ನಿಮಗೆ ಈ ಪ್ರಶ್ನೆ ಬಂದಿದೆಯಾ?
ಬಡತನವೇ ಇಲ್ಲದ ಪರಿಸ್ಥಿತಿ ಬರುತ್ತಾ?
ಬಡತನವನ್ನು ಭೂಮಿಯಿಂದ ದೇವರು ಹೇಗೆ ತೆಗೆದುಹಾಕುತ್ತಾನೆ?—ಮತ್ತಾಯ 6:9, 10.
ಪೌಷ್ಠಿಕ ಆಹಾರ ಇಲ್ಲದೆ, ಕಾಯಿಲೆಗಳಿಗೆ ಒಳ್ಳೆಯ ಚಿಕಿತ್ಸೆ ಪಡೆದುಕೊಳ್ಳಲು ಆಗದೆ ಲಕ್ಷಾಂತರ ಬಡವರು ತಮ್ಮ ಜೀವ ಕಳೆದುಕೊಳ್ಳುತ್ತಿದ್ದಾರೆ. ಭೂಮಿಯ ಕೆಲವು ಭಾಗಗಳು ಶ್ರೀಮಂತವಾಗಿರುವುದಾದರೂ ಹೆಚ್ಚಿನಾಂಶ ಜನರು ಬಡತನದಿಂದ ಬಳಲಿ ಬೆಂಡಾಗುತ್ತಿದ್ದಾರೆ. ಇತಿಹಾಸದುದ್ದಕ್ಕೂ ಬಡತನ ಮನುಷ್ಯರನ್ನು ಕಾಡುತ್ತಲೇ ಇರುವ ಸಮಸ್ಯೆ ಎಂದು ದೇವರ ವಾಕ್ಯವಾದ ಬೈಬಲ್ ಹೇಳುತ್ತದೆ.—ಯೋಹಾನ 12:8 ಓದಿ.
ಸಂಪನ್ಮೂಲಗಳನ್ನು ಸರಿಯಾಗಿ ಹಂಚದಿರುವುದು ಮತ್ತು ಹೆಚ್ಚುತ್ತಿರುವ ಯುದ್ಧಗಳು ಬಡತನಕ್ಕೆ ಮುಖ್ಯ ಕಾರಣ. ಇದನ್ನು ಬಗೆಹರಿಸಬೇಕಾದರೆ ಇಡೀ ಲೋಕಕ್ಕೆ ಒಂದೇ ಸರ್ಕಾರವಿರಬೇಕು. ಈ ಸರ್ಕಾರಕ್ಕೆ ಭೂಮಿಯಲ್ಲಿರುವ ಸಂಪನ್ಮೂಲಗಳನ್ನು ಎಲ್ಲರಿಗೂ ಸರಿಸಮಾನವಾಗಿ ಹಂಚುವ ಮತ್ತು ಯುದ್ಧಗಳನ್ನು ಕೊನೆಗೊಳಿಸುವ ಶಕ್ತಿ ಇರಬೇಕು. ಇಂತಹ ಸರ್ಕಾರವೊಂದನ್ನು ಸ್ವತಃ ದೇವರೇ ಸ್ಥಾಪಿಸುವುದಾಗಿ ಮಾತು ಕೊಟ್ಟಿದ್ದಾನೆ.—ದಾನಿಯೇಲ 2:44 ಓದಿ.
ಬಡತನವೇ ಇಲ್ಲದ ಪರಿಸ್ಥಿತಿಯನ್ನು ಯಾರು ತರಬಹುದು?
ದೇವರು ತನ್ನ ಮಗನಾದ ಯೇಸುವನ್ನು ಇಡೀ ಮಾನವಕುಲದ ಮೇಲೆ ರಾಜನನ್ನಾಗಿ ನೇಮಿಸಿದ್ದಾನೆ. (ಕೀರ್ತನೆ 2:4-8) ಯೇಸು ಬಡವರ ಮೇಲಿನ ದೌರ್ಜನ್ಯ ಮತ್ತು ಹಿಂಸೆಯನ್ನು ತೆಗೆದು ಹಾಕಿ, ಅವರನ್ನು ಉದ್ಧರಿಸುತ್ತಾನೆ.—ಕೀರ್ತನೆ 72:8, 12-14 ಓದಿ.
‘ಸಮಾಧಾನದ ಪ್ರಭುವಾಗಿರುವ’ ಯೇಸು ಭೂಮಿಯಾದ್ಯಂತ ಶಾಂತಿ ಮತ್ತು ಭದ್ರತೆಯನ್ನು ತರುತ್ತಾನೆ. ಆಗ ಎಲ್ಲರಿಗೆ ಸ್ವಂತ ಮನೆ, ತೃಪ್ತಿಕರ ಕೆಲಸ ಮತ್ತು ಹೇರಳ ಆಹಾರ ಇರುತ್ತದೆ.—ಯೆಶಾಯ 9:6, 7; 65:21-23 ಓದಿ. (w15-E 10/01)