ಯೆಹೋವನು ನಮ್ಮೆಲ್ಲರ ಸ್ತುತಿಗರ್ಹನು
“ಯೆಹೋವನನ್ನು ಸ್ತುತಿಸಿರಿ.”—ಕೀರ್ತ. 111:1, NIBV.
1, 2. “ಹಲ್ಲೆಲೂಯಾ” ಎಂಬ ಪದದ ಅರ್ಥವೇನು, ಮತ್ತು ಅದನ್ನು ಕ್ರೈಸ್ತ ಗ್ರೀಕ್ ಶಾಸ್ತ್ರಗಳಲ್ಲಿ ಹೇಗೆ ಬಳಸಲಾಗಿದೆ?
“ಹಲ್ಲೆಲೂಯಾ!” ಈ ಮಾತು ಅನೇಕ ಚರ್ಚುಗಳಲ್ಲಿ ಸರ್ವಸಾಮಾನ್ಯವಾಗಿ ಕೇಳಿಬರುತ್ತದೆ. ಕೆಲ ಜನರು ತಮ್ಮ ದೈನಂದಿನ ಸಂಭಾಷಣೆಗಳಲ್ಲೂ ಈ ಪದವನ್ನು ಆಗಾಗ್ಗೆ ಬಳಸುತ್ತಾರೆ. ಆದರೆ ಇದರ ಪವಿತ್ರ ಅರ್ಥ ತಿಳಿದಿರುವವರು ಕೊಂಚ ಮಂದಿ. ಅಷ್ಟೇ ಅಲ್ಲ, ಅದನ್ನು ಬಳಸುವವರಲ್ಲಿ ಅನೇಕರ ಜೀವನಶೈಲಿಯು ದೇವರಿಗೆ ಅಗೌರವ ತರುವಂಥದ್ದಾಗಿರುತ್ತದೆ. (ತೀತ 1:16) ಒಂದು ಬೈಬಲ್ ಶಬ್ದಕೋಶ ವಿವರಿಸುವುದು: “ಹಲ್ಲೆಲೂಯಾ ಎಂಬುದು, ಯೆಹೋವನನ್ನು ಸ್ತುತಿಸುವುದರಲ್ಲಿ ತಮ್ಮನ್ನು ಜೊತೆಗೂಡುವಂತೆ ಆಮಂತ್ರಿಸಲು ಅನೇಕ ಕೀರ್ತನೆಗಾರರು ಬಳಸಿರುವ ಪದವಾಗಿದೆ.” ಹಲವಾರು ಬೈಬಲ್ ವಿದ್ವಾಂಸರು ಹೇಳುವಂತೆ “ಹಲ್ಲೆಲೂಯಾ” ಎಂಬ ಪದದ ಅರ್ಥ, “ಯಾಹುವನ್ನು [ಯೆಹೋವನನ್ನು] ಸ್ತುತಿಸಿರಿ” ಎಂದಾಗಿದೆ.
2 ಕೀರ್ತನೆ 111:1ರಲ್ಲಿ ಕಂಡುಬರುವ “ಹಲ್ಲೆಲೂಯಾ” ಎಂಬ ಪದವನ್ನು ಕನ್ನಡದ ಪವಿತ್ರ ಗ್ರಂಥ (NIBV) ಬೈಬಲ್ನಲ್ಲಿ, “ಯೆಹೋವನನ್ನು ಸ್ತುತಿಸಿರಿ” ಎಂದು ಭಾಷಾಂತರಿಸಲಾಗಿದೆ. ಇದರ ಗ್ರೀಕ್ ಪದರೂಪವನ್ನು, ಸುಳ್ಳು ಧರ್ಮದ ನಾಶನದಿಂದಾಗಿ ಉಂಟಾಗುವ ಸಂತೋಷದ ಕುರಿತು ತಿಳಿಸುವಾಗ ಪ್ರಕಟನೆ 19:1-6ರಲ್ಲಿ ನಾಲ್ಕು ಬಾರಿ ಬಳಸಲಾಗಿದೆ. ಸುಳ್ಳು ಧರ್ಮದ ಅಂತ್ಯವಾಗುವಾಗ ಸತ್ಯಾರಾಧಕರಿಗೆ, “ಹಲ್ಲೆಲೂಯಾ” ಎಂಬ ಪದವನ್ನು ಗೌರವಭರಿತವಾಗಿ ಬಳಸಲು ವಿಶೇಷ ಕಾರಣವಿರುವುದು.
ಆತನ ಮಹಾ ಕೃತ್ಯಗಳು
3. ನಾವು ಕ್ರಮವಾಗಿ ಸೇರಿಬರುವುದರ ಮುಖ್ಯ ಉದ್ದೇಶವೇನು?
3 ಯೆಹೋವನು ನಮ್ಮೆಲ್ಲರ ಸುತ್ತಿಗೆ ಅರ್ಹನೆಂಬದಕ್ಕೆ ಕೀರ್ತನೆ 111ರ ರಚಕನು ಅನೇಕ ಕಾರಣಗಳನ್ನು ಕೊಡುತ್ತಾನೆ. ವಚನ 1 ಹೇಳುವುದು: “ನಾನು ಯೆಹೋವನನ್ನು ಕೊಂಡಾಡುವೆನು; ಯಥಾರ್ಥರ ಕೂಟದಲ್ಲಿಯೂ ನೆರೆದ ಸಭೆಯಲ್ಲಿಯೂ ಮನಃಪೂರ್ವಕವಾಗಿ ಕೀರ್ತಿಸುವೆನು.” ಇಂದು ಯೆಹೋವನ ಸಾಕ್ಷಿಗಳಿಗೂ ಹೀಗೆಯೇ ಅನಿಸುತ್ತದೆ. ನಾವು ಸ್ಥಳಿಕ ಸಭೆಗಳಲ್ಲೂ ದೊಡ್ಡ ಅಧಿವೇಶನಗಳಲ್ಲೂ ಕ್ರಮವಾಗಿ ಸೇರಿಬರುವುದರ ಮುಖ್ಯ ಉದ್ದೇಶ ಯೆಹೋವನನ್ನು ಸ್ತುತಿಸುವುದೇ ಆಗಿದೆ.
4. ನಾವು ಯಾವುದರ ಬಗ್ಗೆ ಧ್ಯಾನಿಸಬಲ್ಲೆವು?
