“ನಂಬಿಕೆಯಲ್ಲಿ ದೃಢರಾಗಿ ನಿಂತುಕೊಳ್ಳಿರಿ”
“ನಂಬಿಕೆಯಲ್ಲಿ ದೃಢರಾಗಿ ನಿಂತುಕೊಳ್ಳಿರಿ . . . ಬಲಿಷ್ಠರಾಗಿ ಬೆಳೆಯಿರಿ.” —1 ಕೊರಿಂ. 16:13.
1. (ಎ) ಗಲಿಲಾಯದ ಸಮುದ್ರದಲ್ಲಿ ಬಿರುಗಾಳಿಯೆದ್ದಾಗ ಪೇತ್ರ ಏನು ಮಾಡಿದನು? (ಲೇಖನದ ಆರಂಭದ ಚಿತ್ರ ನೋಡಿ.) (ಬಿ) ಪೇತ್ರ ಮುಳುಗಲಾರಂಭಿಸಿದ್ದು ಏಕೆ?
ಒಂದು ರಾತ್ರಿ ಅಪೊಸ್ತಲ ಪೇತ್ರ ಮತ್ತು ಕೆಲವು ಶಿಷ್ಯರು ಗಲಿಲಾಯದ ಸಮುದ್ರವನ್ನು ದೋಣಿಯಲ್ಲಿ ದಾಟುತ್ತಿದ್ದರು. ಬಿರುಗಾಳಿ ಬೀಸುತ್ತಾ ಇತ್ತು. ದೋಣಿಯನ್ನು ಮುಂದೆ ಸಾಗಿಸಲು ತುಂಬ ಕಷ್ಟಪಡುತ್ತಿದ್ದರು. ತಟ್ಟನೇ ಅವರಿಗೆ, ಯೇಸು ಸಮುದ್ರದ ಮೇಲೆ ನಡೆದು ಬರುತ್ತಿದ್ದದ್ದು ಕಣ್ಣಿಗೆ ಬಿತ್ತು. ಪೇತ್ರನು ಯೇಸುವನ್ನು ಕೂಗಿ ಕರೆದು, ತಾನು ನೀರಿನ ಮೇಲೆ ನಡೆಯಬೇಕೆಂದು ಹೇಳಿದನು. ಯೇಸು ಅವನಿಗೆ “ಬಾ” ಎಂದಾಗ ಪೇತ್ರ ದೋಣಿಯಿಂದ ಇಳಿದು ನೀರಿನ ಮೇಲೆ ನಡೆಯುತ್ತಾ ಅವನ ಕಡೆಗೆ ಹೋಗಲು ಶುರುಮಾಡಿದ. ಆದರೆ ಸ್ವಲ್ಪ ಸಮಯದಲ್ಲೇ ಪೇತ್ರ ಮುಳುಗಲಾರಂಭಿಸಿದ. ಏಕೆ? ಬಿರುಗಾಳಿ, ಅಲೆಗಳನ್ನು ನೋಡಿ ಹೆದರಿಹೋದ. ತನಗೆ ಸಹಾಯಮಾಡುವಂತೆ ಪೇತ್ರನು ಕೂಗಿದಾಗ ಯೇಸು ಕೂಡಲೇ ಅವನನ್ನು ಹಿಡಿದು, “ಎಲೈ ಅಲ್ಪವಿಶ್ವಾಸಿಯೇ, ನೀನೇಕೆ ಸಂಶಯಕ್ಕೆ ಆಸ್ಪದಕೊಟ್ಟೆ?” ಎಂದು ಹೇಳಿದನು.—ಮತ್ತಾ. 14:24-32.
2. ನಾವೀಗ ಏನನ್ನು ಚರ್ಚಿಸಲಿದ್ದೇವೆ?
2 ಪೇತ್ರನಿಗಾದ ಅನುಭವದಿಂದ ನಂಬಿಕೆಯ ಕುರಿತು ಕಲಿಯಬಹುದಾದ ಈ ಮೂರು ವಿಷಯಗಳ ಬಗ್ಗೆ ಈಗ ಚರ್ಚಿಸೋಣ: (1) ಯೆಹೋವನು ತನಗೆ ಸಹಾಯ ಮಾಡಬಲ್ಲನೆಂದು ಆರಂಭದಲ್ಲಿ ಪೇತ್ರನು ಭರವಸೆ ತೋರಿಸಿದ್ದು ಹೇಗೆ? (2) ಪೇತ್ರನು ನಂಬಿಕೆಯನ್ನು ಕಳಕೊಂಡದ್ದೇಕೆ? (3) ತನ್ನ ನಂಬಿಕೆಯನ್ನು ಪುನಃ ಪಡೆಯಲು ಪೇತ್ರನಿಗೆ ಸಹಾಯಮಾಡಿದ್ದು ಯಾವುದು? ಈ ವಿಷಯಗಳ ಚರ್ಚೆಯಿಂದ ನಾವು ಹೇಗೆ “ನಂಬಿಕೆಯಲ್ಲಿ ದೃಢರಾಗಿ ನಿಂತು”ಕೊಳ್ಳಬಹುದೆಂದು ನೋಡೋಣ.—1 ಕೊರಿಂ. 16:13.
ದೇವರು ನಮಗೆ ಸಹಾಯ ಮಾಡುವನೆಂಬ ನಂಬಿಕೆ
3. (ಎ) ಪೇತ್ರನು ದೋಣಿಯಿಂದ ಇಳಿದುಬಂದದ್ದೇಕೆ? (ಬಿ) ಪೇತ್ರನಂತೆ ನಾವೇನು ಮಾಡಿದ್ದೇವೆ?
3 ಪೇತ್ರನು ದೋಣಿಯಿಂದ ಇಳಿದು ನೀರಿನ ಮೇಲೆ ನಡೆಯಲಾರಂಭಿಸಿದ್ದು ನಂಬಿಕೆಯಿಂದ. ಯೇಸು ಅವನನ್ನು ಕರೆದಾಗ, ದೇವರ ಶಕ್ತಿ ಯೇಸುವಿಗೆ ಸಹಾಯಮಾಡಿದಂತೆ ತನಗೂ ಸಹಾಯಮಾಡುವುದೆಂದು ಪೇತ್ರನು ಭರವಸೆಯಿಟ್ಟನು. ಹಾಗೆಯೇ ನಾವು ನಮ್ಮನ್ನು ಯೆಹೋವನಿಗೆ ಸಮರ್ಪಿಸಿ ದೀಕ್ಷಾಸ್ನಾನ ಪಡೆದದ್ದು ನಂಬಿಕೆಯಿಂದ. ಯೇಸು ನಮಗೂ ತನ್ನ ಹಿಂಬಾಲಕರಾಗುವಂತೆ, ತನ್ನ ಹೆಜ್ಜೆಜಾಡಿನಲ್ಲಿ ನಡೆಯುವಂತೆ ಕರೆದನು. ಯೇಸು ಮತ್ತು ಯೆಹೋವನಲ್ಲಿ ನಾವು ನಂಬಿಕೆಯಿಟ್ಟೆವು. ಅವರು ನಮಗೆ ಸಹಾಯ ಮಾಡುವರೆಂದು ಭರವಸೆಯಿಟ್ಟೆವು.—ಯೋಹಾ. 14:1; 1 ಪೇತ್ರ 2:21 ಓದಿ.
