ಹೀಗೊಂದು ಸಂಭಾಷಣೆ
ದೇವರು ಕಷ್ಟಗಳನ್ನು ಯಾಕೆ ಅನುಮತಿಸಿದ್ದಾನೆ?
ಈ ಮುಂದಿನ ಸಂಭಾಷಣೆ ಯೆಹೋವನ ಸಾಕ್ಷಿಯೊಬ್ಬರ ಮತ್ತು ಬೈಬಲಿನ ಬಗ್ಗೆ ಆಸಕ್ತಿಯಿರುವ ವ್ಯಕ್ತಿಯ ನಡುವೆ ನಡೆಯುವ ಮಾದರಿ ಸಂಭಾಷಣೆಯಾಗಿದೆ. ಯೆಹೋವನ ಸಾಕ್ಷಿಯಾಗಿರುವ ಮಿಶೆಲ್ ಅನ್ನುವವರು ಸೊಫಿಯ ಅನ್ನುವವರ ಮನೆಗೆ ಬೈಬಲ್ ಬಗ್ಗೆ ಚರ್ಚಿಸಲು ಬಂದಿದ್ದಾರೆಂದು ಊಹಿಸೋಣ.
ನಮ್ಮ ಕಷ್ಟಗಳ ಬಗ್ಗೆ ದೇವರಿಗೆ ಹೇಗನಿಸುತ್ತೆ?
ಮಿಶೆಲ್: ಹಾಯ್ ಸೊಫಿಯ ಹೇಗಿದ್ದೀರ?
ಸೊಫಿಯ: ಚನ್ನಾಗಿದ್ದೀನಿ ಮಿಶೆಲ್.
ಮಿಶೆಲ್: ನಮ್ಮ ಕಷ್ಟಗಳನ್ನ ನೋಡಿ ದೇವರಿಗೆ ಹೇಗನಿಸುತ್ತೆ ಅಂತ ಕಳೆದ ಸಲ ಮಾತಾಡಿದ್ವಿ.a ನಿಮ್ಮ ತಾಯಿಗೆ ಆಕ್ಸಿಡೆಂಟ್ ಆದಾಗ ಇದೇ ಪ್ರಶ್ನೆ ನಿಮ್ಮ ಮನಸ್ಸಿಗೂ ಬಂತು ಅಂತ ನೀವು ಹೇಳಿದ್ರಿ. ಈಗ ಅಮ್ಮ ಹೇಗಿದ್ದಾರೆ?
ಸೊಫಿಯ: ಅಮ್ಮ ಕೆಲವು ದಿನ ಚನ್ನಾಗಿರ್ತಾರೆ, ಇನ್ನು ಕೆಲವು ದಿನ ಕಷ್ಟ ಆಗುತ್ತೆ. ಇವತ್ತು ಸ್ವಲ್ಪ ಪರವಾಗಿಲ್ಲ.
ಮಿಶೆಲ್: ಓ ಹೌದಾ, ನಿಮ್ಮ ಅಮ್ಮನ್ನ ನೀವು ತುಂಬ ಚೆನ್ನಾಗಿ ನೋಡಿಕೊಳ್ತಾ ಇದ್ದೀರ.
ಸೊಫಿಯ: ಅಮ್ಮ ಇನ್ನೂ ಎಷ್ಟು ದಿನ ಹೀಗೆ ಕಷ್ಟಪಡಬೇಕೊ ಅಂತ ನನಗೆ ಆಗಾಗ ಚಿಂತೆ ಕಾಡುತ್ತೆ.
ಮಿಶೆಲ್: ಹೀಗನಿಸೋದು ಸಹಜ ಸೊಫಿಯ. ದೇವರಿಗೆ ನಮ್ಮ ಕಷ್ಟಗಳನ್ನ ತೆಗೆದು ಹಾಕೋ ಶಕ್ತಿ ಇದ್ರೂ ಯಾಕೆ ಇನ್ನೂ ಹಾಗೆ ಮಾಡಿಲ್ಲ ಅನ್ನೊ ಪ್ರಶ್ನೆ ನಾನು ಹೋದ ಸಲ ನಿಮಗೆ ಕೇಳಿದ್ದೆ.
