ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • w19 ಆಗಸ್ಟ್‌ ಪು. 14-19
  • ‘ನಿನಗೆ ಕಿವಿಗೊಡುವವರು’ ಸದಾಕಾಲ ಬದುಕುವರು

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ‘ನಿನಗೆ ಕಿವಿಗೊಡುವವರು’ ಸದಾಕಾಲ ಬದುಕುವರು
  • ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಅಧ್ಯಯನ)—2019
  • ಉಪಶೀರ್ಷಿಕೆಗಳು
  • ಅನುರೂಪ ಮಾಹಿತಿ
  • ನಾವು ಯಾಕೆ ನಮ್ಮ ಕುಟುಂಬದವರಿಗೆ ಸಾಕ್ಷಿ ಕೊಡಬೇಕು?
  • ನಾವು ಹೇಗೆ ಸಹಾಯ ಮಾಡಬಹುದು?
  • ಸಭೆಯಲ್ಲಿರುವ ಎಲ್ಲರೂ ಹೇಗೆ ಸಹಾಯ ಮಾಡಬಹುದು?
  • ಸಂಬಂಧಿಕರಿಗೆ ಸಾಕ್ಷಿ ನೀಡುವುದು—ಹೇಗೆ?
    2004 ನಮ್ಮ ರಾಜ್ಯದ ಸೇವೆ
  • ಅವಿಶ್ವಾಸಿ ಕುಟುಂಬ ಸದಸ್ಯರ ಹೃದಯವನ್ನು ಸ್ಪರ್ಶಿಸಿರಿ
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2014
  • ಸತ್ಯವು ‘ಶಾಂತಿಯನ್ನಲ್ಲ ಖಡ್ಗವನ್ನು ಹಾಕುತ್ತದೆ’
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಅಧ್ಯಯನ)—2017
  • ನಿಮ್ಮ ಸಂಬಂಧಿಕರ ಕುರಿತಾಗಿ ಏನು?
    1997 ನಮ್ಮ ರಾಜ್ಯದ ಸೇವೆ
ಇನ್ನಷ್ಟು
ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಅಧ್ಯಯನ)—2019
w19 ಆಗಸ್ಟ್‌ ಪು. 14-19

ಅಧ್ಯಯನ ಲೇಖನ 33

‘ನಿನಗೆ ಕಿವಿಗೊಡುವವರು’ ಸದಾಕಾಲ ಬದುಕುವರು

“ನಿನ್ನ ವಿಷಯದಲ್ಲಿಯೂ ನಿನ್ನ ಬೋಧನೆಯ ವಿಷಯದಲ್ಲಿಯೂ ಸದಾ ಗಮನಕೊಡುವವನಾಗಿರು. ಈ ವಿಷಯಗಳಲ್ಲಿ ನಿರತನಾಗಿರು. ಹೀಗೆ ಮಾಡುವ ಮೂಲಕ ನೀನು ನಿನ್ನನ್ನೂ ನಿನಗೆ ಕಿವಿಗೊಡುವವರನ್ನೂ ರಕ್ಷಿಸುವಿ.”—1 ತಿಮೊ. 4:16.

ಗೀತೆ 92 “ವಾಕ್ಯವನ್ನು ಸಾರು”

ಕಿರುನೋಟa

1. ನಮ್ಮ ಕುಟುಂಬದವರ ವಿಷಯದಲ್ಲಿ ನಮಗೇನು ಆಸೆ ಇದೆ?

“ನಾನು ಸತ್ಯ ಕಲಿತಾಗಿಂದಲೂ ನನ್ನ ಕುಟುಂಬದವರು ನನ್ನ ಜೊತೆ ಪರದೈಸ್‌ನಲ್ಲಿರಬೇಕು ಅಂತ ಬಯಸಿದೆ. ಅದರಲ್ಲೂ ನನ್ನ ಗಂಡ ವಿವೇಕ್‌b ಮತ್ತು ನಮ್ಮ ಮಗ ನನ್ನ ಜೊತೆ ಯೆಹೋವನ ಸೇವೆ ಮಾಡಬೇಕು ಅಂತ ತುಂಬ ಆಸೆಪಟ್ಟೆ” ಅಂತ ಪಲ್ಲವಿ ಎಂಬ ಸಹೋದರಿ ಹೇಳುತ್ತಾಳೆ. ನಿಮ್ಮ ಕುಟುಂಬದವರು ಯೆಹೋವನನ್ನು ಇನ್ನೂ ಆರಾಧಿಸುತ್ತಿಲ್ವಾ? ಹಾಗಾದರೆ ಪಲ್ಲವಿಯಂತೆ ನಿಮಗೂ ಅವರು ಯೆಹೋವನ ಸೇವೆ ಮಾಡಬೇಕು ಅನ್ನುವ ಆಸೆಯಿರಬಹುದು.

2. ಈ ಲೇಖನದಲ್ಲಿ ನಾವು ಯಾವ ಪ್ರಶ್ನೆಗಳ ಬಗ್ಗೆ ಚರ್ಚಿಸಲಿದ್ದೇವೆ?

2 ನಮ್ಮ ಕುಟುಂಬದವರು ಸತ್ಯ ಕಲಿಯಬೇಕು ಅಂತ ನಾವು ಅವರಿಗೆ ಒತ್ತಾಯ ಮಾಡಕ್ಕಾಗಲ್ಲ. ಆದರೆ ಬೈಬಲ್‌ ಸಂದೇಶದ ಬಗ್ಗೆ ಕಲಿಯಲು ಮನಸ್ಸು ಮಾಡುವಂತೆ ಅವರನ್ನು ಉತ್ತೇಜಿಸಬಹುದು. (2 ತಿಮೊ. 3:14, 15) ನಾವು ಯಾಕೆ ನಮ್ಮ ಕುಟುಂಬದವರಿಗೆ ಸಾಕ್ಷಿ ಕೊಡಬೇಕು? ಅವರ ಭಾವನೆಗಳನ್ನು ಯಾಕೆ ಅರ್ಥಮಾಡಿಕೊಳ್ಳಬೇಕು? ನಮ್ಮಂತೆಯೇ ನಮ್ಮ ಕುಟುಂಬದವರೂ ಯೆಹೋವನನ್ನು ಪ್ರೀತಿಸಲು ಹೇಗೆ ಸಹಾಯ ಮಾಡಬಹುದು? ಮತ್ತು ಈ ವಿಷಯದಲ್ಲಿ ನಮ್ಮ ಸಭೆಯಲ್ಲಿರುವ ಎಲ್ಲಾ ಸಹೋದರ-ಸಹೋದರಿಯರು ಹೇಗೆ ಸಹಾಯ ಮಾಡಬಹುದು?

ನಾವು ಯಾಕೆ ನಮ್ಮ ಕುಟುಂಬದವರಿಗೆ ಸಾಕ್ಷಿ ಕೊಡಬೇಕು?

3. ಎರಡನೇ ಪೇತ್ರ 3:9​ರ ಪ್ರಕಾರ ನಾವು ಯಾಕೆ ನಮ್ಮ ಕುಟುಂಬದವರಿಗೆ ಸಾಕ್ಷಿ ಕೊಡಬೇಕು?

