ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • wp19 ನಂ. 1 ಪು. 4-5
  • ದೇವರ ಹೆಸರೇನು?

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ದೇವರ ಹೆಸರೇನು?
  • ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಸಾರ್ವಜನಿಕ)—2019
  • ಉಪಶೀರ್ಷಿಕೆಗಳು
  • ಅನುರೂಪ ಮಾಹಿತಿ
  • ದೇವರ ಹೆಸರು ಯಾಕಷ್ಟು ಪ್ರಾಮುಖ್ಯ?
  • ಈ ಹೆಸರಿನಿಂದ ನಮಗೇನು ಗೊತ್ತಾಗುತ್ತದೆ?
  • ದೇವರ ಹೆಸರು
    ಎಚ್ಚರ!—2017
  • ಯೆಹೋವನ ಮಹಾನ್‌ ನಾಮವನ್ನು ಘನಪಡಿಸಿ
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2013
  • ದೇವರ ಹೆಸರು—ಅದರ ಉಪಯೋಗ ಮತ್ತು ಅದರ ಅರ್ಥ
    ಬೈಬಲ್‌ ನಿಜವಾಗಿಯೂ ಏನನ್ನು ಬೋಧಿಸುತ್ತದೆ?
  • ದೇವರ ಹೆಸರು ನಿಮಗೆ ಗೊತ್ತಾ?
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2015
ಇನ್ನಷ್ಟು
ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಸಾರ್ವಜನಿಕ)—2019
wp19 ನಂ. 1 ಪು. 4-5

ದೇವರ ಹೆಸರೇನು?

ನಾವು ಸಾಮಾನ್ಯವಾಗಿ ಒಬ್ಬರ ಪರಿಚಯ ಮಾಡಿಕೊಳ್ಳುವಾಗ ಮೊದಲು ಕೇಳುವ ಪ್ರಶ್ನೆ, “ನಿಮ್ಮ ಹೆಸರೇನು?” ನೀವು ಇದೇ ಪ್ರಶ್ನೆಯನ್ನು ದೇವರಿಗೆ ಕೇಳಿದರೆ, ಆತನು ಏನು ಹೇಳಬಹುದು?

“ನಾನೇ ಯೆಹೋವನು; ಇದೇ ನನ್ನ ನಾಮ.”—ಯೆಶಾಯ 42:8.

ಈ ಹೆಸರನ್ನು ನೀವು ಇದೇ ಮೊದಲ ಸಲ ಕೇಳುತ್ತಿದ್ದೀರಾ? ತುಂಬ ಬೈಬಲ್‌ ತರ್ಜುಮೆಗಾರರು ದೇವರ ಹೆಸರನ್ನು ಕಡಿಮೆ ಉಪಯೋಗಿಸಿದ್ದರಿಂದ ಅಥವಾ ಬೈಬಲಿನಲ್ಲಿ ಹಾಕದೇ ಇದ್ದದರಿಂದ ಇದೇನೋ ಹೊಸ ಹೆಸರು ಅಂತ ನಿಮಗೆ ಅನಿಸಬಹುದು. ಅವರು ದೇವರ ಹೆಸರಿಗೆ ಬದಲು “ಕರ್ತನು” ಎಂಬ ಪದವನ್ನು ಹಾಕಿದ್ದಾರೆ. ಆದರೆ, ಬೈಬಲಿನ ಮೂಲ ಭಾಷೆಯ ಹಸ್ತಪ್ರತಿಯಲ್ಲಿ ನಾವು ಈ ಹೆಸರನ್ನು ಸುಮಾರು 7,000 ಸಲ ನೋಡಬಹುದು. ಈ ಹೆಸರಲ್ಲಿ ನಾಲ್ಕು ಹೀಬ್ರು ವ್ಯಂಜನ ಅಕ್ಷರಗಳಿವೆ. ಈ ನಾಲ್ಕು ಅಕ್ಷರಗಳನ್ನು ಇಂಗ್ಲಿಷ್‌ನಲ್ಲಿ YHWH ಅಥವಾ JHVH ಎಂದು ಹೇಳಬಹುದು. ತುಂಬ ವರ್ಷಗಳಿಂದ ಇದನ್ನು ಕನ್ನಡದಲ್ಲಿ “ಯೆಹೋವ” ಎಂದು ಭಾಷಾಂತರಿಸಲಾಗಿದೆ.