ಸೊಫಿಯ: ಹೌದು ನೆನಪಿದೆ.
ಮಿಶೆಲ್: ಈ ಪ್ರಶ್ನೆಗೆ ಬೈಬಲಿಂದ ಉತ್ತರ ತಿಳಿದುಕೊಳ್ಳೋ ಮುಂಚೆ ನಾವು ಕಳೆದ ಸಲ ಮಾತಾಡಿದ ವಿಷ್ಯದ ಬಗ್ಗೆ ಸ್ವಲ್ಪ ಮಾತಾಡೋಣ್ವಾ?
ಸೊಫಿಯ: ಸರಿ.
ಮಿಶೆಲ್: ಬೈಬಲ್ ಸಮಯದಲ್ಲಿ ಜೀವಿಸಿದ ಒಬ್ಬ ನಂಬಿಗಸ್ತ ವ್ಯಕ್ತಿಗೂ ದೇವರು ಯಾಕೆ ತನ್ನ ಕಷ್ಟಗಳನ್ನ ತೆಗೆದು ಹಾಕಿಲ್ಲ ಅನ್ನೊ ಪ್ರಶ್ನೆ ಮನಸ್ಸಿಗೆ ಬಂತು. ಇಂಥ ಪ್ರಶ್ನೆ ಅವನಿಗೆ ಬಂದಿದಕ್ಕೆ ದೇವರು ಅವನನ್ನ ಬೈಲಿಲ್ಲ ಅಥವಾ ’ನಿಂಗೆ ನಂಬಿಕೆ ಇಲ್ಲ’ ಅಂತಾನೂ ಹೇಳಲಿಲ್ಲ.
ಸೊಫಿಯ: ಇದರ ಬಗ್ಗೆ ನಂಗೆ ಗೊತ್ತಿರಲಿಲ್ಲ.
ಮಿಶೆಲ್: ನಾವು ಕಷ್ಟ ಅನುಭವಿಸೋದನ್ನ ನೋಡಕ್ಕೆ ಯೆಹೋವ ದೇವರಿಗೆ ಇಷ್ಟ ಇಲ್ಲ ಅಂತ ಈ ಮುಂಚೆ ಕಲಿತಿದ್ವಿ. ಆತನ ಜನ್ರಿಗೆ ಕಷ್ಟಬಂದಾಗ ’ದೇವರಿಗೂ ಸಂಕಟ ಆಯ್ತು’ ಅಂತ ಬೈಬಲಲ್ಲಿ ಇದೆ.b ಇದನ್ನ ಕೇಳಿದಾಗ ನಮಗೂ ಸಾಂತ್ವನ ಸಿಗುತ್ತೆ ಅಲ್ವಾ?
ಸೊಫಿಯ: ಹೌದು ಖಂಡಿತ.
ಮಿಶೆಲ್: ನಮ್ಮ ಸೃಷ್ಟಿಕರ್ತನಿಗೆ ಅಪಾರ ಶಕ್ತಿ ಇರೋದ್ರಿಂದ ಆತನು ನಮ್ಮ ಕಷ್ಟಗಳನ್ನ ಯಾವಾಗ ಬೇಕಾದ್ರೂ ತೆಗೆದುಹಾಕಬಹುದು ಅಂತನೂ ನಾವು ಮಾತಾಡಿದ್ವಿ.
ಸೊಫಿಯ: ಇದೇ ವಿಷ್ಯ ನಂಗೆ ಅರ್ಥ ಆಗ್ತಿಲ್ಲ. ದೇವರಿಗೆ ಅಷ್ಟೊಂದು ಶಕ್ತಿ ಇದೆ ಅಂದಮೇಲೆ ಯಾಕೆ ಆತನು ಕಷ್ಟಗಳನ್ನ ತೆಗೆದು ಹಾಕಿಲ್ಲ?
