“ಯೋಗ್ಯ ಮನೋಭಾವ”ದವರು ಪ್ರತಿಕ್ರಿಯೆ ತೋರಿಸುತ್ತಿದ್ದಾರೆ
“ನಿತ್ಯಜೀವಕ್ಕಾಗಿ ಯೋಗ್ಯ ಮನೋಭಾವವಿದ್ದ ಎಲ್ಲರೂ ವಿಶ್ವಾಸಿಗಳಾದರು.”—ಅ. ಕೃ. 13:48, NW.
1, 2. ಪರಲೋಕರಾಜ್ಯದ ಸುವಾರ್ತೆಯು ಸರ್ವಲೋಕದಲ್ಲಿ ಸಾರಲಾಗುವುದೆಂಬ ಯೇಸುವಿನ ಪ್ರವಾದನೆಗೆ ಆದಿಕ್ರೈಸ್ತರು ಹೇಗೆ ಪ್ರತಿಕ್ರಿಯಿಸಿದರು?
ಪರಲೋಕರಾಜ್ಯದ ಸುವಾರ್ತೆಯು ಸರ್ವಲೋಕದಲ್ಲಿ ಸಾರಲಾಗುವುದೆಂಬ ಯೇಸುವಿನ ಪ್ರವಾದನೆಗೆ ಆದಿ ಕ್ರೈಸ್ತರು ಹೇಗೆ ಪ್ರತಿಕ್ರಿಯಿಸಿದರೆಂಬ ರೋಮಾಂಚಕ ವೃತ್ತಾಂತವು ಬೈಬಲಿನ ಅಪೊಸ್ತಲರ ಕೃತ್ಯಗಳು ಪುಸ್ತಕದಲ್ಲಿದೆ. (ಮತ್ತಾ. 24:14) ಆ ಹುರುಪಿನ ಘೋಷಕರು ತಮ್ಮನ್ನು ಅನುಸರಿಸುವವರೆಲ್ಲರಿಗೆ ಮಾದರಿಯನ್ನಿಟ್ಟರು. ಯೇಸುವಿನ ಆ ಶಿಷ್ಯರು ಯೆರೂಸಲೇಮಿನಲ್ಲಿ ಹುರುಪಿನಿಂದ ಸಾಕ್ಷಿ ನೀಡಿದ್ದರ ಫಲವಾಗಿ ಸಾವಿರಾರು ಜನರು, ಮಾತ್ರವಲ್ಲ “ಯಾಜಕರಲ್ಲಿಯೂ ಬಹುಜನರು” ಪ್ರಥಮ ಶತಮಾನದ ಕ್ರೈಸ್ತ ಸಭೆಗೆ ಸೇರಿದರು.—ಅ. ಕೃ. 2:41; 4:4; 6:7.
2 ಇನ್ನೂ ಅನೇಕಾನೇಕ ಜನರು ಕ್ರೈಸ್ತತ್ವವನ್ನು ಅಂಗೀಕರಿಸುವಂತೆ ಆದಿ ಮಿಷನೆರಿಗಳು ಸಹಾಯ ನೀಡಿದರು. ದೃಷ್ಟಾಂತಕ್ಕೆ, ಫಿಲಿಪ್ಪನು ಸಮಾರ್ಯಕ್ಕೆ ಹೋದಾಗ ಜನರ ಗುಂಪು ಅವನ ಮಾತುಗಳಿಗೆ ಗಮನಕೊಟ್ಟಿತು. (ಅ. ಕೃ. 8:5-8) ಪೌಲನು ವಿಭಿನ್ನ ಸಂಗಡಿಗರೊಂದಿಗೆ ದೂರದೂರಕ್ಕೂ ಸಂಚರಿಸಿ ಸೈಪ್ರಸ್, ಏಷಿಯ ಮೈನರ್ನ ಭಾಗಗಳು, ಮಕೆದೋನ್ಯ, ಗ್ರೀಸ್ ಮತ್ತು ಇಟಲಿಯಲ್ಲಿ ಕ್ರೈಸ್ತ ಸಂದೇಶವನ್ನು ಸಾರಿಹೇಳಿದನು. ಅವನು ಉಪದೇಶಿಸಿದ ನಗರಗಳಲ್ಲಿ ಯೆಹೂದ್ಯರಲ್ಲಿಯೂ ಗ್ರೀಕರಲ್ಲಿಯೂ ಬಹುಮಂದಿ ವಿಶ್ವಾಸಿಗಳಾದರು. (ಅ. ಕೃ. 14:1; 16:5; 17:4) ತೀತನು ಕ್ರೇತದಲ್ಲಿ ಶುಶ್ರೂಷೆಯನ್ನು ಮುಂದುವರಿಸಿದನು. (ತೀತ 1:5) ಪೇತ್ರನು ಬಾಬೆಲಿನಲ್ಲಿ ಕಾರ್ಯನಿರತನಾಗಿದ್ದನು. ಅವನು ಸುಮಾರು ಸಾ.ಶ. 62-64ರಲ್ಲಿ ತನ್ನ ಪ್ರಥಮ ಪತ್ರವನ್ನು ಬರೆಯುವುದರೊಳಗೆ ಕ್ರೈಸ್ತರ ಚಟುವಟಿಕೆಯು ಪೊಂತ, ಗಲಾತ್ಯ, ಕಪ್ಪದೋಕ್ಯ, ಏಷಿಯ ಮತ್ತು ಬಿಥೂನ್ಯದಲ್ಲಿ ಸುಪರಿಚಿತವಾಗಿತ್ತು. (1 ಪೇತ್ರ 1:1; 5:13) ಅದು ನಿಸ್ಸಂದೇಹವಾಗಿಯೂ ರೋಮಾಂಚಕ ಸಮಯವಾಗಿತ್ತು! ಆ ಪ್ರಥಮ ಶತಮಾನದ ಕ್ರೈಸ್ತ ಸೌವಾರ್ತಿಕರು ಎಷ್ಟೊಂದು ಹುರುಪುಳ್ಳವರಾಗಿದ್ದರೆಂದರೆ, ಇವರು “ಲೋಕವನ್ನು ಅಲ್ಲಕಲ್ಲೋಲ” ಮಾಡಿದರೆಂದು ಅವರ ವೈರಿಗಳು ಹೇಳಿದರು.—ಅ. ಕೃ. 17:6; 28:22.
3. ರಾಜ್ಯ ಘೋಷಕರ ಸಾರುವ ಚಟುವಟಿಕೆಗಳಿಂದ ಇಂದು ಯಾವ ಫಲಿತಾಂಶಗಳನ್ನು ಪಡೆಯಲಾಗುತ್ತಿದೆ ಮತ್ತು ಇದನ್ನು ಕೇಳುವಾಗ ನಿಮಗೆ ಹೇಗನಿಸುತ್ತದೆ?
