ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • w10 7/1 ಪು. 20
  • ನಮ್ಮ ಸಾಫಲ್ಯ ಬಯಸುವ ದೇವರು

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ನಮ್ಮ ಸಾಫಲ್ಯ ಬಯಸುವ ದೇವರು
  • ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2010
  • ಅನುರೂಪ ಮಾಹಿತಿ
  • ಯೆಹೋಶುವ 1:9—“ಸ್ಥಿರಚಿತ್ತನಾಗಿರು, ಧೈರ್ಯದಿಂದಿರು”
    ಬೈಬಲ್‌ ವಚನಗಳ ವಿವರಣೆ
  • ಯೆಹೋಶುವನು ಜ್ಞಾಪಕದಲ್ಲಿಟ್ಟುಕೊಂಡ ವಿಷಯಗಳು
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2002
  • ಯೆಹೋಶುವ ಪುಸ್ತಕದ ಮುಖ್ಯಾಂಶಗಳು
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2004
  • ಸೂರ್ಯನು ಕದಲದೆ ನಿಲ್ಲುತ್ತಾನೆ
    ಬೈಬಲ್‌ ಕಥೆಗಳ ನನ್ನ ಪುಸ್ತಕ
ಇನ್ನಷ್ಟು
ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2010
w10 7/1 ಪು. 20

ದೇವರ ಸಮೀಪಕ್ಕೆ ಬನ್ನಿರಿ

ನಮ್ಮ ಸಾಫಲ್ಯ ಬಯಸುವ ದೇವರು

ಯೆಹೋಶುವ 1:6-9

ಮಕ್ಕಳ ಬದುಕು ಸಫಲವಾಗಬೇಕು, ಸಂತೃಪ್ತಿ ಸಾರ್ಥಕತೆ ತುಂಬಿರಬೇಕು ಎಂಬುದು ಅಕ್ಕರೆಯ ಹೆತ್ತವರ ಆಸೆ. ಹಾಗೆಯೇ, ಭೂಮಿ ಮೇಲಿರುವ ತನ್ನ ಮಕ್ಕಳು ಸಫಲರಾಗಬೇಕು ಎಂಬುದು ನಮ್ಮ ಸ್ವರ್ಗೀಯ ತಂದೆಯಾದ ಯೆಹೋವ ದೇವರ ಅಪೇಕ್ಷೆ. ಸಫಲರಾಗಲು ನಾವೇನು ಮಾಡಬೇಕೆಂದು ಆತನು ತಿಳಿಸಿರುವುದು ಆತನ ವಾತ್ಸಲ್ಯಭರಿತ ಕಾಳಜಿಗೆ ಪುರಾವೆ. ಉದಾಹರಣೆಗೆ ಆತನು ತನ್ನ ಸೇವಕನಾದ ಯೆಹೋಶುವನಿಗೆ ಹೇಳಿದ ಮಾತುಗಳನ್ನು ಪರಿಗಣಿಸಿ. ಅವು ಯೆಹೋಶುವ 1:6-9ರಲ್ಲಿವೆ.

ಪಕ್ಕದ ಚಿತ್ರದ ಸನ್ನಿವೇಶವನ್ನು ಕಲ್ಪಿಸಿಕೊಳ್ಳಿ. ಮೋಶೆ ಮೃತಪಟ್ಟ ಬಳಿಕ ಲಕ್ಷಾಂತರ ಇಸ್ರಾಯೇಲ್ಯರಿಗೆ ಯೆಹೋಶುವನು ನಾಯಕನಾಗುತ್ತಾನೆ. ತಮ್ಮ ಮೂಲಪಿತೃಗಳಿಗೆ ದೇವರು ವಾಗ್ದಾನ ಮಾಡಿದ್ದ ಪ್ರದೇಶಕ್ಕೆ ಹೋಗಲು ಆ ಇಸ್ರಾಯೇಲ್ಯರು ಸಿದ್ಧರಾಗುತ್ತಿದ್ದಾರೆ. ಆ ಸಂದರ್ಭದಲ್ಲಿ ದೇವರು ಯೆಹೋಶುವನಿಗೆ ಸಲಹೆಸೂಚನೆ ಕೊಡುತ್ತಾನೆ. ಅವನು ಅವುಗಳನ್ನು ಪಾಲಿಸುವಲ್ಲಿ ಸಫಲನಾಗಲಿದ್ದನು. ಆದರೆ ಆ ಸಲಹೆಸೂಚನೆಯನ್ನು ದೇವರು ಕೊಟ್ಟದ್ದು ಕೇವಲ ಯೆಹೋಶುವನ ಪ್ರಯೋಜನಕ್ಕಾಗಿ ಅಲ್ಲ. ಅವುಗಳನ್ನು ಅನ್ವಯಿಸುವಲ್ಲಿ ನಮಗೂ ಸಾಫಲ್ಯ ಖಚಿತ.—ರೋಮನ್ನರಿಗೆ 15:4.