4, 5. ನಂಬಿಕೆಯು ಅಮೂಲ್ಯವಾದದ್ದೆಂದು ಏಕೆ ಹೇಳಬಹುದು?
4 ನಂಬಿಕೆ ಎನ್ನುವುದು ತುಂಬ ಅಮೂಲ್ಯ. ಪೇತ್ರನಿಗಿದ್ದ ನಂಬಿಕೆಯಿಂದ ಅವನು ಮನುಷ್ಯರಿಗೆ ಅಸಾಧ್ಯವೆಂದು ತೋರಿದ್ದನ್ನು ಮಾಡಿದನು. ನೀರಿನ ಮೇಲೆ ನಡೆದನು. ಹಾಗೆಯೇ ನಮಗೆ ನಂಬಿಕೆಯಿದ್ದರೆ ಅಸಾಧ್ಯವೆಂದು ತೋರುವಂಥದ್ದನ್ನು ನಾವೂ ಮಾಡಸಾಧ್ಯ. (ಮತ್ತಾ. 21:21, 22) ನಮ್ಮಲ್ಲಿ ಕೆಲವರು ಮನೋಭಾವ ಮತ್ತು ನಡವಳಿಕೆಯಲ್ಲಿ ಬದಲಾವಣೆಗಳನ್ನು ಮಾಡಿದ್ದೇವೆ. ನಮ್ಮ ಪರಿಚಯವಿದ್ದವರಿಗೆ ಅದನ್ನು ನೋಡಿ ನಂಬಲಿಕ್ಕೇ ಆಗುವುದಿಲ್ಲ. ನಾವು ಯೆಹೋವನನ್ನು ಪ್ರೀತಿಸುವುದರಿಂದ ಮತ್ತು ಆತನು ಸಹಾಯ ಮಾಡಿದ್ದರಿಂದ ಈ ಬದಲಾವಣೆಗಳನ್ನು ಮಾಡಿದ್ದೇವೆ. (ಕೊಲೊಸ್ಸೆ 3:5-10 ಓದಿ.) ನಮ್ಮ ನಂಬಿಕೆಯು ನಾವು ನಮ್ಮನ್ನೇ ಯೆಹೋವನಿಗೆ ಸಮರ್ಪಿಸಿಕೊಳ್ಳಲು ಪ್ರೇರೇಪಿಸಿತು. ನಾವಾತನ ಸ್ನೇಹಿತರಾದೆವು. ಇದನ್ನು ನಾವು ಯೆಹೋವನ ಸಹಾಯವಿಲ್ಲದೆ ಯಾವತ್ತೂ ಮಾಡಲು ಆಗುತ್ತಿರಲಿಲ್ಲ.—ಎಫೆ. 2:8.
5 ನಮ್ಮ ನಂಬಿಕೆ ನಮಗೆ ಬೇಕಾದ ಬಲವನ್ನು ಕೊಡುತ್ತದೆ. ಉದಾಹರಣೆಗೆ, ಶಕ್ತಿಶಾಲಿ ವೈರಿಯಾದ ಪಿಶಾಚನ ಆಕ್ರಮಣಗಳ ವಿರುದ್ಧ ಹೋರಾಡಲು ಅದು ನಮಗೆ ಸಹಾಯ ಮಾಡುತ್ತದೆ. (ಎಫೆ. 6:16) ಅಲ್ಲದೆ ನಮಗೆ ಸಮಸ್ಯೆಗಳಿದ್ದರೂ ಯೆಹೋವನ ಮೇಲೆ ಭರವಸೆ ಇರುವುದರಿಂದ ಅವುಗಳ ಬಗ್ಗೆ ತೀರಾ ಹೆಚ್ಚು ಚಿಂತೆ ಮಾಡುವುದಿಲ್ಲ. ನಾವಾತನಲ್ಲಿ ನಂಬಿಕೆಯಿಟ್ಟರೆ, ಆತನ ರಾಜ್ಯಕ್ಕೆ ಪ್ರಥಮ ಸ್ಥಾನ ಕೊಟ್ಟರೆ ನಮಗೆ ಅಗತ್ಯವಿರುವುದನ್ನು ಕೊಡುತ್ತೇನೆಂದು ಯೆಹೋವನು ಮಾತುಕೊಟ್ಟಿದ್ದಾನೆ. (ಮತ್ತಾ. 6:30-34) ಅದಕ್ಕಿಂತಲೂ ಹೆಚ್ಚಾಗಿ, ನಮ್ಮ ನಂಬಿಕೆಗಾಗಿ ಆತನು ನಮಗೆ ನಿತ್ಯಜೀವವೆಂಬ ಅದ್ಭುತ ಉಡುಗೊರೆ ಕೊಡಲಿದ್ದಾನೆ.—ಯೋಹಾ. 3:16.
ಗಮನ ಬೇರೆಡೆ ಹೋದರೆ ನಂಬಿಕೆ ಕಳಕೊಳ್ಳುತ್ತೇವೆ
6, 7. (ಎ) ಪೇತ್ರನಲ್ಲಿ ಹೆದರಿಕೆ ಹುಟ್ಟಿಸಿದ ಬಿರುಗಾಳಿ ಮತ್ತು ಅಲೆಗಳನ್ನು ಯಾವುದಕ್ಕೆ ಹೋಲಿಸಬಹುದು? (ಬಿ) ನಮ್ಮ ನಂಬಿಕೆಯನ್ನು ಕಳಕೊಳ್ಳುವ ಸಾಧ್ಯತೆ ಇದೆಯೆಂದು ನಾವೇಕೆ ಗ್ರಹಿಸಬೇಕು?
