ಜೀವನವನ್ನು ಸಾರ್ಥಕವನ್ನಾಗಿ ಮಾಡುವುದು ಯಾವುದು?
“ದೇವರಿಗೆ ಭಯಪಟ್ಟು ಆತನ ಆಜ್ಞೆಗಳನ್ನು ಕೈಕೊಳ್ಳು.”—ಪ್ರಸಂ. 12:13.
1, 2. ಪ್ರಸಂಗಿ ಪುಸ್ತಕವನ್ನು ಪರಿಗಣಿಸುವುದರಿಂದ ನಮಗೆ ಹೇಗೆ ಪ್ರಯೋಜನ ಸಿಗಬಲ್ಲದು?
ಒಬ್ಬ ಮನುಷ್ಯನಲ್ಲಿ ಸಕಲ ಸಂಪತ್ತುಗಳು ಬೇಕಾದಷ್ಟಿವೆ ಎಂದು ಊಹಿಸಿರಿ. ಅವನೊಬ್ಬ ಪ್ರಖ್ಯಾತ ಅರಸ. ಇಡೀ ಭೂಮಿಯಲ್ಲಿ ಅತಿ ಐಶ್ವರ್ಯವಂತನು. ತನ್ನ ತಲೆಮಾರಿನಲ್ಲಿ ಅವನು ಅತ್ಯಂತ ಜ್ಞಾನಿ. ಈ ಎಲ್ಲ ಸಾಧನೆ ಸಂಪನ್ನತೆಗಳಿದ್ದರೂ ಅವನಿನ್ನೂ ತನ್ನನ್ನು ಹೀಗೆ ಕೇಳಿಕೊಳ್ಳುತ್ತಾನೆ: ‘ಜೀವನವನ್ನು ಸಾರ್ಥಕವನ್ನಾಗಿ ಮಾಡುವುದು ಯಾವುದು?’
2 ಅಂಥ ಒಬ್ಬ ಮನುಷ್ಯನು ನಿಜವಾಗಿ ಅಸ್ತಿತ್ವದಲ್ಲಿದ್ದನು. ಅದು ಸುಮಾರು ಮೂರು ಸಾವಿರ ವರ್ಷಗಳ ಹಿಂದೆ. ಅವನ ಹೆಸರು ಸೊಲೊಮೋನ. ಸಂತೃಪ್ತಿಗಾಗಿ ಅವನು ನಡಿಸಿದ ಪ್ರಯಾಸದ ವರ್ಣನೆಯನ್ನು ಪ್ರಸಂಗಿ ಎಂಬ ಅವನ ಪುಸ್ತಕದಲ್ಲಿ ನಾವು ಕಾಣುತ್ತೇವೆ. (ಪ್ರಸಂ. 1:13) ಸೊಲೊಮೋನನ ಅನುಭವದಿಂದ ನಾವು ಬಹಳಷ್ಟನ್ನು ಕಲಿಯಸಾಧ್ಯವಿದೆ. ನಮ್ಮ ಜೀವನಕ್ಕೆ ನಿಜ ಅರ್ಥವನ್ನು ಕೊಡುವ ಗುರಿಗಳನ್ನಿಡಲು ಪ್ರಸಂಗಿ ಪುಸ್ತಕದಲ್ಲಿರುವ ವಿವೇಕವು ನಮಗೆ ಖಂಡಿತ ನೆರವಾಗಬಲ್ಲದು.
“ಗಾಳಿಯನ್ನು ಹಿಂದಟ್ಟಿದ ಹಾಗೆ”
3. ಮಾನವ ಜೀವನದ ಕುರಿತ ಯಾವ ವಾಸ್ತವಿಕತೆಯನ್ನು ನಾವೆಲ್ಲರೂ ಎದುರಿಸಲೇಬೇಕು?
3 ದೇವರು ಭೂಮಿಯಲ್ಲಿ ಅಂದಚೆಂದದ ಅನೇಕಾನೇಕ ವಸ್ತುಗಳನ್ನು ಸಮೃದ್ಧಿಯಾಗಿ ನಿರ್ಮಿಸಿದ್ದಾನೆಂದು ಸೊಲೊಮೋನನು ವರ್ಣಿಸುತ್ತಾನೆ. ಅವು ಎಷ್ಟು ಆಸಕ್ತಿಕರವೂ ಅಕ್ಷಯವೂ ವಿಸ್ಮಯಕರವೂ ಆಗಿವೆಯೆಂದರೆ ಅವನ್ನು ಆನಂದಿಸುವುದರಲ್ಲಿ ನಾವೆಂದಿಗೂ ದಣಿಯೆವು. ಆದರೂ ನಮ್ಮ ಆಯುಸ್ಸು ತೀರಾ ಅಲ್ಪ ಕಾಲದ್ದಾಗಿರಲಾಗಿ ದೇವರ ಅಪಾರ ಸೃಷ್ಟಿಯನ್ನು ಅನ್ವೇಷಿಸಲಾರಂಭಿಸಲು ಸಹ ನಮಗೆ ಸಮಯ ಸಾಲದು. (ಪ್ರಸಂ. 3:11; 8:17) ಬೈಬಲ್ ತಿಳಿಸುವ ಪ್ರಕಾರ ನಮ್ಮ ಜೀವಮಾನದ ದಿನಗಳು ಅತ್ಯಲ್ಪವಾಗಿವೆ ಮತ್ತು ಬೇಗನೇ ಗತಿಸಿಹೋಗುತ್ತವೆ. (ಯೋಬ 14:1, 2; ಪ್ರಸಂ. 6:12) ಈ ವಾಸ್ತವಿಕತೆಯು, ನಮ್ಮ ಜೀವನವನ್ನು ವಿವೇಕದಿಂದ ಬಳಸುವಂತೆ ಪ್ರೇರಿಸತಕ್ಕದ್ದು. ಹಾಗೆ ಮಾಡುವುದೇನೂ ಸುಲಭವಲ್ಲ ನಿಜ, ಯಾಕಂದರೆ ಸೈತಾನನ ಲೋಕವು ನಮ್ಮನ್ನು ತಪ್ಪಾದ ಮಾರ್ಗಕ್ಕೆ ತಿರುಗುವಂತೆ ಪ್ರಭಾವಬೀರಸಾಧ್ಯವಿದೆ.
4. (ಎ) “ವ್ಯರ್ಥ” ಎಂದು ಭಾಷಾಂತರಿಸಲಾದ ಹೀಬ್ರು ಪದದ ಅರ್ಥವೇನು? (ಬಿ) ಜೀವನದ ಯಾವ ಬೆನ್ನಟ್ಟುವಿಕೆಗಳ ಕುರಿತು ನಾವು ಪರಿಗಣಿಸಲಿರುವೆವು?
