ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • w16 ಡಿಸೆಂಬರ್‌ ಪು. 3-7
  • “ಎಲ್ಲ ರೀತಿಯ ಜನರಿಗೆ ಎಲ್ಲವೂ ಆದೆನು”

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • “ಎಲ್ಲ ರೀತಿಯ ಜನರಿಗೆ ಎಲ್ಲವೂ ಆದೆನು”
  • ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಅಧ್ಯಯನ)—2016
  • ಉಪಶೀರ್ಷಿಕೆಗಳು
  • ಅನುರೂಪ ಮಾಹಿತಿ
  • ನನ್ನ ಸೇವೆಯ ಆರಂಭ
  • ಬೇರೆ ದೇಶದಲ್ಲಿ ನೇಮಕ
  • ಹೊಸ ನೇಮಕಗಳು, ಹೆಚ್ಚು ಹೊಂದಾಣಿಕೆಗಳು
  • ಹೊಂದಾಣಿಕೆಗಳನ್ನು ಮಾಡ್ತಾನೇ ಇದ್ದೇವೆ
  • ಯೇಸುವನ್ನು ಹಿಂಬಾಲಿಸಲು ನಾನು ಕೆಲವು ವಿಷಯಗಳನ್ನು ಬಿಡಬೇಕಾಯಿತು
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಅಧ್ಯಯನ)—2017
  • ಯೆಹೋವನ ಬಗ್ಗೆ ಕಲಿತಾ, ಕಲಿಸ್ತಾ ಖುಷಿಯಾಗಿದ್ದೆ
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಅಧ್ಯಯನ)—2022
  • ಯೆಹೋವನು ತನ್ನ ಚಿತ್ತವನ್ನು ಮಾಡುವಂತೆ ನನಗೆ ಕಲಿಸಿದನು
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2012
  • ನಾವು ದೇವರ ಅಪಾತ್ರ ದಯೆಯನ್ನು ಅನೇಕ ವಿಧಗಳಲ್ಲಿ ಅನುಭವಿಸಿದೆವು
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಅಧ್ಯಯನ)—2017
ಇನ್ನಷ್ಟು
ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಅಧ್ಯಯನ)—2016
w16 ಡಿಸೆಂಬರ್‌ ಪು. 3-7

ಜೀವನ ಕಥೆ

“ಎಲ್ಲ ರೀತಿಯ ಜನರಿಗೆ ಎಲ್ಲವೂ ಆದೆನು”

ಡೆಂಟನ್‌ ಹಾಪ್‌ಕಿನ್ಸನ್‌ ಹೇಳಿದಂತೆ

ಡೆಂಟನ್‌ ಹಾಪ್‌ಕಿನ್ಸನ್‌ ಹದಿವಯಸ್ಸಿನಲ್ಲಿದ್ದಾಗ

“ನೀನ್‌ ದೀಕ್ಷಾಸ್ನಾನ ತೊಗೊಂಡ್ರೆ, ನಿನ್ನನ್‌ ಬಿಟ್‌ಹೋಗ್ತೀನಿ!” 1941ರಲ್ಲಿ ಅಮ್ಮನಿಗೆ ಅಪ್ಪ ಹಾಕಿದ ಬೆದರಿಕೆ ಅದು. ಆದರೂ ಅಮ್ಮ ದೀಕ್ಷಾಸ್ನಾನ ತೆಗೆದುಕೊಂಡರು. ಅಪ್ಪ ಹೇಳಿದಂಗೆ ನಮ್ಮನ್ನು ಬಿಟ್ಟು ಹೋದರು. ಆಗ ನನಗೆ ಬರೀ 8 ವರ್ಷ.

ಇದೆಲ್ಲಾ ಆಗೋದಕ್ಕಿಂತ ಮುಂಚೆಯೇ ನನಗೆ ಸತ್ಯದಲ್ಲಿ ಆಸಕ್ತಿ ಹುಟ್ಟಿತ್ತು. ಅಮ್ಮನಿಗೆ ಕೆಲವು ಬೈಬಲ್‌ ಸಾಹಿತ್ಯ ಸಿಕ್ಕಿತ್ತು. ನನಗೆ ಆ ಪುಸ್ತಕಗಳೆಂದರೆ ಪಂಚಪ್ರಾಣ. ಅದರಲ್ಲಿರುವ ಚಿತ್ರಗಳು ತುಂಬ ಇಷ್ಟವಾಗಿತ್ತು. ಅಮ್ಮ ನನ್ನೊಟ್ಟಿಗೆ ತಾನು ಕಲಿಯುತ್ತಾ ಇರುವ ವಿಷಯಗಳ ಬಗ್ಗೆ ಮಾತಾಡುವುದು ಅಪ್ಪನಿಗೆ ಇಷ್ಟ ಇರಲಿಲ್ಲ. ಆದರೆ ಅಮ್ಮ ಏನು ಕಲೀತಿರಬಹುದು ಅನ್ನೋ ಕುತೂಹಲ ನನ್ನಲ್ಲಿತ್ತು. ಆಗಾಗ ಪ್ರಶ್ನೆ ಕೇಳುತ್ತಾ ಇದ್ದೆ. ಅಪ್ಪ ಮನೆಯಲ್ಲಿ ಇಲ್ಲದಿದ್ದಾಗ ಅಮ್ಮ ನನ್ನೊಟ್ಟಿಗೆ ಅಧ್ಯಯನ ಮಾಡುತ್ತಿದ್ದರು. ಮುಂದೆ ನಾನೂ ದೀಕ್ಷಾಸ್ನಾನ ತೆಗೆದುಕೊಳ್ಳುವ ನಿರ್ಣಯ ತೊಗೊಂಡೆ. 1943⁠ರಲ್ಲಿ ಇಂಗ್ಲೆಂಡ್‌ನ ಬ್ಲ್ಯಾಕ್‌ಪೂಲ್‌ನಲ್ಲಿ ನನ್ನ ದೀಕ್ಷಾಸ್ನಾನವಾಯಿತು. ಆಗ ನನಗೆ 10 ವರ್ಷ.