6 ಪೇತ್ರನು ಗಲಿಲಾಯದ ಸಮುದ್ರದಲ್ಲಿ ನಡೆಯುತ್ತಿದ್ದಾಗ ಬಿರುಗಾಳಿ ಮತ್ತು ಅಲೆಗಳನ್ನು ನೋಡಿ ಹೆದರಿಹೋದ. ಈ ಬಿರುಗಾಳಿ ಮತ್ತು ಅಲೆಗಳನ್ನು ಕ್ರೈಸ್ತರು ಇಂದು ಅನುಭವಿಸುವ ಅನೇಕ ಕಷ್ಟಪರೀಕ್ಷೆಗಳಿಗೆ ಮತ್ತು ತಪ್ಪುಮಾಡಲು ಬರುವ ಒತ್ತಡಗಳಿಗೆ ಹೋಲಿಸಬಹುದು. ಈ ಸಮಸ್ಯೆಗಳು ತುಂಬ ಕಷ್ಟಕರವಾಗಿದ್ದರೂ ಯೆಹೋವನ ಸಹಾಯದಿಂದ ನಾವು ದೃಢರಾಗಿರಬಲ್ಲೆವು. ಆದರೆ ಪೇತ್ರನಿಗೆ ಏನಾಯಿತೆಂದು ನೆನಪಿಸಿಕೊಳ್ಳಿ. ಅವನು ಮುಳುಗಲಾರಂಭಿಸಿದ್ದು ಆ ಬಿರುಗಾಳಿ ಮತ್ತು ಅಪ್ಪಳಿಸುತ್ತಿದ್ದ ಅಲೆಗಳಿಂದಾಗಿ ಅಲ್ಲ. ಬದಲಿಗೆ ‘ಬಿರುಗಾಳಿಯನ್ನು ನೋಡಿ ಭಯಗೊಂಡನು’ ಎನ್ನುತ್ತದೆ ಬೈಬಲ್. (ಮತ್ತಾ. 14:30) ಪೇತ್ರನು ಯೇಸುವನ್ನು ನೋಡುವುದನ್ನು ನಿಲ್ಲಿಸಿ, ಬಿರುಗಾಳಿಯ ಶಕ್ತಿಗೆ ಗಮನಕೊಟ್ಟನು. ಆಗ ಅವನ ನಂಬಿಕೆ ಬಲಹೀನವಾಗಲು ಶುರುವಾಯಿತು. ಹಾಗೆಯೇ ನಮ್ಮ ಗಮನ ಬರೀ ಸಮಸ್ಯೆಗಳ ಮೇಲಿದ್ದರೆ, ಯೆಹೋವನು ನಮಗೆ ಸಹಾಯ ಮಾಡಬಲ್ಲನೆಂಬ ಸಂಗತಿಯನ್ನು ಸಂಶಯಿಸಲು ಆರಂಭಿಸುವೆವು.
7 ನಮ್ಮ ನಂಬಿಕೆಯನ್ನು ಕಳಕೊಳ್ಳುವ ಸಾಧ್ಯತೆ ಇದೆಯೆಂದು ನಾವು ಗ್ರಹಿಸಬೇಕು. ಏಕೆ? ಏಕೆಂದರೆ ನಂಬಿಕೆಯ ನಷ್ಟವು “ಸುಲಭವಾಗಿ ಸುತ್ತಿಕೊಳ್ಳುವ ಪಾಪ” ಆಗಿದೆ ಎನ್ನುತ್ತದೆ ಬೈಬಲ್. (ಇಬ್ರಿ. 12:1) ಪೇತ್ರನಂತೆ ನಾವು ತಪ್ಪಾದ ವಿಷಯಗಳಿಗೆ ಗಮನಕೊಡಲು ಆರಂಭಿಸಿದರೆ ನಮ್ಮ ನಂಬಿಕೆ ಬೇಗನೆ ಬಲಹೀನವಾಗುತ್ತದೆ. ಆದರೆ ನಮ್ಮ ನಂಬಿಕೆ ಅಪಾಯದಲ್ಲಿದೆಯೆಂದು ನಮಗೆ ಗೊತ್ತಾಗುವುದಾದರೂ ಹೇಗೆ? ಈ ಮುಂದಿನ ಪ್ರಶ್ನೆಗಳು ನಮಗೆ ನಮ್ಮನ್ನು ಪರೀಕ್ಷಿಸಿಕೊಳ್ಳುವಂತೆ ನೆರವಾಗುವವು.
8. ದೇವರ ವಾಗ್ದಾನಗಳು ನಮಗೆ ಹಿಂದಿನಷ್ಟು ನಿಜವೆಂದು ಅನಿಸದಿರಲು ಕಾರಣಗಳೇನು?
8 ದೇವರ ವಾಗ್ದಾನಗಳು ನನಗೆ ಹಿಂದೆ ಎಷ್ಟು ನಿಜವಾಗಿದ್ದವೊ ಈಗಲೂ ಅಷ್ಟೇ ನಿಜವಾಗಿವೆಯಾ? ಉದಾಹರಣೆಗೆ, ದೇವರು ಸೈತಾನನ ಲೋಕವನ್ನು ನಾಶಮಾಡುವುದಾಗಿ ಮಾತುಕೊಟ್ಟಿದ್ದಾನೆ. ಹಾಗಿದ್ದರೂ ಈ ಲೋಕವು ನೀಡುವ ಬೇರೆಬೇರೆ ವಿಧದ ಮನೋರಂಜನೆಯಿಂದ ಅಪಕರ್ಷಿತರಾಗುತ್ತಿದ್ದೇವಾ? ಹಾಗಿದ್ದರೆ ಅಂತ್ಯವು ನಿಜವಾಗಿ ಹತ್ತಿರವಿದೆಯಾ ಎಂಬ ಸಂಶಯ ನಮ್ಮಲ್ಲಿ ಹುಟ್ಟಬಹುದು. (ಹಬ. 2:3) ಇನ್ನೊಂದು ಉದಾಹರಣೆ ನೋಡಿ. ಯೆಹೋವನು ನಮಗಾಗಿ ವಿಮೋಚನಾ ಮೌಲ್ಯ ಕೊಟ್ಟಿದ್ದಾನೆ. ನಮ್ಮ ತಪ್ಪುಗಳನ್ನು ಕ್ಷಮಿಸುವನೆಂದು ಮಾತುಕೊಟ್ಟಿದ್ದಾನೆ. ಆದರೆ ನಮ್ಮ ಹಿಂದಿನ ತಪ್ಪುಗಳ ಬಗ್ಗೆಯೇ ಯೋಚಿಸುತ್ತಾ ಇದ್ದರೆ, ಯೆಹೋವನು ನಮ್ಮನ್ನು ನಿಜವಾಗಿ ಕ್ಷಮಿಸಿದ್ದಾನಾ ಎಂಬ ಸಂಶಯ ನಮಗೆ ಬರಬಹುದು. (ಅ. ಕಾ. 3:19) ಆಗ ದೇವರ ಸೇವೆಯಲ್ಲಿ ಸಿಗುವಂಥ ಆನಂದವನ್ನು ಕಳಕೊಳ್ಳುತ್ತೇವೆ ಮತ್ತು ಸಾರುವುದನ್ನು ನಿಲ್ಲಿಸುತ್ತೇವೆ.
9. ನಮ್ಮ ಜೀವನದಲ್ಲಿ ಸ್ವಂತ ಆಸೆ, ಕೆಲಸಕಾರ್ಯಗಳಿಗೆ ಮಾತ್ರ ಗಮನಕೊಟ್ಟರೆ ಏನಾಗಬಹುದು?
