ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • w11 10/1 ಪು. 13-15
  • ದೇವರಿಗೆ ಒಂದು ಸಂಘಟನೆ ಇದೆಯೋ?

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ದೇವರಿಗೆ ಒಂದು ಸಂಘಟನೆ ಇದೆಯೋ?
  • ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2011
  • ಉಪಶೀರ್ಷಿಕೆಗಳು
  • ಅನುರೂಪ ಮಾಹಿತಿ
  • ಪ್ರಾಚೀನ ಇಸ್ರಾಯೇಲ್‌—ಸುಸಂಘಟಿತ ಜನಾಂಗ
  • ಆರಂಭದ ಕ್ರೈಸ್ತರು ಸುಸಂಘಟಿತರಾಗಿದ್ದರು
  • ದೇವರ ಪ್ರೀತಿಯ ಪುರಾವೆ
  • ದೇವರು ಒಂದು ಸಂಘಟನೆಯ ಏರ್ಪಾಡು ಮಾಡಿರುವುದೇಕೆ?
    ದೇವರಿಂದ ನಿಮಗೊಂದು ಸಿಹಿಸುದ್ದಿ!
  • ದೇವರ ಸಂಸ್ಥೆಯ ಭಾಗವಾಗಿ ಸುರಕ್ಷಿತರಾಗಿರಿ
    ಕಾವಲಿನಬುರುಜು—1998
  • ಯೆಹೋವನು ಸುಸಂಘಟನೆಯ ದೇವರು
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2014
  • ದೇವರ ವಾಕ್ಯಕ್ಕೆ ತಕ್ಕಂತೆ ಸಂಘಟಿತರು
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಅಧ್ಯಯನ)—2016
ಇನ್ನಷ್ಟು
ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2011
w11 10/1 ಪು. 13-15

ದೇವರಿಗೆ ಒಂದು ಸಂಘಟನೆ ಇದೆಯೋ?

ದೇವರ ಸೃಷ್ಟಿಯಲ್ಲಿ ಎಲ್ಲೆಲ್ಲಿಯೂ ಕ್ರಮಬದ್ಧತೆ, ವ್ಯವಸ್ಥೆ ತೋರಿಬರುತ್ತದೆ. ಉದಾಹರಣೆಗೆ, ಸರಳವೆಂದು ತೋರುವ ಕಿಣ್ವ ಕೋಶವನ್ನು ತೆಗೆದುಕೊಳ್ಳಿ. ಅದರಲ್ಲಿರುವ ಕ್ರಮಬದ್ಧತೆಯು ವಿಸ್ಮಯಕರ. ಅದರಲ್ಲಿ ಸರಿಸುಮಾರು ಬೋಯಿಂಗ್‌-777 ಎಂಬ ಜೆಟ್‌ ವಿಮಾನದಲ್ಲಿರುವಷ್ಟು ಭಾಗಗಳಿವೆ. ಆದರೂ ಅದರ ಎಲ್ಲ ಘಟಕಗಳು ಆಯಾ ಸ್ಥಾನದಲ್ಲಿದ್ದು, ಬರೀ 5 ಮೈಕ್ರಾನ್‌ಗಳa ವ್ಯಾಸವಿರುವ ಗೋಳದೊಳಗೆ ಅಚ್ಚುಕಟ್ಟಾಗಿ ಜೋಡಿಸಲ್ಪಟ್ಟಿವೆ. ಈ ಕೋಶವು ಜೆಟ್‌ ವಿಮಾನಗಳು ಮಾಡಲಾರದ ಸಂಗತಿಯನ್ನೂ ಮಾಡುತ್ತದೆ. ಅದೇನೆಂದರೆ ಅದು ವಿಭಜನೆಗೊಂಡು ಸಂಖ್ಯಾಭಿವೃದ್ಧಿ ಮಾಡುತ್ತದೆ. ಇದು ನಿಜಕ್ಕೂ ಕ್ರಮಬದ್ಧತೆ ಹಾಗೂ ವ್ಯವಸ್ಥೆಯ ಅದ್ಭುತವಲ್ಲವೇ?—1 ಕೊರಿಂಥ 14:33.

