ಯಶಸ್ವೀ ಬದುಕಿಗೆ ನಾಲ್ಕು ಹೆಜ್ಜೆಗಳು
ಯಶಸ್ವೀ ಜೀವನವನ್ನು ಗಳಿಸುವುದು ಹೇಗೆ? ಯಾವ ನಿರ್ಣಯ ತೆಗೆದುಕೊಂಡರೆ ಯಾವ ಫಲಿತಾಂಶ ಸಿಗುತ್ತೆ ಅಂತ ಯೋಚಿಸುವ ಸಾಮರ್ಥ್ಯ ನಮ್ಮೆಲ್ಲರಿಗಿದೆ. ಇದನ್ನು ಸರಿಯಾಗಿ ಬಳಸಿ ತೀರ್ಮಾನಗಳನ್ನು ಮಾಡಿದರೆ ಖಂಡಿತ ಯಶಸ್ಸು ನಮ್ಮದೇ.
ನಾವು ಮಾಡಿದ ನಿರ್ಣಯಕ್ಕಾಗಿ ಜೀವನದ ಯಾವುದೇ ಘಟ್ಟದಲ್ಲಿ ವಿಷಾದಿಸುವಂತಿರಬಾರದು. ಆದರೆ ಅದು ಅಷ್ಟು ಸುಲಭವಲ್ಲ. ಯಾಕಂದ್ರೆ ಜನರಿಂದು ಕ್ಷಣಿಕ ಸುಖವನ್ನು ಬೆನ್ನಟ್ಟುವುದು ಜಾಸ್ತಿ. ಅಂಥವರ ಮಧ್ಯೆ ನಾವು ಜೀವಿಸುತ್ತಾ ಇರುವುದರಿಂದ ನಮ್ಮ ಮನಸ್ಸಿನೊಳಗೂ ಅಂಥ ಮನೋಭಾವ ಲಗ್ಗೆ ಇಟ್ಟಿರಬಹುದು. ಉದಾಹರಣೆಗೆ, ಕುಟುಂಬದಲ್ಲಿ ಪ್ರತಿಯೊಬ್ಬರೂ ಬೈಬಲಿನ ಸೂತ್ರಗಳನ್ನು ಪಾಲಿಸಿದರೆ ಸುಖೀ ಜೀವನ ಸಾಧ್ಯ ಎಂದು ನಮಗೆ ಗೊತ್ತಿದೆ. (ಎಫೆಸ 5:22–6:4) ಕುಟುಂಬ ಸದಸ್ಯರೊಂದಿಗೆ ನಿಯಮಿತವಾಗಿ ಸಮಯ ಕಳೆದರೆ ಜೀವನದುದ್ದಕ್ಕೂ ಪ್ರಯೋಜನ ಸಿಗುವುದು ಎಂದೂ ತಿಳಿದಿದೆ. ಆದರೂ ಉದ್ಯೋಗ, ಮೋಜು-ಮಜಾ ಇಂಥ ಕ್ಷಣಿಕ ಸುಖವನ್ನು ಬೆನ್ನಟ್ಟುವ ಆಯ್ಕೆ ಮಾಡುವಂತೆ ಲೋಕ ಒತ್ತಡ ಹೇರುತ್ತದೆ. ಇಂಥ ಸಂದಿಗ್ಧ ಪರಿಸ್ಥಿತಿಯಲ್ಲಿ ಸರಿಯಾದದ್ದನ್ನು ಆರಿಸಿಕೊಳ್ಳುವುದು ಹೇಗೆ? ಮುಂದಿನ ನಾಲ್ಕು ಹೆಜ್ಜೆಗಳನ್ನು ಪರಿಗಣಿಸಿ.