ಯಾರು ಸತ್ಯವನ್ನ ಹೇಳ್ತಿದ್ರು?
ಮಿಶೆಲ್: ಈ ಪ್ರಶ್ನೆಗೆ ಉತ್ತರ, ಬೈಬಲಿನ ಮೊದಲನೇ ಪುಸ್ತಕವಾದ ಆದಿಕಾಂಡದಲ್ಲಿದೆ. ನಿಮಗೆ ಆದಾಮ-ಹವ್ವ ಮತ್ತು ತಿನ್ನಬಾರದು ಅಂತ ದೇವರು ಹೇಳಿದ ಹಣ್ಣಿನ ಬಗ್ಗೆ ಗೊತ್ತಿದೆ ಅಲ್ವಾ?
ಸೊಫಿಯ: ಹೌದು ನಾನು ಆ ಕಥೆ ಬಗ್ಗೆ ಕೇಳಿದಿನಿ. ದೇವರು ಒಂದು ಮರದ ಹಣ್ಣನ್ನ ತಿನ್ನಬಾರದು ಅಂತ ಹೇಳಿದ್ರು. ಆದರೆ ಆದಾಮ-ಹವ್ವ ಅದನ್ನ ತಿಂದ್ರು.
ಮಿಶೆಲ್: ಇವರಿಬ್ಬರೂ ತಪ್ಪು ಮಾಡೋ ಮುಂಚೆ ಏನೆಲ್ಲ ನಡಿತು ಅಂತ ನಾವೀಗ ನೋಡೋಣ. ಯಾಕಂದ್ರೆ ಈ ಘಟನೆಯಿಂದ ನಾವ್ಯಾಕೆ ಇವತ್ತು ಕಷ್ಟಗಳನ್ನ ಅನುಭವಿಸ್ತಾ ಇದ್ದೀವಿ ಅಂತ ಗೊತ್ತಾಗುತ್ತೆ. ಆದಿಕಾಂಡ 3ನೇ ಅಧ್ಯಾಯ 1ರಿಂದ 5ನೇ ವಚನ ಓದ್ತೀರ?
ಸೊಫಿಯ: ಸರಿ. “ಯೆಹೋವ ದೇವರು ಮಾಡಿದ ಎಲ್ಲ ಕಾಡುಪ್ರಾಣಿಗಳಲ್ಲಿ ಹಾವು ತುಂಬ ಬುದ್ಧಿವಂತ ಜೀವಿ ಆಗಿತ್ತು. ಅದು ಸ್ತ್ರೀಗೆ “ತೋಟದಲ್ಲಿರೋ ಯಾವ ಮರದ ಹಣ್ಣನ್ನೂ ನೀವು ತಿನ್ನಬಾರದು ಅಂತ ದೇವರು ಹೇಳಿರೋದು ನಿಜನಾ?” ಅಂತ ಕೇಳ್ತು. ಆಗ ಸ್ತ್ರೀ ಹಾವಿಗೆ “ತೋಟದಲ್ಲಿರೋ ಮರಗಳ ಹಣ್ಣುಗಳನ್ನ ನಾವು ತಿನ್ನಬಹುದು. ಆದ್ರೆ ತೋಟದ ಮಧ್ಯದಲ್ಲಿರೋ ಮರದ ಹಣ್ಣಿನ ಬಗ್ಗೆ ‘ನೀವು ಅದನ್ನ ತಿನ್ನಬಾರದು, ಮುಟ್ಟಬಾರದು, ತಿಂದ್ರೆ ಸಾಯ್ತೀರ’ ಅಂತ ದೇವರು ಹೇಳಿದ್ದಾನೆ” ಅಂದಳು. ಆಗ ಹಾವು “ನೀವು ಖಂಡಿತ ಸಾಯಲ್ಲ. ನೀವು ಆ ಹಣ್ಣನ್ನ ತಿಂದ ದಿನಾನೇ ನಿಮ್ಮ ಕಣ್ಣು ತೆರಿಯುತ್ತೆ. ನೀವು ದೇವರ ತರ ಆಗಿ ಯಾವುದು ಒಳ್ಳೇದು ಯಾವುದು ಕೆಟ್ಟದು ಅಂತ ತಿಳ್ಕೊಳ್ತೀರ. ಈ ವಿಷ್ಯ ದೇವರಿಗೆ ಚೆನ್ನಾಗಿ ಗೊತ್ತು” ಅಂತ ಹೇಳ್ತು.”
