ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • w10 4/1 ಪು. 30-31
  • ಯೇಸು ವಿಧೇಯನಾಗಿರಲು ಕಲಿತನು

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಯೇಸು ವಿಧೇಯನಾಗಿರಲು ಕಲಿತನು
  • ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2010
  • ಅನುರೂಪ ಮಾಹಿತಿ
  • ಯೇಸು ಯಾವಾಗಲೂ ವಿಧೇಯತೆ ತೋರಿಸಿದ
    ನಿಮ್ಮ ಮುದ್ದು ಮಕ್ಕಳಿಗೆ ಕಲಿಸಿರಿ
  • ಆಕೆ ಯೆಹೋವನಿಂದ ಅತಿಶಯವಾಗಿ ಅನುಗ್ರಹಿಸಲ್ಪಟ್ಟಳು
    ಕಾವಲಿನಬುರುಜು—1994
  • “ಇಗೋ, ನಾನು ಯೆಹೋವನ ದಾಸಿ!”
    ಅವರ ನಂಬಿಕೆಯನ್ನು ಅನುಕರಿಸಿ
  • ‘ತನ್ನ ಹೃದಯದಲ್ಲಿ ತೀರ್ಮಾನಗಳನ್ನು ಮಾಡಿಕೊಂಡಾಕೆ’
    ಅವರ ನಂಬಿಕೆಯನ್ನು ಅನುಕರಿಸಿ
ಇನ್ನಷ್ಟು
ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2010
w10 4/1 ಪು. 30-31

ನಿಮ್ಮ ಮಕ್ಕಳಿಗೆ ಕಲಿಸಿರಿ

ಯೇಸು ವಿಧೇಯನಾಗಿರಲು ಕಲಿತನು

ವಿಧೇಯತೆ ತೋರಿಸಲು ಕೆಲವೊಮ್ಮೆ ನಿನಗೆ ತುಂಬ ಕಷ್ಟವಾಗುತ್ತದಾ ಪುಟ್ಟಾ?—a ಹೌದಾದರೆ ಅದೇನೂ ಆಶ್ಚರ್ಯವಲ್ಲ. ವಿಧೇಯತೆ ತೋರಿಸಲು ಒಮ್ಮೊಮ್ಮೆ ಎಲ್ಲರಿಗೂ ಕಷ್ಟವಾಗುತ್ತದೆ. ಯೇಸು ಕೂಡ ವಿಧೇಯನಾಗಿರಲು ಕಲಿಯಬೇಕಿತ್ತು ಅನ್ನೋದು ನಿನಗೆ ಗೊತ್ತುಂಟಾ?—

ಚಿಕ್ಕ ಮಕ್ಕಳೆಲ್ಲಾ ಯಾರಿಗೆ ವಿಧೇಯರಾಗಿರಬೇಕು ಅಂತ ನಿನಗೆ ಗೊತ್ತಾ?— ಹ್ಞಾಂ, ಅಪ್ಪಅಮ್ಮಗೆ. “ಕರ್ತನೊಂದಿಗೆ ಐಕ್ಯದಲ್ಲಿ ನಿಮ್ಮ ಹೆತ್ತವರಿಗೆ ವಿಧೇಯರಾಗಿರಿ” ಎನ್ನುತ್ತದೆ ಬೈಬಲ್‌. (ಎಫೆಸ 6:1) ಯೇಸುವಿನ ತಂದೆ ಯಾರು?— ಯೆಹೋವ ದೇವರು. ಆತನು ನಮಗೆ ಕೂಡ ತಂದೆ. (ಮತ್ತಾಯ 6:9, 10) ‘ಅರೇ, ಯೇಸುವಿನ ತಂದೆ ಯೋಸೇಫ, ತಾಯಿ ಮರಿಯ ತಾನೇ’ ಎಂದು ಯೋಚಿಸುತ್ತಿದ್ದೀಯಾ? ಅದು ಸರಿಯೇ. ಅವರು ಹೇಗೆ ಯೇಸುವಿನ ಹೆತ್ತವರಾದರೆಂದು ನಿನಗೆ ತಿಳಿದಿದೆಯಾ?—

