ವಾಚಕರಿಂದ ಪ್ರಶ್ನೆಗಳು
ಪಾಪಿಷ್ಠಳೆಂದು ಕುಪ್ರಸಿದ್ಧಳಾಗಿದ್ದ ಒಬ್ಬಾಕೆ ಸ್ತ್ರೀಯ ಪಾಪಗಳು ಕ್ಷಮಿಸಲ್ಪಟ್ಟಿವೆ ಎಂದು ಯೇಸು ಹೇಳಸಾಧ್ಯವಾದದ್ದು ಹೇಗೆ?—ಲೂಕ 7:37, 48.
ಸಿಮೋನನೆಂಬ ಫರಿಸಾಯನ ಮನೆಯಲ್ಲಿ ಯೇಸು ಊಟಕ್ಕೆ ಕುಳಿತುಕೊಂಡಿದ್ದಾಗ ಒಬ್ಬಾಕೆ ಸ್ತ್ರೀ ‘ಯೇಸುವಿನ ಹಿಂದೆ ಅವನ ಪಾದಗಳ ಬಳಿಯಲ್ಲಿ ಕುಳಿತುಕೊಂಡಳು.’ ಅವಳು ತನ್ನ ಕಣ್ಣೀರಿನಿಂದ ಅವನ ಪಾದಗಳನ್ನು ತೇವಮಾಡಿ ತನ್ನ ತಲೇಗೂದಲಿನಿಂದ ಅವುಗಳನ್ನು ಒರಸಿದಳು. ಅನಂತರ ಅವನ ಪಾದಗಳಿಗೆ ಕೋಮಲವಾಗಿ ಮುದ್ದಿಟ್ಟು ಅವುಗಳಿಗೆ ಸುಗಂಧ ತೈಲವನ್ನು ಹಚ್ಚಿದಳು. ಆ ಸ್ತ್ರೀಯು ‘ಪಾಪಿಷ್ಠಳೆಂದು ಊರಿನಲ್ಲೆಲ್ಲ ಪ್ರಸಿದ್ಧಳಾಗಿದ್ದಳು’ ಎಂದು ಸುವಾರ್ತಾ ವೃತ್ತಾಂತವು ತಿಳಿಸುತ್ತದೆ. ಪ್ರತಿಯೊಬ್ಬ ಅಪರಿಪೂರ್ಣ ಮಾನವನು ಪಾಪಿಯಾಗಿದ್ದರೂ, “ಪಾಪಿಷ್ಠ” ಎಂಬ ಈ ಪದರೂಪವನ್ನು ಶಾಸ್ತ್ರಗ್ರಂಥವು ಸಾಮಾನ್ಯವಾಗಿ ಪಾಪಕ್ಕೆ ಕುಪ್ರಸಿದ್ಧನಾದ ಅಥವಾ ಪಾಪಕೃತ್ಯಗಳಿಗೆ ಹೆಸರುಗೊಂಡ ವ್ಯಕ್ತಿಯನ್ನು ವರ್ಣಿಸುವಾಗ ಉಪಯೋಗಿಸುತ್ತದೆ. ಆ ಸ್ತ್ರೀಯು ಒಬ್ಬಾಕೆ ವೇಶ್ಯೆಯಾಗಿದ್ದಳೆಂದು ತೋರುತ್ತದೆ. ಇಂಥವಳಿಗೇ “ನಿನ್ನ ಪಾಪಗಳು ಕ್ಷಮಿಸಲ್ಪಟ್ಟಿವೆ” ಎಂದು ಯೇಸು ಹೇಳಿದನು. (ಲೂಕ 7:36-38, 48) ಯೇಸು ಹಾಗೆ ಹೇಳಿದ್ದರ ಅರ್ಥವೇನು? ವಿಮೋಚನಾ ಮೌಲ್ಯದ ಯಜ್ಞವು ಇನ್ನೂ ನೀಡಲ್ಪಡದೇ ಇದ್ದಾಗ ಆ ಕ್ಷಮಾಪಣೆಯನ್ನು ನೀಡಲು ಹೇಗೆ ಸಾಧ್ಯ?