4 “ಯೆಹೋವನ ಕೃತ್ಯಗಳು ಮಹತ್ತಾದವುಗಳು; ಅವುಗಳಲ್ಲಿ ಸಂತೋಷಿಸುವವರು ಅವುಗಳನ್ನೇ ಧ್ಯಾನಿಸುವರು.” (ಕೀರ್ತ. 111:2) ಒಂದು ಪರಾಮರ್ಶನಾ ಗ್ರಂಥ ಹೇಳುವುದೇನೆಂದರೆ, ದೇವರ ಕೃತ್ಯಗಳ ಕುರಿತು ‘ಶ್ರದ್ಧೆ ಹಾಗೂ ಭಕ್ತಿಯಿಂದ ಧ್ಯಾನಿಸಬೇಕು ಮತ್ತು ಅಧ್ಯಯನಮಾಡಬೇಕು.’ ದೇವರ ಸೃಷ್ಟಿಕಾರ್ಯಗಳಲ್ಲಿ ಎಲ್ಲಕ್ಕೂ ಅದ್ಭುತವಾದ ಉದ್ದೇಶವಿದೆ. ಆತನು ಸೂರ್ಯ, ಭೂಮಿ ಮತ್ತು ಚಂದ್ರನನ್ನು ಸರಿಯಾದ ಸ್ಥಾನದಲ್ಲಿ ಮತ್ತು ಅಂತರದಲ್ಲಿ ಇರಿಸಿದ್ದಾನೆ. ಇದರಿಂದಾಗಿ ನಮ್ಮ ಭೂಮಿಗೆ ಬೆಳಕು, ಶಾಖ ಸಿಗುತ್ತದೆ; ಹಗಲುರಾತ್ರಿ, ಋತುಗಳು ಹಾಗೂ ಉಬ್ಬರವಿಳಿತಗಳು ಉಂಟಾಗುತ್ತವೆ.
5. ವಿಶ್ವದ ಕುರಿತು ಮಾನವನು ಹೆಚ್ಚೆಚ್ಚು ತಿಳಿದುಕೊಂಡಂತೆ ಏನು ಪ್ರಕಟವಾಗಿದೆ?
5 ನಮ್ಮ ಸೌರಮಂಡಲದಲ್ಲಿ ಭೂಮಿಯ ಸ್ಥಾನ ಹಾಗೂ ನಮ್ಮ ಚಂದ್ರನ ನಿಖರ ಕಕ್ಷೆ, ಗಾತ್ರ ಹಾಗೂ ದ್ರವ್ಯರಾಶಿಯ ಕುರಿತಾಗಿ ಹಲವಾರು ವಿಷಯಗಳನ್ನು ವಿಜ್ಞಾನಿಗಳು ತಿಳಿದುಕೊಂಡಿದ್ದಾರೆ. ಈ ಆಕಾಶಕಾಯಗಳು ಏರ್ಪಡಿಸಲ್ಪಟ್ಟಿರುವ ರೀತಿ ಹಾಗೂ ಅವುಗಳ ನಡುವಿನ ಸಂಬಂಧದಿಂದಾಗಿ ಋತುಗಳು ಕ್ರಮಬದ್ಧವಾಗಿ ಬದಲಾಗುತ್ತವೆ. ಈ ವಿಶ್ವದಲ್ಲಿರುವ ನೈಸರ್ಗಿಕ ಶಕ್ತಿಗಳ ಸೂಕ್ಷ್ಮ ವಿನ್ಯಾಸದ ಬಗ್ಗೆಯೂ ಬಹಳಷ್ಟನ್ನು ಕಲಿಯಲಾಗಿದೆ. ಹೀಗಿರುವುದರಿಂದಲೇ, ‘ಅತ್ಯುತ್ತಮ ವಿನ್ಯಾಸದ ವಿಶ್ವ’ (ಇಂಗ್ಲಿಷ್) ಎಂಬ ಶೀರ್ಷಿಕೆಯ ಒಂದು ಲೇಖನದಲ್ಲಿ, ಮೆಕ್ಯಾನಿಕಲ್ ಇಂಜಿನೀಯರಿಂಗ್ನ ಪ್ರೊಫೆಸರರೊಬ್ಬರು ಹೇಳಿದ್ದು: “ಕಳೆದ 30 ವರ್ಷಗಳಲ್ಲಿ ಅನೇಕ ವಿಜ್ಞಾನಿಗಳು ತಮ್ಮ ಅಭಿಪ್ರಾಯಗಳನ್ನು ಏಕೆ ಬದಲಾಯಿಸಿದ್ದಾರೆ ಎಂದು ತಿಳಿದುಕೊಳ್ಳುವುದು ಅಷ್ಟೇನೂ ಕಷ್ಟಕರವಲ್ಲ, ಏಕೆಂದರೆ ಭೂಗ್ರಹವು ಆಕಸ್ಮಿಕವಾಗಿ ಬಂದಿದೆ ಎಂಬ ವಿಚಾರವನ್ನು ನಂಬುವುದು ತುಂಬ ಕಷ್ಟಕರವೆಂದು ಅವರು ಒಪ್ಪಿಕೊಂಡಿದ್ದಾರೆ. ಸೂಕ್ಷ್ಮವಾಗಿ ರಚಿಸಲ್ಪಟ್ಟ ನಮ್ಮ ಈ ಭೂಮಿಯ ಬಗ್ಗೆ ಹೆಚ್ಚೆಚ್ಚು ತಿಳಿಯುತ್ತಾ ಹೋದಂತೆ ಬುದ್ಧಿವಂತ ವಿನ್ಯಾಸಕನೊಬ್ಬನು ಅದನ್ನು ರಚಿಸಿದ್ದನು ಎಂಬುದನ್ನು ನಂಬಲು ನಮಗೆ ಹೆಚ್ಚೆಚ್ಚು ಕಾರಣಗಳು ಸಿಗುತ್ತವೆ.”
6. ದೇವರು ಮನುಷ್ಯರನ್ನು ಸೃಷ್ಟಿಮಾಡಿದ ವಿಧದ ಕುರಿತಾಗಿ ನಿಮಗೆ ಹೇಗನಿಸುತ್ತದೆ?
