ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • w16 ಡಿಸೆಂಬರ್‌ ಪು. 29-31
  • ಶಾಂತಗುಣ—ವಿವೇಕದ ಲಕ್ಷಣ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಶಾಂತಗುಣ—ವಿವೇಕದ ಲಕ್ಷಣ
  • ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಅಧ್ಯಯನ)—2016
  • ಉಪಶೀರ್ಷಿಕೆಗಳು
  • ಅನುರೂಪ ಮಾಹಿತಿ
  • ಶಾಂತಗುಣದಿಂದ ಸಿಗುವ ಪ್ರಯೋಜನ
  • ಸೌಮ್ಯ-ಚಿತರ್ತು ಎಷ್ಟೋ ಧನ್ಯರು!
    ಕಾವಲಿನಬುರುಜು—1992
  • ಸೌಮ್ಯಭಾವ—ಕೊಡುತ್ತೆ ಸಂತೋಷವ!
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಅಧ್ಯಯನ)—2020
  • ನನ್ನ ಕೋಪಕ್ಕೆ ಹೇಗೆ ಕಡಿವಾಣ ಹಾಕಲಿ?
    ಎಚ್ಚರ!—2010
  • ಸೌಮ್ಯತೆಯನ್ನು ಧರಿಸಿಕೊಳ್ಳಿರಿ!
    ಕಾವಲಿನಬುರುಜು—1992
ಇನ್ನಷ್ಟು
ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಅಧ್ಯಯನ)—2016
w16 ಡಿಸೆಂಬರ್‌ ಪು. 29-31
ಕೋಪ ಮಾಡಿಕೊಂಡ ಮಹಿಳೆಯ ಹತ್ತಿರ ಒಬ್ಬ ನರ್ಸ್‌ ಮಾತಾಡುತ್ತಿರುವುದು

ಶಾಂತಗುಣ—ವಿವೇಕದ ಲಕ್ಷಣ

ಆ್ಯಂಟೋನಿಯ ನರ್ಸ್‌ ಕೆಲಸ ಮಾಡುತ್ತಾಳೆ. ಒಂದಿನ ವಯಸ್ಸಾದ ಒಬ್ಬರನ್ನು ನೋಡಿಕೊಳ್ಳಲಿಕ್ಕಂತ ಹೋದಳು. ಅವರ ಮನೆಗೆ ಬಂದು ಬೆಲ್‌ ಮಾಡಿದಾಗ ಆ ವೃದ್ಧೆಯ ಮಗಳು ಬಾಗಿಲು ತೆರೆದಳು. ಹೊರಗೆ ಬಂದವಳೇ ‘ಎಷ್ಟೊತ್ತಿಗೆ ಬರೋದು?’ ಅಂತ ಬಾಯಿಗೆ ಬಂದ ಹಾಗೆ ಬೈಯಲು ಶುರುಮಾಡಿದಳು. ಹಾಗಂತ ಆ್ಯಂಟೋನಿಯ ಏನು ಲೇಟಾಗಿ ಹೋಗಿರಲಿಲ್ಲ. ಆದರೂ ಅವಳು ಶಾಂತವಾಗಿದ್ದು ತಾನು ಮಾಡದಿರೋ ತಪ್ಪಿಗಾಗಿ ಕ್ಷಮೆ ಕೇಳಿದಳು.