ಕ್ರಮಬದ್ಧತೆ, ವ್ಯವಸ್ಥೆಯು ತೋರಿಬರುವುದು ಭೌತಿಕ ಸೃಷ್ಟಿಯಲ್ಲಿ ಮಾತ್ರವೇ ಅಲ್ಲ. ಸ್ವರ್ಗದಲ್ಲೂ ದೇವದೂತರು ದೇವರ ಉದ್ದೇಶಕ್ಕನುಸಾರ ಸುಸಂಘಟಿತರಾಗಿ ಸೇವೆಸಲ್ಲಿಸುತ್ತಾರೆಂದು ಬೈಬಲ್‌ ತೋರಿಸುತ್ತದೆ. ಪ್ರವಾದಿ ದಾನಿಯೇಲನು ಸ್ವರ್ಗದಲ್ಲಿನ ದೇವರ ನ್ಯಾಯಸಭೆಯಲ್ಲಿ ದೂತರ ದೊಡ್ಡ ಸಂಖ್ಯೆಯನ್ನು ದರ್ಶನದಲ್ಲಿ ಕಂಡನು: “ಲಕ್ಷೋಪಲಕ್ಷ ದೂತರು ಆತನನ್ನು ಸೇವಿಸುತ್ತಿದ್ದರು, ಕೋಟ್ಯನುಕೋಟಿ ಕಿಂಕರರು ಆತನ ಮುಂದೆ ನಿಂತುಕೊಂಡಿದ್ದರು.” (ದಾನಿಯೇಲ 7:9, 10) ಇಷ್ಟು ಬೃಹತ್‌ ಸಂಖ್ಯೆಯ ಅಂದರೆ ಕೋಟ್ಯನುಕೋಟಿ ದೂತರು, ದೇವರ ಆಜ್ಞೆಗೆ ಪ್ರತಿಕ್ರಿಯಿಸಿ ಭೂಮಿ ಮೇಲಿರುವ ಆತನ ಸೇವಕರಿಗೆ ಸಹಾಯ ಮಾಡಬೇಕಾದರೆ ಅಲ್ಲಿ ಎಷ್ಟೊಂದು ಕ್ರಮಬದ್ಧತೆ, ವ್ಯವಸ್ಥೆ ಇರಬೇಕೆಂದು ಸ್ವಲ್ಪ ಊಹಿಸಿ!—ಕೀರ್ತನೆ 91:11.

ಸೃಷ್ಟಿಕರ್ತನಾದ ಯೆಹೋವ ದೇವರು ಸರ್ವಶ್ರೇಷ್ಠ ಸಂಘಟಕನಾಗಿದ್ದರೂ ಭಾವರಹಿತನಲ್ಲ ವಿಪರೀತ ನಿಯಮಗಳನ್ನಿಡುವವನೂ ಅಲ್ಲ. ಬದಲಾಗಿ ಆತನು ಪ್ರೀತಿಭರಿತ, ಸಂತೋಷದ ದೇವರಾಗಿದ್ದು ತನ್ನೆಲ್ಲ ಸೃಷ್ಟಿಯ ಹಿತಚಿಂತಕನಾಗಿದ್ದಾನೆ. (1 ತಿಮೊಥೆಯ 1:11; 1 ಪೇತ್ರ 5:7) ಆತನು ಪುರಾತನಕಾಲದ ಇಸ್ರಾಯೇಲ್‌ ಜನಾಂಗ ಮತ್ತು ಪ್ರಥಮ ಶತಮಾನದ ಕ್ರೈಸ್ತರೊಂದಿಗೆ ವ್ಯವಹರಿಸಿದ ರೀತಿಯಿಂದ ಇದು ತೋರಿಬರುತ್ತದೆ.