3 ಇನ್ನು ಸ್ವಲ್ಪದರಲ್ಲೇ ಯೆಹೋವನು ಈ ಲೋಕಕ್ಕೆ ಅಂತ್ಯ ತರಲಿದ್ದಾನೆ. ಆಗ “ನಿತ್ಯಜೀವಕ್ಕಾಗಿ ಯೋಗ್ಯವಾದ ಮನೋಭಾವ” ಇರುವ ಜನರು ಮಾತ್ರ ಉಳಿಯುತ್ತಾರೆ. (ಅ. ಕಾ. 13:48) ನಾವು ಪರಿಚಯ ಇಲ್ಲದ ಜನರಿಗೇ ನಮ್ಮ ಸಮಯ-ಶಕ್ತಿ ಕೊಟ್ಟು ಸಾರುತ್ತೇವೆ ಅಂದ ಮೇಲೆ ನಮ್ಮ ಕುಟುಂಬದವರೂ ಯೆಹೋವನ ಆರಾಧನೆ ಮಾಡಬೇಕು ಅಂತ ಇಷ್ಟಪಡಲ್ವಾ? ಖಂಡಿತ ಇಷ್ಟಪಡುತ್ತೇವೆ. ನಮ್ಮ ಪ್ರೀತಿಯ ತಂದೆಯಾದ ಯೆಹೋವನು ಸಹ ‘ಯಾವನಾದರೂ ನಾಶವಾಗುವುದನ್ನು ಇಷ್ಟಪಡದೆ ಎಲ್ಲರೂ ಪಶ್ಚಾತ್ತಾಪ ಹೊಂದುವುದನ್ನು ಬಯಸುತ್ತಾನೆ.’—2 ಪೇತ್ರ 3:9 ಓದಿ.

4. ನಮ್ಮ ಕುಟುಂಬದವರಿಗೆ ಸಾಕ್ಷಿ ಕೊಡುವಾಗ ನಾವು ಯಾವ ತಪ್ಪು ಮಾಡಿಬಿಡಬಹುದು?

4 ನಾವು ಸತ್ಯವನ್ನು ಸರಿಯಾದ ರೀತಿಯಲ್ಲಿ ತಿಳಿಸುತ್ತಿದ್ದೇವಾ ಅಥವಾ ತಪ್ಪಾದ ರೀತಿಯಲ್ಲಿ ತಿಳಿಸುತ್ತಿದ್ದೇವಾ ಅಂತ ಪರೀಕ್ಷಿಸಿಕೊಳ್ಳಬೇಕು. ಪರಿಚಯ ಇಲ್ಲದ ಜನರಿಗೆ ಸಾರುವಾಗ ನಾವು ಮೃದುವಾಗಿ, ಜಾಣ್ಮೆಯಿಂದ ಮಾತಾಡುತ್ತೇವೆ, ಆದರೆ ಅದೇ ನಮ್ಮ ಕುಟುಂಬದವರಿಗೆ ಸಾರುವಾಗ ಕೆಲವೊಮ್ಮೆ ಕಡ್ಡಿ ಮುರಿದಂಗೆ ಮಾತಾಡಿಬಿಡುತ್ತೇವೆ.

5. ನಮ್ಮ ಕುಟುಂಬದವರಿಗೆ ಸತ್ಯದ ಬಗ್ಗೆ ಹೇಳುವಾಗ ನಾವು ಏನನ್ನು ಮನಸ್ಸಲ್ಲಿಡಬೇಕು?

5 ನಮ್ಮಲ್ಲಿ ಅನೇಕರು ಮೊದಲ ಸಲ ಕುಟುಂಬದವರಿಗೆ ಸಾಕ್ಷಿ ಕೊಡಕ್ಕೆ ಪ್ರಯತ್ನಿಸಿದ್ದನ್ನು ಯೋಚಿಸಿ ‘ಆಗ ನಾನು ಸರಿಯಾಗಿ ಮಾತಾಡಲಿಲ್ಲ, ಅದನ್ನು ಬೇರೆ ರೀತಿಯಲ್ಲಿ ಹೇಳಬೇಕಿತ್ತು’ ಅಂತ ಬೇಸರಪಡುತ್ತೇವೆ. ಅಪೊಸ್ತಲ ಪೌಲನು ಕ್ರೈಸ್ತರಿಗೆ “ನಿಮ್ಮ ಮಾತು ಯಾವಾಗಲೂ ಸೌಜನ್ಯವುಳ್ಳದ್ದಾಗಿಯೂ ಉಪ್ಪಿನಿಂದ ಹದಗೊಳಿಸಲ್ಪಟ್ಟದ್ದಾಗಿಯೂ ಇರಲಿ; ಹೀಗೆ ನೀವು ಪ್ರತಿಯೊಬ್ಬರಿಗೆ ಹೇಗೆ ಉತ್ತರಕೊಡಬೇಕು ಎಂಬುದನ್ನು ತಿಳಿದುಕೊಳ್ಳುವಿರಿ” ಎಂದು ಸಲಹೆ ಕೊಟ್ಟನು. (ಕೊಲೊ. 4:5, 6) ನಮ್ಮ ಕುಟುಂಬದವರ ಹತ್ತಿರ ಮಾತಾಡುವಾಗ ಈ ಸಲಹೆಯನ್ನು ಮನಸ್ಸಲ್ಲಿಡುವುದು ಒಳ್ಳೇದು. ಇಲ್ಲದಿದ್ದರೆ ನಾವು ಅವರನ್ನು ಸತ್ಯದ ಕಡೆಗೆ ಸೆಳೆಯುವ ಬದಲು ಅದರಿಂದ ಇನ್ನೂ ದೂರ ಹೋಗುವ ತರ ಮಾಡಿಬಿಡುತ್ತೇವೆ.

ನಾವು ಹೇಗೆ ಸಹಾಯ ಮಾಡಬಹುದು?

ಒಬ್ಬ ಸಹೋದರಿ ಸತ್ಯದಲ್ಲಿಲ್ಲದ ತನ್ನ ಗಂಡ ಇಡೀ ದಿನ ಏನು ಮಾಡಿದೆ ಅಂತ ಹೇಳುತ್ತಿರುವಾಗ ಪೂರ್ತಿ ಗಮನ ಕೊಟ್ಟು ಕೇಳಿಸಿಕೊಳ್ಳುತ್ತಿದ್ದಾಳೆ; ನಂತರ ಅವಳ ಗಂಡ-ಮಗ ಆಟ ಆಡುತ್ತಿರುವಾಗ ಅವಳು ಅದನ್ನು ನೋಡಿ ಆನಂದಿಸುತ್ತಿದ್ದಾಳೆ

ನೀವು ಕುಟುಂಬದವರನ್ನು ಅರ್ಥಮಾಡಿಕೊಂಡು ಒಳ್ಳೇ ರೀತಿ ನಡಕೊಂಡರೆ ಸತ್ಯದಿಂದ ಎಷ್ಟು ಪ್ರಯೋಜನ ಇದೆ ಎಂದು ಅವರಿಗೆ ಅರ್ಥವಾಗುತ್ತದೆ (ಪ್ಯಾರ 6-8 ನೋಡಿ)d

6-7. ಸತ್ಯದಲ್ಲಿಲ್ಲದ ಸಂಗಾತಿಯನ್ನು ಅರ್ಥಮಾಡಿಕೊಳ್ಳುವುದು ಪ್ರಾಮುಖ್ಯ ಅನ್ನುವುದಕ್ಕೆ ಒಂದು ಉದಾಹರಣೆ ಕೊಡಿ.