ಮೃತಸಮುದ್ರದಲ್ಲಿ ಸಿಕ್ಕಿದ ಸುರುಳಿಯಲ್ಲಿ ಹೀಬ್ರುವಿನಲ್ಲಿ ದೇವರ ಹೆಸರು

ಮೃತಸಮುದ್ರದಲ್ಲಿ ಸಿಕ್ಕಿದ ಕೀರ್ತನೆಗಳ ಸುರುಳಿ ಕ್ರಿ.ಶ. 1​ನೇ ಶತಮಾನ, ಹೀಬ್ರು

ಟಿಂಡೆಲ್‌ರವರ ಬೈಬಲ್‌ ಭಾಷಾಂತರದಲ್ಲಿ ಇಂಗ್ಲಿಷ್‌ನಲ್ಲಿ ದೇವರ ಹೆಸರು

ಟಿಂಡೆಲ್‌ರವರ ಭಾಷಾಂತರ 1530, ಇಂಗ್ಲಿಷ್‌

ಸ್ಪ್ಯಾನಿಷ್‌ ಭಾಷೆಯ ರೇನಾ-ವಾಲೇರಾ ಬೈಬಲ್‌ ಆವೃತ್ತಿಯಲ್ಲಿ ದೇವರ ಹೆಸರು

ರೇನಾ-ವಾಲೇರಾ ಆವೃತ್ತಿ 1602, ಸ್ಪ್ಯಾನಿಷ್‌

ಚೈನೀಸ್‌ ಯೂನಿಯನ್‌ ವರ್ಷನ್‌ ಬೈಬಲ್‌ ಆವೃತ್ತಿಯಲ್ಲಿ ದೇವರ ಹೆಸರು

ಯೂನಿಯನ್‌ ವರ್ಷನ್‌ 1919, ಚೈನೀಸ್‌

ದೇವರ ಹೆಸರನ್ನು ಹೀಬ್ರು ಪ್ರತಿಗಳಲ್ಲಿ ಮತ್ತು ಇನ್ನೂ ಹಲವಾರು ಭಾಷಾಂತರಗಳಲ್ಲಿ ನಾವು ನೋಡಬಹುದು

ದೇವರ ಹೆಸರು ಯಾಕಷ್ಟು ಪ್ರಾಮುಖ್ಯ?

ಈ ಹೆಸರು ಸ್ವತಃ ದೇವರಿಗೆ ತುಂಬ ಮುಖ್ಯ. ದೇವರಿಗೆ ಈ ಹೆಸರನ್ನು ಯಾರೂ ಇಟ್ಟಿಲ್ಲ, ಅದನ್ನು ದೇವರೇ ಆರಿಸಿಕೊಂಡದ್ದು. ಯೆಹೋವ ದೇವರು ಪ್ರಕಟಿಸಿದ್ದು: “ಇದು ಸದಾಕಾಲಕ್ಕೂ ನನ್ನ ಹೆಸರು; ಇದು ತಲತಲಾಂತರಕ್ಕೂ ನನ್ನನ್ನು ಸ್ಮರಿಸಬೇಕಾದ ನಾಮ.” (ವಿಮೋಚನಕಾಂಡ 3:15) ಬೈಬಲ್‌ನಲ್ಲಿ ದೇವರ ಹೆಸರನ್ನು ಸರ್ವಶಕ್ತ, ತಂದೆ, ಕರ್ತ, ದೇವರು ಎಂಬ ಬೇರೆ ಯಾವುದೇ ಬಿರುದುಗಳಿಗಿಂತ ಹೆಚ್ಚು ಸಲ ಬರೆಯಲಾಗಿದೆ. ಅದು ಅಬ್ರಹಾಮ, ಮೋಶೆ, ದಾವೀದ, ಯೇಸು ಮುಂತಾದ ಯಾವುದೇ ವ್ಯಕ್ತಿಗಳ ಹೆಸರುಗಳಿಗಿಂತಲೂ ಹೆಚ್ಚು ಸಲ ಬೈಬಲಿನಲ್ಲಿದೆ. ಅಷ್ಟೇ ಅಲ್ಲ, ತನ್ನ ಹೆಸರು ಎಲ್ಲರಿಗೂ ತಿಳಿಯಬೇಕು ಎನ್ನುವುದು ದೇವರ ಇಷ್ಟ. “ಯೆಹೋವನಾಮದಿಂದ ಪ್ರಸಿದ್ಧನಾದ ನೀನೊಬ್ಬನೇ ಭೂಲೋಕದಲ್ಲೆಲ್ಲಾ ಸರ್ವೋನ್ನತನೆಂದು ಗ್ರಹಿಸುವರು” ಎಂದು ಬೈಬಲಿನಲ್ಲಿದೆ.—ಕೀರ್ತನೆ 83:18.