ಇದು ಇಷ್ಟಕ್ಕೆ ನಿಂತಿದ್ದರೆ ಪರವಾಗಿಲ್ಲ. ಆದರೆ ಮುಂದಿನ ಸಲ ಹೋದಾಗಲೂ ಅವಳದು ಅದೇ ಗೋಳು. ಪುನಃ ಆ್ಯಂಟೋನಿಯ ಮೇಲೆ ರೇಗಾಡಿದಳು. ಆ್ಯಂಟೋನಿಯಗೆ ಹೇಗಾಗಿರಬಹುದು? ಅವಳೇ ಹೇಳುತ್ತಾಳೆ ಕೇಳಿ: “ನಂದೇನ್‌ ತಪ್ಪಿರಲಿಲ್ಲ. ಸುಮ್ನೆ ಇರಕ್ಕೆ ತುಂಬ ಕಷ್ಟ ಆಯ್ತು.” ಆದರೂ ಆ್ಯಂಟೋನಿಯ ಈ ಸಾರಿನೂ ಕ್ಷಮೆ ಕೇಳಿ, ‘ನಿಮ್ಮ ನೋವೇನು ಅಂತ ನನಗೆ ಅರ್ಥ ಆಗುತ್ತೆ’ ಅಂತ ಅವಳಿಗೆ ಹೇಳಿದಳು.

ಆ್ಯಂಟೋನಿಯಳ ಜಾಗದಲ್ಲಿ ನೀವು ಇದ್ದಿದ್ದರೆ ಏನು ಮಾಡುತ್ತಿದ್ದಿರಿ? ಅವಳ ಹಾಗೆ ಶಾಂತವಾಗಿರುತ್ತಿದ್ದಿರಾ? ಅಥವಾ ಕೋಪದಿಂದ ಕೂಗಾಡುತ್ತಿದ್ದಿರಾ? ಇಂಥ ಸನ್ನಿವೇಶದಲ್ಲಿ ಶಾಂತವಾಗಿರುವುದು ಹೇಳಿದಷ್ಟು ಸುಲಭ ಅಲ್ಲ. ಅದರಲ್ಲೂ ಯಾರಾದರೂ ಕಿರಿಕಿರಿ ಮಾಡಿದಾಗ, ಒತ್ತಡ ಇದ್ದಾಗಂತೂ ಶಾಂತವಾಗಿರುವುದು ಇನ್ನೂ ಕಷ್ಟ.

ಕ್ರೈಸ್ತರು ಯಾವುದೇ ಸನ್ನಿವೇಶದಲ್ಲಿ ತಾಳ್ಮೆ ಕಳಕೊಳ್ಳಬಾರದು ಅಂತ ದೇವರ ವಾಕ್ಯ ಉತ್ತೇಜಿಸುತ್ತದೆ. ಶಾಂತಗುಣಕ್ಕೂ ವಿವೇಕಕ್ಕೂ ಸಂಬಂಧ ಇದೆ ಎಂದೂ ಅದು ಹೇಳುತ್ತದೆ. “ನಿಮ್ಮಲ್ಲಿ ವಿವೇಕಿಯೂ ತಿಳಿವಳಿಕೆಯುಳ್ಳವನೂ ಯಾರು? ಅಂಥವನು ಉತ್ತಮ ನಡತೆಯಿಂದ ವಿವೇಕಕ್ಕೆ ಸೇರಿದ್ದಾಗಿರುವ ಸೌಮ್ಯಭಾವ [ಶಾಂತಗುಣ]ದೊಂದಿಗೆ ತನ್ನ ಕ್ರಿಯೆಗಳನ್ನು ತೋರಿಸಲಿ” ಎನ್ನುತ್ತದೆ ಬೈಬಲ್‌. (ಯಾಕೋ. 3:13) ಶಾಂತಗುಣ ವಿವೇಕದ ಲಕ್ಷಣ ಹೇಗೆ? ಈ ದೈವಿಕ ಗುಣವನ್ನು ಬೆಳೆಸಿಕೊಳ್ಳಲು ನಮಗೆ ಯಾವುದು ಸಹಾಯಮಾಡುತ್ತದೆ?

ಶಾಂತಗುಣದಿಂದ ಸಿಗುವ ಪ್ರಯೋಜನ

ಸಿಟ್ಟನ್ನಾರಿಸುತ್ತದೆ. “ಮೃದುವಾದ ಪ್ರತ್ಯುತ್ತರವು ಸಿಟ್ಟನ್ನಾರಿಸುವದು; ಬಿರುನುಡಿಯು ಸಿಟ್ಟನ್ನೇರಿಸುವದು.”—ಜ್ಞಾನೋ. 15:1.