6 ಅವರನ್ನು ಅರ್ಥಮಾಡಿಕೊಳ್ಳಿ. ಈ ಮುಂಚೆ ತಿಳಿಸಲಾದ ಪಲ್ಲವಿ ಹೇಳುವುದು: “ಮೊದಮೊದಲು ನಾನು ನನ್ನ ಗಂಡನ ಹತ್ತಿರ ದೇವರ ಬಗ್ಗೆ, ಬೈಬಲ್‌ ಬಗ್ಗೆನೇ ಮಾತಾಡುತ್ತಿದ್ದೆ. ನಮ್ಮ ಬಗ್ಗೆ, ಮನೆ ಬಗ್ಗೆ ಮಾತಾಡಿದ್ದೇ ಇಲ್ಲ.” ಅವಳ ಗಂಡ ವಿವೇಕ್‌ಗೆ ಬೈಬಲ್‌ ಬಗ್ಗೆ ಅಷ್ಟೇನು ಗೊತ್ತಿರಲಿಲ್ಲ, ಹಾಗಾಗಿ ಅವಳು ಏನು ಮಾತಾಡುತ್ತಿದ್ದಾಳೆಂದು ಅವನಿಗೆ ಅರ್ಥವಾಗುತ್ತಿರಲಿಲ್ಲ. ಅವಳು ಮೂರು ಹೊತ್ತು ಧರ್ಮದ ಬಗ್ಗೆನೇ ಮಾತಾಡುತ್ತಾಳೆ ಅಂತ ಅಂದುಕೊಂಡಿದ್ದನು. ಅಪಾಯಕಾರಿ ಗುಂಪಿಗೆ ಸೇರುತ್ತಿದ್ದಾಳೆ, ಮೋಸ ಹೋಗುತ್ತಿದ್ದಾಳೆ ಅಂತ ಅವನಿಗೆ ಚಿಂತೆಯಾಗುತ್ತಿತ್ತು.

7 ಆರಂಭದಲ್ಲಿ ಹೆಚ್ಚಿನ ಸಂಜೆ ಮತ್ತು ವಾರಾಂತ್ಯಗಳಲ್ಲಿ ಕೂಟಗಳಿಗೆ ಹೋಗುವುದು, ಸುವಾರ್ತೆ ಸಾರಕ್ಕೆ ಹೋಗುವುದು, ಸಹೋದರ-ಸಹೋದರಿಯರ ಮನೆಗೆ ಹೋಗುವುದು ಹೀಗೆ ಅದರಲ್ಲೇ ತಾನು ಮುಳುಗಿಹೋದೆ ಎಂದು ಪಲ್ಲವಿ ಒಪ್ಪಿಕೊಳ್ಳುತ್ತಾಳೆ. “ವಿವೇಕ್‌ ಮನೆಗೆ ಬಂದಾಗ ಕೆಲವೊಮ್ಮೆ ಯಾರೂ ಇರುತ್ತಿರಲಿಲ್ಲ, ಅವರಿಗೆ ತಾನು ಒಂಟಿ ಅಂತ ಅನಿಸುತ್ತಿತ್ತು” ಎಂದವಳು ಹೇಳುತ್ತಾಳೆ. ಅವನಿಗೂ ತನ್ನ ಹೆಂಡತಿ-ಮಗನ ಜೊತೆ ಇರಬೇಕು ಅಂತ ಆಸೆ ಇರುತ್ತಲ್ವಾ? ತನ್ನ ಹೆಂಡತಿ ಸಹವಾಸ ಮಾಡುತ್ತಿದ್ದ ಜನರ ಪರಿಚಯ ಅವನಿಗಿರಲಿಲ್ಲ, ‘ಅವಳಿಗೆ ನನಗಿಂತ ಅವಳ ಹೊಸ ಫ್ರೆಂಡ್ಸೇ ಹೆಚ್ಚು‘ ಅಂತ ಅನಿಸುತ್ತಿತ್ತು. ಆದ್ದರಿಂದ ವಿವೇಕ್‌ ಅವಳಿಗೆ ವಿಚ್ಛೇದನ ಕೊಡುತ್ತೇನೆ ಅಂತ ಬೆದರಿಕೆ ಹಾಕಿದ. ಪಲ್ಲವಿ ಹೇಗೆ ತನ್ನ ಗಂಡನನ್ನು ಅರ್ಥಮಾಡಿಕೊಂಡು ನಡಕೊಳ್ಳಬಹುದಿತ್ತು?

8. ಒಂದನೇ ಪೇತ್ರ 3:1, 2​ರ ಪ್ರಕಾರ ಯಾವ ವಿಷಯದಿಂದ ನಮ್ಮ ಕುಟುಂಬದವರು ಸತ್ಯದ ಕಡೆಗೆ ಆಸಕ್ತಿ ತೋರಿಸಬಹುದು?

8 ಒಳ್ಳೇ ಮಾದರಿ ಇಡಿ. ಕೆಲವೊಮ್ಮೆ ನಾವು ಹೇಳೋ ವಿಷಯಗಳಿಗಿಂತ ನಾವು ಮಾಡೋ ವಿಷಯಗಳು ನಮ್ಮ ಕುಟುಂಬದವರ ಮೇಲೆ ಜಾಸ್ತಿ ಪ್ರಭಾವ ಬೀರುತ್ತದೆ. (1 ಪೇತ್ರ 3:1, 2 ಓದಿ.) ಪಲ್ಲವಿಗೆ ನಿಧಾನವಾಗಿ ಆ ಸತ್ಯಾಂಶ ಅರ್ಥ ಆಯಿತು. “ವಿವೇಕ್‌ ನಮ್ಮನ್ನು ತುಂಬ ಪ್ರೀತಿಸುತ್ತಾರೆ, ವಿಚ್ಛೇದನ ಕೊಡೋಕೆ ಅವರಿಗೆ ಮನಸ್ಸಿಲ್ಲ ಅಂತ ನನಗೆ ಗೊತ್ತಿತ್ತು” ಎಂದು ಅವಳು ಹೇಳುತ್ತಾಳೆ. “ಅವರು ಆ ರೀತಿ ಬೆದರಿಕೆ ಹಾಕಿದ ಮೇಲೆ ಮದುವೆ ವಿಷಯದಲ್ಲಿ ಯೆಹೋವನು ಏನು ಹೇಳಿದ್ದಾನೋ ಅದರ ಪ್ರಕಾರ ನಾನು ನಡಕೊಳ್ಳಬೇಕು ಅಂತ ಅರ್ಥ ಆಯಿತು. ಸತ್ಯದ ಬಗ್ಗೆ ಬರೀ ಹೇಳುತ್ತಾ ಇರೋ ಬದಲು ಅದರ ಪ್ರಕಾರ ನಡಕೊಳ್ಳುತ್ತಿದ್ದೀನಿ ಅಂತ ತೋರಿಸಬೇಕಿತ್ತು.” ಅವಳು ವಿವೇಕ್‌ ಹತ್ತಿರ ದಿನಬೆಳಗಾದರೆ ಬೈಬಲ್‌ ಬಗ್ಗೆ ಮಾತಾಡುವುದನ್ನು ನಿಲ್ಲಿಸಿಬಿಟ್ಟಳು. ಆಯಾ ದಿನದಲ್ಲಿ ನಡೆಯುತ್ತಿದ್ದ ವಿಷಯಗಳ ಬಗ್ಗೆ ಮಾತಾಡೋಕೆ ಶುರುಮಾಡಿದಳು. ಅವಳು ತುಂಬ ಶಾಂತಿಯಿಂದ ಇರುವುದನ್ನು, ಮಗ ಹೇಳಿದ ಮಾತು ಕೇಳುವುದನ್ನು, ಸಭ್ಯವಾಗಿ ನಡಕೊಳ್ಳುವುದನ್ನು ವಿವೇಕ್‌ ಗಮನಿಸಿದನು. (ಜ್ಞಾನೋ. 31:18, 27, 28) ಬೈಬಲ್‌ನ ಸಂದೇಶ ತನ್ನ ಕುಟುಂಬದ ಮೇಲೆ ಒಳ್ಳೇ ಪ್ರಭಾವ ಬೀರುತ್ತಾ ಇರುವುದನ್ನು ನೋಡಿದನು. ಆಗ ಅವನು ದೇವರ ವಾಕ್ಯದಲ್ಲಿರುವ ಸಂದೇಶದ ಬಗ್ಗೆ ತಿಳುಕೊಳ್ಳಲು ಮನಸ್ಸು ಮಾಡಿದನು.—1 ಕೊರಿಂ. 7:12-14, 16.