ನನ್ನ ಸೇವೆಯ ಆರಂಭ

ನನಗೆ ದೀಕ್ಷಾಸ್ನಾನ ಆದ ಮೇಲೆ ನಾನೂ ಅಮ್ಮ ಒಟ್ಟಿಗೆ ಸೇವೆಗೆ ಹೋಗ್ತಿದ್ವಿ. ಆಗೆಲ್ಲಾ ಮನೆಯವರೊಟ್ಟಿಗೆ ಮಾತಾಡಲು ಫೋನೋಗ್ರಾಫ್‌ ಬಳಸುತ್ತಿದ್ವಿ. ಈ ಫೋನೋಗ್ರಾಫ್‌ಗಳು ದೊಡ್ಡದಾಗಿದ್ದವು. ಒಂದೊಂದು ಫೋನೋಗ್ರಾಫ್‌ ನಾಲ್ಕೂವರೆ ಕೆ.ಜಿ. ಇರುತ್ತಿತ್ತು. ಒಬ್ಬ ಚಿಕ್ಕ ಹುಡುಗ ಅಷ್ಟು ಭಾರವಾದ ಯಂತ್ರವನ್ನು ಹೊತ್ತುಕೊಂಡು ಹೋಗೋದು ಹೇಗಿದ್ದಿರಬೇಕು ಅಂತ ಯೋಚಿಸಿ!

ನನಗೆ 14 ವರ್ಷ ಆದಾಗ ಪಯನೀಯರ್‌ ಆಗಬೇಕೆಂಬ ಆಸೆ ಬಂತು. ಆಗ ಅಮ್ಮ, ಸಹೋದರರ ಸೇವಕನ (ಸಂಚರಣ ಮೇಲ್ವಿಚಾರಕರ) ಹತ್ತಿರ ಮೊದಲು ಮಾತಾಡು ಎಂದರು. ಸಂಚರಣ ಮೇಲ್ವಿಚಾರಕರ ಹತ್ತಿರ ಮಾತಾಡಿದಾಗ, ಏನಾದರೂ ಸಣ್ಣ ಕೆಲಸ ಕಲಿತರೆ ಪಯನೀಯರ್‌ ಸೇವೆ ಮಾಡಲು ಸಹಾಯ ಆಗುತ್ತೆ ಅಂದರು. ನಾನದನ್ನೇ ಮಾಡಿದೆ. ಎರಡು ವರ್ಷಗಳಾದ ಮೇಲೆ ಇನ್ನೊಬ್ಬ ಸರ್ಕಿಟ್‌ ಮೇಲ್ವಿಚಾರಕರಿಗೆ ನನ್ನ ಗುರಿಯ ಬಗ್ಗೆ ಹೇಳಿದಾಗ ಅವರು “ಒಳ್ಳೇ ಐಡಿಯಾ! ಹಾಗೇ ಮಾಡು” ಅಂದರು.

ಅಮ್ಮ ಮತ್ತು ನನ್ನ ಪಯನೀಯರ್‌ ಜೀವನ 1949⁠ರ ಏಪ್ರಿಲ್‌ನಲ್ಲಿ ಆರಂಭವಾಯಿತು. ನಮ್ಮ ಹತ್ತಿರ ಇದ್ದ ವಸ್ತುಗಳನ್ನೆಲ್ಲಾ ಮಾರಿಬಿಟ್ಟು ಮ್ಯಾಂಚೆಸ್ಟರ್‌ ನಗರದ ಹತ್ತಿರದಲ್ಲಿರುವ ಮಿಡಲ್ಟನ್‌ ಎಂಬ ಸ್ಥಳಕ್ಕೆ ಹೋಗಿ ನಮ್ಮ ಸೇವೆಯನ್ನು ಆರಂಭಿಸಿದೆವು. ನಾಲ್ಕು ತಿಂಗಳಾದ ಮೇಲೆ ನಾನು ಒಬ್ಬ ಸಹೋದರನನ್ನು ನನ್ನ ಪಯನೀಯರ್‌ ಸಂಗಡಿಗನಾಗಿ ಆರಿಸಿಕೊಂಡೆ. ಆಗಷ್ಟೇ ಅರ್ಲಮ್‌ನಲ್ಲಿ ಒಂದು ಹೊಸ ಸಭೆಯನ್ನು ಸ್ಥಾಪಿಸಲಾಗಿತ್ತು. ನಮ್ಮನ್ನು ಅಲ್ಲಿಗೆ ಹೋಗುವಂತೆ ಶಾಖಾ ಕಚೇರಿ ಹೇಳಿತು. ಅಮ್ಮ ಒಬ್ಬ ಸಹೋದರಿಯೊಟ್ಟಿಗೆ ಸೇರಿ ಬೇರೊಂದು ಸಭೆಯಲ್ಲಿ ಪಯನೀಯರ್‌ ಸೇವೆ ಮಾಡಿದರು.