4 ನಮ್ಮ ಜೀವನವನ್ನು ಅವಿವೇಕದಿಂದ ವ್ಯಯಮಾಡುವ ಅಪಾಯವನ್ನು ಎತ್ತಿಹೇಳಲಿಕ್ಕಾಗಿ ಸೊಲೊಮೋನನು ತನ್ನ ಪ್ರಸಂಗಿ ಪುಸ್ತಕದಲ್ಲಿ “ವ್ಯರ್ಥ” ಎಂಬ ಶಬ್ದವನ್ನು 30 ಸಾರಿ ಉಪಯೋಗಿಸುತ್ತಾನೆ. “ವ್ಯರ್ಥ” ಎಂದು ಭಾಷಾಂತರಿಸಲಾದ ಹೀಬ್ರು ಪದಕ್ಕೆ ಪೊಳ್ಳಾದ, ನಿರರ್ಥಕವಾದ, ಶೂನ್ಯವಾದ, ಅರ್ಥರಹಿತ, ತಿರುಳಿಲ್ಲದ ಅಥವಾ ಯಾವ ಬಾಳಿಕೆಯೂ ಇಲ್ಲದ ಒಂದು ವಿಷಯ ಎಂಬರ್ಥವಿದೆ. (ಪ್ರಸಂ. 1:2, 3) ಕೆಲವೊಮ್ಮೆ ಸೊಲೊಮೋನನು “ವ್ಯರ್ಥ” ಎಂಬ ಶಬ್ದವನ್ನು “ಗಾಳಿಯನ್ನು ಹಿಂದಟ್ಟಿದ ಹಾಗೆ” ಎಂಬುದರ ಸಮನಾಂತರ ಪದವಾಗಿ ಬಳಸುತ್ತಾನೆ. (ಪ್ರಸಂ. 1:14; 2:11) ಗಾಳಿಯನ್ನು ಹಿಂದಟ್ಟಿ ಹಿಡಿಯಲು ಮಾಡುವ ಯಾವುದೇ ಪ್ರಯತ್ನವು ವ್ಯರ್ಥವೇ ಸರಿ. ಅದನ್ನು ಹಿಡಿಯಲು ಪ್ರಯತ್ನಿಸುವ ವ್ಯಕ್ತಿಯ ಕೈಗೆ ಸಿಕ್ಕುವುದು ಬರಿಯ ಶೂನ್ಯ ತಾನೇ? ವಿವೇಕಶೂನ್ಯ ಗುರಿಗಳನ್ನು ಬೆನ್ನಟ್ಟುವುದು ಸಹ ಅದೇ ತರದ ಆಶಾಭಂಗಕ್ಕೆ ನಡಿಸುವುದು. ನಮ್ಮನ್ನು ಬರೀಗೈಯಲ್ಲಿ ಬಿಟ್ಟುಬಿಡುವ ಅಂಥ ಹೆಣಗಾಟಗಳಲ್ಲಿ ಸಮಯವನ್ನು ದುಂದುಮಾಡಲು ನಮ್ಮ ಸದ್ಯದ ಜೀವನ ತೀರಾ ಅಲ್ಪಕಾಲಿಕ! ಆದುದರಿಂದ ನಾವು ಆ ತಪ್ಪಿಗೆ ಸಿಕ್ಕಿಬೀಳದಂತೆ ಸಹಾಯಕ್ಕಾಗಿ, ಸೊಲೊಮೋನನು ತಿಳಿಸುವ ಜೀವನದ ಸಾಮಾನ್ಯ ಬೆನ್ನಟ್ಟುವಿಕೆಗಳ ಕೆಲವು ಉದಾಹರಣೆಗಳನ್ನು ನೋಡೋಣ. ಮೊದಲನೆಯದಾಗಿ, ಸುಖಭೋಗ ಮತ್ತು ಸಿರಿಸಂಪತ್ತುಗಳನ್ನು ಬೆನ್ನಟ್ಟುವ ವಿಷಯವನ್ನು ಪರಿಗಣಿಸುವೆವು. ತದನಂತರ, ದೇವರು ಮೆಚ್ಚುವ ಕೆಲಸವು ಯಾವುದು ಎಂಬುದನ್ನು ಚರ್ಚಿಸಲಿರುವೆವು.
ಸುಖಭೋಗಗಳ ಬೆನ್ನಟ್ಟುವಿಕೆ ಸಂತೋಷ ತರುವುದೋ?
5. ಸೊಲೊಮೋನನು ಸಂತೃಪ್ತಿಗಾಗಿ ಎಲ್ಲೆಲ್ಲಿ ಹುಡುಕಾಟ ನಡಿಸಿದನು?
5 ಇಂದಿನ ಹೆಚ್ಚಿನ ಜನರಂತೆ, ಸೊಲೊಮೋನನು ಸುಖಭೋಗದ ಜೀವನವನ್ನು ಬೆನ್ನಟ್ಟುವ ಮೂಲಕ ಸಂತೃಪ್ತಿಯನ್ನು ಕಂಡುಕೊಳ್ಳಲು ಪ್ರಯತ್ನಿಸಿದನು. ಅವನಂದದ್ದು: “ಯಾವ ಸಂತೋಷವನ್ನನುಭವಿಸುವದಕ್ಕೂ ನನ್ನ ಹೃದಯವನ್ನು ತಡೆಯಲಿಲ್ಲ.” (ಪ್ರಸಂ. 2:10) ಅವನು ಸುಖಭೋಗಕ್ಕಾಗಿ ಹುಡುಕಾಟ ನಡಿಸಿದ್ದೆಲ್ಲಿ? ಪ್ರಸಂಗಿ 2ನೆಯ ಅಧ್ಯಾಯಕ್ಕನುಸಾರ, ಅವನು ‘ದೇಹವನ್ನು ದ್ರಾಕ್ಷಾಮದ್ಯದಿಂದ ಉತ್ತೇಜನಗೊಳಿಸಿದನು’ ಆದರೂ ಅದೇ ಸಮಯದಲ್ಲಿ ಸ್ವನಿಯಂತ್ರಣವನ್ನೂ ಕಾಪಾಡಿಕೊಂಡನು. ಅದಲ್ಲದೆ ತೋಟಗಾರಿಕೆ, ಅರಮನೆಗಳ ನಿರ್ಮಾಣ, ಗಾಯನಗೋಷ್ಠಿ ಮುಂತಾದ ಚಟುವಟಿಕೆಗಳನ್ನು ಬೆನ್ನಟ್ಟಿದನು ಮತ್ತು ರಸಭಕ್ಷ್ಯಗಳಲ್ಲೂ ಆನಂದಿಸಿದನು.
6. (ಎ) ಜೀವನದ ಕೆಲವು ಖುಷಿ-ವಿನೋದಗಳಲ್ಲಿ ಆನಂದಿಸುವುದು ಯಾಕೆ ತಪ್ಪಲ್ಲ? (ಬಿ) ಮನೋರಂಜನೆಯ ವಿಷಯದಲ್ಲಿ ಯಾವ ಸಮತೋಲನ ಬೇಕಾಗಿದೆ?
