ಯೇಸುವಿನಿಂದ ಕಲಿಯುವುದು . . .
ದೇವರು ಆಲಿಸುವ ಪ್ರಾರ್ಥನೆಯ ಕುರಿತು
ಯೇಸು ಪ್ರಾರ್ಥನೆ ಮಾಡಲು ಹೆಚ್ಚಾಗಿ ಏಕಾಂತ ಸ್ಥಳವನ್ನು ಹುಡುಕಿದನು. ತನ್ನ ಹಿಂಬಾಲಕರು ಕೂಡ ಹಾಗೆ ಮಾಡುವಂತೆ ಉತ್ತೇಜಿಸಿದನು. ಬೈಬಲು ಅನ್ನುವುದು: “ಆತನು ಒಂದಾನೊಂದು ಸ್ಥಳದಲ್ಲಿ ಪ್ರಾರ್ಥನೆಮಾಡಿ ಮುಗಿಸಿದಾಗ ಆತನ ಶಿಷ್ಯರಲ್ಲಿ ಒಬ್ಬನು ಆತನಿಗೆ—ಸ್ವಾಮೀ, . . . ನಮಗೂ ಪ್ರಾರ್ಥನೆಮಾಡುವದನ್ನು ಕಲಿಸು ಎಂದು ಕೇಳಿದನು. ಅದಕ್ಕಾತನು—ನೀವು ಪ್ರಾರ್ಥಿಸುವಾಗ—ತಂದೆಯೇ, ನಿನ್ನ ನಾಮವು ಪರಿಶುದ್ಧವೆಂದು ಎಣಿಸಲ್ಪಡಲಿ . . . ಎಂದು ಹೇಳಿರಿ ಅಂದನು.” (ಲೂಕ 5:16; 11:1, 2, 4) ಹೀಗೆ ತನ್ನ ತಂದೆಯಾದ ಯೆಹೋವನಿಗೇ ಪ್ರಾರ್ಥನೆ ಮಾಡಬೇಕೆಂದು ಯೇಸು ತೋರಿಸಿಕೊಟ್ಟನು. ಯೆಹೋವನೊಬ್ಬನೇ ನಮ್ಮ ನಿರ್ಮಾಣಿಕನೂ ‘ಪ್ರಾರ್ಥನೆಯನ್ನು ಕೇಳುವವನೂ’ ಆಗಿದ್ದಾನೆ.—ಕೀರ್ತನೆ 65:2.
ಎಲ್ಲ ಪ್ರಾರ್ಥನೆಗಳನ್ನು ದೇವರು ಮೆಚ್ಚುತ್ತಾನೋ?
ಪ್ರಾರ್ಥನೆಗಳನ್ನು ಬಾಯಿಪಾಠ ಮಾಡಿ ಪುನಃ ಪುನಃ ಉಚ್ಚರಿಸುವುದನ್ನು ದೇವರು ಮೆಚ್ಚುವುದಿಲ್ಲ. ಯೇಸು ಅಂದದ್ದು: ‘ಪ್ರಾರ್ಥನೆಮಾಡುವಾಗ ಅಜ್ಞಾನಿಗಳ ಹಾಗೆ ಹೇಳಿದ್ದನ್ನೇ ಸುಮ್ಮಸುಮ್ಮನೆ ಹೇಳಬೇಡಿ.’ (ಮತ್ತಾಯ 6:7) ನಮ್ಮ ಸ್ವರ್ಗೀಯ ತಂದೆಗೆ ಪ್ರಾರ್ಥಿಸುವಾಗ ನಾವು ಮನದಾಳದಿಂದ ಮಾತಾಡಬೇಕು. ಒಮ್ಮೆ ಯೇಸು ತನ್ನ ಹಿಂಬಾಲಕರಿಗೆ ದೇವರು ಎಂಥವರ ಪ್ರಾರ್ಥನೆಗಳನ್ನು ಮೆಚ್ಚುತ್ತಾನೆಂದು ಒತ್ತಿಹೇಳಿದನು. ಧಾರ್ಮಿಕ ಸಂಪ್ರದಾಯಗಳನ್ನು ಕಟ್ಟುನಿಟ್ಟಿನಿಂದ ಪಾಲಿಸಿದ ದರ್ಪದ ವ್ಯಕ್ತಿಯೊಬ್ಬನ ಪ್ರಾರ್ಥನೆಗಳಿಗಿಂತಲೂ ತನ್ನ ಮಾರ್ಗವನ್ನು ಬದಲಾಯಿಸಲು ಯಥಾರ್ಥವಾಗಿ ಬಯಸುವ ಪಾಪಿಯೊಬ್ಬನ ಪ್ರಾರ್ಥನೆಗಳನ್ನು ದೇವರು ಹೆಚ್ಚು ಮೆಚ್ಚುತ್ತಾನೆಂದು ಅವನಂದನು. (ಲೂಕ 18:10-14) ಆದುದರಿಂದ ನಮ್ಮ ಪ್ರಾರ್ಥನೆಗಳನ್ನು ದೇವರು ಆಲಿಸಬೇಕಾದರೆ ಆತನು ಹೇಳಿದಂತೆ ನಡೆಯಲು ನಾವು ದೀನತೆಯಿಂದ ಪ್ರಯತ್ನಿಸಬೇಕು. ಯೇಸು ಕೂಡ ತನ್ನ ಕುರಿತು ಹೇಳಿದ್ದು: ‘ತಂದೆಯು ನನಗೆ ಬೋಧಿಸಿದ ಹಾಗೆ ಅದನ್ನೆಲ್ಲಾ ಮಾತಾಡುತ್ತೇನೆ . . . ನಾನು ಆತನಿಗೆ ಮೆಚ್ಚಿಕೆಯಾದದ್ದನ್ನು ಯಾವಾಗಲೂ ಮಾಡುತ್ತೇನೆ.’ (ಯೋಹಾನ 8:28, 29) ಪ್ರಾರ್ಥನೆಯಲ್ಲಿ ಅವನಂದದ್ದು: “ನನ್ನ ಚಿತ್ತವಲ್ಲ, ನಿನ್ನ ಚಿತ್ತವೇ ಆಗಲಿ.”—ಲೂಕ 22:42.
ಯಾವುದಕ್ಕಾಗಿ ಪ್ರಾರ್ಥಿಸಬೇಕು?
ದೇವರ ನಾಮವು ನಿಂದೆಗೆ ಒಳಗಾಗಿರುವುದರಿಂದ ಯೇಸು ಅಂದದ್ದು: “ನೀವು ಹೀಗೆ ಪ್ರಾರ್ಥನೆಮಾಡತಕ್ಕದ್ದು—ಪರಲೋಕದಲ್ಲಿರುವ ನಮ್ಮ ತಂದೆಯೇ, ನಿನ್ನ ನಾಮವು ಪರಿಶುದ್ಧವೆಂದು ಎಣಿಸಲ್ಪಡಲಿ. ನಿನ್ನ ರಾಜ್ಯವು ಬರಲಿ. ನಿನ್ನ ಚಿತ್ತವು ಪರಲೋಕದಲ್ಲಿ ನೆರವೇರುವ ಪ್ರಕಾರ ಭೂಲೋಕದಲ್ಲಿಯೂ ನೆರವೇರಲಿ.” (ಮತ್ತಾಯ 6:9, 10) ನಾವು ದೇವರ ರಾಜ್ಯಕ್ಕಾಗಿಯೂ ಪ್ರಾರ್ಥಿಸಬೇಕು. ಏಕೆಂದರೆ ಭೂಪರಲೋಕಗಳಲ್ಲಿ ತನ್ನ ಚಿತ್ತವನ್ನು ಪೂರೈಸಲು ದೇವರು ಉಪಯೋಗಿಸುವ ಸರಕಾರ ಅದೇ ಆಗಿದೆ. ನಮ್ಮ ‘ಅನುದಿನದ ಆಹಾರಕ್ಕಾಗಿಯೂ’ ಪ್ರಾರ್ಥಿಸುವಂತೆ ಯೇಸು ಹೇಳಿದನು. ನಾವು ನಮ್ಮ ಉದ್ಯೋಗ, ಮನೆ, ಬಟ್ಟೆ, ಆರೋಗ್ಯ ಮತ್ತಿತರ ಚಿಂತೆಗಳ ಕುರಿತು ಯೆಹೋವ ದೇವರಿಗೆ ಪ್ರಾರ್ಥಿಸಬಲ್ಲೆವು. ಅದಲ್ಲದೆ, ನಮ್ಮ ಪಾಪಗಳ ಕ್ಷಮೆಗಾಗಿಯೂ ನಾವು ಪ್ರಾರ್ಥಿಸಬೇಕೆಂದು ಯೇಸು ಹೇಳಿದನು.—ಲೂಕ 11:3, 4.
ಬೇರೆಯವರಿಗಾಗಿ ಪ್ರಾರ್ಥಿಸಬೇಕೋ?