1 ನಿರ್ಣಯದ ಫಲಿತಾಂಶ ಏನಾಗಬಹುದೆಂದು ಮುಂಚೆಯೇ ಯೋಚಿಸಿ
ಒಂದು ನಿರ್ಣಯ ಮಾಡೋ ಮುಂಚೆ ನೀವು ಮಾಡಬೇಕಾದ್ದೇನು? ಅದರಿಂದ ಸಿಗುವ ಫಲಿತಾಂಶಗಳ ಬಗ್ಗೆ ಯೋಚಿಸಿ. ಫಲಿತಾಂಶ ಒಳ್ಳೇದಾದೀತಾ? ಕೆಟ್ಟದಾದೀತಾ? ಎಂದು ಲೆಕ್ಕಹಾಕಿ. “ಜಾಣನು ಕೇಡನ್ನು ಕಂಡು ಅಡಗಿಕೊಳ್ಳುವನು; ಬುದ್ಧಿಹೀನನು ಮುಂದೆ ಹೋಗಿ ನಷ್ಟಪಡುವನು” ಎನ್ನುತ್ತೆ ಬೈಬಲ್. (ಜ್ಞಾನೋಕ್ತಿ 22:3) ಫಲಿತಾಂಶಗಳ ಬಗ್ಗೆ ಪ್ರಾಮಾಣಿಕತೆಯಿಂದ ಅವಲೋಕಿಸಿದರೆ ಮುಂದೆ ಆಗೋ ಕೆಟ್ಟ ಪರಿಣಾಮಗಳನ್ನು ತಡೆಯಲು ಪ್ರೇರಣೆ ಸಿಗುತ್ತೆ. ಹಾಗೇ, ಬಹುಕಾಲ ಬಾಳುವ ಫಲಿತಾಂಶ ಸಿಗುವುದೆಂದು ನೀವು ಕಂಡಾಗ ಆ ಒಳ್ಳೇ ನಿರ್ಣಯವನ್ನು ಕಾರ್ಯರೂಪಕ್ಕೆ ಹಾಕಲು ಬಲವೂ ಸಿಗುತ್ತೆ.
ನಿಮ್ಮನ್ನೇ ಕೇಳಿಕೊಳ್ಳಿ: ಈಗ ನಾನು ಮಾಡಿರೋ ನಿರ್ಣಯ ಒಂದು ವರ್ಷದ ನಂತರ, 10 ವರ್ಷದ ನಂತರ, 20 ವರ್ಷದ ನಂತರ ಯಾವ ಪರಿಣಾಮ ಬೀರುತ್ತೆ? ನನ್ನ ಆರೋಗ್ಯದ ಮೇಲೆ, ಭಾವನೆಗಳ ಮೇಲೆ ಇದು ಯಾವ ಪರಿಣಾಮ ಬೀರುತ್ತೆ? ನಾನು ತುಂಬ ಪ್ರೀತಿಸೋ ಕುಟುಂಬ, ಆತ್ಮೀಯರ ಮೇಲೆ ಯಾವ ಪರಿಣಾಮ ಬೀರುತ್ತೆ?’ ಇದೆಲ್ಲದಕ್ಕಿಂತ ಮುಖ್ಯವಾಗಿರೋ ಮುಂದಿನ ಪ್ರಶ್ನೆಗಳನ್ನು ನೀವು ಕೇಳಿಕೊಳ್ಳಬೇಕು: ‘ನಾನು ಮಾಡಿರೋ ನಿರ್ಣಯವನ್ನ ದೇವರು ಇಷ್ಟಪಡ್ತಾನಾ? ದೇವರ ಜತೆ ಇರೋ ನನ್ ಸಂಬಂಧದ ಮೇಲೆ ಅದು ಯಾವ ಪರಿಣಾಮ ಬೀರುತ್ತೆ?’ ಯಾವ ನಿರ್ಣಯ ಮಾಡಿದರೆ ದೇವರಿಗೆ ಇಷ್ಟ ಆಗುತ್ತೆ ಮತ್ತು ಯಾವ ನಿರ್ಣಯಗಳು ನಮ್ಮ ಜೀವಕ್ಕೆ ಕುತ್ತು ತರುತ್ತೆ ಎನ್ನುವುದನ್ನು ವಿವೇಚಿಸಿ ತಿಳಿದುಕೊಳ್ಳಲು ಬೈಬಲ್ ಸಹಾಯ ಮಾಡುತ್ತೆ. ಏಕಂದ್ರೆ ಅದನ್ನು ದೇವರ ಪ್ರೇರಣೆಯಿಂದ ಬರೆಯಲಾಗಿದೆ.—ಜ್ಞಾನೋಕ್ತಿ 14:12; 2 ತಿಮೊಥೆಯ 3:16.