ಮಿಶೆಲ್: ಥ್ಯಾಂಕ್ಸ್ ಸೊಫಿಯ. ಈ ವಚನಗಳ ಬಗ್ಗೆ ನಾವೀಗ ಸ್ವಲ್ಪ ಮಾತಾಡೋಣ. ಹಾವಿನ ಮೂಲಕ ಹವ್ವಳ ಹತ್ರ ಮಾತಾಡಿದ್ದು ಸೈತಾನ ಅಂತ ಬೈಬಲಿನ ಬೇರೆ ವಚನಗಳಿಂದ ಗೊತ್ತಾಗುತ್ತೆ.c ತೋಟದಲ್ಲಿದ್ದ ಒಂದು ಮರದ ಬಗ್ಗೆ ದೇವರು ಏನು ಹೇಳಿದ್ದಾರೆ ಅಂತ ಸೈತಾನ ಹವ್ವಳ ಹತ್ರ ಕೇಳ್ತಾನೆ. ಆ ಮರದ ಹಣ್ಣನ್ನ ತಿಂದ್ರೆ ಏನು ಶಿಕ್ಷೆ ಅಂತ ದೇವರು ಹೇಳಿದ್ರು?
ಸೊಫಿಯ: ನೀವು ಸಾಯ್ತಿರ ಅಂತ ದೇವರು ಹೇಳಿದ್ರು.
ಮಿಶೆಲ್: ಕರೆಕ್ಟ್. ಆದ್ರೆ ಸೈತಾನ ತಕ್ಷಣ ದೇವರ ಮೇಲೆ ಅಪವಾದ ಹೊರೆಸ್ತಾನೆ. “ನೀವು ಖಂಡಿತ ಸಾಯಲ್ಲ“ ಅಂತ ಹೇಳೋ ಮೂಲಕ ದೇವರ ಮೇಲೆ ಸುಳ್ಳು ಆರೋಪ ಹಾಕ್ತಾನೆ!
ಸೊಫಿಯ: ಇದರ ಬಗ್ಗೆ ನಂಗೆ ಗೊತ್ತೇ ಇರಲಿಲ್ಲ.
ಮಿಶೆಲ್: ದೇವರು ಸುಳ್ಳು ಹೇಳ್ತಿದ್ದಾನೆ ಅಂತ ಸೈತಾನ ಆರೋಪ ಹಾಕಿದಾಗ ಒಂದು ಸಮಸ್ಯೆ ಎದ್ದೇಳ್ತು. ಈ ಸಮಸ್ಯೆಯನ್ನ ಬಗೆಹರಿಸೋಕೆ ಸಮಯ ಹಿಡಿಯುತ್ತೆ.
ಸೊಫಿಯ: ಯಾಕೆ?
ಮಿಶೆಲ್: ಇದನ್ನ ಅರ್ಥ ಮಾಡ್ಕೊಳಕ್ಕೆ ಒಂದು ಉದಾಹರಣೆ ನೋಡೋಣ. ನೆನಸಿ, ನಾನು ಒಂದಿನ ನಿಮ್ಮ ಹತ್ರ ಬಂದು ನಿಮಗಿಂತ ನಂಗೆ ಹೆಚ್ಚು ಶಕ್ತಿ ಇದೆ ಅಂತ ಹೇಳಿದ್ರೆ, ನಾನು ಹೇಳ್ತಿರೋದು ತಪ್ಪು ಅಂತ ಸಾಬೀತು ಮಾಡೊಕ್ಕೆ ನೀವೇನು ಮಾಡ್ತೀರ?