3 ಈ ಆಧುನಿಕ ದಿನಗಳಲ್ಲಿ ಸಹ ಕ್ರೈಸ್ತ ಸಭೆಯು ಗಮನಾರ್ಹವಾಗಿ ಬೆಳವಣಿಗೆ ಹೊಂದಿದೆ. ಯೆಹೋವನ ಸಾಕ್ಷಿಗಳ ವಾರ್ಷಿಕ ವರದಿಯನ್ನು ಓದಿ, ಲೋಕವ್ಯಾಪಕವಾಗಿ ಬಂದಿರುವ ಫಲಿತಾಂಶಗಳನ್ನು ನೋಡುವಾಗ ನಿಮಗೆ ಪ್ರೋತ್ಸಾಹವಾಗುವುದಿಲ್ಲವೇ? 2007ರ ಸೇವಾ ವರ್ಷದಲ್ಲಿ ರಾಜ್ಯ ಘೋಷಕರು 60 ಲಕ್ಷಕ್ಕಿಂತಲೂ ಹೆಚ್ಚು ಬೈಬಲ್ ಅಧ್ಯಯನಗಳನ್ನು ನಡೆಸಿದರೆಂದು ತಿಳಿದಾಗ ನಿಮಗೆ ಸಂತೋಷವಾಗುವುದಿಲ್ಲವೇ? ಇದಲ್ಲದೆ, ಕಳೆದ ವರ್ಷದ ಯೇಸು ಕ್ರಿಸ್ತನ ಮರಣದ ಜ್ಞಾಪಕಾಚರಣೆಗೆ ಯೆಹೋವನ ಸಕ್ರಿಯ ಸಾಕ್ಷಿಗಳಲ್ಲದೆ ಸುಮಾರು ಒಂದು ಕೋಟಿ ಜನರು ಹಾಜರಾದರು. ಇದು ಸುವಾರ್ತೆಯಲ್ಲಿ ಅವರೆಲ್ಲರಿಗೆ ಆಸಕ್ತಿಯಿದೆಯೆಂದು ತೋರಿಸುತ್ತದೆ. ಇದರಿಂದ ನಾವು ಇನ್ನೂ ಹೆಚ್ಚು ಕೆಲಸ ಮಾಡಲಿಕ್ಕಿದೆಯೆಂಬುದು ಸ್ಪಷ್ಟ.
4. ರಾಜ್ಯ ಸಂದೇಶಕ್ಕೆ ಯಾರು ಪ್ರತಿಕ್ರಿಯೆ ತೋರಿಸುತ್ತಿದ್ದಾರೆ?
4 ಪ್ರಥಮ ಶತಮಾನದಂತೆಯೇ ಇಂದು ಸಹ, ‘ನಿತ್ಯಜೀವಕ್ಕಾಗಿ ಯೋಗ್ಯ ಮನೋಭಾವವಿರುವ ಎಲ್ಲರೂ’ ಸತ್ಯಸಂದೇಶಕ್ಕೆ ಪ್ರತಿಕ್ರಿಯಿಸುತ್ತಿದ್ದಾರೆ. (ಅ. ಕೃ. 13:48, NW) ಯೆಹೋವನು ಇಂಥವರನ್ನು ತನ್ನ ಸಂಘಟನೆಯೊಳಗೆ ತರುತ್ತಿದ್ದಾನೆ. (ಹಗ್ಗಾಯ 2:7ನ್ನು ಓದಿ.) ಈ ಒಟ್ಟುಗೂಡಿಸುವ ಕೆಲಸದೊಂದಿಗೆ ಪೂರ್ಣವಾಗಿ ಸಹಕರಿಸಲು ಕ್ರೈಸ್ತ ಶುಶ್ರೂಷೆಯ ಕುರಿತು ನಮಗೆ ಯಾವ ಮನೋಭಾವವಿರಬೇಕು?
ನಿಷ್ಪಕ್ಷಪಾತದಿಂದ ಸಾರಿರಿ
5. ಯಾವ ರೀತಿಯ ಜನರ ಮೇಲೆ ಯೆಹೋವನ ಅನುಗ್ರಹವಿದೆ?
5 ಒಂದನೆಯ ಶತಮಾನದ ಕ್ರೈಸ್ತರಿಗೆ, “ದೇವರು ಪಕ್ಷಪಾತಿಯಲ್ಲ, ಯಾವ ಜನರಲ್ಲಿಯಾದರೂ ದೇವರಿಗೆ ಭಯಪಟ್ಟು ನೀತಿಯನ್ನು ನಡಿಸುವವರು ಆತನಿಗೆ ಮೆಚ್ಚಿಗೆಯಾಗಿದ್ದಾರೆ” ಎಂಬ ತಿಳಿವಳಿಕೆಯಿತ್ತು. (ಅ. ಕೃ. 10:34, 35) ಯೆಹೋವನೊಂದಿಗೆ ಸುಸಂಬಂಧವನ್ನಿಟ್ಟುಕೊಳ್ಳಲು ಬಯಸುವ ವ್ಯಕ್ತಿಯೊಬ್ಬನು ಯೇಸುವಿನ ವಿಮೋಚನಾ ಮೌಲ್ಯದ ಯಜ್ಞದಲ್ಲಿ ನಂಬಿಕೆಯನ್ನಿಡಬೇಕು. (ಯೋಹಾ. 3:16, 36) “ಎಲ್ಲಾ ಮನುಷ್ಯರು ರಕ್ಷಣೆಯನ್ನು ಹೊಂದಿ ಸತ್ಯದ ಜ್ಞಾನಕ್ಕೆ ಸೇರಬೇಕೆಂಬದು” ಯೆಹೋವನ ಚಿತ್ತವಾಗಿದೆ.—1 ತಿಮೊ. 2:3, 4.
6. ರಾಜ್ಯದ ಕುರಿತು ಸಾರುವವರು ಏನು ಮಾಡಬಾರದು ಮತ್ತು ಏಕೆ?
