ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • w08 2/15 ಪು. 7-11
  • ಯೆಹೋವನ ಮಾರ್ಗಗಳಲ್ಲಿ ನಡೆಯಿರಿ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಯೆಹೋವನ ಮಾರ್ಗಗಳಲ್ಲಿ ನಡೆಯಿರಿ
  • ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2008
  • ಉಪಶೀರ್ಷಿಕೆಗಳು
  • ಅನುರೂಪ ಮಾಹಿತಿ
  • ನೀವು ಭರವಸಾರ್ಹರೆಂದು ತೋರಿಸಿಕೊಡಿ
  • ಯಾವಾಗಲೂ “ದೀನಭಾವ” ಉಳ್ಳವರಾಗಿರಿ
  • ಧೀರರೂ ಬಲಶಾಲಿಗಳೂ ಆಗಿರಿ
  • ಪರಹಿತ ನೋಡಿರಿ
  • ಯೆಹೋವನ ಮಾರ್ಗಗಳಲ್ಲಿ ನಡೆಯುತ್ತಾ ಇರಿ
  • ಸಹಾಯ, ಸಾಂತ್ವನ ನೀಡಲು ಸದಾ ಮುಂದಿರಿ
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಅಧ್ಯಯನ)—2020
  • ಅರಿಸ್ತಾರ್ಕ—ನಿಷ್ಠಾವಂತ ಸಂಗಾತಿ
    ಕಾವಲಿನಬುರುಜು—1997
  • ಪ್ರಾಣಸ್ನೇಹಿತರಾದರು
    ಅವರ ನಂಬಿಕೆಯನ್ನು ಅನುಕರಿಸಿ
  • ಯೆಹೋವನಿಗೆ ಸದಾ ನಿಷ್ಠೆ ತೋರಿಸಿ
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಅಧ್ಯಯನ)—2016
ಇನ್ನಷ್ಟು
ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2008
w08 2/15 ಪು. 7-11

ಯೆಹೋವನ ಮಾರ್ಗಗಳಲ್ಲಿ ನಡೆಯಿರಿ

“ಯೆಹೋವನಲ್ಲಿ ಭಯಭಕ್ತಿಯುಳ್ಳವನಾಗಿ ಆತನ ಮಾರ್ಗಗಳಲ್ಲಿ ನಡೆಯುವವನು ಧನ್ಯನು [“ಸಂತೋಷಿತನು,” NW].”—ಕೀರ್ತ. 128:1.

1, 2. ನಿಜವಾಗಿ ಸಂತೋಷಿತರಾಗಿರಲು ಸಾಧ್ಯವಿದೆ ಎಂದು ನಾವೇಕೆ ನಿಶ್ಚಯದಿಂದಿರಬಲ್ಲೆವು?

ಸಂತೋಷ ಎಲ್ಲರಿಗೂ ಬೇಕು. ಆದರೆ ಸಂತೋಷಕ್ಕಾಗಿ ಆಶಿಸುವುದು ಮತ್ತು ಅದನ್ನು ಬೆನ್ನಟ್ಟುವುದು ಸಹ, ಅದನ್ನು ಅನುಭವಿಸುವುದಕ್ಕಿಂತ ಭಿನ್ನವಾಗಿದೆ ಎಂದು ನೀವು ನಿಸ್ಸಂದೇಹವಾಗಿಯೂ ಒಪ್ಪುವಿರಿ.

2 ಹೌದು, ನಿಜವಾಗಿ ಸಂತೋಷಿತರಾಗಿರಲು ಸಾಧ್ಯವಿದೆ. “ಯೆಹೋವನಲ್ಲಿ ಭಯಭಕ್ತಿಯುಳ್ಳವನಾಗಿ ಆತನ ಮಾರ್ಗಗಳಲ್ಲಿ ನಡೆಯುವವನು ಧನ್ಯನು [“ಸಂತೋಷಿತನು,” NW]” ಎಂದು ಹೇಳುತ್ತದೆ ಕೀರ್ತನೆ 128:1. ನಾವು ಸಂತೋಷಿತರಾಗಿರಬೇಕಾದರೆ ದೇವರನ್ನು ಆರಾಧಿಸಿ, ಆತನ ಚಿತ್ತವನ್ನು ಮಾಡುವ ಮೂಲಕ ಆತನ ಮಾರ್ಗಗಳಲ್ಲಿ ನಡೆಯಬೇಕು. ಇದು ನಮ್ಮ ನಡತೆ ಹಾಗೂ ನಾವು ತೋರಿಸುವ ಗುಣಗಳ ಮೇಲೆ ಯಾವ ಪರಿಣಾಮ ಬೀರುವುದು?

ನೀವು ಭರವಸಾರ್ಹರೆಂದು ತೋರಿಸಿಕೊಡಿ

3. ದೇವರಿಗೆ ನಾವು ಮಾಡಿದ ಸಮರ್ಪಣೆಗೆ ಭರವಸಾರ್ಹತೆಯು ಹೇಗೆ ಸಂಬಂಧಿಸುತ್ತದೆ?

3 ಯೆಹೋವನಿಗೆ ಭಯಪಡುವವರು ಆತನಂತೆಯೇ ಭರವಸಾರ್ಹರು. ಯೆಹೋವನು ಪ್ರಾಚೀನ ಇಸ್ರಾಯೇಲಿಗೆ ಮಾಡಿದ ಪ್ರತಿಯೊಂದು ವಾಗ್ದಾನವನ್ನು ನೆರವೇರಿಸಿದನು. (1 ಅರ. 8:56) ನಾವು ದೇವರಿಗೆ ಮಾಡಿದ ಸಮರ್ಪಣೆಯು ಆತನಿಗೆ ಕೊಟ್ಟಿರುವ ಅತ್ಯಂತ ಮಹತ್ವಪೂರ್ಣ ವಚನವಾಗಿದೆ. ಎಡೆಬಿಡದೆ ಪ್ರಾರ್ಥನೆಮಾಡುವುದು ನಾವು ಕೊಟ್ಟ ಆ ಮಾತನ್ನು ಪಾಲಿಸುವಂತೆ ನೆರವಾಗುವುದು. ನಾವು ಕೀರ್ತನೆಗಾರನಾದ ದಾವೀದನಂತೆ ಹೀಗೆ ಪ್ರಾರ್ಥಿಸಬಹುದು: “ದೇವರೇ, ನೀನು ನನ್ನ ಹರಕೆಗಳಿಗೆ ಲಕ್ಷ್ಯಕೊಟ್ಟಿದ್ದೀ; . . . ನಾನು ಪ್ರತಿದಿನವೂ ನನ್ನ ಹರಕೆಗಳನ್ನು ಸಲ್ಲಿಸುವವನಾಗಿ ನಿನ್ನ ನಾಮವನ್ನು ಸದಾ ಸ್ಮರಿಸಿ ಕೀರ್ತಿಸುತ್ತಿರುವೆನು.” (ಕೀರ್ತ. 61:5, 8; ಪ್ರಸಂ. 5:4-6) ದೇವರ ಸ್ನೇಹಿತರಾಗಿರಲಿಕ್ಕಾಗಿ ನಾವು ಭರವಸಾರ್ಹರಾಗಿರಬೇಕು.—ಕೀರ್ತ. 15:1, 4.

4. ಯೆಫ್ತಾಹ ಮತ್ತವನ ಮಗಳು, ಅವನು ಯೆಹೋವನಿಗೆ ಮಾಡಿದ ಹರಕೆಯ ವಿಷಯದಲ್ಲಿ ಹೇಗೆ ನಡೆದುಕೊಂಡರು?