9 ಹಿಂದಿನಂತೆಯೇ ನಾನು ಈಗಲೂ ಯೆಹೋವನಿಗೆ ನನ್ನಿಂದಾದ ಎಲ್ಲವನ್ನೂ ಕೊಡುತ್ತಿದ್ದೇನಾ? ನಾವು ಯೆಹೋವನಿಗಾಗಿ ಶ್ರಮಪಟ್ಟು ದುಡಿಯುವಾಗ ಭವಿಷ್ಯಕ್ಕಾಗಿರುವ ನಿರೀಕ್ಷೆಗೆ ಪೂರ್ಣ ಗಮನ ಕೊಡಲು ಸಾಧ್ಯವಾಗುತ್ತದೆ. ಆದರೆ ನಮ್ಮ ಸ್ವಂತ ಆಸೆ, ಕೆಲಸಕಾರ್ಯಗಳಿಗೇ ಹೆಚ್ಚು ಗಮನಕೊಡಲು ಆರಂಭಿಸಿದ್ದೇವಾ? ಉದಾಹರಣೆಗೆ, ನಾವು ಆರಿಸಿರುವ ಉದ್ಯೋಗದಿಂದ ಒಳ್ಳೇ ಸಂಬಳ ಸಿಗುತ್ತಿರಬಹುದು ಆದರೆ ಯೆಹೋವನ ಸೇವೆ ಮಾಡಲು ಹೆಚ್ಚು ಸಮಯ ಸಿಗುತ್ತಿರಲಿಕ್ಕಿಲ್ಲ. ಇದರಿಂದ ನಮ್ಮ ನಂಬಿಕೆ ಬಲಹೀನವಾಗಬಹುದು. ನಾವು “ಆಲಸಿ”ಗಳಾಗಬಹುದು ಅಂದರೆ ಯೆಹೋವನಿಗಾಗಿ ನಾವು ನಿಜವಾಗಿ ಎಷ್ಟನ್ನು ಮಾಡಸಾಧ್ಯವಿದೆಯೊ ಅದಕ್ಕಿಂತ ಕಡಿಮೆ ಮಾಡುತ್ತಿರಬಹುದು.—ಇಬ್ರಿ. 6:10-12.
10. ಬೇರೆಯವರನ್ನು ಕ್ಷಮಿಸುವಾಗ ನಾವು ಹೇಗೆ ಯೆಹೋವನ ಮೇಲೆ ನಂಬಿಕೆ ತೋರಿಸುತ್ತೇವೆ?
10 ಕ್ಷಮಿಸಲು ನನಗೆ ಕಷ್ಟವಾಗುತ್ತದಾ? ಬೇರೆಯವರಿಂದ ನಮಗೆ ತುಂಬ ನೋವಾದಾಗ ಅವರ ಮೇಲೆ ಕೋಪ ಮಾಡಿಕೊಳ್ಳುತ್ತೇವಾ? ಅವರೊಟ್ಟಿಗೆ ಮಾತಾಡುವುದನ್ನೇ ನಿಲ್ಲಿಸಿಬಿಡುತ್ತೇವಾ? ಹಾಗೆ ಮಾಡುತ್ತಿರುವಲ್ಲಿ ನಾವು ನಮ್ಮ ಸ್ವಂತ ಭಾವನೆಗಳಿಗೇ ಹೆಚ್ಚು ಗಮನ ಕೊಡುತ್ತಿದ್ದೇವೆ ಎಂದರ್ಥ. ಆದರೆ ನಾವು ಬೇರೆಯವರನ್ನು ಕ್ಷಮಿಸುವಾಗ ಯೆಹೋವನ ಮೇಲೆ ನಮಗಿರುವ ನಂಬಿಕೆಯನ್ನು ತೋರಿಸುತ್ತೇವೆ. ಹೇಗೆ? ನಾವು ಯೆಹೋವನ ವಿರುದ್ಧ ಪಾಪ ಮಾಡುವಾಗ ಆತನ ಸಾಲಗಾರರಾಗುವಂತೆಯೇ ಯಾರಾದರೂ ನಮ್ಮ ವಿರುದ್ಧ ಪಾಪ ಮಾಡಿದಾಗ ಅವರು ನಮ್ಮ ಸಾಲಗಾರರಾಗುತ್ತಾರೆ. (ಲೂಕ 11:4, ಪಾದಟಿಪ್ಪಣಿ) ಆದರೆ ನಾವು ಅವರನ್ನು ಕ್ಷಮಿಸುವಾಗ ಅವರಿಂದ ಆ ಸಾಲವನ್ನು ವಾಪಸ್ಸು ಪಡೆಯುವುದಿಲ್ಲ. ಅದಕ್ಕಿಂತ ಯೆಹೋವನ ಮೆಚ್ಚಿಕೆ ಪಡೆಯುವುದು ಹೆಚ್ಚು ಪ್ರಾಮುಖ್ಯವೆಂದು ಭರವಸೆಯಿಡುತ್ತೇವೆ. ಬೇರೆಯವರನ್ನು ಕ್ಷಮಿಸಲು ನಂಬಿಕೆಯ ಅಗತ್ಯವಿದೆ ಎಂದು ಯೇಸುವಿನ ಶಿಷ್ಯರು ಕಲಿತರು. ತಮ್ಮ ವಿರುದ್ಧ ಅನೇಕ ಸಲ ಪಾಪ ಮಾಡಿದವರನ್ನು ಕ್ಷಮಿಸಬೇಕು ಎಂದು ಯೇಸು ತನ್ನ ಶಿಷ್ಯರಿಗೆ ಹೇಳಿದಾಗ ಅವರು “ನಮಗೆ ಇನ್ನೂ ಹೆಚ್ಚು ನಂಬಿಕೆಯನ್ನು ದಯಪಾಲಿಸು” ಎಂದು ಅವನಿಗೆ ಬೇಡಿಕೊಂಡರು.—ಲೂಕ 17:1-5.
11. ಕೊಡಲಾದ ಬುದ್ಧಿವಾದದಿಂದ ಕಲಿಯಲು ನಾವೇಕೆ ತಪ್ಪಬಹುದು?
11 ನನಗೆ ಯಾರಾದರೂ ಬುದ್ಧಿವಾದ ಕೊಡುವಾಗ ಸಿಟ್ಟುಮಾಡುತ್ತೇನಾ? ಕೊಡಲಾದ ಬುದ್ಧಿವಾದದಿಂದ ಏನು ಕಲಿಯಬಹುದೆಂದು ನೋಡಿ. ಅದನ್ನು ಬಿಟ್ಟು, ಬುದ್ಧಿವಾದ ಕೊಟ್ಟವರಲ್ಲೇ ತಪ್ಪುಗಳನ್ನು, ಬಲಹೀನತೆಗಳನ್ನು ಹುಡುಕಬೇಡಿ. (ಜ್ಞಾನೋ. 19:20) ಯೆಹೋವನಂತೆ ಯೋಚಿಸಲು ಕಲಿಯಲಿಕ್ಕಾಗಿ ನಿಮಗೆ ಸಿಕ್ಕಿರುವ ಅವಕಾಶ ಕೈಜಾರಿ ಹೋಗದಂತೆ ನೋಡಿಕೊಳ್ಳಿ!