ಸೊಫಿಯ: ನಾನು ಪರೀಕ್ಷೆ ಮಾಡಿ ನೋಡ್ತೀನಿ.
ಮಿಶೆಲ್: ಕರೆಕ್ಟ್. ಒಂದು ಭಾರವಾದ ವಸ್ತುವನ್ನ ತಗೊಂಡು ಇಬ್ಬರಲ್ಲಿ ಯಾರು ಅದನ್ನ ಸುಲಭವಾಗಿ ಎತ್ತುತ್ತಾರೆ ಅಂತ ಪರೀಕ್ಷೆ ಮಾಡ್ಬೇಕು. ಆಗ ಯಾರಿಗೆ ಹೆಚ್ಚು ಶಕ್ತಿಯಿದೆ ಅಂತ ಸುಲಭವಾಗಿ ಗೊತ್ತಾಗುತ್ತೆ.
ಸೊಫಿಯ: ಓಕೆ!
ಮಿಶೆಲ್: ಈಗ ನೆನಸಿ, ನಾನು ನಿಮಗಿಂತ ಹೆಚ್ಚು ಪ್ರಾಮಾಣಿಕಳು ಅಂತ ಹೇಳಿದ್ರೆ ನೀವದನ್ನ ತಕ್ಷಣ ನಂಬ್ತೀರ?
ಸೊಫಿಯ: ಇಲ್ಲ, ತಕ್ಷಣ ನಂಬೋಕೆ ಆಗಲ್ಲ.
ಮಿಶೆಲ್: ಹೌದು. ಪ್ರಾಮಾಣಿಕತೆ ಅನ್ನೋದು ಒಂದು ಗುಣ. ಅದನ್ನ ಒಂದು ಸರಳವಾದ ಪರೀಕ್ಷೆ ಮಾಡಿ ರುಜುಪಡಿಸೋಕೆ ಆಗಲ್ಲ.
ಸೊಫಿಯ: ಹೌದು ಸರಿನೇ.
ಮಿಶೆಲ್: ಯಾರು ಪ್ರಾಮಾಣಿಕರು ಅಂತ ಕಂಡುಹಿಡಿಯೋಕೆ ಸಮಯ ಬೇಕಾಗುತ್ತೆ. ಯಾರಾದ್ರೂ ನಮ್ಮಿಬ್ಬರನ್ನ ಚೆನ್ನಾಗಿ ಗಮನಿಸಬೇಕಾಗುತ್ತೆ.
ಸೊಫಿಯ: ನಿಜ.
ಮಿಶೆಲ್: ನಾವೀಗ ಮತ್ತೆ ಆದಿಕಾಂಡ ಪುಸ್ತಕಕ್ಕೆ ಬರೋಣ. ದೇವರಿಗಿಂತ ನನಗೇ ಹೆಚ್ಚು ಶಕ್ತಿಯಿದೆ ಅಂತ ಸೈತಾನ ಇಲ್ಲಿ ಹೇಳಿದ್ನಾ?
ಸೊಫಿಯ: ಇಲ್ಲ.
ಮಿಶೆಲ್: ಹಾಗೇನಾದ್ರೂ ಹೇಳಿದ್ರೆ, ಅದು ಸುಳ್ಳು ಅಂತ ದೇವರು ತಕ್ಷಣ ರುಜುಪಡಿಸಬಹುದಿತ್ತು. ಆದ್ರೆ ಸೈತಾನ, ನಾನು ದೇವರಿಗಿಂತ ಹೆಚ್ಚು ಪ್ರಾಮಾಣಿಕ ಅಂತ ಹೇಳಿದ. ಅದಕ್ಕೇ ಅವನು ಹವ್ವಳಿಗೆ ಒಂದರ್ಥದಲ್ಲಿ, ’ದೇವರು ನಿಮಗೆ ಸುಳ್ಳು ಹೇಳಿದ್ದಾನೆ, ನಾನು ಹೇಳ್ತಿರೋದೇ ನಿಜ’ ಅಂತ ಹೇಳಿದ.