ಪ್ರಾಚೀನ ಇಸ್ರಾಯೇಲ್‌—ಸುಸಂಘಟಿತ ಜನಾಂಗ

ಯೆಹೋವನು ಮೋಶೆಯ ಮೂಲಕ ಇಸ್ರಾಯೇಲ್ಯರನ್ನು ಸತ್ಯಾರಾಧನೆಗಾಗಿ ಸಂಘಟಿಸಿದನು. ಉದಾಹರಣೆಗೆ, ಸೀನಾಯಿ ಅರಣ್ಯದಲ್ಲಿ ಅವರ ಪ್ರಯಾಣದಲ್ಲಿ ಪಾಳೆಯ ಹೂಡುವುದರ ಕುರಿತ ಏರ್ಪಾಡುಗಳನ್ನು ಪರಿಗಣಿಸಿ. ಪ್ರತಿಯೊಂದು ಕುಟುಂಬವೂ ತಮಗೆ ಬೇಕಾದಲ್ಲಿ ಡೇರೆ ಹಾಕಿಕೊಳ್ಳಲು ಬಿಡುತ್ತಿದ್ದಲ್ಲಿ ಖಂಡಿತವಾಗಿಯೂ ತುಂಬ ಅವ್ಯವಸ್ಥೆ ಇರುತ್ತಿತ್ತು. ಆದರೆ ಯೆಹೋವನು ಆ ಜನಾಂಗದ ಪ್ರತಿಯೊಂದು ಗೋತ್ರಕ್ಕೂ ಅವರು ಎಲ್ಲಿ ಡೇರೆ ಹಾಕಿಕೊಳ್ಳಬೇಕೆಂಬುದರ ಬಗ್ಗೆ ನಿರ್ದಿಷ್ಟ ಸೂಚನೆಗಳನ್ನು ಕೊಟ್ಟನು. (ಅರಣ್ಯಕಾಂಡ 2:1-34) ಮೋಶೆಯ ನಿಯಮಾವಳಿಯಲ್ಲಿ ಆರೋಗ್ಯ ಹಾಗೂ ನೈರ್ಮಲ್ಯಕ್ಕೆ ಸಂಬಂಧಪಟ್ಟ ನಿಖರ ನಿಯಮಗಳೂ ಇದ್ದವು. ಉದಾಹರಣೆಗೆ ಅದರಲ್ಲಿ ಒಂದು ನಿಯಮವು, ಬಹಿರ್ದೆಶೆಗೆ ಹೋಗುವಾಗ ಕಲ್ಮಷವನ್ನು ಮುಚ್ಚಿಬಿಡುವ ವಿಷಯದಲ್ಲಿತ್ತು.—ಧರ್ಮೋಪದೇಶಕಾಂಡ 23:12, 13.

ಇಸ್ರಾಯೇಲ್ಯರು ವಾಗ್ದತ್ತ ದೇಶವನ್ನು ಪ್ರವೇಶಿಸಿದಾಗ ಅವರು ಅನೇಕ ವಿಧಗಳಲ್ಲಿ ಸುಸಂಘಟಿತವಾಗಿದ್ದ ಜನಾಂಗವಾಗಿದ್ದರು. ಅವರ ಜನಾಂಗವು 12 ಕುಲಗಳಾಗಿ ಸಂಘಟಿಸಲ್ಪಟ್ಟಿತ್ತು. ಪ್ರತಿಯೊಂದು ಕುಲಕ್ಕೂ ಆ ದೇಶದ ಒಂದು ಭಾಗವನ್ನು ನೇಮಿಸಲಾಗಿತ್ತು. ಮೋಶೆಯ ಮೂಲಕ ಯೆಹೋವನು ಆ ಜನಾಂಗಕ್ಕೆ ಕೊಟ್ಟಿದ್ದ ನಿಯಮಾವಳಿಯಲ್ಲಿ ಜನರ ಜೀವನದ ಪ್ರತಿಯೊಂದೂ ಅಂಶ ಅಂದರೆ ಆರಾಧನೆ, ಮದುವೆ, ಕುಟುಂಬ, ಶಿಕ್ಷಣ, ವ್ಯಾಪಾರ, ಆಹಾರ, ವ್ಯವಸಾಯ, ಪ್ರಾಣಿಗಳ ಆರೈಕೆ ಇತ್ಯಾದಿ ಬಗ್ಗೆ ನಿಯಮಗಳಿದ್ದವು.b ಕೆಲವೊಂದು ನಿಯಮಗಳು ನಿರ್ದಿಷ್ಟವೂ ಸವಿವರವೂ ಆಗಿದ್ದರೂ ಅವೆಲ್ಲವೂ ಯೆಹೋವನಿಗೆ ತನ್ನ ಜನರ ಬಗ್ಗೆ ಇದ್ದ ಕಾಳಜಿಯನ್ನು ತೋರಿಸಿದವು, ಅವರ ಸಂತೋಷವನ್ನೂ ಹೆಚ್ಚಿಸಿದವು. ಈ ಪ್ರೀತಿಪರ ಏರ್ಪಾಡುಗಳಿಗೆ ಅಧೀನರಾಗುವ ಮೂಲಕ ಇಸ್ರಾಯೇಲ್ಯರು ಯೆಹೋವನ ವಿಶೇಷ ಅನುಗ್ರಹಕ್ಕೆ ಪಾತ್ರರಾದರು.—ಕೀರ್ತನೆ 147:19, 20.

