ಲೋಕಾಂತ್ಯ ಕೆಲವರ ಎಣಿಕೆಯಲ್ಲಿ. . .
“[ಯೇಸು] ಓಲಿವ್ ಗುಡ್ಡದ ಮೇಲೆ ಕುಳಿತುಕೊಂಡಾಗ ಶಿಷ್ಯರು ಪ್ರತ್ಯೇಕವಾಗಿ ಆತನ ಬಳಿಗೆ ಬಂದು, ‘ಈ ಸಂಗತಿಗಳು ಯಾವಾಗ ಆಗುವವು? ನಿನ್ನ ಆಗಮನದ ಹಾಗೂ ಲೋಕಾಂತ್ಯದ ಸೂಚನೆ ಏನು? ನಮಗೆ ತಿಳಿಸು,’ ಎಂದು ಕೇಳಿದರು.” —ಮತ್ತಾಯ 24:3, ಪವಿತ್ರ ಗ್ರಂಥ ಭಾಷಾಂತರ.
“ಲೋಕಾಂತ್ಯ” ಎಂಬ ಪದ ಕೇಳಿದೊಡನೆ ನಿಮ್ಮ ಮನಸ್ಸಲ್ಲಿ ಯಾವ ಚಿತ್ರಣ ಮೂಡುತ್ತದೆ? ಒಂದು ಮಹಾ ಪ್ರಳಯದ ದೃಶ್ಯ? ಬೈಬಲಲ್ಲಿ ಕೊಡಲಾಗಿರುವ “ಅರ್ಮಗೆದ್ದೋನ್” ಎಂಬ ಪದ ಇಂಥ ಉತ್ಪಾತಕ್ಕೆ ಬೊಟ್ಟುಮಾಡುತ್ತಿದೆ ಎಂಬುದು ಕೆಲವರೆಣಿಕೆ. (ಪ್ರಕಟನೆ 16:16, ಪವಿತ್ರ ಗ್ರಂಥ ಭಾಷಾಂತರ) ಈ ಪದವನ್ನು ಬೈಬಲಲ್ಲಿ ಒಂದು ಕಡೆ ಮಾತ್ರ ಕೊಡಲಾಗಿದೆ. ಆದರೆ ವಾರ್ತಾಮಾಧ್ಯಮ ಮತ್ತು ಧರ್ಮಗುರುಗಳು ಇದನ್ನು ಅನೇಕಾವರ್ತಿ ಬಳಸುತ್ತಾರೆ.
ಲೋಕಾಂತ್ಯದ ಬಗ್ಗೆ ಅಥವಾ ಅರ್ಮಗೆದ್ದೋನ್ ಬಗ್ಗೆ ಜನರ ಎಣಿಕೆ ಮತ್ತು ಬೈಬಲ್ ಹೇಳುವ ವಿಷಯ ಎರಡೂ ಸಹಮತದಲ್ಲಿವೆಯೇ? ಉತ್ತರ ತಿಳಿದುಕೊಂಡರೆ ಒಳ್ಳೇದು. ಏಕೆಂದರೆ ಇದರ ಬಗ್ಗೆ ಸತ್ಯ ಸಂಗತಿ ತಿಳಿದಾಗ ಭವಿಷ್ಯದ ಕುರಿತ ಅನಾವಶ್ಯಕ ಭಯ ನೀಗಿ ನಿರೀಕ್ಷೆ ಹುಟ್ಟುತ್ತದೆ. ದೇವರ ಬಗ್ಗೆ ನಿಮಗಿರುವ ಅಭಿಪ್ರಾಯವೂ ಬದಲಾಗುತ್ತದೆ.
ಮುಂದೆ ಕೊಡಲಾಗಿರುವ ಮೂರು ಪ್ರಶ್ನೆಗಳತ್ತ ಕಣ್ಣಾಡಿಸಿ. ಜನರ ಎಣಿಕೆಯನ್ನು ಬೈಬಲ್ ಬೋಧಿಸುವ ಸತ್ಯಾಂಶದೊಂದಿಗೆ ತಾಳೆಮಾಡಿ ನೋಡಿ.