6 ಮಾನವರಾದ ನಮ್ಮ ರಚನೆಯಲ್ಲೂ ಯೆಹೋವನ ಮಹಾ ಸೃಷ್ಟಿ ಕೆಲಸ ತೋರಿಬರುತ್ತದೆ. (ಕೀರ್ತ. 139:14) ಮನುಷ್ಯರನ್ನು ಸೃಷ್ಟಿಸುವಾಗ ಆತನು ಅವರಿಗೆ ಮನಸ್ಸು, ಅವಶ್ಯವಾದ ಅಂಗಗಳುಳ್ಳ ದೇಹ ಮತ್ತು ಕೆಲಸಮಾಡುವ ಶಕ್ತಿಸಾಮರ್ಥ್ಯವನ್ನು ಕೊಟ್ಟನು. ಮಾತು ಮತ್ತು ಶ್ರವಣವೆಂಬ ದೇವದತ್ತ ಸಾಮರ್ಥ್ಯಗಳು ಹಾಗೂ ಓದುಬರಹದ ಕೌಶಲಗಳೂ ಅದ್ಭುತವಾದದ್ದಾಗಿವೆ. ಅನೇಕರಿಗೆ ಆ ಸಾಮರ್ಥ್ಯಗಳಿವೆ. ಅಲ್ಲದೆ, ನಿಮ್ಮ ಬಳಿ ನಿರ್ಮಾಣಕಾರ್ಯದ ಒಂದು ಮೇರುಕೃತಿಯೂ ಇದೆ. ಅದೇನು? ನೆಟ್ಟಗೆ ನಿಲ್ಲಬಲ್ಲ ಮಾನವಾಕೃತಿಯೇ. ನಿಮ್ಮ ದೇಹದ ವಿನ್ಯಾಸ, ಸಮತೋಲನ, ಅದು ನಿರ್ವಹಿಸುವ ಕೆಲಸಗಳು, ಅದರ ರಾಸಾಯನಿಕ ಪ್ರಕ್ರಿಯೆಗಳು ವಿಸ್ಮಯಕಾರಿಯಾಗಿವೆ. ಅಲ್ಲದೆ, ನಿಮ್ಮ ಮನಸ್ಸು ಹಾಗೂ ಇಂದ್ರಿಯಗಳು ಕೆಲಸಮಾಡುವಂತೆ ಶಕ್ತಗೊಳಿಸುವ ನರಜೋಡಣೆಗಳ ಮುಂದೆ ವಿಜ್ಞಾನಿಗಳ ಸಾಧನೆಗಳು ಏನೂ ಅಲ್ಲ. ವಾಸ್ತವದಲ್ಲಿ, ಮಾನವನ ಎಲ್ಲ ಸಾಧನೆಗಳು ಸಾಧ್ಯವಾಗುವುದು ಆತನಿಗೆ ಕೊಡಲಾಗಿರುವ ಮನಸ್ಸು ಹಾಗೂ ಇಂದ್ರಿಯಗಳಿಂದಲೇ. ಉನ್ನತ ತರಬೇತಿ ಹಾಗೂ ಸಾಮರ್ಥ್ಯವುಳ್ಳ ಯಾವುದೇ ಇಂಜಿನೀಯರನೂ, ಅದ್ಭುತ ವಿನ್ಯಾಸದ ಹತ್ತು ಸನ್ನೆಗೋಲು (ಲೀವರ್)ಗಳಂತಿರುವ ನಿಮ್ಮ ಬೆರಳುಗಳು ಹಾಗೂ ಹೆಬ್ಬರಳುಗಳಷ್ಟು ಸುಂದರ ಹಾಗೂ ಉಪಯುಕ್ತವಾದ ಯಾವುದನ್ನೂ ಉತ್ಪಾದಿಸಲು ಶಕ್ತನಾಗಿಲ್ಲ. ನಿಮ್ಮನ್ನೇ ಹೀಗೆ ಕೇಳಿಕೊಳ್ಳಿ: ‘ದೇವರು ಕೊಟ್ಟಿರುವ ಬೆರಳುಗಳ ಕುಶಲ ಉಪಯೋಗ ಮಾಡದೇ ಇದ್ದಲ್ಲಿ ಜಗತ್ತಿನ ಸುಂದರ ಕಲಾಕೃತಿಗಳು ಹಾಗೂ ನಿರ್ಮಾಣಕಾರ್ಯಗಳು ಸಾಧ್ಯವಾಗುತ್ತಿದ್ದವೋ?’
ದೇವರ ಮಹಾ ಕೃತ್ಯಗಳು ಮತ್ತು ಗುಣಗಳು
7. ಬೈಬಲನ್ನು ದೇವರ ಮಹಾ ಕೃತ್ಯಗಳಲ್ಲಿ ಒಂದೆಂದು ಏಕೆ ಪರಿಗಣಿಸಬೇಕು?
7 ಯೆಹೋವನ ಮಹಾ ಕೃತ್ಯಗಳಲ್ಲಿ, ಬೈಬಲ್ನಲ್ಲಿ ವರ್ಣಿಸಲಾದಂತೆ ಆತನು ಮಾನವಕುಲಕ್ಕಾಗಿ ಮಾಡಿರುವ ಇತರ ಅದ್ಭುತ ಕೆಲಸಗಳು ಸೇರಿವೆ. ಆ ಪುಸ್ತಕ ತಾನೇ ಒಂದು ಮೇರುಕೃತಿಯಾಗಿದೆ ಮತ್ತು ಅದರಲ್ಲಿರುವ ಭಾಗಗಳು ಒಂದಕ್ಕೊಂದು ಹೊಂದಿಕೆಯಲ್ಲಿವೆ. ಬೇರಾವುದೇ ಪುಸ್ತಕ ಅದರಂತಿಲ್ಲ, ಏಕೆಂದರೆ ಅದು ‘ದೈವಪ್ರೇರಿತವಾಗಿದೆ ಮತ್ತು ಉಪದೇಶಕ್ಕೆ ಉಪಯುಕ್ತವಾಗಿದೆ.’ (2 ತಿಮೊ. 3:16) ಇದಕ್ಕೆ ಉದಾಹರಣೆಗಳನ್ನು ನೋಡೋಣ. ಬೈಬಲಿನ ಪ್ರಥಮ ಪುಸ್ತಕವಾದ ಆದಿಕಾಂಡದಲ್ಲಿ, ಭೂಮಿಯಲ್ಲಿದ್ದ ದುಷ್ಟತನವನ್ನು ದೇವರು ನೋಹನ ದಿನಗಳಲ್ಲಿ ಹೇಗೆ ತೆಗೆದುಹಾಕಿದನೆಂಬುದನ್ನು ವಿವರಿಸಲಾಗಿದೆ. ಎರಡನೇ ಪುಸ್ತಕವಾದ ವಿಮೋಚನಕಾಂಡವು, ಯೆಹೋವನು ಇಸ್ರಾಯೇಲ್ಯರನ್ನು ಐಗುಪ್ತದ ದಾಸತ್ವದಿಂದ ಬಿಡಿಸುವ ಮೂಲಕ, ತಾನೇ ಸತ್ಯ ದೇವರೆಂದು ರುಜುಪಡಿಸಿದ್ದನ್ನು ತೋರಿಸುತ್ತದೆ. ಬಹುಶಃ ಈ ಎಲ್ಲ ವಿಷಯಗಳನ್ನು ಮನಸ್ಸಿನಲ್ಲಿಟ್ಟುಕೊಂಡೇ ಕೀರ್ತನೆಗಾರನು ಹೀಗೆ ಹೇಳಲು ಪ್ರಚೋದಿತನಾದನು: “ಆತನ [ಯೆಹೋವನ] ಕಾರ್ಯವು ಘನಮಾನಗಳುಳ್ಳದ್ದು; ಆತನ ನೀತಿಯು ಸದಾಕಾಲವೂ ಇರುವದು. ಆತನು ತನ್ನ ಅದ್ಭುತಕೃತ್ಯಗಳ ಜ್ಞಾಪಕವನ್ನು ಉಳಿಯಮಾಡಿದ್ದಾನೆ. ಯೆಹೋವನು ದಯೆಯೂ ಕನಿಕರವೂ ಉಳ್ಳವನು.” (ಕೀರ್ತ. 111:3, 4) ಯೆಹೋವನು ಇತಿಹಾಸದಾದ್ಯಂತ ಮತ್ತು ನಿಮ್ಮ ಜೀವಮಾನಕಾಲದಲ್ಲೂ ಮಾಡಿರುವ ವಿಷಯಗಳು ಆತನ ‘ಘನಮಾನಗಳ’ ಜ್ಞಾಪಕದಂತೆ ಇಲ್ಲವೇ ಸ್ಮಾರಕದಂತೆ ಇವೆಯೆಂದು ನೀವು ಒಪ್ಪುತ್ತೀರಲ್ಲವೇ?