12. ಜವಾಬ್ದಾರಿಯ ಸ್ಥಾನದಲ್ಲಿರುವವರ ಬಗ್ಗೆ ಗೊಣಗುತ್ತಾ ಇದ್ದರೆ ಅದರಲ್ಲೇನು ತಪ್ಪಿದೆ?
12 ಸಭೆಯಲ್ಲಿ ಜವಾಬ್ದಾರಿಯ ಸ್ಥಾನದಲ್ಲಿರುವವರ ಬಗ್ಗೆ ಗುಣುಗುಟ್ಟುತ್ತಾ ಇರುತ್ತೇನಾ? ಹತ್ತು ಮಂದಿ ಗೂಢಚಾರರು ತಂದ ಕೆಟ್ಟ ವರದಿಗೆ ಇಸ್ರಾಯೇಲ್ಯರು ಹೆಚ್ಚು ಗಮನಕೊಟ್ಟದ್ದರಿಂದ ಅವರು ಮೋಶೆ ಆರೋನರ ವಿರುದ್ಧ ಗುಣುಗುಟ್ಟಲು ಶುರುಮಾಡಿದರು. ಆಗ ಯೆಹೋವನು “ಈ ಜನರು . . . ಇನ್ನು ಎಷ್ಟು ದಿನ ನನ್ನನ್ನು ನಂಬದೆ ಇರುವರೋ” ಎಂದು ಮೋಶೆಗೆ ಕೇಳಿದನು. (ಅರ. 14:2-4, 11) ಯೆಹೋವನು ನೇಮಿಸಿದ್ದ ಮೋಶೆ ಆರೋನರ ವಿರುದ್ಧ ಇಸ್ರಾಯೇಲ್ಯರು ಮಾತಾಡಿದ್ದರಿಂದ ಅವರು ದೇವರಲ್ಲಿ ಭರವಸೆ ಇಟ್ಟಿಲ್ಲವೆಂದು ತೋರಿಸಿದರು. ಇಂದು ಸಹ ನಾವು ಯೆಹೋವನು ತನ್ನ ಜನರನ್ನು ನಡೆಸಲು ನೇಮಿಸಿರುವವರ ಬಗ್ಗೆ ಗೊಣಗುತ್ತಾ ಇದ್ದರೆ ದೇವರಲ್ಲಿ ನಮ್ಮ ನಂಬಿಕೆ ಬಲಹೀನವಾಗಿದೆ ಎಂದು ತೋರಿಸುತ್ತೇವೆ.
13. ನಮ್ಮ ನಂಬಿಕೆ ಬಲಹೀನವಾಗಿದೆಯೆಂದು ಗೊತ್ತಾದರೆ ನಮಗೇಕೆ ಬೇಜಾರು ಆಗಬಾರದು?
13 ಈ ಮೇಲಿನ ಪ್ರಶ್ನೆಗಳ ಬಗ್ಗೆ ಯೋಚಿಸಿದಾಗ ನಿಮಗೆ ನಿಮ್ಮ ನಂಬಿಕೆ ಬಲಹೀನವಾಗಿದೆ ಎಂದು ಗೊತ್ತಾದರೆ ಬೇಜಾರು ಮಾಡಿಕೊಳ್ಳಬೇಡಿ. ಅಪೊಸ್ತಲ ಪೇತ್ರನಿಗೂ ಭಯ, ಸಂಶಯ ಹುಟ್ಟಿತೆಂದು ನೆನಪಿಸಿಕೊಳ್ಳಿ. ಒಮ್ಮೊಮ್ಮೆ ಯೇಸು ಎಲ್ಲ ಅಪೊಸ್ತಲರನ್ನೂ “ಅಲ್ಪವಿಶ್ವಾಸಿಗಳೇ” ಎಂದು ಗದರಿಸಿದನು. (ಮತ್ತಾ. 16:8) ಆದರೆ ಪೇತ್ರನಿಂದ ನಾವೊಂದು ಮುಖ್ಯ ಪಾಠ ಕಲಿಯಬಹುದು. ಅವನು ಸಂಶಯಿಸಲು ಆರಂಭಿಸಿ, ಸಮುದ್ರದಲ್ಲಿ ಮುಳುಗಲು ಆರಂಭಿಸಿದ ನಂತರ ಏನು ಮಾಡಿದನೆಂದು ನೋಡೋಣ.
ನಿಮ್ಮ ನಂಬಿಕೆಯನ್ನು ಬಲಪಡಿಸಲು ಯೇಸುವಿನ ಮೇಲೆ ಗಮನವಿಡಿ
14, 15. (ಎ) ಪೇತ್ರನು ಮುಳುಗಲು ಆರಂಭಿಸಿದಾಗ ಏನು ಮಾಡಿದನು? (ಬಿ) ಯೇಸುವಿನ ಮೇಲೆ ನಾವು ಹೇಗೆ ‘ದೃಷ್ಟಿನೆಡಬಹುದು?’
14 ಪೇತ್ರನು ಮುಳುಗಲು ಆರಂಭಿಸಿದಾಗ ಏನು ಮಾಡಿದನು? ಅವನಿಗೆ ಚೆನ್ನಾಗಿ ಈಜು ಬರುತ್ತಿತ್ತು. ಈಜುಕೊಂಡು ಆರಾಮವಾಗಿ ದೋಣಿಗೆ ವಾಪಸ್ಸು ಹೋಗಬಹುದಿತ್ತು. (ಯೋಹಾ. 21:7) ಆದರೆ ಅವನು ಹಾಗೆ ಮಾಡಲಿಲ್ಲ. ಏಕೆ? ಅವನು ತನ್ನ ಸಾಮರ್ಥ್ಯದ ಮೇಲೆ ಭರವಸೆ ಇಡದಿದ್ದ ಕಾರಣದಿಂದಲೇ. ಅವನು ಮತ್ತೊಮ್ಮೆ ಯೇಸುವಿನ ಮೇಲೆ ಗಮನ ಕೇಂದ್ರೀಕರಿಸಿದನು. ಆತನ ಸಹಾಯ ಸ್ವೀಕರಿಸಿದನು. ಹಾಗೆಯೇ ನಮ್ಮ ನಂಬಿಕೆ ಬಲಹೀನವಾದರೆ ನಾವು ಪೇತ್ರನನ್ನು ಅನುಕರಿಸಬೇಕು. ಹೇಗೆ?
