ಸೂತ್ರ 1
ಹಣ-ಸೊತ್ತನ್ನಲ್ಲ, ಜನರನ್ನು ಪ್ರೀತಿಸಿ
ಬೈಬಲ್ ಏನನ್ನುತ್ತದೆ? “ಹಣದ ಪ್ರೇಮವು ಎಲ್ಲ ರೀತಿಯ ಹಾನಿಕರವಾದ ವಿಷಯಗಳಿಗೆ ಮೂಲವಾಗಿದೆ.”—1 ತಿಮೊಥೆಯ 6:10.
ಸುಲಭವಲ್ಲ ಏಕೆ? ನಮ್ಮ ಬಳಿ ಏನಿದೆಯೋ ಅದು ಸಾಲದು ಎಂಬ ಅತೃಪ್ತ ಮನೋಭಾವವನ್ನು ಮೂಡಿಸಲು ಜಾಹೀರಾತುಗಾರರು ತುಂಬ ಪ್ರಯತ್ನಿಸುತ್ತಾರೆ. ನಾವು ಗಾಣದೆತ್ತಿನಂತೆ ದುಡಿದು ನವನವೀನವಾದ, ದೊಡ್ಡದೊಡ್ಡದಾದ, ಅತ್ಯಾಧುನಿಕ ವಸ್ತುಗಳನ್ನು ಖರೀದಿಸಲು ಹಣ ಸುರಿಯಬೇಕೆಂಬುದೇ ಅವರ ಉದ್ದೇಶ. ನಾವು ಹಣದ ಪ್ರೇಮಪಾಶದಲ್ಲಿ ಸುಲಭವಾಗಿ ಸಿಕ್ಕಿಬೀಳುವ ಸಾಧ್ಯತೆಯಿದೆ. ಆದರೆ ಹಣಪ್ರೇಮಿ ಎಂದಿಗೂ ಸಂತೃಪ್ತನಾಗಿರಲು ಸಾಧ್ಯವಿಲ್ಲ ಎಂದು ಬೈಬಲ್ ಎಚ್ಚರಿಸುತ್ತದೆ. “ಐಶ್ವರ್ಯವನ್ನು ಪ್ರೀತಿಸುವವನು ತನ್ನ ಆದಾಯದಿಂದ ತೃಪ್ತಿಗೊಳ್ಳನು” ಎಂದು ರಾಜ ಸೊಲೊಮೋನನು ಬರೆದನು.—ಪ್ರಸಂಗಿ 5:10, NIBV.
ನೀವೇನು ಮಾಡಬಹುದು? ಯೇಸು ಜನರನ್ನು ಪ್ರೀತಿಸಿದನು. ಹಾಗೆಯೇ ನೀವೂ ವಸ್ತುಗಳನ್ನಲ್ಲ ಜನರನ್ನು ಪ್ರೀತಿಸಲು ಕಲಿಯಿರಿ. ಯೇಸು ಜನರಿಗಾಗಿ ತನ್ನ ಬಳಿಯಿದ್ದ ಎಲ್ಲವನ್ನೂ ಕೊಡಲು ಸಿದ್ಧನಾದನು. ಪ್ರಾಣವನ್ನೂ ಕೊಟ್ಟನು. ಆತನು ಇಷ್ಟೆಲ್ಲ ಮಾಡಿದ್ದು ಜನರ ಮೇಲಿನ ಪ್ರೀತಿಯಿಂದಲೇ. (ಯೋಹಾನ 15:13) “ತೆಗೆದುಕೊಳ್ಳುವುದಕ್ಕಿಂತಲೂ ಕೊಡುವುದರಲ್ಲಿ ಹೆಚ್ಚಿನ ಸಂತೋಷವಿದೆ” ಎಂದನಾತ. (ಅ. ಕಾರ್ಯಗಳು 20:35) ನಾವು ನಮ್ಮ ಸಮಯ, ಸಂಪನ್ಮೂಲಗಳನ್ನು ಇತರರಿಗಾಗಿ ವ್ಯಯಿಸುವ ರೂಢಿಮಾಡಿಕೊಳ್ಳುವಲ್ಲಿ ನಮಗೂ ಜನರು ಅದನ್ನೇ ಮಾಡುವರು. “ಕೊಡುವುದನ್ನು ರೂಢಿಮಾಡಿಕೊಳ್ಳಿರಿ, ಆಗ ಜನರು ನಿಮಗೆ ಕೊಡುವರು” ಎಂದನು ಯೇಸು. (ಲೂಕ 6:38) ಹಣ-ಸೊತ್ತುಗಳ ಹಿಂದೆ ಹೋಗುವವರು ತಮಗೆ ತುಂಬ ವೇದನೆ ಹಾಗೂ ಕಷ್ಟಗಳನ್ನು ತಂದುಕೊಳ್ಳುತ್ತಾರೆ. (1 ತಿಮೊಥೆಯ 6:9, 10) ಆದರೆ ಜನರಿಗೆ ಪ್ರೀತಿ ತೋರಿಸಿ ಪ್ರೀತಿ ಪಡೆಯುವವರು ನಿಜ ಸಂತೃಪ್ತಿ ಗಳಿಸುತ್ತಾರೆ.
ಸರಳ ಜೀವನ ನಡೆಸುವುದರ ಬಗ್ಗೆ ನೀವು ಯೋಚಿಸಬಾರದೇಕೆ? ನೀವು ಖರೀದಿಸಬೇಕೆಂದಿರುವ ಇಲ್ಲವೆ ನಿಮ್ಮ ಬಳಿ ಈಗಾಗಲೇ ಇರುವ ವಸ್ತುಗಳನ್ನು ಕಡಿಮೆಗೊಳಿಸಬಲ್ಲಿರಾ? ಹಾಗೆ ಮಾಡುವಲ್ಲಿ ಜೀವನದ ಹೆಚ್ಚು ಪ್ರಾಮುಖ್ಯ ವಿಷಯಗಳಿಗೆ ಅಂದರೆ ನಿಮ್ಮಲ್ಲಿರುವ ಪ್ರತಿಯೊಂದನ್ನೂ ಒದಗಿಸಿದ ದೇವರ ಸೇವೆಮಾಡಲು ಹಾಗೂ ಜನರಿಗೆ ಸಹಾಯಮಾಡಲು ಬೇಕಾದ ಸಮಯ, ಶಕ್ತಿ ನಿಮ್ಮಲ್ಲಿರುವುದು.—ಮತ್ತಾಯ 6:24; ಅ. ಕಾರ್ಯಗಳು 17:28. (w10-E 11/01)
[ಪುಟ 4ರಲ್ಲಿರುವ ಚಿತ್ರ]
“ಕೊಡುವುದನ್ನು ರೂಢಿಮಾಡಿಕೊಳ್ಳಿರಿ, ಆಗ ಜನರು ನಿಮಗೆ ಕೊಡುವರು”