6 ಸ್ನೇಹಿತರೊಂದಿಗೆ ಖುಷಿ-ವಿನೋದಗಳಲ್ಲಿ ಸಮಯ ಕಳೆಯುವುದನ್ನು ಬೈಬಲು ಖಂಡಿಸುತ್ತದೋ? ಇಲ್ಲವೇ ಇಲ್ಲ. ದೃಷ್ಟಾಂತಕ್ಕಾಗಿ, ದಿನವಿಡೀ ಕಷ್ಟಪಟ್ಟು ದುಡಿದ ಬಳಿಕ ಹಾಯಾಗಿ ಕೂತು ಅನ್ನಪಾನಗಳಲ್ಲಿ ಆನಂದಿಸುವುದು ದೇವರ ಒಂದು ಕೊಡುಗೆ ಎಂದು ಸೊಲೊಮೋನನು ಹೇಳುತ್ತಾನೆ. (ಪ್ರಸಂಗಿ 2:24; 3:12, 13 ಓದಿ.) ಅದಲ್ಲದೆ, ಯುವ ಜನರು ತಮ್ಮ ಹೊಣೆಯನ್ನರಿತವರಾಗಿ ‘ಆನಂದಿಸಿ ಹೃದಯದಲ್ಲಿ ಹರ್ಷ’ಗೊಳ್ಳುವಂತೆ ಯೆಹೋವನು ತಾನೇ ಆಮಂತ್ರಿಸುತ್ತಾನೆ. (ಪ್ರಸಂ. 11:9) ನಮಗೆ ವಿರಾಮ-ವಿಶ್ರಾಂತಿಗಳು ಮತ್ತು ಹಿತಕರವಾದ ಮನೋರಂಜನೆ ಬೇಕು ನಿಜ. (ಮಾರ್ಕ 6:31 ಹೋಲಿಸಿ.) ಆದರೂ ಮನೋರಂಜನೆ ನಮ್ಮ ಜೀವನದ ಪ್ರಾಮುಖ್ಯ ಉದ್ದೇಶವಾಗಿರಬಾರದು. ಬದಲಾಗಿ, ಮನೋರಂಜನೆಯು ಊಟವಾದ ಮೇಲೆ ತಿನ್ನುವ ಸಿಹಿತಿಂಡಿಯಂತಿರಬೇಕು; ಅದು ತಾನೇ ಊಟ ಆಗಿರಬಾರದು. ನಾವು ಸಿಹಿತಿಂಡಿಗಳನ್ನು ತಿನ್ನಲು ಎಷ್ಟೇ ಇಷ್ಟಪಡಲಿ, ಅವನ್ನೇ ತಿನ್ನುತ್ತಾ ಬೇರೇನನ್ನೂ ತಿನ್ನದೆ ಇದ್ದರೆ ನಮಗೆ ಬೇಗನೆ ಸಾಕಾಗಿ ಹೋಗುವದು. ಮತ್ತು ಅವು ಅಷ್ಟು ಪೋಷಕ ಆಹಾರವೂ ಅಲ್ಲ. ತದ್ರೀತಿಯಲ್ಲಿ, ಸುಖಭೋಗದಲ್ಲಿ ಪೂರಾ ಕೇಂದ್ರಿತವಾದ ಜೀವನವು “ಗಾಳಿಯನ್ನು ಹಿಂದಟ್ಟಿದ ಹಾಗೆ” ಇದೆ ಎಂದು ಸೊಲೊಮೋನನು ಕಂಡುಹಿಡಿದನು.—ಪ್ರಸಂ. 2:10, 11.
7. ನಮ್ಮ ಮನೋರಂಜನೆಯನ್ನು ನಾವು ಜಾಗರೂಕತೆಯಿಂದ ಆರಿಸಿಕೊಳ್ಳಬೇಕು ಏಕೆ?
7 ಅಷ್ಟೇ ಅಲ್ಲದೆ, ಎಲ್ಲಾ ತರದ ಮನೋರಂಜನೆಗಳೂ ಒಳ್ಳೆಯವೆಂದು ಹೇಳಸಾಧ್ಯವಿಲ್ಲ. ಹೆಚ್ಚಿನವು ಪೂರ್ತಿಯಾಗಿ ಕೆಟ್ಟದ್ದಾಗಿವೆ; ಆಧ್ಯಾತ್ಮಿಕವಾಗಿಯೂ ನೈತಿಕವಾಗಿಯೂ ಅಪಾಯಕರ. ಖುಷಿ-ವಿನೋದಗಳಲ್ಲಿ ಮಜಾಮಾಡಲು ಬಯಸಿದ ಲಕ್ಷಾಂತರ ಜನರು ಮಾದಕ ದ್ರವ್ಯ, ಕುಡಿಕತನ ಅಥವಾ ಜೂಜಾಟದ ಚಟಕ್ಕೆ ಬಲಿಬಿದ್ದು ತಮ್ಮ ಇಡೀ ಜೀವನವನ್ನೇ ಹತಾಶೆಯಲ್ಲಿ ಮುಳುಗಿಸಿದ್ದಾರಲ್ಲವೇ? ನಾವು ನಮ್ಮ ಹೃದಯವನ್ನಾಗಲಿ ಕಣ್ಣನ್ನಾಗಲಿ ಹಾನಿಕಾರಕ ವಿಷಯಗಳ ಕಡೆಗೆ ನಮ್ಮನ್ನು ನಡೆಸುವಂತೆ ಬಿಟ್ಟುಕೊಡುವಲ್ಲಿ ಅದರ ದುಷ್ಪರಿಣಾಮಗಳನ್ನು ಅನುಭವಿಸಿಯೇ ತೀರುವೆವು ಎಂದು ಯೆಹೋವನು ನಮ್ಮನ್ನು ದಯೆಯಿಂದ ಎಚ್ಚರಿಸುತ್ತಾನೆ.—ಗಲಾ. 6:7.
8. ನಮ್ಮ ಜೀವನ ಮಾರ್ಗದ ಕುರಿತು ಪರ್ಯಾಲೋಚಿಸುವುದು ಏಕೆ ವಿವೇಕಪ್ರದ?
8 ಅದಲ್ಲದೆ, ಸುಖಭೋಗಗಳನ್ನು ಸಮತೋಲನವಿಲ್ಲದೆ ಬೆನ್ನಟ್ಟಿದರೆ ಹೆಚ್ಚು ಮಹತ್ವದ ವಿಷಯಗಳಿಗೆ ಯೋಗ್ಯ ಗಮನವನ್ನು ಕೊಡಲು ನಮಗಾಗದು. ನಮ್ಮ ಆಯುಸ್ಸು ಬಲು ಬೇಗನೇ ದಾಟಿಹೋಗುತ್ತದೆಂದು ನೆನಪಿನಲ್ಲಿಡಿರಿ ಮತ್ತು ನಮ್ಮ ಅಲ್ಪ ಜೀವಿತವು ಯಾವಾಗಲೂ ಅಸ್ವಸ್ಥತೆ ಹಾಗೂ ಸಮಸ್ಯೆರಹಿತವಾಗಿ ಇರುತ್ತದೆ ಎಂಬುದಕ್ಕೆ ಗ್ಯಾರಂಟಿ ಇಲ್ಲ. ಆದುದರಿಂದಲೇ, ಸೊಲೊಮೋನನು ಅನಂತರ ತಿಳಿಸುವ ಪ್ರಕಾರ “ಔತಣದ ಮನೆಗಿಂತ” ಒಂದು ಮರಣದುಃಖದ ಮನೆಗೆ ಹೋಗುವುದರಿಂದ, ವಿಶೇಷವಾಗಿ ನಿಷ್ಠಾವಂತ ಕ್ರೈಸ್ತ ಸಹೋದರ ಅಥವಾ ಸಹೋದರಿ ತೀರಿಕೊಂಡಿರುವ ಮನೆಗೆ ಹೋಗುವದರಿಂದ ನಾವು ಹೆಚ್ಚಿನ ಪ್ರಯೋಜನ ಪಡೆಯಬಹುದು. (ಪ್ರಸಂಗಿ 7:2, 4 ಓದಿ.) ಅದು ಹೇಗೆ? ಏಕೆಂದರೆ ಶವಸಂಸ್ಕಾರದ ಭಾಷಣಕ್ಕೆ ಕಿವಿಗೊಡುವಾಗ ಹಾಗೂ ತೀರಿಕೊಂಡ ವ್ಯಕ್ತಿಯ ನಂಬಿಗಸ್ತಿಕೆಯ ಜೀವನ ಮಾರ್ಗದ ಕುರಿತು ತಿಳಿಯುವಾಗ ನಮ್ಮ ಸ್ವಂತ ಜೀವನ ಮಾರ್ಗವನ್ನು ಪರ್ಯಾಲೋಚಿಸಲು ನಾವು ಪ್ರೇರಿಸಲ್ಪಡಬಹುದು. ಫಲಿತಾಂಶವಾಗಿ, ನಮ್ಮ ಉಳಿದ ಜೀವಿತವನ್ನು ವಿವೇಕದಿಂದ ಬಳಸುವುದಕ್ಕಾಗಿ ನಮ್ಮ ಗುರಿಗಳನ್ನು ಹೊಂದಿಸಿಕೊಳ್ಳುವ ಅಗತ್ಯವಿದೆ ಎಂಬ ತೀರ್ಮಾನವನ್ನೂ ನಾವು ಮಾಡಬಹುದು.—ಪ್ರಸಂ. 12:1.