ಯೇಸು ಬೇರೆಯವರಿಗಾಗಿ ಪ್ರಾರ್ಥಿಸಿದನು. ಬೈಬಲ್ ನಮಗೆ ಹೇಳುವುದು: “ಕೆಲವರು ತಮ್ಮ ಚಿಕ್ಕ ಮಕ್ಕಳನ್ನು ಯೇಸುವಿನ ಬಳಿಗೆ ತಂದು ಆತನು ಅವುಗಳ ಮೇಲೆ ಕೈಯಿಟ್ಟು ಪ್ರಾರ್ಥನೆ ಮಾಡಬೇಕೆಂದು” ಕೇಳಿದರು. (ಮತ್ತಾಯ 19:13) ಅಪೊಸ್ತಲ ಪೇತ್ರನಿಗೆ ಯೇಸುವಂದದ್ದು: “ನಿನ್ನ ನಂಬಿಕೆ ಕುಂದಿಹೋಗಬಾರದೆಂದು ನಾನು ನಿನ್ನ ವಿಷಯದಲ್ಲಿ ದೇವರಿಗೆ ವಿಜ್ಞಾಪನೆಮಾಡಿಕೊಂಡೆನು.” (ಲೂಕ 22:32) ತಮ್ಮನ್ನು ಹಿಂಸೆಪಡಿಸುವ, ನಿಂದಿಸುವ ಇತರರಿಗೋಸ್ಕರವೂ ಪ್ರಾರ್ಥಿಸುವಂತೆ ಯೇಸು ತನ್ನ ಹಿಂಬಾಲಕರನ್ನು ಉತ್ತೇಜಿಸಿದನು.—ಮತ್ತಾಯ 5:44; ಲೂಕ 6:28.
ಎಡೆಬಿಡದೆ ಪ್ರಾರ್ಥಿಸಬೇಕು ಏಕೆ?
ಯೇಸು ಪ್ರಾರ್ಥನೆಗಾಗಿ ಸಮಯವನ್ನು ಬದಿಗಿಟ್ಟನು. ‘ಬೇಸರಗೊಳ್ಳದೆ ಯಾವಾಗಲೂ ಪ್ರಾರ್ಥನೆ ಮಾಡುತ್ತಿರಬೇಕೆಂದು’ ತನ್ನ ಹಿಂಬಾಲಕರನ್ನು ಉತ್ತೇಜಿಸಿದನು. (ಲೂಕ 18:1) ನಮ್ಮ ಚಿಂತೆಗಳ ಕುರಿತು ಪ್ರಾರ್ಥನೆಯಲ್ಲಿ ಪದೇ ಪದೇ ತಿಳಿಸುವ ಮೂಲಕ ಆತನಲ್ಲಿರುವ ನಮ್ಮ ಭರವಸೆಯನ್ನು ವ್ಯಕ್ತಪಡಿಸುವಂತೆ ಯೆಹೋವನು ಬಯಸುತ್ತಾನೆ. ‘ಬೇಡಿಕೊಳ್ಳುತ್ತಾ ಇರಿ, ನಿಮಗೆ ದೊರೆಯುವದು’ ಎಂದನು ಯೇಸು. ಅಂದರೆ ಇದರರ್ಥ, ತನ್ನನ್ನು ತಂದೆಯಾಗಿ ಪ್ರೀತಿಸಿ ಗೌರವಿಸುವವರಿಗೆ ಕಿವಿಗೊಡಲು ಯೆಹೋವನಿಗೆ ಮನಸ್ಸಿಲ್ಲ, ತಡಮಾಡುತ್ತಾನೆ ಎಂದಲ್ಲ. ಬದಲಾಗಿ ಯೇಸು ಅಂದದ್ದು: “ಕೆಟ್ಟವರಾದ ನೀವು ನಿಮ್ಮ ಮಕ್ಕಳಿಗೆ ಒಳ್ಳೇ ಪದಾರ್ಥಗಳನ್ನು ಕೊಡಬಲ್ಲವರಾದರೆ ಪರಲೋಕದಲ್ಲಿರುವ ನಿಮ್ಮ ತಂದೆಯು ತನ್ನನ್ನು ಬೇಡಿಕೊಳ್ಳುವವರಿಗೆ ಎಷ್ಟೋ ಹೆಚ್ಚಾಗಿ ಪವಿತ್ರಾತ್ಮವರವನ್ನು ಕೊಡುವನಲ್ಲವೇ.”—ಲೂಕ 11:5-13. (w09 2/1)
ಹೆಚ್ಚಿನ ಮಾಹಿತಿಗಾಗಿ ಬೈಬಲ್ ನಿಜವಾಗಿಯೂ ಏನನ್ನು ಬೋಧಿಸುತ್ತದೆ?a ಪುಸ್ತಕದ ಅಧ್ಯಾಯ 17 ನೋಡಿ.
[ಪಾದಟಿಪ್ಪಣಿ]
a ಯೆಹೋವನ ಸಾಕ್ಷಿಗಳಿಂದ ಪ್ರಕಾಶಿತ.