ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • w19 ನವೆಂಬರ್‌ ಪು. 26-30
  • ‘ಆರಂಭಿಸಿದ್ದನ್ನು ಮಾಡಿ ಮುಗಿಸಿರಿ’

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ‘ಆರಂಭಿಸಿದ್ದನ್ನು ಮಾಡಿ ಮುಗಿಸಿರಿ’
  • ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಅಧ್ಯಯನ)—2019
  • ಉಪಶೀರ್ಷಿಕೆಗಳು
  • ಅನುರೂಪ ಮಾಹಿತಿ
  • ಒಳ್ಳೇ ನಿರ್ಣಯಗಳನ್ನು ಹೇಗೆ ಮಾಡಬಹುದು?
  • ನಿರ್ಣಯಗಳನ್ನು ಕಾರ್ಯರೂಪಕ್ಕೆ ಹಾಕಲು ಸಹಾಯ ಮಾಡುವ ಹೆಜ್ಜೆಗಳು
  • ದೇವರಿಗೆ ಮಹಿಮೆ ತರುವಂಥ ನಿರ್ಣಯಗಳನ್ನು ಮಾಡಿರಿ
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2011
  • ದೇವರಲ್ಲಿ ನಂಬಿಕೆಯಿಟ್ಟು ಒಳ್ಳೇ ನಿರ್ಣಯಗಳನ್ನು ಮಾಡಿ!
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಅಧ್ಯಯನ)—2017
  • ಒಳ್ಳೇ ತೀರ್ಮಾನಗಳನ್ನು ನೀವು ಮಾಡಸಾಧ್ಯವಿರುವ ವಿಧ
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2001
  • ದೇವರನ್ನೂ ಕೇಳಿ, ನಿರ್ಧಾರ ಮಾಡಿ!
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಅಧ್ಯಯನ)—2025
ಇನ್ನಷ್ಟು
ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಅಧ್ಯಯನ)—2019
w19 ನವೆಂಬರ್‌ ಪು. 26-30

ಅಧ್ಯಯನ ಲೇಖನ 48

‘ಆರಂಭಿಸಿದ್ದನ್ನು ಮಾಡಿ ಮುಗಿಸಿರಿ’

‘ಆರಂಭಿಸಿದ್ದನ್ನು ಮಾಡಿ ಮುಗಿಸಿರಿ.’—2 ಕೊರಿಂ. 8:10, 11.

ಗೀತೆ 70 ‘ಹೆಚ್ಚು ಪ್ರಮುಖವಾದ ವಿಷಯಗಳನ್ನು ಖಚಿತಪಡಿಸಿಕೊಳ್ಳಿರಿ’

ಕಿರುನೋಟa

1. ನಾವೇನು ಮಾಡಲು ಯೆಹೋವನು ಅನುಮತಿಸುತ್ತಾನೆ?

ನಮ್ಮ ಜೀವನದ ಬಗ್ಗೆ ನಾವೇ ನಿರ್ಣಯಗಳನ್ನು ಮಾಡಲು ಯೆಹೋವನು ಅನುಮತಿಸುತ್ತಾನೆ. ಹೇಗೆ ಒಳ್ಳೇ ನಿರ್ಣಯಗಳನ್ನು ಮಾಡಬಹುದು ಅಂತ ಆತನು ಹೇಳಿಕೊಡುತ್ತಾನೆ ಮತ್ತು ಆತನಿಗೆ ಸಂತೋಷವಾಗುವಂಥ ನಿರ್ಣಯಗಳನ್ನು ಮಾಡುವಾಗ ನಮಗೆ ಒಳ್ಳೇ ಫಲಿತಾಂಶ ಸಿಗುವಂತೆ ಮಾಡುತ್ತಾನೆ. (ಕೀರ್ತ. 119:173) ಬೈಬಲಿನಲ್ಲಿರುವ ವಿವೇಕದ ಮಾತುಗಳನ್ನು ನಾವು ಎಷ್ಟು ಹೆಚ್ಚು ಅನ್ವಯಿಸುತ್ತೇವೋ ಅಷ್ಟೇ ಹೆಚ್ಚು ಒಳ್ಳೇ ನಿರ್ಣಯಗಳನ್ನು ಮಾಡುತ್ತೇವೆ.—ಇಬ್ರಿ. 5:14.

2. ಒಂದು ನಿರ್ಣಯ ಮಾಡಿದ ಮೇಲೆ ಏನು ಮಾಡಲು ನಾವು ಒದ್ದಾಡಬಹುದು?