4 ಇಸ್ರಾಯೇಲಿನ ನ್ಯಾಯಸ್ಥಾಪಕರ ಕಾಲದಲ್ಲಿ, ಯೆಫ್ತಾಹನು ಒಂದು ಹರಕೆಹೊತ್ತನು. ಅದೇನೆಂದರೆ, ಯೆಹೋವನು ತನಗೆ ಅಮ್ಮೋನಿಯರ ಮೇಲೆ ಜಯ ಕೊಡುವಲ್ಲಿ, ತಾನು ಕದನದಿಂದ ಹಿಂದಿರುಗಿ ಬಂದಾಗ ಯಾರು ತನ್ನನ್ನು ಮೊದಲು ಎದುರುಗೊಳ್ಳುವರೊ ಅವರನ್ನು “ಹೋಮಮಾಡು”ವೆನೆಂದೇ. ಅವನನ್ನು ಮೊದಲಾಗಿ ಎದುರುಗೊಂಡದ್ದು ಅವನ ಏಕಮಾತ್ರ ಪುತ್ರಿ. ಯೆಹೋವನಲ್ಲಿ ನಂಬಿಕೆಯಿಟ್ಟು, ಯೆಫ್ತಾಹ ಮತ್ತು ಅವನ ಆ ಅವಿವಾಹಿತ ಮಗಳು ಅವನು ಕೊಟ್ಟ ಹರಕೆಯನ್ನು ಸಲ್ಲಿಸಿದರು. ಇಸ್ರಾಯೇಲಿನಲ್ಲಿ ವಿವಾಹ ಮತ್ತು ಮಕ್ಕಳನ್ನು ಹಡೆಯುವುದಕ್ಕೆ ಹೆಚ್ಚಿನ ಮಹತ್ವ ಕೊಡಲಾಗುತ್ತಿತ್ತಾದರೂ, ಯೆಫ್ತಾಹನ ಮಗಳು ಸಿದ್ಧಮನಸ್ಸಿನಿಂದ ಅವಿವಾಹಿತಳಾಗಿ ಉಳಿದಳು ಮತ್ತು ಯೆಹೋವನ ಗುಡಾರದಲ್ಲಿ ಪವಿತ್ರ ಸೇವೆಸಲ್ಲಿಸುವ ಸದವಕಾಶ ಹೊಂದಿದಳು.—ನ್ಯಾಯ. 11:28-40.

5. ಹನ್ನಳು ಯಾವ ವಿಧದಲ್ಲಿ ಭರವಸಾರ್ಹಳೆಂದು ಕಂಡುಬಂದಳು?

5 ದೇವಭಕ್ತೆಯಾದ ಹನ್ನಳು ಭರವಸಾರ್ಹಳಾಗಿ ಕಂಡುಬಂದಳು. ಅವಳು ತನ್ನ ಲೇವ್ಯ ಗಂಡನಾದ ಎಲ್ಕಾನ ಮತ್ತವನ ಎರಡನೇ ಹೆಂಡತಿ ಪೆನಿನ್ನಳೊಂದಿಗೆ ಎಫ್ರಾಯೀಮ್‌ ಬೆಟ್ಟದ ಸೀಮೆಯಲ್ಲಿ ವಾಸಿಸುತ್ತಿದ್ದಳು. ಪೆನಿನ್ನ ಅನೇಕ ಮಕ್ಕಳನ್ನು ಹಡೆದುದ್ದರಿಂದ ಬಂಜೆಯಾಗಿದ್ದ ಹನ್ನಳಿಗೆ, ವಿಶೇಷವಾಗಿ ಅವರು ಇಡೀ ಕುಟುಂಬವಾಗಿ ದೇವಗುಡಾರಕ್ಕೆ ಹೋಗುತ್ತಿದ್ದಾಗ ಕೊಂಕು ನುಡಿಯುತ್ತಿದ್ದಳು. ಇಂಥ ಒಂದು ಸಂದರ್ಭದಲ್ಲಿ ಹನ್ನಳು, ತನಗೊಬ್ಬ ಗಂಡುಮಗು ಹುಟ್ಟುವಲ್ಲಿ ಅವನನ್ನು ಯೆಹೋವನಿಗೆ ಅರ್ಪಿಸುವೆನೆಂದು ಹರಕೆಹೊತ್ತಳು. ಸ್ವಲ್ಪದರಲ್ಲೇ ಅವಳು ಗರ್ಭವರ್ತಿಯಾಗಿ ಒಂದು ಗಂಡುಮಗುವನ್ನು ಹೆತ್ತು, ಸಮುವೇಲನೆಂದು ಹೆಸರಿಟ್ಟಳು. ಅವನು ಮೊಲೆಬಿಟ್ಟ ನಂತರ ಹನ್ನ ಅವನನ್ನು ಶೀಲೋವಿನಲ್ಲಿ ದೇವರಿಗೆ ಅರ್ಪಿಸಿದಳು. “ಅವನು ಜೀವದಿಂದಿರುವ ತನಕ” ಯೆಹೋವನ ಸೇವೆಗೆ ಬಿಟ್ಟುಕೊಟ್ಟಳು. (1 ಸಮು. 1:11) ಮುಂದೆ ತನಗೆ ಇತರ ಮಕ್ಕಳಾಗುವರೆಂದು ಅವಳಿಗೆ ತಿಳಿದಿರದಿದ್ದರೂ ಈ ರೀತಿಯಲ್ಲಿ ತನ್ನ ಹರಕೆಯನ್ನು ಸಲ್ಲಿಸಿದಳು.—1 ಸಮು. 2:20, 21.

6. ತುಖಿಕನ ಭರವಸಾರ್ಹತೆಯು ಹೇಗೆ ತೋರಿಬಂತು?

6 ಪ್ರಥಮ ಶತಮಾನದ ಕ್ರೈಸ್ತನಾದ ತುಖಿಕನು ಒಬ್ಬ ಭರವಸಾರ್ಹ ಪುರುಷನು ಹಾಗೂ ‘ನಂಬಿಗಸ್ತ ಸೇವಕ’ನಾಗಿದ್ದನು. (ಕೊಲೊ. 4:7) ತುಖಿಕನು ಅಪೊಸ್ತಲ ಪೌಲನೊಂದಿಗೆ ಗ್ರೀಸ್‌ನಿಂದ ಹಿಡಿದು ಮಕೆದೋನ್ಯಕ್ಕೆ, ಏಷ್ಯಾಮೈನರ್‌ಗೆ ಹಾಗೂ ಬಹುಶಃ ಯೆರೂಸಲೇಮಿಗೂ ಪ್ರಯಾಣಿಸಿದನು. (ಅ. ಕೃ. 20:2-4) ಯೂದಾಯದ ಬಡ ಜೊತೆ ವಿಶ್ವಾಸಿಗಳಿಗೆ ಧರ್ಮಕಾರ್ಯ ನಡೆಸಲು ತೀತನಿಗೆ ಸಹಾಯಮಾಡಿದ “ಸಹೋದರನು” ಇವನೇ ಆಗಿರಬಹುದು. (2 ಕೊರಿಂ. 8:18, 19; 12:18) ಪೌಲನು ರೋಮ್‌ನಲ್ಲಿ ಪ್ರಥಮ ಬಾರಿ ಸೆರೆಮನೆಯಲ್ಲಿದ್ದಾಗ, ತನ್ನ ಭರವಸಾರ್ಹ ಪ್ರತಿನಿಧಿಯಾದ ತುಖಿಕನ ಮೂಲಕ ಎಫೆಸ ಹಾಗೂ ಕೊಲೊಸ್ಸೆಯಲ್ಲಿರುವ ಜೊತೆ ವಿಶ್ವಾಸಿಗಳಿಗೆ ಪತ್ರಗಳನ್ನು ಕಳುಹಿಸಿದನು. (ಎಫೆ. 6:21, 22; ಕೊಲೊ. 4:7-9) ಪೌಲನು ರೋಮ್‌ನಲ್ಲಿ ಎರಡನೇ ಬಾರಿ ಸೆರೆವಾಸದಲ್ಲಿದ್ದಾಗ ತುಖಿಕನನ್ನು ಎಫೆಸಕ್ಕೆ ಕಳುಹಿಸಿದನು. (2 ತಿಮೊ. 4:11) ಭರವಸಾರ್ಹರಾಗಿರುವಲ್ಲಿ ನಾವು ಸಹ ಯೆಹೋವನ ಸೇವೆಯಲ್ಲಿ ಆಶೀರ್ವಾದಗಳನ್ನು ಆನಂದಿಸುವೆವು.