ಯೇಸುವಿಗೂ ಆ ಹೆಸರು ತುಂಬ ಮುಖ್ಯ. “ಕರ್ತನ ಪ್ರಾರ್ಥನೆ”ಯಲ್ಲಿ ಯೇಸು “ನಿನ್ನ ನಾಮವು ಪವಿತ್ರೀಕರಿಸಲ್ಪಡಲಿ” ಎಂದು ದೇವರಿಗೆ ಪ್ರಾರ್ಥಿಸುವಂತೆ ತನ್ನ ಹಿಂಬಾಲಕರಿಗೆ ಕಲಿಸಿದನು. (ಮತ್ತಾಯ 6:9) ಸ್ವತಃ ಯೇಸುವೇ ದೇವರಿಗೆ ಹೀಗೆ ಪ್ರಾರ್ಥಿಸಿದನು: “ತಂದೆಯೇ, ನಿನ್ನ ಹೆಸರನ್ನು ಮಹಿಮೆಪಡಿಸಿಕೋ.” (ಯೋಹಾನ 12:28) ಯೇಸು ತನ್ನ ಜೀವನದಲ್ಲಿ ದೇವರ ಹೆಸರನ್ನು ಮಹಿಮೆಪಡಿಸುವುದಕ್ಕೆ ಪ್ರಾಮುಖ್ಯತೆ ನೀಡಿದ್ದನು. ಆದುದರಿಂದಲೇ ಆತನು ಪ್ರಾರ್ಥನೆಯಲ್ಲಿ ಹೀಗೆ ಹೇಳಲಿಕ್ಕಾಯಿತು: “ನಾನು ಇವರಿಗೆ ನಿನ್ನ ಹೆಸರನ್ನು ತಿಳಿಯಪಡಿಸಿದ್ದೇನೆ ಮತ್ತು ಇನ್ನೂ ತಿಳಿಯಪಡಿಸುವೆನು.”—ಯೋಹಾನ 17:26.

ದೇವರನ್ನು ತಿಳಿದಿರುವವರಿಗೆ ಈ ಹೆಸರು ತುಂಬ ಮುಖ್ಯ. ಹಿಂದಿನ ಕಾಲದಲ್ಲಿ ಜೀವಿಸಿದ್ದ ದೇವಜನರು ಭದ್ರತೆ ಮತ್ತು ರಕ್ಷಣೆ ಪಡೆಯಲು ದೇವರ ಹೆಸರು ಮುಖ್ಯ ಎಂದು ತಿಳಿದಿದ್ದರು. “ಯೆಹೋವನ ನಾಮವು ಬಲವಾದ ಬುರುಜು; ಶಿಷ್ಟನು ಅದರೊಳಕ್ಕೆ ಓಡಿಹೋಗಿ ಭದ್ರವಾಗಿರುವನು.” (ಜ್ಞಾನೋಕ್ತಿ 18:10) “ಯೆಹೋವನ ನಾಮವನ್ನು ಹೇಳಿಕೊಳ್ಳುವವರೆಲ್ಲರಿಗೆ ರಕ್ಷಣೆಯಾಗುವದು.” (ಯೋವೇಲ 2:32) ದೇವರ ಆರಾಧಕರು ಈ ಹೆಸರಿನಿಂದಲೇ ಗುರುತಿಸಲ್ಪಡುವರೆಂದು ಬೈಬಲ್‌ ತಿಳಿಸುತ್ತದೆ. “ಅನ್ಯಜನಾಂಗಗಳು ತಮ್ಮ ತಮ್ಮ ದೇವರುಗಳ ಹೆಸರಿನಲ್ಲಿ ನಡೆಯುತ್ತವೆ; ನಾವಾದರೋ ನಮ್ಮ ದೇವರಾದ ಯೆಹೋವನ ಹೆಸರಿನಲ್ಲಿ ಯುಗಯುಗಾಂತರಗಳಲ್ಲಿ ನಡೆಯುವೆವು.”—ಮೀಕ 4:5; ಅಪೊಸ್ತಲರ ಕಾರ್ಯಗಳು 15:14.

ಈ ಹೆಸರಿನಿಂದ ನಮಗೇನು ಗೊತ್ತಾಗುತ್ತದೆ?