ಯೇಸುವಿನ ಪಾದಗಳನ್ನು ತೇವಮಾಡಿ ಅದಕ್ಕೆ ತೈಲ ಹಚ್ಚಿದ ಬಳಿಕ, ಆದರೆ ಅವಳ ಪಾಪಗಳು ಕ್ಷಮಿಸಲ್ಪಟ್ಟಿವೆ ಎಂದು ಹೇಳುವ ಮೊದಲು ಯೇಸು ಒಂದು ಸಾಮ್ಯವನ್ನು ಉಪಯೋಗಿಸಿದನು. ಆ ಮೂಲಕ ತನ್ನ ಆತಿಥೇಯ ಸಿಮೋನನಿಗೆ ಒಂದು ಮಹತ್ವದ ವಿಷಯವನ್ನು ವಿವರಿಸಿದನು. ಮರುಸಲ್ಲಿಸಲು ತೀರ ದೊಡ್ಡದಾದ ಸಾಲವನ್ನು ಪಾಪಕ್ಕೆ ಹೋಲಿಸುತ್ತಾ ಯೇಸು ಸಿಮೋನನಿಗೆ ಹೇಳಿದ್ದು: “ಸಾಲಕೊಡುತ್ತಿದ್ದ ಒಬ್ಬನಿಗೆ ಇಬ್ಬರು ಸಾಲಗಾರರಿದ್ದರು; ಒಬ್ಬನು ಐನೂರು ದಿನಾರುಗಳನ್ನೂ ಇನ್ನೊಬ್ಬನು ಐವತ್ತು ದಿನಾರುಗಳನ್ನೂ ಕೊಡಬೇಕಾಗಿತ್ತು. ಆ ಸಾಲವನ್ನು ತೀರಿಸಲು ಅವರ ಬಳಿ ಏನೂ ಇರಲಿಲ್ಲವಾದ್ದರಿಂದ ಅವನು ಅವರಿಬ್ಬರ ಸಾಲವನ್ನೂ ರದ್ದುಮಾಡಿದನು. ಹೀಗಿರುವಾಗ ಅವರಲ್ಲಿ ಯಾರು ಅವನನ್ನು ಹೆಚ್ಚಾಗಿ ಪ್ರೀತಿಸುವರು?” ಸಿಮೋನನು ಉತ್ತರ ಕೊಡುತ್ತಾ, “ಯಾರಿಗೆ ಹೆಚ್ಚು ರದ್ದುಮಾಡಲ್ಪಟ್ಟಿತೋ ಅವನೇ ಎಂದು ನೆನಸುತ್ತೇನೆ” ಎಂದು ಹೇಳಿದನು. ಅದಕ್ಕೆ ಯೇಸು “ನೀನು ಸರಿಯಾಗಿ ತೀರ್ಪುಮಾಡಿದಿ” ಎಂದು ಉತ್ತರಿಸಿದನು. (ಲೂಕ 7:41-43) ನಮಗೆಲ್ಲರಿಗೂ ದೇವರಿಗೆ ಸಲ್ಲಿಸಬೇಕಾದ ವಿಧೇಯತೆ ಎಂಬ ಸಾಲವಿದೆ. ನಾವು ಅವಿಧೇಯರಾಗಿ ಪಾಪಮಾಡುವಾಗ, ದೇವರಿಗೆ ಸಲ್ಲತಕ್ಕ ಆ ಸಾಲವನ್ನು ಸಲ್ಲಿಸಲು ವಿಫಲರಾಗುತ್ತೇವೆ. ಹೀಗೆ ನಮ್ಮ ಸಾಲವು ಹೆಚ್ಚುತ್ತಾ ಹೆಚ್ಚುತ್ತಾ ಬರುತ್ತದೆ. ಆದರೂ ಯೆಹೋವನು ನಮ್ಮ ಸಾಲಗಳನ್ನು ಮನ್ನಿಸಲು ಸಿದ್ಧಮನಸ್ಕನಾಗಿರುವ ಸಾಲದಾತನಂತಿದ್ದಾನೆ. ಈ ಸಾಲದಂತಿರುವ ಪಾಪಕ್ಕೆ ಸೂಚಿಸುತ್ತಾ ಯೇಸು, “ನಮ್ಮ ಪಾಪಗಳನ್ನು ಕ್ಷಮಿಸು, ಏಕೆಂದರೆ ನಾವು ಸಹ ನಮಗೆ ಪಾಪಮಾಡಿದವರನ್ನು ಕ್ಷಮಿಸುತ್ತೇವೆ” ಎಂದು ತನ್ನ ಹಿಂಬಾಲಕರು ದೇವರಿಗೆ ಪ್ರಾರ್ಥಿಸುವಂತೆ ಉತ್ತೇಜಿಸಿದನು.—ಮತ್ತಾ. 6:12.