6 ಸುವಾರ್ತೆಯ ಘೋಷಕರು ಜನರ ಕುಲ, ಸಾಮಾಜಿಕ ಸ್ಥಾನಮಾನ, ತೋರಿಕೆ, ಧಾರ್ಮಿಕ ಹಿನ್ನೆಲೆ ಇಲ್ಲವೆ ಇತರ ವಿಷಯಗಳ ಮೇಲೆ ಆಧರಿಸಿ ಅವರ ಕುರಿತು ದುಡುಕಿ ತೀರ್ಮಾನಿಸುವುದು ಸರಿಯಲ್ಲ. ಒಂದು ಕ್ಷಣ ಯೋಚಿಸಿರಿ: ಬೈಬಲ್ ಸತ್ಯಗಳ ಕುರಿತು ನಿಮ್ಮೊಂದಿಗೆ ಮೊದಮೊದಲು ಮಾತಾಡಿದ ವ್ಯಕ್ತಿ ನಿಮಗೆ ಪಕ್ಷಪಾತ ತೋರಿಸಲಿಲ್ಲ ಎಂಬುದಕ್ಕೆ ನೀವು ಕೃತಜ್ಞರಾಗಿಲ್ಲವೋ? ಹಾಗಿರುವಲ್ಲಿ, ಜೀವರಕ್ಷಕ ಸಂದೇಶಕ್ಕೆ ಕಿವಿಗೊಡಬಹುದಾದ ಯಾರಿಗಾದರೂ ಅದನ್ನು ತಿಳಿಸದೆ ನಾವೇಕೆ ತಡೆಹಿಡಿಯಬೇಕು?—ಮತ್ತಾಯ 7:12ನ್ನು ಓದಿ.
7. ನಾವು ಸಾರುವ ಜನರ ವಿಷಯದಲ್ಲಿ ತೀರ್ಪು ಮಾಡಬಾರದೇಕೆ?
7 ಯೆಹೋವನು ಯೇಸುವನ್ನು ನ್ಯಾಯಾಧಿಪತಿಯಾಗಿ ನೇಮಿಸಿದ್ದಾನೆ. ಆದುದರಿಂದ ಯಾರಿಗೂ ತೀರ್ಪು ಮಾಡುವ ಹಕ್ಕು ನಮಗಿಲ್ಲ. ಅದು ಸರಿಯಾಗಿದೆ, ಏಕೆಂದರೆ ಯೇಸುವಿಗೆ ಅಸದೃಶವಾಗಿ ನಾವಾದರೊ “[ನಮ್ಮ] ಕಣ್ಣಿಗೆ ಕಂಡಂತೆ, . . . ಕಿವಿಗೆ ಬಿದ್ದಂತೆ” ತೀರ್ಪು ಮಾಡುತ್ತೇವೆ. ಆದರೆ ಯೇಸು ನಮ್ಮ ಮನದಾಳದ ಯೋಚನೆಗಳನ್ನೂ ಹೃದಯದ ತರ್ಕಗಳನ್ನೂ ತಿಳಿಯಶಕ್ತನಾಗಿದ್ದಾನೆ.—ಯೆಶಾ. 11:1-5; 2 ತಿಮೊ. 4:1.
8, 9. (ಎ) ಸೌಲನು ಕ್ರೈಸ್ತನಾಗುವ ಮೊದಲು ಯಾವ ರೀತಿಯ ವ್ಯಕ್ತಿಯಾಗಿದ್ದನು? (ಬಿ) ಅಪೊಸ್ತಲ ಪೌಲನ ಅನುಭವ ನಮಗೇನು ಕಲಿಸುತ್ತದೆ?
8 ಎಲ್ಲ ಹಿನ್ನೆಲೆಗಳ ಜನರು ಯೆಹೋವನ ಸೇವಕರಾಗಿರುತ್ತಾರೆ. ಅಪೊಸ್ತಲ ಪೌಲನೆಂದು ಪ್ರಸಿದ್ಧನಾದ ತಾರ್ಸದ ಸೌಲನು ಇದಕ್ಕೆ ಒಂದು ಗಮನಾರ್ಹ ಮಾದರಿ. ಫರಿಸಾಯನಾಗಿದ್ದ ಸೌಲನು ಕ್ರೈಸ್ತರ ಕಡು ವಿರೋಧಿಯಾಗಿದ್ದನು. ಕ್ರೈಸ್ತರು ಸುಳ್ಳು ಆರಾಧಕರೆಂಬ ಬಲವಾದ ನಂಬಿಕೆಯು ಅವನು ಕ್ರೈಸ್ತ ಸಭೆಯನ್ನು ಹಿಂಸಿಸುವಂತೆ ಮಾಡಿತು. (ಗಲಾ. 1:13) ಮಾನವ ದೃಷ್ಟಿಯಲ್ಲಿ, ಅವನು ಕ್ರೈಸ್ತನಾಗುವುದು ಸಾಧ್ಯವೇ ಇಲ್ಲವೆಂಬಂತೆ ಕಂಡಿತು. ಆದರೆ, ಯೇಸು ಸೌಲನ ಹೃದಯದಲ್ಲಿ ಏನೊ ಒಳ್ಳೆಯದನ್ನು ನೋಡಿ, ಒಂದು ವಿಶೇಷ ನೇಮಕವನ್ನು ಪೂರೈಸುವಂತೆ ಅವನನ್ನು ಆರಿಸಿಕೊಂಡನು. ಇದರ ಪರಿಣಾಮವಾಗಿ, ಸೌಲನು ಪ್ರಥಮ ಶತಮಾನದ ಕ್ರೈಸ್ತ ಸಭೆಯ ಅತಿ ಕ್ರಿಯಾಶೀಲ ಮತ್ತು ಹುರುಪಿನ ಸದಸ್ಯರಲ್ಲಿ ಒಬ್ಬನಾದನು.
9 ಅಪೊಸ್ತಲ ಪೌಲನ ಅನುಭವ ನಮಗೇನು ಕಲಿಸುತ್ತದೆ? ನಮ್ಮ ಟೆರಿಟೊರಿಗಳಲ್ಲಿ ನಮ್ಮ ಸಂದೇಶವನ್ನು ವಿರೋಧಿಸುವಂಥ ಜನರ ಗುಂಪುಗಳು ಇರಬಹುದು. ಇವರಲ್ಲಿ ಯಾರಾದರೂ ನಿಜ ಕ್ರೈಸ್ತರಾಗುವರೋ ಎಂಬ ಸಂದೇಹ ನಮಗೆ ಬರುವುದಾದರೂ ಅವರೊಂದಿಗೆ ಮಾತಾಡಲು ಪ್ರಯತ್ನಿಸುವುದನ್ನು ನಿಲ್ಲಿಸಬಾರದು. ಕೆಲವು ಸಲ, ನಮ್ಮ ಸಂದೇಶವನ್ನು ಕೇಳುವುದಿಲ್ಲ ಎಂದು ನಾವೆಣಿಸುವವರು ಸಹ ಕಿವಿಗೊಡಬಹುದು. ನಮಗಿರುವ ಆಜ್ಞೆಯು ಎಲ್ಲರಿಗೂ “ಎಡೆಬಿಡದೆ” ಸಾರುತ್ತಿರುವುದೇ ಆಗಿದೆ.—ಅ. ಕೃತ್ಯಗಳು 5:42ನ್ನು ಓದಿ.