9. ನಾವು ಯಾಕೆ ಪ್ರಯತ್ನವನ್ನು ಬಿಡಬಾರದು?

9 ನಿಮ್ಮ ಪ್ರಯತ್ನ ಬಿಡಬೇಡಿ. ಈ ವಿಷಯದಲ್ಲಿ ಯೆಹೋವನು ನಮಗೆ ಒಳ್ಳೇ ಮಾದರಿ ಇಟ್ಟಿದ್ದಾನೆ. ಸತ್ಯ ಕಲಿಯುವಂತೆ ಮತ್ತು ಶಾಶ್ವತ ಜೀವನ ಪಡಕೊಳ್ಳುವಂತೆ ಆತನು ಜನರಿಗೆ “ಪುನಃ ಪುನಃ” ಹೇಳುತ್ತಿದ್ದಾನೆ. (ಯೆರೆ. 44:4, ಪವಿತ್ರ ಗ್ರಂಥ ಭಾಷಾಂತರ) ಬೇರೆಯವರಿಗೆ ಸಹಾಯ ಮಾಡುತ್ತಲೇ ಇರುವಂತೆ ಅಪೊಸ್ತಲ ಪೌಲ ತಿಮೊಥೆಯನಿಗೆ ಹೇಳಿದನು. ಯಾಕೆ? ಹಾಗೆ ಮಾಡಿದಾಗಲೇ ತಿಮೊಥೆಯನು ತನ್ನನ್ನು ಮತ್ತು ತನಗೆ ಕಿವಿಗೊಡುವವರನ್ನು ರಕ್ಷಿಸಬಹುದಿತ್ತು. (1 ತಿಮೊ. 4:16) ನಮ್ಮ ಕುಟುಂಬದವರ ಮೇಲೆ ನಮಗೆ ತುಂಬ ಪ್ರೀತಿ ಇದೆ. ಹಾಗಾಗಿ ಅವರು ಕೂಡ ದೇವರ ವಾಕ್ಯದಲ್ಲಿನ ಸತ್ಯಗಳ ಬಗ್ಗೆ ತಿಳುಕೊಳ್ಳಬೇಕು ಅಂತ ಬಯಸುತ್ತೇವೆ. ಪಲ್ಲವಿಯ ನಡೆ-ನುಡಿ ಕೊನೆಗೂ ಅವಳ ಕುಟುಂಬದ ಮೇಲೆ ಒಳ್ಳೇ ಪ್ರಭಾವ ಬೀರಿತು. ಈಗ ಅವಳು ಖುಷಿಯಾಗಿದ್ದಾಳೆ, ಯಾಕೆಂದರೆ ಅವಳ ಗಂಡ ಸಹ ಯೆಹೋವನ ಆರಾಧನೆ ಮಾಡುತ್ತಿದ್ದಾನೆ. ಅವರಿಬ್ಬರು ಪಯನೀಯರ್‌ ಸೇವೆ ಮಾಡುತ್ತಿದ್ದಾರೆ ಮತ್ತು ವಿವೇಕ್‌ ಹಿರಿಯನಾಗಿದ್ದಾನೆ.

ನಮ್ಮ ವೆಬ್‌ಸೈಟ್‌ನಿಂದ ಸತ್ಯ ಕಲಿಸಿ

ಒಬ್ಬ ಯುವ ಸಹೋದರ ಸತ್ಯದಲ್ಲಿಲ್ಲದ ತನ್ನ ತಂದೆಗೆ ಕಾರು ರಿಪೇರಿ ಮಾಡಲು ಸಹಾಯ ಮಾಡುವಾಗ ಸೂಕ್ತ ಸಮಯ ನೋಡಿ jw.org ವೆಬ್‌ಸೈಟ್‌ನಿಂದ ಒಂದು ವಿಡಿಯೋ ತೋರಿಸುತ್ತಿದ್ದಾನೆ

(ಪ್ಯಾರ 10 ನೋಡಿ)c

ನಾವು ಹೇಳುವ ಮತ್ತು ಮಾಡುವ ವಿಷಯಗಳಿಂದಷ್ಟೇ ಅಲ್ಲ ನಾವು ಕೊಡುವ ಬೈಬಲಾಧಾರಿತ ಪ್ರಕಾಶನಗಳಿಂದಲೂ ನಮ್ಮ ಕುಟುಂಬದವರು ಯೆಹೋವನ ಬಗ್ಗೆ ಕಲಿಯುವಂತೆ ಮಾಡಬಹುದು. ಹಿಂದೆ ಜನ ಮುದ್ರಿತ ಪುಸ್ತಕಗಳನ್ನು, ಪತ್ರಿಕೆಗಳನ್ನು ಮತ್ತು ಕರಪತ್ರಗಳನ್ನು ಓದಲು ಇಷ್ಟಪಡುತ್ತಿದ್ದರು. ಆದರೆ ಈಗ ಆನ್‌ಲೈನ್‌ನಲ್ಲಿ ಬರುವ ಮಾಹಿತಿಯನ್ನು ಓದಲು ಇಷ್ಟಪಡುತ್ತಾರೆ. ತುಂಬ ಜನ ವಿಡಿಯೋ ನೋಡೋಕೆ ಇಷ್ಟಪಡುತ್ತಾರೆ. ಯೆಹೋವನ ಜನರ ಬಗ್ಗೆ ತಿಳುಕೊಳ್ಳಲು ನಿಮ್ಮ ಕುಟುಂಬದವರಿಗೆ ನೀವು jw.org® ವೆಬ್‌ಸೈಟ್‌ ಪರಿಚಯಿಸಬಹುದು ಅಥವಾ JW ಪ್ರಸಾರದಲ್ಲಿ® ಬರುವ ತಿಂಗಳ ಕಾರ್ಯಕ್ರಮಗಳನ್ನು ನೋಡಲು ಹೇಳಬಹುದು. ಹೀಗೆ ಮಾಡಿದರೆ ಅವರು ತಮಗಿಷ್ಟವಾದಾಗ, ತಮ್ಮಿಂದಾಗುವಷ್ಟು ತಿಳುಕೊಳ್ಳುವ ಸಾಧ್ಯತೆ ಇರುತ್ತದೆ.

10. ನಾವು ಯಾಕೆ ತಾಳ್ಮೆಯಿಂದ ಇರಬೇಕು?

