ದೇವರ ವಾಕ್ಯದಿಂದ ಕಲಿಯಿರಿ
ನ್ಯಾಯತೀರ್ಪಿನ ದಿನದಲ್ಲಿ ಏನಾಗುತ್ತೆ?
ನಿಮಗೆ ಸಾಮಾನ್ಯವಾಗಿ ಬರುವ ಪ್ರಶ್ನೆಗಳು ಮತ್ತು ಅವುಗಳಿಗೆ ಉತ್ತರ ಬೈಬಲಿನಲ್ಲಿ ಎಲ್ಲಿದೆ ಅಂತ ತಿಳ್ಕೊಳ್ಳೋಕೆ ಈ ಲೇಖನ ಸಹಾಯ ಮಾಡುತ್ತೆ. ನಿಮ್ಮ ಜೊತೆ ಇದ್ರ ಬಗ್ಗೆ ಮಾತಾಡೋಕೆ ಯೆಹೋವನ ಸಾಕ್ಷಿಗಳು ಖುಷಿ ಪಡ್ತಾರೆ.
1. ತೀರ್ಪಿನ ದಿನ ಅಂದ್ರೇನು?
ತೀರ್ಪಿನ ದಿನ ಅಂದ ತಕ್ಷಣ ತುಂಬಾ ಜನರಿಗೆ ಬಲಗಡೆಯಲ್ಲಿರೋ ಚಿತ್ರ ಮನಸ್ಸಿಗೆ ಬರಬಹುದು. ಆ ದಿನದಲ್ಲಿ ಕೋಟ್ಯಾನುಕೋಟಿ ಆತ್ಮಗಳು ದೇವರ ಸಿಂಹಾಸನದ ಮುಂದೆ ಬರುತ್ತೆ. ಹಿಂದೆ ಮಾಡಿದ ಕೆಲಸಗಳ ಆಧಾರದ ಮೇಲೆ ಅವುಗಳಿಗೆ ತೀರ್ಪಾಗಿ ಕೆಲವರು ಸ್ವರ್ಗಕ್ಕೆ ಹೋಗ್ತಾರೆ, ಬೇರೆಯವರು ನರಕದಲ್ಲಿ ಯಾತನೆ ಅನುಭವಿಸ್ತಾರೆ ಅಂತ ಜನ ನೆನಸ್ತಾರೆ. ಆದ್ರೆ ನಿಜ ಏನಂದ್ರೆ, ಅನ್ಯಾಯ ಆದವರಿಗೆ ನ್ಯಾಯ ಕೊಡೋದೇ ಈ ತೀರ್ಪಿನ ದಿನದ ಉದ್ದೇಶ ಅಂತ ಬೈಬಲ್ ಹೇಳುತ್ತೆ. (ಕೀರ್ತನೆ 96:13) ಎಲ್ಲಾ ಮನುಷ್ಯರಿಗೆ ನ್ಯಾಯ ಕೊಡೋಕೆ ದೇವರು ಒಬ್ಬ ನ್ಯಾಯಾಧಿಪತಿಯನ್ನ ಆರಿಸಿದ್ದಾನೆ. ಆತನೇ ಯೇಸು.—ಯೆಶಾಯ 11:1-5; ಅಪೊಸ್ತಲರ ಕಾರ್ಯ 17:31 ಓದಿ.
2. ತೀರ್ಪಿನ ದಿನದಲ್ಲಿ ನ್ಯಾಯ ಹೇಗೆ ಸಿಗುತ್ತೆ?
