ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • w10 12/15 ಪು. 30-31
  • ವಾಚಕರಿಂದ ಪ್ರಶ್ನೆಗಳು

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ವಾಚಕರಿಂದ ಪ್ರಶ್ನೆಗಳು
  • ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2010
  • ಅನುರೂಪ ಮಾಹಿತಿ
  • ಸತ್ಯ ದೇವರೊಂದಿಗೆ ಅನ್ಯೋನ್ಯವಾಗಿ ನಡೆದವನು
    ಅವರ ನಂಬಿಕೆಯನ್ನು ಅನುಕರಿಸಿ
  • ನೋಹನು ದೇವರೊಂದಿಗೆ ನಡೆದನು ಎಂಬ ವಿಡಿಯೋದಿಂದ ಎಲ್ಲರೂ ಕಲಿಯಬಲ್ಲರು
    2002 ನಮ್ಮ ರಾಜ್ಯದ ಸೇವೆ
  • ನೋಹನ ನಂಬಿಕೆಯು ಲೋಕವನ್ನು ದಂಡನಾರ್ಹವೆಂದು ತೀರ್ಪುಕೊಡುತ್ತದೆ
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2001
  • ದೇವರು ಅವನನ್ನೂ ಅವನ ಕುಟುಂಬವನ್ನೂ ಕಾಪಾಡಿದನು
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2013
ಇನ್ನಷ್ಟು
ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2010
w10 12/15 ಪು. 30-31

ವಾಚಕರಿಂದ ಪ್ರಶ್ನೆಗಳು

ಆದಿಕಾಂಡ 6:3 ರಲ್ಲಿ ನಾವು ಓದುವುದು: “ನನ್ನ ಆತ್ಮವು ಮನುಷ್ಯರಲ್ಲಿ ಶಾಶ್ವತವಾಗಿರುವದಿಲ್ಲ; ಅವರು ಭ್ರಷ್ಟರಾದದರಿಂದ ಮರ್ತರೇ. ಅವರ ಆಯುಷ್ಯವು ನೂರ ಇಪ್ಪತ್ತು ವರುಷವಾಗಿರಲಿ.” ಯೆಹೋವನು ಮನುಷ್ಯರ ಆಯುಷ್ಯವನ್ನು 120 ವರ್ಷಕ್ಕೆ ಸೀಮಿತವಾಗಿಟ್ಟನೆಂದು ಇದರ ಅರ್ಥವೊ? ಬರಲಿದ್ದ ಜಲಪ್ರಳಯದ ಕುರಿತು ನೋಹನು ಅಷ್ಟು ವರ್ಷಗಳ ತನಕ ಸಾರಿದನೊ?

ಎರಡೂ ಪ್ರಶ್ನೆಗಳಿಗೆ ಉತ್ತರವು ‘ಇಲ್ಲ’ ಎಂದಾಗಿದೆ.

ಜಲಪ್ರಳಯಕ್ಕೆ ಮುಂಚೆ ಅನೇಕ ಜನರು ನೂರಾರು ವರ್ಷಗಳ ತನಕ ಜೀವಿಸಿದ್ದರು. ಪ್ರಳಯವು ಬಂದಾಗ ನೋಹನಿಗೆ 600 ವರ್ಷ ವಯಸ್ಸಾಗಿತ್ತು ಮತ್ತು ಅವನು 950 ವರ್ಷ ಬದುಕಿದನು. (ಆದಿ. 7:6; 9:29) ಜಲಪ್ರಳಯದ ನಂತರ ಜೀವಿಸಿದ ಕೆಲವರು ಸಹ 120ಕ್ಕಿಂತಲೂ ಹೆಚ್ಚು ವರ್ಷ ಬದುಕಿದ್ದರು. ಉದಾಹರಣೆಗೆ, ಅರ್ಪಕ್ಷದನು 438 ವಯಸ್ಸಿನಲ್ಲಿ ಮತ್ತು ಶೆಲಹನು 433 ವಯಸ್ಸಿನಲ್ಲಿ ಮೃತರಾದರು. (ಆದಿ. 11:10-15) ಆದರೂ ಮೋಶೆಯ ಸಮಯದೊಳಗೆ ಜನರ ಆಯುಷ್ಯವು 70 ಅಥವಾ 80ಕ್ಕೆ ಇಳಿದಿತ್ತು. (ಕೀರ್ತ. 90:10) ಹೀಗೆ ಆದಿಕಾಂಡ 6:3ರ ಹೇಳಿಕೆಯು ಮಾನವರಿಗೆ 120 ವರ್ಷಗಳ ಆಯುಷ್ಯದ ಒಂದು ಪರಿಮಿತಿಯನ್ನು ಇಡುತ್ತಿಲ್ಲ.