ನಾವು ಹೊಸ ಸಭೆಗೆ ನೇಮಕಗೊಂಡಾಗ ನನಗೆ 17 ವರ್ಷ. ಆ ಸಭೆಯಲ್ಲಿ ಕೆಲವೇ ಅರ್ಹ ಸಹೋದರರು ಇದ್ದದರಿಂದ ನನ್ನ ಪಯನೀಯರ್‌ ಸಂಗಡಿಗ ಮತ್ತು ನಾನು ಕೂಟಗಳನ್ನು ನಡೆಸಬೇಕಾಗಿತ್ತು. ನಂತರ ನಾನು ಬಕ್ಸ್‌ಟನ್‌ನಲ್ಲಿದ್ದ ಸಭೆಗೆ ಸ್ಥಳಾಂತರಿಸಿದೆ. ಅಲ್ಲಿ ಕೆಲವೇ ಪ್ರಚಾರಕರು ಇದ್ದದರಿಂದ ಅವರಿಗೆ ಸಹಾಯ ಬೇಕಿತ್ತು. ಈ ಎಲ್ಲಾ ಅನುಭವಗಳು ಮುಂದೆ ಸಿಗಲಿದ್ದ ನೇಮಕಗಳಿಗೆ ನನ್ನನ್ನು ಸಿದ್ಧಮಾಡಿದವು.

1953⁠ರಲ್ಲಿ ಡೆಂಟನ್‌ ಹಾಪ್‌ಕಿನ್ಸನ್‌ ಮತ್ತು ಇನ್ನೂ ಕೆಲವರು ಸಾರ್ವಜನಿಕ ಭಾಷಣದ ಬಗ್ಗೆ ಪ್ರಕಟಿಸುತ್ತಿರುವುದು

ನ್ಯೂಯಾರ್ಕ್‌ನ ರೋಚೆಸ್ಟರ್‌ನಲ್ಲಿ ಸಾರ್ವಜನಿಕ ಭಾಷಣದ ಬಗ್ಗೆ ಪ್ರಕಟಿಸುತ್ತಿರುವುದು, 1953

ನಾನು ಗಿಲ್ಯಡ್‌ ಶಾಲೆಗೆ ಹೋಗಲು 1951⁠ರಲ್ಲಿ ಅರ್ಜಿ ಹಾಕಿದೆ. ಆದರೆ 1952⁠ರ ಡಿಸೆಂಬರ್‌ನಲ್ಲಿ ಮಿಲಿಟರಿಗೆ ಸೇರುವಂತೆ ಕರೆ ಬಂತು. ನಾನೊಬ್ಬ ಪೂರ್ಣ ಸಮಯದ ಧಾರ್ಮಿಕ ಸೇವಕ, ಆದ್ದರಿಂದ ಮಿಲಿಟರಿ ಸೇವೆ ಮಾಡುವುದರಿಂದ ವಿನಾಯಿತಿ ಕೊಡಿ ಎಂದು ಕೇಳಿದೆ. ನ್ಯಾಯಾಲಯ ನನ್ನ ಕೋರಿಕೆಯನ್ನು ಒಪ್ಪದೆ ಆರು ತಿಂಗಳು ಜೈಲಿನಲ್ಲಿರುವಂತೆ ತೀರ್ಪು ಹೊರಡಿಸಿತು. ಜೈಲಿನಲ್ಲಿದ್ದಾಗ 22⁠ನೇ ಗಿಲ್ಯಡ್‌ ಶಾಲೆಗೆ ಹಾಜರಾಗುವಂತೆ ನನಗೆ ಆಮಂತ್ರಣ ಸಿಕ್ಕಿತು. 1953⁠ರ ಜುಲೈ ತಿಂಗಳಲ್ಲಿ ಜೈಲಿಂದ ಬಿಡುಗಡೆಯಾದ ಕೂಡಲೆ ನಾನು ಜಾರ್ಜಿಕ್‌ ಎಂಬ ಹಡಗನ್ನು ಹತ್ತಿ ನ್ಯೂಯಾರ್ಕ್‌ಗೆ ಹೋದೆ.

ಅಮೆರಿಕದಲ್ಲಿ ಬಂದಿಳಿದ ಕೂಡಲೆ ನಾನು 1953⁠ರ ನ್ಯೂ ವರ್ಲ್ಡ್‌ ಸೊಸೈಟಿ ಅಸೆಂಬ್ಲಿಗೆ ಹಾಜರಾದೆ. ಆಮೇಲೆ ನಾನು ನ್ಯೂಯಾರ್ಕ್‌ನ ಸೌತ್‌ ಲಾನ್ಸಿಂಗ್‌ಗೆ ಹೋಗುವ ರೈಲನ್ನು ಹತ್ತಿದೆ. ಗಿಲ್ಯಡ್‌ ಶಾಲೆ ಸೌತ್‌ ಲಾನ್ಸಿಂಗ್‌ನಲ್ಲಿತ್ತು. ರೈಲಿಂದ ಇಳಿದು ಬಸ್ಸನ್ನು ಹತ್ತಿದೆ. ಆದರೆ ಆಗಷ್ಟೇ ಜೈಲಿಂದ ಬಂದಿದ್ದ ಕಾರಣ ಟಿಕೆಟ್‌ ತೆಗೆದುಕೊಳ್ಳಲು ಬೇಕಾದ ಸ್ವಲ್ಪ ಹಣನೂ ನನ್ನ ಹತ್ತಿರ ಇರಲಿಲ್ಲ. ಅದೇ ಬಸ್ಸಲ್ಲಿ ಪ್ರಯಾಣ ಮಾಡುತ್ತಿದ್ದ ಒಬ್ಬರಿಂದ ಕೇಳಿ ಆ ಹಣವನ್ನು ಕೊಟ್ಟೆ.