7, 8. ದಾವೀದಯೋನಾತಾನರು ನಿಜ ಮಿತ್ರರಾಗಿದ್ದರೆಂದು ಏಕೆ ಹೇಳಸಾಧ್ಯವಿದೆ?

7 ನಾವು ಭರವಸಾರ್ಹ ಸ್ನೇಹಿತರಾಗಿರುವಂತೆ ದೇವರು ಅಪೇಕ್ಷಿಸುತ್ತಾನೆ. (ಜ್ಞಾನೋ. 17:17) ರಾಜ ಸೌಲನ ಮಗನಾದ ಯೋನಾತಾನನು ದಾವೀದನ ಸ್ನೇಹಿತನಾದನು. ದಾವೀದನು ಗೊಲ್ಯಾತನನ್ನು ಕೊಂದಿದ್ದಾನೆಂದು ಯೋನಾತಾನನಿಗೆ ತಿಳಿದುಬಂದಾಗ, ಅವನ “ಪ್ರಾಣವು ದಾವೀದನ ಪ್ರಾಣದೊಡನೆ ಒಂದಾಯಿತು. ಅವನು [ದಾವೀದನನ್ನು] ತನ್ನ ಪ್ರಾಣದಂತೆಯೇ ಪ್ರೀತಿಸ ತೊಡಗಿದನು.” (1 ಸಮು. 18:1, 3) ಸೌಲನು ದಾವೀದನನ್ನು ಕೊಲ್ಲಲು ಹೊರಟಾಗ, ಯೋನಾತಾನನು ಅವನನ್ನು ಎಚ್ಚರಿಸಿದನು ಸಹ. ದಾವೀದನು ಓಡಿಹೋದ ಬಳಿಕ, ಯೋನಾತಾನನು ಅವನನ್ನು ಸಂಧಿಸಿ, ಅವನೊಂದಿಗೆ ಒಡಂಬಡಿಕೆಮಾಡಿಕೊಂಡನು. ದಾವೀದನ ಕುರಿತಾಗಿ ಒಮ್ಮೆ ಯೋನಾತಾನನು ಸೌಲನೊಂದಿಗೆ ಮಾತಾಡಿದಾಗ ತನ್ನ ಜೀವವನ್ನೇ ಕಳೆದುಕೊಳ್ಳುವುದರಲ್ಲಿದ್ದನು. ಆದರೂ ಆ ಇಬ್ಬರು ಮಿತ್ರರು ಪುನಃ ಭೇಟಿಯಾಗಿ ತಮ್ಮ ಸ್ನೇಹದ ಬಂಧವನ್ನು ಬಲಪಡಿಸಿದರು. (1 ಸಮು. 20:24-41) ಅವರು ಕೊನೆ ಬಾರಿ ಭೇಟಿಯಾದಾಗ, ಯೋನಾತಾನನು ದಾವೀದನನ್ನು ‘ದೇವರಲ್ಲಿ ಬಲಪಡಿಸಿದನು.’—1 ಸಮು. 23:16-18.

8 ಯೋನಾತಾನನು ಫಿಲಿಷ್ಟ್ಯರ ವಿರುದ್ಧ ನಡೆದ ಕದನದಲ್ಲಿ ಮರಣಕ್ಕೀಡಾದನು. (1 ಸಮು. 31:6) ಅವನಿಗೋಸ್ಕರ ರಚಿಸಿದ ಒಂದು ವಿಲಾಪಗೀತೆಯಲ್ಲಿ ದಾವೀದನು ಹಾಡಿದ್ದು: “ಯೋನಾತಾನನೇ, ನನ್ನ ಸಹೋದರನೇ, ನಿನಗೋಸ್ಕರ ನನ್ನಲ್ಲಿ ಬಹು ಸಂಕಟವುಂಟಾಗಿದೆ; ನೀನು ನನಗೆ ಬಹುಮನೋಹರನಾಗಿದ್ದಿ. ನನ್ನ ಮೇಲಿದ್ದ ನಿನ್ನ ಪ್ರೀತಿಯು ಆಶ್ಚರ್ಯಕರವಾದದ್ದೇ ಸರಿ; ಅದು ಸತೀಪ್ರೇಮಕ್ಕಿಂತ ಶ್ರೇಷ್ಠವಾದದ್ದು.” (2 ಸಮು. 1:26) ಇದು ಸ್ನೇಹಿತರ ಮಧ್ಯೆ ಇರುವ ಪ್ರೀತಿಯಾಗಿದ್ದು, ಇದರಲ್ಲಿ ಯಾವುದೇ ಲೈಂಗಿಕತೆ ಒಳಗೂಡಿರಲಿಲ್ಲ. ದಾವೀದ ಯೋನಾತಾನರು ನಿಜ ಮಿತ್ರರಾಗಿದ್ದರು.

ಯಾವಾಗಲೂ “ದೀನಭಾವ” ಉಳ್ಳವರಾಗಿರಿ

9. ದೀನಭಾವದ ಮಹತ್ವವನ್ನು ನ್ಯಾಯಸ್ಥಾಪಕರು ಪುಸ್ತಕದ ಅಧ್ಯಾಯ 9ರಲ್ಲಿ ಹೇಗೆ ತೋರಿಸಲಾಗಿದೆ?