8, 9. (ಎ) ದೇವರ ಮತ್ತು ಮಾನವರ ಕೆಲಸಗಳಲ್ಲಿರುವ ವ್ಯತ್ಯಾಸಗಳೇನು? (ಬಿ) ದೇವರಲ್ಲಿ ನೀವು ಇಷ್ಟಪಡುವಂಥ ಕೆಲವೊಂದು ಗುಣಗಳಾವುವು?
8 ಕೀರ್ತನೆಗಾರನು ಯೆಹೋವನಲ್ಲಿರುವ ನೀತಿ, ದಯೆ, ಕನಿಕರ ಎಂಬ ಸುಂದರ ಗುಣಗಳ ಕುರಿತೂ ಒತ್ತಿಹೇಳುತ್ತಾನೆಂಬುದನ್ನು ಗಮನಿಸಿರಿ. ಪಾಪಪೂರ್ಣ ಮಾನವರ ಕೆಲಸಗಳಲ್ಲಿ ನೀತಿ ಕಾಣಸಿಗುವುದು ತುಂಬ ಅಪರೂಪವೆಂಬುದು ನಿಮಗೆ ತಿಳಿದೇ ಇದೆ. ಅವರು ಹೆಚ್ಚಾಗಿ ಲೋಭ, ಈರ್ಷ್ಯೆ, ಅಹಂಭಾವಗಳಿಂದ ಕೆಲಸಗಳನ್ನು ಮಾಡುತ್ತಾರೆ. ಇದು, ಮನುಷ್ಯರು ಚಿತಾಯಿಸುವ ಯುದ್ಧಗಳಿಗಾಗಿ ಮತ್ತು ಅವರ ಆರ್ಥಿಕ ಲಾಭಕ್ಕಾಗಿ ವಿಧ್ವಂಸಕ ಶಸ್ತ್ರಗಳನ್ನು ಉತ್ಪಾದಿಸುವ ಸಂಗತಿಯಿಂದ ತೋರಿಬರುತ್ತದೆ. ಈ ಯುದ್ಧಗಳು, ಲಕ್ಷಾಂತರ ಅಮಾಯಕರ ಬಾಳಿನಲ್ಲಿ ಅಪಾರ ನೋವನ್ನೂ ಭೀತಿಯನ್ನೂ ಹುಟ್ಟಿಸುತ್ತವೆ. ಅಷ್ಟುಮಾತ್ರವಲ್ಲದೆ, ಮಾನವನ ಎಷ್ಟೋ ಸಾಧನೆಗಳ ಹಿಂದೆ ರಕ್ತ-ಬೆವರು ಒಂದುಮಾಡಿ ದುಡಿದ ಬಡ ಶೋಷಿತ ಜನರ ಶ್ರಮವಿದೆ. ಇದಕ್ಕೊಂದು ಉದಾಹರಣೆ, ಪಿರಮಿಡ್ಡುಗಳನ್ನು ಕಟ್ಟಲು ಬಳಸಲಾದ ಗುಲಾಮರದ್ದಾಗಿದೆ. ಈ ಪಿರಮಿಡ್ಡುಗಳಲ್ಲಿ ಐಗುಪ್ತದ ಗರ್ವಿಷ್ಠ ಫರೋಹರನ್ನು ಸಮಾಧಿ ಮಾಡಲಾಗುತ್ತಿತ್ತು. ಸದ್ಯ, ಮಾನವಕುಲದ ಹೆಚ್ಚಿನ ಕೆಲಸಗಳು ದಬ್ಬಾಳಿಕೆಯಿಂದ ಕೂಡಿರುತ್ತವೆ ಮಾತ್ರವಲ್ಲ, ಅವು ‘ಲೋಕವನ್ನು ನಾಶ’ಮಾಡುವಂಥವುಗಳೂ ಆಗಿರುತ್ತವೆ.—ಪ್ರಕಟನೆ 11:18 ಓದಿ.
9 ಯೆಹೋವನ ಕೆಲಸಗಳಾದರೋ ತೀರ ಭಿನ್ನವಾಗಿವೆ ಏಕೆಂದರೆ ಅವು ಯಾವಾಗಲೂ ನೀತಿಯ ಮೇಲೆ ಆಧರಿತವಾಗಿರುತ್ತವೆ. ಅವನ ಕೃತ್ಯಗಳಲ್ಲಿ, ಪಾಪಪೂರ್ಣ ಮಾನವಕುಲದ ರಕ್ಷಣೆಗಾಗಿ ಆತನು ಮಾಡಿರುವ ಕನಿಕರದ ಏರ್ಪಾಡು ಒಂದಾಗಿದೆ. ಈ ವಿಮೋಚನಾ ಮೌಲ್ಯವನ್ನು ಒದಗಿಸುವ ಮೂಲಕ ದೇವರು ‘ತನ್ನ ನೀತಿಯನ್ನು ತೋರಿಸಿದನು.’ (ರೋಮಾ. 3:25, 26) ಹೌದು, “ಆತನ ನೀತಿಯು ಸದಾಕಾಲವೂ ಇರುವದು.” ದಯೆಯು, ದೇವರು ಪಾಪಿಗಳಾದ ಮಾನವರೊಂದಿಗೆ ನಡೆದುಕೊಂಡಿರುವ ತಾಳ್ಮೆಭರಿತ ವಿಧದಲ್ಲಿ ತೋರಿಬರುತ್ತದೆ. ಅವರು ತಮ್ಮ ಕೆಟ್ಟ ಮಾರ್ಗಗಳನ್ನು ಬಿಟ್ಟು ಸರಿಯಾದದ್ದನ್ನು ಮಾಡುವಂತೆ ವಿನಂತಿಸುವ ಮೂಲಕ ಅವರನ್ನು ದಯೆಯಿಂದ ಉಪಚರಿಸಿದನು.—ಯೆಹೆಜ್ಕೇಲ 18:25 ಓದಿ.
ವಾಗ್ದಾನಗಳ ವಿಷಯದಲ್ಲಿ ನಂಬಿಗಸ್ತನು
10. ಯೆಹೋವನು ಅಬ್ರಹಾಮನೊಂದಿಗೆ ಮಾಡಿದ ಒಡಂಬಡಿಕೆಯ ವಿಷಯದಲ್ಲಿ ಹೇಗೆ ನಂಬಿಗಸ್ತನಾಗಿದ್ದನು?