ಪುರಾತನ ಕಾಲದಲ್ಲಿ ದೇವರು ಪಾಪಗಳನ್ನು ಯಾವ ಷರತ್ತುಗಳ ಮೇಲೆ ಕ್ಷಮಿಸಿದ್ದನು? ಪಾಪಕ್ಕೆ ತೆರಬೇಕಾದ ದಂಡನೆ ಮರಣ ಎಂದು ಆತನ ಪರಿಪೂರ್ಣ ನ್ಯಾಯವು ಅವಶ್ಯಪಡಿಸುತ್ತದೆ. ಹೀಗೆ ಆದಾಮನು ತನ್ನ ಪಾಪಕ್ಕಾಗಿ ತನ್ನ ಜೀವವನ್ನು ದಂಡವಾಗಿ ತೆತ್ತನು. ಇಸ್ರಾಯೇಲ್ ಜನಾಂಗಕ್ಕೆ ದೇವರು ಕೊಟ್ಟ ಧರ್ಮಶಾಸ್ತ್ರದ ಕೆಳಗಾದರೋ, ಪಾಪಿಯೊಬ್ಬನು ಯೆಹೋವನಿಗೆ ಒಂದು ಪ್ರಾಣಿಯನ್ನು ಯಜ್ಞವಾಗಿ ಅರ್ಪಿಸುವ ಮೂಲಕ ತನ್ನ ಪಾಪಗಳಿಗೆ ಕ್ಷಮಾಪಣೆ ಪಡೆಯಸಾಧ್ಯವಿತ್ತು. ಅಪೊಸ್ತಲ ಪೌಲನು ಗಮನಿಸಿದ್ದು: “ಧರ್ಮಶಾಸ್ತ್ರಕ್ಕನುಸಾರ ರಕ್ತದ ಮೂಲಕ ಬಹುಮಟ್ಟಿಗೆ ಎಲ್ಲವೂ ಶುದ್ಧೀಕರಿಸಲ್ಪಡುತ್ತದೆ ಮತ್ತು ರಕ್ತವು ಸುರಿಸಲ್ಪಡದೆ ಕ್ಷಮಾಪಣೆಯು ಉಂಟಾಗುವುದಿಲ್ಲ.” (ಇಬ್ರಿ. 9:22) ದೇವರಿಂದ ಕ್ಷಮೆಯನ್ನು ಪಡೆಯಲು ಸಾಧ್ಯವಿರುವ ಬೇರೆ ಯಾವುದೇ ಮಾರ್ಗವು ಯೆಹೂದ್ಯರಿಗೆ ತಿಳಿದಿರಲಿಲ್ಲ. ಹಾಗಾಗಿಯೇ, ಯೇಸು ಆ ಸ್ತ್ರೀಗೆ “ನಿನ್ನ ಪಾಪಗಳು ಕ್ಷಮಿಸಲ್ಪಟ್ಟಿವೆ” ಎಂದು ಹೇಳಿದಾಗ ಅಲ್ಲಿದ್ದವರು ಅದಕ್ಕೆ ಆಕ್ಷೇಪಿಸಿದ್ದರಲ್ಲಿ ಆಶ್ಚರ್ಯವೇನಿಲ್ಲ. ಯೇಸುವಿನೊಂದಿಗೆ ಊಟಕ್ಕೆ ಕುಳಿತುಕೊಂಡಿದ್ದವರು ಸಹ ತಮ್ಮೊಳಗೆ, “ಪಾಪಗಳನ್ನು ಸಹ ಕ್ಷಮಿಸುವವನಾದ ಈ ಮನುಷ್ಯನು ಯಾರು?” ಎಂದು ಅಂದುಕೊಂಡರು. (ಲೂಕ 7:49) ಹೀಗಿರಲಾಗಿ, ಪಾಪಿಷ್ಠೆಯಾಗಿದ್ದ ಆ ಸ್ತ್ರೀಯ ಪಾಪಗಳು ಕ್ಷಮಿಸಲ್ಪಡಸಾಧ್ಯವಾದದ್ದು ಯಾವ ಆಧಾರದ ಮೇಲೆ?