2 ನಿಮ್ಮ ಮುಂದಿರುವ ಆಯ್ಕೆಗಳನ್ನು ನೀವಾಗಿಯೇ ವಿಮರ್ಶಿಸಿ
ಅನೇಕ ಜನರು ತಮ್ಮ ಸ್ವಂತ ಬುದ್ಧಿ ಬಳಸಿ ನಿರ್ಣಯಗಳನ್ನು ಮಾಡುವುದು ಬಿಟ್ಟು ಇನ್ನೊಬ್ಬರು ಏನು ಮಾಡುತ್ತಾರೋ ಅದನ್ನೇ ಕಣ್ಮುಚ್ಚಿ ತಾವೂ ಮಾಡಿಬಿಡುತ್ತಾರೆ. ಯಾರೋ ಮಾಡಿರೋ ನಿರ್ಣಯ ಜನಪ್ರಿಯವಾಗಿದೆ ಅಂದಮಾತ್ರಕ್ಕೆ ಅದು ಎಲ್ಲ ಸಮಯದಲ್ಲೂ ಜೀವನದಲ್ಲಿ ಯಶಸ್ಸು ತಂದುಕೊಡಲ್ಲ. ಹಾಗಾಗಿ ನೀವು ಮಾಡುವ ಆಯ್ಕೆಗಳ ಬಗ್ಗೆ ನೀವಾಗಿಯೇ ವಿಮರ್ಶಿಸಿ. ಉದಾಹರಣೆಗೆ ನಟಾಲಿಯನ್ನುa ತೆಗೆದುಕೊಳ್ಳಿ. ಅವಳು ಹೇಳೋದು: “ಒಬ್ಬ ಒಳ್ಳೇ ಹುಡುಗನ್ನ ಮದ್ವೆ ಆಗ್ಬೇಕು ಅಂತ ತುಂಬ ಆಸೆ ಪಡ್ತಿದ್ದೆ. ಆದ್ರೆ ನನಗೆ ಬೇಕಾದ ತರ ಹುಡ್ಗ ಸಿಕ್ತಾನೇ ಇರ್ಲಿಲ್ಲ. ನನ್ ಕಾಲೇಜ್ ಸ್ನೇಹಿತರೆಲ್ಲ ತುಂಬ ಬುದ್ಧಿವಂತರಾಗಿದ್ರು. ಆದ್ರೂ ಅವರ ವೈಯಕ್ತಿಕ ಜೀವನದಲ್ಲಿ ತುಂಬ ಕೆಟ್ಟ ನಿರ್ಣಯಗಳನ್ನು ಮಾಡೋದನ್ನ ನೋಡ್ತಿದ್ದೆ. ಆಗಾಗ ತಮ್ಮ ಬಾಯ್ಫ್ರೆಂಡ್ ಅಥವಾ ಗರ್ಲ್ಫ್ರೆಂಡ್ ಅನ್ನು ಬದ್ಲಾಯಿಸ್ತಾ ಇದ್ರು. ನನಗೂ ಹಾಗೆ ತುಂಬ ಜನ ಬಾಯ್ಫ್ರೆಂಡ್ಸ್ ಇದ್ರು. ಆದ್ರೆ ಇಂಥಾ ಜೀವ್ನ ನಡೆಸಿದರಿಂದ ಅನೇಕ ನೋವು, ಸಮಸ್ಯೆಗಳಿಗೆ ಗುರಿಯಾದೆ.”