ಬೇರೆ ದೇಶದಲ್ಲಿ ನೇಮಕ

ಗಿಲ್ಯಡ್‌ ಶಾಲೆಯಲ್ಲಿ ‘ಎಲ್ಲ ರೀತಿಯ ಜನರಿಗೆ ಎಲ್ಲವೂ ಆಗಲು’ ಬೇಕಾದ ಅತ್ಯುತ್ತಮ ತರಬೇತಿ ನಮಗೆ ಸಿಕ್ಕಿತು. (1 ಕೊರಿಂ. 9:22) ಪಾಲ್‌ ಬ್ರೂನ್‌, ರೇಮಂಡ್‌ ಲೀಚ್‌ ಮತ್ತು ನನ್ನನ್ನು ಫಿಲಿಪ್ಪೀನ್ಸ್‌ಗೆ ನೇಮಿಸಲಾಯಿತು. ಆದರೆ ವೀಸಾಗೆ ನಾವು ಅನೇಕ ತಿಂಗಳು ಕಾಯಬೇಕಿತ್ತು. ಆಮೇಲೆ ನಾವು ನೆದರ್‌ಲೆಂಡ್ಸ್‌ನಲ್ಲಿರುವ ರಾಟರ್‌ಡ್ಯಾಮ್‌ಗೆ ಹಡಗಿನಲ್ಲಿ ಹೋದೆವು. ನಂತರ ಮೆಡಿಟರೇನಿಯನ್‌ ಸಮುದ್ರ, ಸೂಯೆಜ್‌ ಕಾಲುವೆ ಮತ್ತು ಹಿಂದೂ ಮಹಾಸಾಗರ ದಾಟಿ ಮಲೇಷಿಯಾಗೆ ಬಂದು ಅಲ್ಲಿಂದ ಹಾಂಗ್‌ಕಾಂಗ್‌ಗೆ ತಲುಪಿದ್ವಿ. ಕೊನೆಗೆ 47 ದಿನಗಳ ಸಮುದ್ರ ಯಾನ ಮಾಡಿದ ಮೇಲೆ 1954⁠ರ ನವೆಂಬರ್‌ 19⁠ರಂದು ಫಿಲಿಪ್ಪೀನ್ಸ್‌ನ ಮನಿಲಾಗೆ ಬಂದ್ವಿ.

1954⁠ರಲ್ಲಿ ಡೆಂಟನ್‌ ಹಾಪ್‌ಕಿನ್ಸನ್‌ ಮತ್ತು ರೇಮಂಡ್‌ ಲೀಚ್‌ ಹಡಗಿನಲ್ಲಿ

ನಾನು ಮತ್ತು ರೇಮಂಡ್‌ ಲೀಚ್‌ 47 ದಿನಗಳ ಸಮುದ್ರ ಯಾನ ಮಾಡಿ ಫಿಲಿಪ್ಪೀನ್ಸ್‌ಗೆ ಬಂದ್ವಿ

ಹೊಸ ದೇಶ, ಹೊಸ ಭಾಷೆ, ಹೊಸ ಸಂಸ್ಕೃತಿಗೆ ಹೊಂದಿಕೊಳ್ಳಬೇಕಿತ್ತು. ಆರಂಭದಲ್ಲಿ ಮೂವರನ್ನೂ ಕ್ವೆಜಾನ್‌ ನಗರದಲ್ಲಿದ್ದ ಸಭೆಗೆ ನೇಮಿಸಲಾಯಿತು. ಅಲ್ಲಿ ಇಂಗ್ಲಿಷ್‌ ಮಾತಾಡುವ ಅನೇಕರಿದ್ದರು. ಆರು ತಿಂಗಳಾದರೂ ನಾವು ಟಗಾಲಗ್‌ ಭಾಷೆಯಲ್ಲಿ ಕೆಲವೇ ಪದಗಳನ್ನು ಕಲಿತಿದ್ವಿ. ಆದರೆ ಮುಂದಿನ ನೇಮಕ ಸಿಕ್ಕಿದಾಗ ವಿಷಯ ಬದಲಾಯಿತು.

ಇಸವಿ 1955⁠ರ ಮೇ ತಿಂಗಳಲ್ಲಿ, ಒಂದು ದಿನ ನಾವು ಸೇವೆಯಿಂದ ಮನೆಗೆ ಬಂದಾಗ ನಮಗೆ ಕೆಲವು ಪತ್ರಗಳು ಬಂದಿರುವುದನ್ನು ನೋಡಿದ್ವಿ. ನಮ್ಮನ್ನು ಸರ್ಕಿಟ್‌ ಮೇಲ್ವಿಚಾರಕರಾಗಿ ನೇಮಿಸಿರುವುದಾಗಿ ಅದರಲ್ಲಿ ಬರೆದಿತ್ತು. ನನಗಾಗ 22 ವರ್ಷ ಮಾತ್ರ. ‘ಎಲ್ಲ ರೀತಿಯ ಜನರಿಗೆ ಎಲ್ಲವೂ ಆಗಲು’ ಈ ಹೊಸ ನೇಮಕದಲ್ಲಿ ಹೊಸ ಅವಕಾಶಗಳು ಸಿಕ್ಕಿತು.