ಆದಿ ಮಾನವ ದಂಪತಿ ದಂಗೆಯೆದ್ದ ಮೇಲೆ ನುಡಿಯಲ್ಪಟ್ಟ ಪ್ರಪ್ರಥಮ ಪ್ರವಾದನೆಯು ಒಂದು ‘ಸಂತಾನವನ್ನು’ ಎಬ್ಬಿಸುವ ಯೆಹೋವನ ಉದ್ದೇಶವನ್ನು ತಿಳಿಸಿತು. ಆ ಸಂತಾನದ ಹಿಮ್ಮಡಿಯು ಸೈತಾನನಿಂದ ಮತ್ತು ಅವನ ‘ಸಂತಾನದಿಂದ’ ಕಚ್ಚಲ್ಪಡಲಿತ್ತು. (ಆದಿ. 3:15) ಈ ಹಿಮ್ಮಡಿಯ ಕಚ್ಚುವಿಕೆಯು ಸಂಭವಿಸಿದ್ದು ಯೇಸು ದೇವರ ಶತ್ರುಗಳಿಂದ ಕೊಲ್ಲಲ್ಪಟ್ಟಾಗಲೇ. (ಗಲಾ. 3:13, 16) ಕ್ರಿಸ್ತನ ಸುರಿದ ರಕ್ತವು ಮಾನವಕುಲವನ್ನು ಪಾಪ ಮತ್ತು ಮರಣದಿಂದ ಬಿಡುಗಡೆಮಾಡುವ ವಿಮೋಚನಾ ಮೌಲ್ಯವಾಗಿ ಕಾರ್ಯನಡಿಸುತ್ತದೆ. ತಾನು ಉದ್ದೇಶಿಸಿದ್ದನ್ನು ನೆರವೇರಿಸದಂತೆ ಯೆಹೋವನನ್ನು ತಡೆಯಲು ಯಾವುದೂ ಶಕ್ತವಲ್ಲವಾದ್ದರಿಂದ, ಆದಿಕಾಂಡ 3:15ರಲ್ಲಿ ದಾಖಲೆಯಾದ ಮಾತುಗಳು ನುಡಿಯಲ್ಪಟ್ಟ ಕೂಡಲೆ, ದೇವರ ದೃಷ್ಟಿಯಲ್ಲಿ ಆ ವಿಮೋಚನಾ ಮೌಲ್ಯವು ಈಗಾಗಲೇ ನೀಡಲ್ಪಟ್ಟಿತ್ತೊ ಎಂಬಂತಿತ್ತು. ಆತನೀಗ ತನ್ನ ವಾಗ್ದಾನಗಳಲ್ಲಿ ನಂಬಿಕೆಯಿಡುವವರ ಪಾಪಗಳನ್ನು ಕ್ಷಮಿಸಸಾಧ್ಯವಿತ್ತು.