10 “ತನ್ನಲ್ಲಿ ಭಯಭಕ್ತಿಯುಳ್ಳವರಿಗೆ ಆಹಾರವನ್ನು ಕೊಟ್ಟಿದ್ದಾನೆ; ತನ್ನ ಒಡಂಬಡಿಕೆಯನ್ನು ಯಾವಾಗಲೂ ನೆನಪಿನಲ್ಲಿಡುವನು.” (ಕೀರ್ತ. 111:5) ಇಲ್ಲಿ ಕೀರ್ತನೆಗಾರನು, ಯೆಹೋವನು ಅಬ್ರಹಾಮನೊಂದಿಗೆ ಮಾಡಿದ ಒಡಂಬಡಿಕೆಗೆ ಸೂಚಿಸುತ್ತಿದ್ದಾನೆ. ಆತನು ಅಬ್ರಹಾಮನ ಸಂತಾನವನ್ನು ಆಶೀರ್ವದಿಸುವ ಮಾತುಕೊಟ್ಟಿದ್ದನು ಮತ್ತು ಅವರು ತಮ್ಮ ಶತ್ರುಗಳ ಪಟ್ಟಣಗಳನ್ನು ಸ್ವಾಧೀನಮಾಡಿಕೊಳ್ಳುವರೆಂದು ಹೇಳಿದ್ದನು. (ಆದಿ. 22:17, 18; ಕೀರ್ತ. 105:8, 9) ಆ ವಾಗ್ದಾನಗಳ ಆರಂಭದ ನೆರವೇರಿಕೆಯಲ್ಲಿ ಅಬ್ರಹಾಮನ ಸಂತಾನವು, ಇಸ್ರಾಯೇಲ್ ಜನಾಂಗವಾಗಿತ್ತು. ಆ ಜನಾಂಗದವರು ಬಹುಕಾಲ ಐಗುಪ್ತದಲ್ಲಿ ದಾಸತ್ವದಲ್ಲಿದ್ದರೂ, ದೇವರು ತಾನು ‘ಅಬ್ರಹಾಮನೊಂದಿಗೆ ಮಾಡಿದ ವಾಗ್ದಾನವನ್ನು ನೆನಪಿಗೆ ತಂದುಕೊಂಡು’ ಅವರನ್ನು ಬಿಡಿಸಿದನು. (ವಿಮೋ. 2:24) ಯೆಹೋವನು ತದನಂತರ ಅವರೊಂದಿಗೆ ವ್ಯವಹರಿಸಿದ ರೀತಿ ಆತನೆಷ್ಟು ಉದಾರಿಯೆಂಬುದನ್ನು ತೋರಿಸಿತು. ಅವರಿಗೆ ಶಾರೀರಿಕ ಆಹಾರವನ್ನು ಮಾತ್ರವಲ್ಲ, ಅವರ ಹೃದಮನಗಳಿಗೆ ಆಧ್ಯಾತ್ಮಿಕ ಆಹಾರವನ್ನೂ ಒದಗಿಸಿದನು. (ಧರ್ಮೋ. 6:1-3; 8:4; ನೆಹೆ. 9:21) ಮುಂದಿನ ಶತಮಾನಗಳಲ್ಲಿ, ಆ ಜನಾಂಗವು ಅನೇಕಸಲ ದೇವರಿಗೆ ಬೆನ್ನುಹಾಕಿತು. ಆದರೂ ಅವರು ಹಿಂದಿರುಗಿ ಬರುವಂತೆ ಪ್ರಚೋದಿಸಲು ಆತನು ಪ್ರವಾದಿಗಳನ್ನು ಕಳುಹಿಸಿಕೊಟ್ಟನು. ದೇವರು ಇಸ್ರಾಯೇಲ್ಯರನ್ನು ಐಗುಪ್ತದಿಂದ ಬಿಡಿಸಿತಂದ 1,500ಕ್ಕೂ ಹೆಚ್ಚು ವರ್ಷಗಳ ಬಳಿಕ, ತನ್ನ ಏಕಜಾತ ಪುತ್ರನನ್ನು ಭೂಮಿಗೆ ಕಳುಹಿಸಿದನು. ಯೆಹೂದ್ಯರಲ್ಲಿ ಅಧಿಕಾಂಶ ಮಂದಿ ಯೇಸುವನ್ನು ತಿರಸ್ಕರಿಸಿ, ಅವನನ್ನು ಮರಣದಂಡನೆಗೆ ಒಪ್ಪಿಸಿದರು. ಆಗ ಯೆಹೋವನು ಒಂದು ಹೊಸ ಜನಾಂಗವನ್ನು ಅಂದರೆ, ‘ದೇವರ ಇಸ್ರಾಯೇಲ್’ ಎಂಬ ಆಧ್ಯಾತ್ಮಿಕ ಜನಾಂಗವನ್ನು ರಚಿಸಿದನು. ಈ ಜನಾಂಗ ಮತ್ತು ಕ್ರಿಸ್ತನು ಸೇರಿ ಅಬ್ರಹಾಮನ ಸಂತಾನವಾಗಿದ್ದಾರೆ. ಇದೇ ಸಂತಾನವನ್ನು ಬಳಸಿ ಮಾನವಕುಲವನ್ನು ಆಶೀರ್ವದಿಸುವೆನೆಂದು ಯೆಹೋವನು ಮುಂತಿಳಿಸಿದ್ದನು.—ಗಲಾ. 3:16, 29; 6:16.
11. ಯೆಹೋವನಿಗೆ ಅಬ್ರಹಾಮನೊಂದಿಗೆ ಮಾಡಿದ ‘ಒಡಂಬಡಿಕೆ’ ಈಗಲೂ ‘ನೆನಪಿದೆ’ ಹೇಗೆ?
11 ಯೆಹೋವನಿಗೆ “ತನ್ನ ಒಡಂಬಡಿಕೆ” ಮತ್ತು ಅದರ ಮೂಲಕ ವಾಗ್ದಾನಿಸಲಾದ ಆಶೀರ್ವಾದಗಳು ಈಗಲೂ ‘ನೆನಪಿವೆ.’ ಇಂದು ಆತನು 400ಕ್ಕೂ ಹೆಚ್ಚು ಭಾಷೆಗಳಲ್ಲಿ ಆಧ್ಯಾತ್ಮಿಕ ಆಹಾರವನ್ನು ಹೇರಳವಾಗಿ ದಯಪಾಲಿಸುತ್ತಿದ್ದಾನೆ. ಅಲ್ಲದೆ, “ನಮ್ಮ ಅನುದಿನದ ಆಹಾರವನ್ನು ಪ್ರತಿದಿನವೂ ದಯಪಾಲಿಸು” ಎಂಬ ಮಾತುಗಳಿಗೆ ಹೊಂದಿಕೆಯಲ್ಲಿ ನಮ್ಮ ಶಾರೀರಿಕ ಅಗತ್ಯಗಳ ವಿಷಯದಲ್ಲಿ ನಾವು ಮಾಡುವ ಪ್ರಾರ್ಥನೆಗಳಿಗೂ ಆತನು ಉತ್ತರಿಸುತ್ತಿದ್ದಾನೆ.—ಲೂಕ 11:3; ಕೀರ್ತ. 72:16, 17; ಯೆಶಾ. 25:6-8.
ಯೆಹೋವನ ವಿಸ್ಮಯಕಾರಿ ಶಕ್ತಿ
12. ಪುರಾತನ ಇಸ್ರಾಯೇಲಿಗೆ “ಅನ್ಯಜನಗಳ ಸ್ವಾಸ್ಥ್ಯ” ಕೊಡಲಾದದ್ದು ಹೇಗೆ?