ಅದಲ್ಲದೆ, ಆ ವಚನದಲ್ಲಿರುವ ಮಾತು ದೇವರು ನೋಹನಿಗೆ ಹೇಳಿದ್ದಾಗಿತ್ತೋ? ಇನ್ನು 120 ವರ್ಷಗಳಲ್ಲಿ ನಾಶನವು ಬರುವುದೆಂದು ಇತರರಿಗೆ ಎಚ್ಚರಿಕೆ ನೀಡುವುದರ ಕುರಿತು ದೇವರು ಅವನಿಗೆ ಹೇಳುತ್ತಿದ್ದನೋ? ಇಲ್ಲ. ಹಲವಾರು ಸಂದರ್ಭಗಳಲ್ಲಿ ದೇವರು ನೋಹನೊಂದಿಗೆ ಮಾತನಾಡಿದ್ದನೆಂಬುದು ನಿಜ. ಇದೇ ವೃತ್ತಾಂತದ ಹತ್ತು ವಚನಗಳ ನಂತರ ನಾವು ಓದುವುದು: “ಆಗ ದೇವರು ನೋಹನಿಗೆ–ಎಲ್ಲಾ ದೇಹಿಗಳಿಗೂ ಅಂತ್ಯವನ್ನು ತೀರ್ಮಾನಿಸಿದ್ದೇನೆ; ಭೂಲೋಕವು ಅವರ ಅನ್ಯಾಯದಿಂದ ತುಂಬಿ ಅದೆ . . . ಎಂದು ಹೇಳಿದನು.” ಹಿಂಬಾಲಿಸಿದ ವರುಷಗಳಲ್ಲಿ ನೋಹನು ನಾವೆಯನ್ನು ಕಟ್ಟುವ ಮಹಾ ಕೆಲಸವನ್ನು ಕೈಗೊಂಡು ಮುಗಿಸಿದಾಗ “ಯೆಹೋವನು ನೋಹನಿಗೆ–ನೀನೂ ನಿನ್ನ ಮನೆಯವರೆಲ್ಲರೂ ನಾವೆಯಲ್ಲಿ ಸೇರಿರಿ . . . ಎಂದು ಹೇಳಿದನು.” (ಆದಿ. 6:13, 21; 7:1, 4) ಅಲ್ಲದೆ ದೇವರು ನೋಹನಿಗೆ ಇತರ ನಿರ್ದಿಷ್ಟ ವಿಷಯಗಳನ್ನು ತಿಳಿಸಿದ ಸಂದರ್ಭಗಳೂ ಇದ್ದವು.–ಆದಿ. 8:15; 9:1, 8, 17.

ಆದರೂ ಆದಿಕಾಂಡ 6:3ರಲ್ಲಿ ನಾವು ಓದುವ ವಿಷಯವು ಬೇರೆಯೇ. ಅದು ನೋಹನ ಕುರಿತೂ ತಿಳಿಸುವುದಿಲ್ಲ ಇಲ್ಲವೆ ದೇವರು ನೋಹನೊಂದಿಗೆ ಮಾತಾಡುತ್ತಿದ್ದನೆಂದೂ ತಿಳಿಸುವುದಿಲ್ಲ. ಅದನ್ನು ದೇವರ ಉದ್ದೇಶದ ಅಥವಾ ಸಂಕಲ್ಪದ ಒಂದು ಸಾಮಾನ್ಯ ಅಭಿವ್ಯಕ್ತಿಯಾಗಿ ನಾವು ಅರ್ಥಮಾಡಬಹುದು. (ಆದಿಕಾಂಡ 8:21ನ್ನು ಹೋಲಿಸಿ.) ಗಮನಾರ್ಹವಾಗಿ, ಆದಾಮನ ಸಮಯಕ್ಕೆ ಬಹಳ ಮುಂಚಿನ ಘಟನಾವಳಿಗಳ ಕುರಿತ ಚಾರಿತ್ರಿಕ ದಾಖಲೆಗಳಲ್ಲಿ “ಅನಂತರ ದೇವರು . . . ಅಂದನು,” “ಬಳಿಕ ದೇವರು . . . ಅಂದನು” ಎಂಬಂಥ ಹೇಳಿಕೆಗಳನ್ನು ನಾವು ಬೈಬಲಿನಲ್ಲಿ ಕಾಣುತ್ತೇವೆ. (ಆದಿ. 1:6, 9, 14, 20, 24) ಇಲ್ಲಿ ಯೆಹೋವನು ಭೂಮಿಯಲ್ಲಿನ ಮನುಷ್ಯನೊಂದಿಗೂ ಮಾತಾಡುತ್ತಿರಲಿಲ್ಲ ಎಂಬುದು ಸ್ಪಷ್ಟ. ಏಕೆಂದರೆ ಆಗ ಮನುಷ್ಯನು ಇನ್ನೂ ನಿರ್ಮಿಸಲ್ಪಟ್ಟಿರಲಿಲ್ಲ.

