರುಣೆ’ ತೋರಿಸಬೇಕು.
17 ನೀವು ಯಾವುದೊ ರೀತಿಯಲ್ಲಿ ಗಂಭೀರ ಪಾಪಮಾಡಿರುವಲ್ಲಿ ಆಗೇನು? ಸಾಧ್ಯವಿರುವಷ್ಟು ಬೇಗನೆ ಪರಿಹಾರ ಕ್ರಮಗಳನ್ನು ಕೈಗೊಳ್ಳಿ. ಕ್ರೈಸ್ತ ಹಿರಿಯರ ನೆರವನ್ನು ಅವಶ್ಯವಾಗಿ ಕೇಳಿರಿ. ಅವರ ಪ್ರಾರ್ಥನೆಗಳು ಮತ್ತು ಸಲಹೆಯು ನೀವು ಆಧ್ಯಾತ್ಮಿಕ ಆರೋಗ್ಯವನ್ನು ಮರಳಿಪಡೆಯುವಂತೆ ಸಹಾಯ ಮಾಡುವುದು. (ಯಾಕೋಬ 5:13-16) ಪಶ್ಚಾತ್ತಾಪದ ಮನೋಭಾವದಿಂದ ಯೆಹೋವನಿಗೆ ಪ್ರಾರ್ಥಿಸಿರಿ. ಹಾಗೆ ಮಾಡಲು ತಪ್ಪುವಲ್ಲಿ ನಿಮ್ಮಲ್ಲಿ ಅಪರಾಧಿ ಪ್ರಜ್ಞೆ ಇರುವುದು ಮತ್ತು ನಿಮ್ಮ ಮನಸ್ಸಾಕ್ಷಿ ಚುಚ್ಚುವುದು. ದಾವೀದನಿಗೆ ಆ ಅನುಭವವಾಯಿತು. ಆದರೆ ಅವನು ಯೆಹೋವನಿಗೆ ತನ್ನ ಪಾಪ ಅರಿಕೆಮಾಡಿದಾಗ ಸಿಕ್ಕಿದ ಉಪಶಮನವು ಅವನಿಗೆಷ್ಟು ಉಲ್ಲಾಸತಂದಿತು! ದಾವೀದನು ಬರೆದುದು: “ಯಾವನ ದ್ರೋಹವು ಪರಿಹಾರವಾಗಿದೆಯೋ ಯಾವನ ಪಾಪವು ಕ್ಷಮಿಸಲ್ಪಟ್ಟಿದೆಯೋ ಅವನೇ ಧನ್ಯನು. ಯೆಹೋವನು ಯಾವನ ಲೆಕ್ಕಕ್ಕೆ ಅಪರಾಧವನ್ನು ಎಣಿಸುವದಿಲ್ಲವೋ ಯಾವನ ಹೃದಯದಲ್ಲಿ ಕಪಟವಿರುವದಿಲ್ಲವೋ ಅವನು ಧನ್ಯನು.” (ಕೀರ್ತನೆ 32:1-5) ಪಾಪಮಾಡುವ ಆದರೆ ಯಥಾರ್ಥವಾಗಿ ಪಶ್ಚಾತ್ತಾಪಪಡುವ ವ್ಯಕ್ತಿಗಳನ್ನು ಯೆಹೋವನು ಕ್ಷಮಿಸುತ್ತಾನೆ.—ಕೀರ್ತನೆ 103:8-14; ಜ್ಞಾನೋಕ್ತಿ 28:13.