ಡೆಂಟನ್‌ ಹಾಪ್‌ಕಿನ್ಸನ್‌ ಸಾರ್ವಜನಿಕ ಭಾಷಣ ನೀಡುತ್ತಿರುವುದು

ಬೈಕೋಲ್‌ ಭಾಷೆಯ ಸರ್ಕಿಟ್‌ ಸಮ್ಮೇಳನದಲ್ಲಿ ನಾನು ಸಾರ್ವಜನಿಕ ಭಾಷಣ ಕೊಡುತ್ತಿರುವುದು

ಆಗೆಲ್ಲಾ ಫಿಲಿಪ್ಪೀನ್ಸ್‌ನಲ್ಲಿ ಸಾರ್ವಜನಿಕ ಭಾಷಣಗಳನ್ನು ಸಾರ್ವಜನಿಕ ಸ್ಥಳಗಳಲ್ಲೇ ಕೊಡುತ್ತಿದ್ದೆವು! ಸರ್ಕಿಟ್‌ ಮೇಲ್ವಿಚಾರಕನಾಗಿ ನಾನು ನನ್ನ ಮೊದಲ ಸಾರ್ವಜನಿಕ ಭಾಷಣವನ್ನು ಒಂದು ಅಂಗಡಿಯ ಹೊರಗೆ ಕೊಟ್ಟೆ. ನಾನು ಆ ಸರ್ಕಿಟ್‌ನಲ್ಲಿರುವ ಬೇರೆ ಬೇರೆ ಸಭೆಗಳಿಗೆ ಭೇಟಿ ನೀಡಿದಾಗ ಸಾರ್ವಜನಿಕರು ಕೂರಲು ಮಾಡಿರುವ ಮಂಟಪಗಳಲ್ಲಿ, ಮಾರ್ಕೆಟ್‌ಗಳಲ್ಲಿ, ಸಾರ್ವಜನಿಕ ಸಭಾಂಗಣಗಳ ಎದುರಲ್ಲಿ, ಆಟದ ಮೈದಾನದಲ್ಲಿ, ಉದ್ಯಾನಗಳಲ್ಲಿ, ಬೀದಿ ಬದಿಗಳಲ್ಲಿ ಭಾಷಣಗಳನ್ನು ಕೊಟ್ಟೆ. ಒಮ್ಮೆ ಸ್ಯಾನ್‌ ಪಾಬ್ಲೊ ಸಿಟಿಯಲ್ಲಿ ಭಾರಿ ಮಳೆಯಾದ ಕಾರಣ ಅಲ್ಲಿದ್ದ ಮಾರ್ಕೆಟ್‌ನಲ್ಲಿ ಭಾಷಣ ಕೊಡಲು ಆಗಲಿಲ್ಲ. ಆದ್ದರಿಂದ ರಾಜ್ಯ ಸಭಾಗೃಹದಲ್ಲಿ ಭಾಷಣ ಕೊಡಲು ಏರ್ಪಾಡು ಮಾಡೋಣ ಎಂದು ಜವಾಬ್ದಾರಿಯ ಸ್ಥಾನದಲ್ಲಿರುವ ಸಹೋದರರಿಗೆ ಹೇಳಿದೆ. ಈ ಕೂಟವನ್ನು ಸಾರ್ವಜನಿಕ ಸ್ಥಳದಲ್ಲಿ ನಡೆಸದ ಕಾರಣ ಇದನ್ನು ಸಾರ್ವಜನಿಕ ಕೂಟ ಎಂದು ವರದಿ ಮಾಡಬಹುದಾ ಎಂದು ಆ ಸಹೋದರರು ನನ್ನನ್ನು ಕೇಳಿದರು.

ನಾನು ಯಾವಾಗಲೂ ಸಹೋದರರ ಮನೆಯಲ್ಲೇ ಉಳಿಯುತ್ತಿದ್ದೆ. ಆ ಮನೆಗಳು ಚಿಕ್ಕದಾಗಿದ್ದರೂ ಚೊಕ್ಕದಾಗಿತ್ತು. ಹೆಚ್ಚಾಗಿ ನೆಲದ ಮೇಲೆ ಚಾಪೆ ಹಾಕಿ ಮಲಗುತ್ತಿದ್ದೆ. ಸ್ನಾನ ಮನೆಯ ಹೊರಗೆ ಮಾಡಬೇಕಿತ್ತು. ಓಡಾಡುತ್ತಿರುವವರಿಗೆ ನಾನು ಸ್ನಾನ ಮಾಡುವುದು ಕಾಣುತ್ತಿತ್ತು. ಆದ್ದರಿಂದ ಬೇಕಾದ ಬಂದೋಬಸ್ತು ಮಾಡಿಕೊಂಡು ಸ್ನಾನ ಮಾಡುತ್ತಿದ್ದೆ. ನಾನು ಸೇವೆಗೆ ಬಸ್ಸಿನಲ್ಲಿ ಹೋಗುತ್ತಿದ್ದೆ. ಬೇರೆ ದ್ವೀಪಗಳಿಗೆ ದೋಣಿಯಲ್ಲಿ ಹೋಗುತ್ತಿದ್ದೆ. ಇದುವರೆಗೂ ನನ್ನ ಹತ್ತಿರ ಒಂದು ಕಾರು ಇಲ್ಲ.

ನಾನು ಟಗಾಲಗ್‌ ಭಾಷೆ ಕಲಿಯಲು ಯಾವುದೇ ಕ್ಲಾಸ್‌ಗೆ ಹೋಗಲಿಲ್ಲ. ಕ್ಷೇತ್ರ ಸೇವೆಯಲ್ಲಿ ಮತ್ತು ಕೂಟಗಳಲ್ಲಿ ಸಹೋದರರು ಹೇಗೆ ಮಾತಾಡುತ್ತಾರೆ ಅನ್ನುವುದನ್ನು ಕೇಳಿಸಿಕೊಂಡೇ ಭಾಷೆ ಕಲಿತೆ. ಈ ವಿಷಯದಲ್ಲಿ ಸಹೋದರರು ನನಗೆ ತುಂಬ ಸಹಾಯಮಾಡಿದರು. ಅವರು ತಾಳ್ಮೆಯಿಂದ ನನಗೆ ಕಲಿಸಿದ್ದಕ್ಕಾಗಿ ಮತ್ತು ನಾನು ಏನಾದರೂ ತಪ್ಪು ಹೇಳಿದಾಗ ನನ್ನನ್ನು ತಿದ್ದಲು ಮುಂದೆ ಬಂದದ್ದಕ್ಕಾಗಿ ನಾನು ತುಂಬ ಆಭಾರಿ.

