“ಆತನು . . . ನಿನ್ನ ಎಲ್ಲಾ ಯೋಜನೆಗಳನ್ನು ಸಫಲಮಾಡಲಿ”
“ಯೆಹೋವನಲ್ಲಿ ಆನಂದವಾಗಿರು; ಆಗ ಆತನು ನಿನ್ನ ಹೃದಯದ ಅಪೇಕ್ಷೆಗಳನ್ನು ಈಡೇರಿಸುವನು.”—ಕೀರ್ತ. 37:4, ಪವಿತ್ರ ಗ್ರಂಥ ಭಾಷಾಂತರ.
1. (ಎ) ಭವಿಷ್ಯದ ಬಗ್ಗೆ ಎಳೇ ಪ್ರಾಯದವರು ಏನು ತೀರ್ಮಾನ ಮಾಡಬೇಕು? (ಲೇಖನದ ಆರಂಭದ ಚಿತ್ರ ನೋಡಿ.) (ಬಿ) ವಿಪರೀತ ಚಿಂತೆ ಮಾಡದ ಹಾಗೆ ಅವರಿಗೆ ಯಾವುದು ಸಹಾಯಮಾಡುತ್ತದೆ?
ಎಳೆಯರೇ, ಒಂದು ಪ್ರಯಾಣ ಶುರುಮಾಡುವ ಮುಂಚೆ ನೀವೆಲ್ಲಿಗೆ ಹೋಗಬೇಕು ಅಂತ ಮೊದಲೇ ಯೋಜನೆ ಮಾಡುವುದು ಬುದ್ಧಿವಂತಿಕೆ ಎಂಬ ಮಾತನ್ನು ಒಪ್ಪುತ್ತೀರಾ? ಜೀವನ ಒಂದು ಪಯಣದ ಹಾಗೆಯೇ ಇದೆ. ಆದ್ದರಿಂದ ನೀವೆಲ್ಲಿಗೆ ಹೋಗಿ ತಲಪಬೇಕೆಂದಿದ್ದೀರಾ ಎಂದು ಎಳೇ ಪ್ರಾಯದಲ್ಲೇ ಯೋಜಿಸಬೇಕು. ಇಂಥ ಯೋಜನೆಗಳನ್ನು ಮಾಡುವುದು ಸುಲಭದ ಕೆಲಸವಲ್ಲ ನಿಜ. ಹೆದರ್ ಎಂಬ ಹುಡುಗಿ ಹೇಳಿದ್ದು: “ಜೀವನದಲ್ಲಿ ಏನು ಮಾಡಬೇಕೆಂಬ ತೀರ್ಮಾನ ತೆಗೆದುಕೊಳ್ಳಬೇಕಲ್ಲ ಅಂತ ಯೋಚಿಸುವಾಗಲೇ ಭಯ ಆಗುತ್ತದೆ.” ನಿಮಗೂ ಹೀಗನಿಸುತ್ತದಾ? ಯೆಹೋವನ ಈ ಮಾತನ್ನು ನೆನಪಿಗೆ ತಂದುಕೊಳ್ಳಿ: “ದಿಗ್ಭ್ರಮೆಗೊಳ್ಳದಿರು, ನಾನೇ ನಿನ್ನ ದೇವರು; ನಾನು ನಿನ್ನನ್ನು ಬಲಪಡಿಸುತ್ತೇನೆ; ಹೌದು, ನಿನಗೆ ಸಹಾಯಕೊಡುತ್ತೇನೆ.”—ಯೆಶಾ. 41:10.
2. ನಿಮಗೆ ಸಂತೋಷದ ಭವಿಷ್ಯವಿರುವ ಹಾಗೆ ನೀವು ಯೋಜನೆ ಮಾಡಬೇಕಂತ ಯೆಹೋವನಿಗೆ ಆಸೆಯಿದೆ ಎಂದು ಹೇಗೆ ಗೊತ್ತಾಗುತ್ತದೆ?
2 ನಿಮ್ಮ ಭವಿಷ್ಯದ ಬಗ್ಗೆ ವಿವೇಕಭರಿತ ಯೋಜನೆ ಮಾಡುವಂತೆ ಯೆಹೋವನು ಪ್ರೋತ್ಸಾಹಿಸುತ್ತಾನೆ. (ಪ್ರಸಂ. 12:1; ಮತ್ತಾ. 6:20) ಯಾಕೆಂದರೆ ನೀವು ಸಂತೋಷವಾಗಿರಬೇಕು ಅನ್ನೋದು ಆತನ ಆಸೆ. ಇದು ಆತನ ಸೃಷ್ಟಿಯಲ್ಲಿರುವ ಸುಂದರ ದೃಶ್ಯಗಳನ್ನು ನೋಡುವಾಗ, ಹರ್ಷತರುವ ಶಬ್ದಗಳನ್ನು ಕೇಳಿಸಿಕೊಳ್ಳುವಾಗ, ಸ್ವಾದಗಳನ್ನು ಸವಿಯುವಾಗ ಸ್ಪಷ್ಟವಾಗಿ ಗೊತ್ತಾಗುತ್ತದೆ. ಆತನಿಗೆ ನಮ್ಮ ಬಗ್ಗೆ ಇರುವ ಕಾಳಜಿ ಇನ್ನೊಂದು ವಿಧದಲ್ಲೂ ಗೊತ್ತಾಗುತ್ತದೆ. ಆತನು ಬುದ್ಧಿವಾದ ಕೊಟ್ಟು, ನಾವು ಹೇಗೆ ಜೀವಿಸಿದರೆ ಅತ್ಯುತ್ತಮವೆಂದು ಕಲಿಸುತ್ತಾನೆ. ಆದರೆ ತನ್ನ ವಿವೇಕಭರಿತ ಬುದ್ಧಿವಾದವನ್ನು ಜನರು ತಳ್ಳಿಹಾಕುವಾಗ ಆತನಿಗೆ ಸಂತೋಷವಾಗುವುದಿಲ್ಲ. ಅಂಥವರಿಗೆ ಆತನು ಹೀಗನ್ನುತ್ತಾನೆ: “ನನಗೆ ಇಷ್ಟವಲ್ಲದ್ದನ್ನು ಆರಿಸಿಕೊಂಡಿರಿ. . . . ಇಗೋ, ನನ್ನ ಸೇವಕರು ಉಲ್ಲಾಸಗೊಳ್ಳುವರು, ನೀವು ಆಶಾಭಂಗಪಡುವಿರಿ. ಇಗೋ, ನನ್ನ ಸೇವಕರು ಹೃದಯಾನಂದದಿಂದ ಹರ್ಷಧ್ವನಿಗೈಯುವರು.” (ಯೆಶಾ. 65:12-14) ಜೀವನದಲ್ಲಿ ನಾವು ವಿವೇಕಭರಿತ ಆಯ್ಕೆಗಳನ್ನು ಮಾಡುವಾಗ ಯೆಹೋವನಿಗೆ ಮಹಿಮೆ ತರುತ್ತೇವೆ.—ಜ್ಞಾನೋ. 27:11.