ಆದ್ದರಿಂದ, ದೇವರು ಆ ಸಮಯದಲ್ಲಿ ಭೂಮಿಯಲ್ಲಿದ್ದ ಭ್ರಷ್ಟವ್ಯವಸ್ಥೆಯನ್ನು ಅಂತ್ಯಗೊಳಿಸುವ ತನ್ನ ಸಂಕಲ್ಪವನ್ನು ಆದಿಕಾಂಡ 6:3ರಲ್ಲಿ ವ್ಯಕ್ತಪಡಿಸುತ್ತಿದ್ದನೆಂದು ತೀರ್ಮಾನಿಸುವುದು ತರ್ಕಬದ್ಧ. ಇನ್ನು 120 ವರ್ಷಗಳಲ್ಲಿ ತಾನು ಹಾಗೆ ಮಾಡುವನೆಂಬ ತೀರ್ಪನ್ನು ದೇವರು ವಿಧಿಸುತ್ತಿದ್ದನು. ಆದರೆ ಆ ವಿಷಯ ನೋಹನಿಗೆ ಇನ್ನೂ ಗೊತ್ತಿರಲಿಲ್ಲ. ಹಾಗಾದರೆ ಸಮಯ-ಸೀಮಿತವನ್ನು ದೇವರು ಇಟ್ಟದ್ದೇಕೆ? ಅಷ್ಟು ಸಮಯ ಕಾದದ್ದೇಕೆ?

ಅಪೊಸ್ತಲ ಪೇತ್ರನು ಕಾರಣಗಳನ್ನು ಕೊಡುತ್ತಾನೆ: “ನೋಹನ ದಿನಗಳಲ್ಲಿ ನಾವೆಯು ಕಟ್ಟಲ್ಪಡುತ್ತಿದ್ದಾಗ ದೇವರು ತಾಳ್ಮೆಯಿಂದ ಕಾದುಕೊಂಡಿದ್ದ ಸಮಯದಲ್ಲಿ . . . ಆ ನಾವೆಯಲ್ಲಿ ಕೆಲವೇ ಮಂದಿ, ಅಂದರೆ ಎಂಟು ಮಂದಿ ನೀರಿನ ಮಧ್ಯೆ ಸುರಕ್ಷಿತವಾಗಿ ಪಾರಾದರು.” (1 ಪೇತ್ರ 3:20) ಹೌದು, ದೇವರು 120 ವರ್ಷಗಳ ಕುರಿತ ತನ್ನ ಸಂಕಲ್ಪ ಮಾಡಿದಾಗ ಅಲ್ಲಿ ಮಾಡಲು ಇನ್ನೂ ಕೆಲಸಗಳಿದ್ದವು. ಸುಮಾರು 20 ವರ್ಷಗಳ ನಂತರ ನೋಹ ಮತ್ತು ಅವನ ಪತ್ನಿಗೆ ಮಕ್ಕಳು ಹುಟ್ಟಿದರು. (ಆದಿ. 5:32; 7:6) ಅವರ ಮೂವರು ಗಂಡುಮಕ್ಕಳು ಬೆಳೆದು ದೊಡ್ಡವರಾಗಿ ಮದುವೆಯಾದರು, ಕುಟುಂಬದಲ್ಲಿ “ಎಂಟು ಮಂದಿ” ಆದರು. ಅನಂತರ ಅವರಿಗೆ ನಾವೆಯನ್ನು ಕಟ್ಟಲಿಕ್ಕಿತ್ತು. ಅದರ ಗಾತ್ರ ಮತ್ತು ನೋಹನ ಕುಟುಂಬದ ಗಾತ್ರವನ್ನು ಪರಿಗಣಿಸುವಾಗ ಅದೇನೂ ಬೇಗನೆ ಮಾಡಿ ಮುಗಿಸುವ ಕೆಲಸವಾಗಿರಲಿಲ್ಲ. ಹೌದು, ಆ 120 ವರ್ಷಗಳಲ್ಲಿ ದೇವರು ತೋರಿಸಿದ ತಾಳ್ಮೆಯು ಆ ಎಲ್ಲ ಕೆಲಸಗಳನ್ನು ಮಾಡಿಮುಗಿಸಲು ಅವಕಾಶ ನೀಡಿತು ಮತ್ತು ಎಂಟು ನಂಬಿಗಸ್ತ ಮನುಷ್ಯರು ‘ನೀರಿನ ಮಧ್ಯೆ ಸುರಕ್ಷಿತವಾಗಿ ಪಾರಾಗುವುದನ್ನು’ ಸಾಧ್ಯಮಾಡಿತು.