ಯೆಹೋವನು ಯೆಹೋಶುವನಿಗೆ ಸ್ಥಿರಚಿತ್ತನೂ ಧೈರ್ಯವಂತನೂ ಆಗಿರಲು ಹೇಳುತ್ತಾನೆ. ಕೇವಲ ಒಂದು ಬಾರಿಯಲ್ಲ ಮೂರು ಬಾರಿ! (ವಚನ 6, 7, 9) ದೇವರು ವಾಗ್ದಾನಿಸಿದ್ದ ಪ್ರದೇಶಕ್ಕೆ ಆ ಜನಾಂಗವನ್ನು ಕರೆದೊಯ್ಯುವುದರಲ್ಲಿ ಸಫಲನಾಗಲು ಯೆಹೋಶುವನಿಗೆ ಧೈರ್ಯ ಮತ್ತು ಸ್ಥಿರಚಿತ್ತತೆಯ ಅಗತ್ಯ ಖಂಡಿತ ಇತ್ತು. ಆದರೆ ಆ ಅಗತ್ಯ ಗುಣಗಳನ್ನು ಅವನು ಹೇಗೆ ಪಡಕೊಳ್ಳಸಾಧ್ಯವಿತ್ತು?

ದೇವರ ಪ್ರೇರಿತ ಬರಹಗಳಿಂದಲೇ. “ನನ್ನ ಸೇವಕನಾದ ಮೋಶೆ ನಿನಗೆ ಬೋಧಿಸಿದ ಧರ್ಮೋಪದೇಶವನ್ನೆಲ್ಲಾ ಕೈಕೊಂಡು ನಡೆ” ಎಂದನು ಯೆಹೋವನು ಅವನಿಗೆ. (ವಚನ 7) ಆ ಸಮಯದಲ್ಲಿ ಯೆಹೋಶುವನ ಬಳಿ ಇದ್ದದ್ದು ಬೈಬಲಿನಲ್ಲಿರುವ ಕೇವಲ ಕೆಲವು ಪುಸ್ತಕಗಳ ಬರಹವಷ್ಟೆ.a ಹಾಗಿದ್ದರೂ ದೇವರ ಆ ವಾಕ್ಯವನ್ನು ತನ್ನೊಟ್ಟಿಗೆ ಇಟ್ಟುಕೊಂಡ ಮಾತ್ರಕ್ಕೆ ಅವನು ಸಫಲನಾಗಲು ಸಾಧ್ಯವಿರಲಿಲ್ಲ. ಅದರಿಂದ ಪ್ರಯೋಜನವಾಗಬೇಕಿದ್ದರೆ ಯೆಹೋಶುವನು ಎರಡು ವಿಷಯಗಳನ್ನು ಮಾಡಬೇಕಿತ್ತು.

ಮೊದಲನೆಯದಾಗಿ ಯೆಹೋಶುವನು ತನ್ನ ಹೃದಯದಲ್ಲಿ ದೇವರ ವಾಕ್ಯವನ್ನು ಕ್ರಮವಾಗಿ ತುಂಬಿಸಬೇಕಿತ್ತು. “ಹಗಲಿರುಳು ಅದನ್ನು ಧ್ಯಾನಿಸುತ್ತಾ” ಇರುವಂತೆ ಯೆಹೋವನು ಅವನಿಗೆ ಹೇಳಿದನು. (ವಚನ 8) ಈ ವಚನದ ಕುರಿತು ಒಂದು ಪರಾಮರ್ಶೆ ಕೃತಿ ಹೀಗನ್ನುತ್ತದೆ: “ದೇವರ ಆಜ್ಞಾನಿಯಮಗಳನ್ನು ನೆನಪಿನಲ್ಲಿಡಲಿಕ್ಕಾಗಿ ಯೆಹೋಶುವನು ಅವುಗಳನ್ನು ತನಗೆ ಕೇಳಿಸುವಷ್ಟು ‘ಮೆಲುದನಿಯಲ್ಲಿ ಓದುವಂತೆ,’ ಆ ಕುರಿತು ‘ಗಾಢವಾಗಿ ಆಲೋಚಿಸುವಂತೆ’ ಅಥವಾ ‘ಧ್ಯಾನಮಗ್ನನಾಗುವಂತೆ’ ದೇವರು ಇಲ್ಲಿ ಅವನಿಗೆ ಆಜ್ಞಾಪಿಸುತ್ತಿದ್ದನು.” ಹೌದು, ದೇವರ ವಾಕ್ಯವನ್ನು ಪ್ರತಿದಿನ ಓದಿ ಧ್ಯಾನಿಸುವುದು ಯೆಹೋಶುವನಿಗೆ ತನ್ನ ಮುಂದಿದ್ದ ಸವಾಲುಗಳನ್ನು ಎದುರಿಸಲು ಸಹಾಯಮಾಡಲಿತ್ತು.