ಈ ಹೆಸರು ದೇವರು ಸರಿಸಾಟಿಯಿಲ್ಲದವನು ಎಂದು ತೋರಿಸುತ್ತದೆ. ಯೆಹೋವ ಎಂಬ ಹೆಸರಿನ ಅರ್ಥ “ಆಗುವಂತೆ ಮಾಡುವವನು” ಎಂದು ಅನೇಕ ವಿದ್ವಾಂಸರು ಹೇಳಿದ್ದಾರೆ. ತನ್ನ ಹೆಸರಿನ ಅರ್ಥವೇನು ಎಂದು ಯೆಹೋವ ದೇವರೇ ತಿಳಿಸಿಕೊಟ್ಟಿದ್ದಾನೆ. ಮೋಶೆಯ ಹತ್ತಿರ ಮಾತಾಡುವಾಗ “ಇರುವಾತನೇ ಆಗಿದ್ದೇನೆ” ಎಂದು ಆತನು ಹೇಳಿದನು. (ವಿಮೋಚನಕಾಂಡ 3:14) ಬೈಬಲಿನ ಮೂಲ ಪ್ರತಿಗಳಲ್ಲಿ ಈ ವಚನಕ್ಕೆ “ಏನಾಗಬೇಕೆಂದು ನಾನು ಆಯ್ಕೆಮಾಡುತ್ತೇನೋ ಹಾಗೇ ಆಗುವೆನು” ಎಂಬರ್ಥವಿದೆ. ದೇವರ ಹೆಸರಿನ ಅರ್ಥದಲ್ಲಿ, ಆತನು ಎಲ್ಲವುಗಳ ಸೃಷ್ಟಿಕರ್ತ ಎಂಬುದಕ್ಕಿಂತ ಹೆಚ್ಚು ಒಳಗೂಡಿದೆ ಎಂದು ಇದರಿಂದ ನಮಗೆ ತಿಳಿಯುತ್ತದೆ. ತನ್ನ ಉದ್ದೇಶಗಳನ್ನು ಪೂರೈಸಲು ತಾನು ಏನಾಗಬೇಕೊ ಅದಾಗುವ ಮತ್ತು ತನ್ನ ಸೃಷ್ಟಿಗಳು ಏನಾಗಬೇಕೋ ಅದಾಗುವಂತೆ ಮಾರ್ಪಡಿಸುವ ಸಾಮರ್ಥ್ಯ ಆತನಿಗಿದೆ ಎಂದು ದೇವರ ಹೆಸರು ಸೂಚಿಸುತ್ತದೆ. ಆತನ ಬಿರುದುಗಳು ದೇವರಿಗಿರುವ ಸ್ಥಾನ, ಅಧಿಕಾರ ಮತ್ತು ಶಕ್ತಿಯನ್ನು ವಿವರಿಸಬಹುದು. ಆದರೆ ಯೆಹೋವ ಎಂಬ ಹೆಸರು ಮಾತ್ರ ಆತನ ವ್ಯಕ್ತಿತ್ವವನ್ನು ಮತ್ತು ಆತನಿಗೆ ಏನೆಲ್ಲಾ ಆಗಲು ಸಾಧ್ಯವೋ ಅದೆಲ್ಲವನ್ನೂ ವಿವರಿಸುತ್ತದೆ.

ಈ ಹೆಸರು ನಮ್ಮ ಮೇಲೆ ದೇವರಿಗೆ ಪ್ರೀತಿ ಇದೆ ಎಂದು ತೋರಿಸುತ್ತದೆ. ಯೆಹೋವನಿಗೆ ನಮ್ಮ ಮೇಲಿರುವ ಪ್ರೀತಿಯನ್ನು ಆತನ ಹೆಸರಿನ ಅರ್ಥದಿಂದ ನಾವು ಕಲಿಯುತ್ತೇವೆ. ದೇವರು ತನ್ನ ಹೆಸರನ್ನು ನಮಗೆ ಹೇಳಿರುವುದೇ ನಾವು ಆತನ ಬಗ್ಗೆ ತಿಳಿಯಬೇಕೆನ್ನುವುದು ಆತನ ಆಸೆ ಎಂದು ತೋರಿಸಿಕೊಡುತ್ತದೆ. ಅಷ್ಟೇ ಅಲ್ಲ, ದೇವರ ಹೆಸರು ಏನು ಅಂತ ಕೇಳಬೇಕೆಂಬ ಯೋಚನೆ ನಮ್ಮಲ್ಲಿ ಹುಟ್ಟುವ ಮುಂಚೆಯೇ ದೇವರು ನಮಗೆ ಅದನ್ನು ಹೇಳಿದ್ದಾನೆ. ನಾವು ದೇವರನ್ನು ಸರಿಯಾಗಿ ಗೊತ್ತಿಲ್ಲದ ಕಾಲ್ಪನಿಕ ವ್ಯಕ್ತಿಯಂತಲ್ಲ, ನೈಜ ವ್ಯಕ್ತಿಯಾಗಿ, ಆಪ್ತ ಗೆಳಯನಾಗಿ ನೋಡಬೇಕು ಅಂತ ದೇವರ ಆಸೆ.—ಕೀರ್ತನೆ 73:28.