ಸೊಫಿಯ: ಇದರ ಬಗ್ಗೆ ನಂಗೆ ಗೊತ್ತಿರಲಿಲ್ಲ.
ಮಿಶೆಲ್: ಅದಕ್ಕೇ ದೇವರು ಈ ಸಮಸ್ಯೆಯನ್ನ ಬಗೆಹರಿಸೋಕೆ ಸಮಯ ಕೊಟ್ಟಿದ್ದಾನೆ. ಯಾರು ನಿಜ ಹೇಳಿದ್ರು ಮತ್ತು ಯಾರು ಸುಳ್ಳು ಹೇಳಿದ್ರು ಅಂತ ಆಗ ಸ್ಪಷ್ಟವಾಗಿ ಗೊತ್ತಾಗುತ್ತೆ.
ಒಂದು ದೊಡ್ಡ ಸವಾಲು
ಸೊಫಿಯ: ಆದರೆ ಹವ್ವ ತೀರಿಹೋದ ಮೇಲೆ ದೇವರು ಹೇಳ್ತರೋದೇ ಸತ್ಯ ಅಂತ ಗೊತ್ತಾಯ್ತಲ್ವ?
ಮಿಶೆಲ್: ಒಂದರ್ಥದಲ್ಲಿ ಅದು ನಿಜನೇ ಆದ್ರೆ, ಸೈತಾನ ಹಾಕಿದ ಸವಾಲಿನಲ್ಲಿ ಇನ್ನೂ ಹೆಚ್ಚಿನ ವಿಷ್ಯ ಇತ್ತು. ಅವನು ಹವ್ವಳಿಗೆ ಇನ್ನೇನು ಹೇಳಿದ ಅಂತ 5ನೇ ವಚನದಲ್ಲಿ ಗಮನಿಸಿದ್ರಾ?
ಸೊಫಿಯ: ಆ ಹಣ್ಣನ್ನ ತಿಂದ ದಿನಾನೇ ನಿಮ್ಮ ಕಣ್ಣು ತೆರಿಯುತ್ತೆ ಅಂತ ಸೈತಾನ ಹೇಳಿದ.
ಮಿಶೆಲ್: ಹೌದು, ಅಷ್ಟೇ ಅಲ್ಲ “ನೀವು ದೇವರ ತರ ಆಗಿ ಯಾವುದು ಒಳ್ಳೇದು ಯಾವುದು ಕೆಟ್ಟದು ಅಂತ ತಿಳ್ಕೊಳ್ತೀರ” ಅಂತನೂ ಹೇಳಿದ. ಅಂದ್ರೆ, ಮಾನವರಿಗೆ ಒಳ್ಳೇ ವಿಷಯಗಳು ಸಿಗದ ಹಾಗೆ ದೇವರು ತಡೆಯುತ್ತಾ ಇದ್ದಾನೆ ಅಂತ ಸೈತಾನನ ಮಾತಿನ ಅರ್ಥ ಆಗಿತ್ತು.
ಸೊಫಿಯ: ಹೌದಾ?
ಮಿಶೆಲ್: ಹೌದು, ಇದೊಂದು ದೊಡ್ಡ ಸವಾಲಾಗಿತ್ತು.
ಸೊಫಿಯ: ಅಂದ್ರೆ?