15 ಸಹಾಯಕ್ಕಾಗಿ ಪೇತ್ರನು ಪುನಃ ಯೇಸುವಿನ ಮೇಲೆ ಗಮನವಿಟ್ಟಂತೆಯೇ ನಾವು ಸಹ ಯೇಸುವಿನ ಮೇಲೆ ‘ದೃಷ್ಟಿನೆಡಬೇಕು.’ (ಇಬ್ರಿಯ 12:2, 3 ಓದಿ.) ಆದರೆ ಪೇತ್ರನಂತೆ ನಾವು ಯೇಸುವನ್ನು ಕಣ್ಣಾರೆ ನೋಡಲು ಸಾಧ್ಯವಿಲ್ಲ. ಹಾಗಿರುವಾಗ ಆತನ ಮೇಲೆ ನಾವು ಹೇಗೆ ‘ದೃಷ್ಟಿನೆಡಬಹುದು?’ ಆತನು ಕಲಿಸಿದ ಮತ್ತು ಮಾಡಿದಂಥ ವಿಷಯಗಳ ಬಗ್ಗೆ ಅಧ್ಯಯನಮಾಡಿ, ಆತನನ್ನು ಚೆನ್ನಾಗಿ ಅನುಕರಿಸುವ ಮೂಲಕವೇ. ಹಾಗೆ ಮಾಡುವಾಗ ನಮ್ಮ ನಂಬಿಕೆಯನ್ನು ಬಲಪಡಿಸಲು ಬೇಕಾದ ಸಹಾಯ ನಮಗೆ ಸಿಗುತ್ತದೆ. ಯೇಸುವನ್ನು ಅನುಕರಿಸಬಹುದಾದ ಕೆಲವೊಂದು ವಿಧಗಳನ್ನು ನಾವೀಗ ನೋಡೋಣ.
ನಾವು ಯೇಸುವಿನ ಮಾದರಿಯ ಮೇಲೆ ಗಮನವಿಟ್ಟು ಆತನನ್ನು ನಿಕಟವಾಗಿ ಅನುಕರಿಸಿದರೆ ನಮ್ಮ ನಂಬಿಕೆ ಬಲವಾಗಿರುತ್ತದೆ (ಪ್ಯಾರ 15 ನೋಡಿ)
16. ನಮ್ಮ ನಂಬಿಕೆಯನ್ನು ಬಲಪಡಿಸಲು ಬೈಬಲ್ ಹೇಗೆ ಸಹಾಯಮಾಡುತ್ತದೆ?
16 ಬೈಬಲಿನ ಮೇಲೆ ನಿಮಗಿರುವ ಭರವಸೆ ಹೆಚ್ಚಿಸಿ. ಬೈಬಲ್ ದೇವರ ವಾಕ್ಯವೆಂದು, ಅದರ ಸಲಹೆಯು ಅತ್ಯುತ್ತಮವೆಂದು ಯೇಸುವಿಗೆ ಪೂರ್ತಿ ಮನವರಿಕೆಯಾಗಿತ್ತು. (ಯೋಹಾ. 17:17) ಯೇಸುವಿನಂತೆ ನಮಗೂ ಮನವರಿಕೆ ಆಗಬೇಕಾದರೆ ನಾವು ಪ್ರತಿದಿನ ಬೈಬಲನ್ನು ಓದಬೇಕು, ಅಧ್ಯಯನ ಮಾಡಬೇಕು ಮತ್ತು ಕಲಿತ ಪಾಠಗಳ ಬಗ್ಗೆ ಧ್ಯಾನಿಸಬೇಕು. ನಮಗಿರಬಹುದಾದ ಪ್ರಶ್ನೆಗಳಿಗೆ ಉತ್ತರಗಳನ್ನೂ ಹುಡುಕಬೇಕು. ಉದಾಹರಣೆಗೆ, ಕಡೇ ದಿವಸಗಳಲ್ಲಿ ಜೀವಿಸುತ್ತಿದ್ದೇವೆಂದು ನೀವು ದೃಢವಾಗಿ ನಂಬುತ್ತೀರಾ? ನಾವು ಕಡೇ ದಿವಸಗಳಲ್ಲಿ ಜೀವಿಸುತ್ತಿದ್ದೇವೆಂದು ರುಜುಪಡಿಸುವ ಬೈಬಲ್ ಪ್ರವಾದನೆಗಳ ಅಧ್ಯಯನ ಮಾಡಿ ಅಂತ್ಯ ಹತ್ತಿರವಿದೆಯೆಂಬ ನಿಮ್ಮ ನಂಬಿಕೆಯನ್ನು ಬಲಪಡಿಸಿರಿ. ಭವಿಷ್ಯದ ಬಗ್ಗೆ ದೇವರು ಮಾಡಿರುವ ವಾಗ್ದಾನಗಳಲ್ಲಿ ನಿಮ್ಮ ನಂಬಿಕೆ ಬಲಪಡಿಸಲು ಬಯಸುತ್ತೀರಾ? ಹಾಗಿದ್ದರೆ ಈಗಾಗಲೇ ನೆರವೇರಿರುವ ಬೈಬಲ್ ಪ್ರವಾದನೆಗಳ ಅಧ್ಯಯನ ಮಾಡಿ. ನಮ್ಮ ಕಾಲದಲ್ಲೂ ಬೈಬಲ್ ಪ್ರಕಾರ ಬದುಕಲಿಕ್ಕೆ ಆಗುತ್ತದೆಂದು ನಿಜವಾಗಿ ನಂಬುತ್ತೀರಾ? ಬೈಬಲಿನ ಸಹಾಯದಿಂದಲೇ ತಮ್ಮ ಜೀವನದಲ್ಲಿ ಬದಲಾವಣೆಗಳನ್ನು ಮಾಡಿ ಉತ್ತಮ ವ್ಯಕ್ತಿಗಳಾದ ಸಹೋದರ ಸಹೋದರಿಯರ ಕುರಿತು ಓದಿ.a (ಪಾದಟಿಪ್ಪಣಿ ನೋಡಿ.)—1 ಥೆಸ. 2:13.
17. (ಎ) ಯೇಸು ಕಠಿನವಾದ ಕಷ್ಟಪರೀಕ್ಷೆಗಳನ್ನು ತಾಳಿಕೊಳ್ಳಲು ಶಕ್ತನಾದದ್ದು ಹೇಗೆ? (ಬಿ) ನೀವು ಅವನನ್ನು ಹೇಗೆ ಅನುಕರಿಸಬಲ್ಲಿರಿ?