ಐಹಿಕ ಸಂಪತ್ತುಗಳು ನಮಗೆ ಸಂತೃಪ್ತಿ ಕೊಡುತ್ತವೋ?
9. ಐಶ್ವರ್ಯವನ್ನು ಗಳಿಸುವ ವಿಷಯದಲ್ಲಿ ಸೊಲೊಮೋನನು ಏನನ್ನು ಕಂಡುಕೊಂಡನು?
9 ಸೊಲೊಮೋನನು ಪ್ರಸಂಗಿ ಪುಸ್ತಕವನ್ನು ಬರೆದಾಗ ಅವನು ಭೂಮಿಯಲ್ಲಿ ಅತ್ಯಂತ ಐಶ್ವರ್ಯವಂತ ವ್ಯಕ್ತಿಗಳಲ್ಲಿ ಒಬ್ಬನಾಗಿದ್ದನು. (2 ಪೂರ್ವ. 9:22) ತನಗೆ ಬೇಕಾದ ಯಾವುದೇ ವಸ್ತುಗಳನ್ನು ಪಡೆದುಕೊಳ್ಳಲು ಅವನಲ್ಲಿ ಬೇಕಾದಷ್ಟು ಹಣವಿತ್ತು. “ನನ್ನ ಕಣ್ಣು ಬಯಸಿದ್ದೆಲ್ಲವನ್ನೂ ಅದಕ್ಕೆ ನಾನು ಒಪ್ಪಿಸದೆ ಬಿಡಲಿಲ್ಲ,” ಎಂದು ಬರೆದನವನು. (ಪ್ರಸಂ. 2:10) ಆದಾಗ್ಯೂ, ಸಿರಿಸಂಪತ್ತುಗಳೇ ಯಾವ ಸಂತೃಪ್ತಿಯನ್ನೂ ತರಲಾರವು ಎಂಬುದನ್ನು ಅವನು ಕಂಡುಕೊಂಡನು. “ಬೆಳ್ಳಿಯನ್ನು ಆಶಿಸುವವನಿಗೆ ಎಷ್ಟು ಬೆಳ್ಳಿಯಿಂದಲೂ ತೃಪ್ತಿಯಾಗದು; ಸಮೃದ್ಧಿಯನ್ನು ಬಯಸುತ್ತಲೇ ಇರುವವನಿಗೆ ಆದಾಯವೆಷ್ಟಾದರೂ ಸಾಲದು,” ಎಂಬ ನಿರ್ಣಯಕ್ಕೆ ಅವನು ಬಂದನು.—ಪ್ರಸಂ. 5:10.
10. ನಿಜ ಸಂತೃಪ್ತಿಗೆ ಮತ್ತು ನಿಜ ಐಶ್ವರ್ಯಗಳಿಗೆ ನಮ್ಮನ್ನು ನಡಿಸುವಂಥದ್ದು ಯಾವುದು?
10 ಸಿರಿಸಂಪತ್ತುಗಳ ಮೌಲ್ಯವು ಕ್ಷಣಿಕವೂ ಅಸ್ಥಿರವೂ ಆಗಿದೆಯಾದರೂ, ಐಶ್ವರ್ಯವಿನ್ನೂ ಜನರ ಮೇಲೆ ಬಲವಾದ ಪ್ರಭಾವವನ್ನು ಬೀರುತ್ತದೆ. ಅಮೆರಿಕದಲ್ಲಿ ಇತ್ತೀಚೆಗೆ ಮಾಡಿದ ಸಮೀಕ್ಷೆ ಒಂದರಲ್ಲಿ ಪ್ರಥಮ ವರ್ಷದ ಯುನಿರ್ವಸಿಟಿ ವಿದ್ಯಾರ್ಥಿಗಳೆಲ್ಲರಲ್ಲಿ 75 ಶೇಕಡ ಮಂದಿ ತಮ್ಮ ಜೀವನದ ಮುಖ್ಯ ಗುರಿ “ಆರ್ಥಿಕವಾಗಿ ಐಶ್ವರ್ಯವಂತರಾಗುವುದೇ,” ಎಂದರು. ಒಂದು ವೇಳೆ ತಮ್ಮ ಗುರಿಯನ್ನು ಮುಟ್ಟಿದರೂ ಅವರು ನಿಜವಾಗಿ ಸಂತೋಷಿತರಾಗಿರುವರೋ? ಅದು ಅನಿವಾರ್ಯವಲ್ಲ. ಏಕೆಂದರೆ ಪ್ರಾಪಂಚಿಕ ವಸ್ತುಗಳು ಒಬ್ಬನ ಜೀವನದಲ್ಲಿ ಪ್ರಾಮುಖ್ಯವಾಗಿರುವಾಗ ನಿಜವಾಗಿ ಸಂತೋಷ ಮತ್ತು ಸಂತೃಪ್ತಿಯನ್ನು ಕಂಡುಕೊಳ್ಳುವುದು ಬಲು ಕಷ್ಟ ಎಂದು ಸಂಶೋಧಕರು ಗಮನಿಸಿದ್ದಾರೆ. ಬಹಳ ಕಾಲದ ಹಿಂದೆ ಸೊಲೊಮೋನನು ಅದೇ ನಿರ್ಧಾರಕ್ಕೆ ಬಂದಿದ್ದನು. ಅವನು ಬರೆದದ್ದು: “ಬೆಳ್ಳಿಬಂಗಾರಗಳನ್ನೂ ಅರಸರ ನಜರನ್ನೂ . . . ಸಂಗ್ರಹಿಸಿಕೊಂಡೆನು; . . . ಆಹಾ, ಗಾಳಿಯನ್ನು ಹಿಂದಟ್ಟಿದ ಹಾಗೆ ಸಮಸ್ತವೂ ವ್ಯರ್ಥವಾಯಿತು.”a (ಪ್ರಸಂ. 2:8, 11) ಬದಲಾಗಿ, ಯೆಹೋವನನ್ನು ಮನಃಪೂರ್ವಕವಾಗಿ ಸೇವಿಸಲು ನಾವು ನಮ್ಮ ಸಮಯವನ್ನು ಉಪಯೋಗಿಸಿ ಹೀಗೆ ಆತನ ಆಶೀರ್ವಾದವನ್ನು ಗಳಿಸುವುದಾದರೆ ನಿಜವಾದ ಐಶ್ವರ್ಯವನ್ನು ಕೊಯ್ಯುವೆವು.—ಜ್ಞಾನೋಕ್ತಿ 10:22 ಓದಿ.
