ಬದುಕು ಬದಲಾದ ವಿಧ
ಬೈಬಲ್ ಕೊಟ್ಟ ಸ್ಪಷ್ಟ ಮತ್ತು ತರ್ಕಬದ್ಧ ಉತ್ತರ ನಂಗೆ ತುಂಬ ಹಿಡಿಸ್ತು
ಜನನ: 1948
ದೇಶ: ಹಂಗೇರಿ
ಹಿಂದೆ: ಜೀವಕ್ಕೆ ಸಂಬಂಧಪಟ್ಟ ಪ್ರಶ್ನೆಗೆ ಉತ್ತರ ಹುಡುಕ್ತಿದ್ರು
ಹಿನ್ನೆಲೆ:
ನಾನು ಹಂಗೇರಿಯಲ್ಲಿರೋ ಶೇಕೆಷ್ಫೆಹೆರ್ವಾರ್ ಪಟ್ಟಣದಲ್ಲಿ ಹುಟ್ಟಿದೆ. ಈ ಸ್ಥಳಕ್ಕೆ ಸಾವಿರಕ್ಕಿಂತ ಹೆಚ್ಚು ವರ್ಷಗಳ ಇತಿಹಾಸ ಇದೆ. ಎರಡ್ನೇ ಮಹಾ ಯುದ್ಧದಿಂದ ಈ ಪಟ್ಟಣಕ್ಕಾದ ಭೀಕರ ಪರಿಣಾಮಗಳನ್ನ ನಂಗೆ ಇವತ್ತೂ ಮರಿಯಕ್ಕಾಗಲ್ಲ, ಅದಿನ್ನೂ ನನ್ನ ಕಣ್ಮುಂದೆನೇ ಇದೆ.
ನಾನು ಬೆಳೆದಿದ್ದು ಅಜ್ಜಿ ಮನೇಲಿ. ನನ್ನ ಅಜ್ಜಿ ಹೆಸ್ರು ಎಲಿಜೆಬೆತ್. ಅವ್ರಂದ್ರೆ ನಂಗೆ ತುಂಬ ಇಷ್ಟ. ದೇವರ ಮೇಲೆ ನಂಬಿಕೆ ಇಡೋಕೆ ಅವ್ರೇ ನಂಗೆ ಸಹಾಯ ಮಾಡಿದ್ದು. ನಂಗೆ ಮೂರು ವರ್ಷ ಇದ್ದಾಗಿಂದ ಅಜ್ಜಿ ಜೊತೆ ಪ್ರತಿದಿನ ಒಡೆಯನ ಪ್ರಾರ್ಥನೆ ಹೇಳ್ತಿದ್ದೆ. ಆದ್ರೆ ನಂಗೆ ಹತ್ರತ್ರ 30 ವರ್ಷ ಆದಾಗ್ಲೇ ಆ ಪ್ರಾರ್ಥನೆ ಅರ್ಥ ಏನಂತ ನಿಜವಾಗ್ಲೂ ಗೊತ್ತಾಗಿದ್ದು.
ನಮಗೇ ಅಂತ ಒಂದು ಒಳ್ಳೆ ಮನೆ ಬೇಕು ಅಂತ ಅಪ್ಪಅಮ್ಮ ಹಗಲೂ ರಾತ್ರಿ ದುಡೀತಿದ್ರು. ಅದಕ್ಕೇ ನನ್ನನ್ನ ಅಜ್ಜಿ ಮನೇಲೇ ಬಿಟ್ಟಿದ್ರು. ತಿಂಗಳಿಗೆ ಎರಡ್ ಸಲ ನಾವೆಲ್ರೂ ಒಟ್ಟಿಗೆ ಸೇರಿ ಊಟ ಮಾಡ್ತಿದ್ವಿ. ನಾವು ಒಟ್ಟಿಗೆ ಕಳೀತಿದ್ದ ಆ ಸಮಯವನ್ನ ನಂಗೆ ಮರಿಯಕ್ಕೇ ಆಗ್ತಿರಲಿಲ್ಲ, ತುಂಬ ಖುಷಿ ಆಗ್ತಿತ್ತು.
1958ರಲ್ಲಿ ನನ್ನ ಅಪ್ಪಅಮ್ಮನ ಕನಸು ನನಸಾಯ್ತು. ಕೊನೆಗೂ ನಾನು, ಅಪ್ಪಅಮ್ಮ ಒಟ್ಟಿಗೆ ಇರಕ್ಕಾಯ್ತು. ನಂಗಾಗಿದ್ದ ಖುಷಿನಾ ಮಾತಲ್ಲಿ ಹೇಳಕ್ಕಾಗಲ್ಲ. ಆದ್ರೆ ಈ ಖುಷಿ ತುಂಬ ದಿನ ಇರಲಿಲ್ಲ. ಯಾಕಂದ್ರೆ 6 ತಿಂಗಳಾದ ಮೇಲೆ ಅಪ್ಪನಿಗೆ ಕ್ಯಾನ್ಸರ್ ಬಂದು ತೀರಿ ಹೋದ್ರು.
ನಂಗೆ ತುಂಬ ದುಃಖ ಆಯ್ತು. ಅದಕ್ಕೆ ನಾನು ದೇವರಿಗೆ, “ನನ್ನ ಅಪ್ಪನ ಕಾಪಾಡು, ನಂಗವ್ರು ಬೇಕು ಅಂದೆ. ಆದ್ರೆ ನೀನು ಅದನ್ನ ಯಾಕೆ ಕೇಳಿಸಿಕೊಂಡಿಲ್ಲ” ಅಂತ ಕೇಳಿದೆ. ಅಪ್ಪನಿಗೆ ಏನಾಗಿದೆ ಅಂತ ತಿಳ್ಕೊಳೋ ಆಸೆ ನನಗಿತ್ತು. ಅದಕ್ಕೆ ‘ಅವ್ರೇನಾದ್ರೂ ಸ್ವರ್ಗಕ್ಕೆ ಹೋಗಿದ್ದಾರಾ? ಅವ್ರನ್ನ ನಾನು ಮತ್ತೆ ನೋಡಕ್ಕೇ ಆಗಲ್ವಾ?’ ಅಂತೆಲ್ಲಾ ಯೋಚಿಸ್ತಿದ್ದೆ. ಬೇರೆ ಮಕ್ಕಳು ಅವ್ರ ಅಪ್ಪನ ಜೊತೆ ಇರೋದನ್ನ ನೋಡ್ದಾಗೆಲ್ಲ ನಂಗೆ ಹೊಟ್ಟೆಕಿಚ್ಚಾಗ್ತಿತ್ತು.
ತುಂಬ ವರ್ಷಗಳ ತನಕ ನಾನು ಅಪ್ಪನ ಸಮಾಧಿ ಹತ್ರ ಹೋಗಿ ಮೊಣಕಾಲೂರಿ “ದೇವ್ರೇ, ನನ್ನ ಅಪ್ಪ ಎಲ್ಲಿದ್ದಾರೆ, ಅದು ನಂಗೆ ಗೊತ್ತಾಗಬೇಕು” ಅಂತ ಪ್ರಾರ್ಥಿಸ್ತಿದ್ದೆ. ಅಷ್ಟೇ ಅಲ್ಲ ಜೀವನದ ಅರ್ಥ ಏನು ಅನ್ನೋದನ್ನ ತಿಳ್ಕೊಳ್ಳೋಕೆ ಸಹಾಯ ಮಾಡು ಅಂತ ಬೇಡಿಕೊಳ್ಳುತ್ತಿದ್ದೆ.
ನಂಗೆ 13 ವರ್ಷ ಆದಾಗ ಜರ್ಮನ್ ಭಾಷೆ ಕಲಿಯೋಕೆ ತೀರ್ಮಾನ ಮಾಡಿದೆ. ಯಾಕಂದ್ರೆ ಜರ್ಮನ್ ಭಾಷೆಯಲ್ಲಿ ತುಂಬ ಸಾಹಿತ್ಯಗಳಿತ್ತು. ಜರ್ಮನ್ ಪುಸ್ತಕಗಳಲ್ಲಿ ನನ್ನ ಪ್ರಶ್ನೆಗಳಿಗೆಲ್ಲಾ ಉತ್ತರ ಸಿಗಬಹುದು ಅಂತ ಅನಿಸ್ತು. 1967ರಲ್ಲಿ ಈಸ್ಟ್ ಜರ್ಮನಿಯ ಜೇನಾ ಅನ್ನೋ ಸ್ಥಳದಲ್ಲಿ ಜರ್ಮನ್ ಕಲಿಯೋಕೆ ಶುರುಮಾಡ್ದೆ. ಜರ್ಮನ್ ತತ್ವಜ್ಞಾನಿಗಳು ಬರೆದಿರೋ ಪುಸ್ತಕಗಳನ್ನ ತುಂಬ ಕುತೂಹಲದಿಂದ ಓದೋಕೆ ಶರುಮಾಡ್ದೆ. ಅದ್ರಲ್ಲೂ ಜೀವದ ಬಗ್ಗೆ ಇದ್ದ ಪುಸ್ತಕಗಳಂದ್ರೆ ನಂಗೆ ವಿಶೇಷವಾದ ಪ್ರೀತಿ ಇತ್ತು. ಕೆಲವೊಂದು ಒಳ್ಳೆ ಮಾಹಿತಿ ಸಿಕ್ಕಿದ್ರೂ ನನ್ನ ಪ್ರಶ್ನೆಗಳಿಗೆ ಉತ್ತರ ಸಿಗಲಿಲ್ಲ. ಹಾಗಾಗಿ ನನ್ನ ಪ್ರಶ್ನೆಗಳಿಗೆ ಉತ್ತರ ಸಿಗಬೇಕು ಅಂತ ಪ್ರಾರ್ಥನೆ ಮಾಡ್ತಾನೇ ಇದ್ದೆ.