ಮೊದಲನೇ ಮನುಷ್ಯ ಆದಾಮ ದೇವರ ವಿರುದ್ಧ ಬೇಕು ಬೇಕಂತ ದಂಗೆ ಎದ್ದ. ಅವನ ಈ ತಪ್ಪಿನಿಂದ ಅವನ ವಂಶದವರೆಲ್ಲಾ ಪಾಪ ಮತ್ತು ಮರಣ ಅನ್ನೋ ಬಂಧನಕ್ಕೆ ಒಳಗಾದ್ರು. ಅಲ್ಲದೆ ಈಗಲೂ ಕಷ್ಟ ಸಮಸ್ಯೆಗಳನ್ನ ಅನುಭವಿಸ್ತಿದ್ದಾರೆ. (ರೋಮನ್ನರಿಗೆ 5:12) ಯೇಸು ಈ ಘೋರ ಅನ್ಯಾಯವನ್ನ ಸರಿ ಮಾಡೋಕೆ ತೀರಿ ಹೋಗಿರೋ ಕೋಟ್ಯಾಂತರ ಜನರನ್ನ ಮತ್ತೆ ಜೀವಂತವಾಗಿ ಎಬ್ಬಿಸ್ತಾನೆ. ಈ ಘಟನೆ ಯೇಸು ಕ್ರಿಸ್ತ ರಾಜನಾಗಿ ಸಾವಿರ ವರ್ಷ ಆಳ್ವಿಕೆ ಮಾಡೋವಾಗ ಆಗುತ್ತೆ ಅಂತ ಬೈಬಲಿನ ಪ್ರಕಟನೆ ಪುಸ್ತಕ ಹೇಳುತ್ತೆ.—ಪ್ರಕಟನೆ 20:4, 11, 12 ಓದಿ.
ಈ ರೀತಿ ಜೀವಂತವಾಗಿ ಎದ್ದು ಬರುವವರಿಗೆ, ಅವರು ಸಾಯೋಕೆ ಮುಂಚೆ ಏನು ಮಾಡಿರ್ತಾರೆ ಅನ್ನೋದ್ರ ಮೇಲೆ ನ್ಯಾಯತೀರ್ಪಾಗಲ್ಲ. ಬದಲಿಗೆ ಪ್ರಕಟನೆ 20ನೇ ಅಧ್ಯಾಯದಲ್ಲಿ ಹೇಳಿರೋ ‘ಸುರುಳಿಗಳಲ್ಲಿರೋ’ ವಿಷಯಗಳನ್ನು ಅವರು ಪಾಲಿಸ್ತಾರಾ ಇಲ್ವಾ ಅನ್ನೋದ್ರ ಮೇಲೆ ಹೊಂದಿಕೊಂಡಿರುತ್ತೆ. (ರೋಮನ್ನರಿಗೆ 6:7) ಹಾಗಾಗಿ ಮತ್ತೆ ಜೀವಂತವಾಗಿ ಎದ್ದು ಬರುವವರಿಗೆ ದೇವರ ಬಗ್ಗೆ ಕಲಿಯುವ ಸದವಕಾಶ ಸಿಗುತ್ತೆ. ಅದಕ್ಕೆ ಅಪೊಸ್ತಲ ಪೌಲ, ಅವರಲ್ಲಿ ‘ನೀತಿವಂತರು ಮತ್ತು ಅನೀತಿವಂತರು’ ಇರ್ತಾರೆ ಅಂತ ಹೇಳಿದನು.—ಅಪೊಸ್ತಲರ ಕಾರ್ಯ 24:15 ಓದಿ.
3. ತೀರ್ಪಿನ ದಿನದಲ್ಲಿ ಏನಾಗುತ್ತೆ?
ಯೆಹೋವ ದೇವರ ಬಗ್ಗೆ ತಿಳ್ಕೊಳ್ಳದೇ, ಆತನನ್ನ ಆರಾಧಿಸೋಕೆ ಅವಕಾಶ ಸಿಗದೇ ತೀರಿ ಹೋದವರಿಗೆ ಆತನ ಬಗ್ಗೆ ತಿಳ್ಕೊಂಡು ಬದಲಾಗೋಕೆ ಆವಾಗ ಅವಕಾಶ ಸಿಗುತ್ತೆ. ಜೀವಂತವಾಗಿ ಎದ್ದು ಬಂದವರಲ್ಲಿ ಯಾರು ಬದಲಾಗುತ್ತಾರೋ ಅವ್ರಿಗೆ “ಶಾಶ್ವತ ಜೀವ” ಸಿಗುತ್ತೆ. ಹಾಗಂತ ಎಲ್ಲರೂ ಬದಲಾಗೋಕೆ ಇಷ್ಟಪಡಲ್ಲ. ಅಂಥವರಿಗೆ ‘ತೀರ್ಪಾಗುತ್ತೆ.’—ಯೋಹಾನ 5:28, 29; ಯೆಶಾಯ 26:10; 65:20 ಓದಿ.