ಯಾವ ಕೆಲಸ ನಿಜ ಸಂತೃಪ್ತಿಯನ್ನು ತರುತ್ತದೆ?
11. ಕೆಲಸದ ಮೌಲ್ಯದ ಕುರಿತು ಶಾಸ್ತ್ರಗ್ರಂಥಗಳು ಏನನ್ನು ಸೂಚಿಸುತ್ತವೆ?
11 ಯೇಸು ಅಂದದ್ದು: “ನನ್ನ ತಂದೆಯು ಇಂದಿನ ವರೆಗೂ ಕೆಲಸಮಾಡುತ್ತಾನೆ, ನಾನೂ ಕೆಲಸಮಾಡುತ್ತೇನೆ.” (ಯೋಹಾ. 5:17) ಯೆಹೋವ ಮತ್ತು ಯೇಸು ಇಬ್ಬರೂ ಕೆಲಸದಿಂದ ಸಂತೃಪ್ತಿ ಪಡೆಯುತ್ತಾರೆಂಬುದರಲ್ಲಿ ಸಂದೇಹವಿಲ್ಲ. ಯೆಹೋವನು ತನ್ನ ಸೃಷ್ಟಿಕಾರ್ಯದಲ್ಲಿ ಪಡೆದ ಸಂತೋಷದ ಕುರಿತು ಬೈಬಲ್ ಅನ್ನುವುದು: “ದೇವರು ತಾನು ಉಂಟುಮಾಡಿದ್ದನ್ನೆಲ್ಲಾ ನೋಡಲಾಗಿ ಅದು ಬಹು ಒಳ್ಳೇದಾಗಿತ್ತು.” (ಆದಿ. 1:31) ದೇವರು ಮಾಡಿದ್ದ ಸಕಲ ಕೈಕೆಲಸವನ್ನು ದೇವದೂತರು ಕಂಡಾಗ “ಆನಂದಘೋಷ” ಮಾಡತೊಡಗಿದರು. (ಯೋಬ 38:4-7) ಅದೇ ರೀತಿ ಸೊಲೊಮೋನನು ಸಹ ಉದ್ದೇಶಭರಿತ ಕೆಲಸಗಳ ಮೌಲ್ಯವನ್ನು ಗಣ್ಯಮಾಡಿದನು.—ಪ್ರಸಂ. 3:13.
12, 13. (ಎ) ಪ್ರಾಮಾಣಿಕ ಕೆಲಸದಿಂದ ತಮಗೆ ದೊರೆತ ಸಂತೃಪ್ತಿಯನ್ನು ಇಬ್ಬರು ವ್ಯಕ್ತಿಗಳು ಹೇಗೆ ವ್ಯಕ್ತಪಡಿಸುತ್ತಾರೆ? (ಬಿ) ಐಹಿಕ ಉದ್ಯೋಗವು ಕೆಲವೊಮ್ಮೆ ಆಶಾಭಂಗ ತರಬಹುದು ಏಕೆ?
12 ಕಷ್ಟಪಟ್ಟು ಕೆಲಸಮಾಡುವುದರಿಂದ ಬರುವ ಕಾರ್ಯಸಿದ್ಧಿಯ ಅನಿಸಿಕೆಯನ್ನು ಹೆಚ್ಚಿನ ಮಾನವರು ಅರಿತುಕೊಳ್ಳುತ್ತಾರೆ. ದೃಷ್ಟಾಂತಕ್ಕೆ, ಸಫಲ ಕಲಾಕಾರನಾದ ಹೋಸೆ ಅನ್ನುವುದು: “ನಮ್ಮ ಮನಸ್ಸಿನಲ್ಲಿರುವ ಚಿತ್ರವನ್ನು ಕ್ಯಾನ್ವಸ್ ಮೇಲೆ ವರ್ಣಚಿತ್ರವಾಗಿ ರಚಿಸಲು ಶಕ್ತರಾದಾಗ, ಉನ್ನತ ಬೆಟ್ಟವೊಂದರ ಶಿಖರವನ್ನು ಹತ್ತಿ ಜಯಿಸಿದೆವೋ ಎಂಬಂತೆ ಅನಿಸುತ್ತದೆ.” ಮಿಗೆಲ್b ಎಂಬ ವ್ಯಾಪಾರಸ್ಥನು ಗಮನಿಸುವುದು: “ಕೆಲಸವು ಸಂತೃಪ್ತಿಯನ್ನು ಕೊಡುತ್ತದೆ ಏಕೆಂದರೆ ಅದು ಕುಟುಂಬವನ್ನು ಪರಿಪಾಲಿಸಲು ನಮ್ಮನ್ನು ಶಕ್ತರನ್ನಾಗಿ ಮಾಡುತ್ತದೆ. ಕಾರ್ಯಸಿದ್ಧಿಯ ಪ್ರಜ್ಞೆಯನ್ನೂ ನಮಗದು ಕೊಡಬಲ್ಲದು.”
13 ಇನ್ನೊಂದು ಕಡೆ, ಅನೇಕ ಉದ್ಯೋಗಗಳು ಏಕತಾನತೆಯದ್ದಾಗಿದ್ದು ಬೇಸರ ಹಿಡಿಸುತ್ತವೆ ಮತ್ತು ಸೃಜನಶೀಲತೆಗೆ ಹೆಚ್ಚಿನ ಅವಕಾಶಗಳನ್ನು ಕೊಡುವುದಿಲ್ಲ. ಕೆಲವು ಸಾರಿ ನಮ್ಮ ಉದ್ಯೋಗದ ಸ್ಥಳ ತಾನೇ ಆಶಾಭಂಗದ ಮೂಲವಾಗಿರುತ್ತದೆ. ಅಲ್ಲಿ ನಮಗೆ ಅನ್ಯಾಯವನ್ನು ಸಹ ಗೈಯಲಾಗುತ್ತದೆ. ಸೊಲೊಮೋನನು ತಿಳಿಸುವ ಪ್ರಕಾರ, ಒಬ್ಬನು ಸೋಮಾರಿಯಾಗಿ ಪ್ರಯಾಸಪಟ್ಟು ಕೆಲಸ ಮಾಡದಿದ್ದರೂ ದೊಡ್ಡ ಅಧಿಕಾರಿಗಳ ಪರಿಚಯದ ಪ್ರಭಾವದಿಂದಾಗಿ ಒಳ್ಳೇ ಕೆಲಸಗಾರನ ವೇತನವನ್ನು ಗಿಟ್ಟಿಸಬಹುದು. (ಪ್ರಸಂ. 2:21) ಬೇರೆ ಸಂಗತಿಗಳು ಸಹ ನಿರಾಶೆಗೆ ನಡಿಸಸಾಧ್ಯವಿದೆ. ಮೊದಲಲ್ಲಿ ಅತ್ಯಂತ ಲಾಭದಾಯಕವೆಂದು ತೋರುವ ಒಂದು ವ್ಯಾಪಾರ ಸಹ ಆರ್ಥಿಕ ಬಿಕ್ಕಟ್ಟು ಅಥವಾ ಮುಂಗಾಣದಿರುವ ಘಟನೆಗಳಿಂದಾಗಿ ಕುಸಿದುಹೋಗಬಹುದು. [“ಕಾಲಕ್ಕೂ ಮುಂಗಾಣದ ಘಟನೆಗಳಿಗೂ ಎಲ್ಲರೂ ಗುರಿಯಾಗುತ್ತಾರೆ.” (ಪ್ರಸಂಗಿ 9:11, NW)] ಯಶಸ್ವಿಯಾಗಲು ಪ್ರಯಾಸದಿಂದ ದುಡಿಯುವ ವ್ಯಕ್ತಿಯು ಸಹ ಅನೇಕಸಲ ಆಶಾಭಂಗ ಮತ್ತು ಮನೋವ್ಯಥೆಗೀಡಾಗುತ್ತಾನೆ. ತನ್ನ ದುಡಿಮೆಯು ಬರೇ “ಗಾಳಿಗಾಗಿ ಪಟ್ಟ ಪ್ರಯಾಸ” ಎಂದವನಿಗೆ ಮನವರಿಕೆಯಾಗುತ್ತದೆ.—ಪ್ರಸಂ. 5:16.