ಲೋಕದ ಭಾಗವಾಗದೇ ಉಳಿಯಿರಿ
18 ನಮ್ಮ ಸ್ವರ್ಗೀಯ ತಂದೆ ವಾಗ್ದಾನಿಸಿರುವ ವಿಸ್ಮಯಕರ ಹೊಸ ಲೋಕಕ್ಕಾಗಿ ನೀವು ಎದುರುನೋಡುತ್ತಿದ್ದೀರಿ ಎಂಬುದರ ಬಗ್ಗೆ ಅನುಮಾನವೇ ಇಲ್ಲ! ಹೀಗಿರುವಾಗ, ದೇವರಿಂದ ವಿಮುಖವಾದ ಅನೀತಿವಂತ ಮಾನವ ಸಮಾಜವೆಂಬ ಲೋಕದ ಕುರಿತು ನಿಮ್ಮ ನೋಟವೇನು? “ಇಹಲೋಕಾಧಿಪತಿ” ಸೈತಾನನಿಗೆ ಯೇಸು ಕ್ರಿಸ್ತನ ಮೇಲೆ ಯಾವುದೇ ನಿಯಂತ್ರಣವಿರಲಿಲ್ಲ. (ಯೋಹಾನ 12:31; 14:30) ಪಿಶಾಚನು ಮತ್ತು ಅವನ ಲೋಕವು ನಿಮ್ಮ ಮೇಲೆ ನಿಯಂತ್ರಣ ಇಡುವುದನ್ನು ನೀವು ಖಂಡಿತ ಬಯಸುವುದಿಲ್ಲ. ಆದುದರಿಂದ ಅಪೊಸ್ತಲ ಯೋಹಾನನ ಈ ಮಾತುಗಳನ್ನು ಪಾಲಿಸಿರಿ: “ಲೋಕವನ್ನಾಗಲಿ ಲೋಕದಲ್ಲಿರುವವುಗಳನ್ನಾಗಲಿ ಪ್ರೀತಿಸಬೇಡಿರಿ.” ಇದು ವಿವೇಕಯುತ ಕ್ರಮ. ಏಕೆಂದರೆ “ಲೋಕವೂ ಅದರ ಆಶೆಯೂ ಗತಿಸಿಹೋಗುತ್ತವೆ; ಆದರೆ ದೇವರ ಚಿತ್ತವನ್ನು ನೆರವೇರಿಸುವವನು ಎಂದೆಂದಿಗೂ ಇರುವನು.”—1 ಯೋಹಾನ 2:15-17.
19 ನಿಮ್ಮ ಮಕ್ಕಳಿಗೆ “ಪ್ರಪಂಚದ ದೋಷವು ಹತ್ತದಂತೆ” ನೀವು ಸಹಾಯ ಮಾಡುತ್ತಿದ್ದೀರೋ? (ಯಾಕೋಬ 1:27) ಗಾಳಹಾಕಿ ಮೀನು ಹಿಡಿಯುವವನ ಹಾಗೆಯೇ ಸೈತಾನನು ನಿಮ್ಮ ಮಕ್ಕಳನ್ನು ಹಿಡಿಯಲು ಗಾಳಹಾಕುತ್ತಾನೆ. ಹಲವಾರು ಕ್ಲಬ್ಗಳು ಮತ್ತು ಇತರ ಸಂಘಗಳು ಯುವ ಜನರನ್ನು ಸೈತಾನನ ಲೋಕದ ಭಾಗವಾಗಿ ಮಾಡುವಂತೆ ವಿನ್ಯಾಸಿಸಲ್ಪಟ್ಟಿವೆ. ಯೆಹೋವನ ಸೇವಕರಾದರೋ ಈ ದುಷ್ಟ ವಿಷಯಗಳ ವ್ಯವಸ್ಥೆಯ ಅಂತ್ಯವನ್ನು ಪಾರಾಗುವ ಏಕೈಕ ಸಂಘಟನೆಗೆ ಈಗಾಗಲೇ ಸೇರಿದ್ದಾರೆ. ಆದುದರಿಂದ ಕ್ರೈಸ್ತ ಯುವ ಜನರಿಗೆ ‘ಕರ್ತನ ಕೆಲಸವನ್ನು ಅತ್ಯಾಸಕ್ತಿಯಿಂದ ಮಾಡಲು’ ಉತ್ತೇಜಿಸಬೇಕು. (1 ಕೊರಿಂಥ 15:58) ದೇವಭಕ್ತ ಹೆತ್ತವರು ತಮ್ಮ ಮಕ್ಕಳಿಗೆ ಗುರಿಗಳನ್ನಿಡಲು ನೆರವಾಗಬೇಕು. ಈ ಗುರಿಗಳು, ದೇವರಿಗೆ ಗೌರವ ತರುವ ಸಂತೋಷಭರಿತ ಹಾಗೂ ಪ್ರತಿಫಲದಾಯಕ ಜೀವನವನ್ನು ಕೊಡುವಂಥ ಹಾಗೂ ಯೆಹೋವನ ದಿನಕ್ಕಾಗಿ ಸಿದ್ಧರಾಗಲು ಸಹಾಯ ಮಾಡುವಂಥವುಗಳಾಗಿರಬೇಕು.