12 “ಆತನು ಅನ್ಯಜನಗಳ ಸ್ವಾಸ್ತ್ಯವನ್ನು ತನ್ನ ಪ್ರಜೆಗೆ ಕೊಡುವದರ ಮೂಲಕ ಸ್ವಪ್ರತಾಪವನ್ನು ತೋರ್ಪಡಿಸಿದ್ದಾನೆ.” (ಕೀರ್ತ. 111:6) ಹೀಗನ್ನುವಾಗ ಕೀರ್ತನೆಗಾರನಿಗೆ, ಇಸ್ರಾಯೇಲಿನ ಇತಿಹಾಸದಲ್ಲಿ ನಡೆದಿದ್ದ ಗಮನಾರ್ಹ ಘಟನೆಯೊಂದು ಮನಸ್ಸಿನಲ್ಲಿದ್ದಿರಬಹುದು. ಅದೇನೆಂದರೆ, ಐಗುಪ್ತದಿಂದ ಇಸ್ರಾಯೇಲ್ಯರ ಅದ್ಭುತ ಬಿಡುಗಡೆ. ತದನಂತರ ಯೆಹೋವನು ಇಸ್ರಾಯೇಲ್ಯರಿಗೆ ವಾಗ್ದತ್ತ ದೇಶದೊಳಗೆ ಕಾಲಿರಿಸುವಂತೆ ಬಿಟ್ಟಾಗ, ಅವರು ಯೊರ್ದನ್ ನದಿಯ ಪೂರ್ವಕ್ಕೂ ಪಶ್ಚಿಮಕ್ಕೂ ಇದ್ದ ರಾಜ್ಯಗಳನ್ನು ಜಯಿಸಲು ಶಕ್ತರಾಗಿದ್ದರು. (ನೆಹೆಮೀಯ 9:22-25 ಓದಿ.) ಹೌದು, ಯೆಹೋವನು ಇಸ್ರಾಯೇಲಿಗೆ “ಅನ್ಯಜನಗಳ ಸ್ವಾಸ್ತ್ಯವನ್ನು” ಕೊಟ್ಟನು. ದೇವರ ಪ್ರತಾಪ ಇಲ್ಲವೇ ಶಕ್ತಿಯ ಎಂಥ ಪ್ರದರ್ಶನ!
13, 14. (ಎ) ದೇವರು ಬಾಬೆಲಿನ ಸಂಬಂಧದಲ್ಲಿ ತನ್ನ ಶಕ್ತಿಯನ್ನು ತೋರ್ಪಡಿಸಿದ ಯಾವ ಸಂದರ್ಭ ಕೀರ್ತನೆಗಾರನ ಮನಸ್ಸಿನಲ್ಲಿದ್ದಿರಬಹುದು? (ಬಿ) ಯೆಹೋವನು ಸಾಧಿಸಿರುವ ಬಿಡುಗಡೆಯ ಮಹಾ ಕೃತ್ಯಗಳಲ್ಲಿ ಇನ್ನೂ ಕೆಲವೊಂದನ್ನು ತಿಳಿಸಿ.
13 ಯೆಹೋವನು ಇಸ್ರಾಯೇಲ್ ಜನಾಂಗಕ್ಕಾಗಿ ಬಹಳಷ್ಟನ್ನು ಮಾಡಿದರೂ ಆ ಜನಾಂಗದವರು ಆತನಿಗಾಗಲಿ, ಅವರ ಪೂರ್ವಜರಾದ ಅಬ್ರಹಾಮ, ಇಸಾಕ, ಯಾಕೋಬರಿಗಾಗಲಿ ಗೌರವತೋರಿಸಲಿಲ್ಲ ಎಂಬುದು ನಮಗೆ ಚೆನ್ನಾಗಿ ತಿಳಿದಿದೆ. ಅವರು ದೇವರ ವಿರುದ್ಧ ದಂಗೆಯೇಳುತ್ತಾ ಇದ್ದರು. ಕೊನೆಗೆ ದೇವರು ಬಾಬೆಲನ್ನು ಬಳಸಿ, ಅವರನ್ನು ದೇಶದಿಂದ ಹೊರಹಾಕಿದನು ಮತ್ತು ಬಂದಿವಾಸಿಗಳಾಗಿ ಕೊಂಡೊಯ್ಯುವಂತೆ ಮಾಡಿದನು. (2 ಪೂರ್ವ. 36:15-17; ನೆಹೆ. 9:28-30) 111ನೇ ಕೀರ್ತನೆಯ ರಚಕನು ಇಸ್ರಾಯೇಲ್ಯರು ಬಾಬೆಲಿನ ಬಂಧಿವಾಸದಿಂದ ಹಿಂದಿರುಗಿದ ಬಳಿಕ ಜೀವಿಸಿದ್ದನೆಂದು ಕೆಲವು ವಿದ್ವಾಂಸರು ಹೇಳುತ್ತಾರೆ. ಇದು ಹೌದಾಗಿರುವಲ್ಲಿ ಯೆಹೋವನ ನಿಷ್ಠೆ ಮತ್ತು ಶಕ್ತಿಗಾಗಿ ಆತನನ್ನು ಸ್ತುತಿಸಲು ಕೀರ್ತನೆಗಾರನಿಗೆ ಹೆಚ್ಚಿನ ಕಾರಣಗಳಿದ್ದವು. ಏಕೆಂದರೆ, ಸೆರೆಹಿಡಿದವರನ್ನು ಎಂದೂ ಬಿಡುಗಡೆಮಾಡದಿದ್ದ ಬಾಬೆಲ್ ರಾಜ್ಯದಿಂದಲೇ ಯೆಹೂದ್ಯರನ್ನು ಬಿಡಿಸುವ ಮೂಲಕ ಯೆಹೋವನು ತನ್ನ ನಿಷ್ಠೆ ಹಾಗೂ ಶಕ್ತಿಯನ್ನು ತೋರಿಸಿದ್ದನು.—ಯೆಶಾ. 14:4, 17.
14 ಸುಮಾರು ಐದು ಶತಮಾನಗಳ ಬಳಿಕ, ಪಶ್ಚಾತ್ತಾಪಿ ಮಾನವರನ್ನು ಪಾಪಮರಣದ ದಾಸತ್ವದಿಂದ ಬಿಡಿಸಲಿಕ್ಕಾಗಿ ಯೆಹೋವನು ತನ್ನ ಶಕ್ತಿಯನ್ನು ಇನ್ನಷ್ಟು ಮಹತ್ತಾದ ರೀತಿಯಲ್ಲಿ ಬಳಸಿದನು. (ರೋಮಾ. 5:12) ಇದರಿಂದಾಗಿ ಸಾಧ್ಯವಾಗಿರುವ ಒಂದು ವಿಷಯವೇನೆಂದರೆ 1,44,000 ಮಂದಿ ಮಾನವರಿಗೆ, ಕ್ರಿಸ್ತನ ಆತ್ಮಾಭಿಷಿಕ್ತ ಹಿಂಬಾಲಕರಾಗಲು ಮಾರ್ಗವು ತೆರೆದುಕೊಂಡಿತು. 1919ರಲ್ಲಿ ಯೆಹೋವನು ತನ್ನ ಶಕ್ತಿಯನ್ನು ಬಳಸಿ, ಅಭಿಷಿಕ್ತ ಉಳಿಕೆಯವರ ಒಂದು ಚಿಕ್ಕ ಗುಂಪನ್ನು ಸುಳ್ಳು ಧರ್ಮದ ಸೆರೆಯಿಂದ ಬಿಡಿಸಿದನು. ಈ ಅಂತ್ಯಕಾಲದಲ್ಲಿ ಉಳಿಕೆಯವರು ಏನೇನು ಸಾಧಿಸಿದ್ದಾರೋ ಅದೆಲ್ಲದಕ್ಕೂ ಕಾರಣ ದೇವರ ಶಕ್ತಿಯೇ. ಅವರು ಮರಣದ ತನಕ ನಂಬಿಗಸ್ತರಾಗಿರುವಲ್ಲಿ, ಭೂಮಿಯಲ್ಲಿರುವ ಪಶ್ಚಾತ್ತಾಪಿ ಮಾನವರ ಪ್ರಯೋಜನಾರ್ಥ ಸ್ವರ್ಗದಿಂದ ಯೇಸು ಕ್ರಿಸ್ತನೊಂದಿಗೆ ಆಳುವರು. (ಪ್ರಕ. 2:26, 27; 5:9, 10) ಹೀಗೆ ಅವರು, ಪುರಾತನ ಇಸ್ರಾಯೇಲ್ ಜನಾಂಗಕ್ಕಿಂತ ಹೆಚ್ಚು ವಿಸ್ತೃತವಾದ ರೀತಿಯಲ್ಲಿ ಭೂಮಿಗೆ ಬಾಧ್ಯರಾಗುವರು.—ಮತ್ತಾ. 5:5.