ಎರಡನೆಯದಾಗಿ, ಯೆಹೋಶುವನು ದೇವರ ವಾಕ್ಯದಿಂದ ಕಲಿತದ್ದನ್ನು ಅನ್ವಯಿಸಬೇಕಿತ್ತು. ಯೆಹೋವನು ಹೇಳಿದ್ದು: “ಅದರಲ್ಲಿ ಬರೆದಿರುವದನ್ನೆಲ್ಲಾ ಕೈಕೊಂಡು ನಡಿ. ಆಗ ನಿನ್ನ ಮಾರ್ಗದಲ್ಲೆಲ್ಲಾ ಸಫಲನಾಗುವಿ.” (ವಚನ 8) ಯೆಹೋಶುವನು ದೇವರ ಚಿತ್ತವನ್ನು ಮಾಡಿದರೆ ಸಫಲನಾಗುತ್ತಿದ್ದನು. ಇದರಲ್ಲಿ ಯಾವುದೇ ಸಂದೇಹವಿರಲಿಲ್ಲ. ಏಕೆಂದರೆ ದೇವರ ಚಿತ್ತ ಎಂದಿಗೂ ವ್ಯರ್ಥವಾಗದೆ ಸಫಲವಾಗುತ್ತದೆ.—ಯೆಶಾಯ 55:10, 11.

ಯೆಹೋಶುವನು ಯೆಹೋವನ ಸಲಹೆಯನ್ನು ಪಾಲಿಸಿದನು. ಫಲಿತಾಂಶ? ಯೆಹೋವನ ನಂಬಿಗಸ್ತ ಆರಾಧಕನಾಗಿ ಕೊನೇ ವರೆಗೂ ನೆಮ್ಮದಿ ಸಂತೃಪ್ತಿಯಿಂದ ತುಂಬಿದ್ದ ಸಾರ್ಥಕ ಬದುಕನ್ನು ನಡೆಸಿದ್ದನು.—ಯೆಹೋಶುವ 23:14; 24:15.

ಯೆಹೋಶುವನಂತೆ ಸಾರ್ಥಕ ಬದುಕು ನಿಮ್ಮದಾಗಬೇಕೋ? ನೀವೂ ಸಫಲರಾಗಬೇಕೆಂಬುದು ಯೆಹೋವನ ಅಪೇಕ್ಷೆ. ಆದರೆ ಆತನ ವಾಕ್ಯವಾದ ಬೈಬಲನ್ನು ಬರೀ ಇಟ್ಟುಕೊಳ್ಳುವುದರಿಂದ ಮಾತ್ರ ಸಾಫಲ್ಯ ನಿಮ್ಮ ಕೈಗೆಟುಕದು. ದೀರ್ಘ ಸಮಯದಿಂದ ದೇವರಿಗೆ ನಂಬಿಗಸ್ತನಾದ ಕ್ರೈಸ್ತನೊಬ್ಬನು ಹೇಳಿದ್ದು: “ಬೈಬಲಿನ ಪುಟಗಳನ್ನು ಓದಿ ಆ ಮಾತುಗಳನ್ನು ಅಲ್ಲಿಗೆ ಬಿಡದೆ ನಿಮ್ಮ ಹೃದಯಕ್ಕೆ ನಾಟಿಸಿರಿ.” ನಿಮ್ಮ ಹೃದಯದಲ್ಲಿ ದೇವರ ವಾಕ್ಯವನ್ನು ಕ್ರಮವಾಗಿ ತುಂಬಿಸುವಲ್ಲಿ ಮತ್ತು ಕಲಿತದ್ದನ್ನು ಅನ್ವಯಿಸುವಲ್ಲಿ ಯೆಹೋಶುವನಂತೆ ನೀವು ‘ನಿಮ್ಮ ಮಾರ್ಗದಲ್ಲೆಲ್ಲಾ ಸಫಲರಾಗುವಿರಿ.’ (w09-E 12/01)

[ಪಾದಟಿಪ್ಪಣಿ]

a ಯೆಹೋಶುವನಿಗೆ ಲಭ್ಯವಿದ್ದ ದೇವರ ಪ್ರೇರಿತ ಬರಹಗಳೆಂದರೆ ಪ್ರಾಯಶಃ ಮೋಶೆಯ ಐದು ಪುಸ್ತಕಗಳು (ಆದಿಕಾಂಡ, ವಿಮೋಚನಕಾಂಡ, ಯಾಜಕಕಾಂಡ, ಅರಣ್ಯಕಾಂಡ, ಧರ್ಮೋಪದೇಶಕಾಂಡ), ಯೋಬ ಪುಸ್ತಕ ಮತ್ತು ಒಂದೆರಡು ಕೀರ್ತನೆಗಳು.

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