9 ದೇವರ ಸ್ನೇಹಿತರಾಗಿರಲು ನಾವು “ದೀನಭಾವ” ಉಳ್ಳವರಾಗಿರಬೇಕು. (1 ಪೇತ್ರ 3:8; ಕೀರ್ತ. 138:6) ದೀನಭಾವದ ಮಹತ್ವವನ್ನು ನ್ಯಾಯಸ್ಥಾಪಕರು ಪುಸ್ತಕದ ಅಧ್ಯಾಯ 9ರಲ್ಲಿ ತೋರಿಸಲಾಗಿದೆ. ಗಿದ್ಯೋನನ ಮಗನಾದ ಯೋತಾಮನು ಹೇಳಿದ್ದು: ‘ಮರಗಳು ತಮಗೋಸ್ಕರ ಒಬ್ಬ ಅರಸನನ್ನು ಅಭಿಷೇಕಿಸಬೇಕೆಂದು ಹೊರಟವು.’ ಆಲಿವ್‌ ಮರ, ಅಂಜೂರ ಗಿಡ ಮತ್ತು ದ್ರಾಕ್ಷಾಲತೆಗಳ ಹೆಸರು ತಿಳಿಸಲಾಯಿತು. ಇವು, ಜೊತೆ ಇಸ್ರಾಯೇಲ್ಯರ ಮೇಲೆ ಆಡಳಿತ ನಡೆಸಲು ಅರ್ಹತೆಯಿದ್ದರೂ ಅದಕ್ಕಾಗಿ ಆಸೆಪಡದಿದ್ದ ವ್ಯಕ್ತಿಗಳಿಗೆ ಸೂಚಿಸಿದವು. ಆದರೆ ಕೇವಲ ಇಂಧನಕ್ಕಾಗಿ ಉಪಯೋಗವಾಗುತ್ತಿದ್ದ ಮುಳ್ಳುಗಿಡವು, ಗರ್ವಿಷ್ಠ ಅಬೀಮೆಲೆಕನ ರಾಜ್ಯಾಳಿಕೆಯನ್ನು ಪ್ರತಿನಿಧಿಸಿತು. ಅವನು ಇತರರ ಮೇಲೆ ಅಧಿಕಾರ ನಡೆಸಲು ಹಾತೊರೆಯುತ್ತಿದ್ದ ಕೊಲೆಗಾರನಾಗಿದ್ದನು. ಅವನು ಇಸ್ರಾಯೇಲನ್ನು “ಮೂರು ವರ್ಷ ಆಳಿದನಂತರ” ಅಕಾಲ ಮರಣಕ್ಕೆ ತುತ್ತಾದನು. (ನ್ಯಾಯ. 9:8-15, 22, 50-54) “ದೀನಭಾವ” ಉಳ್ಳವರಾಗಿರುವುದು ಎಷ್ಟು ಉತ್ತಮ!

10. ಹೆರೋದನು ‘ದೇವರಿಗೆ ಘನ ಸಲ್ಲಿಸದೆ’ ಹೋದ ಸಂಗತಿಯಿಂದ ನೀವೇನು ಕಲಿತುಕೊಂಡಿರಿ?

10 ಸಾ.ಶ. ಪ್ರಥಮ ಶತಮಾನದಲ್ಲಿ, ಯೆಹೂದದ ಅಹಂಭಾವದ ರಾಜ ಹೆರೋದ ಹಾಗೂ ತೂರ್‌ ಸೀದೋನಿನ ನಿವಾಸಿಗಳ ನಡುವೆ ಸಂಬಂಧಗಳು ಕೆಟ್ಟುಹೋದವು. ಆದರೆ ಆ ನಿವಾಸಿಗಳು ಅವನೊಂದಿಗೆ ಶಾಂತಿಮಾಡಲು ಪ್ರಯತ್ನಿಸಿದರು. ಒಂದು ಸಂದರ್ಭದಲ್ಲಿ ಅವನು ಸಾರ್ವಜನಿಕರನ್ನು ಉದ್ದೇಶಿಸಿ ಮಾತಾಡುತ್ತಿದ್ದಾಗ ಅವರು ಆರ್ಭಟಿಸಿದ್ದು: “ಇದು ಮನುಷ್ಯನ ನುಡಿಯಲ್ಲ, ದೇವರ ನುಡಿಯೇ.” ಅವರ ಈ ಸ್ತುತಿಯ ಮಾತುಗಳನ್ನು ಹೆರೋದನು ತಳ್ಳಿಹಾಕಲಿಲ್ಲ. “ಆ ಘನವನ್ನು ಅವನು ದೇವರಿಗೆ ಸಲ್ಲಿಸದೆ ಹೋದದರಿಂದ” ಯೆಹೋವನ ದೂತನು ಅವನನ್ನು ಬಡಿದು ಅವನು ಘೋರ ಸಾವಿಗೀಡಾದನು. (ಅ. ಕೃ. 12:20-23) ಭಾಷಣಕರ್ತರಾಗಿ ಇಲ್ಲವೇ ಬೈಬಲ್‌ ಸತ್ಯಗಳ ಶಿಕ್ಷಕರಾಗಿ ನಾವು ಸಾಧಾರಣಮಟ್ಟಿಗೆ ಕುಶಲರಾಗಿರುವಲ್ಲಿ ಆಗೇನು? ದೇವರು ನಮಗೇನನ್ನು ಮಾಡುವಂತೆ ಅನುಮತಿಸುತ್ತಾನೋ ಅದಕ್ಕೆ ನಾವು ದೇವರಿಗೇ ಘನ ಸಲ್ಲಿಸೋಣ.—1 ಕೊರಿಂ. 4:6, 7; ಯಾಕೋ. 4:6.

ಧೀರರೂ ಬಲಶಾಲಿಗಳೂ ಆಗಿರಿ

11, 12. ಹನೋಕನ ಅನುಭವವು ಯೆಹೋವನು ತನ್ನ ಸೇವಕರಿಗೆ ಧೈರ್ಯ ಹಾಗೂ ಬಲ ಕೊಡುತ್ತಾನೆಂದು ಹೇಗೆ ತೋರಿಸುತ್ತದೆ?

11 ನಾವು ದೀನಭಾವದಿಂದ ಯೆಹೋವನ ಮಾರ್ಗಗಳಲ್ಲಿ ನಡೆಯುವಲ್ಲಿ ಆತನು ನಮಗೆ ಧೈರ್ಯ ಹಾಗೂ ಬಲ ಕೊಡುವನು. (ಧರ್ಮೋ. 31:6-8, 23) ಆದಾಮನ ವಂಶಾವಳಿಯಲ್ಲಿ ಏಳನೆಯವನಾದ ಹನೋಕನು, ತನ್ನ ದುಷ್ಟ ಸಮಕಾಲೀನರ ಮಧ್ಯೆ ಜೀವಿಸಿಯೂ ನೆಟ್ಟಗಿನ ನಡತೆಯನ್ನು ಕಾಪಾಡಿಕೊಳ್ಳುತ್ತಾ ಧೈರ್ಯದಿಂದ ದೇವರೊಂದಿಗೆ ನಡೆದನು. (ಆದಿ. 5:21-24) ಆ ದುಷ್ಟ ಜನರ ಭಕ್ತಿಹೀನ ನಡೆನುಡಿಗಳ ಕಾರಣ ಅವರಿಗೊಂದು ತೀಕ್ಷ್ಣ ಸಂದೇಶವನ್ನು ಕೊಡುವಂತೆ ಯೆಹೋವನು ಹನೋಕನನ್ನು ಬಲಪಡಿಸಿದನು. (ಯೂದ 14, 15 ನ್ನು ಓದಿ.) ದೇವರ ತೀರ್ಪುಗಳನ್ನು ಘೋಷಿಸಲು ಬೇಕಾದ ಧೈರ್ಯ ನಿಮಗಿದೆಯೋ?