ಮೋಶೆ ಒಬ್ಬ ಪ್ರತಿಭಾವಂತ ನಾಯಕನಾಗಿದ್ದನು ನಿಜ. ಆದರೆ ಅವನ ಯಶಸ್ಸು ಇಲ್ಲವೆ ಸೋಲು, ಅವನ ನಾಯಕತ್ವದ ಕೌಶಲಗಳ ಮೇಲಲ್ಲ ಬದಲಾಗಿ ದೇವರ ಸಂಘಟನೆಗೆ ನಿಷ್ಠನಾಗಿರುವುದರ ಮೇಲೆ ಅವಲಂಬಿಸಿತ್ತು. ಉದಾಹರಣೆಗೆ, ಅರಣ್ಯದಲ್ಲಿ ಯಾವ ಮಾರ್ಗವಾಗಿ ಹೋಗಬೇಕೆಂದು ಮೋಶೆ ನಿರ್ಧರಿಸಿದ್ದು ಹೇಗೆ? ಹಗಲುಹೊತ್ತಿನಲ್ಲಿ ಮೇಘಸ್ತಂಭ ರಾತ್ರಿವೇಳೆಯಲ್ಲಿ ಅಗ್ನಿಸ್ತಂಭದ ಮೂಲಕ ಯೆಹೋವನು ನಿರ್ದೇಶನ ಕೊಟ್ಟನು. (ವಿಮೋಚನಕಾಂಡ 13:21, 22) ದೇವರು ಮನುಷ್ಯರನ್ನು ಬಳಸಿದರೂ ತನ್ನ ಜನಾಂಗವನ್ನು ಸಂಘಟಿಸಿ, ನಿರ್ದೇಶಿಸಿದವನು ಯೆಹೋವನು ತಾನೇ. ಪ್ರಥಮ ಶತಮಾನದಲ್ಲೂ ಹೀಗೇ ಮಾಡಿದನು.

ಆರಂಭದ ಕ್ರೈಸ್ತರು ಸುಸಂಘಟಿತರಾಗಿದ್ದರು

ಅಪೊಸ್ತಲರ ಮತ್ತು ಶಿಷ್ಯರ ಹುರುಪಿನ ಸಾರುವ ಕಾರ್ಯದ ಫಲಿತಾಂಶವಾಗಿ ಪ್ರಥಮ ಶತಮಾನದಲ್ಲಿ ಏಷ್ಯಾ ಹಾಗೂ ಯುರೋಪಿನ ಅನೇಕ ಭಾಗಗಳಲ್ಲಿ ಕ್ರೈಸ್ತ ಸಭೆಗಳು ಸ್ಥಾಪಿಸಲ್ಪಟ್ಟವು. ಈ ಸಭೆಗಳು ಬೇರೆ ಬೇರೆ ಕಡೆಗಳಲ್ಲಿ ಚದುರಿದ್ದವಾದರೂ, ಅವು ಪ್ರತ್ಯೇಕವಾದ, ಸ್ವತಂತ್ರ ಗುಂಪುಗಳಾಗಿರಲಿಲ್ಲ. ಬದಲಾಗಿ ಅವು ಸುಸಂಘಟಿತವಾಗಿದ್ದವು ಮತ್ತು ಅಪೊಸ್ತಲರ ಪ್ರೀತಿಪರ ಮೇಲ್ವಿಚಾರಣೆಯ ಕೆಳಗಿದ್ದವು. ಉದಾಹರಣೆಗಾಗಿ, ಅಪೊಸ್ತಲ ಪೌಲನು ಕ್ರೇತದ್ವೀಪದ ಸಭೆಯ ‘ಕಾರ್ಯಗಳನ್ನು ಕ್ರಮಪಡಿಸಲಿಕ್ಕಾಗಿ’ ತೀತನನ್ನು ನೇಮಿಸಿದನು. (ತೀತ 1:5, ಸತ್ಯವೇದವು) ಪೌಲನು ಕೊರಿಂಥ ಸಭೆಗೆ ಬರೆದ ಪತ್ರದಲ್ಲಿ ಅಲ್ಲಿನ ಕೆಲವು ಸಹೋದರರಿಗೆ “ಕಾರ್ಯಗಳನ್ನು ನಿರ್ವಹಿಸುವ ಜ್ಞಾನ” ಅಂದರೆ ಸಂಘಟಿಸುವ ಸಾಮರ್ಥ್ಯವಿದೆಯೆಂದು ತಿಳಿಸಿದನು. (1 ಕೊರಿಂಥ 12:28, ಸತ್ಯವೇದವು) ಆದರೆ ಇಂಥ ವ್ಯವಸ್ಥೆ, ಕ್ರಮಬದ್ಧತೆಗೆ ಯಾರು ಕಾರಣನಾಗಿದ್ದನು? ಸಭೆಯನ್ನು ‘ಸಂಯೋಗಗೊಳಿಸಿದವನು’ ಇಲ್ಲವೆ ಸಂಘಟಿಸಿದವನು ದೇವರು ಎಂದನು ಪೌಲ.—1 ಕೊರಿಂಥ 12:24.