ಜಲಪ್ರಳಯ ಯಾವಾಗ ಬರುವುದೆಂದು ಯೆಹೋವನು ನೋಹನಿಗೆ ಯಾವ ವರ್ಷದಲ್ಲಿ ತಿಳಿಸಿದ್ದನೆಂದು ಬೈಬಲು ಹೇಳುವುದಿಲ್ಲ. ಅವನಿಗೆ ಮಕ್ಕಳು ಹುಟ್ಟಿ, ದೊಡ್ಡವರಾಗಿ, ಅವರಿಗೆ ಮದುವೆಯಾಗುವಷ್ಟರಲ್ಲಿ ಜಲಪ್ರಳಯಕ್ಕೆ ಇನ್ನೂ 40 ಅಥವಾ 50 ವರ್ಷಗಳು ಉಳಿದಿದ್ದಿರಸಾಧ್ಯ. ಆಗ ಯೆಹೋವನು “ಎಲ್ಲಾ ದೇಹಿಗಳಿಗೂ ಅಂತ್ಯವನ್ನು ತೀರ್ಮಾನಿಸಿದ್ದೇನೆ” ಎಂದು ನೋಹನಿಗಂದನು. ನೋಹನು ಒಂದು ದೊಡ್ಡ ನಾವೆಯನ್ನು ಕಟ್ಟಬೇಕೆಂದೂ ತನ್ನ ಕುಟುಂಬದೊಂದಿಗೆ ನಾವೆಯನ್ನು ಸೇರಬೇಕೆಂದೂ ಆತನು ಹೇಳಿದನು. (ಆದಿ. 6:13-18) ಉಳಿದ ದಶಕಗಳಲ್ಲಿ ನೋಹನು ತನ್ನ ನೀತಿವಂತ ಜೀವಿತಮಾದರಿಗಿಂತ ಹೆಚ್ಚನ್ನು ಒದಗಿಸಿದನು. ಅವನು “ನೀತಿಯನ್ನು ಸಾರುವವನಾಗಿ” ಸೇವೆಮಾಡಿದನು. ಸಾರಲು ಅವನಿಗೆ ಅತಿ ಸ್ಪಷ್ಟವಾದ ಎಚ್ಚರಿಕೆಯ ಸಂದೇಶವು ಇತ್ತು. ಆ ಕಾಲದ ಭಕ್ತಿಹೀನ ಜನರನ್ನು ನಾಶಗೊಳಿಸಲು ದೇವರು ಮಾಡಿದ ದೃಢಸಂಕಲ್ಪದ ಕುರಿತು ಅವನು ಘೋಷಿಸಬೇಕಿತ್ತು. ನಾಶನವು ಯಾವ ವರ್ಷದಲ್ಲಿ ಬರುವುದೆಂದು ನೋಹನಿಗೆ ಬಹಳ ಮುಂಚಿತವಾಗಿ ತಿಳಿದಿರಲಿಲ್ಲ, ಆದರೆ ಖಂಡಿತ ಬರುವುದೆಂದು ಅವನಿಗೆ ಗೊತ್ತಿತ್ತು. ಅಂತೆಯೇ ಅದು ಬಂದೇ ತೀರಿತು.—2 ಪೇತ್ರ 2:5.

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