ಯೆಹೋವನ ಮಹಾ ದಿನದಾಚೆಗೆ ನೋಡಿರಿ
20 ನಿತ್ಯಜೀವವನ್ನು ನಿಮ್ಮ ಕಣ್ಮುಂದೆ ಇಟ್ಟರೆ ಯೆಹೋವನ ದಿನಕ್ಕಾಗಿ ಪ್ರಶಾಂತಚಿತ್ತರಾಗಿ ಕಾಯಲು ಶಕ್ತರಾಗುವಿರಿ. (ಯೂದ 20, 21) ಪರದೈಸಿನಲ್ಲಿ ನಿತ್ಯಜೀವಕ್ಕಾಗಿ ನೀವು ಎದುರುನೋಡುತ್ತೀರಿ ಮತ್ತು ಹೀಗೆ ಹಿತಕರವಾದ ಗುರಿಗಳನ್ನು ಸಾಧಿಸಲು ಹಾಗೂ ಯೆಹೋವನ ಕುರಿತಾಗಿ ಹೆಚ್ಚನ್ನು ಕಲಿಯಲು ನವಯೌವನದ ಚೈತನ್ಯ ಹಾಗೂ ಅಂತ್ಯವಿಲ್ಲದಷ್ಟು ಸಮಯವನ್ನು ಹೊಂದುವ ನಿರೀಕ್ಷೆ ನಿಮಗಿದೆ. ಮನುಷ್ಯರಿಗೆ ಈವರೆಗೆ ಏನು ತಿಳಿದಿದೆಯೋ ಅದು ಕೇವಲ ‘ಸ್ವಲ್ಪ ಮಾತ್ರ’ ಆಗಿರುವುದರಿಂದ, ವಾಸ್ತವದಲ್ಲಿ ನೀವು ದೇವರ ಬಗ್ಗೆ ನಿತ್ಯಕ್ಕೂ ಕಲಿಯುತ್ತಾ ಇರಬಲ್ಲಿರಿ. (ಯೋಬ 26:14, NIBV) ಎಂಥ ರೋಮಾಂಚಕಾರಿ ಪ್ರತೀಕ್ಷೆಗಳಿವು!
21 ಪರದೈಸಿನಲ್ಲಿ ಪುನರುತ್ಥಾನವಾಗಿ ಬಂದವರು, ಗತಕಾಲದ ಕುರಿತಾಗಿ ನಮಗೆ ತಿಳಿದಿರದ ಕೆಲವೊಂದು ವಿವರಗಳನ್ನು ಹೇಳಬಹುದು. ಹನೋಕನು, ಭಕ್ತಿಹೀನರಾದ ಜನರಿಗೆ ಯೆಹೋವನ ಸಂದೇಶವನ್ನು ಘೋಷಿಸಲು ತನಗೆ ಹೇಗೆ ಧೈರ್ಯ ಸಿಕ್ಕಿತೆಂಬುದನ್ನು ವಿವರಿಸುವನು. (ಯೂದ 14, 15) ನೋಹನು ತಾನು ನಾವೆಯನ್ನು ಹೇಗೆ ಕಟ್ಟಿದನೆಂದು ನಿಶ್ಚಯವಾಗಿ ತಿಳಿಸುವನು. ಅಬ್ರಹಾಮ ಮತ್ತು ಸಾರಳು, ಊರ್ನ ಸೌಕರ್ಯಗಳನ್ನು ಬಿಟ್ಟು ಗುಡಾರಗಳಲ್ಲಿ ಜೀವಿಸುವುದರ ಬಗ್ಗೆ ತಮಗೆ ಹೇಗನಿಸಿತು ಎಂಬುದನ್ನು