1. ಮನುಷ್ಯನಿಂದ ಲೋಕಾಂತ್ಯ ಆಗಲಿದೆಯೇ?
ಪತ್ರಕರ್ತರು ಮತ್ತು ಸಂಶೋಧಕರು “ಅರ್ಮಗೆದ್ದೋನ್” ಪದವನ್ನು ಮಾನವನಿಂದಾಗುವ ವಿನಾಶಗಳನ್ನು ವರ್ಣಿಸಲು ಹೆಚ್ಚಾಗಿ ಬಳಸುತ್ತಾರೆ. 1ನೇ 2ನೇ ಮಹಾಯುದ್ಧಗಳಿಗೆ ಇದೇ ಪದವನ್ನು ಬಳಸಿದ್ದರು. ಈ ಯುದ್ಧಗಳ ಬಳಿಕ ಅಮೆರಿಕ ಮತ್ತು ಸೋವಿಯತ್ ಒಕ್ಕೂಟ ತಮ್ಮ ದಾಳಿ ಪ್ರತಿದಾಳಿಗಳಲ್ಲಿ ಅಣ್ವಸ್ತ್ರಗಳನ್ನು ಬಳಸಬಹುದು ಎಂಬ ಚಿಂತೆ ಮನುಕುಲವನ್ನು ಕಾಡಿತ್ತು. ಈ ಸೆಣಸಾಟಕ್ಕೆ “ನ್ಯೂಕ್ಲಿಯರ್ ಅರ್ಮಗೆದ್ದೋನ್” ಎಂಬ ಹೆಸರನ್ನೂ ಮಾಧ್ಯಮ ಇಟ್ಟಿತ್ತು. ಇಂದಿನ ಸಂಶೋಧಕರಿಗೆ, ಮಾಲಿನ್ಯವು ವಾತಾವರಣದ ಮೇಲೆ ಬೀರುವ ಪ್ರತಿಕೂಲ ಪರಿಣಾಮದಿಂದ “ಹವಾಮಾನ ಅರ್ಮಗೆದ್ದೋನ್” ಆಗುವುದೆಂಬ ಭಯವಿದೆ.
ಅವರ ಮಾತಿನ ಅರ್ಥ: ಭೂಮಿ ಮತ್ತು ಅದರ ಮೇಲಿರುವ ಜೀವಸಂಕುಲದ ಭವಿಷ್ಯ ಮಾನವನ ಕೈಯಲ್ಲಿದೆ. ಸರ್ಕಾರಗಳು ಸೂಕ್ತ ಕ್ರಮ ಕೈಗೊಳ್ಳದಿದ್ದರೆ ಪೃಥ್ವಿಗೆ ಶಾಶ್ವತ ಹಾನಿಯಾಗಲಿದೆ.
ಬೈಬಲಿನ ಉತ್ತರ: ಭೂಲೋಕ ಮಾನವನ ಕಪಿಮುಷ್ಟಿಗೆ ಸಿಕ್ಕಿ ವಾಸಕ್ಕೆ ಯೋಗ್ಯವಲ್ಲದ ಸ್ಥಳವಾಗುವಂತೆ ಯೆಹೋವa ದೇವರು ಬಿಡುವುದಿಲ್ಲ. ಈ ಆಶ್ವಾಸನೆ ನಮಗೆ ಬೈಬಲಿನಲ್ಲಿದೆ: “ದೇವರು . . . ಅದನ್ನು ಶೂನ್ಯಸ್ಥಾನವಾಗಿರಲೆಂದು ಸೃಷ್ಟಿಸದೆ ಜನನಿವಾಸಕ್ಕಾಗಿಯೇ ರೂಪಿಸಿದನು.” (ಯೆಶಾಯ 45:18) ‘ಭೂಮಿಯನ್ನು ನಾಶಮಾಡುತ್ತಿರುವವರನ್ನು ಆತನು ನಾಶಗೊಳಿಸುವನು.’—ಪ್ರಕಟನೆ 11:18.