ಸಮಯ ದಾಟಿದಂತೆ ಬೇರೆ ನೇಮಕಗಳು ನನಗೆ ಸಿಕ್ಕಿದವು. ಅದಕ್ಕೆ ಬೇಕಾದ ಹೊಂದಾಣಿಕೆಗಳನ್ನು ಮಾಡಿಕೊಳ್ಳಬೇಕಿತ್ತು. 1956⁠ರಲ್ಲಿ ಸಹೋದರ ನೇತನ್‌ ನಾರ್‌ ಫಿಲಿಪ್ಪೀನ್ಸ್‌ಗೆ ಬಂದಾಗ ರಾಷ್ಟ್ರೀಯ ಅಧಿವೇಶನಕ್ಕಾಗಿ ಏರ್ಪಾಡು ಮಾಡಿದ್ವಿ. ನನಗೆ ವಾರ್ತಾ ಮಾಧ್ಯಮವನ್ನು ಸಂಪರ್ಕಿಸುವ ನೇಮಕ ಸಿಕ್ಕಿತು. ಇದರಲ್ಲಿ ನನಗೆ ಯಾವುದೇ ಅನುಭವ ಇರಲಿಲ್ಲ. ಬೇರೆಯವರು ನನಗೆ ಸಹಾಯಮಾಡಿದರು. ಒಂದು ವರ್ಷ ಆದ ಮೇಲೆ ಇನ್ನೊಂದು ರಾಷ್ಟ್ರೀಯ ಅಧಿವೇಶನಕ್ಕೆ ಬೇಕಾದ ಏರ್ಪಾಡು ಮಾಡಿದ್ವಿ. ನನಗೆ ಅಧಿವೇಶನದ ಮೇಲ್ವಿಚಾರಕನಾಗುವ ನೇಮಕ ಸಿಕ್ಕಿತು. ಸಹೋದರ ಫ್ರೆಡ್‌ರಿಕ್‌ ಫ್ರಾನ್ಸ್‌ ಮುಖ್ಯ ಕಾರ್ಯಾಲಯದಿಂದ ಬಂದರು. ನಾನು ಅವರಿಂದ ಎಷ್ಟೋ ವಿಷಯಗಳನ್ನು ಕಲಿತೆ. ಅವರು ಸಾರ್ವಜನಿಕ ಭಾಷಣ ನೀಡಿದಾಗ ಬರೋಂಗ್‌ ಟಗಾಲಗ್‌ ಎಂಬ ಸಾಂಸ್ಕೃತಿಕ ಬಟ್ಟೆಯನ್ನು ಧರಿಸಿದ್ದರು. ಇದನ್ನು ನೋಡಿ ಸ್ಥಳೀಯ ಸಹೋದರರಿಗೆ ತುಂಬ ಖುಷಿಯಾಯಿತು. ಇದರಿಂದ ನಾನು ಸಹ ಜನರಿಗೆ ತಕ್ಕ ಹಾಗೆ ನನ್ನನ್ನು ಹೊಂದಿಸಿಕೊಳ್ಳಬೇಕು ಎಂದು ತಿಳಿದುಕೊಂಡೆ.

ನಾನು ಜಿಲ್ಲಾ ಮೇಲ್ವಿಚಾರಕನಾದಾಗ ಹೆಚ್ಚು ಹೊಂದಾಣಿಕೆಗಳನ್ನು ಮಾಡಬೇಕಿತ್ತು. ಆಗೆಲ್ಲಾ ನಾವು ನೂತನ ಲೋಕ ಸಮಾಜದ ಸಂತೋಷ (ಇಂಗ್ಲಿಷ್‌) ಎಂಬ ಚಲನಚಿತ್ರವನ್ನು ತೋರಿಸುತ್ತಿದ್ವಿ. ಹೆಚ್ಚಾಗಿ ಮೈದಾನಗಳಲ್ಲಿ ಈ ಚಿತ್ರವನ್ನು ತೋರಿಸುತ್ತಿದ್ವಿ. ಕೆಲವೊಮ್ಮೆ ಕೀಟಗಳ ಕಾಟ ಇರುತ್ತಿತ್ತು. ಪ್ರೊಜೆಕ್ಟರಿನ ಬೆಳಕಿಗೆ ಆಕರ್ಷಿಸಲ್ಪಟ್ಟ ಕೀಟಗಳು ಪ್ರೊಜೆಕ್ಟರಿಗೆ ಅಂಟಿಕೊಳ್ಳುತ್ತಿದ್ದವು. ಆಮೇಲೆ ಅದನ್ನು ತೆಗೆಯಲಿಕ್ಕೆ ತುಂಬ ಕಷ್ಟಪಡಬೇಕಿತ್ತು. ಇಂಥ ಸಮಾರಂಭಗಳನ್ನು ಏರ್ಪಡಿಸುವುದು ಸುಲಭವಾಗಿರಲಿಲ್ಲ. ಆದರೆ ಜನ ಬಂದು ಯೆಹೋವನ ಅಂತಾರಾಷ್ಟ್ರೀಯ ಸಂಘಟನೆಯ ಬಗ್ಗೆ ಕಲಿತು ಹೋಗುವುದನ್ನು ನೋಡುವಾಗ ತುಂಬ ತೃಪ್ತಿ ಸಿಗುತ್ತಿತ್ತು.