ತಿಳಿಸುವರು. ಎಸ್ತೇರಳು, ತನ್ನ ಜನರ ಪರವಾಗಿ ಅವಳು ಹೇಗೆ ಎದ್ದುನಿಂತಳು ಮತ್ತು ಅವರ ವಿರುದ್ಧ ಹಾಮಾನನು ರಚಿಸಿದ ಷಡ್ಯಂತ್ರವನ್ನು ಹೇಗೆ ಮುರಿದು ಬಿಟ್ಟಳೆಂಬುದರ ಕುರಿತು ವಿವರಗಳನ್ನು ಕೊಡುತ್ತಿರುವುದನ್ನು ಸ್ವಲ್ಪ ಯೋಚಿಸಿ! (ಎಸ್ತೇರ 7:1-6) ಯೋನನು ತಾನು ಆ ದೊಡ್ಡ ಮೀನಿನ ಹೊಟ್ಟೆಯಲ್ಲಿ ಕಳೆದ ಮೂರು ದಿನಗಳ ಬಗ್ಗೆ ಮತ್ತು ಸ್ನಾನಿಕನಾದ ಯೋಹಾನನು, ಯೇಸುವಿಗೆ ದೀಕ್ಷಾಸ್ನಾನ ಕೊಟ್ಟಾಗ ತನಗೆ ಹೇಗನಿಸಿತೆಂಬುದನ್ನು ವಿವರಿಸುವುದನ್ನು ಊಹಿಸಿಕೊಳ್ಳಿ! (ಲೂಕ 3:21, 22; 7:28) ಕಲಿಯಲಿಕ್ಕಾಗಿ ನಮಗೆ ಎಷ್ಟೊಂದು ಆಸಕ್ತಿಕರ ವಿಷಯಗಳಿರುವವು!
22 ಕ್ರಿಸ್ತನ ಸಾವಿರ ವರ್ಷದಾಳಿಕೆಯ ಸಮಯದಲ್ಲಿ ಪುನರುತ್ಥಾನಗೊಂಡವರು “ದೈವಜ್ಞಾನವನ್ನು” ಪಡೆದುಕೊಳ್ಳುವಂತೆ ಸಹಾಯ ಮಾಡುವ ಸದವಕಾಶ ನಿಮಗಿರಬಹುದು. (ಜ್ಞಾನೋಕ್ತಿ 2:1-6) ಇಂದು, ಜನರು ಯೆಹೋವ ದೇವರ ಬಗ್ಗೆ ಜ್ಞಾನ ಪಡೆದು ಅದಕ್ಕೆ ತಕ್ಕಂತೆ ಕಾರ್ಯವೆಸಗುವುದನ್ನು ನೋಡುವುದು ಎಷ್ಟು ಉಲ್ಲಾಸದ ಸಂಗತಿ! ಆದರೆ ಭವಿಷ್ಯತ್ತಿನ ಆ ಸಾವಿರ ವರ್ಷದ ಕಾಲದಲ್ಲಿ ಆ ಹಿಂದಿನ ಕಾಲದ ಜನರಿಗೆ ಬೋಧಿಸಲು ನೀವು ಮಾಡುವ ಪ್ರಯತ್ನಗಳನ್ನು ಯೆಹೋವನು ಹರಸುವಾಗ ಮತ್ತು ಅವರು ಕೃತಜ್ಞತೆತುಂಬಿದ ಹೃದಯದಿಂದ ಪ್ರತಿಕ್ರಿಯೆ ತೋರಿಸುವಾಗ ನಿಮಗಾಗುವ ಆನಂದದ ಕುರಿತಾಗಿ ಯೋಚಿಸಿರಿ!