2. ನೈಸರ್ಗಿಕ ವಿಕೋಪದಿಂದ ಲೋಕಾಂತ್ಯ ಆಗಲಿದೆಯೇ?
ಪತ್ರಕರ್ತರು ಕೆಲವೊಮ್ಮೆ ಮಹಾ ಪ್ರಾಕೃತಿಕ ಪ್ರಕೋಪಗಳನ್ನೇ “ಅರ್ಮಗೆದ್ದೋನ್” ಎಂದು ಕರೆಯುತ್ತಾರೆ. ಉದಾ: 2010ರಲ್ಲಿ ಹೇಟೀಯನ್ನು ನಲುಗಿಸಿದ ಮಹಾ ಭೂಕಂಪ ಮತ್ತು ಅದರಿಂದುಂಟಾದ ನರಳಾಟ, ವಿನಾಶ, ಜೀವನಷ್ಟವನ್ನು ವರ್ಣಿಸುತ್ತಾ ಇದು “ಹೇಟೀಯ ಅರ್ಮಗೆದ್ದೋನ್” ಎಂದಿತು ಒಂದು ವರದಿ. ಸುದ್ದಿಗಾರರು ಮತ್ತು ಚಿತ್ರ ನಿರ್ಮಾಪಕರು ಈ ಪದವನ್ನು ಹಿಂದೆ ಆಗಿಹೋದ ಘಟನೆಗಳಿಗೆ ಮಾತ್ರವಲ್ಲ ಮುಂದೆ ಆಗಲಿರುವ ಘಟನೆಗಳಿಗೂ ಬಳಸುತ್ತಾರೆ. ದೃಷ್ಟಾಂತಕ್ಕೆ, ಮುಂದೊಂದು ದಿನ ಕ್ಷುದ್ರಗ್ರಹವೊಂದು ನಮ್ಮ ಪೃಥ್ವಿಗೆ ಅಪ್ಪಳಿಸಿದರೆ ಆಗುವ ಪರಿಣಾಮಗಳನ್ನು ವರ್ಣಿಸಲು “ಅರ್ಮಗೆದ್ದೋನ್” ಪದ ಬಳಸಿದ್ದಾರೆ.
ಅವರ ಮಾತಿನ ಅರ್ಥ: ಅರ್ಮಗೆದ್ದೋನ್ ಒಂದು ಆಕಸ್ಮಿಕ ಘಟನೆ. ಅದು ಎಲ್ಲರನ್ನೂ ನಾಶಮಾಡಿಬಿಡುತ್ತದೆ. ಯಾರೂ ಬಚಾವಾಗಲು ಸಾಧ್ಯವಿಲ್ಲ.
ಬೈಬಲಿನ ಉತ್ತರ: ಅರ್ಮಗೆದ್ದೋನ್ ಆಕಸ್ಮಿಕವಾಗಿ ನಡೆದು ಎಲ್ಲರನ್ನೂ ನಾಶಮಾಡುವುದಿಲ್ಲ. ಅದು ದುಷ್ಟರನ್ನು ಮಾತ್ರ ಅಳಿಸಿಹಾಕುವುದು. ಶೀಘ್ರದಲ್ಲೇ “ದುಷ್ಟನು ಕಾಣಿಸದೆ ಹೋಗುವನು; ಅವನಿದ್ದ ಸ್ಥಳದಲ್ಲಿ ಎಷ್ಟು ವಿಚಾರಿಸಿದರೂ ಅವನು ಸಿಕ್ಕುವದೇ ಇಲ್ಲ” ಎನ್ನುತ್ತದೆ ಬೈಬಲ್.—ಕೀರ್ತನೆ 37:10.
3. ದೇವರು ಭೂಮಿಯನ್ನು ನಾಶಮಾಡುವನೇ?