ಶಾಶ್ವತ, ಸ್ಥಿರ ಮೂಲತತ್ತ್ವಗಳು
15, 16. (ಎ) ದೇವರ ಕೈಕೆಲಸಗಳಲ್ಲಿ ಏನೆಲ್ಲ ಸೇರಿದೆ? (ಬಿ) ಪುರಾತನ ಇಸ್ರಾಯೇಲಿಗೆ ದೇವರು ಯಾವ ಅಪ್ಪಣೆಗಳನ್ನು ಕೊಟ್ಟನು?
15 “ಆತನ ಕೈಕೆಲಸಗಳು ನೀತಿಸತ್ಯತೆಗಳನ್ನು ಪ್ರಕಟಿಸುತ್ತವೆ; ಆತನ ನಿಯಮಗಳೆಲ್ಲಾ ಸ್ಥಿರವಾಗಿವೆ. ಅವು ದೃಢವಾದ ಆಧಾರವುಳ್ಳವು; ಯುಗಯುಗಾಂತರಕ್ಕೂ ಇರುವವು. ಸತ್ಯನೀತಿಗಳಿಗನುಸಾರವಾಗಿ ವಿಧಿಸಲ್ಪಟ್ಟಿವೆ.” (ಕೀರ್ತ. 111:7, 8) ಯೆಹೋವನ ‘ಕೈಕೆಲಸಗಳಲ್ಲಿ,’ ಇಸ್ರಾಯೇಲ್ಯರಿಗೆ ಕೊಡಲಾದ ಹತ್ತು ಪ್ರಮುಖ ನಿಯಮಗಳನ್ನು ಕೆತ್ತಲಾಗಿದ್ದ ಎರಡು ಶಿಲಾಶಾಸನಗಳಿದ್ದವು. (ವಿಮೋ. 31:18) ಈ ನಿಯಮಗಳು ಹಾಗೂ ಮೋಶೆಯ ಧರ್ಮಶಾಸ್ತ್ರದ ಭಾಗವಾದ ಬೇರೆಲ್ಲ ನಿಯಮಗಳು ಶಾಶ್ವತ ಹಾಗೂ ಸ್ಥಿರವಾದ ಮೂಲತತ್ತ್ವಗಳ ಮೇಲಾಧರಿತವಾಗಿವೆ.
16 ಉದಾಹರಣೆಗಾಗಿ, ಆ ಶಿಲಾಶಾಸನಗಳಲ್ಲಿದ್ದ ಒಂದು ನಿಯಮ ಹೀಗಿದೆ: ‘ನಿನ್ನ ದೇವರಾದ ಯೆಹೋವನೆಂಬ ನಾನು ನನಗೆ ಸಲ್ಲತಕ್ಕ ಗೌರವವನ್ನು ಮತ್ತೊಬ್ಬನಿಗೆ ಸಲ್ಲಗೊಡಿಸೆನು.’ ಅದು ಮುಂದುವರಿಯುತ್ತಾ ಹೇಳಿದ್ದೇನೆಂದರೆ ಯೆಹೋವನು, ‘ತನ್ನನ್ನು ಪ್ರೀತಿಸಿ ತನ್ನ ಆಜ್ಞೆಗಳನ್ನು ಕೈಕೊಳ್ಳುವವರಿಗೆ ಸಾವಿರ ತಲೆಗಳ ವರೆಗೆ ದಯೆತೋರಿಸುವವನಾಗಿದ್ದಾನೆ.’ ಆ ಶಿಲಾಶಾಸನಗಳಲ್ಲಿ, “ನಿನ್ನ ತಂದೆತಾಯಿಗಳನ್ನು ಸನ್ಮಾನಿಸಬೇಕು” ಮತ್ತು “ಕದಿಯ ಬಾರದು” ಎಂಬಂಥ ಕಾಲಾತೀತ ಮೂಲತತ್ತ್ವಗಳಿದ್ದವು ಮಾತ್ರವಲ್ಲ, ಇತರರಿಗೆ ಸೇರಿದ ಸ್ವತ್ತುಗಳನ್ನು ಆಶಿಸಬಾರದೆಂಬ ಸೂಕ್ಷ್ಮ ಪರಿಜ್ಞಾನದ ನಿಯಮ ಸಹ ಇತ್ತು.—ವಿಮೋ. 20:5, 6, 12, 15, 17.
ನಮ್ಮ ಪರಿಶುದ್ಧ ಹಾಗೂ ಭಯಪ್ರೇರಕ ವಿಮೋಚಕನು
17. ದೇವರ ನಾಮವನ್ನು ಪರಿಶುದ್ಧವೆಂದು ಪರಿಗಣಿಸಲು ಇಸ್ರಾಯೇಲ್ಯರಿಗೆ ಯಾವ ಕಾರಣಗಳಿದ್ದವು?