ಕ್ರೈಸ್ತ ಸಭೆಯಲ್ಲಿದ್ದ ನೇಮಿತ ಮೇಲ್ವಿಚಾರಕರು ಅವರ ಜೊತೆ ವಿಶ್ವಾಸಿಗಳ ಮೇಲೆ ಅಧಿಕಾರ ನಡೆಸುವ ಒಡೆಯರಾಗಿರಲಿಲ್ಲ. ಬದಲಾಗಿ ಅವರು ದೇವರ ಪವಿತ್ರಾತ್ಮದ ನಿರ್ದೇಶನಕ್ಕನುಸಾರ ನಡೆಯುವ ‘ಜೊತೆ ಕೆಲಸದವರಾಗಿದ್ದರು’ ಮತ್ತು “ಮಂದೆಗೆ ಮಾದರಿ”ಗಳಾಗಿರಬೇಕಿತ್ತು. (2 ಕೊರಿಂಥ 1:24; 1 ಪೇತ್ರ 5:2, 3) ‘ಸಭೆಯ ಶಿರಸ್ಸು’ ಪುನರುತ್ಥಾನಗೊಂಡಿರುವ ಯೇಸು ಕ್ರಿಸ್ತನೇ ಹೊರತು ಬರಿಯ ಒಬ್ಬ ಮನುಷ್ಯ ಇಲ್ಲವೇ ಅಪರಿಪೂರ್ಣ ಮನುಷ್ಯರ ಒಂದು ಗುಂಪಲ್ಲ.—ಎಫೆಸ 5:23.

ಕೊರಿಂಥದಲ್ಲಿದ್ದ ಸಭೆಯು ಕೆಲವೊಂದು ವಿಷಯಗಳನ್ನು ಬೇರೆ ಸಭೆಗಳಿಗಿಂತ ತೀರ ಭಿನ್ನ ರೀತಿಯಲ್ಲಿ ಮಾಡಲಾರಂಭಿಸಿದಾಗ ಪೌಲನು ಬರೆದದ್ದು: “ಏನು? ದೇವರ ವಾಕ್ಯವು ನಿಮ್ಮಿಂದಲೇ ಬಂತೊ? ಅಥವಾ ಅದು ನಿಮಗೆ ಮಾತ್ರವೇ ತಲಪಿತೊ?” (1 ಕೊರಿಂಥ 14:36) ಮನವೊಪ್ಪಿಸುವ ಈ ಪ್ರಶ್ನೆಗಳ ಮೂಲಕ ಪೌಲನು ಆ ಸಭೆಯವರ ಯೋಚನಾಧಾಟಿಯನ್ನು ತಿದ್ದಲು ಮತ್ತು ಅವರು ಸ್ವತಂತ್ರವಾಗಿ ನಡೆದುಕೊಳ್ಳಬಾರದೆಂದು ಅರ್ಥಮಾಡಿಸಲು ಸಹಾಯಮಾಡಿದನು. ಸಭೆಗಳು ಅಪೊಸ್ತಲರ ನಿರ್ದೇಶನವನ್ನು ಪಾಲಿಸಿದಾಗ ಬೆಳೆದು, ಅಭಿವೃದ್ಧಿಹೊಂದಿದವು.—ಅ. ಕಾರ್ಯಗಳು 16:4, 5.

ದೇವರ ಪ್ರೀತಿಯ ಪುರಾವೆ

ನಮ್ಮೀ ದಿನಗಳ ಕುರಿತೇನು? ಕೆಲವರು ಒಂದು ಧಾರ್ಮಿಕ ಸಂಘಟನೆಯ ಭಾಗವಾಗಲು ಹಿಂಜರಿಯುತ್ತಿರಬಹುದು. ಆದರೆ ದೇವರು ತನ್ನ ಉದ್ದೇಶವನ್ನು ಪೂರೈಸುವಾಗ ಯಾವಾಗಲೂ ತನ್ನ ಸಂಘಟನೆಯನ್ನು ಬಳಸಿದ್ದನೆಂದು ಬೈಬಲ್‌ ಪುರಾವೆ ಕೊಡುತ್ತದೆ. ಆತನು ಪ್ರಾಚೀನ ಇಸ್ರಾಯೇಲ್ಯರನ್ನೂ ಆರಂಭದ ಕ್ರೈಸ್ತರನ್ನೂ ಆರಾಧನೆಗಾಗಿ ಸಂಘಟಿಸಿದ್ದನು.