ಕ್ರೈಸ್ತಪೂರ್ವ ಸಮಯಗಳಲ್ಲಿ ಯೆಹೋವನು ಅನೇಕ ವ್ಯಕ್ತಿಗಳನ್ನು ನೀತಿವಂತರಾಗಿ ಎಣಿಸಿದನು. ಅವರಲ್ಲಿ ಹನೋಕ, ನೋಹ, ಅಬ್ರಹಾಮ, ರಾಹಾಬ ಮತ್ತು ಯೋಬರು ಸೇರಿದ್ದರು. ನಂಬಿಕೆಯಿಂದ ಅವರು ದೇವರ ವಾಗ್ದಾನಗಳ ನೆರವೇರಿಕೆಗಾಗಿ ಮುನ್ನೋಡಿದರು. ಶಿಷ್ಯ ಯಾಕೋಬನು ಬರೆದುದು: “ಅಬ್ರಹಾಮನು ಯೆಹೋವನಲ್ಲಿ ನಂಬಿಕೆಯನ್ನಿಟ್ಟನು ಮತ್ತು ಅದು ಅವನ ಲೆಕ್ಕಕ್ಕೆ ನೀತಿಯೆಂದು ಎಣಿಸಲ್ಪಟ್ಟಿತು.” ರಾಹಾಬಳ ಕುರಿತು ಯಾಕೋಬನು ಹೇಳಿದ್ದು: “ರಾಹಾಬಳು ಸಹ . . . ಕ್ರಿಯೆಗಳ ಮೂಲಕ ನೀತಿವಂತಳೆಂದು ನಿರ್ಣಯಿಸಲ್ಪಟ್ಟಳಲ್ಲವೆ?”—ಯಾಕೋ. 2:21-25.
ಪುರಾತನ ಇಸ್ರಾಯೇಲಿನ ರಾಜ ದಾವೀದನು ಅನೇಕ ಗಂಭೀರ ಪಾಪಗಳನ್ನು ಮಾಡಿದನು. ಆದರೆ ಸತ್ಯ ದೇವರಲ್ಲಿ ಅವನಿಗೆ ದೃಢವಾದ ನಂಬಿಕೆಯಿತ್ತು ಮತ್ತು ಅವನು ಪ್ರತಿ ಸಂದರ್ಭದಲ್ಲಿ ನಿಜ ಪಶ್ಚಾತ್ತಾಪವನ್ನು ತೋರಿಸಿದನು. ಅದಲ್ಲದೆ ಶಾಸ್ತ್ರಗ್ರಂಥವು ಹೇಳುವುದು: “ದೇವರು ಪಾಪನಿವಾರಣ ಯಜ್ಞವಾಗಿ [ಯೇಸುವನ್ನು] ಇಟ್ಟನು; ಪಾಪನಿವಾರಣೆಯು ಅವನ ರಕ್ತದಲ್ಲಿ ನಂಬಿಕೆಯಿಡುವ ಮೂಲಕ ದೊರಕುವುದು. ದೇವರು ತನ್ನ ಸ್ವಂತ ನೀತಿಯನ್ನು ತೋರ್ಪಡಿಸುವುದಕ್ಕಾಗಿಯೇ ಇದನ್ನು ಮಾಡಿದನು, ಏಕೆಂದರೆ ದೇವರು ಸಹನಶೀಲತೆಯನ್ನು ತೋರಿಸುತ್ತಿದ್ದಾಗ ಪೂರ್ವದಲ್ಲಿ ಸಂಭವಿಸಿದ ಪಾಪಗಳನ್ನು ಕ್ಷಮಿಸುತ್ತಿದ್ದನು; ಆದುದರಿಂದ ಯೇಸುವಿನಲ್ಲಿ ನಂಬಿಕೆಯಿಟ್ಟಿರುವ ಮನುಷ್ಯನನ್ನು ನೀತಿವಂತನೆಂದು ನಿರ್ಣಯಿಸುವಾಗಲೂ ದೇವರು ತನ್ನನ್ನು ನೀತಿವಂತನಾಗಿ ತೋರಿಸಿಕೊಳ್ಳಲು ತನ್ನ ಸ್ವಂತ ನೀತಿಯನ್ನು ಈ ವರ್ತಮಾನಕಾಲದಲ್ಲಿ ತೋರ್ಪಡಿಸಿದ್ದಾನೆ.” (ರೋಮ. 3:25, 26) ಹೀಗೆ ನ್ಯಾಯದ ವಿಷಯದಲ್ಲಿ ತನ್ನ ಅವಶ್ಯಕತೆಗಳ ಬಗ್ಗೆ ಸಂಧಾನ ಮಾಡದೆಯೇ ಯೆಹೋವನು ದಾವೀದನ ಪಾಪಗಳನ್ನು ಭವಿಷ್ಯತ್ತಿನಲ್ಲಿ ಒದಗಿಸಲ್ಪಡಲಿದ್ದ ಯೇಸುವಿನ ವಿಮೋಚನಾ ಮೌಲ್ಯ ಯಜ್ಞದ ಆಧಾರದ ಮೇಲೆ ಕ್ಷಮಿಸಸಾಧ್ಯವಿತ್ತು.
