ವಾಚಕರಿಂದ ಪ್ರಶ್ನೆಗಳು
“ಮಗನು ತಂದೆಯ ದೋಷಫಲವನ್ನು ಅನುಭವಿಸನು” ಎಂದು ಯೆಹೆಜ್ಕೇಲ 18:20ರಲ್ಲಿ ಹೇಳಲಾಗಿರುವ ಮಾತು, ಯೆಹೋವನು “ತಂದೆಗಳ ದೋಷಫಲವನ್ನು ಮಕ್ಕಳ ಮೇಲೆ” ಬರಮಾಡುತ್ತಾನೆ ಎಂದು ವಿಮೋಚನಕಾಂಡ 20:5ರಲ್ಲಿ ಹೇಳಿದ ಮಾತಿಗೆ ವಿರುದ್ಧವಾಗಿದೆಯೊ?
ಇವು ಪರಸ್ಪರ ವಿರೋಧೋಕ್ತಿಗಳಲ್ಲ. ಒಂದು ಹೇಳಿಕೆಯು ವ್ಯಕ್ತಿಯ ಹೊಣೆಗಾರಿಕೆಯನ್ನು ಒತ್ತಿಹೇಳುವಾಗ ಇನ್ನೊಂದು, ವ್ಯಕ್ತಿಯೊಬ್ಬನ ತಪ್ಪಿನಿಂದ ಬರುವ ದೋಷಫಲವು ಅವನ ಸಂತತಿಯವರ ಮೇಲೆ ಪರಿಣಾಮ ಬೀರಬಹುದೆಂಬ ನಿಜತ್ವವನ್ನು ಒಪ್ಪುತ್ತದೆ.
ಯೆಹೆಜ್ಕೇಲ 18ನೇ ಅಧ್ಯಾಯದ ಪೂರ್ವಾಪರವು ವೈಯಕ್ತಿಕ ಹೊಣೆಗಾರಿಕೆಗೆ ಒತ್ತುನೀಡಲಾಗಿರುವುದನ್ನು ಸೂಚಿಸುತ್ತದೆ. “ಪಾಪಮಾಡುವ ಪ್ರಾಣಿಯೇ ಸಾಯುವನು” ಎಂದು 4ನೇ ವಚನವು ತಿಳಿಸುತ್ತದೆ. ಒಬ್ಬ ಮನುಷ್ಯನು ‘ಸದ್ಧರ್ಮಿಯಾಗಿ ನೀತಿನ್ಯಾಯಗಳನ್ನು ನಡಿಸುವುದಾದರೆ’ ಆಗೇನು? ‘ಇಂಥವನು ಬಾಳೇ ಬಾಳುವನು.’ (ಯೆಹೆ. 18:5, 9) ಹೀಗೆ ಹೊಣೆಗಾರಿಕೆಯನ್ನು ವಹಿಸಲು ಸಾಕಷ್ಟು ದೊಡ್ಡವನಾದ ಮೇಲೆ ಪ್ರತಿಯೊಬ್ಬ ವ್ಯಕ್ತಿಯು ತನ್ನ “ನಡತೆಗೆ ತಕ್ಕ ಹಾಗೆ” ತೀರ್ಪುಹೊಂದುತ್ತಾನೆ.—ಯೆಹೆ. 18:30.