ಒಳ್ಳೇದು ಮತ್ತು ಕೆಟ್ಟದ್ದರ ಅಂತಿಮ ಕದನ ನಡೆಯಲಿದೆ ಎಂದು ಅನೇಕ ಧಾರ್ಮಿಕ ವ್ಯಕ್ತಿಗಳು ನಂಬುತ್ತಾರೆ. ಈ ಕದನದಲ್ಲಿ ಭೂಗ್ರಹ ನಾಶವಾಗುತ್ತದೆ ಎನ್ನುತ್ತಾರೆ. ಅಮೆರಿಕದಲ್ಲಿ ಒಂದು ಸಂಸ್ಥೆ (ಪ್ರಿನ್ಸ್ಟನ್ ಸರ್ವೇ ರಿಸರ್ಚ್ ಅಸೋಸಿಯೇಟ್ಸ್) ನಡೆಸಿದ ಸಮೀಕ್ಷೆಯಲ್ಲಿ ಪಾಲ್ಗೊಂಡವರಲ್ಲಿ ಶೇ. 40ರಷ್ಟು ಜನರು “ಅರ್ಮಗೆದ್ದೋನ್ ಎಂಬಲ್ಲಿ ನಡೆಯುವ ಯುದ್ಧದಲ್ಲಿ” ಜಗತ್ತು ಕೊನೆಯಾಗಲಿದೆ ಎಂದು ನಂಬಿದ್ದರು.
ಅವರ ಮಾತಿನ ಅರ್ಥ: ಮಾನವರು ಭೂಮಿ ಮೇಲೆ ಸದಾ ಬಾಳಲಿಕ್ಕಾಗಲಿ, ಭೂಮಿ ಶಾಶ್ವತವಾಗಿರಲಿಕ್ಕಾಗಲಿ ರಚಿಸಲ್ಪಟ್ಟಿರಲಿಲ್ಲ. ಯಾವುದೋ ಒಂದು ಸಮಯದಲ್ಲಿ ಮಾನವರೆಲ್ಲರೂ ಕೊನೆಕಾಣಬೇಕೆಂಬ ಉದ್ದೇಶದಿಂದಲೇ ದೇವರು ಅವರನ್ನು ನಿರ್ಮಿಸಿದನು.
ಬೈಬಲಿನ ಉತ್ತರ: ದೇವರು “ಭೂಮಿಯನ್ನು . . . ಕಟ್ಟಿರುವುದರಿಂದ ಅದೆಂದಿಗೂ ನಾಶವಾಗದು” ಎಂದು ಬೈಬಲ್ ಸ್ಪಷ್ಟವಾಗಿ ತಿಳಿಸುತ್ತದೆ. (ಕೀರ್ತನೆ 104:5, ಪರಿಶುದ್ಧ ಬೈಬಲ್ ಭಾಷಾಂತರ) ಭೂನಿವಾಸಿಗಳ ಬಗ್ಗೆ ಮಾತಾಡುತ್ತಾ “ನೀತಿವಂತರು ಭೂಮಿಯನ್ನು ಸ್ವಾಧೀನಮಾಡಿಕೊಂಡು ಎಂದೆಂದಿಗೂ ಅದರಲ್ಲಿ ವಾಸವಾಗಿರುವರು” ಎನ್ನುತ್ತದೆ ಬೈಬಲ್.—ಕೀರ್ತನೆ 37:29, ಪವಿತ್ರ ಗ್ರಂಥ ಭಾಷಾಂತರ.
ಜನರ ಅಭಿಪ್ರಾಯ ಮತ್ತು ಬೈಬಲ್ ಬೋಧಿಸುವ ವಿಷಯ ಒಂದಕ್ಕೊಂದು ತಾಳೆಬೀಳುವುದಿಲ್ಲ ಅನ್ನೋದು ಸ್ಪಷ್ಟ. ಹಾಗಾದರೆ ಸತ್ಯಾಂಶ ಏನು? (w12-E 02/01)
[ಪಾದಟಿಪ್ಪಣಿ]
a ಬೈಬಲಿನಲ್ಲಿ ದೇವರ ಹೆಸರನ್ನು ಯೆಹೋವ ಎಂದು ಕೊಡಲಾಗಿದೆ.