“ಎಡೆಬಿಡದೆ” ಸಾರುವವರಿಗೆ ಆಶೀರ್ವಾದಗಳು ಕಾದಿವೆ
10. ಭಯ ಹುಟ್ಟಿಸಬಹುದಾದ ಜನರಿಗೆ ಸಾರುವುದರಿಂದ ನಾವೇಕೆ ಹಿಂಜರಿಯಬಾರದು? ಸ್ಥಳಿಕ ಅನುಭವಗಳನ್ನು ಹೇಳಿ.
10 ಒಬ್ಬನ ಹೊರತೋರಿಕೆಯು ನಾವು ತಪ್ಪು ತೀರ್ಮಾನಕ್ಕೆ ಬರುವಂತೆ ಮಾಡಬಹುದು. ದೃಷ್ಟಾಂತಕ್ಕೆ, ಈಗ್ನಾಸ್ಯೊa ಎಂಬವನು ದಕ್ಷಿಣ ಅಮೇರಿಕದ ದೇಶವೊಂದರಲ್ಲಿ ಸೆರೆಮನೆಯಲ್ಲಿದ್ದಾಗ ಯೆಹೋವನ ಸಾಕ್ಷಿಗಳೊಂದಿಗೆ ಬೈಬಲ್ ಅಧ್ಯಯನವನ್ನು ಆರಂಭಿಸಿದನು. ಅವನ ಹಿಂಸಾತ್ಮಕ ಸ್ವಭಾವದ ಕಾರಣ ಜನರು ಅವನಿಗೆ ಭಯಪಡುತ್ತಿದ್ದರು. ಈ ಕಾರಣದಿಂದ, ಸೆರೆಮನೆಯಲ್ಲಿ ಕೆಲವು ವಸ್ತುಗಳನ್ನು ಮಾಡಿ ಮಾರುತ್ತಿದ್ದ ಖೈದಿಗಳು ಸಾಲಗಾರರಾಗಿದ್ದ ಇತರ ಖೈದಿಗಳಿಂದ ಹಣ ವಸೂಲಿ ಮಾಡಲು ಈಗ್ನಾಸ್ಯೊನನ್ನು ಉಪಯೋಗಿಸಿದರು. ಆದರೆ ರೌಡಿಯಾಗಿದ್ದ ಈಗ್ನಾಸ್ಯೊ ಆಧ್ಯಾತ್ಮಿಕ ಪ್ರಗತಿ ಮಾಡಿದಂತೆ ಮತ್ತು ಕಲಿತದ್ದನ್ನು ಅನ್ವಯಿಸಿಕೊಂಡಂತೆ ದಯಾಪರ ವ್ಯಕ್ತಿಯಾದನು. ಅನಂತರ ಯಾರೂ ಅವನನ್ನು ಸಾಲ ವಸೂಲಿಗಾಗಿ ಬಳಸಲಿಲ್ಲ. ಈಗ್ನಾಸ್ಯೊ, ಬೈಬಲ್ ಸತ್ಯ ಮತ್ತು ದೇವರಾತ್ಮವು ತನ್ನ ವ್ಯಕ್ತಿತ್ವವನ್ನು ಬದಲಾಯಿಸಿದ್ದಕ್ಕಾಗಿ ಸಂತೃಪ್ತನಾಗಿದ್ದಾನೆ. ನಿಷ್ಪಕ್ಷಪಾತದಿಂದ ತನ್ನೊಂದಿಗೆ ಅಧ್ಯಯನ ಮಾಡಲು ಶ್ರಮಪಟ್ಟ ರಾಜ್ಯ ಪ್ರಚಾರಕರಿಗೂ ಅವನು ಕೃತಜ್ಞನಾಗಿದ್ದಾನೆ.
11. ನಾವು ಜನರನ್ನು ಮತ್ತೆ ಮತ್ತೆ ಭೇಟಿಮಾಡಲು ಕಾರಣವೇನು?
11 ನಾವು ಈಗಾಗಲೇ ಸುವಾರ್ತೆಯನ್ನು ತಿಳಿಸಿರುವ ವ್ಯಕ್ತಿಗಳನ್ನು ಮತ್ತೆ ಮತ್ತೆ ಭೇಟಿಮಾಡಲು ಕಾರಣವೇನೆಂದರೆ ಅವರ ಪರಿಸ್ಥಿತಿಗಳು, ಮನೋಭಾವಗಳು ಮತ್ತು ಕೆಲವೊಮ್ಮೆ ಅವರೇ ಬದಲಾಗಸಾಧ್ಯವಿದೆ. ನಾವು ಕಳೆದ ಬಾರಿ ಅವರನ್ನು ಭೇಟಿಯಾದ ಬಳಿಕ ಅವರಲ್ಲಿ ಕೆಲವರಿಗೆ ಗಂಭೀರ ಕಾಯಿಲೆ ಬಂದಿರಬಹುದು, ಉದ್ಯೋಗ ಕಳಕೊಂಡಿರಬಹುದು ಅಥವಾ ಅವರ ಪ್ರಿಯರೊಬ್ಬರು ಸಾವನ್ನಪ್ಪಿರಬಹುದು. (ಪ್ರಸಂಗಿ 9:11ನ್ನು ಓದಿ.) ಲೋಕ ಘಟನೆಗಳು ಜನರು ತಮ್ಮ ಭವಿಷ್ಯತ್ತಿನ ಬಗ್ಗೆ ಗಂಭೀರವಾಗಿ ಯೋಚಿಸುವಂತೆ ಮಾಡಬಹುದು. ಇವೆಲ್ಲವೂ, ಈ ಹಿಂದೆ ನಿರ್ಲಕ್ಷ್ಯ ತೋರಿಸಿದ ಅಥವಾ ವಿರೋಧಿಸಿರಲೂಬಹುದಾದ ವ್ಯಕ್ತಿ ಈಗ ನಮ್ಮ ಸಂದೇಶಕ್ಕೆ ಒಳ್ಳೇ ಪ್ರತಿಕ್ರಿಯೆ ತೋರಿಸುವಂತೆ ಮಾಡಬಹುದು. ಈ ಕಾರಣದಿಂದ, ನಾವು ಅನೂಕೂಲವಾದ ಪ್ರತಿಯೊಂದು ಸಂದರ್ಭದಲ್ಲಿ ಇತರರಿಗೆ ಸುವಾರ್ತೆ ಸಾರುವುದರಿಂದ ಹಿಂದೆಗೆಯಬಾರದು.
12. ನಾವು ಯಾರಿಗೆ ಸಾರುತ್ತೇವೊ ಅವರನ್ನು ಹೇಗೆ ವೀಕ್ಷಿಸಬೇಕು ಮತ್ತು ಏಕೆ?