ಮರಿಯಳು ಪುರುಷನೊಂದಿಗೆ ಲೈಂಗಿಕ ಸಂಪರ್ಕವಿಲ್ಲದೆ ಹೇಗೆ ತಾಯಿಯಾಗುವಳೆಂದು ಗಬ್ರಿಯೇಲ ದೇವದೂತನು ಅವಳಿಗೆ ತಿಳಿಸಿದನು. ಆಕೆ ಗರ್ಭಿಣಿಯಾಗುವಂತೆ ಯೆಹೋವನು ಒಂದು ದೊಡ್ಡ ಅದ್ಭುತವನ್ನು ಮಾಡಿದನು. ಆ ದೂತನು ಮರಿಯಳಿಗೆ ಅಂದದ್ದು: “ಮಹೋನ್ನತನ ಶಕ್ತಿಯು ನಿನ್ನನ್ನು ಆವರಿಸುವುದು. ಈ ಕಾರಣದಿಂದ ಹುಟ್ಟುವವನು ಪವಿತ್ರನೆಂದೂ ದೇವರ ಮಗನೆಂದೂ ಕರೆಯಲ್ಪಡುವನು.”—ಲೂಕ 1:30-35.

ದೇವರು ಸ್ವರ್ಗದಲ್ಲಿದ್ದ ತನ್ನ ಮಗನ ಜೀವವನ್ನು ಮರಿಯಳ ಗರ್ಭಕ್ಕೆ ವರ್ಗಾಯಿಸಿದನು. ಆಗ ಆ ಜೀವವು ಬೇರೆಲ್ಲ ಶಿಶುಗಳು ಹೇಗೆ ತಾಯಿಯ ಗರ್ಭದಲ್ಲಿ ಬೆಳೆಯುತ್ತವೋ ಹಾಗೆ ಮರಿಯಳ ಗರ್ಭದಲ್ಲಿ ಬೆಳೆಯಿತು. ಒಂಬತ್ತು ತಿಂಗಳ ನಂತರ ಯೇಸು ಹುಟ್ಟಿದನು. ಅಷ್ಟರಲ್ಲಿ ಯೋಸೇಫನು ಮರಿಯಳನ್ನು ಮದುವೆಯಾಗಿದ್ದನು. ಆದ್ದರಿಂದಲೇ ಅನೇಕ ಜನರು ಯೋಸೇಫನೇ ಯೇಸುವಿನ ನಿಜವಾದ ತಂದೆಯೆಂದು ನೆನಸುತ್ತಾರೆ. ನಿಜವೇನೆಂದರೆ ಯೋಸೇಫನು ಯೇಸುವಿನ ಸಾಕುತಂದೆ. ಆದುದರಿಂದ ಯೇಸುವಿಗೆ ಇಬ್ಬರು ತಂದೆಯರು ಇದ್ದರೆಂದು ಹೇಳಬಹುದು!

ಕೇವಲ 12 ವರ್ಷದವನಾಗಿದ್ದಾಗ ಯೇಸು ಮಾಡಿದ ಒಂದು ಸಂಗತಿ ಸ್ವರ್ಗದಲ್ಲಿರುವ ಅವನ ತಂದೆಯಾದ ಯೆಹೋವನನ್ನು ಅವನೆಷ್ಟು ಪ್ರೀತಿಸುತ್ತಾನೆಂದು ತೋರಿಸಿಕೊಟ್ಟಿತು. ನಡೆದದ್ದೇನೆಂದರೆ, ವಾಡಿಕೆಗನುಸಾರ ಯೇಸುವಿನ ಕುಟುಂಬವು ಪಸ್ಕಹಬ್ಬದ ಆಚರಣೆಗೆಂದು ದೂರದ ಯೆರೂಸಲೇಮಿಗೆ ಪ್ರಯಾಣಿಸಿತ್ತು. ಹಬ್ಬ ಮುಗಿಸಿ ತಮ್ಮ ಊರಾದ ನಜರೇತಿಗೆ ಹಿಂತಿರುಗುವಾಗ ಬಾಲಕ ಯೇಸು ತಮ್ಮೊಂದಿಗಿಲ್ಲ ಎಂಬುದನ್ನು ಯೋಸೇಫ ಮತ್ತು ಮರಿಯ ಅಷ್ಟಾಗಿ ಗಮನಿಸಿರಲಿಲ್ಲ. ‘ಅಯ್ಯೋ, ಮಗನನ್ನು ಹೇಗೆ ಮರೆಯಕ್ಕಾಗುತ್ತೆ’ ಅಂತಿಯಾ?—