ಈ ಹೆಸರನ್ನು ಉಪಯೋಗಿಸುವುದು ದೇವರ ಮೇಲೆ ನಮಗೆ ಪ್ರೀತಿ ಇದೆಯೆಂದು ತೋರಿಸುತ್ತದೆ. ನೆನೆಸಿ, ನೀವು ಒಬ್ಬ ವ್ಯಕ್ತಿಯನ್ನು ಸ್ನೇಹಿತನಾಗಿ ಮಾಡ್ಕೋಬೇಕು ಅಂತ ಇದ್ದೀರ. ಅವನಿಗೆ ನೀವು, ನಿಮ್ಮನ್ನು ಹೆಸರಿಟ್ಟು ಕರೆಯಬೇಕು ಅಂತ ಹೇಳ್ತೀರ. ಆದರೆ ಅವನು ನಿಮ್ಮನ್ನು ಹಾಗೆ ಕರೆಯುವುದೇ ಇಲ್ಲ. ಆಗ ನಿಮಗೇನು ಅನಿಸುತ್ತದೆ? ಅವನಿಗೆ ನಿಜವಾಗಲೂ ನಿಮ್ಮ ಸ್ನೇಹಿತನಾಗಲು ಇಷ್ಟ ಇದೆಯಾ ಅಂತ ಅನಿಸಬಹುದು. ಅದೇ ರೀತಿ ದೇವರು ನಮಗೆ ತನ್ನ ಹೆಸರನ್ನು ತಿಳಿಸಿದ್ದಾನೆ ಮತ್ತು ಆ ಹೆಸರನ್ನು ಉಪಯೋಗಿಸಿ ಅಂತ ಪ್ರೋತ್ಸಾಹಿಸಿದ್ದಾನೆ. ನಾವದನ್ನು ಮಾಡುವಾಗ ನಮಗೆ ದೇವರ ಸ್ನೇಹಿತರಾಗಲು ಆಸೆಯಿದೆ ಅಂತ ತೋರಿಸುತ್ತೇವೆ. ದೇವರು ಸಹ ‘ತನ್ನ ನಾಮಸ್ಮರಣೆಮಾಡುವವರನ್ನು’ ಅಂದರೆ ತನ್ನ ಹೆಸರನ್ನು ಅಮೂಲ್ಯವೆಂದು ನೋಡುವವರನ್ನು ಗಮನಿಸುತ್ತಾನೆ!!—ಮಲಾಕಿಯ 3:16.

ದೇವರ ಹೆಸರು ತಿಳಿಯುವುದು ದೇವರ ಬಗ್ಗೆ ಕಲಿಯುವ ಮೊದಲ ಹೆಜ್ಜೆಯಾಗಿದೆ. ಆದರೆ ನಾವು ಅಷ್ಟಕ್ಕೇ ನಿಲ್ಲಿಸಿಬಿಡಬಾರದು. ಆತನ ವಕ್ತಿತ್ವ ಅಂದರೆ ಆತನು ಎಂಥವನು ಅಂತ ಕಲಿಯಬೇಕು.

ದೇವರ ಹೆಸರೇನು? ದೇವರ ಹೆಸರು ಯೆಹೋವ. ಉದ್ದೇಶಿಸಿದ್ದನ್ನೆಲ್ಲಾ ನೆರವೇರಿಸುವ ದೇವರು ಆತನೊಬ್ಬನೇ ಎನ್ನುವುದು ಆ ಹೆಸರಿನ ಅರ್ಥ.

ದೇವರನ್ನು ಯಾರು ಸೃಷ್ಟಿಮಾಡಿದರು?