12 ನೋಹನ ದಿನದಲ್ಲಿನ ಭೌಗೋಳಿಕ ಜಲಪ್ರಳಯದಲ್ಲಿ ಯೆಹೋವನು ಭಕ್ತಿಹೀನರ ಮೇಲೆ ನ್ಯಾಯತೀರ್ಪನ್ನು ಜಾರಿಗೊಳಿಸಿದನು. ಆದರೂ, ನಮ್ಮ ದಿನದಲ್ಲಿರುವ ಭಕ್ತಿಹೀನ ಜನರನ್ನು ದೇವರ ಪವಿತ್ರ ದೂತಗಣಗಳು ಬೇಗನೆ ನಾಶಗೊಳಿಸುವುದರಿಂದ ಹನೋಕನ ಪ್ರವಾದನೆ ನಮಗೆ ಉತ್ತೇಜನದಾಯಕ ಆಗಿದೆ. (ಪ್ರಕ. 16:14-16; 19:11-16) ಯೆಹೋವನ ಸಂದೇಶಗಳು ಆತನ ನ್ಯಾಯತೀರ್ಪುಗಳ ಕುರಿತಾಗಿರಲಿ ಇಲ್ಲವೇ ರಾಜ್ಯಾಳಿಕೆಯ ಕೆಳಗಿನ ಆಶೀರ್ವಾದಗಳ ಕುರಿತಾಗಿರಲಿ ಅವುಗಳನ್ನು ಘೋಷಿಸಲು ನಮ್ಮ ಪ್ರಾರ್ಥನೆಗಳಿಗೆ ಉತ್ತರವಾಗಿ ಆತನು ಧೈರ್ಯಕೊಡುತ್ತಾನೆ.

13. ಮನಗುಂದಿಸುವಂಥ ಸಮಸ್ಯೆಗಳನ್ನು ನಿಭಾಯಿಸಲು ನಮಗೆ ಬೇಕಾದ ಧೈರ್ಯ ಹಾಗೂ ಬಲವನ್ನು ದೇವರು ಒದಗಿಸಶಕ್ತನೆಂದು ನಾವೇಕೆ ನಿಶ್ಚಯದಿಂದಿರಬಲ್ಲೆವು?

13 ಮನಗುಂದಿಸುವಂಥ ಸಮಸ್ಯೆಗಳನ್ನು ನಿಭಾಯಿಸಲು ನಮಗೆ ದೇವದತ್ತ ಧೈರ್ಯ ಹಾಗೂ ಬಲ ಅಗತ್ಯ. ಏಸಾವನು ಇಬ್ಬರು ಹಿತ್ತಿಯ ಸ್ತ್ರೀಯರನ್ನು ತನ್ನ ಹೆಂಡರನ್ನಾಗಿ ಮಾಡಿದಾಗ, “ಇವರ ದೆಸೆಯಿಂದ ಇಸಾಕನಿಗೂ ರೆಬೆಕ್ಕಳಿಗೂ ಮನೋವ್ಯಥೆಯುಂಟಾಯಿತು.” ರೆಬೆಕ್ಕಳು ಹೀಗೆ ದೂರಿದಳು ಸಹ: “ಹಿತ್ತಿಯರಾದ ಈ ಸ್ತ್ರೀಯರ ದೆಸೆಯಿಂದ ನನಗೆ ಬೇಸರವಾಯಿತು. [ನಮ್ಮ ಮಗನಾದ] ಯಾಕೋಬನೂ ಈ ದೇಶದವರಲ್ಲಿ ಹೆಣ್ಣನ್ನು ಆದುಕೊಂಡು ಇಂಥಾ ಹಿತ್ತಿಯಸ್ತ್ರೀಯನ್ನು ಮದುವೆಮಾಡಿಕೊಂಡರೆ ನಾನು ಇನ್ನೂ ಬದುಕುವದರಿಂದ ಪ್ರಯೋಜನವೇನು”? (ಆದಿ. 26:34, 35; 27:46) ಇಸಾಕನು ಕ್ರಮಕೈಕೊಂಡು, ಯಾಕೋಬನು ಯೆಹೋವನ ಆರಾಧಕರೊಳಗಿಂದ ಹೆಂಡತಿಯನ್ನು ಹುಡುಕುವಂತೆ ಕಳುಹಿಸಿಬಿಟ್ಟನು. ಏಸಾವನು ಏನನ್ನು ಮಾಡಿದ್ದನೊ ಅದನ್ನು ಇಸಾಕ ರೆಬೆಕ್ಕರು ಬದಲಾಯಿಸಲು ಸಾಧ್ಯವಾಗದಿದ್ದರೂ, ನಂಬಿಗಸ್ತರಾಗಿ ಉಳಿಯಲು ಬೇಕಾದ ವಿವೇಕ, ಧೈರ್ಯ ಹಾಗೂ ಬಲವನ್ನು ದೇವರು ಅವರಿಗೆ ಕೊಟ್ಟನು. ಅಗತ್ಯವಿರುವ ಸಹಾಯಕ್ಕಾಗಿ ನಾವು ಪ್ರಾರ್ಥಿಸುವಲ್ಲಿ ಯೆಹೋವನು ನಮಗೂ ಹಾಗೆಯೇ ಮಾಡುವನು.—ಕೀರ್ತ. 118:5.

14. ಒಬ್ಬ ಚಿಕ್ಕ ಇಸ್ರಾಯೇಲ್ಯ ಹುಡುಗಿ ಹೇಗೆ ಧೈರ್ಯ ಪ್ರದರ್ಶಿಸಿದಳು?

14 ಶತಮಾನಗಳ ಬಳಿಕ, ಒಬ್ಬ ಚಿಕ್ಕ ಇಸ್ರಾಯೇಲ್ಯ ಹುಡುಗಿಯನ್ನು ಸುಲಿಗೆಗಾರರ ದಂಡುಗಳು ಬಂಧಿಯಾಗಿ ಕೊಂಡೊಯ್ದರು. ಕುಷ್ಠರೋಗಿಯಾಗಿದ್ದ ಸಿರಿಯದ ಸೇನಾಪತಿ ನಾಮಾನನ ಮನೆಯಲ್ಲಿ ಅವಳು ಒಬ್ಬ ದಾಸಿಯಾದಳು. ಪ್ರವಾದಿ ಎಲೀಷನ ಮುಖಾಂತರ ದೇವರು ನಡೆಸಿದ್ದ ಅದ್ಭುತಗಳ ಕುರಿತಾಗಿ ಕೇಳಿದ್ದ ಆ ಹುಡುಗಿ ಧೈರ್ಯದಿಂದ ನಾಮಾನನ ಹೆಂಡತಿಗೆ ಹೇಳಿದ್ದು: ‘ನನ್ನ ದಣಿಯು ಸಮಾರ್ಯದಲ್ಲಿರುವ ಪ್ರವಾದಿಯ ಹತ್ತಿರ ಹೋದರೆ ಅವನು ಇವನನ್ನು ಕುಷ್ಠರೋಗದಿಂದ ವಾಸಿ ಮಾಡುವನು.’ ಅಂತೆಯೇ ನಾಮಾನನು ಇಸ್ರಾಯೇಲಿಗೆ ಹೋದನು ಮತ್ತು ಅದ್ಭುತ ರೀತಿಯಲ್ಲಿ ವಾಸಿಯಾದನು. (2 ಅರ. 5:1-3) ಇಂದು ಶಿಕ್ಷಕರಿಗೆ, ಸಹಪಾಠಿಗಳಿಗೆ ಮತ್ತು ಇನ್ನಿತರರಿಗೆ ಸಾಕ್ಷಿಕೊಡಲು ಧೈರ್ಯಕ್ಕಾಗಿ ಯೆಹೋವನ ಮೇಲೆ ಆತುಕೊಳ್ಳುವ ಯುವಜನರಿಗೆ ಆ ಹುಡುಗಿಯು ಎಂಥ ಉತ್ತಮ ಮಾದರಿ ಆಗಿದ್ದಾಳೆ!

15. ಅಹಾಬನ ಮನೆವಾರ್ತೆಯವನಾದ ಓಬದ್ಯನು ಧೈರ್ಯದಿಂದ ಯಾವ ಕ್ರಮ ಕೈಗೊಂಡನು?