14. ಯಾವ ಕೆಲಸವು ಯಾವಾಗಲೂ ನಿಜವಾದ ಸಂತೃಪ್ತಿಯನ್ನು ತರುತ್ತದೆ?
14 ನಮ್ಮನ್ನು ಎಂದೂ ನಿರಾಶೆಗೊಳಿಸದ ಯಾವುದೇ ಒಂದು ಕೆಲಸವಿದೆಯೇ? ಈ ಮೊದಲೇ ತಿಳಿಸಿದ ಕಲಾಕಾರ ಹೋಸೆ ಅನ್ನುವುದು: “ಸಮಯವು ದಾಟಿದಂತೆ ಕಲಾಕೃತಿಗಳು ಕಳೆದುಹೋಗುವ ಇಲ್ಲವೆ ನಶಿಸಿಹೋಗುವ ಸಂಭವವಿದೆ. ಆದರೆ ದೇವರ ಕೆಲಸದಲ್ಲಿ ನಾವು ಉತ್ಪಾದಿಸುವ ಆಧ್ಯಾತ್ಮಿಕ ವಿಷಯಗಳು ನಶಿಸಿಹೋಗುವುದಿಲ್ಲ. ಸುವಾರ್ತೆಯನ್ನು ಸಾರುವುದರಿಂದ ಯೆಹೋವನಿಗೆ ವಿಧೇಯರಾಗುವ ಮೂಲಕ, ಚಿರಸ್ಥಾಯಿಯಾದ ಒಂದು ವಿಷಯವನ್ನು ಕಟ್ಟಲು ಅಂದರೆ ಇತರರು ದೇವಭೀರು ಕ್ರೈಸ್ತರಾಗುವಂತೆ ಮಾಡಲು ನಾನು ಸಹಾಯಮಾಡಿದ್ದೇನೆ. ಅದು ನಿಜವಾಗಿ ಅತ್ಯಮೂಲ್ಯವಾದದ್ದು.” (1 ಕೊರಿಂ. 3:9-11) ತದ್ರೀತಿಯಲ್ಲಿ, ರಾಜ್ಯದ ಸಂದೇಶವನ್ನು ಸಾರುವುದು ತನಗೆ ಐಹಿಕ ಉದ್ಯೋಗಕ್ಕಿಂತ ಎಷ್ಟೋ ಹೆಚ್ಚು ಸಂತೃಪ್ತಿಯನ್ನು ತರುತ್ತದೆಂದು ಮಿಗೆಲ್ ಸಹ ಹೇಳುತ್ತಾನೆ. “ಶಾಸ್ತ್ರಾಧಾರಿತ ಸತ್ಯವನ್ನು ಒಬ್ಬರೊಂದಿಗೆ ಚರ್ಚಿಸುವಾಗ ಮತ್ತು ಅವರ ಹೃದಯವನ್ನು ಅದು ಆಳವಾಗಿ ಸ್ಪರ್ಶಿಸಿದೆ ಎಂದು ತಿಳಿಯುವಾಗ ನಮಗೆ ದೊರೆಯುವಷ್ಟು ಸಂತೋಷ ಬೇರೆ ಯಾವುದರಿಂದಲೂ ದೊರಕದು” ಎಂದವನು ಹೇಳುತ್ತಾನೆ.
“ಆಹಾರವನ್ನು ನೀರಿನ ಮೇಲೆ ಚೆಲ್ಲು”
15. ಜೀವನವನ್ನು ನಿಜವಾಗಿಯೂ ಸಾರ್ಥಕವನ್ನಾಗಿ ಮಾಡುವುದು ಯಾವುದು?
15 ಕೊನೆಯದಾಗಿ, ನಮ್ಮ ಜೀವನವನ್ನು ನಿಜವಾಗಿ ಸಾರ್ಥಕವನ್ನಾಗಿ ಮಾಡುವುದು ಯಾವುದು? ಈ ವಿಷಯ ವ್ಯವಸ್ಥೆಯಲ್ಲಿನ ನಮ್ಮ ಅಲ್ಪಾಯುಷ್ಯವನ್ನು ಒಳ್ಳೇದನ್ನು ಮಾಡಲಿಕ್ಕಾಗಿಯೂ ಯೆಹೋವನನ್ನು ಮೆಚ್ಚಿಸಲಿಕ್ಕಾಗಿಯೂ ಉಪಯೋಗಿಸುವುದಾದರೆ ನಾವು ನಿಜ ಸಂತೃಪ್ತಿಯನ್ನು ಅನುಭವಿಸುತ್ತೇವೆ. ಆಗ ಯೆಹೋವನೊಂದಿಗೆ ಒಂದು ಆಪ್ತಸಂಬಂಧವನ್ನು ನಾವು ಬೆಳೆಸಿಕೊಳ್ಳುತ್ತೇವೆ, ನಮ್ಮ ಮಕ್ಕಳಿಗೆ ಬೈಬಲಿನ ಮೌಲ್ಯಗಳನ್ನು ಕಲಿಸಶಕ್ತರಾಗುತ್ತೇವೆ, ಇತರರು ಯೆಹೋವನನ್ನು ತಿಳಿಯುವಂತೆ ನೆರವಾಗುತ್ತೇವೆ ಮತ್ತು ನಮ್ಮ ಸಹೋದರ ಸಹೋದರಿಯರೊಂದಿಗೆ ಚಿರಸ್ಥಾಯಿಯಾದ ಸ್ನೇಹದ ಬಂಧವನ್ನು ಬೆಳೆಸುತ್ತೇವೆ. (ಗಲಾ. 6:10) ಈ ಎಲ್ಲ ಪ್ರಯತ್ನಗಳಿಗೆ ನಿರಂತರವಾದ ಮೌಲ್ಯವಿದೆ ಮತ್ತು ಹಾಗೆ ಮಾಡುವವರಿಗೆ ಅವು ಆಶೀರ್ವಾದದಾಯಕ. ಒಳ್ಳೇದನ್ನು ಮಾಡುವುದರ ಮೌಲ್ಯವನ್ನು ವರ್ಣಿಸಲು ಸೊಲೊಮೋನನು ಒಂದು ಅತಿ ಸ್ವಾರಸ್ಯದ ಹೋಲಿಕೆಯನ್ನು ಉಪಯೋಗಿಸಿದನು. ಅವನಂದದ್ದು: “ನಿನ್ನ ಆಹಾರವನ್ನು ನೀರಿನ ಮೇಲೆ ಚೆಲ್ಲು, ಬಹು ದಿನದ ಮೇಲೆ ಅದು ನಿನಗೆ ಸಿಕ್ಕುವದು.” (ಪ್ರಸಂ. 11:1) ಯೇಸು ತನ್ನ ಶಿಷ್ಯರನ್ನು ಉತ್ತೇಜಿಸಿದ್ದು: “ಕೊಡಿರಿ, ಆಗ ನಿಮಗೂ ಕೊಡುವರು.” (ಲೂಕ 6:38) ಅಷ್ಟಲ್ಲದೆ, ಬೇರೆಯವರಿಗೆ ಒಳ್ಳೇದನ್ನು ಮಾಡುವವರಿಗೆ ಯೆಹೋವನು ತಾನೇ ಪ್ರತಿಫಲ ಕೊಡುವುದಾಗಿ ವಾಗ್ದಾನ ಮಾಡಿದ್ದಾನೆ.—ಜ್ಞಾನೋ. 19:17; ಇಬ್ರಿಯ 6:10 ಓದಿ.