ಮಿಶೆಲ್: ಅಂದ್ರೆ, ಆದಾಮ ಹವ್ವ ಮಾತ್ರ ಅಲ್ಲ, ಎಲ್ಲಾ ಮಾನವರು ಚೆನ್ನಾಗಿ ಇರ್ಬೇಕಂದ್ರೆ ಅವರಿಗೆ ದೇವರ ಆಳ್ವಿಕೆಯ ಅಗತ್ಯ ಇಲ್ಲ ಅಂತ ಸೈತಾನ ಸುಳ್ಳು ಹೇಳಿ ಸವಾಲು ಹಾಕಿದ. ಇದಕ್ಕೆ ಉತ್ತರ ಕೊಡೋಕೆ ಯೆಹೋವ ದೇವರು ಸಮಯ ಕೊಟ್ಟಿದ್ದಾನೆ. ಅದಕ್ಕೇ ಈ ಲೋಕವನ್ನ ಆಳ್ತಾ ಇರೋದು ಸೈತಾನ. ನಾವು ಅನುಭವಿಸ್ತಾ ಇರೋ ಕಷ್ಟಗಳಿಗೆ ಅವನೇ ಕಾರಣ. ದೇವರಲ್ಲ.d ಆದ್ರೆ ಒಂದು ಸಿಹಿಸುದ್ದಿನೂ ಇದೆ.
ಸೊಫಿಯ: ಹೌದಾ? ಏನದು?
ಮಿಶೆಲ್: ದೇವರ ಬಗ್ಗೆ ಇರೋ ಎರಡು ಸತ್ಯಗಳನ್ನ ಬೈಬಲ್ ಹೇಳುತ್ತೆ. ಮೊದಲನೇ ಸತ್ಯ, ನಾವು ಕಷ್ಟದಲ್ಲಿರೋವಾಗ ದೇವರು ನಮ್ಮ ಕಾಳಜಿ ಮಾಡ್ತಾನೆ. ಉದಾಹರಣೆಗೆ ಕೀರ್ತನೆ 31:7ರಲ್ಲಿ ರಾಜ ದಾವೀದನ ಮಾತನ್ನ ಗಮನಿಸಿ. ಅವನು ತನ್ನ ಜೀವನದಲ್ಲಿ ಅನೇಕ ಕಷ್ಟಗಳನ್ನ ಅನುಭವಿಸಿದ. ಆದ್ರೂ ತನ್ನ ಪ್ರಾರ್ಥನೆಯಲ್ಲಿ ದಾವೀದ ಏನಂದ ಅಂತ ಆ ವಚನದಲ್ಲಿದೆ. ನೀವದನ್ನ ದಯವಿಟ್ಟು ಓದ್ತೀರಾ?
ಸೊಫಿಯ: ಸರಿ. “ನಿನ್ನ ಶಾಶ್ವತ ಪ್ರೀತಿಯಿಂದ ನನಗೆ ತುಂಬ ಖುಷಿಯಾಗುತ್ತೆ, ಯಾಕಂದ್ರೆ ನನ್ನ ಸಂಕಟವನ್ನ ನೀನು ನೋಡಿದ್ದೀಯ, ನನ್ನ ಮನದಾಳದ ಯಾತನೆಯನ್ನ ನೀನು ತಿಳ್ಕೊಂಡಿದ್ದೀಯ.”
ಮಿಶೆಲ್: ದಾವೀದನಿಗೆ ಎಷ್ಟೇ ಕಷ್ಟ ಬಂದ್ರೂ ದೇವರು ಅದನ್ನೆಲ್ಲಾ ನೋಡ್ತಿದ್ದಾನೆ ಅನ್ನೊ ವಿಷಯ ಅವನಿಗೆ ಸಾಂತ್ವನ ಕೊಡ್ತು. ನಮ್ಮ ಎಲ್ಲಾ ನೋವು ಬೇರೆಯವರಿಗೆ ಅರ್ಥ ಆಗದೇ ಇರ್ಬಹುದು. ಆದರೆ ಯೆಹೋವ ದೇವರಿಗೆ ಎಲ್ಲನೂ ಅರ್ಥ ಆಗುತ್ತೆ ಅನ್ನೋ ವಿಷ್ಯ ನಮಗೂ ಸಾಂತ್ವನ ಕೊಡುತ್ತೆ ಅಲ್ವಾ?
ಸೊಫಿಯ: ಹೌದೂ ನಿಜವಾಗ್ಲೂ.