ನಟಾಲಿ ಯೆಹೋವನ ಸಾಕ್ಷಿಗಳ ಸಹಾಯದಿಂದ ಬೈಬಲ್ ಕಲಿಯಕ್ಕೆ ಶುರುಮಾಡಿದಳು. ಅವಳು ಈಗ ಹೇಳ್ತಾಳೆ: “ತುಂಬ ಪ್ರೀತಿಯಿಂದ ಇರೋ ದಂಪತಿಗಳು, ಸಂತೋಷವಾಗಿರೋ ಯೌವನಸ್ಥರನ್ನ ನಾನು ಯೆಹೋವನ ಸಾಕ್ಷಿಗಳ ಸಭೆಯಲ್ಲಿ ನೋಡಿ ತುಂಬ ಖುಷಿ ಪಟ್ಟೆ. ನನ್ನ ಜೀವನ ಶೈಲಿಯನ್ನ, ಆದ್ಯತೆಗಳನ್ನ ಬದಲಾಯಿಸೋದು ಅಷ್ಟೊಂದು ಸುಲಭ ಅನ್ಸ್ಲಿಲ್ಲ ನಿಜ. ಆದ್ರೆ ಕ್ರಮೇಣ ಬದಲಾಯಿಸಿಕೊಂಡೆ.” ಫಲಿತಾಂಶ? “ನಾನು ಒಬ್ಬ ಒಳ್ಳೇ ಗುಣಗಳಿರೋ ಆಧ್ಯಾತ್ಮಿಕ ವ್ಯಕ್ತಿನ ಮದ್ವೆ ಆಗಬೇಕು ಅಂತ ಅಂದುಕೊಳ್ತಿದ್ದೆ. ಹಾಗೇ ಆಯ್ತು. ದೇವರಾದ ಯೆಹೋವನನ್ನೇ ಆರಾಧಿಸೋ ವ್ಯಕ್ತಿಯನ್ನು ಮದ್ವೆ ಆದೆ. ನಾನು ಕನಸು ಕಂಡಿದ್ದಕ್ಕಿಂತ ಇನ್ನೂ ಚೆನ್ನಾಗಿರೋ ಮದ್ವೆ ಜೀವನವನ್ನು ದೇವರು ನಂಗೆ ಕೊಟ್ಟಿದ್ದಾನೆ” ಅಂತಾಳೆ ನಟಾಲಿ.
3 ದೂರದೃಷ್ಟಿ ಇರಲಿ
ಭವಿಷ್ಯದ ಬಗ್ಗೆ ನಿಚ್ಚಳ ನೋಟವಿರಬೇಕು. ಅಲ್ಪಕಾಲಕ್ಕಲ್ಲ ದೀರ್ಘಕಾಲ ಒಳಿತಾಗುವಂಥ ಗುರಿಯನ್ನಿಡಿ. ಜೊತೆಗೆ ಅದನ್ನು ಸಾಧಿಸಲು ಶ್ರಮಪಡಿ. (ಜ್ಞಾನೋಕ್ತಿ 21:5) ಬರೇ ಎಪ್ಪತ್ತೋ ಎಂಭತ್ತೋ ವರ್ಷವನ್ನು ಅಂದರೆ ಈಗಿನ ಜೀವನವನ್ನು ಮನಸ್ಸಿನಲ್ಲಿಟ್ಟು ನಿರ್ಣಯ ಮಾಡಬೇಡಿ. ಮುಂದೆ ನಿಮಗೆ ಇದೇ ಭೂಮಿಯಲ್ಲಿ ಸಿಗಲಿರುವ ಅನಂತಕಾಲದ ಬದುಕನ್ನು ಮನಸ್ಸಿನಲ್ಲಿಟ್ಟು ನಿರ್ಣಯಮಾಡಿ.