ನೋಡು, ಅಷ್ಟರೊಳಗೆ ಯೋಸೇಫ-ಮರಿಯಳಿಗೆ ಬೇರೆ ಮಕ್ಕಳು ಹುಟ್ಟಿದ್ದರು. (ಮತ್ತಾಯ 13:55, 56) ಈ ಮಕ್ಕಳಲ್ಲದೆ ಅವರೊಂದಿಗೆ ಅವರ ಸಂಬಂಧಿಕರೂ ಪ್ರಯಾಣಿಸುತ್ತಿದ್ದಿರಬಹುದು. ಪ್ರಾಯಶಃ ಮರಿಯಳ ಸಹೋದರಿಯಾಗಿದ್ದ ಸಲೋಮೆ ಆಕೆಯ ಗಂಡ ಜೆಬೆದಾಯ ಮತ್ತು ಅವರ ಮಕ್ಕಳಾದ ಯಾಕೋಬ, ಯೋಹಾನರು ಜೊತೆಯಲ್ಲಿದ್ದಿರಬಹುದು. ಆದ್ದರಿಂದ ಗುಂಪಿನಲ್ಲಿದ್ದ ಇತರ ಸಂಬಂಧಿಕರೊಂದಿಗೆ ಯೇಸು ಇದ್ದಾನೆಂದು ಮರಿಯಳು ನೆನೆಸಿದ್ದಿರಬೇಕು.—ಮತ್ತಾಯ 27:56; ಮಾರ್ಕ 15:40; ಯೋಹಾನ 19:25.

ಆದರೆ ಯೇಸು ಅವರೊಂದಿಗೆ ಇಲ್ಲವೆಂದು ಯೋಸೇಫ ಮತ್ತು ಮರಿಯಳಿಗೆ ತಿಳಿದೊಡನೆ ಅವರು ಪುನಃ ಯೆರೂಸಲೇಮಿಗೆ ಧಾವಿಸಿದರು. ಅಲ್ಲಿಇಲ್ಲಿ ಅಂತ ಎಲ್ಲ ಕಡೆ ತಮ್ಮ ಮಗನಿಗಾಗಿ ಹುಡುಕಿದರು. ಮೂರನೇ ದಿನ ದೇವಾಲಯದಲ್ಲಿ ಅವನು ಸಿಕ್ಕಿದನು. ಮರಿಯಳು ಅವನಿಗೆ, “ನೀನು ಏಕೆ ಹೀಗೆ ಮಾಡಿದೆ? ನಿನ್ನ ತಂದೆಯೂ ನಾನೂ ಎಷ್ಟೋ ಮನೋವ್ಯಥೆಯಿಂದ ನಿನ್ನನ್ನು ಹುಡುಕುತ್ತಾ ಇದ್ದೆವು” ಎಂದು ಹೇಳಿದಳು. ಅದಕ್ಕೆ ಯೇಸು, “ನೀವು ನನ್ನನ್ನು ಹುಡುಕುತ್ತಾ ಹೋದದ್ದೇಕೆ? ನಾನು ನನ್ನ ತಂದೆಯ ಮನೆಯಲ್ಲಿರಬೇಕು ಎಂಬುದು ನಿಮಗೆ ತಿಳಿದಿರಲಿಲ್ಲವೊ?” ಎಂದನು.—ಲೂಕ 2:45-50.

ಯೇಸು ತನ್ನ ತಾಯಿಗೆ ಹಾಗೆ ಉತ್ತರ ಕೊಟ್ಟದ್ದು ತಪ್ಪೆಂದು ನಿನಗನಿಸುತ್ತದಾ?— ಆದರೆ ಅವನಿಗೆ ದೇವಾಲಯವೆಂದರೆ ತುಂಬ ಇಷ್ಟವೆಂದು ಅವನ ಹೆತ್ತವರಿಗೆ ತಿಳಿದಿತ್ತು. (ಕೀರ್ತನೆ 122:1) ಆದ್ದರಿಂದಲೇ ಅವರು ತನಗಾಗಿ ಅಲ್ಲಿಇಲ್ಲಿ ಹುಡುಕುವುದಕ್ಕಿಂತ ಮೊದಲು ದೇವರ ಆಲಯದಲ್ಲಿ ಹುಡುಕಬೇಕಿತ್ತಲ್ಲಾ ಎಂದು ಯೇಸು ನೆನಸಿದ್ದು ಸಹಜವೇ. ಬಳಿಕ ಯೇಸು ಹೇಳಿದ ಮಾತನ್ನು ಮರಿಯಳು ಯೋಚಿಸುತ್ತಾ ಇದ್ದಳು.