ನಿಮಗೆ ಸಂತೋಷ ತರುವ ಯೋಜನೆಗಳನ್ನು ಮಾಡಿ
3. ನೀವೇನು ಮಾಡಬೇಕೆಂದು ಯೆಹೋವನು ಬಯಸುತ್ತಾನೆ?
3 ನೀವು ಯಾವ ರೀತಿಯ ಯೋಜನೆಗಳನ್ನು ಮಾಡಬೇಕೆಂದು ಯೆಹೋವನು ಬಯಸುತ್ತಾನೆ? ಸಂತೋಷವಾಗಿರಬೇಕೆಂದರೆ ನೀವು ಆತನ ಬಗ್ಗೆ ತಿಳಿದುಕೊಳ್ಳಬೇಕು, ಆತನ ಸೇವೆ ಮಾಡಬೇಕು. ಎಲ್ಲ ಮಾನವರನ್ನು ಆತನು ಹೀಗೆ ಸೃಷ್ಟಿಮಾಡಿದ್ದಾನೆ. (ಕೀರ್ತ. 128:1; ಮತ್ತಾ. 5:3) ಆದರೆ ಪ್ರಾಣಿಗಳನ್ನು ಹಾಗೆ ಸೃಷ್ಟಿಮಾಡಿಲ್ಲ. ಅವು ತಿನ್ನುತ್ತವೆ, ಕುಡಿಯುತ್ತವೆ, ಮರಿಹಾಕುತ್ತವೆ. ಅವುಗಳ ಜೀವನ ಇಷ್ಟೇ. ಆದರೆ ಅವುಗಳಂತಿರದೆ, ನಿಮ್ಮ ಜೀವನ ಅರ್ಥಭರಿತವಾಗಿರಲು, ಸಂತೋಷದಿಂದ ತುಂಬಿರಲು ಏನು ಮಾಡಬೇಕೆಂದು ನೀವು ಯೋಜಿಸುವಂತೆ ಯೆಹೋವನು ಬಯಸುತ್ತಾನೆ. ನಿಮ್ಮ ಸೃಷ್ಟಿಕರ್ತನಾದ ಆತನು ‘ಪ್ರೀತಿಯ ದೇವರು,’ ‘ಸಂತೋಷದ ದೇವರು.’ ಮಾನವರನ್ನು “ತನ್ನ ಸ್ವರೂಪದಲ್ಲಿ ಉಂಟುಮಾಡಿದನು.” (2 ಕೊರಿಂ. 13:11; 1 ತಿಮೊ. 1:11; ಆದಿ. 1:27) ಹಾಗಾಗಿ ಆತನನ್ನು ಅನುಕರಿಸಿದರೆ ನಿಮಗೆ ಸಂತೋಷ ಸಿಗುವುದು. “ತೆಗೆದುಕೊಳ್ಳುವುದಕ್ಕಿಂತಲೂ ಕೊಡುವುದರಲ್ಲಿ ಹೆಚ್ಚಿನ ಸಂತೋಷವಿದೆ” ಎನ್ನುತ್ತದೆ ಬೈಬಲ್. (ಅ. ಕಾ. 20:35) ಈ ಮಾತು ನಿಜವೆಂದು ನಿಮಗೇ ಗೊತ್ತಿದೆ ತಾನೇ? ಇದು ಬದುಕಿನ ಮೂಲ ಸತ್ಯ. ಆದ್ದರಿಂದಲೇ ನೀವು ಭವಿಷ್ಯಕ್ಕಾಗಿ ಯೋಜನೆಗಳನ್ನು ಮಾಡುವಾಗ ಅದನ್ನು ತನ್ನ ಮತ್ತು ಇತರರ ಮೇಲಿನ ಪ್ರೀತಿಯಿಂದ ಮಾಡಬೇಕೆಂದು ಯೆಹೋವನು ಬಯಸುತ್ತಾನೆ.—ಮತ್ತಾಯ 22:36-39 ಓದಿ.
4, 5. ಯೇಸು ಯಾಕೆ ಸಂತೋಷವಾಗಿದ್ದನು?
4 ಎಳೆಯರೇ, ಯೇಸು ಕ್ರಿಸ್ತನು ನಿಮಗೆ ಒಳ್ಳೇ ಮಾದರಿ ಇಟ್ಟಿದ್ದಾನೆ. ಅವನು ಚಿಕ್ಕ ಹುಡುಗನಾಗಿದ್ದಾಗ ಖಂಡಿತ ಆಟ ಆಡಿದನು, ಆನಂದಿಸಿದನು. “ನಗುವ ಸಮಯ” ಮತ್ತು “ಕುಣಿದಾಡುವ ಸಮಯ” ಇದೆಯೆಂದು ಬೈಬಲೇ ಹೇಳುತ್ತದೆ. (ಪ್ರಸಂ. 3:4) ಆದರೆ ಯೆಹೋವನಿಗೆ ಆಪ್ತನೂ ಆದನು. ಇದಕ್ಕಾಗಿ ಶಾಸ್ತ್ರಗ್ರಂಥದ ಅಧ್ಯಯನ ಮಾಡಿದನು. ಆದ್ದರಿಂದ 12 ವರ್ಷ ಪ್ರಾಯದಲ್ಲಿ ಅವನು ಆಲಯದಲ್ಲಿದ್ದ ಬೋಧಕರೊಟ್ಟಿಗೆ ಮಾತಾಡುತ್ತಿದ್ದಾಗ, ಅವರು “ಅವನ ತಿಳಿವಳಿಕೆಗೂ ಉತ್ತರಗಳಿಗೂ ಆಶ್ಚರ್ಯ”ಪಟ್ಟರು.—ಲೂಕ 2:42, 46, 47.
5 ಯೇಸು ದೊಡ್ಡವನಾದಾಗ ದೇವರು ಹೇಳಿದ ಹಾಗೆ ಮಾಡಿದ್ದರಿಂದ ಅವನಿಗೆ ಸಂತೋಷ ಸಿಕ್ಕಿತ್ತು. ಉದಾಹರಣೆಗೆ, ಅವನು ‘ಬಡವರಿಗೆ ಸುವಾರ್ತೆಯನ್ನು ಪ್ರಕಟಿಸಬೇಕು’ ಮತ್ತು ‘ಕುರುಡರಿಗೆ ದೃಷ್ಟಿಯನ್ನು ಕೊಡಬೇಕು’ ಎನ್ನುವುದು ದೇವರ ಚಿತ್ತವಾಗಿತ್ತು. (ಲೂಕ 4:18) ಇದನ್ನು ಮಾಡುವುದರ ಬಗ್ಗೆ ಯೇಸುವಿನ ಭಾವನೆಯನ್ನು ಕೀರ್ತನೆ 40:8ರಲ್ಲಿ ವರ್ಣಿಸಲಾಗಿತ್ತು. ಅದನ್ನುವುದು: “ನನ್ನ ದೇವರೇ, ನಿನ್ನ ಚಿತ್ತವನ್ನು ಅನುಸರಿಸುವದೇ ನನ್ನ ಸಂತೋಷವು.” ತನ್ನ ತಂದೆಯ ಬಗ್ಗೆ ಜನರಿಗೆ ಕಲಿಸಲು ಯೇಸುವಿಗೆ ತುಂಬ ಖುಷಿಯಾಗುತ್ತಿತ್ತು. (ಲೂಕ 10:21 ಓದಿ.) ಸತ್ಯಾರಾಧನೆಯ ಬಗ್ಗೆ ಒಬ್ಬ ಸ್ತ್ರೀಯೊಟ್ಟಿಗೆ ಮಾತಾಡಿದ ಮೇಲೆ ಯೇಸು ತನ್ನ ಶಿಷ್ಯರಿಗೆ “ನನ್ನನ್ನು ಕಳುಹಿಸಿದಾತನ ಚಿತ್ತವನ್ನು ಮಾಡಿ ಆತನ ಕೆಲಸವನ್ನು ಪೂರೈಸುವುದೇ ನನ್ನ ಆಹಾರ” ಎಂದನು. (ಯೋಹಾ. 4:31-34) ದೇವರಿಗಾಗಿ ಮತ್ತು ಇತರರಿಗಾಗಿ ಪ್ರೀತಿ ತೋರಿಸಿದ್ದರಿಂದ ಯೇಸು ಸಂತೋಷವಾಗಿದ್ದನು. ನೀವೂ ಅದನ್ನೇ ಮಾಡಿದರೆ ಸಂತೋಷವಾಗಿ ಇರುವಿರಿ.