ತುಂಬ ಜನ ಈ ಪ್ರಶ್ನೆ ಕೇಳುತ್ತಾರೆ. ನಿಮಗೂ ಈ ಪ್ರಶ್ನೆ ಬಂದಿರಬಹುದು. ಈ ವಿಶ್ವ ಮತ್ತು ಅದರಲ್ಲಿರುವ ಎಲ್ಲವನ್ನೂ ಯಾರಾದರೂ ಸೃಷ್ಟಿಮಾಡಿದ್ದಾದರೆ, ದೇವರನ್ನು ಸೃಷ್ಟಿಮಾಡಿದವರು ಯಾರು?

ವಿಜ್ಞಾನಿಗಳು ವಿಶ್ವಕ್ಕೆ ಒಂದು ಆದಿ ಅಥವಾ ಆರಂಭವಿತ್ತು ಅಂತ ಹೇಳುತ್ತಾರೆ. ಈ ಮೂಲಭೂತ ಸತ್ಯವನ್ನು ಬೈಬಲಿನ ಮೊದಲನೆಯ ವಚನದಲ್ಲೇ ನಾವು ನೋಡಬಹುದು: “ಆದಿಯಲ್ಲಿ ದೇವರು ಆಕಾಶವನ್ನೂ ಭೂಮಿಯನ್ನೂ ಉಂಟುಮಾಡಿದನು.”—ಆದಿಕಾಂಡ 1:1.

ವಿಶ್ವವು ತನ್ನಿಂದ ತಾನೇ ಅಸ್ತಿತ್ವಕ್ಕೆ ಬರಲು ಸಾಧ್ಯವಿಲ್ಲ. ಏನೂ ಇಲ್ಲದೇ ವಿಶ್ವ ಉಂಟಾಗಲು ಸಾಧ್ಯವಿಲ್ಲ. ಕಾರಣ ಯಾವ ವಸ್ತುವೂ ಶೂನ್ಯದಿಂದ ಅಥವಾ ಏನೂ ಇಲ್ಲದ ಸ್ಥಿತಿಯಿಂದ ಉತ್ಪತ್ತಿಯಾಗುವುದಿಲ್ಲ. ವಿಶ್ವ ಉಂಟಾಗುವುದಕ್ಕೆ ಮುಂಚೆ ಏನೂ ಇರಲಿಲ್ಲ ಎಂದಾದರೆ, ವಿಶ್ವವೇ ಇರುತ್ತಿರಲಿಲ್ಲ. ಆದ್ದರಿಂದ ಈ ವಿಶ್ವ ಹುಟ್ಟಬೇಕೆಂದರೆ ಅದರ ಭಾಗವಾಗಿಲ್ಲದ ಮೂಲವೊಂದು ಇದ್ದಿರಲೇಬೇಕು. ಆ ಮೂಲವು ಅನಾದಿ ಕಾಲದಿಂದ ಇದ್ದಿರಬೇಕು. ಈ ವಿಷಯ ನಮಗೆ ಅರ್ಥಮಾಡಿಕೊಳ್ಳಲು ಕಷ್ಟವಾಗಬಹುದು. ಆದರೆ ಅದೇ ನಿಜ. ಅನಂತವಾದ ಶಕ್ತಿಯಿರುವ ಬುದ್ಧಿವಂತನೂ ಆತ್ಮ ಸ್ವರೂಪಿಯೂ ಆಗಿರುವ ಯೆಹೋವ ದೇವರೇ ಆ ಮೂಲ.—ಯೋಹಾನ 4:24.

ಬೈಬಲ್‌ ದೇವರ ಬಗ್ಗೆ ಹೀಗೆ ಹೇಳುತ್ತದೆ: “ಬೆಟ್ಟಗಳು ಉಂಟಾಗುವದಕ್ಕಿಂತ, ಭೂಮಿಯೂ ಅದರ ದೇಶಗಳೂ ನಿರ್ಮಾಣವಾಗುವದಕ್ಕಿಂತ ಮುಂಚಿನಿಂದ ಯುಗಯುಗಾಂತರಗಳಲ್ಲಿಯೂ ನೀನೇ ದೇವರು.” (ಕೀರ್ತನೆ 90:2) ದೇವರು ಯಾವಾಗಲೂ ಅಸ್ತಿತ್ವದಲ್ಲಿ ಇದ್ದನು ಮತ್ತು “ಆದಿಯಲ್ಲಿ” ಆತನು ವಿಶ್ವವನ್ನು ಸೃಷ್ಟಿಸಿದನು.—ಪ್ರಕಟನೆ 4:11.

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