ಈ ಮೂಲತತ್ತ್ವವು ಕೋರಹನೆಂಬ ಲೇವಿಯನ ಘಟನೆಯಿಂದ ದೃಷ್ಟಾಂತಿಸಲ್ಪಟ್ಟಿದೆ. ಇಸ್ರಾಯೇಲ್ಯರ ಅರಣ್ಯ ಪ್ರಯಾಣದ ಸಮಯದಲ್ಲಿ ಕೋರಹನು ತನಗಿದ್ದ ಸೇವಾಸುಯೋಗಗಳಲ್ಲಿ ಅಸಂತುಷ್ಟನಾದನು. ತನಗಾಗಿ ಯಾಜಕೋದ್ಯೋಗವನ್ನು ಪಡೆಯಬೇಕೆಂಬ ಹಂಬಲದಿಂದ ಕೋರಹ ಮತ್ತು ಇತರ ಕೆಲವರು ಯೆಹೋವನ ಪ್ರತಿನಿಧಿಗಳಾಗಿದ್ದ ಮೋಶೆ ಆರೋನರ ವಿರುದ್ಧ ದಂಗೆಯೆದ್ದರು. ತಾವು ಅರ್ಹರಾಗಿರದಿದ್ದ ಸುಯೋಗಕ್ಕಾಗಿ ದುರಹಂಕಾರದಿಂದ ಎಟಿಕಿಸಿಕೊಂಡ ಕಾರಣ ಯೆಹೋವನು ಕೋರಹನನ್ನು ಹಾಗೂ ಅವನೊಂದಿಗೆ ಜೊತೆಗೂಡಿದ ಇತರ ದಂಗೆಕೋರರನ್ನು ಸಾಯಿಸಿದನು. (ಅರ. 16:8-11, 31-33) ಆದರೆ ಕೋರಹನ ಪುತ್ರರು ಆ ದಂಗೆಯಲ್ಲಿ ಜೊತೆಗೂಡಲಿಲ್ಲ. ತಮ್ಮ ತಂದೆಯ ಪಾಪಕ್ಕಾಗಿ ದೇವರು ಅವರನ್ನು ಹೊಣೆಗಾರರನ್ನಾಗಿ ಮಾಡಲಿಲ್ಲ. ಯೆಹೋವನಿಗೆ ಅವರು ತೋರಿಸಿದ ನಿಷ್ಠೆಯಿಂದಾಗಿ ಅವರ ಸ್ವಂತ ಜೀವಗಳು ಉಳಿಸಲ್ಪಟ್ಟವು.—ಅರ. 26:10, 11.
ಆದರೆ ದಶಾಜ್ಞೆಗಳ ಭಾಗವಾಗಿರುವ, ವಿಮೋಚನಕಾಂಡ 20:5ರಲ್ಲಿ ಕೊಡಲ್ಪಟ್ಟಿರುವ ಎಚ್ಚರಿಕೆಯ ಕುರಿತೇನು? ಇಲ್ಲಿ ಸಹ ಪೂರ್ವಾಪರವನ್ನು ಪರಿಗಣಿಸಿ. ಯೆಹೋವನು ಇಸ್ರಾಯೇಲ್ ಜನಾಂಗದೊಂದಿಗೆ ಧರ್ಮಶಾಸ್ತ್ರದ ಒಡಂಬಡಿಕೆಯನ್ನು ಸ್ಥಾಪಿಸಿದನು. ಆ ಒಡಂಬಡಿಕೆಯ ಷರತ್ತುಗಳನ್ನು ಕೇಳಿಯಾದ ನಂತರ ಇಸ್ರಾಯೇಲ್ಯರು, “ಯೆಹೋವನು ಹೇಳಿದಂತೆಯೇ ಮಾಡುವೆವು” ಎಂದು ಬಹಿರಂಗವಾಗಿ ಘೋಷಿಸಿದರು. (ವಿಮೋ. 19:5-8) ಹೀಗೆ ಇಡೀ ಜನಾಂಗವು ಯೆಹೋವನೊಂದಿಗೆ ವಿಶೇಷ ಸಂಬಂಧದೊಳಗೆ ಬಂದಿತು. ಆದುದರಿಂದ ವಿಮೋಚನಕಾಂಡ 20:5ರಲ್ಲಿರುವ ಮಾತುಗಳು ಮೂಲತಃ ಇಡೀ ಜನಾಂಗಕ್ಕೆ ಸೂಚಿಸಿ ಹೇಳಲಾಗಿದ್ದವು.