ಒಬ್ಬರಿಗೆ ಕೋಪ ಬಂದಿರುವಾಗ ಇನ್ನೊಬ್ಬರೂ ಕೋಪದಿಂದ ಮಾತಾಡುವುದು ‘ಉರಿಯೋ ಬೆಂಕಿಗೆ ತುಪ್ಪ ಸುರಿದ ಹಾಗೆ.’ (ಜ್ಞಾನೋ. 26:21) ಆದರೆ ಶಾಂತಗುಣ ‘ಉರಿಯೋ ಬೆಂಕಿಗೆ ನೀರು ಸುರಿದ ಹಾಗೆ.’ ಕೋಪದಿಂದ ಕುದಿಯುತ್ತಿರುವ ವ್ಯಕ್ತಿಯನ್ನು ಕೂಡ ತಣ್ಣಗಾಗಿಸುತ್ತದೆ.

ಆ್ಯಂಟೋನಿಯಗೆ ಇದರ ಅನುಭವ ಆಯಿತು. ಅವಳು ಎದುರು ಮಾತಾಡದೆ ನಿಂತಿರುವುದನ್ನು ನೋಡಿ ಆ ಸ್ತ್ರೀಯ ಕೋಪ ಕರಗಿ ಕಣ್ಣೀರಾಯಿತು. ‘ಏನೋ ಟೆನ್ಷನಲ್ಲಿ ಮಾತಾಡಿಬಿಟ್ಟೆ. ಕುಟುಂಬದಲ್ಲೂ ಕೆಲವು ಸಮಸ್ಯೆಗಳಿವೆ’ ಅಂತ ಹೇಳಿಕೊಂಡಳು. ಆ್ಯಂಟೋನಿಯ ಆಕೆಗೆ ಸಾಕ್ಷಿ ಕೊಟ್ಟಳು. ಬೈಬಲ್‌ ಅಧ್ಯಯನನೂ ಶುರು ಆಯಿತು. ಇಷ್ಟೆಲ್ಲಾ ಆಗಿದ್ದು ಹೇಗೆ? ಆ್ಯಂಟೋನಿಯ ಶಾಂತವಾಗಿ ಇದ್ದದ್ದರಿಂದಲೇ.

ನಾವು ಸಂತೋಷವಾಗಿರುತ್ತೇವೆ. “ಸೌಮ್ಯಭಾವ [ಶಾಂತಗುಣ]ದವರು ಸಂತೋಷಿತರು; ಅವರು ಭೂಮಿಗೆ ಬಾಧ್ಯರಾಗುವರು.”—ಮತ್ತಾ. 5:5.

ಮೊದಲೆಲ್ಲಾ ಮುಟ್ಟಿದರೆ ಮುನಿ ಅಂತಿದ್ದವರು ಶಾಂತಗುಣ ಬೆಳೆಸಿಕೊಂಡು ಸಂತೋಷವಾಗಿದ್ದಾರೆ. ಯಾಕೆಂದರೆ ಈಗ ಅವರ ಬದುಕಿಗೊಂದು ಅರ್ಥ ಇದೆ ಮತ್ತು ತಮಗಾಗಿ ಸುಂದರ ಭವಿಷ್ಯ ಕಾದಿದೆ ಅಂತ ಅವರಿಗೆ ಗೊತ್ತಿದೆ. (ಕೊಲೊ. 3:12) ಸ್ಪೇನ್‌ ದೇಶದ ಒಬ್ಬ ಸಂಚರಣ ಮೇಲ್ವಿಚಾರಕರಾದ ಸಹೋದರ ಅಡೊಲ್ಫೋ ಸತ್ಯ ಸಿಗುವ ಮುಂಚೆ ತಮ್ಮ ಬದುಕು ಹೇಗಿತ್ತು ಅಂತ ಹೇಳುತ್ತಾರೆ ಕೇಳಿ.