6. ಭವಿಷ್ಯದ ಕುರಿತು ನೀವು ಮಾಡಿರುವ ಯೋಜನೆಗಳ ಬಗ್ಗೆ ಬೇರೆಯವರೊಟ್ಟಿಗೆ ಮಾತಾಡುವುದು ಯಾಕೆ ಒಳ್ಳೇದು?
6 ಅನೇಕ ಕ್ರೈಸ್ತರು ಚಿಕ್ಕ ಪ್ರಾಯದಲ್ಲೇ ಪಯನೀಯರ್ ಸೇವೆ ಆರಂಭಿಸಿದರು. ಇದರಿಂದ ಅವರಿಗೆ ಸಂತೋಷ ಸಿಕ್ಕಿತು. ನಿಮ್ಮ ಯೋಜನೆಗಳ ಬಗ್ಗೆ ಇವರೊಟ್ಟಿಗೆ ಮಾತಾಡಿ. ಏಕೆಂದರೆ “ಯೋಚನೆ ಹೇಳುವವರಿಲ್ಲದೆ ಉದ್ದೇಶಗಳು ನೆರವೇರವು, ಬಹು ಮಂದಿ ಆಲೋಚನಾಪರರಿರುವಲ್ಲಿ ಈಡೇರುವವು.” (ಜ್ಞಾನೋ. 15:22) ಆ ಸಹೋದರ ಸಹೋದರಿಯರು ಪಯನೀಯರ್ ಸೇವೆ ಒಂದು ಶಿಕ್ಷಣದಂತಿದೆ, ಇದರಿಂದ ಜೀವನಪೂರ್ತಿ ಪ್ರಯೋಜನ ಪಡೆಯಲಿಕ್ಕಾಗುತ್ತದೆ ಎಂದು ನಿಮಗೆ ಹೇಳಬಹುದು. ಯೇಸು ಸ್ವರ್ಗದಲ್ಲಿದ್ದಾಗ ತಂದೆಯಿಂದ ಅನೇಕ ವಿಷಯಗಳನ್ನು ಕಲಿತನು. ನಂತರ ಭೂಮಿಗೆ ಬಂದು ಸೇವೆ ಮಾಡಿದಾಗ ಇನ್ನಷ್ಟು ವಿಷಯಗಳನ್ನು ಕಲಿತನು. ಬೇರೆಯವರಿಗೆ ಸಾರುವುದರಿಂದ ಸಿಗುವ ಸಂತೋಷ ಹೇಗಿರುತ್ತದೆಂದು ಕಲಿತನು. ಕಷ್ಟಕರ ಸನ್ನಿವೇಶಗಳಲ್ಲಿ ಸಮಗ್ರತೆ ಕಾಪಾಡಿಕೊಳ್ಳುವುದರಿಂದ ಸಿಗುವ ಆನಂದದ ಕುರಿತೂ ಕಲಿತನು. (ಯೆಶಾಯ 50:4 ಓದಿ; ಇಬ್ರಿ. 5:8; 12:2) ಪೂರ್ಣ ಸಮಯದ ಸೇವೆಯಿಂದ ಹೇಗೆ ಸಂತೋಷ ಸಿಗುತ್ತದೆ ಎಂದು ಈಗ ನೋಡೋಣ.
ಶಿಷ್ಯರನ್ನಾಗಿ ಮಾಡುವ ಕೆಲಸ ಶ್ರೇಷ್ಠವಾದ ಕೆಲಸ
7. ಅನೇಕ ಯುವ ಜನರಿಗೆ ಶಿಷ್ಯರನ್ನಾಗಿ ಮಾಡುವ ಕೆಲಸ ಅಂದರೆ ಯಾಕೆ ಇಷ್ಟ?
7 “ಶಿಷ್ಯರನ್ನಾಗಿ ಮಾಡಿರಿ” ಮತ್ತು ಜನರಿಗೆ ಕಲಿಸಿರಿ ಎಂದು ಯೇಸು ನಮಗೆ ಹೇಳಿದ್ದಾನೆ. (ಮತ್ತಾ. 28:19, 20) ಈ ಕೆಲಸವನ್ನೇ ನೀವು ಜೀವನಪೂರ್ತಿ ಮಾಡಲು ಯೋಜಿಸಿದರೆ ಸಂತೃಪ್ತಿ ಸಿಗುತ್ತದೆ. ಏಕೆಂದರೆ ಇಂಥ ಜೀವನ ದೇವರಿಗೆ ಮಹಿಮೆ ತರುತ್ತದೆ. ಯಾವುದೇ ಕೆಲಸವನ್ನು ಕಲಿತು ಚೆನ್ನಾಗಿ ಮಾಡಲು ಸಮಯ ಹಿಡಿಯುತ್ತದೆ. ಹಾಗೆಯೇ ಪೂರ್ಣ ಸಮಯದ ಸೇವೆಯಲ್ಲಿ ನಿಪುಣರಾಗಲು ಸಮಯ ಹಿಡಿಯುತ್ತದೆ. 19ರ ಪ್ರಾಯದಲ್ಲಿ ಪಯನೀಯರ್ ಸೇವೆ ಆರಂಭಿಸಿದ ತಿಮೊಥಿ ಹೇಳಿದ್ದು: “ನನಗೆ ಪೂರ್ಣ ಸಮಯ ಯೆಹೋವನ ಸೇವೆ ಮಾಡುವುದೆಂದರೆ ತುಂಬ ಇಷ್ಟ. ಏಕೆಂದರೆ ಆತನನ್ನು ಎಷ್ಟು ಪ್ರೀತಿಸುತ್ತೇನೆ ಎಂದು ಇದರ ಮೂಲಕ ತೋರಿಸುತ್ತೇನೆ. ಮೊದಮೊದಲು ನನಗೆ ಒಂದು ಬೈಬಲ್ ಅಧ್ಯಯನವೂ ಸಿಗಲಿಲ್ಲ. ಆಮೇಲೆ ಇನ್ನೊಂದು ಕ್ಷೇತ್ರಕ್ಕೆ ಸ್ಥಳಾಂತರಿಸಿದಾಗ ಒಂದೇ ತಿಂಗಳಲ್ಲಿ ಹಲವಾರು ಬೈಬಲ್ ಅಧ್ಯಯನಗಳು ಸಿಕ್ಕಿದವು. ಒಬ್ಬ ವಿದ್ಯಾರ್ಥಿ ಕೂಟಗಳಿಗೆ ಹಾಜರಾಗಲೂ ಆರಂಭಿಸಿದ. ನಂತರ ನಾನು ಅವಿವಾಹಿತ ಸಹೋದರರಿಗಾಗಿದ್ದ ಬೈಬಲ್ ಶಾಲೆಗೆ ಹಾಜರಾದೆ. ಎರಡು ತಿಂಗಳು ನಡೆಯುವ ಆ ಶಾಲೆಗೆ ಹಾಜರಾದ ಮೇಲೆ ನನಗೆ ಹೊಸ ನೇಮಕ ಸಿಕ್ಕಿತು. ಅಲ್ಲಿ ನಾಲ್ಕು ಬೈಬಲ್ ಅಧ್ಯಯನಗಳನ್ನು ಆರಂಭಿಸಿದೆ. ಜನರಿಗೆ ಸತ್ಯ ಕಲಿಸುವುದೆಂದರೆ ನನಗೆ ತುಂಬ ಇಷ್ಟ. ಯಾಕೆಂದರೆ ಪವಿತ್ರಾತ್ಮ ಜನರನ್ನು ಹೇಗೆ ಬದಲಾಯಿಸುತ್ತದೆಂದು ಕಣ್ಣಾರೆ ನೋಡಲಿಕ್ಕಾಗುತ್ತದೆ.”a—1 ಥೆಸ. 2:19.
