ದೇವರ ಶಿಕ್ಷೆಯೇ?
ಮಾರ್ಚ್ 2011ರಲ್ಲಿ 9.0 ತೀವ್ರತೆಯ ಭೂಕಂಪವು ಜಪಾನಿನ ಬುಡವನ್ನೇ ಅಲುಗಾಡಿಸಿತು. ಅದರ ಬೆನ್ನಿಗೇ ಸುನಾಮಿ ಕೂಡ ಅಪ್ಪಳಿಸಿತು. ಅಲ್ಲಿನ ಒಬ್ಬ ಪ್ರಸಿದ್ಧ ರಾಜಕಾರಣಿ “ಸಂತ್ರಸ್ತರ ಸ್ಥಿತಿ ನೋಡಿ ನನಗೆ ದುಃಖವಾಗುತ್ತದೆ. ಇದು ಟೆಂಬಾಟ್ಸು (ದೇವರ ಶಿಕ್ಷೆ) ಎಂದು ನನಗನಿಸ್ತದೆ” ಎಂದರು.
ಜನವರಿ 2010ರಲ್ಲಿ ಹೇಟೀಯಲ್ಲಾದ ಭೂಕಂಪದಲ್ಲಿ 2,20,000ಕ್ಕಿಂತ ಹೆಚ್ಚು ಮಂದಿ ಸಾವನ್ನಪ್ಪಿದರು. ‘ಈ ದೇಶದವರು ಸೈತಾನನೊಂದಿಗೆ ಮೈತ್ರಿ ಮಾಡಿಕೊಂಡಿರುವುದರಿಂದ ಹೀಗಾಗಿದೆ. ಎಲ್ಲರೂ ದೇವರ ಕಡೆ ತಿರುಗಿಕೊಳ್ಳಬೇಕು’ ಎಂದರು ಒಬ್ಬ ಪ್ರಖ್ಯಾತ ಟಿವಿ ಧರ್ಮಪ್ರಚಾರಕ.
ಫಿಲಿಪ್ಪೀನ್ಸ್‌ನ ರಾಜಧಾನಿ ಮನಿಲದಲ್ಲಿ ಕಾಲ್ತುಳಿತಕ್ಕೆ ಸಿಲುಕಿ 79 ಮಂದಿ ಜೀವ ಕಳೆದುಕೊಂಡಾಗ ಒಬ್ಬ ಕ್ಯಾಥೊಲಿಕ್ ಪಾದ್ರಿ ಘೋಷಿಸಿದ್ದು: “ಸತ್ತುಹೋಗಿರುವ ನಮ್ಮ ಮನಸ್ಸಾಕ್ಷಿಗಳನ್ನು ಬಡಿದೆಬ್ಬಿಸಲು ದೇವರು ಹೀಗೆ ಮಾಡಿದ್ದಾನೆ.” ಆ ದೇಶವನ್ನು ಒಂದರ ಮೇಲೊಂದರಂತೆ ಅಪ್ಪಳಿಸುತ್ತಿರುವ ವಿಪತ್ತುಗಳ ಕುರಿತು ಅಲ್ಲಿನ ವಾರ್ತಾಪತ್ರಿಕೆಯೊಂದು ವರದಿಮಾಡಿದ್ದು: “ಭೂಕುಸಿತ, ತೂಫಾನು, ಇತರೆ ವಿಪತ್ತುಗಳ ಮುಖಾಂತರ ದೇವರು ನಮ್ಮ ಮೇಲೆ ಕೋಪ ತೋರಿಸುತ್ತಿದ್ದಾನೆ ಎಂದು ಶೇ. 21ರಷ್ಟು ವಯಸ್ಕರು ನಂಬುತ್ತಾರೆ.”
ದೇವರು ದುರ್ಜನರಿಗೆ ಶಿಕ್ಷೆಕೊಡಲು ವಿಪತ್ತುಗಳನ್ನು ತರುತ್ತಾನೆಂಬ ಮಾತು ಹೊಸದೇನಲ್ಲ. 1755ರಲ್ಲಿ ಪೋರ್ಚುಗಲ್‌ನ ಲಿಸ್ಬನ್‌ನಲ್ಲಿ ನಡೆದ ದುರಂತವನ್ನು ತೆಗೆದುಕೊಳ್ಳಿ. ಭೂಕಂಪ, ಬೆಂಕಿ, ಸುನಾಮಿಯಂಥ ಅನರ್ಥಗಳ ಸರಮಾಲೆಗೆ ಸುಮಾರು 60,000 ಮಂದಿ ಬಲಿಯಾದರು. ಒಬ್ಬ ಸುಪ್ರಸಿದ್ಧ ತತ್ವಜ್ಞಾನಿ ವೋಲ್ಟರ್, “ಭೋಗಾಸಕ್ತ ಪ್ಯಾರಿಸ್‌ಗಿಂತ ಲಿಸ್ಬನ್‌ನಲ್ಲಿ ಹೆಚ್ಚು ಕೆಟ್ಟತನ ಕಂಡುಬಂತೇ?” ಎಂದು ಪ್ರಶ್ನೆ ಎಬ್ಬಿಸಿದರು. ಅವರಂತೆ ಲಕ್ಷಾಂತರ ಮಂದಿ, ಜನರನ್ನು ಶಿಕ್ಷಿಸಲು ದೇವರು ನೈಸರ್ಗಿಕ ವಿಪತ್ತುಗಳನ್ನು ಬಳಸುತ್ತಿರಬೇಕು ಎಂದು ನೆನಸುತ್ತಾರೆ. ಈ ಕಾರಣದಿಂದಲೋ ಏನೋ ಅನೇಕ ದೇಶಗಳಲ್ಲಿ ಇಂಥ ಪ್ರಕೋಪಗಳನ್ನು ‘ದೇವಘಟನೆ’ ಎಂದೇ ಕರೆಯಲಾಗುತ್ತದೆ.