10 ತಾಳ್ಮೆಯಿಂದಿರಿ. ದೇವರ ಮಾತಿನಂತೆ ನಾವು ನಡಕೊಳ್ಳಲು ನಿರ್ಧರಿಸಿದಾಗ ನಮ್ಮ ಜೀವನದಲ್ಲಿ, ನಂಬಿಕೆಗಳಲ್ಲಿ ಅನೇಕ ಬದಲಾವಣೆಗಳನ್ನು ಮಾಡಿಕೊಂಡಿರುತ್ತೇವೆ. ಇದು ನಮ್ಮ ಕುಟುಂಬದವರಿಗೆ ಇಷ್ಟ ಆಗದೇ ಇರಬಹುದು. ನಾವು ಅವರ ಜೊತೆ ಯಾವುದೇ ಹಬ್ಬ ಆಚರಿಸಲ್ಲ, ರಾಜಕೀಯ ವಿಷಯಗಳಲ್ಲಿ ಒಳಗೂಡಲ್ಲ ಅಂತ ಅವರಿಗೆ ಶುರುವಲ್ಲಿ ಕೋಪ ಬರಬಹುದು. (ಮತ್ತಾ. 10:35, 36) ಆಗ ನಾವು, ‘ಇವರು ಯಾವತ್ತಿಗೂ ಬದಲಾಗಲ್ಲ, ನಾಯಿ ಬಾಲ ಡೊಂಕೇ’ ಅಂತ ಯೋಚಿಸಬಾರದು. ನಮ್ಮ ನಂಬಿಕೆಗಳ ಬಗ್ಗೆ ಅವರಿಗೆ ಅರ್ಥಮಾಡಿಸುವುದನ್ನು ನಾವು ನಿಲ್ಲಿಸಿಬಿಟ್ಟರೆ ಅವರು ಶಾಶ್ವತವಾದ ಜೀವನ ಪಡಕೊಳ್ಳಲು ಅರ್ಹರಲ್ಲ ಅಂತ ನಾವೇ ತೀರ್ಪು ಮಾಡಿದಂತೆ ಆಗುತ್ತದೆ. ತೀರ್ಪು ಮಾಡುವ ಕೆಲಸವನ್ನು ಯೆಹೋವನು ನಮಗೆ ಕೊಟ್ಟಿಲ್ಲ, ಯೇಸುವಿಗೆ ಕೊಟ್ಟಿದ್ದಾನೆ. (ಯೋಹಾ. 5:22) ನಾವು ತಾಳ್ಮೆಯಿಂದ ಇದ್ದರೆ ನಮ್ಮ ಕುಟುಂಬದವರು ಒಂದಲ್ಲ ಒಂದು ದಿನ ಸತ್ಯ ಕಲಿಯಲು ಮನಸ್ಸು ಮಾಡಬಹುದು.—“ನಮ್ಮ ವೆಬ್‌ಸೈಟ್‌ನಿಂದ ಸತ್ಯ ಕಲಿಸಿ” ಚೌಕ ನೋಡಿ.

11-13. ಅನಿಶಾ ತನ್ನ ಹೆತ್ತವರ ಜೊತೆ ನಡಕೊಂಡ ರೀತಿಯಿಂದ ನಾವೇನು ಕಲಿಯಬಹುದು?

11 ನೋವಾಗದಂತೆ ನಡಕೊಳ್ಳಿ, ಆದರೆ ಮಣಿಯಬೇಡಿ. (ಜ್ಞಾನೋ. 15:2) ಅನಿಶಾ ಎಂಬ ಸಹೋದರಿ ಏನು ಮಾಡಿದಳೆಂದು ನೋಡಿ. ಅವಳು ಯೆಹೋವನ ಬಗ್ಗೆ ಕಲಿತಾಗ ಹೆತ್ತವರ ಜೊತೆ ಇರಲಿಲ್ಲ, ಬೇರೆ ದೇಶದಲ್ಲಿ ಇದ್ದಳು. ಅವಳ ಹೆತ್ತವರು ರಾಜಕೀಯ ವಿಷಯಗಳಲ್ಲಿ ತುಂಬ ಒಳಗೂಡಿದ್ದರು ಮತ್ತು ದೇವರಿಲ್ಲ ಎಂದು ನಂಬುತ್ತಿದ್ದರು. ಅನಿಶಾ ತಾನು ಕಲಿಯುತ್ತಿದ್ದ ಒಳ್ಳೇ ವಿಷಯವನ್ನು ಆದಷ್ಟು ಬೇಗ ತನ್ನ ಹೆತ್ತವರಿಗೆ ತಿಳಿಸಬೇಕು ಎಂದು ಅರ್ಥಮಾಡಿಕೊಂಡಳು. “ನಿಮ್ಮ ನಂಬಿಕೆ ಮತ್ತು ಆಚಾರಗಳ ಬಗ್ಗೆ ತಡವಾಗಿ ಹೇಳಿದರೆ ಅವರಿಗೆ ಅದರಿಂದ ಇನ್ನೂ ಹೆಚ್ಚು ನೋವು-ಆಘಾತ ಆಗುತ್ತದೆ” ಎಂದವಳು ಹೇಳುತ್ತಾಳೆ. ಆದ್ದರಿಂದ ಅವಳು ತನ್ನ ಹೆತ್ತವರಿಗೆ ಇಷ್ಟವಾಗಬಹುದಾದ ಬೈಬಲ್‌ ವಿಷಯಗಳ ಬಗ್ಗೆ ಪತ್ರ ಬರೆದಳು. ಉದಾಹರಣೆಗೆ ಪ್ರೀತಿ ಬಗ್ಗೆ. ಅಂಥ ವಿಷಯಗಳ ಬಗ್ಗೆ ಬೈಬಲ್‌ ಏನು ಹೇಳುತ್ತದೆ ಎಂದು ತಿಳಿಸಿದಳು ಮತ್ತು ಅದರ ಬಗ್ಗೆ ಅವರಿಗೇನು ಅನಿಸುತ್ತದೆ ಎಂದು ಕೇಳಿದಳು. (1 ಕೊರಿಂ. 13:1-13) ತನ್ನನ್ನು ಚೆನ್ನಾಗಿ ಬೆಳೆಸಿದ್ದಕ್ಕೆ, ನೋಡಿಕೊಂಡಿದ್ದಕ್ಕೆ ಥ್ಯಾಂಕ್ಸ್‌ ಹೇಳಿದಳು ಮತ್ತು ಗಿಫ್ಟ್‌ ಕೊಟ್ಟಳು. ಊರಿಗೆ ಹೋದಾಗೆಲ್ಲಾ ಅಮ್ಮನಿಗೆ ಮನೆಕೆಲಸದಲ್ಲಿ ಸಹಾಯ ಮಾಡಿದಳು. ಇಷ್ಟೆಲ್ಲಾ ಮಾಡಿದರೂ ಅವಳು ತನ್ನ ನಂಬಿಕೆಯ ಬಗ್ಗೆ ತಿಳಿಸಿದಾಗ ಆರಂಭದಲ್ಲಿ ಹೆತ್ತವರು ಅವಳ ಮೇಲೆ ಬೇಜಾರು ಮಾಡಿಕೊಂಡರು.