16. ನಮ್ಮ ಜೀವನದ ಮಾರ್ಗವನ್ನು ಯೋಜಿಸಲಿಕ್ಕೆ ಸುಸಮಯ ಯಾವುದು?
16 ನಾವು ನಮ್ಮ ಜೀವನವನ್ನು ಹೇಗೆ ಬಳಸಲಿದ್ದೇವೆ ಎಂಬುದರ ಬಗ್ಗೆ ಇನ್ನೂ ಎಳೆಯರಾಗಿರುವಾಗಲೇ ವಿವೇಕಯುತ ನಿರ್ಣಯಗಳನ್ನು ಮಾಡುವಂತೆ ಬೈಬಲ್ ನಮ್ಮನ್ನು ಉತ್ತೇಜಿಸುತ್ತದೆ. ಹಾಗೆ ಮಾಡಿದಲ್ಲಿ, ವರುಷಗಳು ದಾಟಿಹೋದಾಗ ಬರುವ ಆಶಾಭಂಗವನ್ನು ನಾವು ತಪ್ಪಿಸಿಕೊಳ್ಳಲು ಸಾಧ್ಯವಾಗುವುದು. (ಪ್ರಸಂ. 12:1) ಲೋಕದ ಆಕರ್ಷಣೆಗಳನ್ನು ಬೆನ್ನಟ್ಟಿಕೊಂಡು ಹೋಗಲು ಜೀವನದ ಅತ್ಯುತ್ತಮ ವರ್ಷಗಳನ್ನು ನಾವು ದುಂದು ಮಾಡಿದ್ದಾದರೆ ಅದೆಷ್ಟು ಖೇದಕರ; ಏಕೆಂದರೆ ಗಾಳಿಯನ್ನು ಹಿಂದಟ್ಟಿದರೆ ಹೇಗೋ ಹಾಗೆ ಲೌಕಿಕ ಬೆನ್ನಟ್ಟುವಿಕೆಗಳಿಂದ ನಾವು ಯಾವ ಸ್ಥಿರತೆಯನ್ನೂ ಕಂಡುಕೊಳ್ಳಲಾರೆವು!
17. ಅತ್ಯುತ್ತಮವಾದ ಜೀವನ ಮಾರ್ಗವನ್ನು ಆರಿಸಿಕೊಳ್ಳಲು ನಿಮಗೆ ಯಾವುದು ಸಹಾಯ ಮಾಡುವುದು?
17 ಒಬ್ಬ ಪ್ರೀತಿಪರ ತಂದೆಯು ಹೇಗೋ ಹಾಗೆ ಯೆಹೋವನು ನಾವು ಜೀವನವನ್ನು ಆನಂದಿಸುವಂತೆ, ಒಳ್ಳೇದನ್ನು ಮಾಡುವಂತೆ ಮತ್ತು ಅನಾವಶ್ಯಕ ಮನೋವ್ಯಥೆಯನ್ನು ತಪ್ಪಿಸಿಕೊಳ್ಳುವಂತೆ ಅಪೇಕ್ಷಿಸುತ್ತಾನೆ. (ಪ್ರಸಂ. 11:9, 10) ಅದನ್ನು ಮಾಡಲು ನಿಮಗೆ ಯಾವುದು ಸಹಾಯಕಾರಿ? ದೇವರ ಸೇವೆಯನ್ನು ಹೆಚ್ಚೆಚ್ಚಾಗಿ ಮಾಡುವ ಆಧ್ಯಾತ್ಮಿಕ ಗುರಿಗಳನ್ನಿಡುವುದು ಮತ್ತು ಅವುಗಳನ್ನು ಮುಟ್ಟಲು ಶ್ರಮಿಸುವುದೇ. ಸುಮಾರು 20 ವರ್ಷಗಳ ಹಿಂದೆ ಕೇವ್ಯರ್ ಎಂಬಾತನಿಗೆ ಒಂದು ಲಾಭಕರ ವೈದ್ಯಕೀಯ ವೃತ್ತಿ ಮತ್ತು ಪೂರ್ಣ ಸಮಯದ ಸೇವೆ ಇವುಗಳಲ್ಲಿ ಒಂದನ್ನು ಆರಿಸಿಕೊಳ್ಳುವ ಅವಕಾಶವಿತ್ತು. ಅವನನ್ನುವುದು: “ವೈದ್ಯಕೀಯ ವೃತ್ತಿಯು ಸಂತೃಪ್ತಿಕರವಾಗಿರಬಲ್ಲದು ಆದರೂ, ಕೆಲವರಿಗೆ ಸತ್ಯವನ್ನು ಕಲಿಸಲು ನೆರವಾದಾಗ ನನಗೆ ಸಿಕ್ಕಿದ ಸಂತೋಷಕ್ಕೆ ಸರಿಸಾಟಿಯಾದದ್ದು ಯಾವುದೂ ಇಲ್ಲ. ಪೂರ್ಣ ಸಮಯದ ಸೇವೆಯು ನನ್ನ ಜೀವನವನ್ನು ಸಂಪೂರ್ಣವಾಗಿ ಆನಂದಿಸುವಂತೆ ಸಾಧ್ಯಮಾಡಿದೆ. ನನಗಿರುವ ಒಂದೇ ಖೇದವು ಇದಕ್ಕಿಂತ ಮುಂಚೆಯೇ ನಾನೇಕೆ ಅದನ್ನು ಆರಂಭಿಸಲಿಲ್ಲ ಎಂಬದೇ.”
18. ಭೂಮಿಯಲ್ಲಿ ಯೇಸುವಿನ ಜೀವನವು ಅಷ್ಟು ಸಾರ್ಥಕವಾದದ್ದೇಕೆ?