17 “ಯೆಹೋವನು ತನ್ನ ಜನರಿಗೆ ವಿಮೋಚನೆಯನ್ನುಂಟುಮಾಡಿದ್ದಾನೆ. ತನ್ನ ಒಡಂಬಡಿಕೆಯನ್ನು ನಿತ್ಯಕ್ಕೂ ಸ್ಥಾಪಿಸಿದ್ದಾನೆ; ಆತನ ನಾಮವು ಪರಿಶುದ್ಧವೂ ಭಯಂಕರವೂ [“ಭಯಪ್ರೇರಕವೂ,” NW] ಆಗಿದೆ.” (ಕೀರ್ತ. 111:9) ಇಲ್ಲಿ ಪುನಃ, ಯೆಹೋವನು ಅಬ್ರಹಾಮನೊಂದಿಗೆ ಮಾಡಿದ ಒಡಂಬಡಿಕೆಯ ಕಡೆಗೆ ತೋರಿಸಿದ ನಿಷ್ಠೆ ಕೀರ್ತನೆಗಾರನ ಮನಸ್ಸಿನಲ್ಲಿದ್ದಿರಬಹುದು. ಆ ಒಡಂಬಡಿಕೆಗೆ ತಕ್ಕಂತೆ ಯೆಹೋವನು, ತನ್ನ ಜನರು ಮೊದಲು ಪ್ರಾಚೀನ ಐಗುಪ್ತದಲ್ಲಿ ದಾಸರಾಗಿದ್ದಾಗ ಮತ್ತು ಅನಂತರ ಬಾಬೆಲಿನಲ್ಲಿ ಸೆರೆಯಾಳುಗಳಾಗಿದ್ದಾಗ ಅವರ ಕೈಬಿಡಲಿಲ್ಲ. ಈ ಎರಡೂ ಸಂದರ್ಭಗಳಲ್ಲಿ ದೇವರು ತನ್ನ ಜನರನ್ನು ವಿಮೋಚಿಸಿದನು. ಕೇವಲ ಈ ಎರಡು ಕಾರಣಗಳಿಗಾದರೂ ಇಸ್ರಾಯೇಲ್ ಜನಾಂಗವು ದೇವರ ನಾಮವನ್ನು ಪರಿಶುದ್ಧವೆಂದು ಪರಿಗಣಿಸಬೇಕಿತ್ತು.—ವಿಮೋಚನಕಾಂಡ 20:7; ರೋಮಾಪುರ 2:23, 24 ಓದಿ.
18. ದೇವರ ನಾಮಧಾರಿಗಳಾಗಿರುವುದು ಸುಯೋಗವೆಂದು ನೀವೇಕೆ ಎಣಿಸುತ್ತೀರಿ?
18 ಈ ಮಾತು ಇಂದು ಕ್ರೈಸ್ತರಿಗೂ ಅನ್ವಯಿಸುತ್ತದೆ. ಇವರನ್ನೂ, ಪಾಪಮರಣದ ದಾಸತ್ವ ಎಂಬ ನಿರೀಕ್ಷಾಹೀನ ಸ್ಥಿತಿಯಿಂದ ಬಿಡಿಸಲಾಗಿದೆ. ಆದುದರಿಂದ, ಮಾದರಿ ಪ್ರಾರ್ಥನೆಯ ಪ್ರಪ್ರಥಮ ವಿನಂತಿಯಾದ “ನಿನ್ನ ನಾಮವು ಪರಿಶುದ್ಧವೆಂದು ಎಣಿಸಲ್ಪಡಲಿ” ಎಂಬ ಮಾತಿಗೆ ತಕ್ಕಂತೆ ಜೀವಿಸಲು ನಮ್ಮಿಂದಾದುದ್ದೆಲ್ಲವನ್ನು ಮಾಡೋಣ. (ಮತ್ತಾ. 6:9, 10) ಆ ಮಹಿಮಾಭರಿತ ನಾಮದ ಕುರಿತು ಧ್ಯಾನಿಸುವುದು ನಮ್ಮಲ್ಲಿ ದೇವಭಯವನ್ನು ತುಂಬಿಸುವುದು. 111ನೇ ಕೀರ್ತನೆಯನ್ನು ಬರೆದವನಿಗೆ ದೇವಭಯದ ಕುರಿತು ಯೋಗ್ಯ ನೋಟವಿತ್ತು. ಅವನು ಹೇಳಿದ್ದು: “ಯೆಹೋವನ ಭಯವೇ ಜ್ಞಾನಕ್ಕೆ ಮೂಲವು; ಆತನ ಕಟ್ಟಳೆಗಳನ್ನು ನಡಿಸುವವರು ಪೂರ್ಣ ವಿವೇಕಿಗಳು.”—ಕೀರ್ತ. 111:10.
19. ಮುಂದಿನ ಲೇಖನದಲ್ಲಿ ಏನನ್ನು ಪರಿಗಣಿಸುವೆವು?
19 ದೇವರ ಕುರಿತು ನಮಗಿರುವ ಹಿತಕರ ಭಯವು, ಕೆಟ್ಟದ್ದನ್ನು ದ್ವೇಷಿಸುವಂತೆ ನಮಗೆ ಸಹಾಯ ಮಾಡುವುದು. ಯೆಹೋವನ ಸೊಗಸಾದ ಗುಣಗಳನ್ನು ಅನುಕರಿಸಲು ಸಹ ಅದು ಸಹಾಯ ಮಾಡುವುದೆಂದು 112ನೇ ಕೀರ್ತನೆ ತೋರಿಸುತ್ತದೆ. ಈ ಕೀರ್ತನೆಯನ್ನೇ ಮುಂದಿನ ಲೇಖನದಲ್ಲಿ ಚರ್ಚಿಸಲಿದ್ದೇವೆ. ಆ ಕೀರ್ತನೆಯು, ದೇವರನ್ನು ಸದಾ ಸ್ತುತಿಸಲಿರುವ ಲಕ್ಷಗಟ್ಟಲೆ ಜನರಲ್ಲಿ ಒಬ್ಬರಾಗಿರಲು ನಾವೇನು ಮಾಡಬೇಕೆಂದು ತೋರಿಸುತ್ತದೆ. ಯೆಹೋವನು ಅಂಥ ಅನಂತ ಸ್ತುತಿಗೆ ಯೋಗ್ಯನು. “ಆತನ ಸ್ತುತಿಯು ನಿರಂತರವಾದದ್ದು.”—ಕೀರ್ತ. 111:10.
[ಪುಟ 20ರಲ್ಲಿರುವ ಚಿತ್ರ]
ನಾವು ಕ್ರಮವಾಗಿ ಕೂಡಿಬರುವ ಮುಖ್ಯ ಉದ್ದೇಶ ಯೆಹೋವನನ್ನು ಸ್ತುತಿಸುವುದೇ ಆಗಿದೆ
[ಪುಟ 23ರಲ್ಲಿರುವ ಚಿತ್ರ]
ಯೆಹೋವನ ಎಲ್ಲ ನಿಯಮಗಳು ಶಾಶ್ವತ ಹಾಗೂ ಸ್ಥಿರವಾದ ಮೂಲತತ್ತ್ವಗಳ ಮೇಲಾಧರಿತವಾಗಿವೆ
[ಪುಟ 23ರಲ್ಲಿರುವ ಚಿತ್ರ]
ಧ್ಯಾನಕ್ಕಾಗಿ ಪ್ರಶ್ನೆಗಳು
• ಯೆಹೋವನು ನಮ್ಮೆಲ್ಲರ ಸ್ತುತಿಗರ್ಹನು ಏಕೆ?
• ಯೆಹೋವನ ಯಾವ ಗುಣಗಳು ಆತನ ಕೃತ್ಯಗಳಲ್ಲಿ ತೋರಿಬರುತ್ತವೆ?
• ದೇವರ ನಾಮಧಾರಿಗಳಾಗಿರುವ ಸುಯೋಗದ ಬಗ್ಗೆ ನಿಮಗೆ ಹೇಗನಿಸುತ್ತದೆ?