12 ಅನಿಶಾ ಹೆತ್ತವರ ಜೊತೆಯಲ್ಲಿದ್ದಾಗಲೂ ಪ್ರತಿದಿನ ಬೈಬಲ್‌ ಓದುವ ತನ್ನ ರೂಢಿಯನ್ನು ಬಿಡಲಿಲ್ಲ. “ಇದರಿಂದ ನನಗೆ ಬೈಬಲ್‌ ಎಷ್ಟು ಮುಖ್ಯ ಎಂದು ನನ್ನ ಅಮ್ಮನಿಗೆ ಅರ್ಥವಾಯಿತು” ಎಂದವಳು ಹೇಳುತ್ತಾಳೆ. ಅದೇ ಸಮಯದಲ್ಲಿ, ಅವಳ ಅಪ್ಪಾಜಿ ಬೈಬಲಿನ ಬಗ್ಗೆ ಕಲಿಯಲು ನಿರ್ಧರಿಸಿದರು. ತನ್ನ ಮಗಳ ಯೋಚನೆನೇ ಬದಲಾಗಲು ಕಾರಣ ಏನಂತ ತಿಳುಕೊಳ್ಳಬೇಕು, ಬೈಬಲಿನಲ್ಲಿ ತಪ್ಪನ್ನು ಕಂಡುಹಿಡಿಯಬೇಕು ಅಂತ ಹೀಗೆ ಮಾಡಿದರು. ಆಗ ಅನಿಶಾ ತನ್ನ ಅಪ್ಪಾಜಿಗೆ ಬೈಬಲ್‌ ಕೊಟ್ಟಳು, ಅದರಲ್ಲಿ ಅವರ ಮನಮುಟ್ಟುವಂಥ ಒಂದು ಚೀಟಿ ಬರೆದಿಟ್ಟಿದ್ದಳು. ಮುಂದೆ ಏನಾಯಿತು? ಅವಳ ಅಪ್ಪಾಜಿಗೆ ಬೈಬಲಿನಲ್ಲಿ ತಪ್ಪೇನೂ ಸಿಗಲಿಲ್ಲ, ಬದಲಿಗೆ ಅವರು ಅದರಲ್ಲಿ ಓದಿದ ವಿಷಯವನ್ನು ತುಂಬ ಇಷ್ಟಪಟ್ಟರು.

13 ಕಷ್ಟಗಳನ್ನು ಸಹಿಸಿಕೊಳ್ಳಬೇಕಾಗಿ ಬಂದರೂ ಅದಕ್ಕೆ ನಾವು ಮಣಿಯಬಾರದು. (1 ಕೊರಿಂ. 4:12ಬಿ) ಹಾಗಂತ ಒರಟಾಗಿ ಸಹ ನಡಕೊಳ್ಳಬಾರದು. ಅನಿಶಾಗೂ ಅವಳಮ್ಮನಿಂದ ವಿರೋಧ ಬಂತು. ಅವಳಿಗೆ ದೀಕ್ಷಾಸ್ನಾನ ಆದಾಗ ಅವಳಮ್ಮ “ನೀನು ಒಳ್ಳೇ ಮಗಳಲ್ಲ” ಅಂದುಬಿಟ್ಟರು. ಆಗ ಅವಳೇನು ಮಾಡಿದಳು? “ಅದರ ಬಗ್ಗೆ ಮಾತೇ ಎತ್ತದಿರುವ ಬದಲು, ನಾನೊಬ್ಬ ಯೆಹೋವನ ಸಾಕ್ಷಿಯಾಗಬೇಕು ಅಂತ ನಿರ್ಧಾರ ಮಾಡಿದ್ದೇನೆ ಮತ್ತು ಅದನ್ನು ಯಾವತ್ತೂ ಬದಲಾಯಿಸಲ್ಲ ಅಂತ ಗೌರವದಿಂದ ವಿವರಿಸಿದೆ. ನಾನು ನಿಮ್ಮನ್ನು ತುಂಬ ಪ್ರೀತಿಸುತ್ತೇನೆ ಅಂತ ಅಮ್ಮನಿಗೆ ಹೇಳಿದೆ. ನಂತರ ನಾವಿಬ್ರೂ ಅತ್ವಿ. ನಾನು ಅವರಿಗೆ ಒಳ್ಳೇ ಅಡಿಗೆ ಮಾಡಿಕೊಟ್ಟೆ. ಬೈಬಲ್‌ ಕಲಿಯುವುದರಿಂದ ನಾನು ಒಳ್ಳೇ ವ್ಯಕ್ತಿಯಾಗುತ್ತಿದ್ದೇನೆ ಅಂತ ಅವರಿಗೆ ಆಗ ಅರ್ಥ ಆಯಿತು” ಎನ್ನುತ್ತಾಳೆ ಅನಿಶಾ.

14. ನಾವು ಯಾವತ್ತೂ ಒತ್ತಡಕ್ಕೆ ಮಣಿಯಬಾರದು ಯಾಕೆ?

14 ಯೆಹೋವನ ಸೇವೆ ಮಾಡುವುದು ನಮಗೆ ಎಷ್ಟು ಪ್ರಾಮುಖ್ಯ ಅನ್ನುವುದನ್ನು ಅರ್ಥಮಾಡಿಕೊಳ್ಳಲು ನಮ್ಮ ಕುಟುಂಬದವರಿಗೆ ಸಮಯ ಹಿಡಿಯಬಹುದು. ಅನಿಶಾ ಉದಾಹರಣೆನೇ ನೋಡಿ. ಅವಳ ಹೆತ್ತವರು ಬಯಸಿದ ಉನ್ನತ ಶಿಕ್ಷಣವನ್ನು ನಿಲ್ಲಿಸಿ ಅವಳು ಪಯನೀಯರ್‌ ಸೇವೆ ಮಾಡಲು ನಿರ್ಧರಿಸಿದಳು. ಅವಳ ಅಮ್ಮ ಮತ್ತೆ ಅತ್ತರು. ಆದರೆ ಅನಿಶಾ ಅದಕ್ಕೆ ಮಣಿಯಲಿಲ್ಲ. “ನೀವು ಒಮ್ಮೆ ಒಂದು ವಿಷಯದಲ್ಲಿ ನಿಮ್ಮ ಕುಟುಂಬದವರ ಒತ್ತಡಕ್ಕೆ ಮಣಿದುಬಿಟ್ಟರೆ ಆಮೇಲೆ ಅವರು ಬೇರೆ ವಿಷಯಗಳಲ್ಲೂ ನಿಮಗೆ ಒತ್ತಡ ಹಾಕಬಹುದು. ಆದರೆ ನೀವು ಅವರಿಗೆ ನೋವಾಗದಂತೆ ನಡಕೊಂಡು ಅದೇ ಸಮಯದಲ್ಲಿ ನಿಮ್ಮ ನಿರ್ಧಾರವನ್ನು ಬಿಟ್ಟುಕೊಡದೆ ಇದ್ದರೆ ಅವರಲ್ಲಿ ಕೆಲವರಾದರೂ ನಿಮ್ಮ ಮಾತಿಗೆ ಬೆಲೆ ಕೊಡುತ್ತಾರೆ” ಎಂದು ಅನಿಶಾ ಹೇಳುತ್ತಾಳೆ. ಅವಳ ಜೀವನದಲ್ಲೂ ಇದೇ ಆಯಿತು. ಈಗ ಅವಳ ಹೆತ್ತವರು ಪಯನೀಯರ್‌ ಸೇವೆ ಮಾಡುತ್ತಿದ್ದಾರೆ ಮತ್ತು ಅವಳ ಅಪ್ಪಾಜಿ ಹಿರಿಯರಾಗಿದ್ದಾರೆ.

ಸಭೆಯಲ್ಲಿರುವ ಎಲ್ಲರೂ ಹೇಗೆ ಸಹಾಯ ಮಾಡಬಹುದು?