8. ಕೆಲವು ಎಳೆಯರು ಹೆಚ್ಚು ಜನರಿಗೆ ಸಾರುವ ಉದ್ದೇಶದಿಂದ ಏನು ಮಾಡಿದ್ದಾರೆ?
8 ಕೆಲವು ಎಳೆಯರು ಬೇರೆ ಭಾಷೆ ಕಲಿತಿದ್ದಾರೆ. ಉದಾಹರಣೆಗೆ ಉತ್ತರ ಅಮೆರಿಕದ ಜೇಕಬ್ ಬರೆದದ್ದು: “ನಾನು ಏಳು ವರ್ಷದವನಿದ್ದಾಗ, ನನ್ನ ತರಗತಿಯಲ್ಲಿ ವಿಯೆಟ್ನಮೀಸ್ ಭಾಷೆ ಮಾತಾಡುವ ಅನೇಕ ಮಕ್ಕಳಿದ್ದರು. ನಾನು ಅವರಿಗೆ ಯೆಹೋವನ ಬಗ್ಗೆ ಹೇಳಲು ಬಯಸಿದೆ. ಸ್ವಲ್ಪ ಸಮಯದ ನಂತರ ಅವರ ಭಾಷೆ ಕಲಿಯಲು ಕೆಲವು ಯೋಜನೆಗಳನ್ನು ಮಾಡಿಕೊಂಡೆ. ನಾನು ಹೆಚ್ಚಾಗಿ ಈ ಭಾಷೆ ಕಲಿತದ್ದು ಇಂಗ್ಲಿಷ್ ಮತ್ತು ವಿಯೆಟ್ನಮೀಸ್ ಭಾಷೆಯ ಕಾವಲಿನಬುರುಜು ಪತ್ರಿಕೆಗಳನ್ನು ಹೋಲಿಸಿ ನೋಡುವ ಮೂಲಕ. ಅಷ್ಟೇ ಅಲ್ಲ, ಹತ್ತಿರದ ವಿಯೆಟ್ನಮೀಸ್ ಭಾಷೆಯ ಸಭೆಯಲ್ಲಿದ್ದ ಕೆಲವರನ್ನು ಸ್ನೇಹಿತರನ್ನಾಗಿ ಮಾಡಿಕೊಂಡೆ. ನನಗೆ 18 ವರ್ಷ ಆದಾಗ ಪಯನೀಯರ್ ಸೇವೆ ಆರಂಭಿಸಿದೆ. ನಂತರ ಅವಿವಾಹಿತ ಸಹೋದರರಿಗಾಗಿದ್ದ ಬೈಬಲ್ ಶಾಲೆಗೆ ಹಾಜರಾದೆ. ಇದು ನನ್ನ ಸದ್ಯದ ನೇಮಕದಲ್ಲಿ ಸಹಾಯ ಮಾಡಿದೆ. ಈಗ ನಾನು ವಿಯೆಟ್ನಮೀಸ್ ಭಾಷೆಯ ಗುಂಪಿನಲ್ಲಿ ಸೇವೆಮಾಡುತ್ತಿದ್ದೇನೆ. ಇಲ್ಲಿ ನಾನೊಬ್ಬನೇ ಹಿರಿಯನಾಗಿ ಸೇವೆ ಮಾಡುತ್ತಿದ್ದೇನೆ. ಅನೇಕ ವಿಯೆಟ್ನಮೀಸ್ ಜನರಿಗೆ ನಾನು ಅವರ ಭಾಷೆ ಕಲಿತಿರುವುದನ್ನು ನೋಡಿ ಆಶ್ಚರ್ಯವಾಗುತ್ತದೆ. ಅವರು ನನ್ನನ್ನು ಮನೆಯೊಳಗೆ ಕರೆದು ಮಾತಾಡಿಸುತ್ತಾರೆ. ಅನೇಕರು ಬೈಬಲ್ ಅಧ್ಯಯನಕ್ಕೆ ಒಪ್ಪಿಕೊಂಡಿದ್ದಾರೆ. ಕೆಲವರು ದೀಕ್ಷಾಸ್ನಾನ ತೆಗೆದುಕೊಳ್ಳುವಷ್ಟು ಪ್ರಗತಿ ಮಾಡಿದ್ದಾರೆ.”—ಅ. ಕಾರ್ಯಗಳು 2:7, 8 ಹೋಲಿಸಿ.
9. ಶಿಷ್ಯರನ್ನಾಗಿ ಮಾಡುವ ಕೆಲಸ ನಮಗೆ ಏನೆಲ್ಲ ಕಲಿಸುತ್ತದೆ?