17 ಯೆಹೋವನು ಮಾತುಕೊಟ್ಟಿರುವ ಆಶೀರ್ವಾದಗಳ ಮೇಲೆ ಗಮನ ಕೇಂದ್ರೀಕರಿಸಿ. ಯೇಸು ತನ್ನ ಮುಂದಿದ್ದ ಆಶೀರ್ವಾದಗಳ ಮೇಲೆ ಗಮನ ಕೇಂದ್ರೀಕರಿಸಿದನು. ಇದರಿಂದಾಗಿ ಅವನು ತುಂಬ ಕಠಿನವಾದ ಕಷ್ಟಪರೀಕ್ಷೆಗಳನ್ನು ತಾಳಿಕೊಳ್ಳಲು ಸಹಾಯವಾಯಿತು. (ಇಬ್ರಿ. 12:2) ಲೋಕವು ಅವನ ಮುಂದೆ ಇಟ್ಟ ವಿಷಯಗಳನ್ನು ನೋಡಿ ಅವನು ಯಾವತ್ತೂ ಅಪಕರ್ಷಿತನಾಗಲಿಲ್ಲ. (ಮತ್ತಾ. 4:8-10) ನಾವು ಯೇಸುವಿನ ಮಾದರಿಯನ್ನು ಹೇಗೆ ಅನುಕರಿಸಬಹುದು? ಯೆಹೋವನು ಮಾಡಿರುವ ಅದ್ಭುತಕರ ವಾಗ್ದಾನಗಳ ಕುರಿತು ಧ್ಯಾನಿಸಿ. ನೀವು ಹೊಸ ಲೋಕದಲ್ಲಿರುವುದನ್ನು ಕಲ್ಪಿಸಿಕೊಳ್ಳಿ. ಪರದೈಸಿನಲ್ಲಿ ನೀವೇನು ಮಾಡುವಿರಿ ಎನ್ನುವುದರ ಬಗ್ಗೆ ಬರೆಯಿರಿ ಇಲ್ಲವೇ ಚಿತ್ರಬಿಡಿಸಿರಿ. ಅಥವಾ ಪುನರುತ್ಥಾನವಾಗಿ ಬರುವವರಲ್ಲಿ ಯಾರಾರ ಜೊತೆ ಮಾತಾಡಬೇಕೆಂದಿದ್ದೀರಿ, ಏನು ಹೇಳಬೇಕು, ಏನು ಕೇಳಬೇಕು ಎಂದಿದ್ದೀರಿ ಎಂಬ ಪಟ್ಟಿ ಮಾಡಿ. ದೇವರ ವಾಗ್ದಾನಗಳನ್ನು ವೈಯಕ್ತಿಕವಾಗಿ ನಿಮಗೆ ಮಾಡಲಾದ ವಾಗ್ದಾನಗಳಾಗಿ ಪರಿಗಣಿಸಿ.
18. ನಿಮ್ಮ ನಂಬಿಕೆಯನ್ನು ಬಲಗೊಳಿಸಲು ಪ್ರಾರ್ಥನೆ ಹೇಗೆ ಸಹಾಯ ಮಾಡಬಲ್ಲದು?
18 ಹೆಚ್ಚು ನಂಬಿಕೆಗಾಗಿ ಪ್ರಾರ್ಥಿಸಿ. ಯೆಹೋವನ ಬಳಿ ಪವಿತ್ರಾತ್ಮಕ್ಕಾಗಿ ಬೇಡಿಕೊಳ್ಳುವಂತೆ ಯೇಸು ತನ್ನ ಶಿಷ್ಯರಿಗೆ ಕಲಿಸಿದನು. (ಲೂಕ 11:9, 13) ಪವಿತ್ರಾತ್ಮಕ್ಕಾಗಿ ಬೇಡಿಕೊಳ್ಳುತ್ತಿರುವಾಗ ಹೆಚ್ಚಿನ ನಂಬಿಕೆಗಾಗಿಯೂ ಪ್ರಾರ್ಥನೆ ಮಾಡಿ. ನಂಬಿಕೆಯು ಪವಿತ್ರಾತ್ಮದ ಫಲದ ಒಂದು ಅಂಶವಾಗಿದೆ. ಹಾಗಾಗಿ ನಿಮ್ಮ ಪ್ರಾರ್ಥನೆಗಳಲ್ಲಿ ನಿರ್ದಿಷ್ಟವಾಗಿ ನಂಬಿಕೆಗಾಗಿ ಕೇಳಿ. ಉದಾಹರಣೆಗೆ, ನಿಮಗೆ ಬೇರೆಯವರನ್ನು ಕ್ಷಮಿಸಲು ಕಷ್ಟವಾಗುತ್ತಿರುವಲ್ಲಿ, ನಿಮ್ಮ ನಂಬಿಕೆಯನ್ನು ಬಲಗೊಳಿಸಲು ಮತ್ತು ಕ್ಷಮಿಸಲು ಸಹಾಯ ಮಾಡುವಂತೆ ಯೆಹೋವನಿಗೆ ಕೇಳಿ.
19. ಒಳ್ಳೇ ಸ್ನೇಹಿತರನ್ನು ನಾವು ಹೇಗೆ ಆಯ್ಕೆಮಾಡಿಕೊಳ್ಳಬಹುದು?
19 ಬಲವಾದ ನಂಬಿಕೆಯಿರುವ ಸ್ನೇಹಿತರನ್ನು ಆಯ್ಕೆಮಾಡಿ. ಯೇಸು ತನ್ನ ಆಪ್ತ ಸ್ನೇಹಿತರನ್ನು ತುಂಬ ಜಾಗ್ರತೆಯಿಂದ ಆಯ್ಕೆಮಾಡಿದನು. ಅವನ ಅತ್ಯಾಪ್ತ ಸ್ನೇಹಿತರಾದ ಅಪೊಸ್ತಲರು ಆತನಿಗೆ ನಂಬಿಗಸ್ತರು, ನಿಷ್ಠರು, ವಿಧೇಯರೂ ಆಗಿದ್ದರು. (ಯೋಹಾನ 15:14, 15 ಓದಿ.) ಯೇಸುವನ್ನು ಅನುಕರಿಸುತ್ತಾ ನಿಮ್ಮ ಸ್ನೇಹಿತರನ್ನು ಜಾಗ್ರತೆಯಿಂದ ಆಯ್ಕೆಮಾಡಿ. ನಿಮ್ಮ ಸ್ನೇಹಿತರು ಯೇಸುವಿಗೆ ವಿಧೇಯತೆ ತೋರಿಸುವವರು ಮತ್ತು ಬಲವಾದ ನಂಬಿಕೆಯುಳ್ಳವರು ಆಗಿರಬೇಕು. ನಿಜ ಸ್ನೇಹಿತರು ಒಬ್ಬರಿಗೊಬ್ಬರು ‘ಇದ್ದದ್ದನ್ನು ಇದ್ದ ಹಾಗೆ’ ಹೇಳುವಷ್ಟು ಪ್ರಾಮಾಣಿಕರಾಗಿರುತ್ತಾರೆ. ಒಬ್ಬರಿಗೊಬ್ಬರು ಬುದ್ಧಿವಾದ-ಸಲಹೆ ಕೊಡುವ, ಸ್ವೀಕರಿಸುವ ಅಗತ್ಯವಿದ್ದಾಗಲೂ ಹೀಗೇ ಇರುತ್ತಾರೆ.—ಜ್ಞಾನೋ. 27:9.