“ನನ್ನ ಜೀವನಕ್ಕೆ ಗೊತ್ತುಗುರಿ ಏನು ಇರಲಿಲ್ಲ. ಆದ್ರೆ ಇದ್ದದ್ದು ಒಂದೇ, ಮೂಗಿನ ತುದಿಯಲ್ಲಿ ಕೋಪ. ಸಿಟ್ಟು ಬಂದಾಗ ನಾನು ಹೇಗಾಡ್ತಿದ್ದೆ ಅಂದ್ರೆ ನನ್ನ ಭಯಂಕರ ಅವತಾರನಾ ನೋಡಿ ನನ್ನ ಸ್ನೇಹಿತರೇ ನಡುಗಿಹೋಗುತ್ತಿದ್ರು. ‘ಪೆಟ್ಟು ತಿಂದ ಮೇಲೆ ಬುದ್ಧಿಬಂತು’ ಅನ್ನುವ ಹಾಗೆ ಕೊನೆಗೂ ಬುದ್ಧಿ ಕಲ್ತೆ. ಒಂದು ಗಲಾಟೆಯಲ್ಲಿ ನನಗೆ ಆರು ಸಲ ಕತ್ತಿಯಿಂದ ತಿವಿಯಲಾಯಿತು. ಸಿಕ್ಕಾಪಟ್ಟೆ ರಕ್ತಹೋಗಿ ಸಾವಿನಂಚಿಗೆ ಬಂದು ಬಿಟ್ಟಿದ್ದೆ.”

ಆದರೆ ಈಗ ಸಹೋದರ ಅಡೊಲ್ಫೋ ಶಾಂತಗುಣ ತೋರಿಸುವುದರಲ್ಲಿ ಒಳ್ಳೇ ಮಾದರಿ ಇಟ್ಟಿದ್ದಾರೆ ಮತ್ತು ಶಾಂತರಾಗಿ ಇರಲು ಬೇರೆಯವರಿಗೂ ಕಲಿಸುತ್ತಿದ್ದಾರೆ. ಅವರ ಒಳ್ಳೇ ಗುಣವನ್ನು ನೋಡಿ ಎಷ್ಟೋ ಜನ ಅವರನ್ನು ತುಂಬ ಇಷ್ಟಪಡುತ್ತಾರೆ. ತಾನು ಬದಲಾಗಿರುವುದಕ್ಕೆ ಅಡೊಲ್ಫೋ ತುಂಬ ಖುಷಿಪಡುತ್ತಾರೆ. ಶಾಂತಗುಣ ಬೆಳೆಸಿಕೊಳ್ಳಲು ಸಹಾಯ ಮಾಡಿದ್ದಕ್ಕಾಗಿ ಯೆಹೋವನಿಗೆ ಸದಾ ಋಣಿ ಆಗಿದ್ದಾರೆ.

ಯೆಹೋವನಿಗೂ ಸಂತೋಷವಾಗುತ್ತದೆ. “ಮಗನೇ, ಜ್ಞಾನವನ್ನು ಪಡೆದುಕೊಂಡು ನನ್ನ ಮನಸ್ಸನ್ನು ಸಂತೋಷಪಡಿಸು; ಹಾಗಾದರೆ, ನನ್ನನ್ನು ದೂರುವವನಿಗೆ ನಾನು ಉತ್ತರಕೊಡಲಾಗುವದು.”—ಜ್ಞಾನೋ. 27:11.