9 ಶಿಷ್ಯರನ್ನಾಗಿ ಮಾಡುವ ಕೆಲಸ ನಮಗೆ ಕೆಲಸದ ಒಳ್ಳೇ ರೂಢಿಗಳನ್ನು, ಜನರ ಜೊತೆ ಚೆನ್ನಾಗಿ ಮಾತಾಡುವ ಕೌಶಲವನ್ನು ಕಲಿಸುತ್ತದೆ. ಆತ್ಮವಿಶ್ವಾಸವನ್ನು ಹೇಗೆ ಬೆಳೆಸಿಕೊಳ್ಳುವುದು ಮತ್ತು ಜಾಣ್ಮೆ ತೋರಿಸುವುದು ಹೇಗೆಂದು ಕಲಿಸುತ್ತದೆ. (ಜ್ಞಾನೋ. 21:5; 2 ತಿಮೊ. 2:24) ಇದಕ್ಕಿಂತಲೂ ಮುಖ್ಯವಾದ ವಿಷಯವೇನೆಂದರೆ, ನಿಮ್ಮ ನಂಬಿಕೆಗಳನ್ನು ಬೈಬಲಿನಿಂದ ರುಜುಪಡಿಸುವುದು ಹೇಗೆಂದು ಕಲಿಯುತ್ತೀರಿ. ಯೆಹೋವನ ಜೊತೆಜೊತೆಯಲ್ಲೇ ಕೆಲಸಮಾಡುವುದು ಹೇಗೆಂದೂ ಕಲಿಯುತ್ತೀರಿ.—1 ಕೊರಿಂ. 3:9.
10. ನಿಮ್ಮ ಸೇವಾಕ್ಷೇತ್ರದಲ್ಲಿ ಶಿಷ್ಯರನ್ನಾಗಿ ಮಾಡುವ ಕೆಲಸ ಕಷ್ಟಕರವಾಗಿದ್ದರೂ ಹೇಗೆ ಸಂತೋಷ ಪಡೆಯಬಲ್ಲಿರಿ?
10 ನಿಮ್ಮ ಸೇವಾಕ್ಷೇತ್ರದಲ್ಲಿ ಹೆಚ್ಚಿನವರು ಬೈಬಲ್ ಅಧ್ಯಯನ ಮಾಡಲು ಒಪ್ಪದಿರಬಹುದು. ಹೀಗಿದ್ದರೂ ಶಿಷ್ಯರನ್ನಾಗಿ ಮಾಡುವ ಕೆಲಸದಲ್ಲಿ ನೀವು ಸಂತೋಷ ಪಡೆಯಬಹುದು. ಶಿಷ್ಯರನ್ನಾಗಿ ಮಾಡಲು ಇಡೀ ಸಭೆ ಒಂದು ತಂಡದ ಹಾಗೆ ಕೆಲಸಮಾಡುತ್ತದೆ. ಸಭೆಯಲ್ಲಿನ ಒಬ್ಬ ಸಹೋದರ ಅಥವಾ ಸಹೋದರಿಗೆ ಸಿಕ್ಕಿದ ವ್ಯಕ್ತಿ ಮುಂದೆ ಶಿಷ್ಯನಾಗಬಹುದು. ಆದರೆ ಆ ವ್ಯಕ್ತಿಯನ್ನು ಹುಡುಕುವುದರಲ್ಲಿ ನಾವೆಲ್ಲರೂ ಪಾಲ್ಗೊಂಡೆವಲ್ಲಾ? ಹಾಗಾಗಿ ನಾವೆಲ್ಲರೂ ಸಂತೋಷಪಡುತ್ತೇವೆ. ಬ್ರ್ಯಾಂಡನ್ ಎಂಬವನ ಉದಾಹರಣೆ ನೋಡಿ. ಅವನು 9 ವರ್ಷಗಳ ವರೆಗೆ ಒಂದು ಪ್ರದೇಶದಲ್ಲಿ ಪಯನೀಯರನಾಗಿ ಸೇವೆಮಾಡಿದನು. ಅಲ್ಲಿ ಬೈಬಲ್ ಅಧ್ಯಯನ ಮಾಡಿದವರು ತುಂಬ ಕಡಿಮೆ. ಬ್ರ್ಯಾಂಡನ್ ಹೇಳುವುದು: “ಸುವಾರ್ತೆ ಸಾರುವುದೆಂದರೆ ನನಗೆ ಇಷ್ಟ ಯಾಕೆಂದರೆ ನಾವು ಆ ಕೆಲಸ ಮಾಡುವಂತೆ ಯೆಹೋವನು ಹೇಳಿದ್ದಾನೆ. ನನ್ನ ಶಾಲಾ ವಿದ್ಯಾಭ್ಯಾಸ ಮುಗಿದ ನಂತರ ಪಯನೀಯರನಾದೆ. ನಮ್ಮ ಸಭೆಯಲ್ಲಿರುವ ಯುವ ಸಹೋದರರನ್ನು ಪ್ರೋತ್ಸಾಹಿಸಲು, ಅವರ ಆಧ್ಯಾತ್ಮಿಕ ಪ್ರಗತಿಯನ್ನು ನೋಡಲು ತುಂಬ ಖುಷಿಯಾಗುತ್ತದೆ. ಅವಿವಾಹಿತ ಸಹೋದರರಿಗಾಗಿ ಬೈಬಲ್ ಶಾಲೆಗೆ ಹಾಜರಾದ ಬಳಿಕ ನನಗೆ ಹೊಸ ಪಯನೀಯರ್ ನೇಮಕ ಸಿಕ್ಕಿತು. ಈ ಕ್ಷೇತ್ರದಲ್ಲಿ, ಬೇರೆಯವರಿಗೆ ಸಿಕ್ಕಿರುವ ಆಸಕ್ತರು ದೀಕ್ಷಾಸ್ನಾನದ ಹಂತದ ವರೆಗೆ ಪ್ರಗತಿ ಮಾಡಿದ್ದಾರೆ. ನನಗೆ ಸಿಕ್ಕಿಲ್ಲ. ಹೀಗಿದ್ದರೂ ಶಿಷ್ಯರನ್ನಾಗಿ ಮಾಡುವ ಕೆಲಸದಲ್ಲಿ ಪೂರ್ಣವಾಗಿ ಪಾಲ್ಗೊಳ್ಳಲು ಯೋಜಿಸಿದ್ದಕ್ಕಾಗಿ ನನಗೆ ಸಂತೋಷವಾಗುತ್ತದೆ.”—ಪ್ರಸಂ. 11:6.
ನಿಮ್ಮ ಯೋಜನೆಗಳು ಯಾವ ಅವಕಾಶಗಳಿಗೆ ದಾರಿಮಾಡಿಕೊಡಬಹುದು?
11. ಅನೇಕ ಯುವ ಜನರು ಬೇರೆ ಯಾವ ವಿಧದಲ್ಲಿ ಯೆಹೋವನ ಸೇವೆಯನ್ನು ಆನಂದಿಸಿದ್ದಾರೆ?