ಒಬ್ಬ ಸಹೋದರಿ ತನ್ನ ಸಭೆಯವರಿಗೆ ಸತ್ಯದಲ್ಲಿಲ್ಲದ ತನ್ನ ಗಂಡನನ್ನು ಪರಿಚಯ ಮಾಡಿಸಲು ಅವರನ್ನು ಕರೆದಿದ್ದಾಳೆ; ನಂತರ ಸಹೋದರಿಯ ಗಂಡನು ಅವಳ ಜೊತೆ ಸ್ಮರಣೆಗೆ ಹಾಜರಾಗಿದ್ದಾನೆ

ಸತ್ಯದಲ್ಲಿ ಇಲ್ಲದ ಕುಟುಂಬದ ಸದಸ್ಯರಿಗೆ ಸಭೆಯವರು ಹೇಗೆ ಸಹಾಯ ಮಾಡಬಹುದು? (ಪ್ಯಾರ 15-16 ನೋಡಿ)e

15. ಮತ್ತಾಯ 5:14-16 ಮತ್ತು 1 ಪೇತ್ರ 2:12​ರ ಪ್ರಕಾರ ಬೇರೆಯವರ ‘ಒಳ್ಳೆಯ ಕ್ರಿಯೆಗಳು’ ನಮ್ಮ ಕುಟುಂಬದವರಿಗೆ ಹೇಗೆ ಸಹಾಯ ಮಾಡುತ್ತವೆ?

15 ಯೆಹೋವನು ತನ್ನ ಸೇವಕರ “ಒಳ್ಳೆಯ ಕ್ರಿಯೆಗಳನ್ನು” ಬಳಸಿ ಜನರನ್ನು ತನ್ನ ಕಡೆಗೆ ಸೆಳೆಯುತ್ತಾನೆ. (ಮತ್ತಾಯ 5:14-16; 1 ಪೇತ್ರ 2:12 ಓದಿ.) ನಿಮ್ಮ ಸಂಗಾತಿ ಯೆಹೋವನ ಸಾಕ್ಷಿಯಲ್ಲದಿದ್ದರೆ ನಿಮ್ಮ ಸಭೆಯಲ್ಲಿರುವವರನ್ನು ಅವರಿಗೆ ಪರಿಚಯ ಮಾಡಿಸಿದ್ದೀರಾ? ಆರಂಭದಲ್ಲಿ ತಿಳಿಸಲಾದ ಪಲ್ಲವಿ ತನ್ನ ಮನೆಗೆ ಸಭೆಯವರನ್ನು ಕರೆದಳು. ಹೀಗೆ ಅವಳ ಗಂಡ ವಿವೇಕ್‌ ಅವರ ಪರಿಚಯ ಮಾಡಿಕೊಳ್ಳಲು ಸಾಧ್ಯವಾಯಿತು. ತನಗೆ ಸಾಕ್ಷಿಗಳ ಬಗ್ಗೆ ಇದ್ದ ತಪ್ಪಭಿಪ್ರಾಯವನ್ನು ಒಬ್ಬ ಸಹೋದರ ಹೇಗೆ ಸರಿಮಾಡಿದರು ಅಂತ ವಿವೇಕ್‌ ಹೀಗೆ ಹೇಳುತ್ತಾನೆ: “ಅವರು ನನ್ನ ಜೊತೆ ಕೂತುಕೊಂಡು ಆಟ ನೋಡೋಕೆ ಅಂತಾನೇ ರಜಾ ಹಾಕಿ ಬಂದಿದ್ದರು. ಇವರು ಮೂರು ಹೊತ್ತು ಧರ್ಮದ ಬಗ್ಗೆನೇ ಮಾತಾಡುತ್ತಾ ಇರಲ್ಲ ಅಂತ ಆಗ ನನಗೆ ಅರ್ಥ ಆಯಿತು.”

16. ನಾವು ಯಾಕೆ ನಮ್ಮ ಕುಟುಂಬದವರನ್ನು ಕೂಟಗಳಿಗೆ ಕರೆಯಬೇಕು?

16 ನಮ್ಮ ಕುಟುಂಬದವರಿಗೆ ಸಹಾಯ ಮಾಡುವ ಅತ್ಯುತ್ತಮ ವಿಧ ಯಾವುದೆಂದರೆ ನಾವು ಅವರನ್ನು ಕೂಟಗಳಿಗೆ ಕರೆಯುವುದೇ ಆಗಿದೆ. (1 ಕೊರಿಂ. 14:24, 25) ವಿವೇಕ್‌ ಹಾಜರಾದ ಮೊದಲ ಕೂಟ ಸ್ಮರಣೆಯ ಕಾರ್ಯಕ್ರಮವಾಗಿತ್ತು. ಯಾಕೆಂದರೆ ಅದು ಅವನ ಕೆಲಸ ಮುಗಿದ ಮೇಲೆ ಇತ್ತು ಹಾಗೂ ಚಿಕ್ಕ ಕೂಟವಾಗಿತ್ತು. “ಭಾಷಣದಲ್ಲಿ ಹೇಳಿದ ವಿಷಯ ನನಗೇನೂ ಅರ್ಥ ಆಗಲಿಲ್ಲ ಆದರೆ ನನಗೆ ತುಂಬ ಇಷ್ಟವಾದ ವಿಷಯ ಏನೆಂದರೆ ಅಲ್ಲಿನ ಜನ. ಅವರು ನನ್ನ ಹತ್ತಿರ ಬಂದು ಪ್ರೀತಿಯಿಂದ ಸ್ವಾಗತಿಸಿ ನನ್ನ ಜೊತೆ ಮಾತಾಡಿದ ರೀತಿ ನೋಡಿದಾಗ ಅವರೆಷ್ಟು ಪ್ರಾಮಾಣಿಕ ಜನ ಅಂಥ ಅರ್ಥ ಆಯಿತು” ಎಂದು ವಿವೇಕ್‌ ಹೇಳುತ್ತಾನೆ. ಡೇವಿಡ್‌ ಮತ್ತು ಲಿಲ್ಲಿ ಎಂಬ ದಂಪತಿ ಪಲ್ಲವಿಯ ಮಗನನ್ನು ಕೂಟಗಳಲ್ಲಿ ಮತ್ತು ಸೇವೆಗೆ ಹೋದಾಗ ನೋಡಿಕೊಳ್ಳುವ ಮೂಲಕ ಪಲ್ಲವಿಗೆ ಸಹಾಯ ಮಾಡುತ್ತಿದ್ದರು. ಹಾಗಾಗಿ ವಿವೇಕ್‌ ತನ್ನ ಹೆಂಡತಿಯ ಹೊಸ ನಂಬಿಕೆ ಬಗ್ಗೆ ತಿಳುಕೊಳ್ಳಬೇಕು ಅಂತ ನಿರ್ಧರಿಸಿದಾಗ ಸಹೋದರ ಡೇವಿಡ್‌ರ ಹತ್ತಿರ ಹೋಗಿ ತನಗೆ ಬೈಬಲ್‌ ಬಗ್ಗೆ ಹೇಳಿಕೊಡುವಂತೆ ಕೇಳಿಕೊಂಡನು.

17. (ಎ) ಏನಾದಾಗ ನಮ್ಮನ್ನೇ ನಾವು ದೂರಬಾರದು? (ಬಿ) ನಮ್ಮ ಕುಟುಂಬದವರು ಯಾವತ್ತೂ ಬದಲಾಗಲ್ಲ ಅಂತ ನಾವು ಯಾಕೆ ಯೋಚಿಸಬಾರದು?