ಯೆಹೋವನ ದೊಡ್ಡ ಶತ್ರು ಆಗಿರುವ ಸೈತಾನನಿಗೆ ದೇವರನ್ನು ನಿಂದಿಸುತ್ತಾ ಇರುವುದೇ ಕೆಲಸ. ಅವನು ಬೇಕುಬೇಕಂತ ಯೆಹೋವನ ಮನಸ್ಸಿಗೆ ನೋವು ಮಾಡುತ್ತಿರುವುದರಿಂದ ಯೆಹೋವನು ಸಿಟ್ಟುಗೊಂಡರೂ ತಪ್ಪಾಗಲ್ಲ. ಆದರೂ ಆತನು ಸಿಟ್ಟುಗೊಳ್ಳುವುದಿಲ್ಲ. ಆದ್ದರಿಂದ ಆತನು ‘ದೀರ್ಘಶಾಂತನು’ ಅಂತ ಬೈಬಲ್‌ ಹೇಳುತ್ತದೆ. (ವಿಮೋ. 34:6) ಯೆಹೋವನ ತರ ನಾವು ಕೋಪಮಾಡಿಕೊಳ್ಳದೆ ಶಾಂತರಾಗಿದ್ದರೆ ನಾವು ವಿವೇಕಿಗಳೆಂದು ತೋರಿಸುತ್ತೇವೆ ಮತ್ತು ಇದು ಯೆಹೋವನಿಗೆ ಸಂತೋಷ ತರುತ್ತದೆ.—ಎಫೆ. 5:1.

ಈ ಲೋಕದಲ್ಲಿ ಎಲ್ಲಾ ಕಡೆ ಕೋಪ, ದ್ವೇಷ ತುಂಬಿದೆ. ನಮ್ಮ ಸುತ್ತಮುತ್ತ ಇರುವ ಜನರು “ಸ್ವಪ್ರತಿಷ್ಠೆಯುಳ್ಳವರೂ ಅಹಂಕಾರಿಗಳೂ . . . ಮಿಥ್ಯಾಪವಾದಿಗಳೂ ಸ್ವನಿಯಂತ್ರಣವಿಲ್ಲದವರೂ ಉಗ್ರರೂ” ಆಗಿದ್ದಾರೆ. (2 ತಿಮೊ. 3:2, 3) ಹಾಗಂತ ನಾವು ಅವರಂತೆ ಆಗಬಾರದು. ಶಾಂತಗುಣವನ್ನು ಬೆಳೆಸಿಕೊಳ್ಳಬೇಕು. “ಮೇಲಣಿಂದ ಬರುವ ವಿವೇಕವು . . . ಶಾಂತಿಶೀಲವಾದದ್ದು, ನ್ಯಾಯಸಮ್ಮತವಾದದ್ದು” ಅಂತ ದೇವರ ವಾಕ್ಯ ಹೇಳುತ್ತದೆ. (ಯಾಕೋ. 3:17) ನಾವು ಶಾಂತಿಶೀಲರು, ನ್ಯಾಯಸಮ್ಮತರೂ ಆಗಿದ್ದರೆ ನಮ್ಮಲ್ಲಿ ದೈವಿಕ ವಿವೇಕ ಇದೆ ಅಂತ ಅರ್ಥ. ಇಂಥ ವಿವೇಕ ಬೇರೆಯವರು ಕಿರಿಕಿರಿ ಮಾಡಿದರೂ ಶಾಂತರಾಗಿರಲು ಸಹಾಯಮಾಡುತ್ತೆ ಮತ್ತು ವಿವೇಕದ ಮೂಲನಾಗಿರುವ ನಮ್ಮ ತಂದೆ ಯೆಹೋವನಿಗೆ ನಮ್ಮನ್ನು ಇನ್ನಷ್ಟು ಹತ್ತಿರ ತರುತ್ತೆ.

ಶಾಂತಗುಣವನ್ನು ಬೆಳೆಸಿಕೊಳ್ಳುವುದು ಹೇಗೆ?

ಯಾರಾದರೂ ನಮಗೆ ಬೇಜಾರಾಗುವ ತರ ಮಾತಾಡಿದರೆ ಅಥವಾ ನಡಕೊಂಡರೆ ಕೋಪ ಬರುವುದು ಸಹಜ. ಆದರೆ ಇಂಥ ಸನ್ನಿವೇಶದಲ್ಲಿ ನಮ್ಮ ಭಾವನೆಗಳನ್ನು ನಿಯಂತ್ರಿಸಿ ಯೆಹೋವನಿಗೆ ಸಂತೋಷ ಆಗುವ ರೀತಿಯಲ್ಲಿ ನಡಕೊಳ್ಳಲು ಯಾವುದು ಸಹಾಯಮಾಡುತ್ತೆ? ಕೆಳಗಿರುವ ತತ್ವಗಳು ಸಹಾಯಮಾಡುತ್ತದೆ.