11 ಯೆಹೋವನ ಸೇವೆಮಾಡಲು ತುಂಬ ಅವಕಾಶಗಳು ಇವೆ. ಉದಾಹರಣೆಗೆ, ಅನೇಕ ಯುವ ಜನರು ಕಟ್ಟಡ ನಿರ್ಮಾಣ ಕೆಲಸದಲ್ಲಿ ಸಹಾಯಮಾಡುತ್ತಾರೆ. ನೂರಾರು ಹೊಸ ರಾಜ್ಯ ಸಭಾಗೃಹಗಳು ಬೇಕಾಗಿವೆ. ಈ ಕಟ್ಟಡಗಳು ಯೆಹೋವನಿಗೆ ಮಹಿಮೆ ತರುವುದರಿಂದ ಅವನ್ನು ಕಟ್ಟುವುದರಲ್ಲಿ ನೀವು ಕೈಜೋಡಿಸಿದರೆ ನಿಮಗೆ ಸಂತೋಷ ಸಿಗುವುದು. ಸಹೋದರ ಸಹೋದರಿಯರ ಜೊತೆ ಸೇರಿ ಕೆಲಸ ಮಾಡುವ ಆನಂದವೂ ನಿಮ್ಮದಾಗುತ್ತದೆ. ನೀವು ಹಲವಾರು ವಿಷಯಗಳನ್ನು ಕಲಿಯಲಿಕ್ಕೂ ಆಗುತ್ತದೆ. ಅಂದರೆ ಯಾವುದೇ ಕೆಲಸವನ್ನು ಸುರಕ್ಷಿತವಾದ ರೀತಿಯಲ್ಲಿ ಮಾಡುವುದು ಹೇಗೆ ಮತ್ತು ನಿಮ್ಮ ಮೇಲ್ವಿಚಾರಣೆ ಮಾಡುತ್ತಿರುವವರೊಂದಿಗೆ ಸಹಕರಿಸುವುದು ಹೇಗೆ ಎಂಬಂಥ ವಿಷಯಗಳನ್ನು ಕಲಿಯಲಿಕ್ಕಾಗುತ್ತದೆ.
ಪೂರ್ಣ ಸಮಯದ ಸೇವೆ ಮಾಡುವವರಿಗೆ ಅನೇಕ ಆಶೀರ್ವಾದಗಳು ಸಿಗುತ್ತವೆ (ಪ್ಯಾರ 11-13 ನೋಡಿ)
12. ಪಯನೀಯರ್ ಸೇವೆ ಇನ್ನೂ ಯಾವೆಲ್ಲ ಅವಕಾಶಗಳಿಗೆ ದಾರಿಮಾಡಿಕೊಡುತ್ತದೆ?
12 ಕೆವಿನ್ ಎಂಬ ಸಹೋದರ ಹೇಳುವುದು: “ಪೂರ್ಣ ಸಮಯ ಯೆಹೋವನ ಸೇವೆ ಮಾಡಬೇಕಂತ ನನಗೆ ಚಿಕ್ಕ ವಯಸ್ಸಿನಿಂದಲೇ ಆಸೆಯಿತ್ತು. ಕೊನೆಗೂ 19 ವರ್ಷದವನಾದಾಗ ಪಯನೀಯರ್ ಸೇವೆ ಆರಂಭಿಸಿದೆ. ಕಟ್ಟಡ ನಿರ್ಮಾಪಕನಾಗಿದ್ದ ಒಬ್ಬ ಸಹೋದರನ ಹತ್ತಿರ ಅರೆಕಾಲಿಕ ಕೆಲಸ ಮಾಡಿ ನನ್ನ ಖರ್ಚುಗಳನ್ನು ನಾನೇ ನೋಡಿಕೊಳ್ಳುತ್ತಿದ್ದೆ. ಕಟ್ಟಡಗಳಿಗೆ ಛಾವಣಿ ಹಾಕುವುದು, ಕಿಟಕಿ, ಬಾಗಿಲುಗಳನ್ನು ಅಳವಡಿಸುವುದು ಹೇಗೆಂದು ಕಲಿತೆ. ನಂತರ ನಾನು ಚಂಡಮಾರುತ ಪರಿಹಾರ ತಂಡದಲ್ಲಿ ಎರಡು ವರ್ಷ ಸೇವೆಮಾಡಿದೆ. ನಮ್ಮ ಕೆಲಸ ರಾಜ್ಯ ಸಭಾಗೃಹಗಳನ್ನು ಮತ್ತು ಸಹೋದರರ ಮನೆಗಳನ್ನು ಪುನಃ ಕಟ್ಟಿಕೊಡುವುದು ಆಗಿತ್ತು. ದಕ್ಷಿಣ ಆಫ್ರಿಕದಲ್ಲಿ ಕಟ್ಟಡ ನಿರ್ಮಾಣ ಕೆಲಸದಲ್ಲಿ ಸಹಾಯದ ಅಗತ್ಯವಿದೆ ಅಂತ ಗೊತ್ತಾದಾಗ ಅಲ್ಲಿಗೆ ಹೋಗಲು ಅರ್ಜಿ ಹಾಕಿದೆ. ನನ್ನನ್ನು ಆಮಂತ್ರಿಸಲಾಯಿತು. ನಾನೀಗ ಆಫ್ರಿಕದಲ್ಲಿ, ರಾಜ್ಯ ಸಭಾಗೃಹ ನಿರ್ಮಾಣ ಕೆಲಸದಲ್ಲಿ ಸಹಾಯ ಮಾಡುತ್ತೇನೆ. ಒಂದು ರಾಜ್ಯ ಸಭಾಗೃಹದ ಕೆಲಸವನ್ನು ಕೆಲವು ವಾರಗಳ ತನಕ ಮಾಡಿ ಮುಗಿಸಿ ಮುಂದಿನ ಸ್ಥಳಕ್ಕೆ ಹೋಗುತ್ತೇವೆ. ಕಟ್ಟಡ ನಿರ್ಮಾಣ ತಂಡ ಒಂದು ಕುಟುಂಬದ ಹಾಗೆ ಇದೆ. ಒಟ್ಟಿಗೆ ಜೀವಿಸುತ್ತೇವೆ, ಒಟ್ಟಿಗೆ ಬೈಬಲ್ ಅಧ್ಯಯನ ಮಾಡುತ್ತೇವೆ, ಒಟ್ಟಿಗೆ ಕೆಲಸ ಮಾಡುತ್ತೇವೆ. ಪ್ರತಿ ವಾರ ಸ್ಥಳೀಯ ಸಹೋದರರ ಜೊತೆ ಸೇವೆಗೆ ಹೋಗಲೂ ನನಗೆ ತುಂಬ ಸಂತೋಷ. ಚಿಕ್ಕ ಹುಡುಗನಾಗಿದ್ದಾಗ ನಾನು ಮಾಡಿದ ಯೋಜನೆಗಳು ನನಗಾಗ ಗೊತ್ತೇ ಇಲ್ಲದ ವಿಧಗಳಲ್ಲಿ ಸಂತೋಷ ತರುತ್ತಿದೆ.”
13. ಬೆತೆಲಿನಲ್ಲಿ ಸೇವೆಮಾಡುವುದು ಅನೇಕ ಯುವ ಜನರಿಗೆ ಯಾಕೆ ಸಂತೋಷ ತರುತ್ತದೆ?