ಬದುಕನ್ನೇ ಬದಲಾಯಿಸಿತು ಬೈಬಲ್:
1970ರಲ್ಲಿ ನಾನು ಹಂಗೇರಿಗೆ ವಾಪಸ್ ಬಂದೆ. ಅಲ್ಲಿ ಕಮ್ಯುನಿಸ್ಟ್ ಸರ್ಕಾರಾನೇ ಆಳ್ವಿಕೆ ಮಾಡ್ತಿತ್ತು. ಅಲ್ಲೇ ನಾನು ರೋಸ್ನ ಭೇಟಿಯಾಗಿದ್ದು. ಸ್ವಲ್ಪ ಸಮಯ ಆದ್ಮೇಲೆ ನಾವಿಬ್ರೂ ಮದ್ವೆ ಆದ್ವಿ. ಆಮೇಲೆ ಆಸ್ಟ್ರಿಯಾಗೆ ಹೋದ್ವಿ. ಅಲ್ಲಿಂದ ಸಿಡ್ನಿಗೆ ಹೋಗಬೇಕನ್ನೋದೇ ನಮ್ಮ ಪ್ಲಾನ್ ಆಗಿತ್ತು. ಯಾಕಂದ್ರೆ ಅಲ್ಲಿ ನಮ್ಮ ಅಂಕಲ್ ಇದ್ರು.
ಆಸ್ಟ್ರಿಯಾದಲ್ಲಿ ನಂಗೆ ಕೆಲ್ಸ ಸಿಕ್ತು. ಒಂದಿನ ನನ್ನ ಜೊತೆ ಕೆಲ್ಸ ಮಾಡೋರು ನಿನ್ನ ಪ್ರಶ್ನೆಗಳಿಗೆಲ್ಲಾ ಬೈಬಲಿನಿಂದ ಉತ್ತರ ಸಿಗುತ್ತೆ ಅಂತ ಹೇಳಿದ್ರು. ಅಷ್ಟೇ ಅಲ್ಲ ಬೈಬಲ್ ಬಗ್ಗೆ ಇರೋ ಕೆಲವು ಪುಸ್ತಕಗಳನ್ನೂ ನಂಗೆ ಕೊಟ್ರು. ಅದನ್ನೆಲ್ಲಾ ನಾನು ಬೇಗ್ಬೇಗ ಓದಿ ಮುಗಿಸಿಬಿಟ್ಟೆ. ಆಮೇಲೆ ಯೆಹೋವನ ಸಾಕ್ಷಿಗಳಿಗೆ ಇದೇ ತರ ಇರೊ ಇನ್ನೂ ಜಾಸ್ತಿ ಪುಸ್ತಕಗಳನ್ನೂ ಕಳಿಸ್ಕೊಡಿ ಅಂತ ಪತ್ರ ಬರದೆ.