12 ಬೇರೆಯವರನ್ನು ವರ್ಗೀಕರಿಸುತ್ತ ತೀರ್ಪು ಮಾಡುವುದು ಮಾನವ ಪ್ರವೃತ್ತಿಯಾಗಿದೆ. ಆದರೆ ಯೆಹೋವನು ಜನರನ್ನು ಒಬ್ಬೊಬ್ಬರನ್ನಾಗಿ ನೋಡುತ್ತಾನೆ. ಪ್ರತಿಯೊಬ್ಬನ ಸುಗುಣಗಳನ್ನು ಆತನು ಗಮನಿಸುತ್ತಾನೆ. (1 ಸಮುವೇಲ 16:7ನ್ನು ಓದಿ.) ನಮ್ಮ ಶುಶ್ರೂಷೆಯಲ್ಲಿ ನಾವೂ ಹಾಗೆ ಮಾಡಲು ಶ್ರಮಿಸಬೇಕು. ನಾವು ಸಾರುವ ಎಲ್ಲರನ್ನು ಸಕಾರಾತ್ಮಕವಾಗಿ ವೀಕ್ಷಿಸುವುದರಿಂದ ಬರುವ ಹಿತಕರವಾದ ಪರಿಣಾಮಗಳನ್ನು ಅನೇಕ ಅನುಭವಗಳು ತೋರಿಸುತ್ತವೆ.
13, 14. (ಎ) ಒಬ್ಬ ಪಯನೀಯರಳು ಶುಶ್ರೂಷೆಯಲ್ಲಿ ಭೇಟಿಯಾದ ಸ್ತ್ರೀಯನ್ನು ನೋಡಿ ನಕಾರಾತ್ಮಕವಾಗಿ ಪ್ರತಿಕ್ರಿಯಿಸಿದ್ದೇಕೆ? (ಬಿ) ಈ ಅನುಭವದಿಂದ ನಾವೇನು ಕಲಿಯಬಲ್ಲೆವು?
13 ಸಾಂಡ್ರ ಎಂಬ ಪಯನೀಯರ್ ಸಹೋದರಿ ಕ್ಯಾರಿಬೀಯನ್ನ ಒಂದು ದ್ವೀಪದಲ್ಲಿ ಮನೆಮನೆಯ ಶುಶ್ರೂಷೆ ಮಾಡುತ್ತಿರುವಾಗ ರೂತ್ ಎಂಬವಳನ್ನು ಭೇಟಿಯಾದಳು. ರೂತ್ಗೆ ಪ್ರಸಿದ್ಧ ಕಾರ್ನಿವಲ್ ಹಬ್ಬವನ್ನು ಸಡಗರಸಂಭ್ರಮದಿಂದ ಆಚರಿಸುವುದೆಂದರೆ ಅತ್ಯುತ್ಸಾಹ. ಅವಳು ಎರಡು ಬಾರಿ ರಾಷ್ಟ್ರೀಯ ಕಾರ್ನಿವಲ್ ಸುಂದರಿಯಾಗಿ ಆಯ್ಕೆಯಾಗಿದ್ದಳು. ಸಾಂಡ್ರ ಆಕೆಯೊಂದಿಗೆ ಮಾತಾಡಿದಾಗ ಅವಳು ಅಸಾಮಾನ್ಯ ಆಸಕ್ತಿಯನ್ನು ತೋರಿಸಿದಳು. ಒಂದು ಬೈಬಲ್ ಅಧ್ಯಯನವನ್ನೂ ಏರ್ಪಡಿಸಲಾಯಿತು. ಸಾಂಡ್ರ ಜ್ಞಾಪಿಸಿಕೊಳ್ಳುವುದು: “ನಾನು ಆಕೆಯ ಮನೆಯೊಳಗೆ ಹೋದಾಗ ಕಾರ್ನಿವಲ್ ಪೋಷಾಕಿನಲ್ಲಿ ಮಿಂಚುತ್ತಿದ್ದ ರೂತಳ ದೊಡ್ಡ ಫೋಟೋ ನೋಡಿದೆ. ಅವಳು ಗೆದ್ದಿದ್ದ ಅನೇಕ ಪ್ರಶಸ್ತಿಗಳೂ ಅಲ್ಲಿದ್ದವು. ಇಷ್ಟು ಜನಪ್ರಿಯಳೂ ಕಾರ್ನಿವಲ್ನಲ್ಲಿ ತೀವ್ರಾಸಕ್ತಳೂ ಆಗಿರುವ ಈಕೆಗೆ ಸತ್ಯದಲ್ಲಿ ಆಸಕ್ತಿ ಇರಲಿಕ್ಕಿಲ್ಲವೆಂದು ನಾನು ತಪ್ಪಾಗಿ ಊಹಿಸಿದೆ. ಆದಕಾರಣ, ನಾನು ಆಕೆಯನ್ನು ಭೇಟಿಮಾಡುವುದನ್ನು ನಿಲ್ಲಿಸಿಬಿಟ್ಟೆ.”
14 ಸ್ವಲ್ಪ ಸಮಯದ ಅನಂತರ ಒಂದು ದಿನ ರೂತ್ ರಾಜ್ಯ ಸಭಾಗೃಹಕ್ಕೆ ಬಂದಳು. ಕೂಟ ಮುಗಿದ ಬಳಿಕ ಅವಳು ಸಾಂಡ್ರಳ ಬಳಿಬಂದು “ನೀನು ಸ್ಟಡಿ ಮಾಡಲಿಕ್ಕೆ ಯಾಕೆ ಬರುತ್ತಿಲ್ಲ?” ಎಂದು ಕೇಳಿದಳು. ಸಾಂಡ್ರ ಕ್ಷಮೆ ಕೇಳಿ, ಅಧ್ಯಯನ ಮುಂದುವರಿಸಲು ಏರ್ಪಡಿಸಿದಳು. ರೂತ್ ಶೀಘ್ರವಾಗಿ ಪ್ರಗತಿ ಮಾಡಿದಳು. ತನ್ನ ಕಾರ್ನಿವಲ್ ಚಿತ್ರವನ್ನು ತೆಗೆದುಹಾಕಿ, ಸಭೆಯ ಸಕಲ ಚಟುವಟಿಕೆಗಳಲ್ಲಿ ಭಾಗವಹಿಸಲು ಆರಂಭಿಸಿ ಯೆಹೋವನಿಗೆ ತನ್ನ ಜೀವನವನ್ನು ಸಮರ್ಪಿಸಿದಳು. ಹೌದು, ಸಾಂಡ್ರಳು ತಾನು ಮೊದಲು ಪ್ರತಿಕ್ರಿಯಿಸಿದ ರೀತಿ ತಪ್ಪಾಗಿತ್ತೆಂದು ತಿಳಿದುಕೊಂಡಳು.
