ನೀವು ನಂಬುವುದೂ ಬೈಬಲ್ ಹೇಳುವುದೂ ಒಂದೇನಾ?
ನೀವು ಕ್ರೈಸ್ತರಾ? ಹಾಗಿದ್ದರೆ ಲೋಕದಲ್ಲಿರೋ ಇನ್ನೂರು ಕೋಟಿ ಕ್ರೈಸ್ತರಲ್ಲಿ ನೀವೂ ಒಬ್ಬರು. ಹೆಚ್ಚು ಕಡಿಮೆ ಇಂದು ಮೂವರಲ್ಲಿ ಒಬ್ಬರು ಕ್ರೈಸ್ತರಾಗಿದ್ದಾರೆ. ಆದರೆ ಯೋಚಿಸಬೇಕಾದ ವಿಷಯ ಏನೆಂದರೆ ಕ್ರೈಸ್ತರಲ್ಲೇ ಸಾವಿರಾರು ಪಂಗಡಗಳಿವೆ. ಪ್ರತಿಯೊಂದು ಪಂಗಡದ ನಂಬಿಕೆಗಳು, ಆಚಾರವಿಚಾರಗಳು ತುಂಬಾ ಭಿನ್ನವಾಗಿವೆ. ಹಾಗಾಗಿ ನಿಮ್ಮ ನಂಬಿಕೆಗೂ, ಬೇರೆ ಕ್ರೈಸ್ತರ ನಂಬಿಕೆಗೂ ತುಂಬಾ ವ್ಯತ್ಯಾಸವಿರುವುದನ್ನು ನೀವು ನೋಡಿರಬಹುದು. ಕ್ರೈಸ್ತರಲ್ಲೇ ಈ ರೀತಿ ವ್ಯತ್ಯಾಸವಿದ್ದರೆ ಪರವಾಗಿಲ್ವಾ? ಖಂಡಿತ ಇಲ್ಲ. ಕ್ರೈಸ್ತರು ಬೈಬಲ್ ಹೇಳೋ ಪ್ರಕಾರನೇ ಜೀವಿಸಬೇಕು.
ಒಂದನೇ ಶತಮಾನದಲ್ಲಿ ಯೇಸು ಕ್ರಿಸ್ತನ ಹಿಂಬಾಲಕರನ್ನು “ಕ್ರೈಸ್ತರು” ಎಂದು ಕರೆಯಲಾಯಿತು. (ಅಪೊಸ್ತಲರ ಕಾರ್ಯಗಳು 11:26) ಅವರನ್ನು ಬೇರೆ ಬೇರೆ ಹೆಸರುಗಳಿಂದ ಗುರುತಿಸುವ ಅವಶ್ಯಕತೆ ಇರಲಿಲ್ಲ. ಏಕೆಂದರೆ ಆಗ ಒಂದೇ ಕ್ರೈಸ್ತ ನಂಬಿಕೆ ಇತ್ತು. ಆಗ ಎಲ್ಲಾ ಕ್ರೈಸ್ತರು ಒಟ್ಟಾಗಿ ಕ್ರೈಸ್ತತ್ವದ ಸ್ಥಾಪಕನಾದ ಯೇಸು ಕ್ರಿಸ್ತನ ಬೋಧನೆಗಳನ್ನು ಮತ್ತು ಮಾರ್ಗದರ್ಶನಗಳನ್ನು ಪಾಲಿಸಿದರು. ನಿಮ್ಮ ಚರ್ಚಿನ ಬಗ್ಗೆ ಏನು? ಯೇಸು ಏನು ಬೋಧಿಸಿದನೋ, ಆರಂಭದ ಯೇಸುವಿನ ಹಿಂಬಾಲಕರು ಏನನ್ನು ನಂಬಿದ್ದರೋ ಅದನ್ನೇ ನಿಮ್ಮ ಚರ್ಚ್ ಬೋಧಿಸುತ್ತಿದೆಯೋ? ಇದನ್ನು ತಿಳಿದುಕೊಳ್ಳುವುದು ಹೇಗೆ? ಇದಕ್ಕಿರುವುದು ಒಂದೇ ಮಾರ್ಗ. ಅದು ನಿಮ್ಮ ಬೈಬಲ್.