ನಮ್ಮ ವೆಡ್ಡಿಂಗ್ ಆ್ಯನಿವರ್ಸರಿ ದಿನ ನಮ್ಮನ್ನ ಭೇಟಿ ಮಾಡೋಕೆ ಒಬ್ಬ ಯೆಹೋವನ ಸಾಕ್ಷಿ ಬಂದ್ರು. ಅವರು ನಾವು ಕೇಳ್ಕೊಂಡಿದ್ದ ಪುಸ್ತಕಗಳನ್ನ ತಂದಿದ್ರು ಮತ್ತೆ ಬೈಬಲ್ ಸ್ಟಡಿ ಶರುಮಾಡೋಣ್ವಾ ಅಂತ ಕೇಳಿದ್ರು. ಆಗ ನಾನು ಅದಕ್ಕೆ ಒಪ್ಕೊಂಡೆ. ನಂಗೆ ವಿಷ್ಯಗಳನ್ನ ತಿಳ್ಕೊಳಕ್ಕೆ ತುಂಬ ಆಸೆ ಇದ್ದಿದ್ರಿಂದ ವಾರದಲ್ಲಿ ಎರಡು ಸಲ ಸ್ಟಡಿ ಮಾಡ್ತಿದ್ವಿ. ಒಂದೊಂದು ಸ್ಟಡಿನೂ ನಾಲ್ಕು ನಾಲ್ಕು ತಾಸು ನಡೀತಿತ್ತು.
ಸಾಕ್ಷಿಗಳು ಬೈಬಲಿನಿಂದ ಕಲಿಸಿದ ವಿಷ್ಯಗಳು ನಂಗೆ ತುಂಬ ಇಷ್ಟ ಆಗ್ತಿತ್ತು. ಅವರು ದೇವರ ಹೆಸ್ರು ಯೆಹೋವ ಅಂತ ನನ್ನ ಹಂಗೇರಿ ಭಾಷೆಯ ಬೈಬಲಿನಿಂದಾನೇ ತೋರಿಸ್ಕೊಟ್ರು. ಆಗ ನಂಗೆ ತುಂಬ ಆಶ್ಚರ್ಯ ಆಯ್ತು. 27 ವರ್ಷಗಳಿಂದ ನಾನು ಚರ್ಚಿಗೆ ಹೋಗ್ತಿದ್ದೆ. ಆದ್ರೆ ಈ ಹೆಸ್ರನ್ನ ಯಾವತ್ತೂ ಅಲ್ಲಿ ಕೇಳಿಸ್ಕೊಂಡಿರಲಿಲ್ಲ. ಬೈಬಲ್ ಕೊಟ್ಟ ಸ್ಪಷ್ಟ ಮತ್ತು ತರ್ಕಬದ್ಧ ಉತ್ತರ ನಂಗೆ ತುಂಬ ಹಿಡಿಸ್ತು. ಉದಾಹರಣೆಗೆ ಸತ್ತವ್ರಿಗೆ ಏನೂ ಗೊತ್ತಾಗಲ್ಲ, ಗಾಢ ನಿದ್ರೆಯಲ್ಲಿದ್ದಾರೆ ಅಂತ ಬೈಬಲ್ ಹೇಳುತ್ತೆ. (ಪ್ರಸಂಗಿ 9:5, 10; ಯೋಹಾನ 11:11-15) ಅಷ್ಟೇ ಅಲ್ಲ, ಹೊಸ ಲೋಕದಲ್ಲಿ “ಸಾವೇ ಇರಲ್ಲ” ಅಂತನೂ ನಾನು ಕಲಿತುಕೊಂಡೆ. (ಪ್ರಕಟನೆ 21:3, 4) ದೇವರು ಸತ್ತವ್ರನ್ನ “ಮತ್ತೆ ಬದುಕೋ ತರ” ಮಾಡೋ ಸಮಯದಲ್ಲಿ ನನ್ನ ಅಪ್ಪನನ್ನ ನೋಡೋಕೆ ಕಾಯ್ತಾ ಇದ್ದೀನಿ.—ಅಪೊಸ್ತಲರ ಕಾರ್ಯ 24:15.
ರೋಸ್ ಕೂಡ ಬೈಬಲ್ ಕಲಿಯುತ್ತಿದ್ದಳು. ನಾವು ಬೇಗ್ಬೇಗ ಪ್ರಗತಿ ಮಾಡಿದ್ವಿ. ಎರಡೇ ತಿಂಗಳಲ್ಲಿ ಸ್ಟಡಿ ಮುಗೀತು. ನಾವು ಒಂದು ಕೂಟನೂ ತಪ್ಪಿಸ್ತಿರಲಿಲ್ಲಿ. ಅಲ್ಲಿ ಸಹೋದರರು ಒಬ್ರಿಗೊಬ್ರು ತೋರಿಸ್ತಿದ್ದ ಪ್ರೀತಿ, ಒಬ್ಬಿಗೊಬ್ರು ಮಾಡ್ತಿದ್ದ ಸಹಾಯ, ಆ ಐಕ್ಯತೆ ಅವೆಲ್ಲಾ ನೋಡಿ ನನ್ನ ಮನಸ್ಸು ಮುಟ್ಟಿತು.—ಯೋಹಾನ 13:34, 35.