ಕೆಲವು ಸ್ಥಳಗಳಲ್ಲಿದ್ದ ಕ್ಯಾಥೊಲಿಕ್‌ ಪಾದ್ರಿಗಳು ಯೆಹೋವನ ಸಾಕ್ಷಿಗಳ ಸಮ್ಮೇಳನಗಳಿಗೆ ಅನುಮತಿ ಕೊಡಬೇಡಿ ಎಂದು ಸರ್ಕಾರಿ ಅಧಿಕಾರಿಗಳ ಮೇಲೆ ಒತ್ತಡ ಹಾಕುತ್ತಿದ್ದರು. ಅವರ ಚರ್ಚುಗಳ ಹತ್ತಿರ ಭಾಷಣಗಳು ಏರ್ಪಾಡಾಗಿದ್ದಾಗ ಜನರಿಗೆ ಭಾಷಣಕಾರನು ಹೇಳುವುದು ಕೇಳಿಸದಂತೆ ಚರ್ಚಿನ ಘಂಟೆಯನ್ನು ಬಾರಿಸುತ್ತಾ ಇದ್ದರು. ಇಷ್ಟೆಲ್ಲಾ ತೊಂದರೆ ಇದ್ದರೂ ಜನ ಸತ್ಯ ಕಲಿಯುವುದನ್ನು ಮುಂದುವರಿಸಿದರು. ಈ ಕ್ಷೇತ್ರಗಳಲ್ಲಿರುವ ಎಷ್ಟೋ ಜನ ಈಗ ಯೆಹೋವನ ಆರಾಧಕರಾಗಿದ್ದಾರೆ.

ಹೊಸ ನೇಮಕಗಳು, ಹೆಚ್ಚು ಹೊಂದಾಣಿಕೆಗಳು

ನನಗೆ 1959⁠ರಲ್ಲಿ ಶಾಖಾ ಕಚೇರಿಯಲ್ಲಿ ಕೆಲಸಮಾಡುವ ನೇಮಕ ಸಿಕ್ಕಿತು. ಅಲ್ಲಿ ನನಗೆ ಸಿಕ್ಕಿದ ಅನುಭವಗಳಿಂದ ತುಂಬ ವಿಷಯಗಳನ್ನು ಕಲಿತೆ. ಶಾಖಾ ಕಚೇರಿಯಲ್ಲಿ ಸ್ವಲ್ಪ ಸಮಯ ಇದ್ದ ಬಳಿಕ ಬೇರೆ ದೇಶಗಳಿಗೆ ಜೋನ್‌ ಮೇಲ್ವಿಚಾರಕರಾಗಿ ಹೋಗುವ ನೇಮಕ ಸಿಕ್ಕಿತು. ಹೀಗೆ ಥಾಯ್‌ಲೆಂಡ್‌ಗೆ ಹೋಗಿದ್ದಾಗ ಜಾನೆಟ್‌ ಡೂಮಾಂಡ್‌ ಎಂಬ ಸಹೋದರಿಯ ಪರಿಚಯವಾಯಿತು. ಅವರು ಥಾಯ್‌ಲೆಂಡ್‌ನಲ್ಲಿ ಮಿಷನರಿ ಸೇವೆ ಮಾಡುತ್ತಿದ್ದರು. ಸ್ವಲ್ಪ ಸಮಯದ ವರೆಗೆ ನಾವಿಬ್ಬರೂ ಪತ್ರದ ಮೂಲಕ ಮಾತಾಡುತ್ತಿದ್ವಿ. ಆಮೇಲೆ ಮದುವೆ ಮಾಡಿಕೊಂಡ್ವಿ. 51 ವರ್ಷಗಳಿಂದ ಯೆಹೋವನ ಸೇವೆಯನ್ನು ಒಟ್ಟಿಗೆ ಸಂತೋಷದಿಂದ ಮಾಡುತ್ತಿದ್ದೇವೆ.

ಡೆಂಟನ್‌ ಹಾಪ್‌ಕಿನ್ಸನ್‌ ಮತ್ತು ಅವರ ಪತ್ನಿ ಜಾನೆಟ್‌ ಫಿಲಿಪ್ಪೀನ್ಸ್‌ನಲ್ಲಿ

ಫಿಲಿಪ್ಪೀನ್ಸ್‌ನ ದ್ವೀಪವೊಂದರಲ್ಲಿ ಜಾನೆಟ್‌ ಜೊತೆ

ನಾನು ಇಲ್ಲಿವರೆಗೆ 33 ದೇಶಗಳಲ್ಲಿರುವ ನಮ್ಮ ಸಹೋದರರನ್ನು ಭೇಟಿಮಾಡಿದ್ದೇನೆ. ಬೇರೆ ಸಂಸ್ಕೃತಿ ಮತ್ತು ಹಿನ್ನೆಲೆಯ ಜನರೊಂದಿಗೆ ಹೇಗೆ ನಡಕೊಳ್ಳಬೇಕೆಂದು ನನಗೆ ಹಿಂದೆ ಸಿಕ್ಕಿದ ನೇಮಕಗಳಿಂದ ಕಲಿತಿದ್ದೆ. ಇದಕ್ಕಾಗಿ ನಾನು ತುಂಬ ಆಭಾರಿ. ನಾನು ಬೇರೆ ಬೇರೆ ದೇಶಗಳಿಗೆ ಭೇಟಿಕೊಟ್ಟಾಗ ಯೆಹೋವನು ಎಲ್ಲಾ ರೀತಿಯ ಜನರನ್ನು ಪ್ರೀತಿಸುತ್ತಾನೆ ಎಂಬುದನ್ನು ಸ್ಪಷ್ಟವಾಗಿ ಅರ್ಥಮಾಡಿಕೊಳ್ಳಲು ಸಹಾಯವಾಯಿತು.—ಅ. ಕಾ. 10:34, 35.