15, 16. (ಎ) ಪ್ರಚಾರಕಳೊಬ್ಬಳು ತನ್ನ ಸಂಬಂಧಿಗೆ ಸಾಕ್ಷಿ ನೀಡಿದ್ದರ ಪರಿಣಾಮವೇನಾಯಿತು? (ಬಿ) ಒಬ್ಬ ಸಂಬಂಧಿಯ ಹಿನ್ನೆಲೆಯು ಅವನಿಗೋ ಅವಳಿಗೋ ಸಾಕ್ಷಿ ನೀಡುವುದರಿಂದ ನಮ್ಮನ್ನು ಏಕೆ ನಿರುತ್ತೇಜನಗೊಳಿಸಬಾರದು?
15 ಒಳ್ಳೇ ಪ್ರತಿವರ್ತನೆ ತೋರಿಸರು ಎಂದುಕೊಂಡಾಗಲೂ ಅವಿಶ್ವಾಸಿಗಳಾದ ಕುಟುಂಬ ಸದಸ್ಯರಿಗೆ ಸಾಕ್ಷಿ ನೀಡಿದ್ದರಿಂದ ಸಕಾರಾತ್ಮಕ ಫಲಿತಾಂಶ ದೊರೆಕಿವೆ. ಉದಾಹರಣೆಗೆ ಅಮೆರಿಕಾದ ಜೋಯ್ಸ್ ಎಂಬ ಕ್ರೈಸ್ತ ಸಹೋದರಿಯನ್ನು ತೆಗೆದುಕೊಳ್ಳಿ. ಆಕೆಯ ಭಾವನೊಬ್ಬನು ಹದಿಹರೆಯದ ಪ್ರಾಯದಿಂದಲೂ ಆಗಾಗ ಸೆರೆಮನೆಗೆ ಹಾಕಲ್ಪಡುತ್ತಿದ್ದನು. ಜೋಯ್ಸ್ ಹೇಳುವುದು: “ಜನರು, ‘ಅವನದಲ್ಲ ಒಂದು ಜೀವನವಾ’ ಎಂದು ಮಾತಾಡಿಕೊಳ್ಳುತ್ತಿದ್ದರು. ಏಕೆಂದರೆ, ಅವನು ಅಮಲೌಷಧದ ವ್ಯಸನಿಯಾಗಿದ್ದನು. ಕಳ್ಳತನ ಮಾಡುತ್ತಿದ್ದನು. ಎಲ್ಲ ದುಶ್ಚಟಗಳು ಅವನಿಗಿತ್ತು. ಇಂಥ ದುರ್ದರ ಪರಿಸ್ಥಿತಿಯಲ್ಲೂ ನಾನು ಅವನಿಗೆ ಸುಮಾರು 37 ವರ್ಷಗಳಿಂದ ಬೈಬಲ್ ಸತ್ಯಗಳನ್ನು ತಿಳಿಸುತ್ತಾ ಬಂದೆ.” ತನ್ನ ಸಂಬಂಧಿಗೆ ಸಹಾಯಮಾಡಲು ಆಕೆ ತಾಳ್ಮೆಯಿಂದ ಮಾಡಿದ ಶತಪ್ರಯತ್ನವು ಕೊನೆಗೂ ಫಲಕೊಟ್ಟಿತು. ಅವನು ಯೆಹೋವನ ಸಾಕ್ಷಿಗಳೊಂದಿಗೆ ಬೈಬಲ್ ಅಧ್ಯಯನ ಮಾಡಲಾರಂಭಿಸಿದನು ಮತ್ತು ತನ್ನ ಬದುಕಿನಲ್ಲಿ ಮಹತ್ತಾದ ಬದಲಾವಣೆಗಳನ್ನು ಮಾಡಿದನು. ಇತ್ತೀಚಿಗೆ ಅಮೆರಿಕದ ಕ್ಯಾಲಿಫೋರ್ನಿಯದಲ್ಲಿ ನಡೆದ ಜಿಲ್ಲಾ ಅಧಿವೇಶನದಲ್ಲಿ ಜೋಯ್ಸ್ಳ ಭಾವ ದೀಕ್ಷಾಸ್ನಾನ ಪಡೆದುಕೊಂಡನು. ಆಗ ಅವನಿಗೆ 50 ವರ್ಷ ಪ್ರಾಯವಾಗಿತ್ತು. ಆ ಸಮಯದ ಕುರಿತು ಜೋಯ್ಸ್ ಹೇಳಿದ್ದು: “ನನಗೆಷ್ಟು ಸಂತೋಷವಾಯಿತೆಂದರೆ ಕಣ್ಣೀರನ್ನು ತಡಕೊಳ್ಳಲಾಗಲಿಲ್ಲ. ಅವನ ವಿಷಯದಲ್ಲಿ ನಾನು ನನ್ನ ಪ್ರಯತ್ನವನ್ನು ಬಿಟ್ಟುಬಿಡದಕ್ಕಾಗಿ ನನಗೆ ತುಂಬಾ ಸಂತೋಷವಾಗುತ್ತದೆ!”
16 ನಿಮ್ಮ ಸಂಬಂಧಿಗಳ ಹಿನ್ನೆಲೆಯಿಂದಾಗಿ ಅವರೊಂದಿಗೆ ಬೈಬಲ್ ಸತ್ಯಗಳ ಕುರಿತು ಮಾತಾಡಲು ನೀವು ಹಿಂಜರಿಯಬಹುದು. ಆದರೂ, ಅಂಥ ಯಾವುದೇ ಹಿಂಜರಿಕೆಯು ಜೋಯ್ಸ್ ತನ್ನ ಭಾವನೊಂದಿಗೆ ಮಾತಾಡುವುದನ್ನು ತಡೆಯಲಿಲ್ಲ. ಎಷ್ಟೆಂದರೂ, ಇನ್ನೊಬ್ಬನ ಹೃದಯದಲ್ಲಿ ಏನಿದೆಯೆಂಬುದು ನಮಗೆ ಹೇಗೆ ಗೊತ್ತು? ಆ ವ್ಯಕ್ತಿ ಯಥಾರ್ಥ ಹೃದಯದಿಂದ ಧಾರ್ಮಿಕ ಸತ್ಯವನ್ನು ಹುಡುಕುತ್ತಿರಬಹುದು. ಆದುದರಿಂದ, ಸತ್ಯವನ್ನು ಕಂಡುಕೊಳ್ಳುವ ಅವಕಾಶವನ್ನು ಅವನಿಗೋ ಅವಳಿಗೋ ನೀಡಲು ಹಿಂಜರಿಯಬೇಡಿ.—ಜ್ಞಾನೋಕ್ತಿ 3:27ನ್ನು ಓದಿ.