ಬೈಬಲ್ ದೇವರ ವಾಕ್ಯವಾದದ್ದರಿಂದ ಯೇಸುವಿಗೆ ಅದರ ಮೇಲೆ ಆಳವಾದ ಗೌರವವಿತ್ತು. ಬೈಬಲಿನ ಬೋಧನೆಗಳಿಗಿಂತ ಮನುಷ್ಯರು ಮಾಡಿದ ಸಂಪ್ರದಾಯಗಳಿಗೆ ಯಾರು ಹೆಚ್ಚಿನ ಆದ್ಯತೆ ಕೊಟ್ಟರೋ ಅಂಥವರನ್ನು ಯೇಸು ಇಷ್ಟಪಡಲಿಲ್ಲ. (ಮಾರ್ಕ 7:9-13) ಹಾಗಾಗಿ ಯೇಸುವಿನ ನಿಜ ಹಿಂಬಾಲಕರು ಬೈಬಲ್ ಹೇಳುವಂಥದ್ದನ್ನು ಮಾತ್ರ ನಂಬುತ್ತಾರೆ. ಆದ್ದರಿಂದ ಪ್ರತಿಯೊಬ್ಬ ಕ್ರೈಸ್ತನು ‘ನನ್ನ ಚರ್ಚ್‌ನಲ್ಲಿ ಬೋಧಿಸುವ ವಿಷಯಗಳು ಬೈಬಲ್ ಹೇಳಿದಂತೆ ಇದೆಯಾ?’ ಎಂದು ಪ್ರಶ್ನಿಸಿಕೊಳ್ಳುವುದು ತುಂಬಾ ಪ್ರಾಮುಖ್ಯ. ಈ ಪ್ರಶ್ನೆಗೆ ಉತ್ತರ ತಿಳಿಯಲು ಬೈಬಲ್ ನಿಜವಾಗಿ ಏನು ಹೇಳುತ್ತದೋ ಆ ವಿಷಯವನ್ನು ನಿಮ್ಮ ಚರ್ಚ್ ಬೋಧಿಸುವ ವಿಷಯಕ್ಕೆ ಹೋಲಿಸಿ ನೋಡಿ.
ನಾವು ದೇವರನ್ನು ಆರಾಧಿಸುವಾಗ ಸತ್ಯದಿಂದ ಆರಾಧಿಸಬೇಕು ಅಂತ ಯೇಸು ಹೇಳಿದನು. ಆ ಸತ್ಯ ಬೈಬಲಿನಲ್ಲಿದೆ. (ಯೋಹಾನ 4:24; 17:17) ‘ಸತ್ಯದ ನಿಷ್ಕೃಷ್ಟ ಜ್ಞಾನವನ್ನು ಪಡೆದುಕೊಂಡರೆ’ ಮಾತ್ರ ನಮಗೆ ರಕ್ಷಣೆ ಸಿಗುತ್ತದೆ ಎಂದು ಅಪೊಸ್ತಲ ಪೌಲನು ಹೇಳಿದನು. (1 ತಿಮೊಥೆಯ 2:4) ಹಾಗಾಗಿ ನಮ್ಮ ನಂಬಿಕೆಗಳು ಬೈಬಲ್ ಹೇಳುವಂತೆ ಇರುವುದು ತುಂಬಾ ಪ್ರಾಮುಖ್ಯ. ಯಾಕೆಂದರೆ ಇದು ನಮ್ಮ ಜೀವದ ಪ್ರಶ್ನೆಯಾಗಿದೆ!
ಹೇಗೆ ಹೋಲಿಸಿ ನೋಡೋದು?
ಕೆಳಗಿನ ಆರು ಪ್ರಶ್ನೆಗಳನ್ನು ಮತ್ತು ಅದಕ್ಕೆ ಬೈಬಲ್ ಕೊಡುವ ಉತ್ತರಗಳನ್ನು ಓದಿ ನೋಡಿ. ಕೊಡಲಾಗಿರುವ ವಚನಗಳನ್ನು ಬೈಬಲಿನಲ್ಲಿ ಓದಿ. ಉತ್ತರದ ಬಗ್ಗೆ ಸ್ವಲ್ಪ ಯೋಚಿಸಿ. ಆಮೇಲೆ ಬೈಬಲ್ ಹೇಳೋದನ್ನ ನಿಮ್ಮ ಚರ್ಚ್ ಹೇಳೋದಕ್ಕೆ ಹೋಲಿಸಿ ನೋಡಿ.
ಇದೊಂದು ಚಿಕ್ಕ ಕ್ವಿಝ್. ಆದರೆ ಇದು ನಿಮ್ಮ ಜೀವನದಲ್ಲೇ ಅತೀ ಪ್ರಾಮುಖ್ಯವಾದ ಹೋಲಿಕೆ ಅನ್ನೋದರಲ್ಲಿ ಎರಡು ಮಾತಿಲ್ಲ. ಬೈಬಲ್ ಹೇಳೋ ವಿಷ್ಯಗಳಿಗೂ ನಿಮ್ಮ ಚರ್ಚ್ ಹೇಳೋ ವಿಷ್ಯಕ್ಕೂ ಹೋಲಿಸಿ ನೋಡಲು ನಿಮಗೆ ಇಷ್ಟ ಇದೆಯಾ? ಯೆಹೋವನ ಸಾಕ್ಷಿಗಳು ಬೈಬಲಿನಲ್ಲಿರುವ ಸತ್ಯವನ್ನು ಸ್ಪಷ್ಟವಾಗಿ ತಿಳಿಸಲು ಸಹಾಯ ಮಾಡುತ್ತಾರೆ. ಬೈಬಲನ್ನು ಉಚಿತವಾಗಿ ಕಲಿಯಲು ಯೆಹೋವನ ಸಾಕ್ಷಿಗಳನ್ನು ಸಂಪರ್ಕಿಸಿ ಅಥವಾ jw.org ವೆಬ್‌ಸೈಟಿಗೆ ಭೇಟಿ ನೀಡಿ. ಕ್ವಿಝ್ ಶುರು ಮಾಡೋಣವಾ? ▪ (w16-E No. 4)