1976ರಲ್ಲಿ ನಾವು ಆಸ್ಟ್ರೇಲಿಯಾಗೆ ಹೋದ್ವಿ. ಅಲ್ಲಿ ಯೆಹೋವನ ಸಾಕ್ಷಿಗಳನ್ನ ಕಂಡುಹಿಡಿದ್ವಿ. ಅವರು ನಮ್ಮನ್ನ ತುಂಬ ಚೆನ್ನಾಗಿ ನೋಡ್ಕೊಂಡ್ರು. 1978ರಲ್ಲಿ ನಾವು ದೀಕ್ಷಾಸ್ನಾನ ತಗೊಂಡ್ವಿ.
ಸಿಕ್ಕಿದ ಪ್ರಯೋಜನಗಳು:
ವರ್ಷಗಳಿಂದ ನನ್ನನ್ನ ಕಾಡ್ತಿದ್ದ ಪ್ರಶ್ನೆಗಳಿಗೆ ಕೊನೆಗೂ ಉತ್ತರ ಸಿಕ್ತು. ಯೆಹೋವ ದೇವರಿಗೆ ನಾನು ಹತ್ರ ಆದಾಗ ನಂಗೊಬ್ಬ ಒಳ್ಳೇ ತಂದೆ ಸಿಕ್ಕಿದ್ರು. (ಯಾಕೋಬ 4:8) ನಮ್ಮ ಅಪ್ಪನ ಮತ್ತೆ ಹೊಸ ಲೋಕದಲ್ಲಿ ನೋಡಬಹುದು ಅನ್ನೋ ವಿಷ್ಯ ಅಂತೂ ನನ್ನ ಮನಸ್ಸಿಗೆ ತುಂಬ ನೆಮ್ಮದಿ ಕೊಡ್ತು.—ಯೋಹಾನ 5:28, 29.
1989ರಲ್ಲಿ ರೋಸ್ ಮತ್ತು ನಾನು ಹಂಗೇರಿಗೆ ವಾಪಸ್ ಹೋಗೋಕೆ ತೀರ್ಮಾನ ಮಾಡಿದ್ವಿ. ಅಲ್ಲಿರೋ ನಮ್ಮ ಸ್ನೇಹಿತರಿಗೆ, ಕುಟುಂಬದವರಿಗೆ ಮತ್ತು ಬೇರೆಯವ್ರ ಜೊತೆ ಸತ್ಯನಾ ಹಂಚ್ಕೊಂಡಿವಿ. ನೂರಾರು ಜನ್ರಿಗೆ ಬೈಬಲ್ ಕಲಿಸೋ ಅವಕಾಶ ನಮಗೆ ಸಿಕ್ತು. ಈಗ 70ಕ್ಕಿಂತ ಹೆಚ್ಚಿನ ಜನ್ರು ಯೆಹೋವನ ಸಾಕ್ಷಿಗಳಾಗಿದ್ದಾರೆ, ನಮ್ಮ ಜೊತೆ ಸೇರಿ ಯೆಹೋವನನ್ನು ಆರಾಧಿಸ್ತಿದ್ದಾರೆ, ಅವ್ರಲ್ಲಿ ನಮ್ಮಮ್ಮನೂ ಇದ್ದಾರೆ.
ನನ್ನ ಪ್ರಶ್ನೆಗಳಿಗೆಲ್ಲಾ ಉತ್ತರ ಸಿಗೋಕೆ ನಾನು 17 ವರ್ಷ ಪ್ರಾರ್ಥನೆ ಮಾಡಿದೆ. ಈಗ 39 ವರ್ಷ ಆದಮೇಲೂ ಪ್ರಾರ್ಥನೆ ಮಾಡೋದನ್ನ ನಿಲ್ಲಿಸಲಿಲ್ಲ. ನಾನು ಹೇಳೋಕೆ ಇಷ್ಟಪಡೋ ವಿಷ್ಯ ಏನಂದ್ರೆ “ಅಪ್ಪಾ ಯೆಹೋವನೇ ಚಿಕ್ಕ ವಯಸ್ಸಲ್ಲಿ ನಾನು ಮಾಡಿರೋ ಪ್ರಾರ್ಥನೆಗೆ ನೀನು ಉತ್ತರ ಕೊಟ್ಟಿದ್ದೀಯಾ, ಅದಕ್ಕೆ ತುಂಬ ಥ್ಯಾಂಕ್ಸ್.”