ಬೈಬಲ್ ಅಧ್ಯಯನಕ್ಕೊಂದು ಪರಿಣಾಮಕಾರಿ ಸಾಧನ
17, 18. (ಎ) ಬೈಬಲ್ ನಿಜವಾಗಿಯೂ ಏನನ್ನು ಬೋಧಿಸುತ್ತದೆ? ಪುಸ್ತಕದ ಮೌಲ್ಯದ ಕುರಿತು ಲೋಕವ್ಯಾಪಕ ವರದಿಗಳು ಏನು ತೋರಿಸುತ್ತವೆ? (ಬಿ) ಈ ಪುಸ್ತಕದ ಉಪಯೋಗದಿಂದ ನಿಮಗೆ ಯಾವ ಪ್ರೋತ್ಸಾಹದಾಯಕ ಅನುಭವಗಳು ಸಿಕ್ಕಿವೆ?
17 ಬೈಬಲ್ ಅಧ್ಯಯನಕ್ಕೆ ನೆರವು ನೀಡುವ, ಬೈಬಲ್ ನಿಜವಾಗಿಯೂ ಏನನ್ನು ಬೋಧಿಸುತ್ತದೆ? ಪುಸ್ತಕಕ್ಕೆ ಯಥಾರ್ಥ ಜನರು ಒಳ್ಳೇ ಪ್ರತಿಕ್ರಿಯೆ ತೋರಿಸುತ್ತಿದ್ದಾರೆಂದು ಪ್ರಪಂಚದಾದ್ಯಂತ ದೇಶಗಳಿಂದ ಬಂದಿರುವ ವರದಿಗಳು ತಿಳಿಯಪಡಿಸುತ್ತವೆ. ಅಮೆರಿಕದಲ್ಲಿ ಪೆನೀ ಎಂಬ ಪಯನೀಯರ್ ಸಹೋದರಿ ಈ ಪುಸ್ತಕದಿಂದ ಅನೇಕ ಅಧ್ಯಯನಗಳನ್ನು ಆರಂಭಿಸಿದಳು. ಇವರಲ್ಲಿ ಇಬ್ಬರು ವಯಸ್ಸಾದವರಾಗಿದ್ದು ಚರ್ಚಿನ ನಿಷ್ಠಾವಂತ ಸದಸ್ಯರಾಗಿದ್ದರು. ಇವರು ಬೈಬಲ್ ಬೋಧಿಸುತ್ತದೆ ಪುಸ್ತಕದಲ್ಲಿರುವ ಬೈಬಲ್ ಸತ್ಯಗಳಿಗೆ ಹೇಗೆ ಪ್ರತಿಕ್ರಿಯಿಸುವರೋ ಎಂದು ಪೆನೀ ನೆನಸಿದಳು. ಆಕೆ ಬರೆದು ತಿಳಿಸಿದ್ದು: “ಪುಸ್ತಕದಲ್ಲಿರುವ ಸ್ಪಷ್ಟ, ತರ್ಕಬದ್ಧ, ಸಂಕ್ಷಿಪ್ತ ಮಾಹಿತಿಯ ಕಾರಣ ತಾವು ಕಲಿಯುತ್ತಿರುವುದು ಸತ್ಯವೆಂದು ಅವರು ಯಾವುದೇ ವಾದವಿವಾದವಿಲ್ಲದೆ ಅಥವಾ ಭಾವನಾತ್ಮಕ ಗೊಂದಲವಿಲ್ಲದೆ ತಕ್ಷಣವೇ ಒಪ್ಪಿಕೊಂಡರು.”
18 ಬ್ರಿಟನ್ನಲ್ಲಿ ಪ್ಯಾಟ್ ಎಂಬ ಪ್ರಚಾರಕಳು ಏಷಿಯದ ಒಂದು ದೇಶದಿಂದ ಬಂದಿದ್ದ ಒಬ್ಬ ನಿರಾಶ್ರಿತ ಸ್ತ್ರೀಯೊಂದಿಗೆ ಬೈಬಲ್ ಅಧ್ಯಯನ ಪ್ರಾರಂಭಿಸಿದಳು. ಆಕೆಯ ಪತಿ ಮತ್ತು ಗಂಡುಮಕ್ಕಳನ್ನು ದಂಗೆಕೋರ ಸೈನಿಕರು ಅಪಹರಿಸಿದ್ದರು. ಆಮೇಲೆ ಅವಳು ಅವರನ್ನು ಎಂದಿಗೂ ನೋಡಲಿಲ್ಲ. ಅಲ್ಲದೆ, ತನ್ನ ದೇಶವನ್ನು ಬಿಟ್ಟು ಹೋಗುವಂತೆ ಆಕೆಯ ಮೇಲೆ ನಿರ್ಬಂಧ ಹೇರಲಾಗಿತ್ತು. ಆಕೆಗೆ ಜೀವದ ಬೆದರಿಕೆ ಹಾಕಲಾಗಿತ್ತು. ಆಕೆಯ ಮನೆಯನ್ನು ಸುಟ್ಟುಹಾಕಲಾಗಿತ್ತು ಮತ್ತು ಆಕೆಯ ಮೇಲೆ ಸಾಮೂಹಿಕ ಅತ್ಯಾಚಾರವೆಸಗಲಾಯಿತು. ಇದೆಲ್ಲದರಿಂದಾಗಿ ಆಕೆಗೆ ಜೀವನದ ಮೇಲೆ ಜಿಗುಪ್ಸೆ ಹುಟ್ಟಿತು. ಅನೇಕವೇಳೆ ಆತ್ಮಹತ್ಯೆಯ ಕುರಿತೂ ಅವಳು ಯೋಚಿಸಿದ್ದಳು. ಆದರೆ ಬೈಬಲ್ ಅಧ್ಯಯನ ಆಕೆಗೆ ನಿರೀಕ್ಷೆಯನ್ನು ಕೊಟ್ಟಿತು. ಪ್ಯಾಟ್ ಬರೆಯುವುದು: “ಬೈಬಲ್ ಬೋಧಿಸುತ್ತದೆ ಪುಸ್ತಕದ ಸರಳವಾದ ವಿವರಣೆಗಳು ಮತ್ತು ದೃಷ್ಟಾಂತಗಳು ಆಕೆಯ ಮೇಲೆ ಗಾಢ ಪರಿಣಾಮ ಬೀರಿದವು.” ಆ ವಿದ್ಯಾರ್ಥಿನಿ ಶೀಘ್ರವಾಗಿ ಪ್ರಗತಿ ಮಾಡಿ, ಅಸ್ನಾತ ಪ್ರಚಾರಕಳಾಗಲು ಅರ್ಹಳಾದಳು. ಮುಂದಿನ ಸಮ್ಮೇಳನದಲ್ಲಿ ದೀಕ್ಷಾಸ್ನಾನ ಹೊಂದುವ ಮನದಿಚ್ಛೆಯನ್ನು ವ್ಯಕ್ತಪಡಿಸಿದಳು. ಬೈಬಲ್ ನೀಡುವ ನಿರೀಕ್ಷೆಯನ್ನು ಯಥಾರ್ಥ ಜನರು ತಿಳಿದು ಮಾನ್ಯಮಾಡುವಂತೆ ಸಹಾಯ ನೀಡುವುದು ಎಷ್ಟು ಆನಂದಕರ!