ಯೋಸೇಫ ಮತ್ತು ಮರಿಯಳ ಬಗ್ಗೆ ಯೇಸುವಿಗೆ ಯಾವ ಮನೋಭಾವವಿತ್ತು?— “[ಯೇಸು] ಅವರೊಂದಿಗೆ ನಜರೇತಿಗೆ ಬಂದು ಅವರಿಗೆ ಅಧೀನನಾಗಿ ಮುಂದುವರಿದನು” ಎನ್ನುತ್ತದೆ ಬೈಬಲ್‌. (ಲೂಕ 2:51, 52) ಯೇಸುವಿನ ಮಾದರಿಯಿಂದ ನಾವು ಯಾವ ಪಾಠ ಕಲಿಯುತ್ತೇವೆ?— ಹೌದು, ನಮ್ಮ ಅಪ್ಪಅಮ್ಮಗೆ ನಾವು ವಿಧೇಯರಾಗಿರಬೇಕು.

ವಿಧೇಯತೆ ತೋರಿಸುವುದು, ಹೌದು ತನ್ನ ಸ್ವರ್ಗೀಯ ತಂದೆಗೆ ವಿಧೇಯನಾಗಿರುವುದೂ ಯೇಸುವಿಗೆ ಯಾವಾಗಲೂ ಸುಲಭವಾಗಿರಲಿಲ್ಲ.

ಯೆಹೋವ ದೇವರು ತನಗೆ ಕೊಟ್ಟಿದ್ದ ನೇಮಕದ ವಿಷಯದಲ್ಲಿ ಮನಸ್ಸನ್ನು ಬದಲಾಯಿಸಿಕೊಳ್ಳುವಂತೆ ಯೇಸು ತಾನು ಸಾಯುವ ಹಿಂದಿನ ರಾತ್ರಿ ಆತನಿಗೆ ಬೇಡಿದನು. (ಲೂಕ 22:42) ಎಷ್ಟೇ ಕಷ್ಟವಾದರೂ ದೇವರಿಗೆ ವಿಧೇಯನಾದನು. “ಅವನು . . . ತಾನು ಅನುಭವಿಸಿದ ಬಾಧೆಗಳಿಂದಲೇ ವಿಧೇಯತೆಯನ್ನು ಕಲಿತುಕೊಂಡನು” ಎಂದು ಬೈಬಲ್‌ ತಿಳಿಸುತ್ತದೆ. (ಇಬ್ರಿಯ 5:8) ನಾವು ಕೂಡ ಎಷ್ಟೇ ಕಷ್ಟವಾದರೂ ವಿಧೇಯರಾಗಲು ಕಲಿಯಬೇಕು ಅಲ್ಲವೇ? ನೀನೇನು ನೆನಸುತ್ತೀ ಪುಟ್ಟಾ?— (w10-E 04/01)

[ಪಾದಟಿಪ್ಪಣಿ]

a ಈ ಲೇಖನವನ್ನು ನೀವು ಚಿಕ್ಕ ಮಗುವಿಗೆ ಓದಿಹೇಳುತ್ತಿರುವುದಾದರೆ ಅಡ್ಡಗೆರೆ ಇರುವಲ್ಲಿ ಸ್ವಲ್ಪ ನಿಲ್ಲಿಸಿ ಮಗು ಉತ್ತರ ಹೇಳುವಂತೆ ಪ್ರೋತ್ಸಾಹಿಸಿರಿ.

ಪ್ರಶ್ನೆಗಳು:

▪ ಮರಿಯಳು ಯೇಸುವಿನ ತಾಯಿಯಾದದ್ದು ಹೇಗೆ, ಮತ್ತು ಒಂದರ್ಥದಲ್ಲಿ ಯೇಸುವಿಗೆ ಹೇಗೆ ಇಬ್ಬರು ತಂದೆಯರು ಇದ್ದರು?

▪ ಪ್ರಯಾಣಮಾಡುವಾಗ ಯೇಸು ತಮ್ಮೊಂದಿಗಿಲ್ಲವೆಂದು ಅವನ ಹೆತ್ತವರಿಗೆ ಏಕೆ ಗೊತ್ತಾಗಲಿಲ್ಲ?

▪ ಹೆತ್ತವರು ತನ್ನನ್ನು ಎಲ್ಲಿ ಹುಡುಕುವರೆಂದು ಯೇಸು ಎಣಿಸಿದ್ದನು?

▪ ಯೇಸುವಿನ ಮಾದರಿಯಿಂದ ನೀನು ಯಾವ ಪಾಠ ಕಲಿತೆ?

[ಪುಟ 31ರಲ್ಲಿರುವ ಚಿತ್ರ]

ಯೋಸೇಫ ಮತ್ತು ಮರಿಯಳು ಯೇಸುವಿಗಾಗಿ ಮೊದಲು ದೇವಾಲಯದಲ್ಲಿ ಹುಡುಕಬೇಕಿತ್ತೆಂದು ನೀನು ಏಕೆ ನೆನಸುತ್ತೀ?

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