ಯೇಸು ಕ್ರಿಸ್ತನ ಜೀವವನ್ನು ನಮಗಾಗಿ ಅರ್ಪಿಸಿ ನಾವು ಅನಂತಕಾಲ ಬದುಕುವ ಏರ್ಪಾಡನ್ನು ದೇವರು ಮಾಡಿದ್ದಾನೆ ಅಂತ ವಿವರಿಸುತ್ತೆ ಬೈಬಲ್. (ಮತ್ತಾಯ 20:28; ರೋಮನ್ನರಿಗೆ 6:23) ಅತಿ ಬೇಗನೆ ದೇವರ ಈ ಉದ್ದೇಶ ನೆರವೇರುವುದೆಂದು ಆತ ಆಶ್ವಾಸನೆ ಕೊಟ್ಟಿದ್ದಾನೆ. ದೇವರನ್ನು ಪ್ರೀತಿಸುವವರು ಭೂಮಿಯ ಮೇಲೆ ಸುಂದರ ಭವಿಷ್ಯವನ್ನು ಆನಂದಿಸುತ್ತಾ ಅನಂತಕಾಲ ಬದುಕುತ್ತಾರೆ. (ಕೀರ್ತನೆ 37:11; ಪ್ರಕಟನೆ 21:3-5) ದೂರದೃಷ್ಟಿ ಇದ್ದಲ್ಲಿ ಇಂಥಾ ಭವಿಷ್ಯ ನಿಮಗೂ ಸಿಗಬಲ್ಲದು.
4 ಗುರಿ ಮುಟ್ಟಲು ಶ್ರಮಿಸಿ
ಆ ಸುಂದರ ಭವಿಷ್ಯವನ್ನು ಹೇಗೆ ನಿಮ್ಮದಾಗಿ ಮಾಡಿಕೊಳ್ಳಬಹುದು? ಮೊದಲು ಬೈಬಲಿನಿಂದ ದೇವರ ಬಗ್ಗೆ ತಿಳಿದುಕೊಳ್ಳಬೇಕು. (ಯೋಹಾನ 17:3) ಹೀಗೆ ಬೈಬಲ್ ಬಗ್ಗೆ ನಿಖರ ಜ್ಞಾನ ಪಡಕೊಂಡಾಗ ದೇವರು ತನ್ನ ವಾಗ್ದಾನವನ್ನು ಖಂಡಿತ ನೆರವೇರಿಸುತ್ತಾನೆ ಎಂಬ ವಿಶ್ವಾಸ ನಮ್ಮಲ್ಲಿ ತುಂಬುತ್ತೆ. ಇಂಥ ವಿಶ್ವಾಸವಿದ್ದರೆ ಸಾಕು ದೇವರ ಮೆಚ್ಚುಗೆ ಗಳಿಸಲು ಅದೆಂಥಾ ಬದಲಾವಣೆ ಬೇಕಾದರೂ ಮಾಡಬಲ್ಲಿರಿ.