17 ನಮ್ಮ ಕುಟುಂಬದವರೂ ನಮ್ಮ ಜೊತೆ ಸೇರಿ ಯೆಹೋವನ ಸೇವೆ ಮಾಡಬೇಕೆಂದು ನಾವು ಇಷ್ಟಪಡುತ್ತೇವೆ. ಆದರೆ ನಾವೆಷ್ಟೇ ಪ್ರಯತ್ನಿಸಿದರೂ ನಮ್ಮ ಕುಟುಂಬದವರು ಸತ್ಯಕ್ಕೆ ಬರದೇ ಇರಬಹುದು. ಆಗ ನಮ್ಮನ್ನೇ ನಾವು ದೂರಬಾರದು. ನಮ್ಮ ನಂಬಿಕೆಯನ್ನು ಸ್ವೀಕರಿಸುವಂತೆ ನಾವು ಯಾರಿಗೂ ಒತ್ತಾಯ ಅಂತೂ ಮಾಡಕ್ಕಾಗಲ್ಲ. ಆದರೆ ನೀವು ಯೆಹೋವನ ಆರಾಧನೆ ಮಾಡುತ್ತಾ ಸಂತೋಷವಾಗಿರುವುದನ್ನು ನಿಮ್ಮ ಕುಟುಂಬದವರು ನೋಡುವಾಗ ಅದು ಅವರ ಮೇಲೆ ಒಳ್ಳೇ ಪ್ರಭಾವ ಬೀರಬಹುದು ಎನ್ನುವುದನ್ನು ಮರೆಯಬೇಡಿ. ಆದ್ದರಿಂದ ಅವರಿಗಾಗಿ ಪ್ರಾರ್ಥನೆ ಮಾಡಿ. ಅವರ ಹತ್ತಿರ ಜಾಣ್ಮೆಯಿಂದ, ನೋವಾಗದಂತೆ ಮಾತಾಡಿ. ನಿಮ್ಮ ಪ್ರಯತ್ನ ಬಿಡಬೇಡಿ. (ಅ. ಕಾ. 20:20) ಯೆಹೋವನು ನಿಮ್ಮ ಪ್ರಯತ್ನಗಳನ್ನು ಆಶೀರ್ವದಿಸುತ್ತಾನೆ ಎಂಬ ಭರವಸೆ ನಿಮಗಿರಲಿ. ಇಷ್ಟೆಲ್ಲಾ ಮಾಡುವಾಗ ಒಂದುವೇಳೆ, ನಿಮ್ಮ ಕುಟುಂಬದವರು ಸತ್ಯ ಕಲಿಯಲು ಮನಸ್ಸು ಮಾಡಿದರೆ ಅವರ ಜೀವ ಉಳಿಯುತ್ತದೆ!

ನಿಮ್ಮ ಉತ್ತರವೇನು?

  • ನಿಮ್ಮ ಕುಟುಂಬದವರನ್ನು ನೀವು ಅರ್ಥಮಾಡಿಕೊಂಡಿದ್ದೀರಿ ಅಂತ ಹೇಗೆ ತೋರಿಸಬಹುದು?

  • ಅವರ ಜೊತೆ ಹೇಗೆ ತಾಳ್ಮೆಯಿಂದ ಇರಬಹುದು?

  • ಅವರಿಗೆ ನೋವಾಗದಂತೆ ನಡಕೊಳ್ಳುತ್ತಾ ಅದೇ ಸಮಯದಲ್ಲಿ ಮಣಿಯದೆ ಇರುವುದು ಹೇಗೆ?

ಗೀತೆ 142 ಎಲ್ಲ ರೀತಿಯ ಜನರಿಗೆ ಸಾರಿ

a ನಮ್ಮ ಕುಟುಂಬದವರು ಯೆಹೋವನ ಬಗ್ಗೆ ತಿಳುಕೊಳ್ಳಬೇಕು ಅಂತ ನಾವು ಬಯಸುತ್ತೇವೆ, ಆದರೆ ಆತನನ್ನು ಆರಾಧಿಸಬೇಕಾ ಬೇಡವಾ ಅನ್ನುವುದನ್ನು ಅವರಾಗಿಯೇ ನಿರ್ಧರಿಸಬೇಕು. ಸತ್ಯದಲ್ಲಿಲ್ಲದ ನಮ್ಮ ಕುಟುಂಬದವರು ನಾವು ಏನು ಮಾಡಿದರೆ ಸತ್ಯ ಕಲಿಯಲು ಮನಸ್ಸು ಮಾಡಬಹುದು ಅನ್ನುವುದನ್ನು ಈ ಲೇಖನದಲ್ಲಿ ನೋಡಲಿದ್ದೇವೆ.

b ಕೆಲವು ಹೆಸರುಗಳನ್ನು ಬದಲಾಯಿಸಲಾಗಿದೆ. ಈ ಲೇಖನದಲ್ಲಿ “ಕುಟುಂಬದವರು” ಅನ್ನುವ ಪದ ಯೆಹೋವನನ್ನು ಆರಾಧಿಸದ ನಮ್ಮ ಕುಟುಂಬ ಸದಸ್ಯರು ಮತ್ತು ಸಂಬಂಧಿಕರಿಗೆ ಸೂಚಿಸುತ್ತದೆ.

c ಚಿತ್ರ ವಿವರಣೆ: ಒಬ್ಬ ಯುವ ಸಹೋದರ ಸತ್ಯದಲ್ಲಿಲ್ಲದ ತನ್ನ ತಂದೆಗೆ ಕಾರು ರಿಪೇರಿ ಮಾಡಲು ಸಹಾಯ ಮಾಡುತ್ತಾನೆ. ಸೂಕ್ತ ಸಮಯ ನೋಡಿ jw.org® ವೆಬ್‌ಸೈಟ್‌ನಿಂದ ಒಂದು ವಿಡಿಯೋ ತೋರಿಸುತ್ತಿದ್ದಾನೆ.

d ಚಿತ್ರ ವಿವರಣೆ: ಸತ್ಯದಲ್ಲಿಲ್ಲದ ತನ್ನ ಗಂಡ ಇಡೀ ದಿನ ತಾನೇನು ಮಾಡಿದೆ ಅಂತ ಹೇಳುತ್ತಿರುವಾಗ ಸಹೋದರಿಯು ಪೂರ್ತಿ ಗಮನ ಕೊಟ್ಟು ಕೇಳಿಸಿಕೊಳ್ಳುತ್ತಿದ್ದಾಳೆ. ನಂತರ ಅವಳ ಗಂಡ-ಮಗ ಆಟ ಆಡುತ್ತಿರುವಾಗ ಅವಳು ಅದನ್ನು ನೋಡಿ ಆನಂದಿಸುತ್ತಿದ್ದಾಳೆ.

e ಚಿತ್ರ ವಿವರಣೆ: ಅದೇ ಸಹೋದರಿ ತನ್ನ ಸಭೆಯವರನ್ನು ಮನೆಗೆ ಕರೆದಿದ್ದಾಳೆ, ಅವರು ಅವಳ ಗಂಡನ ಒಳ್ಳೇ ಪರಿಚಯ ಮಾಡಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ. ಗಂಡನು ಅವಳ ಜೊತೆ ಸ್ಮರಣೆಗೆ ಹಾಜರಾಗಿದ್ದಾನೆ.

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