ಮಿಶೆಲ್: ಎರಡನೇ ಸತ್ಯ ಏನಂದ್ರೆ ನಮ್ಮ ಕಷ್ಟಗಳು ಮುಂದುವರಿತಾನೇ ಇರುವಂತೆ ದೇವರು ಬಿಡಲ್ಲ. ಸೈತಾನನ ಕೆಟ್ಟ ಆಳ್ವಿಕೆ ಬೇಗನೆ ಕೊನೆ ಆಗುತ್ತೆ ಅಂತ ಬೈಬಲಲ್ಲಿ ಇದೆ. ನಾವೆಲ್ರೂ ಅನುಭವಿಸೋ ಕಷ್ಟಗಳನ್ನ, ನೀವು ಮತ್ತು ನಿಮ್ಮ ತಾಯಿ ಅನುಭವಿಸ್ತಾ ಇರೋ ಕಷ್ಟಗಳನ್ನ ಸಹ ಆತನು ತೆಗೆದು ಹಾಕ್ತಾನೆ. ದೇವರು ಖಂಡಿತ ಕಷ್ಟಗಳನ್ನ ತೆಗೆದು ಹಾಕ್ತಾನೆ ಅಂತ ನಾವು ಹೇಗೆ ನಂಬಬಹುದು ಅನ್ನೋದರ ಬಗ್ಗೆ ನಾವು ಮುಂದಿನ ವಾರ ಮಾತಾಡೋಣ್ವ?e
ಸೊಫಿಯ: ಆಯ್ತು, ಮುಂದಿನ ಸಲ ಖಂಡಿತ ಮಾತಾಡೋಣ.
ಬೈಬಲಿನಲ್ಲಿರುವ ಯಾವುದಾದರೂ ವಿಷಯವನ್ನು ಕಲಿಯಲು ನಿಮಗೆ ಆಸಕ್ತಿಯಿದೆಯಾ? ಯೆಹೋವನ ಸಾಕ್ಷಿಗಳ ನಂಬಿಕೆಗಳೇನು ಅಥವಾ ಅವರ ಆಚಾರ-ವಿಚಾರಗಳೇನು ಎನ್ನುವುದರ ಬಗ್ಗೆ ಕುತೂಹಲವಿದೆಯಾ? ಈ ವಿಷಯಗಳನ್ನು ತಿಳಿದುಕೊಳ್ಳಲು ನಿಮಗೆ ಇಷ್ಟವಿದ್ದರೆ ಯೆಹೋವನ ಸಾಕ್ಷಿಗಳನ್ನು ಸಂಪರ್ಕಿಸಿ. ಅವರು ನಿಮಗೆ ಹೆಚ್ಚಿನ ಮಾಹಿತಿಯನ್ನು ತಿಳಿಸುತ್ತಾರೆ.
a ಕಾವಲಿನಬುರುಜು ಪತ್ರಿಗೆ ಜುಲೈ 1, 2013 (ಇಂಗ್ಲಿಷ್) ಸಂಚಿಕೆಯ “ಹೀಗೊಂದು ಸಂಭಾಷಣೆ—ದೇವರು ನಮ್ಮ ಕಷ್ಟಗಳ ಬಗ್ಗೆ ಚಿಂತಿಸ್ತಾನಾ?” ಅನ್ನೊ ಲೇಖನ ಓದಿ. ಇದು www.jw.orgನಲ್ಲೂ ಲಭ್ಯ.
b ಯೆಶಾಯ 63:9 ನೋಡಿ.
c ಪ್ರಕಟನೆ 12:9 ನೋಡಿ.
d ಯೋಹಾನ 12:31; 1ಯೋಹಾನ 5:19 ನೋಡಿ.
e ಬೈಬಲ್ ನಿಜವಾಗಿಯೂ ಏನನ್ನು ಬೋಧಿಸುತ್ತದೆ? ಪುಸ್ತಕದ 9ನೇ ಅಧ್ಯಾಯ ನೋಡಿ. ಇದು ಯೆಹೋವನ ಸಾಕ್ಷಿಗಳಿಂದ ಪ್ರಕಾಶಿತ. www.jw.orgನಲ್ಲೂ ಲಭ್ಯ.