20. ನಂಬಿಕೆ ಹೆಚ್ಚಿಸುವಂತೆ ಬೇರೆಯವರಿಗೆ ನಾವು ಸಹಾಯಮಾಡುವಾಗ ಏನಾಗುತ್ತದೆ?
20 ಇತರರ ನಂಬಿಕೆಯನ್ನು ಹೆಚ್ಚಿಸಲು ಸಹಾಯಮಾಡಿ. ಯೇಸು ಮಾತು ಹಾಗೂ ಕ್ರಿಯೆಗಳ ಮೂಲಕ ತನ್ನ ಶಿಷ್ಯರ ನಂಬಿಕೆಯನ್ನು ಬಲಪಡಿಸಲು ಸಹಾಯಮಾಡಿದನು. (ಮಾರ್ಕ 11:20-24) ಈ ವಿಷಯದಲ್ಲಿ ನಾವು ಯೇಸುವಿನ ಮಾದರಿಯನ್ನು ಅನುಕರಿಸಬೇಕು. ಬೇರೆಯವರ ನಂಬಿಕೆಯನ್ನು ಹೆಚ್ಚಿಸಲು ಸಹಾಯಮಾಡುವಾಗ ನಮ್ಮ ಸ್ವಂತ ನಂಬಿಕೆಯನ್ನೂ ಹೆಚ್ಚಿಸಿಕೊಳ್ಳುತ್ತೇವೆ. (ಜ್ಞಾನೋ. 11:25) ನಿಮ್ಮ ಸೇವಾಕ್ಷೇತ್ರದಲ್ಲಿರುವ ಜನರಿಗೆ ನೀವು ಹೇಗೆ ಸಹಾಯಮಾಡಬಲ್ಲಿರಿ? ನೀವು ಬೈಬಲ್ ಬಗ್ಗೆ ಕಲಿಸುವಾಗ, ದೇವರು ನಿಜವಾಗಿ ಇದ್ದಾನೆ, ನಮ್ಮ ಬಗ್ಗೆ ಕಾಳಜಿವಹಿಸುತ್ತಾನೆ ಮತ್ತು ಬೈಬಲ್ ದೇವರ ವಾಕ್ಯ ಎಂದು ಸಾಬೀತುಪಡಿಸುವ ವಿಷಯಗಳನ್ನು ಎತ್ತಿತೋರಿಸಿ. ನಿಮ್ಮ ಸಹೋದರ ಸಹೋದರಿಯರು ಅವರ ನಂಬಿಕೆಯನ್ನು ಬಲವಾಗಿರಿಸಲು ನೀವು ಹೇಗೆ ಸಹಾಯ ಮಾಡಬಲ್ಲಿರಿ? ನೆನಸಿ, ಒಬ್ಬ ವ್ಯಕ್ತಿ ಜವಾಬ್ದಾರಿಯುತ ಸ್ಥಾನದಲ್ಲಿರುವವರ ಬಗ್ಗೆ ಗೊಣಗುತ್ತಾ ಇದ್ದಾನೆ. ಆ ವ್ಯಕ್ತಿಯನ್ನು ದೂರಮಾಡದೇ ಅವನು ತನ್ನ ನಂಬಿಕೆಯನ್ನು ಪುನಃ ಪಡೆಯಲು ಜಾಣ್ಮೆಯಿಂದ ಸಹಾಯಮಾಡಿ. (ಯೂದ 22, 23) ನೀವು ಶಾಲೆಗೆ ಹೋಗುವ ವಿದ್ಯಾರ್ಥಿಯಾಗಿದ್ದರೆ, ನಿಮ್ಮ ಶಿಕ್ಷಕರು ವಿಕಾಸವಾದದ ಬಗ್ಗೆ ಕಲಿಸುವಾಗ ಸೃಷ್ಟಿಯ ಕುರಿತ ನಿಮ್ಮ ನಂಬಿಕೆಗಿರುವ ಕಾರಣಗಳನ್ನು ಧೈರ್ಯದಿಂದ ತಿಳಿಸಿ. ಆಗ ನಿಮ್ಮ ಶಿಕ್ಷಕರು ಹಾಗೂ ಸಹಪಾಠಿಗಳು ತೋರಿಸುವ ಒಳ್ಳೇ ಪ್ರತಿಕ್ರಿಯೆಯಿಂದ ನಿಮಗೆ ಆಶ್ಚರ್ಯವಾಗಬಹುದು.
21. ಯೆಹೋವನು ನಮ್ಮಲ್ಲಿ ಪ್ರತಿಯೊಬ್ಬರಿಗೂ ಯಾವ ಮಾತು ಕೊಟ್ಟಿದ್ದಾನೆ?
21 ಪೇತ್ರನಿಗಿದ್ದ ಸಂಶಯ ಹಾಗೂ ಭಯವನ್ನು ಹೊಡೆದೋಡಿಸಲು ಯೆಹೋವ ಮತ್ತು ಯೇಸು ಸಹಾಯಮಾಡಿದರು. ಪೇತ್ರನು ಮುಂದೆ ಬಲವಾದ ನಂಬಿಕೆಯ ವಿಷಯದಲ್ಲಿ ಒಂದು ಉತ್ತಮ ಮಾದರಿಯಾದನು. ಅದೇ ರೀತಿಯಲ್ಲಿ ನಮ್ಮಲ್ಲಿ ಒಬ್ಬೊಬ್ಬರಿಗೂ ನಂಬಿಕೆಯಲ್ಲಿ ದೃಢರಾಗಿ ನಿಂತುಕೊಳ್ಳಲು ಯೆಹೋವನು ಸಹಾಯ ಮಾಡುತ್ತಾನೆ. (1 ಪೇತ್ರ 5:9, 10 ಓದಿ.) ಬಲವಾದ ನಂಬಿಕೆಯನ್ನು ಬೆಳೆಸಿಕೊಳ್ಳಲು ಪ್ರಯತ್ನ ಅಗತ್ಯ. ನಾವು ಆ ಪ್ರಯತ್ನ ಮಾಡುವಾಗ ಯೆಹೋವನು ಖಂಡಿತ ಪ್ರತಿಫಲ ಕೊಡುತ್ತಾನೆ.
a ಉದಾಹರಣೆಗೆ, ಕಾವಲಿನಬುರುಜು ಪತ್ರಿಕೆಯ ಸಾರ್ವಜನಿಕ ಆವೃತ್ತಿಗಳಲ್ಲಿ “ಬದುಕನ್ನೇ ಬದಲಾಯಿಸಿತು ಬೈಬಲ್” ಎಂಬ ಲೇಖನಮಾಲೆ ನೋಡಿ.