15 ದೇವದತ್ತ ಧೈರ್ಯವು ನಾವು ಹಿಂಸೆಯನ್ನು ತಾಳಿಕೊಳ್ಳುವಂತೆ ಸಹಾಯಮಾಡುತ್ತದೆ. ರಾಜ ಅಹಾಬನ ಮನೆವಾರ್ತೆಯವನಾಗಿದ್ದ ಓಬದ್ಯನನ್ನು ಪರಿಗಣಿಸಿರಿ. ಅವನು ಪ್ರವಾದಿ ಎಲೀಯನ ಸಮಕಾಲೀನನಾಗಿದ್ದನು. ರಾಣಿ ಈಜೆಬೆಲಳು, ದೇವರ ಪ್ರವಾದಿಗಳನ್ನು ಹತಿಸುವ ಅಪ್ಪಣೆಹೊರಡಿಸಿದಾಗ ಅವನು ಅವರಲ್ಲಿ 100 ಮಂದಿಯನ್ನು ತೆಗೆದುಕೊಂಡು ‘ಐವತ್ತೈವತ್ತು ಮಂದಿಯನ್ನಾಗಿ ಗವಿಗಳಲ್ಲಿ ಅಡಗಿಸಿಟ್ಟನು.’ (1 ಅರ. 18:13; 19:18) ಓಬದ್ಯನು ಯೆಹೋವನ ಪ್ರವಾದಿಗಳಿಗೆ ಸಹಾಯಮಾಡಿದಂತೆ, ಹಿಂಸೆಗೊಳಗಾಗಿರುವ ಜೊತೆ ಕ್ರೈಸ್ತರಿಗೆ ನೀವು ಧೈರ್ಯದಿಂದ ನೆರವುನೀಡುವಿರೋ?

16, 17. ಅರಿಸ್ತಾರ್ಕ ಮತ್ತು ಗಾಯರು ಹಿಂಸೆಗೆ ಹೇಗೆ ಪ್ರತಿಕ್ರಿಯಿಸಿದರು?

16 ನಾವು ಹಿಂಸೆಗೊಳಗಾಗಿರುವಲ್ಲಿ, ಯೆಹೋವನು ನಮ್ಮೊಂದಿಗಿರುವನೆಂಬ ಭರವಸೆಯಿಂದಿರಬಲ್ಲೆವು. (ರೋಮಾ. 8:35-39) ಪೌಲನ ಜೊತೆಕೆಲಸಗಾರರಾದ ಅರಿಸ್ತಾರ್ಕ ಮತ್ತು ಗಾಯ ಎಂಬವರು, ಎಫೆಸದಲ್ಲಿದ್ದ ಹೊರಾಂಗಣ ರಂಗಮಂದಿರದಲ್ಲಿ ಬಹುಶಃ ಸಾವಿರಾರು ಮಂದಿಯಿದ್ದ ಒಂದು ದೊಂಬಿಯನ್ನು ಎದುರಿಸಿದರು. ಅಕ್ಕಸಾಲಿಗನಾದ ದೇಮೇತ್ರಿಯನು ಈ ದೊಂಬಿಯನ್ನು ಚಿತಾಯಿಸಿದ್ದನು. ಏಕೆಂದರೆ ಅವನು ಹಾಗೂ ಇತರ ಅಕ್ಕಸಾಲಿಗರು, ಆರ್ತೆಮೀ ದೇವತೆಯ ಸಣ್ಣಸಣ್ಣ ಬೆಳ್ಳೀಗುಡಿಗಳನ್ನು ಮಾಡುತ್ತಿದ್ದು, ಪೌಲನ ಸಾರುವ ಕೆಲಸದಿಂದಾಗಿ ಆ ಪಟ್ಟಣದ ಅನೇಕ ನಿವಾಸಿಗಳು ವಿಗ್ರಹಾರಾಧನೆಯನ್ನು ಬಿಟ್ಟುಬಿಟ್ಟದ್ದು ಇವರ ಲಾಭದಾಯಕ ವ್ಯಾಪಾರಕ್ಕೆ ಕುತ್ತುತಂದಿತ್ತು. ಈ ದೊಂಬಿಯ ಜನರು ಅರಿಸ್ತಾರ್ಕ ಹಾಗೂ ಗಾಯನನ್ನು ರಂಗಮಂದಿರದೊಳಕ್ಕೆ ಎಳೆದುಕೊಂಡು ಹೋಗಿ, ಹೀಗೆ ಆರ್ಭಟಿಸುತ್ತಾ ಇದ್ದರು: “ಎಫೆಸದವರ ಅರ್ತೆಮೀದೇವಿ ಮಹಾದೇವಿ.”—ಅ. ಕೃ. 19:23-41.

17 ನಿಮಗೆ ಇಂಥದ್ದೇ ಅನುಭವವಾಗಿದ್ದಲ್ಲಿ, ಇದಕ್ಕಿಂತ ಹೆಚ್ಚು ಸುಲಭವಾದ ಜೀವನವನ್ನು ಅರಸಿಕೊಂಡು ಹೋಗುತ್ತಿದ್ದಿರೋ? ಅರಿಸ್ತಾರ್ಕ ಹಾಗೂ ಗಾಯರು ಧೈರ್ಯ ಕಳೆದುಕೊಂಡರೆಂಬುದಕ್ಕೆ ಯಾವುದೇ ಸೂಚನೆಯಿಲ್ಲ. ಸುವಾರ್ತೆ ಸಾರುವುದು ಹಿಂಸೆಯನ್ನು ತರುವುದೆಂದು ಥೆಸಲೋನಿಕದವನಾದ ಅರಿಸ್ತಾರ್ಕನಿಗೆ ತಿಳಿದಿತ್ತು. ಇದಕ್ಕಿಂತ ಸ್ವಲ್ಪ ಸಮಯದ ಹಿಂದೆ ಪೌಲನು ಅಲ್ಲಿ ಸಾರಿದಾಗ ಒಂದು ಗಲಭೆ ಉಂಟಾಗಿತ್ತು. (ಅ. ಕೃ. 17:5; 20:4) ಅರಿಸ್ತಾರ್ಕ ಹಾಗೂ ಗಾಯ ಯೆಹೋವನ ಮಾರ್ಗಗಳಲ್ಲಿ ನಡೆದ ಕಾರಣ, ಹಿಂಸೆಯನ್ನು ತಾಳಿಕೊಳ್ಳಲು ಅವರಲ್ಲಿ ದೇವದತ್ತ ಬಲ ಹಾಗೂ ಧೈರ್ಯವಿತ್ತು.

ಪರಹಿತ ನೋಡಿರಿ

18. ಪ್ರಿಸ್ಕಅಕ್ವಿಲರು ಪರಹಿತವನ್ನು ನೋಡುತ್ತಿದ್ದದ್ದು ಹೇಗೆ?