13 ಪಯನೀಯರ್ ಆಗಿದ್ದವರಲ್ಲಿ ಕೆಲವರು ಈಗ ಬೆತೆಲಿನಲ್ಲಿ ಸೇವೆಮಾಡುತ್ತಿದ್ದಾರೆ. ಬೆತೆಲ್ ಸೇವೆ ಸಂತೋಷ ತರುವ ಜೀವನ ರೀತಿಯಾಗಿದೆ, ಯಾಕೆಂದರೆ ಅಲ್ಲಿ ಮಾಡುವ ಕೆಲಸ ಯಾವುದೇ ಆಗಿರಲಿ ಅದನ್ನು ಯೆಹೋವನಿಗಾಗಿ ಮಾಡುತ್ತಾರೆ. ಬೆತೆಲ್ ಕುಟುಂಬವು ಪ್ರಕಾಶನಗಳನ್ನು ಮತ್ತು ಬೈಬಲ್ಗಳನ್ನು ಸಿದ್ಧಮಾಡುವುದರಲ್ಲಿ ನೆರವಾಗುತ್ತದೆ. ಇದರಿಂದ ಜನರಿಗೆ ಸತ್ಯ ಕಲಿಯಲು ಸಾಧ್ಯವಾಗುತ್ತದೆ. ಡಸ್ಟಿನ್ ಎಂಬ ಹೆಸರಿನ ಬೆತೆಲ್ ಸದಸ್ಯ ಹೇಳುವುದು: “ನಾನು 9 ವರ್ಷದವನಿದ್ದಾಗ ಪೂರ್ಣ ಸಮಯದ ಸೇವೆಯನ್ನು ನನ್ನ ಗುರಿಯಾಗಿಟ್ಟೆ. ಶಾಲಾ ವಿದ್ಯಾಭ್ಯಾಸ ಮುಗಿದ ಕೂಡಲೇ ಪಯನೀಯರ್ ಸೇವೆ ಶುರುಮಾಡಿದೆ. ಒಂದೂವರೆ ವರ್ಷದ ನಂತರ ನನ್ನನ್ನು ಬೆತೆಲಿಗೆ ಕರೆಯಲಾಯಿತು. ಅಲ್ಲಿ ನಾನು ಮುದ್ರಣ ಯಂತ್ರಗಳನ್ನು ಚಲಾಯಿಸಲು ಕಲಿತೆ, ಆಮೇಲೆ ಕಂಪ್ಯೂಟರ್ ಪ್ರೋಗ್ರ್ಯಾಮಿಂಗ್ ಕಲಿತೆ. ಬೆತೆಲಿನಲ್ಲಿ ನನಗೆ, ಶಿಷ್ಯರನ್ನಾಗಿ ಮಾಡುವ ಕೆಲಸದ ಕುರಿತು ಲೋಕದ ಎಲ್ಲ ಕಡೆಯಿಂದ ಬರುವ ವರದಿಗಳನ್ನು ನೇರವಾಗಿ ಕೇಳಿಸಿಕೊಳ್ಳಲು ತುಂಬ ಸಂತೋಷವಾಗುತ್ತದೆ. ನನಗೆ ಇಲ್ಲಿ ಕೆಲಸಮಾಡುವುದೆಂದರೆ ತುಂಬ, ತುಂಬ ಇಷ್ಟ ಯಾಕೆಂದರೆ ನಾನಿಲ್ಲಿ ಮಾಡುವ ಕೆಲಸ ಜನರನ್ನು ಯೆಹೋವನ ಹತ್ತಿರಕ್ಕೆ ಬರಲು ಸಹಾಯಮಾಡುತ್ತದೆ.”
ನಿಮ್ಮ ಭವಿಷ್ಯಕ್ಕಾಗಿ ಯಾವ ಯೋಜನೆಗಳನ್ನು ಮಾಡುವಿರಿ?
14. ಪೂರ್ಣ ಸಮಯದ ಸೇವೆಗಾಗಿ ನೀವು ಈಗಲೇ ಹೇಗೆ ತಯಾರಾಗಬಹುದು?
14 ಪೂರ್ಣ ಸಮಯದ ಸೇವೆಗಾಗಿ ನೀವು ಹೇಗೆ ತಯಾರಾಗಬಹುದು? ನಿಮ್ಮಿಂದ ಸಾಧ್ಯವಾದಷ್ಟು ಚೆನ್ನಾಗಿ ಯೆಹೋವನ ಸೇವೆ ಮಾಡಬೇಕಾದರೆ ನೀವು ಕ್ರೈಸ್ತ ಗುಣಗಳನ್ನು ಬೆಳೆಸಿಕೊಳ್ಳಬೇಕು. ದೇವರ ವಾಕ್ಯವನ್ನು ತಪ್ಪದೇ ಅಧ್ಯಯನಮಾಡಿ, ಅದರ ಬಗ್ಗೆ ಚೆನ್ನಾಗಿ ಧ್ಯಾನಿಸಿ. ಸಭಾ ಕೂಟಗಳಲ್ಲಿ ನಿಮ್ಮ ನಂಬಿಕೆಯನ್ನು ವ್ಯಕ್ತಪಡಿಸಿರಿ. ನೀವು ಶಾಲೆಗೆ ಹೋಗುತ್ತಿರುವ ವರ್ಷಗಳಲ್ಲಿ, ಇತರರೊಟ್ಟಿಗೆ ಸುವಾರ್ತೆಯ ಬಗ್ಗೆ ಮಾತಾಡುವ ನಿಮ್ಮ ಸಾಮರ್ಥ್ಯವನ್ನು ಉತ್ತಮಗೊಳಿಸಿರಿ. ಜನರ ಅಭಿಪ್ರಾಯವನ್ನು ಜಾಣ್ಮೆಯಿಂದ ಕೇಳುವ ಮತ್ತು ಅವರು ಕೊಡುವ ಉತ್ತರಗಳಿಗೆ ಕಿವಿಗೊಡುವ ಮೂಲಕ ಅವರಲ್ಲಿ ಆಸಕ್ತಿ ತೋರಿಸಲು ಕಲಿಯಿರಿ. ಅಷ್ಟುಮಾತ್ರವಲ್ಲ ಸಭೆಯಲ್ಲೂ ನೀವು ಸ್ವಲ್ಪ ಸಹಾಯಮಾಡಬಹುದು. ರಾಜ್ಯ ಸಭಾಗೃಹ ಶುಚಿಮಾಡುವ, ರಿಪೇರಿ ಮಾಡುವ ಕೆಲಸದಲ್ಲಿ ಕೈಜೋಡಿಸಬಹುದು. ಯಾರು ದೀನರಾಗಿದ್ದಾರೊ, ಕೆಲಸಮಾಡಲು ಸಿದ್ಧರಾಗಿದ್ದಾರೊ ಅಂಥವರನ್ನು ತನ್ನ ಸೇವೆಯಲ್ಲಿ ಉಪಯೋಗಿಸಲು ಯೆಹೋವನಿಗೆ ಸಂತೋಷ ಆಗುತ್ತದೆ. (ಕೀರ್ತನೆ 110:3 ಓದಿ; ಅ. ಕಾ. 6:1-3) ಅಪೊಸ್ತಲ ಪೌಲನು ತಿಮೊಥೆಯನಿಗೆ ಮಿಷನರಿಯಾಗಿ ಸೇವೆಮಾಡಲು ಕರೆದನು. ಯಾಕಂದರೆ “ಸಹೋದರರು ಅವನ ಕುರಿತಾಗಿ ಒಳ್ಳೇ ಸಾಕ್ಷಿಹೇಳುತ್ತಿದ್ದರು” ಅಂದರೆ ಒಳ್ಳೇ ವರದಿಕೊಟ್ಟಿದ್ದರು.—ಅ. ಕಾ. 16:1-5.