‘ಒಳ್ಳೇದನ್ನು ಮಾಡುವುದನ್ನು’ ಬಿಟ್ಟುಬಿಡದಿರಿ
19. ಸಾರುವ ಕಾರ್ಯವು ತುಂಬ ತುರ್ತಿನದ್ದಾಗಿರುವುದೇಕೆ?
19 ಒಂದೊಂದು ದಿನವು ದಾಟುತ್ತಿದ್ದಂತೆ ಸಾರುವ ಮತ್ತು ಶಿಷ್ಯರನ್ನಾಗಿ ಮಾಡುವ ನಮ್ಮ ನೇಮಕವು ಇನ್ನಷ್ಟು ತುರ್ತಿನದ್ದಾಗುತ್ತದೆ. ಪ್ರತಿ ವರ್ಷ ಯೋಗ್ಯ ಮನೋಭಾವದ ಸಾವಿರಾರು ಜನರು ನಮ್ಮ ಸಾರುವ ಕೆಲಸಕ್ಕೆ ಪ್ರತಿಕ್ರಿಯೆ ತೋರಿಸುತ್ತಾರೆ. ಆದರೂ, “ಯೆಹೋವನ ಮಹಾದಿನವು” ಹತ್ತಿರವಾಗುತ್ತಿದ್ದಂತೆ ಆಧ್ಯಾತ್ಮಿಕ ಕತ್ತಲೆಯಲ್ಲಿರುವವರು “ಕೊಲೆಗೆ ಸೆಳೆಯಲ್ಪಟ್ಟವರು” ಆಗಿರುತ್ತಾರೆ.—ಚೆಫ. 1:14; ಜ್ಞಾನೋ. 24:11.
20. ನಮ್ಮಲ್ಲಿ ಪ್ರತಿಯೊಬ್ಬರು ಏನು ಮಾಡಲು ದೃಢತೆಯಿಂದಿರಬೇಕು?
20 ಅಂಥವರಿಗೆ ನಾವಿನ್ನೂ ಸಹಾಯ ನೀಡಬಲ್ಲೆವು. ಅದಕ್ಕಾಗಿ ನಾವು ಪ್ರಥಮ ಶತಮಾನದ ಕ್ರೈಸ್ತರನ್ನು ಅನುಕರಿಸತಕ್ಕದ್ದು. ಅವರು “ಎಡೆಬಿಡದೆ . . . ಕ್ರಿಸ್ತನಾದ ಯೇಸುವಿನ ವಿಷಯವಾದ ಶುಭವರ್ತಮಾನವನ್ನು ಸಾರುತ್ತಾ ಇದ್ದರು.” (ಅ. ಕೃ. 5:42) ಆದುದರಿಂದ, ಅವರಂತೆ ವಿರೋಧದ ಮಧ್ಯೆಯೂ ಪಟ್ಟುಹಿಡಿದು ಸಾರಿರಿ. ನಿಮ್ಮ ‘ಬೋಧನಾ ಕಲೆಗೆ’ ಗಮನಕೊಡಿರಿ. ನಿಷ್ಪಕ್ಷಪಾತದಿಂದ ಎಲ್ಲರಿಗೂ ಸಾರಿರಿ. ಹೀಗೆ ಅವರ ಮಾದರಿಯನ್ನು ಅನುಸರಿಸಿರಿ. “ಒಳ್ಳೇದನ್ನು ಮಾಡುವದರಲ್ಲಿ ಬೇಸರಗೊಳ್ಳದೆ ಇರೋಣ” ಅಂದರೆ ಬಿಟ್ಟುಬಿಡದಿರೋಣ. ಹಾಗೆ ಮಾಡುತ್ತ ಇರುವಲ್ಲಿ, ನಾವು ದೈವಿಕ ಒಪ್ಪಿಗೆಯ ಸಮೃದ್ಧ ಆಶೀರ್ವಾದಗಳನ್ನು ಕೊಯ್ಯುವೆವು.—2 ತಿಮೊ. 4:2; ಗಲಾತ್ಯ 6:9ನ್ನು ಓದಿ.
[ಪಾದಟಿಪ್ಪಣಿ]
a ಕೆಲವು ಹೆಸರುಗಳನ್ನು ಬದಲಾಯಿಸಲಾಗಿದೆ.
ನೀವು ಹೇಗೆ ಉತ್ತರಿಸುವಿರಿ?
• ಸುವಾರ್ತೆಗೆ ಯಾರು ಪ್ರತಿಕ್ರಿಯೆ ತೋರಿಸುತ್ತಿದ್ದಾರೆ?
• ನಾವು ಸಾರುವಾಗ ಜನರ ಕುರಿತು ದುಡುಕಿ ತೀರ್ಮಾನಿಸಬಾರದೇಕೆ?
• ಬೈಬಲ್ ನಿಜವಾಗಿಯೂ ಏನನ್ನು ಬೋಧಿಸುತ್ತದೆ? ಪುಸ್ತಕದಿಂದ ಯಾವ ಫಲಿತಾಂಶಗಳು ದೊರಕುತ್ತಿವೆ?
[ಪುಟ 13ರಲ್ಲಿರುವ ಚಿತ್ರಗಳು]
ಸಾವಿರಾರು ಯಥಾರ್ಥ ಜನರು ಪ್ರತಿಕ್ರಿಯಿಸುತ್ತಿದ್ದಾರೆ
[ಪುಟ 15ರಲ್ಲಿರುವ ಚಿತ್ರಗಳು]
ಅಪೊಸ್ತಲ ಪೌಲನು ಮಾಡಿದ ಬದಲಾವಣೆಗಳಿಂದ ನಾವೇನು ಕಲಿಯಬಲ್ಲೆವು?
[ಪುಟ 16ರಲ್ಲಿರುವ ಚಿತ್ರ]
ಸುವಾರ್ತಾಘೋಷಕರು ಜನರ ಕುರಿತು ದುಡುಕಿ ತೀರ್ಮಾನಿಸುವುದಿಲ್ಲ