ಹೀಗಿರುವುದರಿಂದ ಯೆಹೋವ ದೇವರು ಗತಕಾಲದಲ್ಲಿ ಮಾಡಿದಂತೆಯೇ ಈಗಲೂ ತನ್ನ ಜನರನ್ನು ನಿರ್ದೇಶಿಸುತ್ತಾನೆಂಬ ತೀರ್ಮಾನಕ್ಕೆ ಬರುವುದು ತರ್ಕಬದ್ಧವಲ್ಲವೊ? ಹೌದು, ಆತನು ತನ್ನ ಆರಾಧಕರನ್ನು ಸಂಘಟಿಸುವುದು ಮತ್ತು ಐಕ್ಯವಾಗಿರಿಸುವುದು ಅವರ ಮೇಲೆ ಆತನಿಗಿರುವ ಪ್ರೀತಿಯ ಪುರಾವೆಯಾಗಿದೆ. ಇಂದು ಯೆಹೋವನು ಮಾನವಕುಲದ ಕಡೆಗಿನ ತನ್ನ ಉದ್ದೇಶವನ್ನು ಪೂರೈಸಲಿಕ್ಕಾಗಿ ತನ್ನ ಸಂಘಟನೆಯನ್ನು ಬಳಸುತ್ತಾನೆ. ಆತನ ಆ ಸಂಘಟನೆಯನ್ನು ಹೇಗೆ ಗುರುತಿಸಬಹುದು? ಕೆಳಗೆ ಕೊಡಲಾದ ಮಾನದಂಡವನ್ನು ಪರಿಗಣಿಸಿ.

▪ ಸತ್ಯ ಕ್ರೈಸ್ತರು ಒಂದು ಕೆಲಸವನ್ನು ಪೂರೈಸಲು ಸಂಘಟಿತರು. (ಮತ್ತಾಯ 24:14; 1 ತಿಮೊಥೆಯ 2:3, 4) ದೇವರ ರಾಜ್ಯದ ಸುವಾರ್ತೆಯನ್ನು ಎಲ್ಲ ಜನಾಂಗಗಳಿಗೆ ಸಾರುವಂತೆ ಯೇಸು ತನ್ನ ಹಿಂಬಾಲಕರಿಗೆ ಆಜ್ಞಾಪಿಸಿದನು. ಒಂದು ಅಂತಾರಾಷ್ಟ್ರೀಯ ಸಂಘಟನೆ ಇಲ್ಲದಿದ್ದರೆ ಆ ಕೆಲಸವನ್ನು ಪೂರೈಸುವುದು ಅಸಾಧ್ಯ. ದೃಷ್ಟಾಂತಕ್ಕೆ: ಒಬ್ಬ ವ್ಯಕ್ತಿಗೆ ನೀವೊಬ್ಬರಾಗಿಯೇ ಊಟ ಒದಗಿಸಬಹುದು. ಆದರೆ ಸಾವಿರಾರು ಬಹುಶಃ ಲಕ್ಷಾಂತರ ಜನರಿಗೆ ಊಟ ಒದಗಿಸಬೇಕಾದರೆ, ಸಹಕರಿಸಿ ಕೆಲಸ ಮಾಡುವಂಥ ಸುಸಂಘಟಿತ ಜನರ ಗುಂಪು ಬೇಕೇ ಬೇಕು. ಹಾಗೆಯೇ ಸತ್ಯ ಕ್ರೈಸ್ತರು ತಮ್ಮ ಸಾರುವ ನೇಮಕವನ್ನು ಪೂರೈಸಲು ದೇವರ ಸೇವೆಯಲ್ಲಿ “ಒಂದೇ ಮನಸ್ಸಿನಿಂದ” ಇಲ್ಲವೇ “ಪರಸ್ಪರ ಸಹಕರಿಸುತ್ತಾ” ಕೆಲಸಮಾಡುತ್ತಾರೆ. (ಚೆಫನ್ಯ 3:9, ಬೈಯಿಂಗ್ಟನ್‌) ಈ ಬಹುರಾಷ್ಟ್ರೀಯ, ಬಹುಭಾಷೀಯ, ಬಹುಜನಾಂಗೀಯ ಕೆಲಸವು ಐಕ್ಯ, ಸಾಮರಸ್ಯದಿಂದ ಕೂಡಿದ ಸಂಘಟನೆ ಇಲ್ಲದಿರುವಲ್ಲಿ ಸಾಧ್ಯವಾಗುವುದೊ? ಇಲ್ಲವೆಂಬುದು ಸ್ಪಷ್ಟ.