23 ಯೆಹೋವನ ಜನರಾಗಿ ನಾವಿಂದು ಆನಂದಿಸುವ ಪ್ರಯೋಜನಗಳನ್ನು ಲೆಕ್ಕಿಸಲು ಇಲ್ಲವೇ ಅಂದಾಜುಮಾಡಲು ಅಪರಿಪೂರ್ಣರಾದ ನಮ್ಮಿಂದ ಆಗದು. (ಕೀರ್ತನೆ 40:5) ನಾವು ವಿಶೇಷವಾಗಿ ದೇವರ ಆಧ್ಯಾತ್ಮಿಕ ಒದಗಿಸುವಿಕೆಗಳಿಗಾಗಿ ಕೃತಜ್ಞರಾಗಿದ್ದೇವೆ. (ಯೆಶಾಯ 48:17, 18) ನಮ್ಮ ಪರಿಸ್ಥಿತಿಗಳೇನೇ ಆಗಿರಲಿ, ನಾವು ಯೆಹೋವನ ಮಹಾ ದಿನಕ್ಕಾಗಿ ಕಾಯುತ್ತಿರುವಾಗ ಆತನಿಗೆ ಪವಿತ್ರ ಸೇವೆಯನ್ನು ಪೂರ್ಣ ಹೃದಯದಿಂದ ಸಲ್ಲಿಸುತ್ತಾ ಇರೋಣ.
ನೀವು ಹೇಗೆ ಉತ್ತರಿಸುವಿರಿ?
• “ಯೆಹೋವನ ದಿನ” ಅಂದರೇನು?
• ಯೆಹೋವನ ದಿನಕ್ಕಾಗಿ ನೀವು ಸಿದ್ಧರಾಗಿದ್ದೀರೆಂದು ಹೇಗೆ ತೋರಿಸಬಹುದು?
• ದೇವರ ಮಹಾ ದಿನವು ತುಂಬ ಹತ್ತಿರ ಆಗಿರುವುದರಿಂದ ನಾವು ಯಾವ ಬದಲಾವಣೆಗಳನ್ನು ಮಾಡಬೇಕು?
• ಯೆಹೋವನ ದಿನವು ಮುಗಿದ ನಂತರ ಯಾವ ವಿಷಯಗಳಿಗಾಗಿ ನೀವು ವೈಯಕ್ತಿಕವಾಗಿ ಎದುರುನೋಡುತ್ತೀರಿ?
[ಅಧ್ಯಯನ ಪ್ರಶ್ನೆಗಳು]
1-3. (ಎ) ಯೆಹೋವನ ದಿನದ ಬಗ್ಗೆ ಬೈಬಲ್ ಏನನ್ನುತ್ತದೆ? (ಬಿ) ನಮ್ಮ ಮುಂದಿರುವ “ಯೆಹೋವನ ದಿನ” ಯಾವುದು?
4. ಯೇಸು ಯಾವ ಕಠಿನ ಪರೀಕ್ಷೆಗಾಗಿ ತನ್ನನ್ನು ಸಿದ್ಧಗೊಳಿಸಿದನು?
5, 6. (ಎ) ಯೆಹೋವನ ದಿನಕ್ಕಾಗಿ ಸಿದ್ಧರಾಗಿರಲು, ದೇವರ ಮೇಲೆ ಹಾಗೂ ಜನರ ಮೇಲೆ ಪ್ರೀತಿ ಹೇಗೆ ಸಹಾಯ ಮಾಡುತ್ತದೆ? (ಬಿ) ನೆರೆಯವರ ಮೇಲಣ ಪ್ರೀತಿಯ ವಿಷಯದಲ್ಲಿ ಯೇಸು ಯಾವ ಮಾದರಿ ಇಟ್ಟನು?
7. ಯೆಹೋವನ ದಿನಕ್ಕಾಗಿ ಕಾಯುತ್ತಿರುವಾಗ ನಾವೇಕೆ ಆನಂದಿತರಾಗಿರಬಲ್ಲೆವು?
8. ಪ್ರಾರ್ಥನೆಯ ಮೂಲಕ ನಾವು ಯೆಹೋವನಿಗೆ ಹೆಚ್ಚೆಚ್ಚು ಸಮೀಪವಾಗಬೇಕು ಏಕೆ?