ಯೇಸುವಿನ ಪಾದಗಳಿಗೆ ತೈಲ ಹಚ್ಚಿದ ಆ ಸ್ತ್ರೀಯ ಸನ್ನಿವೇಶವು ಇದೇ ರೀತಿ ಇತ್ತೆಂಬುದು ವ್ಯಕ್ತ. ಅವಳು ಅನೈತಿಕ ಜೀವನವನ್ನು ನಡೆಸಿದ್ದಳು; ಆದರೆ ಪಶ್ಚಾತ್ತಾಪಪಟ್ಟಿದ್ದಳು. ಪಾಪದಿಂದ ಬಿಡುಗಡೆಹೊಂದುವ ಅಗತ್ಯವನ್ನು ಅವಳು ಮನಗಂಡಳು ಮತ್ತು ಯೆಹೋವನು ಆ ಬಿಡುಗಡೆಯನ್ನು ಯಾರ ಮೂಲಕ ಒದಗಿಸಿದನೋ ಆ ವ್ಯಕ್ತಿಯನ್ನು ನಿಜವಾಗಿಯೂ ಗಣ್ಯಮಾಡಿದ್ದಳೆಂದು ತನ್ನ ಕ್ರಿಯೆಗಳಿಂದ ತೋರಿಸಿದಳು. ಆ ಯಜ್ಞವು ಭವಿಷ್ಯತ್ತಿನಲ್ಲಿ ನೀಡಲ್ಪಡಲಿದ್ದರೂ ಅದೆಷ್ಟು ಖಾತ್ರಿದಾಯಕವಾಗಿತ್ತೆಂದರೆ ಅದರ ಬೆಲೆಯು ಅವಳಂಥ ವ್ಯಕ್ತಿಗಳಿಗೆ ಆ ಮೊದಲೇ ಅನ್ವಯಿಸಲ್ಪಡಸಾಧ್ಯವಿತ್ತು. ಆ ಕಾರಣದಿಂದಲೇ ಯೇಸು ಅವಳಿಗೆ, “ನಿನ್ನ ಪಾಪಗಳು ಕ್ಷಮಿಸಲ್ಪಟ್ಟಿವೆ” ಎಂದು ಹೇಳಿದನು.
ಈ ವೃತ್ತಾಂತವು ಸ್ಪಷ್ಟವಾಗಿ ತೋರಿಸುವ ಪ್ರಕಾರ ಯೇಸು ಪಾಪಿಗಳನ್ನು ತನ್ನಿಂದ ದೂರವಿಡಲಿಲ್ಲ. ಅವರಿಗೆ ಅವನು ಒಳ್ಳೇದನ್ನೇ ಮಾಡಿದನು. ಯೆಹೋವನು ಸಹ ಪಶ್ಚಾತ್ತಾಪಪಡುವ ಪಾಪಿಗಳನ್ನು ಕ್ಷಮಿಸಲು ಸಿದ್ಧನಾಗಿದ್ದಾನೆ. ಇದು ಅಪರಿಪೂರ್ಣ ಮಾನವರಾದ ನಮಗೆ ಎಂಥ ಆಶ್ಚರ್ಯಕರ ಹಾಗೂ ಹೃದಯಪ್ರೇರಕ ಆಶ್ವಾಸನೆ!
[ಪುಟ 7ರಲ್ಲಿರುವ ಚಿತ್ರ]
ಅದು ಅವರ ಲೆಕ್ಕಕ್ಕೆ ನೀತಿಯೆಂದು ಎಣಿಸಲ್ಪಟ್ಟಿತು