18 ನಾವೀಗ ಹಿಂಸೆಗೊಳಗಾಗುತ್ತಿರಲಿ ಇಲ್ಲದಿರಲಿ, ನಮ್ಮ ಜೊತೆ ಕ್ರೈಸ್ತರ ವಿಷಯದಲ್ಲಿ ನಾವು ಚಿಂತಿತರಾಗಿರಲೇಬೇಕು. ಪ್ರಿಸ್ಕಅಕ್ವಿಲರು ಪರಹಿತವನ್ನು ನೋಡುತ್ತಿದ್ದರು. (ಫಿಲಿಪ್ಪಿ 2:4 ನ್ನು ಓದಿ) ಈ ಆದರ್ಶಪ್ರಾಯ ವಿವಾಹಿತ ದಂಪತಿಯು ಎಫೆಸದಲ್ಲಿ ಪೌಲನಿಗೆ ವಸತಿ ಒದಗಿಸಿದ್ದಿರಬಹುದು. ಈ ಸ್ಥಳದಲ್ಲೇ, ಹಿಂದೆ ತಿಳಿಸಲಾದಂಥ ದೊಂಬಿಯನ್ನು ಅಕ್ಕಸಾಲಿಗನಾದ ದೇಮೇತ್ರಿಯನು ಚಿತಾಯಿಸಿದ್ದನು. ಆ ಸನ್ನಿವೇಶವು ಅಕ್ವಿಲ ಹಾಗೂ ಪ್ರಿಸ್ಕರು ಪೌಲನಿಗಾಗಿ ‘ತಮ್ಮ ಪ್ರಾಣಗಳನ್ನು ಅಪಾಯಕ್ಕೆ ಗುರಿಮಾಡುವಂತೆ’ ಪ್ರಚೋದಿಸಿರಬಹುದು. (ರೋಮಾ. 16:3, 4; 2 ಕೊರಿಂ. 1:8) ಇಂದು, ಹಿಂಸೆಗೊಳಗಾಗಿರುವ ನಮ್ಮ ಸಹೋದರರಿಗಾಗಿ ಚಿಂತೆಯು ನಮ್ಮನ್ನು “ಸರ್ಪಗಳಂತೆ ಜಾಣ”ರಾಗಿರುವಂತೆ ಮಾಡುತ್ತದೆ. (ಮತ್ತಾ. 10:16-18) ನಾವು ನಮ್ಮ ಕೆಲಸವನ್ನು ಎಚ್ಚರಿಕೆಯಿಂದ ನಡೆಸುತ್ತೇವೆ ಮತ್ತು ಹಿಂಸಕರಿಗೆ ನಮ್ಮ ಸಹೋದರರ ಹೆಸರುಗಳನ್ನು ಇಲ್ಲವೇ ಬೇರೆ ಮಾಹಿತಿಯನ್ನು ಕೊಟ್ಟು ವಿಶ್ವಾಸಘಾತ ಮಾಡುವುದಿಲ್ಲ.

19. ದೊರ್ಕಳು ಇತರರಿಗಾಗಿ ಯಾವ ಸತ್ಕ್ರಿಯೆಗಳನ್ನು ಮಾಡಿದಳು?

19 ಪರಹಿತವನ್ನು ನೋಡಲು ಬೇರೆ ಬೇರೆ ವಿಧಾನಗಳಿವೆ. ಕೆಲವು ಮಂದಿ ಕ್ರೈಸ್ತರಿಗೆ ಕೆಲವೊಂದು ಭೌತಿಕ ಕೊರತೆಗಳಿರುತ್ತವೆ ಮತ್ತು ಬಹುಶಃ ನಾವು ಆ ಕೊರತೆಗಳನ್ನು ನೀಗಿಸಶಕ್ತರು. (ಎಫೆ. 4:28; ಯಾಕೋ. 2:14-17) ಒಂದನೆಯ ಶತಮಾನದ ಯೊಪ್ಪ ಸಭೆಯಲ್ಲಿ ದೊರ್ಕ ಎಂಬ ಉದಾರಿ ಸ್ತ್ರೀ ಇದ್ದಳು. (ಅ. ಕೃತ್ಯಗಳು 9:36-42 ನ್ನು ಓದಿ) ದೊರ್ಕಳು “ಸತ್ಕ್ರಿಯೆಗಳನ್ನೂ ದಾನಧರ್ಮಗಳನ್ನೂ ಬಹಳವಾಗಿ ಮಾಡುತ್ತಿದ್ದಳು.” ಅವಳು ಬಡ ವಿಧವೆಯರಿಗಾಗಿ ಬಟ್ಟೆಬರೆಗಳನ್ನೂ ಹೊಲಿದು ಕೊಡುತ್ತಿದ್ದಳೆಂಬುದು ವ್ಯಕ್ತ. ಸಾ.ಶ. 36ರಲ್ಲಿ ಅವಳು ಮರಣಪಟ್ಟಾಗ ಆ ವಿಧವೆಯರು ಬಹಳಷ್ಟು ದುಃಖಪಟ್ಟರು. ಆದರೆ ದೇವರು ಅಪೊಸ್ತಲ ಪೇತ್ರನನ್ನು ಉಪಯೋಗಿಸಿ ದೊರ್ಕಳ ಪುನರುತ್ಥಾನ ಮಾಡಿದನು. ಅವಳು ಭೂಮಿಯಲ್ಲಿ ತನ್ನ ಉಳಿದ ಆಯುಷ್ಯವನ್ನು, ಸಂತೋಷದಿಂದ ಸುವಾರ್ತೆ ಸಾರುವುದರಲ್ಲಿ ಮತ್ತು ಸತ್ಕ್ರಿಯೆಗಳನ್ನು ಮಾಡುವುದರಲ್ಲಿ ಕಳೆದಿರುವ ಸಾಧ್ಯತೆ ಹೆಚ್ಚು. ಇಂದು ನಮ್ಮ ಮಧ್ಯೆಯೂ ಇಂಥ ನಿಸ್ವಾರ್ಥ ಕ್ರೈಸ್ತ ಸ್ತ್ರೀಯರು ಇರುವುದಕ್ಕಾಗಿ ನಾವೆಷ್ಟು ಸಂತೋಷಿತರು!

20, 21. (ಎ) ಪ್ರೋತ್ಸಾಹ ಕೊಡುವದಕ್ಕೂ ಪರಹಿತವನ್ನು ನೋಡುವುದಕ್ಕೂ ಏನು ಸಂಬಂಧ? (ಬಿ) ಪ್ರೋತ್ಸಾಹ ಕೊಡುವವರಾಗಿರಲು ನೀವೇನು ಮಾಡಬಲ್ಲಿರಿ?

20 ಇತರರನ್ನು ಪ್ರೋತ್ಸಾಹಿಸುವ ಮೂಲಕವೂ ನಾವು ಪರಹಿತ ನೋಡುವವರಾಗುತ್ತೇವೆ. (ರೋಮಾ. 1:11, 12) ಪೌಲನ ಜೊತೆಕೆಲಸಗಾರನಾದ ಸೀಲನು ಪ್ರೋತ್ಸಾಹದ ಚಿಲುಮೆ ಆಗಿದ್ದನು. ಸಾ.ಶ. 49ರಲ್ಲಿ ಸುನ್ನತಿಯ ಬಗ್ಗೆ ನಿರ್ಧಾರ ಕೈಗೊಳ್ಳಲ್ಪಟ್ಟ ಬಳಿಕ, ಯೆರೂಸಲೇಮಿನಲ್ಲಿದ್ದ ಆಡಳಿತ ಮಂಡಳಿಯು, ಬೇರೆಡೆಯಲ್ಲಿದ್ದ ವಿಶ್ವಾಸಿಗಳಿಗೆ ಪತ್ರವನ್ನು ಕೊಂಡೊಯ್ಯಲು ಪ್ರತಿನಿಧಿಗಳನ್ನು ಕಳುಹಿಸಿತು. ಸೀಲ, ಯೂದ, ಬಾರ್ನಬ ಮತ್ತು ಪೌಲರು ಅದನ್ನು ಅಂತಿಯೋಕ್ಯಕ್ಕೆ ಕೊಂಡೊಯ್ದರು. ಅಲ್ಲಿ ಸೀಲ ಮತ್ತು ಯೂದರು “ಸಹೋದರರನ್ನು ಅನೇಕ ಮಾತುಗಳಿಂದ ಪ್ರಬೋಧಿಸಿ [“ಪ್ರೋತ್ಸಾಹಿಸಿ,” NW] ದೃಢಪಡಿಸಿದರು.”—ಅ. ಕೃ. 15:32.