▪ ಸತ್ಯ ಕ್ರೈಸ್ತರು ಪರಸ್ಪರ ಬೆಂಬಲ ಹಾಗೂ ಪ್ರೋತ್ಸಾಹ ಕೊಡಲಿಕ್ಕಾಗಿ ಸಂಘಟಿತರು. ಒಬ್ಬ ಪರ್ವತಾರೋಹಿ ಒಂಟಿಯಾಗಿದ್ದರೆ ತನಗೆ ಎಲ್ಲಿ ಬೇಕೊ ಅಲ್ಲಿ ಪರ್ವತ ಹತ್ತಬಹುದು. ಕಡಿಮೆ ಅನುಭವದ ಪರ್ವತಾರೋಹಿಗಳನ್ನು ನೋಡಿಕೊಳ್ಳುವ ಜವಾಬ್ದಾರಿ ಅವನಿಗಿರುವುದಿಲ್ಲ. ಆದರೆ ಅವನು ಹತ್ತುವಾಗ ಏನಾದರೂ ಅವಘಡವಾದರೆ ಇಲ್ಲವೆ ಕಷ್ಟದಲ್ಲಿ ಸಿಲುಕಿದರೆ ತುಂಬ ಅಪಾಯದಲ್ಲಿರುವನು. ಏಕೆಂದರೆ ಅವನ ನೆರವಿಗೆ ಯಾರೂ ಇರುವುದಿಲ್ಲ. ಹಾಗಾಗಿ ಎಲ್ಲರಿಂದ ಪ್ರತ್ಯೇಕವಾಗಿರುವುದು ನಿಜವಾಗಿಯೂ ಅವಿವೇಕತನ. (ಜ್ಞಾನೋಕ್ತಿ 18:1) ಯೇಸು ಕೊಟ್ಟ ಆಜ್ಞೆಯನ್ನು ಪೂರೈಸಲಿಕ್ಕಾಗಿ ಕ್ರೈಸ್ತರು ಒಬ್ಬರಿಗೊಬ್ಬರು ಸಹಾಯ, ಬೆಂಬಲ ಕೊಡಬೇಕು. (ಮತ್ತಾಯ 28:19, 20) ಈ ಕೆಲಸವನ್ನು ಮುಂದುವರಿಸಲು, ಪಟ್ಟುಬಿಡದಿರಲು ಎಲ್ಲರಿಗೂ ಅವಶ್ಯವಾಗಿ ಬೇಕಾಗಿರುವ ಬೈಬಲ್‌ ಶಿಕ್ಷಣ, ತರಬೇತಿ ಹಾಗೂ ಪ್ರೋತ್ಸಾಹವನ್ನು ಕ್ರೈಸ್ತ ಸಭೆಯು ಕೊಡುತ್ತದೆ. ಬೈಬಲ್‌ ಶಿಕ್ಷಣಕ್ಕಾಗಿ ಮತ್ತು ಆರಾಧನೆಗಾಗಿ ಸಂಘಟಿತವಾದ ಕ್ರೈಸ್ತ ಕೂಟಗಳು ಇಲ್ಲದಿರುತ್ತಿದ್ದಲ್ಲಿ, ಯೆಹೋವನ ಮಾರ್ಗಗಳ ಕುರಿತು ಕಲಿಯಲು ಒಬ್ಬನು ಹೋಗುವುದಾದರೂ ಎಲ್ಲಿಗೆ?—ಇಬ್ರಿಯ 10:24, 25.

▪ ಐಕ್ಯವಾಗಿ ದೇವರ ಸೇವೆಮಾಡಲಿಕ್ಕಾಗಿ ಸತ್ಯ ಕ್ರೈಸ್ತರು ಸಂಘಟಿತರು. ಯೇಸುವಿನ ಕುರಿಗಳು ಆತನ ಸ್ವರಕ್ಕೆ ಕಿವಿಗೊಡುವಾಗ ಆತನ ನಾಯಕತ್ವದಲ್ಲಿ ಅವರು ‘ಒಂದೇ ಹಿಂಡು’ ಆಗುತ್ತಾರೆ. (ಯೋಹಾನ 10:16) ಅವರು ಸ್ವತಂತ್ರವರ್ತಿ ಚರ್ಚುಗಳಲ್ಲಿ ಮತ್ತು ಗುಂಪುಗಳಲ್ಲಿ ಚದುರಿರುವುದಿಲ್ಲ. ತಮ್ಮ ಬೋಧನೆಗಳ ವಿಷಯದಲ್ಲಿ ಅವರಲ್ಲಿ ಭಿನ್ನಾಭಿಪ್ರಾಯಗಳಿಲ್ಲ. ಬದಲಾಗಿ ಅವರೆಲ್ಲರೂ ‘ಒಮ್ಮತದಿಂದ ಮಾತಾಡುತ್ತಾರೆ.’ (1 ಕೊರಿಂಥ 1:10) ಐಕ್ಯವಾಗಿ ಜೀವಿಸಲು ಕ್ರಮಬದ್ಧತೆ ಇರಬೇಕು, ಕ್ರಮಬದ್ಧತೆಗೆ ಸಂಘಟನೆ ಇರಬೇಕು. ಐಕ್ಯವುಳ್ಳ ಸಹೋದರತ್ವದ ಮೇಲೆ ಮಾತ್ರ ದೇವರ ಆಶೀರ್ವಾದವಿರಬಲ್ಲದು.—ಕೀರ್ತನೆ 133:1, 3.