ಈ ತೀರ್ಪಿನ ದಿನ ಸಾವಿರ ವರ್ಷಗಳ ಅವಧಿಯಾಗಿದೆ. ಇದು ಕೊನೆಯಾಗೋಷ್ಟರಲ್ಲಿ ಎಲ್ಲ ಮಾನವರು ಪರಿಪೂರ್ಣರಾಗಿರ್ತಾರೆ ಮತ್ತು ಯೆಹೋವನಿಗೆ ವಿಧೇಯರಾಗಿರ್ತಾರೆ. ಈ ರೀತಿ ಇರಬೇಕು ಅನ್ನೋದೇ ದೇವರ ಇಷ್ಟ. (1 ಕೊರಿಂಥ 15:24-28) ಆ ದಿನವನ್ನ ಸ್ವಲ್ಪ ಊಹಿಸಿಕೊಳ್ಳಿ. ಎಷ್ಟು ಚೆನ್ನಾಗಿರುತ್ತೆ ಅಲ್ವಾ! ಆದ್ರೆ ಕೊನೇ ಪರೀಕ್ಷೆ ಬರುತ್ತೆ. ಆಗ ದೇವರು ಅಗಾಧ ಸ್ಥಳದಿಂದ ಸಾವಿರ ವರ್ಷ ಬಂಧನದಲ್ಲಿದ್ದ ಸೈತಾನನನ್ನ ಬಿಡುಗಡೆ ಮಾಡ್ತಾರೆ. ಆಗಲೂ ಸೈತಾನ ತನ್ನ ಕೈಚಳಕ ತೋರಿಸ್ತಾ ಜನರನ್ನ ಯೆಹೋವನಿಂದ ದೂರ ಮಾಡೋಕೆ ಪ್ರಯತ್ನ ಮಾಡ್ತಾನೆ. ಆದ್ರೆ ಯಾರು ಅವನ ಈ ಮೋಡಿಗೆ ಮರುಳಾಗೋದಿಲ್ವೋ ಅವರು ಶಾಶ್ವತ ಜೀವನ ಪಡ್ಕೊತಾರೆ.—ಯೆಶಾಯ 25:8; ಪ್ರಕಟನೆ 20:7-9 ಓದಿ.
4. ತೀರ್ಪಾಗೋ ದಿನದಿಂದ ಜನರಿಗೆ ಯಾವ ಪ್ರಯೋಜನ ಸಿಗುತ್ತೆ?
ಈಗ ಇರೋ ಕೆಟ್ಟ ಲೋಕ ನಾಶ ಆಗುತ್ತೆ ಅಂತ ಬೈಬಲ್ ಹೇಳುತ್ತೆ, ಅದನ್ನ ‘ತೀರ್ಪಾಗೋ ದಿನ‘ ಅಂತ ಕರೆಯುತ್ತೆ. ಇದು ಹೇಗಿರುತ್ತೆ ಗೊತ್ತಾ? ನೋಹನ ಸಮಯದಲ್ಲಿ ಬಂದ ಜಲಪ್ರಳಯ ಕ್ಷಣಮಾತ್ರದಲ್ಲೇ ಕೆಟ್ಟ ಜನರನ್ನ ನಾಶ ಮಾಡಿತು. ಅದೇ ತರ ಈ ತೀರ್ಪಾಗೋ ದಿನ ದಿಡೀರ್ ಅಂತ ಬರುತ್ತೆ. ಆ ಸಮಯದಲ್ಲಿ ‘ದೇವರ ಮೇಲೆ ಭಕ್ತಿ ಇಲ್ಲದಿರೋ ಮನುಷ್ಯರು’ ಸರ್ವನಾಶ ಆಗ್ತಾರೆ. ಆದ್ರೆ “ನೀತಿವಂತರು” ಇದೇ ಭೂಮಿಯಲ್ಲಿ ಶಾಶ್ವತವಾಗಿ ಇರ್ತಾರೆ.—2 ಪೇತ್ರ 3:6, 7, 13 ಓದಿ.