ಇಸ್ರಾಯೇಲ್ಯರು ಯೆಹೋವನಿಗೆ ನಂಬಿಗಸ್ತರಾಗಿ ಉಳಿದಾಗ ಇಡೀ ಜನಾಂಗವು ಯೆಹೋವನಿಂದ ಅನೇಕ ಆಶೀರ್ವಾದಗಳನ್ನೂ ಪ್ರಯೋಜನಗಳನ್ನೂ ಪಡೆಯಿತು. (ಯಾಜ. 26:3-8) ಇದಕ್ಕೆ ವಿರುದ್ಧವಾದ ವಿಷಯವೂ ಸತ್ಯ. ಇಸ್ರಾಯೇಲ್ ಜನಾಂಗವು ಯೆಹೋವನನ್ನು ತಿರಸ್ಕರಿಸಿ ಸುಳ್ಳುದೇವರುಗಳ ಕಡೆಗೆ ತಿರುಗಿದಾಗ ಆತನು ತನ್ನ ಆಶೀರ್ವಾದ ಹಾಗೂ ಸಂರಕ್ಷಣೆಯನ್ನು ಹಿಂತೆಗೆದನು; ಪರಿಣಾಮವಾಗಿ ಜನಾಂಗವು ವಿಪತ್ತನ್ನು ಅನುಭವಿಸಿತು. (ನ್ಯಾಯ. 2:11-18) ಜನಾಂಗವು ವಿಗ್ರಹಾರಾಧನೆಯನ್ನು ನಡೆಸುತ್ತಿದ್ದರೂ ಅವರಲ್ಲಿ ಕೆಲವರು ತಮ್ಮ ನಿಷ್ಠೆಯನ್ನು ಕಾಪಾಡಿಕೊಂಡಿದ್ದು ದೇವರ ನಿಯಮಗಳಿಗೆ ವಿಧೇಯರಾಗಿದ್ದರು ನಿಜ. (1 ಅರ. 19:14, 18) ಆ ನಂಬಿಗಸ್ತ ಜನರು ಜನಾಂಗದ ಪಾಪಗಳಿಂದಾಗಿ ಕೆಲವು ಸಂಕಷ್ಟಗಳನ್ನು ಅನುಭವಿಸಿದ್ದಿರಬಹುದಾದರೂ ಯೆಹೋವನು ಅವರಿಗೆ ಪ್ರೀತಿಪೂರ್ವಕ ದಯೆಯನ್ನು ತೋರಿಸಿದನು.
ಇಸ್ರಾಯೇಲ್ಯರು ಯೆಹೋವನ ನಿಯಮಗಳನ್ನು ಬಹು ಕುತ್ಸಿತವಾಗಿ ಉಲ್ಲಂಘಿಸಿದಾಗ ಆತನ ನಾಮವು ಅಪಹಾಸ್ಯಕ್ಕೆ ಗುರಿಯಾಯಿತು. ಆದುದರಿಂದ ತನ್ನ ಜನರು ಬಾಬೆಲಿಗೆ ಸೆರೆವಾಸಿಗಳಾಗಿ ಒಯ್ಯಲ್ಪಡುವಂತೆ ಅನುಮತಿಸುವ ಮೂಲಕ ಯೆಹೋವನು ಅವರನ್ನು ಶಿಕ್ಷಿಸಲು ನಿರ್ಧರಿಸಿದನು. ಇದರಲ್ಲಿ ವ್ಯಕ್ತಿಗತವಾಗಿ ಹಾಗೂ ಒಂದು ಗುಂಪಿನೋಪಾದಿ ಆತನ ಜನರಿಗೆ ಶಿಕ್ಷೆಯು ಒಳಗೂಡಿತ್ತು. (ಯೆರೆ. 52:3-11, 27) ಇಸ್ರಾಯೇಲಿನ ಸಾಮೂಹಿಕ ದೋಷವು ಎಷ್ಟು ಘೋರವಾಗಿತ್ತೆಂದರೆ ವಿಮೋಚನಕಾಂಡ 20:5ರಲ್ಲಿ ಹೇಳಿದಂತೆಯೇ ಮೂರು, ನಾಲ್ಕು ಅಥವಾ ಪ್ರಾಯಶಃ ಹೆಚ್ಚು ತಲೆಮಾರಿನವರೂ ತಮ್ಮ ಪೂರ್ವಜರ ದುರಾಚಾರಗಳ ದೋಷಫಲವನ್ನು ಅನುಭವಿಸಿದರು.