ಮೈಕಲ್ ಎಂಬ ಹುಡುಗನ ಕಥೆ ಕೇಳಿ: “ನನಗೆ 12 ವರ್ಷ, ಆಗಲೇ ಕುಡಿತ, ಮಾದಕ ವ್ಯಸನಕ್ಕೆ ದಾಸನಾಗಿದ್ದೆ. ಒಂದು ರೌಡಿ ಗ್ಯಾಂಗ್ಗೆ ಸೇರಿಕೊಂಡಿದ್ದೆ. ನನ್ನ ಚಟ ನೋಡಿದ್ರೆ 30ಕ್ಕಿಂತ ಜಾಸ್ತಿ ವರ್ಷ ನಾನು ಬದುಕುತ್ತೇನೆ ಅಂತ ಅನಿಸ್ತಿರಲಿಲ್ಲ. ನನಗೆ ಬರ್ತಿದ್ದ ಕೋಪ ಆಗ್ತಿದ್ದ ಕಿರಿಕಿರಿಯಿಂದ ಎಷ್ಟು ಸಲ ಆತ್ಮಹತ್ಯೆಗೆ ಪ್ರಯತ್ನಿಸಿದ್ದೀನಿ ಅಂದ್ರೆ ಲೆಕ್ಕನೇ ಇಲ್ಲ. ಜೀವ್ನ ಅಂದ್ರೆ ಇದಿಷ್ಟೇ ಅಲ್ಲ, ಇನ್ನೇನೋ ಇದೆ ಅಂತ ಮನಸ್ಸು ಯಾವಾಗ್ಲೂ ಹೇಳ್ತಾ ಇತ್ತು. ಆದರೆ ಅದೇನು ಅಂತ ಕಂಡುಹಿಡಿಯಕ್ಕೆ ಆಗ್ತಿರ್ಲಿಲ್ಲ.” ಮೈಕಲ್ ಶಾಲೆಯಲ್ಲಿ ಕಲಿಯುತ್ತಿದ್ದಾಗ ಆತನಿದ್ದ ಗ್ಯಾಂಗ್ನ ಇನ್ನೊಬ್ಬ ಸದಸ್ಯ ಯೆಹೋವನ ಸಾಕ್ಷಿಗಳ ಸಹಾಯದಿಂದ ಬೈಬಲ್ ಕಲಿಯಲು ಶುರುಮಾಡಿದ. ಮೈಕಲ್ ಕೂಡ ಕಲಿಯಲು ತೊಡಗಿದ.
ಮೈಕಲ್ ಬೈಬಲ್ ಕಲಿಯುತ್ತಾ ಹೋದ ಹಾಗೆ ಭವಿಷ್ಯವನ್ನು ನೋಡುವ ರೀತಿಯೂ ಬದಲಾಯಿತು. ಅವನು ಹೇಳೋದು: “ಮುಂದೊಂದು ದಿನ ಇಡೀ ಭೂಮಿ ಸುಂದರ ಉದ್ಯಾನವನ ಆಗುತ್ತೆ. ಜನ್ರು ಶಾಂತಿಯಿಂದ ಇರ್ತಾರೆ. ಕಿರಿಕಿರಿ, ಚಿಂತೆ ಅನ್ನೋದೇ ಇರಲ್ಲ. ಇಂಥ ಉಜ್ವಲ ಭವಿಷ್ಯ ನನ್ನದಾಗಬೇಕು. ಯೆಹೋವ ದೇವರ ಜತೆ ಒಳ್ಳೇ ಸಂಬಂಧ ನನಗಿರಬೇಕು ಅನ್ನೋದೇ ನನ್ನ ಗುರಿಯಾಯಿತು. ಆದ್ರೂ ಕೆಲವೊಮ್ಮೆ ದೇವರನ್ನು ನೋಯಿಸಿಬಿಡುತ್ತಿದ್ದೆ. ಬೈಬಲ್ ಕಲಿಯೋಕೆ ಶುರುಮಾಡಿದ ಮೇಲೆನೂ ಕುಡಿತಾ ಇದ್ದೆ. ಒಂದಿನ ಒಂದು ಹುಡುಗಿ ಜತೆ ನಡಿಬಾರ್ದು ನಡೆದೋಯಿತು.”