15. ಪಯನೀಯರ್ ಸೇವೆ ಮಾಡಲು ಸಹಾಯ ಮಾಡುವಂಥ ಒಂದು ಕೆಲಸ ಸಿಗಲು ನೀವೇನು ಮಾಡಬಹುದು?
15 ಪೂರ್ಣ ಸಮಯದ ಸೇವೆ ಮಾಡುವ ಹೆಚ್ಚಿನ ಸಹೋದರ ಸಹೋದರಿಯರಿಗೆ ಒಂದು ಕೆಲಸ ಬೇಕಾಗುತ್ತದೆ. (ಅ. ಕಾ. 18:2, 3) ಪಯನೀಯರ್ ಸೇವೆ ಮಾಡಲು ಸಹಾಯ ಮಾಡುವಂಥ ಏನಾದರೂ ಕೆಲಸವನ್ನು ನೀವು ಕಲಿಯಬಹುದು. ನಿಮ್ಮ ಯೋಜನೆಗಳ ಬಗ್ಗೆ ನಿಮ್ಮ ಸರ್ಕಿಟ್ ಮೇಲ್ವಿಚಾರಕರು ಮತ್ತು ಇತರ ಪಯನೀಯರರೊಂದಿಗೆ ಮಾತಾಡಿ ಅವರ ಸಲಹೆ ಪಡೆಯಿರಿ. ನಂತರ ‘ನಿಮ್ಮ ಕಾರ್ಯಭಾರವನ್ನು ಯೆಹೋವನಿಗೆ ವಹಿಸಿರಿ.’ ಆಗ ನಿಮ್ಮ “ಉದ್ದೇಶಗಳು ಸಫಲವಾಗುವವು.”—ಜ್ಞಾನೋ. 16:3; 20:18.
16. ಮುಂದೆ ಜೀವನದಲ್ಲಿ ಸಿಗುವ ಬೇರೆ ಜವಾಬ್ದಾರಿಗಳನ್ನು ನಿಭಾಯಿಸಲು ಪೂರ್ಣ ಸಮಯದ ಸೇವೆ ಹೇಗೆ ನಿಮ್ಮನ್ನು ಸಿದ್ಧಪಡಿಸುತ್ತದೆ?
16 ನೀವು ಸಂತೋಷಭರಿತ ಜೀವನವನ್ನು ‘ಭದ್ರವಾಗಿ ಹಿಡಿದುಕೊಳ್ಳಬೇಕೆಂದು’ ಯೆಹೋವನು ಖಂಡಿತ ಬಯಸುತ್ತಾನೆ. (1 ತಿಮೊಥೆಯ 6:18, 19 ಓದಿ.) ನೀವು ಇತರ ಪೂರ್ಣ ಸಮಯದ ಸೇವಕರ ಜೊತೆ ಸೇರಿ ಪೂರ್ಣ ಸಮಯದ ಸೇವೆಯನ್ನು ಮಾಡುವಾಗ ಪ್ರೌಢ ಕ್ರೈಸ್ತರಾಗುತ್ತೀರಿ. ಅಷ್ಟೇ ಅಲ್ಲ, ಎಳೇ ಪ್ರಾಯದಲ್ಲಿ ಪೂರ್ಣ ಸಮಯದ ಸೇವೆ ಮಾಡಿದ್ದರಿಂದ ನಂತರ ಮದುವೆ ಜೀವನವನ್ನು ಚೆನ್ನಾಗಿ ನಡೆಸಲು ಸಾಧ್ಯವಾಯಿತು ಎಂದು ಅನೇಕರು ಹೇಳಿದ್ದಾರೆ. ಮದುವೆಗೆ ಮುಂಚೆ ಪಯನೀಯರ್ ಸೇವೆ ಮಾಡಿದ ಎಷ್ಟೋ ಮಂದಿ ಮದುವೆಯಾದ ಮೇಲೂ ಜೊತೆಯಾಗಿ ಪಯನೀಯರ್ ಸೇವೆ ಮಾಡುವುದನ್ನು ಮುಂದುವರಿಸಿದ್ದಾರೆ.—ರೋಮ. 16:3, 4.
17, 18. ಯೋಜನೆಗಳನ್ನು ಮಾಡುವುದರಲ್ಲಿ ನಿಮ್ಮ ಹೃದಯ ಹೇಗೆ ಒಳಗೂಡಿದೆ?
17 ಯೋಜನೆಗಳನ್ನು ನಿಮ್ಮ ಹೃದಯದಿಂದ ಮಾಡಬೇಕು. ಯೆಹೋವನು “ನಿನ್ನ ಹೃದಯದಲ್ಲಿರುವ ಆಸೆಗಳನ್ನು ಪೂರೈಸಿ ನಿನ್ನ ಎಲ್ಲಾ ಯೋಜನೆಗಳನ್ನು ಸಫಲಮಾಡಲಿ” ಎಂದು ಕೀರ್ತನೆ 20:4 (ನೂತನ ಲೋಕ ಭಾಷಾಂತರ) ಹೇಳುತ್ತದೆ. ನಿಮ್ಮ ಭವಿಷ್ಯದ ಬಗ್ಗೆ ಯೋಜನೆ ಮಾಡುವಾಗ, ನಿಮ್ಮ ಜೀವನದಲ್ಲಿ ನಿಜಕ್ಕೂ ಏನು ಮಾಡಲಿದ್ದೀರಿ ಎಂದು ಯೋಚಿಸಿ. ಯೆಹೋವನು ನಮ್ಮ ಕಾಲದಲ್ಲಿ ಏನು ಮಾಡುತ್ತಿದ್ದಾನೆ, ನಾವು ಆತನ ಕೆಲಸದಲ್ಲಿ ಹೇಗೆ ಪಾಲು ತೆಗೆದುಕೊಳ್ಳಬಹುದು ಎಂದು ಯೋಚಿಸಿ. ನಂತರ ಆತನಿಗೆ ಸಂತೋಷವಾಗುವ ಯೋಜನೆಗಳನ್ನು ಮಾಡಿರಿ.
18 ನಿಮ್ಮ ಜೀವನವನ್ನು ಯೆಹೋವನ ಸೇವೆಯಲ್ಲಿ ಪೂರ್ತಿಯಾಗಿ ಉಪಯೋಗಿಸಿ ಆತನಿಗೆ ಗೌರವ ಸಲ್ಲಿಸುವಾಗ ನೀವು ತುಂಬ ಸಂತೋಷವಾಗಿ ಇರುವಿರಿ. ‘ಯೆಹೋವನಲ್ಲಿ ಆನಂದವಾಗಿರಿ. ಆಗ ಆತನು ನಿಮ್ಮ ಹೃದಯದ ಅಪೇಕ್ಷೆಗಳನ್ನು ಈಡೇರಿಸುವನು.’—ಕೀರ್ತ. 37:4, ಪವಿತ್ರ ಗ್ರಂಥ ಭಾಷಾಂತರ.
a ಈ ಶಾಲೆಯ ಬದಲಿಗೆ ಈಗ ‘ರಾಜ್ಯ ಪ್ರಚಾರಕರ ಶಾಲೆ’ಯನ್ನು ನಡೆಸಲಾಗುತ್ತದೆ.