21 ತದನಂತರ ಪೌಲ ಮತ್ತು ಸೀಲರನ್ನು ಫಿಲಿಪ್ಪಿಯಲ್ಲಿ ಸೆರೆಮನೆಗೆ ಹಾಕಲಾಯಿತು. ಆದರೆ ಒಂದು ಭೂಕಂಪದಿಂದಾಗಿ ಅವರ ಬಿಡುಗಡೆ ಆಯಿತು. ಆ ಸೆರೆಮನೆಯ ಅಧಿಕಾರಿ ಹಾಗೂ ಅವನ ಮನೆಯವರಿಗೆ ಸಾಕ್ಷಿಕೊಟ್ಟು, ಅವರು ವಿಶ್ವಾಸಿಗಳಾಗುವುದನ್ನು ನೋಡಿ ಪೌಲಸೀಲರಿಗೆಷ್ಟು ಸಂತೋಷ ಆಗಿರಬೇಕು! ಆ ಪಟ್ಟಣವನ್ನು ಬಿಟ್ಟುಹೋಗುವ ಮುಂಚೆ ಸೀಲ ಮತ್ತು ಪೌಲರು ಸಹೋದರರನ್ನು ಉತ್ತೇಜಿಸಿದರು. (ಅ. ಕೃ. 16:12, 40) ಪೌಲಸೀಲರಂತೆ, ನೀವು ಸಭೆಯಲ್ಲಿ ಕೊಡುವ ಹೇಳಿಕೆಗಳು, ಭಾಷಣಗಳು ಮತ್ತು ನಿಮ್ಮ ಹುರುಪಿನ ಕ್ಷೇತ್ರ ಸೇವೆಯ ಮೂಲಕ ಇತರರನ್ನು ಉತ್ತೇಜಿಸಲು ಪ್ರಯತ್ನಿಸಿರಿ. ಮತ್ತು ನಿಮ್ಮಲ್ಲಿ “ಪ್ರೋತ್ಸಾಹ ಕೊಡುವ” ಯಾವುದೇ ಮಾತಿದ್ದರೆ ಅದನ್ನು ಖಂಡಿತ ಹೇಳಿ.—ಅ. ಕೃ. 13:15, NIBV.

ಯೆಹೋವನ ಮಾರ್ಗಗಳಲ್ಲಿ ನಡೆಯುತ್ತಾ ಇರಿ

22, 23. ಬೈಬಲ್‌ ವೃತ್ತಾಂತಗಳಿಂದ ನಾವು ನಿಜವಾಗಿ ಹೇಗೆ ಪ್ರಯೋಜನಹೊಂದಬಲ್ಲೆವು?

22 ‘ಸಕಲ ಪ್ರೋತ್ಸಾಹದ ದೇವರಾಗಿರುವ’ ಯೆಹೋವನ ವಾಕ್ಯದಲ್ಲಿ ದಾಖಲಾಗಿರುವ ನಿಜ ಜೀವನ ವೃತ್ತಾಂತಗಳಿಗಾಗಿ ನಾವೆಷ್ಟು ಕೃತಜ್ಞರಾಗಿರಬೇಕು! (2 ಕೊರಿಂ. 1:3, ಬೈಯಿಂಗ್ಟನ್‌) ನಾವು ಈ ಅನುಭವಗಳಿಂದ ಪ್ರಯೋಜನಹೊಂದಬೇಕಾದರೆ, ನಮ್ಮ ಜೀವನದಲ್ಲಿ ಬೈಬಲಿನ ಪಾಠಗಳನ್ನು ಅನ್ವಯಿಸಬೇಕು ಮತ್ತು ದೇವರ ಪವಿತ್ರಾತ್ಮವು ನಮ್ಮನ್ನು ನಡೆಸುವಂತೆ ಬಿಡಬೇಕು.—ಗಲಾ. 5:22-25.

23 ಬೈಬಲ್‌ ವೃತ್ತಾಂತಗಳ ಕುರಿತು ಧ್ಯಾನಿಸುವುದು ನಾವು ದೈವಿಕ ಗುಣಗಳನ್ನು ಪ್ರದರ್ಶಿಸುವಂತೆ ಸಹಾಯಮಾಡುವುದು. ಇದು, “ಜ್ಞಾನವನ್ನೂ ತಿಳುವಳಿಕೆಯನ್ನೂ ಸಂತೋಷವನ್ನೂ ದಯಪಾಲಿಸು”ವವನಾದ ಯೆಹೋವನೊಂದಿಗಿನ ನಮ್ಮ ಸಂಬಂಧವನ್ನು ಬಲಗೊಳಿಸುವುದು. (ಪ್ರಸಂ. 2:26) ಫಲಿತಾಂಶವಾಗಿ ದೇವರ ಪ್ರೀತಿಯುಳ್ಳ ಹೃದಯವು ಹರ್ಷಿಸುವಂತೆ ನಾವು ಮಾಡಬಲ್ಲೆವು. (ಜ್ಞಾನೋ. 27:11) ಯೆಹೋವನ ಮಾರ್ಗಗಳಲ್ಲಿ ನಡೆಯುತ್ತಾ ಇರುವ ಮೂಲಕ ಹಾಗೆ ಮಾಡಲು ನಾವು ದೃಢನಿರ್ಧಾರಮಾಡೋಣ.

ನಿಮ್ಮ ಉತ್ತರವೇನು?

• ನೀವು ಭರವಸಾರ್ಹರೆಂದು ಹೇಗೆ ತೋರಿಸಿಕೊಳ್ಳಬಲ್ಲಿರಿ?

• ನಾವು ‘ದೀನಭಾವ’ ಉಳ್ಳವರಾಗಿರಬೇಕು ಏಕೆ?

• ಬೈಬಲ್‌ ವೃತ್ತಾಂತಗಳು ನಾವು ಧೈರ್ಯದಿಂದಿರುವಂತೆ ಹೇಗೆ ಸಹಾಯಮಾಡಬಲ್ಲವು?

• ನಾವು ಯಾವ ವಿಧಾನಗಳಲ್ಲಿ ಪರಹಿತವನ್ನು ನೋಡಬಲ್ಲೆವು?

[ಪುಟ 8ರಲ್ಲಿರುವ ಚಿತ್ರ]

ಭರವಸಾರ್ಹನಾದ ಯೆಫ್ತಾಹನ ಹರಕೆಯನ್ನು ಅವನು ಮತ್ತು ಅವನ ಮಗಳು ಕಷ್ಟಕರವಾಗಿದ್ದರೂ ಸಲ್ಲಿಸಿದರು

[ಪುಟ 10ರಲ್ಲಿರುವ ಚಿತ್ರ]

ಎಳೆಯರೇ, ನೀವು ಇಸ್ರಾಯೇಲ್ಯ ಹುಡುಗಿಯಿಂದ ಏನು ಕಲಿತುಕೊಂಡಿರಿ?

[ಪುಟ 11ರಲ್ಲಿರುವ ಚಿತ್ರ]

ದೊರ್ಕಳು ಜೊತೆ ಕ್ರೈಸ್ತರ ಕೊರತೆಗಳನ್ನು ಹೇಗೆ ನೀಗಿಸಿದಳು?

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