ಹೆತ್ತವರ ಕೆಟ್ಟ ನಡವಳಿಕೆಯ ಪರಿಣಾಮಗಳನ್ನು ಆಯಾ ಕುಟುಂಬಗಳು ಅನುಭವಿಸಿದ ವೃತ್ತಾಂತಗಳೂ ಬೈಬಲಿನಲ್ಲಿವೆ. ಮಹಾಯಾಜಕ ಏಲಿಯು “ಬಹುದುಷ್ಟರಾಗಿದ್ದ” ತನ್ನ ಅನೈತಿಕ ಪುತ್ರರನ್ನು ಯಾಜಕರಾಗಿಯೇ ಇರಿಸುವ ಮೂಲಕ ಯೆಹೋವನನ್ನು ಕೋಪಗೊಳಿಸಿದನು. (1 ಸಮು. 2:12-16, 22-25) ಏಲಿಯು ಯೆಹೋವನಿಗಿಂತ ತನ್ನ ಮಕ್ಕಳಿಗೇ ಹೆಚ್ಚು ಗೌರವ ಕೊಟ್ಟದ್ದರಿಂದ ಅವನ ವಂಶವು ಮಹಾಯಾಜಕತ್ವದಿಂದ ತೆಗೆದುಹಾಕಲ್ಪಡುವುದು ಎಂದು ಯೆಹೋವನು ವಿಧಿಸಿದನು. ಇದು ಅವನ ಮರಿಮಗನ ಮಗ ಎಬ್ಯಾತಾರನ ಸಮಯದಲ್ಲಿ ಸಂಭವಿಸಲು ಆರಂಭಿಸಿತು. (1 ಸಮು. 2:29-36; 1 ಅರ. 2:27) ವಿಮೋಚನಕಾಂಡ 20:5ರಲ್ಲಿರುವ ಮೂಲತತ್ತ್ವವು ಗೇಹಜಿಯ ಉದಾಹರಣೆಯಿಂದಲೂ ದೃಷ್ಟಾಂತಿಸಲ್ಪಟ್ಟಿದೆ. ಅರಾಮ್ಯರ ಸೇನಾಪತಿ ನಾಮಾನನ ರೋಗವಾಸಿಯಿಂದ ಭೌತಿಕ ಲಾಭಪಡೆಯುವ ಸಲುವಾಗಿ ಎಲೀಷನ ಸೇವಕ ಗೇಹಜಿಯು ತನ್ನ ಸ್ಥಾನವನ್ನು ದುರುಪಯೋಗಿಸಿದನು. ಎಲೀಷನ ಮುಖಾಂತರ ಯೆಹೋವನು ತೀರ್ಪನ್ನು ವಿಧಿಸುತ್ತಾ, “ನಾಮಾನನ ಕುಷ್ಠವು ನಿನ್ನನ್ನೂ ನಿನ್ನ ಸಂತಾನದವರನ್ನೂ ಸದಾಕಾಲ ಹಿಡಿದಿರುವದು” ಅಂದನು. (2 ಅರ. 5:20-27) ಆದುದರಿಂದ ಗೇಹಜಿಯ ತಪ್ಪಿನ ದುಷ್ಪರಿಣಾಮಗಳನ್ನು ಅವನ ಸಂತತಿಯವರು ಅನುಭವಿಸಿದರು.
ಯಾವ ಶಿಕ್ಷೆ ನ್ಯಾಯವೂ ಸೂಕ್ತವೂ ಆಗಿದೆ ಎಂಬುದನ್ನು ನಿರ್ಣಯಿಸುವ ಸಂಪೂರ್ಣ ಹಕ್ಕು ಸೃಷ್ಟಿಕರ್ತನೂ ಜೀವದಾತನೂ ಆಗಿರುವ ಯೆಹೋವನಿಗಿದೆ. ತಮ್ಮ ಪೂರ್ವಜರ ಪಾಪಗಳ ದುಷ್ಪರಿಣಾಮಗಳನ್ನು ಅವರ ಮಕ್ಕಳು ಅಥವಾ ಸಂತತಿಯವರು ಅನುಭವಿಸಬೇಕಾಗಬಹುದು ಎಂಬುದನ್ನು ಮೇಲಿನ ಉದಾಹರಣೆಗಳು ತೋರಿಸುತ್ತವೆ. ಆದರೂ ಯೆಹೋವನು ‘ದಿಕ್ಕಿಲ್ಲದವರ ಮೊರೆಯನ್ನು ಆಲೈಸುತ್ತಾನೆ’ ಹಾಗೂ ಮನಃಪೂರ್ವಕವಾಗಿ ಆತನ ಕಡೆಗೆ ತಿರುಗುವ ವ್ಯಕ್ತಿಗಳು ಆತನ ಅನುಗ್ರಹ ಹಾಗೂ ಒಂದಿಷ್ಟು ಉಪಶಮನವನ್ನೂ ಪಡೆಯಬಲ್ಲರು.—ಯೋಬ 34:28.
[ಪುಟ 29ರಲ್ಲಿರುವ ಚಿತ್ರ]
ಕೋರಹ ಹಾಗೂ ಅವನ ದಂಗೆಕೋರ ಜೊತೆಗಾರರು ತಮ್ಮ ಕೃತ್ಯಗಳಿಗೆ ಹೊಣೆಗಾರರಾಗಿ ಹಿಡಿಯಲ್ಪಟ್ಟರು