  1. 1 ‘ಲೋಕದ ಮನೋಭಾವವನ್ನು’ ದೂರ ಇಡಿ. ‘ಶಾಂತವಾಗಿರೋರು ಕೈಲಾಗದವರು’ ಅಂತ ತುಂಬ ಜನ ಹೇಳುತ್ತಾರೆ. ‘ನಾವು ಬದುಕಬೇಕೆಂದರೆ ಬೇರೆಯವರನ್ನು ದಬಾಯಿಸಬೇಕು, ನಮ್ಮ ಕೋಪದ ರುಚಿ ಮುಟ್ಟಿಸಬೇಕು’ ಅಂತ ಹೇಳುತ್ತಾರೆ. ಆದರೆ ಇಂಥ ಯೋಚನೆ ಇದ್ದರೆ ನಮ್ಮಲ್ಲಿ ದೈವಿಕ ವಿವೇಕ ಅಲ್ಲ, “ಲೋಕದ ಮನೋಭಾವ” ಇದೆ ಅಂತ ಅರ್ಥ. (1 ಕೊರಿಂ. 2:12) ಶಾಂತಗುಣಕ್ಕೆ ತುಂಬ ಶಕ್ತಿ ಇದೆ ಅಂತ ಬೈಬಲ್‌ ಹೇಳುತ್ತದೆ. “ದೀರ್ಘಶಾಂತಿಯಿಂದ ಪ್ರಭುವನ್ನೂ ಸಮ್ಮತಿಪಡಿಸಬಹುದು; ಮೃದುವಚನವು ಎಲುಬನ್ನು ಮುರಿಯುವದು.”—ಜ್ಞಾನೋ. 25:15.

    ನಿಮ್ಮನ್ನೇ ಹೀಗೆ ಕೇಳಿಕೊಳ್ಳಿ:

    ನನ್ನ ದೃಷ್ಟಿಯಲ್ಲಿ ಶಾಂತಗುಣ ಬಲನಾ ಬಲಹೀನತೆನಾ?

    ‘ಶರೀರಭಾವದ ಕಾರ್ಯಗಳಾದ’ ಕೋಪ, ಜಗಳದಿಂದ ದೂರ ಇರಲು ನಾನು ಪ್ರಯತ್ನಿಸುತ್ತೇನಾ? —ಗಲಾ. 5:19, 20.

  2. 2 ಸಮಯ ಮಾಡಿಕೊಂಡು ಧ್ಯಾನಿಸಿ. “ಶಿಷ್ಟನ ಹೃದಯ ವಿವೇಚಿಸಿ ಉತ್ತರಕೊಡುತ್ತದೆ; ದುಷ್ಟನ ಬಾಯಿ ಕೆಟ್ಟದ್ದನ್ನು ಕಕ್ಕುತ್ತದೆ.” (ಜ್ಞಾನೋ. 15:28) ಕೋಪ ಬಂದಾಗ ಬಾಯಿಗೆ ಬಂದ ಹಾಗೆ ಮಾತಾಡಿಬಿಡುತ್ತೇವೆ. ‘ಮಾತು ಆಡಿದರೆ ಹೋಯ್ತು, ಮುತ್ತು ಒಡೆದರೆ ಹೋಯ್ತು’ ಅನ್ನುವ ಹಾಗೆ ಆಗಿಬಿಡುತ್ತೆ. ಆದರೆ ಮಾತಾಡಕ್ಕೆ ಮುಂಚೆ ಯೋಚನೆ ಮಾಡಿದರೆ ಹೇಳಬೇಕಾಗಿರುವ ವಿಷಯವನ್ನು ಶಾಂತವಾಗಿ ಹೇಳಲು ಆಗುತ್ತೆ. ಇದರಿಂದ ನಮ್ಮ ಮಾತನ್ನು ಕೇಳಿಸಿಕೊಳ್ಳುತ್ತಿರುವ ವ್ಯಕ್ತಿ ಕೂಡ ಶಾಂತವಾಗೇ ಪ್ರತಿಕ್ರಿಯಿಸುತ್ತಾರೆ.