ಬೈಬಲಿನಲ್ಲಿರುವ ಈ ಮಾನದಂಡ ಹಾಗೂ ಇತರ ಮಾನದಂಡಗಳನ್ನು ಪೂರೈಸುವ ಒಂದು ಸಂಘಟನೆಯೆಡೆಗೆ ಲಕ್ಷಾಂತರ ಜನರು ದೇವರ ಮೇಲೆ ನಿಜವಾದ ಪ್ರೀತಿ ಮತ್ತು ಬೈಬಲ್‌ ಸತ್ಯದ ಪ್ರೀತಿಯಿಂದಾಗಿ ಆಕರ್ಷಿತರಾಗಿದ್ದಾರೆ. ಸಂಘಟಿತ ಹಾಗೂ ಐಕ್ಯವಾದ ಗುಂಪಿನೋಪಾದಿ ಯೆಹೋವನ ಸಾಕ್ಷಿಗಳು ಜಗತ್ತಿನಾದ್ಯಂತ ದೇವರ ಚಿತ್ತವನ್ನು ಮಾಡಲು ಶ್ರಮಿಸುತ್ತಾರೆ. ಅವರಿಗೆ ದೇವರ ಈ ವಾಗ್ದಾನದ ಭರವಸೆಯಿದೆ: “ನಾನು ಅವರ ಮಧ್ಯೆ ವಾಸಿಸುವೆನು, ಅವರ ಮಧ್ಯೆ ನಡೆದಾಡುವೆನು; ನಾನು ಅವರಿಗೆ ದೇವರಾಗಿರುವೆನು, ಅವರು ನನ್ನ ಜನರಾಗಿರುವರು.” (2 ಕೊರಿಂಥ 6:16) ಯೆಹೋವ ದೇವರ ಸಂಘಟನೆಯ ಭಾಗವಾಗಿದ್ದು ನೀವಾತನನ್ನು ಆರಾಧಿಸಿದರೆ ಈ ಅದ್ಭುತ ಆಶೀರ್ವಾದ ನಿಮಗೂ ಸಿಗಬಲ್ಲದು. (w11-E 06/01)

[ಪಾದಟಿಪ್ಪಣಿಗಳು]

a ಮೈಕ್ರಾನ್‌ ಇಲ್ಲವೆ ಮೈಕ್ರೊಮೀಟರ್‌ ಅಂದರೆ ಒಂದು ಮೀಟರಿನ ದಶಲಕ್ಷದಲ್ಲಿ ಒಂದಂಶ.

b ಯೆಹೋವನ ಸಾಕ್ಷಿಗಳಿಂದ ಪ್ರಕಾಶಿತ ಯೆಹೋವನ ಸಮೀಪಕ್ಕೆ ಬನ್ನಿರಿ ಪುಸ್ತಕದ ಅಧ್ಯಾಯ 13 ನೋಡಿ.

[ಪುಟ 13ರಲ್ಲಿರುವ ಚಿತ್ರ]

ಇಸ್ರಾಯೇಲ್ಯರ ಪಾಳೆಯಗಳು ಸುಸಂಘಟಿತವಾಗಿದ್ದವು

[ಪುಟ 14, 15ರಲ್ಲಿರುವ ಚಿತ್ರಗಳು]

ಅಂತಾರಾಷ್ಟ್ರೀಯ ಸಾರುವ ಕೆಲಸವನ್ನು ಪೂರೈಸಲಿಕ್ಕಾಗಿ ಸಂಘಟನೆ ಅಗತ್ಯ

ಮನೆಮನೆಯ ಶುಶ್ರೂಷೆ

ವಿಪತ್ತು ಪರಿಹಾರಕಾರ್ಯ

ಸಮ್ಮೇಳನಗಳು

ಆರಾಧನಾ ಸ್ಥಳಗಳ ನಿರ್ಮಾಣಕಾರ್ಯ

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