9. ಯೆಹೋವನ ಹೆಸರಿನ ಪವಿತ್ರೀಕರಣದ ಕುರಿತ ಆಸಕ್ತಿ ಎಷ್ಟು ಪ್ರಾಮುಖ್ಯವಾಗಿದೆ?
10. ನಮ್ಮ ಜೀವನವನ್ನು ಪರಿಶೀಲಿಸುವುದು ಏಕೆ ಸೂಕ್ತ?
11. ಬೈಬಲ್-ವಾಚನದ ಸಂಬಂಧದಲ್ಲಿ ನಿಮ್ಮ ಗುರಿಯೇನು?
12. ಯೆಹೋವನ ದಿನದ ಸಾಮೀಪ್ಯವು ಏನು ಮಾಡುವಂತೆ ನಿಮ್ಮನ್ನು ಪ್ರಚೋದಿಸಬೇಕು?
13. ನೂತನ ಸ್ವಭಾವವನ್ನು ಧರಿಸಿಕೊಳ್ಳುವುದರ ಕುರಿತಾಗಿ ನಾವು ಯಾವ ಪ್ರಶ್ನೆಗಳನ್ನು ಕೇಳಬಹುದು?
14. ಒಬ್ಬ ವ್ಯಕ್ತಿ ಸ್ವನಿಯಂತ್ರಣವನ್ನು ಬೆಳೆಸಲು ಪ್ರಯತ್ನಿಸುತ್ತಿರುವಾಗ ಪವಿತ್ರಾತ್ಮಕ್ಕಾಗಿ ಏಕೆ ಪ್ರಾರ್ಥಿಸಬೇಕು?
15. ನಿಮ್ಮ ಮತ್ತು ಜೊತೆವಿಶ್ವಾಸಿಯೊಬ್ಬರ ನಡುವೆ ಮನಸ್ತಾಪವಿರುವಲ್ಲಿ ಏನು ಮಾಡತಕ್ಕದ್ದು?
16. ದಾಂಪತ್ಯದಲ್ಲಿ ಯಾವ ವಿಧಗಳಲ್ಲಿ ಕರುಣೆ ಆವಶ್ಯಕ?
17. ಗಂಭೀರ ಪಾಪ ಮಾಡಿರುವ ವ್ಯಕ್ತಿ ಯಾವ ಕ್ರಮಗಳನ್ನು ತೆಗೆದುಕೊಳ್ಳಬೇಕು?
18. ಲೋಕದ ಕುರಿತು ನಿಮ್ಮ ನೋಟ ಏನಾಗಿರಬೇಕು?
19. ಕ್ರೈಸ್ತ ಯುವ ಜನರಿಗೆ ಯಾವ ರೀತಿಯ ಗುರಿಗಳನ್ನಿಡಲು ಉತ್ತೇಜಿಸಲಾಗುತ್ತದೆ?
20. ನಾವು ನಿತ್ಯಜೀವವನ್ನು ಕಣ್ಮುಂದೆಯೇ ಇಡಬೇಕು ಏಕೆ?
21, 22. ನಿಮ್ಮ ಹಾಗೂ ಪುನರುತ್ಥಿತ ಜನರ ಮಧ್ಯೆ ಯಾವ ಮಾಹಿತಿ-ವಿನಿಮಯ ಆಗಬಹುದು?
23. ನಾವೇನನ್ನು ಮಾಡಲು ದೃಢನಿರ್ಧಾರದಿಂದಿರಬೇಕು?
[Picture on page 14]
ಯೇಸು ಸಂಕಷ್ಟಗಳನ್ನು ಎದುರಿಸಲು ಸಿದ್ಧನಾದನು
[Picture on page 17]
ಪುನರುತ್ಥಿತ ಜನರಿಗೆ ಯೆಹೋವನ ಜ್ಞಾನವನ್ನು ಪಡೆಯಲು ಸಹಾಯ ಮಾಡುವುದು ಎಂಥ ಸದವಕಾಶ ಆಗಿರುವುದು!