ಡೆಂಟನ್‌ ಹಾಪ್‌ಕಿನ್ಸನ್‌ ಮತ್ತು ಅವರ ಪತ್ನಿ ಜಾನೆಟ್‌ ಒಬ್ಬ ಮಹಿಳೆಗೆ ಸಾಕ್ಷಿ ಕೊಡುತ್ತಿರುವುದು

ನಾವು ಸೇವೆಯನ್ನು ಯಾವತ್ತೂ ತಪ್ಪಿಸಲ್ಲ

ಹೊಂದಾಣಿಕೆಗಳನ್ನು ಮಾಡ್ತಾನೇ ಇದ್ದೇವೆ

ಫಿಲಿಪ್ಪೀನ್ಸ್‌ನಲ್ಲಿರುವ ನಮ್ಮ ಸಹೋದರರೊಂದಿಗೆ ಸೇವೆ ಮಾಡುವುದನ್ನು ನಾನು ಮತ್ತು ಜಾನೆಟ್‌ ತುಂಬ ಇಷ್ಟಪಡುತ್ತೇವೆ. ಕ್ವೆಜಾನ್‌ ನಗರದಲ್ಲಿರುವ ಶಾಖಾ ಕಚೇರಿಯಲ್ಲಿ ಈಗಲೂ ಕೆಲಸ ಮಾಡುತ್ತಿದ್ದೇವೆ. ನಾನು 60 ವರ್ಷಗಳ ಹಿಂದೆ ಇಲ್ಲಿ ಸೇವೆ ಮಾಡಲು ಬಂದಾಗ ಇದ್ದದಕ್ಕಿಂತ ಈಗ ಹತ್ತು ಪಟ್ಟು ಹೆಚ್ಚು ಪ್ರಚಾರಕರು ಇದ್ದಾರೆ. ಇಷ್ಟು ವರ್ಷಗಳಿಂದ ಸೇವೆ ಮಾಡಿದ್ದರೂ ಯೆಹೋವನು ನನ್ನಿಂದ ಏನು ಅಪೇಕ್ಷಿಸುತ್ತಾನೋ ಅದಕ್ಕೆ ಬೇಕಾದ ಹೊಂದಾಣಿಕೆಗಳನ್ನು ಮಾಡಲು ನಾನು ಈಗಲೂ ಸಿದ್ಧನಿರಬೇಕು. ಇತ್ತೀಚೆಗೆ ಸಂಘಟನೆಯಲ್ಲಾದ ಬದಲಾವಣೆಗಳಿಂದಾಗಿ ಹೆಚ್ಚು ಹೊಂದಾಣಿಕೆಗಳನ್ನು ಮಾಡಿಕೊಳ್ಳಬೇಕಿತ್ತು.

ಡೆಂಟನ್‌ ಹಾಪ್‌ಕಿನ್ಸನ್‌ ಮತ್ತು ಅವರ ಪತ್ನಿ ಜಾನೆಟ್‌ ಒಬ್ಬ ಚಿಕ್ಕ ಹುಡುಗಿಯ ಹತ್ತಿರ ಮಾತಾಡುತ್ತಿರುವುದು

ಸಾಕ್ಷಿಗಳ ಸಂಖ್ಯೆ ಹೆಚ್ಚಾಗುತ್ತಿರುವುದನ್ನು ನೋಡಿ ನಮಗೆ ತುಂಬ ಖುಷಿಯಾಗುತ್ತದೆ

ಯೆಹೋವನು ಯಾವ ನಿರ್ದೇಶನ ಕೊಟ್ಟರೂ ಅದನ್ನು ಪೂರ್ಣ ಮನಸ್ಸಿಂದ ಪಾಲಿಸಲು ನಮ್ಮಿಂದಾದ ಎಲ್ಲ ಪ್ರಯತ್ನ ಮಾಡಿದ್ದೇವೆ. ಇದರಿಂದ ಜೀವನದಲ್ಲಿ ನಮಗೆ ತುಂಬ ಸಂತೋಷ ಸಿಕ್ಕಿದೆ. ನಮ್ಮ ಸೇವೆಯನ್ನು ಉತ್ತಮಗೊಳಿಸಲು ಬೇಕಾದ ಹೊಂದಾಣಿಕೆಗಳನ್ನೂ ಮಾಡಲು ಪ್ರಯತ್ನಿಸಿದ್ದೇವೆ. ಹೌದು, ಯೆಹೋವನ ಚಿತ್ತದಂತೆ ನಾವು ‘ಎಲ್ಲ ರೀತಿಯ ಜನರಿಗೆ ಎಲ್ಲವೂ ಆಗಲು’ ದೃಢತೀರ್ಮಾನ ಮಾಡಿದ್ದೇವೆ.

ಡೆಂಟನ್‌ ಹಾಪ್‌ಕಿನ್ಸನ್‌ ಫಿಲಿಪ್ಪೀನ್ಸ್‌ ಬ್ರಾಂಚ್‌ ಆಫೀಸಿನಲ್ಲಿ ಒಬ್ಬ ಯುವ ಸಹೋದರನ ಹತ್ತಿರ ಮಾತಾಡುತ್ತಿರುವುದು

ನಾವಿನ್ನೂ ಕ್ವೆಜಾನ್‌ ನಗರದಲ್ಲಿರುವ ಶಾಖಾ ಕಚೇರಿಯಲ್ಲಿ ಸೇವೆ ಮಾಡುತ್ತಿದ್ದೇವೆ

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