ಇಂಥ ಮಾತು ಲೋಕದಲ್ಲೆಡೆ ಹಾಸುಹೊಕ್ಕಾಗಿದೆ. ಆದ್ದರಿಂದ ‘ಜನರನ್ನು ಶಿಕ್ಷಿಸಲು ದೇವರು ನೈಸರ್ಗಿಕ ವಿಪತ್ತುಗಳನ್ನು ಬಳಸುತ್ತಿರುವುದು ನಿಜವೇ? ಇತ್ತೀಚಿಗಂತೂ ಒಂದರ ಹಿಂದೊಂದು ಸಂಭವಿಸುತ್ತಿರುವ ವಿನಾಶಗಳು ದೇವರ ಶಿಕ್ಷೆಯೇ?’ ಎಂಬ ಪ್ರಶ್ನೆಗಳಿಗೆ ನಾವು ಉತ್ತರ ಕಂಡುಕೊಳ್ಳಬೇಕು.
ನಿಸರ್ಗದ ಶಕ್ತಿಗಳನ್ನು ಬಳಸಿ ದೇವರು ನಾಶನ ತಂದದ್ದು ಬೈಬಲಿನಲ್ಲೇ ಇದೆಯಲ್ವಾ ಎಂದು ಕೆಲವರು ಹಿಂದೆಮುಂದೆ ಆಲೋಚಿಸದೆ ವಾದಿಸುತ್ತಾರೆ. (ಆದಿಕಾಂಡ 7:17-22; 18:20; 19:24, 25; ಅರಣ್ಯಕಾಂಡ 16:31-35) ದೇವರು ಈ ರೀತಿ ನಾಶನ ತಂದದ್ದು ನಿಜ. ಆದರೆ ಈ ಘಟನೆಗಳು ಸಾಮಾನ್ಯವಾಗಿ ಆಗುವ ನೈಸರ್ಗಿಕ ವಿಪತ್ತುಗಳಿಗಿಂತ ಭಿನ್ನವಾಗಿವೆ. ಇವುಗಳನ್ನು ಮೇಲುಮೇಲಿಗೆ ನೋಡಿದರಷ್ಟೇ ಸಾಲದು. ಸೂಕ್ಷ್ಮವಾಗಿ ಪರೀಕ್ಷಿಸಿದರೆ ಮುಖ್ಯವಾಗಿ ಈ ಮೂರು ಭಿನ್ನತೆಗಳನ್ನು ಗಮನಿಸಬಹುದು: (1) ಮುಂಚಿತವಾಗಿ ಎಚ್ಚರಿಕೆ ಕೊಡಲಾಗಿತ್ತು. (2) ಪಶ್ಚಾತ್ತಾಪಪಡದ ದುಷ್ಟರು ಅಥವಾ ಎಚ್ಚರಿಕೆಗಳಿಗೆ ಕಿವಿಗೊಡದ ಜನರನ್ನು ಮಾತ್ರ ದೇವರು ನಾಶಮಾಡಿದನು. ಇಂದಿನ ನೈಸರ್ಗಿಕ ವಿಪತ್ತುಗಳಂತೆ ಒಳ್ಳೆಯವರು ಕೆಟ್ಟವರು ಎನ್ನದೆ ಎಲ್ಲರನ್ನೂ ಬಲಿತೆಗೆದುಕೊಳ್ಳಲಿಲ್ಲ. (3) ತಪ್ಪಿಸಿಕೊಳ್ಳುವ ಮಾರ್ಗವನ್ನು ದೇವರು ಒಳ್ಳೇ ಜನರಿಗೆ ಮುಂಚೆಯೇ ತಿಳಿಸಿದನು.—ಆದಿಕಾಂಡ 7:1, 23; 19:15-17; ಅರಣ್ಯಕಾಂಡ 16:23-27.
ಲಕ್ಷಗಟ್ಟಲೆ ಜನರ ಬಾಳನ್ನು ಚಿಂದಿಚಿಂದಿ ಮಾಡಿರುವ ಇಂದಿನ ಅಸಂಖ್ಯಾತ ವಿಕೋಪಗಳ ಹಿಂದೆ ದೇವರ ಕೈವಾಡವಿದೆ ಎನ್ನಲು ಯಾವುದೇ ಆಧಾರವಿಲ್ಲ. ಹಾಗಾದರೆ ಈ ಎಲ್ಲ ವಿಪತ್ತುಗಳು ದಿನೇದಿನೇ ಹೆಚ್ಚಾಗುತ್ತಿರುವುದೇಕೆ? ಬಚಾವಾಗಲು ಏನಾದರೂ ಉಪಾಯವಿದೆಯೇ? ವಿಪತ್ತುಗಳೇ ಇಲ್ಲದ ಕಾಲ ಬರುವುದೇ? ಉತ್ತರಗಳಿಗಾಗಿ ಮುಂದೆ ಓದಿ. (w11-E 12/01)