    ನಿಮ್ಮನ್ನೇ ಹೀಗೆ ಕೇಳಿಕೊಳ್ಳಿ:

    ಮೂಗಿನ ತುದಿಯಲ್ಲೇ ಕೋಪ ಇಟ್ಟುಕೊಂಡರೆ ಏನು ಆಗುತ್ತೆ?

    ನಾನು ಶಾಂತಿ ಕಾಪಾಡಲಿಕ್ಕಾಗಿ ಅನ್ಯಾಯವನ್ನು ಸಹಿಸುತ್ತೇನಾ? —ಜ್ಞಾನೋ. 19:11.

  3. 3 ಪಟ್ಟುಹಿಡಿದು ಪ್ರಾರ್ಥಿಸಿ. ಪವಿತ್ರಾತ್ಮಕ್ಕಾಗಿ ಪ್ರಾರ್ಥಿಸಿ. ಯಾಕೆಂದರೆ ಅದಕ್ಕಿರುವ ಶಕ್ತಿ ಇಡೀ ಪ್ರಪಂಚದಲ್ಲಿ ಬೇರೆ ಯಾವುದಕ್ಕೂ ಇಲ್ಲ. (ಲೂಕ 11:13) ಶಾಂತಿ ಮತ್ತು ಸ್ವನಿಯಂತ್ರಣ ಪವಿತ್ರಾತ್ಮದ ಫಲದ ಅಂಶ ಅನ್ನುವುದನ್ನು ಮರೆಯಬೇಡಿ. “ಯೆಹೋವನಿಗೆ ಆಗಾಗ ಪ್ರಾರ್ಥಿಸಿದ್ದು ಕೋಪ ಬಂದಾಗ ಅದನ್ನು ನಿಯಂತ್ರಿಸಕ್ಕೆ ನನಗೆ ತುಂಬ ಸಹಾಯಮಾಡ್ತು” ಅಂತ ಸಹೋದರ ಅಡೊಲ್ಫೋ ಹೇಳುತ್ತಾರೆ. ಅದೇ ರೀತಿ ನಾವು ಕೂಡ ‘ಪಟ್ಟುಹಿಡಿದು ಪ್ರಾರ್ಥಿಸುತ್ತಾ’ ಇದ್ದರೆ ಯೆಹೋವನು ನಮ್ಮ ಪ್ರಾರ್ಥನೆಗೆ ಉತ್ತರ ಕೊಡುತ್ತಾನೆ.—ರೋಮ. 12:12.

    ನಿಮ್ಮನ್ನೇ ಹೀಗೆ ಕೇಳಿಕೊಳ್ಳಿ:

    ‘ನನ್ನ ಹೃದಯದಲ್ಲಿರುವ ಯೋಚನೆಯನ್ನು ನೋಡಿ ನನ್ನನ್ನು ತಿದ್ದಪ್ಪಾ’ ಎಂದು ನಾನು ಯೆಹೋವನನ್ನು ಬೇಡುತ್ತೇನಾ?

    ಆತನಿಗೆ ಖುಷಿ ಆಗುವ ತರ ನಡಕೊಳ್ಳಲು ಬೇಕಾದ ವಿವೇಕ ಮತ್ತು ಪವಿತ್ರಾತ್ಮಕ್ಕಾಗಿ ಬೇಡುತ್ತೇನಾ?—ಕೀರ್ತ. 139:23, 24; ಯಾಕೋ. 1:5.

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