ಆದರೆ ಮೈಕಲ್ಗೆ ಹೇಗೆ ತನ್ನ ಬಲಹೀನತೆಗಳನ್ನು ಜಯಿಸಿ ಬರೋದಕ್ಕಾಯಿತು? ಅವನ ಮಾತಿನಿಂದನೇ ಕೇಳಿ: “ನನಗೆ ಬೈಬಲ್ ಕಲಿಸ್ತಿದ್ದವರು ದಿನಾಲೂ ಬೈಬಲ್ ಓದುವಂತೆ ಪ್ರೋತ್ಸಾಹಿಸಿದ್ರು. ದೇವರ ಇಷ್ಟದಂತೆ ಜೀವಿಸುತ್ತಿದ್ದ ಜನ್ರ ಸಹವಾಸ ಮಾಡುವಂತೆ ಪ್ರೋತ್ಸಾಹಿಸಿದ್ರು. ಅದನ್ನು ನಾನು ಮಾಡಿದೆ. ನಾನಿದ್ದ ಗ್ಯಾಂಗ್ನ ಸದಸ್ಯರು ನನ್ ಮೇಲೆ ಇನ್ನೂ ಪ್ರಭಾವ ಬೀರುತ್ತಾ ಇದ್ರು. ಅವ್ರು ನನಗೆ ಸ್ವಂತ ಕುಟುಂಬ ಥರ ಇದ್ರೂ, ಅವರೊಟ್ಟಿಗೆ ಇದ್ದ ಎಲ್ಲ ಸಂಬಂಧವನ್ನ ಮುರಿದು ಹಾಕಿಬಿಟ್ಟೆ.”
ಮೈಕಲ್ ಅಲ್ಪಕಾಲಿಕ ಗುರಿಗಳನ್ನು ಮತ್ತು ಆದ್ಯತೆಗಳನ್ನು ಇಡುತ್ತಾ ಹೋದ. ಇದರಿಂದ ದೊಡ್ಡ ಗುರಿಗಳನ್ನು ಸಾಧಿಸಲು ಮತ್ತು ದೇವರ ಮಟ್ಟಗಳಿಗೆ ಅನುಸಾರ ಬದುಕಲು ಸಾಧ್ಯವಾಯಿತು. ನೀವೂ ಹಾಗೆ ಮಾಡಬಹುದು. ನೀವು ತಲುಪಬಹುದಾದ ದೊಡ್ಡ ಗುರಿಗಳನ್ನು ಸಾಕಾರಗೊಳಿಸಲು ಈಗ ತೆಗೆದುಕೊಳ್ಳಬಹುದಾದ ಚಿಕ್ಕ ಗುರಿಗಳನ್ನು ಪಟ್ಟಿಮಾಡಿ. ನಿಮಗೆ ಸಹಾಯಹಸ್ತ ಚಾಚುವವರೊಟ್ಟಿಗೆ ಅವುಗಳ ಬಗ್ಗೆ ಚರ್ಚಿಸಿ. ನೀವು ಪ್ರಗತಿ ಮಾಡುತ್ತಾ ಇದ್ದೀರಾ ಇಲ್ಲವಾ ಎಂದು ಆಗಿಂದಾಗ್ಗೆ ತಿಳಿಸುವಂತೆ ಹೇಳಿ.
ದೇವರ ಬಗ್ಗೆ ಕಲಿಯುವುದನ್ನ, ಆತನ ಮಾರ್ಗದರ್ಶನವನ್ನು ಜೀವನದಲ್ಲಿ ಅಳವಡಿಸಿಕೊಳ್ಳುವುದನ್ನ ಮುಂದೂಡಬೇಡಿ. ಆತನ ವಾಕ್ಯವಾದ ಬೈಬಲ್ಗಾಗಿ, ಆತನಿಗಾಗಿ ಪ್ರೀತಿಯನ್ನು ಬೆಳೆಸಲು ಈಗಲೇ ಹೆಜ್ಜೆ ತೆಗೆದುಕೊಳ್ಳಿ. ಬೈಬಲ್ ಮಟ್ಟಗಳನ್ನು ಪಾಲಿಸುವವರ ಬಗ್ಗೆ ಬೈಬಲ್ ಹೀಗೆ ತಿಳಿಸುತ್ತೆ: ಅವರ “ಕಾರ್ಯವೆಲ್ಲವೂ ಸಫಲವಾಗುವದು.”—ಕೀರ್ತನೆ 1:1-3. (w12-E 05/01)
[ಪಾದಟಿಪ್ಪಣಿ]
a ಹೆಸರುಗಳನ್ನು ಬದಲಿಸಲಾಗಿದೆ.