18 ಆದುದರಿಂದ ನಾವು ಗಳಿಸಲು ಶ್ರಮಿಸಬೇಕಾದ ಅತಿ ಅಮೂಲ್ಯವಾದ ವಿಷಯವು ಯಾವುದು? ಪ್ರಸಂಗಿ ಪುಸ್ತಕವು ಹೇಳುವುದು: “ಸುಗಂಧತೈಲಕ್ಕಿಂತ ಒಳ್ಳೆಯ ಹೆಸರು ಉತ್ತಮ; ಜನನ ದಿನಕ್ಕಿಂತ ಮರಣದಿನ ಮೇಲು.” (ಪ್ರಸಂ. 7:1, 2) ಇದನ್ನು ಯೇಸುವಿನ ಜೀವನ ಮಾರ್ಗವು ಅತ್ಯುತ್ತಮವಾಗಿ ದೃಷ್ಟಾಂತಿಸುತ್ತದೆ. ಆತನು ನಿಶ್ಚಯವಾಗಿಯೂ ಯೆಹೋವನೊಂದಿಗೆ ಒಂದು ಬಹು ಒಳ್ಳೆಯ ಹೆಸರನ್ನು ಮಾಡಿಕೊಂಡನು. ಯೇಸು ನಂಬಿಗಸ್ತನಾಗಿ ಮರಣಪಟ್ಟಾಗ, ತನ್ನ ತಂದೆಯ ಪರಮಾಧಿಕಾರವನ್ನು ನಿರ್ದೋಷೀಕರಿಸಿದನು ಮತ್ತು ನಮ್ಮ ರಕ್ಷಣೆಗಾಗಿ ಮಾರ್ಗವನ್ನು ತೆರೆದ ವಿಮೋಚನಾ ಯಜ್ಞದ ಮೌಲ್ಯವನ್ನು ಕೊಟ್ಟನು. (ಮತ್ತಾ. 20:28) ಅವನು ಭೂಮಿಯಲ್ಲಿದ್ದ ಕೊಂಚ ಅವಧಿಯಲ್ಲಿ, ಒಂದು ನಿಜವಾದ ಸಾರ್ಥಕ ಜೀವನದ ಪರಿಪೂರ್ಣ ಮಾದರಿಯನ್ನು ನಮಗಾಗಿ ಒದಗಿಸಿದನು. ನಾವು ಅದನ್ನು ಪರಿಶ್ರಮದಿಂದ ಅನುಕರಿಸುತ್ತೇವೆ.—1 ಕೊರಿಂ. 11:1; 1 ಪೇತ್ರ 2:21.
19. ಯಾವ ವಿವೇಕಯುತ ಬುದ್ಧಿವಾದವನ್ನು ಸೊಲೊಮೋನನು ಕೊಟ್ಟನು?
19 ನಾವು ಸಹ ದೇವರೊಂದಿಗೆ ಒಂದು ಒಳ್ಳೇ ಹೆಸರನ್ನು ಮಾಡಿಕೊಳ್ಳಬಲ್ಲೆವು. ಯೆಹೋವನ ದೃಷ್ಟಿಯಲ್ಲಿ ಒಳ್ಳೆಯ ನಿಲುವು ಇರುವುದು ನಮಗೆ ಐಶ್ವರ್ಯಕ್ಕಿಂತಲೂ ಎಷ್ಟೋ ಅಮೂಲ್ಯ. (ಮತ್ತಾಯ 6:19-21 ಓದಿ.) ಯೆಹೋವನ ದೃಷ್ಟಿಯಲ್ಲಿ ಒಳ್ಳೆಯದಾದ ವಿಷಯಗಳನ್ನು ಮಾಡುವ ಸಂದರ್ಭಗಳನ್ನು ದಿನಾಲೂ ನಾವು ಕಂಡುಕೊಳ್ಳಬಲ್ಲೆವು. ಮತ್ತು ಅದು ನಮ್ಮ ಜೀವನವನ್ನು ಸಂಪದ್ಯುಕ್ತವನ್ನಾಗಿ ಮಾಡುವುದು. ದೃಷ್ಟಾಂತಕ್ಕಾಗಿ, ನಾವು ಇತರರೊಂದಿಗೆ ಸುವಾರ್ತೆಯನ್ನು ಹಂಚಬಲ್ಲೆವು, ನಮ್ಮ ವಿವಾಹ ಮತ್ತು ಕುಟುಂಬ ಸಂಬಂಧವನ್ನು ಬಲಪಡಿಸಬಲ್ಲೆವು, ವೈಯಕ್ತಿಕ ಅಧ್ಯಯನ ಮತ್ತು ಕೂಟದ ಹಾಜರಿಯ ಮೂಲಕ ನಮ್ಮ ಆಧ್ಯಾತ್ಮಿಕತೆಯನ್ನು ಆಳಗೊಳಿಸಬಲ್ಲೆವು. (ಪ್ರಸಂ. 11:6; ಇಬ್ರಿ. 13:16) ಹಾಗಾದರೆ ಒಂದು ನಿಜವಾದ ಸಾರ್ಥಕ ಜೀವನವನ್ನು ನೀವು ಆನಂದಿಸ ಬಯಸುತ್ತೀರೋ? ಹಾಗಿರುವಲ್ಲಿ, ಸೊಲೊಮೋನನ ಈ ಬುದ್ಧಿವಾದವನ್ನು ಅನುಸರಿಸುತ್ತಾ ಇರಿ: “ದೇವರಿಗೆ ಭಯಪಟ್ಟು ಆತನ ಆಜ್ಞೆಗಳನ್ನು ಕೈಕೊಳ್ಳು; ಮನುಷ್ಯರೆಲ್ಲರ [ಕರ್ತವ್ಯವು] ಇದೇ.”—ಪ್ರಸಂ. 12:13.
[ಪಾದಟಿಪ್ಪಣಿಗಳು]
a ಸೊಲೊಮೋನನ ರಾಜ್ಯದ ವಾರ್ಷಿಕ ಹುಟ್ಟುವಳಿಯು 666 ಚಿನ್ನದ ತಲಾಂತುಗಳು (ಒಟ್ಟು ತೂಕ 22,000 ಕೆಜಿಗಿಂತ ಹೆಚ್ಚು) ಆಗಿತ್ತು.—2 ಪೂರ್ವ. 9:13.
b ಹೆಸರನ್ನು ಬದಲಾಯಿಸಲಾಗಿದೆ.
ಹೇಗೆ ಉತ್ತರಿಸುವಿರಿ?
• ಜೀವನದಲ್ಲಿ ನಮ್ಮ ಗುರಿಗಳ ಕುರಿತು ಗಂಭೀರವಾಗಿ ಯೋಚಿಸುವಂತೆ ಯಾವುದು ಪ್ರೇರಿಸಬೇಕು?
• ಸುಖಭೋಗ ಮತ್ತು ಸಿರಿಸಂಪತ್ತುಗಳ ಬೆನ್ನಟ್ಟುವಿಕೆಯನ್ನು ನಾವು ಹೇಗೆ ವೀಕ್ಷಿಸಬೇಕು?
• ಯಾವ ಕೆಲಸವು ನಮಗೆ ಬಾಳುವ ಸಂತೃಪ್ತಿಯನ್ನು ತರುವುದು?
• ಅಮೂಲ್ಯವಾದ ಯಾವ ವಿಷಯವನ್ನು ಗಳಿಸಲು ನಾವು ಶ್ರಮಿಸಬೇಕು?
[ಪುಟ 23ರಲ್ಲಿರುವ ಚಿತ್ರ]
ಮನೋರಂಜನೆಗೆ ನಮ್ಮ ಜೀವನದಲ್ಲಿ ಯಾವ ಸ್ಥಾನವಿರಬೇಕು?
[ಪುಟ 24ರಲ್ಲಿರುವ ಚಿತ್ರ]
ಸಾರುವ ಕೆಲಸವು ಆಳವಾದ ಸಂತೃಪ್ತಿಯನ್ನು ತರುವುದೇಕೆ?