2 ನಾವು ಕೆಲವೊಮ್ಮೆ ಒಳ್ಳೇ ನಿರ್ಣಯಗಳನ್ನೇನೋ ಮಾಡುತ್ತೇವೆ, ಆದರೆ ಅದನ್ನು ಪೂರ್ತಿ ಮಾಡಿ ಮುಗಿಸಲು ಒದ್ದಾಡುತ್ತೇವೆ. ಈ ಉದಾಹರಣೆಗಳನ್ನು ನೋಡಿ: ಒಬ್ಬ ಯುವ ಸಹೋದರ ಪೂರ್ತಿ ಬೈಬಲ್‌ ಓದಬೇಕೆಂದು ನಿರ್ಣಯ ಮಾಡುತ್ತಾನೆ. ಕೆಲವು ವಾರಗಳು ಓದುತ್ತಾನೆ, ಆದರೆ ನಂತರ ಅದನ್ನು ನಿಲ್ಲಿಸಿಬಿಡುತ್ತಾನೆ. ಒಬ್ಬ ಸಹೋದರಿ ಪಯನೀಯರ್‌ ಸೇವೆ ಮಾಡಬೇಕೆಂದು ನಿರ್ಣಯಿಸುತ್ತಾಳೆ. ಆದರೆ ಆರಂಭಿಸುವ ದಿನವನ್ನು ಮುಂದೂಡುತ್ತಾ ಇರುತ್ತಾಳೆ. ಹಿರಿಯರ ಮಂಡಲಿಯೊಂದು ಸಭೆಯಲ್ಲಿರುವವರಿಗೆ ಹೆಚ್ಚೆಚ್ಚು ಪರಿಪಾಲನಾ ಭೇಟಿ ಮಾಡಬೇಕೆಂದು ತೀರ್ಮಾನ ಮಾಡುತ್ತದೆ. ಆದರೆ ಸುಮಾರು ತಿಂಗಳಾದರೂ ಅದನ್ನು ಇನ್ನೂ ಆರಂಭಿಸಿರಲ್ಲ. ಇಲ್ಲಿರುವ ಸನ್ನಿವೇಶಗಳು ಬೇರೆ-ಬೇರೆಯಾದರೂ ಒಂದು ವಿಷಯ ಮಾತ್ರ ಸಾಮಾನ್ಯವಾಗಿದೆ. ಜನರು ನಿರ್ಣಯ ಮಾಡುತ್ತಾರೆ ಆದರೆ ಅದನ್ನು ಕ್ರಿಯೆಯಲ್ಲಿ ಹಾಕಿ ಪೂರ್ತಿ ಮಾಡೋಕೆ ಅವರಿಗೆ ಆಗಲ್ಲ. ಒಂದನೇ ಶತಮಾನದಲ್ಲಿ ಕೊರಿಂಥದಲ್ಲಿದ್ದ ಕ್ರೈಸ್ತರು ಇಂಥದ್ದೇ ಸವಾಲನ್ನು ಎದುರಿಸಿದರು. ಅವರಿಂದ ನಾವು ಯಾವ ಪಾಠ ಕಲಿಯಬಹುದು ಎಂದು ನೋಡೋಣ.

3. ಕೊರಿಂಥದವರು ಯಾವ ನಿರ್ಣಯ ಮಾಡಿದ್ದರು? ಆದರೆ ಏನಾಯಿತು?

3 ಸುಮಾರು ಕ್ರಿ.ಶ. 55 ರಲ್ಲಿ ಕೊರಿಂಥ ಸಭೆಯವರಿಗೆ ಒಂದು ವಿಷಯ ಗೊತ್ತಾಯಿತು. ಅದೇನೆಂದರೆ ಯೆರೂಸಲೇಮ್‌ ಮತ್ತು ಯೂದಾಯದಲ್ಲಿರುವ ಸಹೋದರರು ಕಷ್ಟದಲ್ಲಿದ್ದಾರೆ, ಬಡತನದಿಂದ ನರಳುತ್ತಿದ್ದಾರೆ ಎಂದು ತಿಳಿದುಬಂತು. ಬೇರೆ ಸಭೆಯವರು ಅಲ್ಲಿನವರಿಗೆ ಸಹಾಯ ಮಾಡಲು ಹಣ ಸಂಗ್ರಹಿಸುತ್ತಿದ್ದರು. ಕೊರಿಂಥವರಿಗೆ ತುಂಬ ದಯೆ, ಉದಾರ ಮನೋಭಾವ ಇದ್ದದರಿಂದ ತಾವು ಸಹ ಆ ಸಹೋದರರಿಗೆ ಸಹಾಯ ಮಾಡಬೇಕೆಂದು ನಿರ್ಣಯ ಮಾಡಿದರು ಮತ್ತು ಹೇಗೆ ಸಹಾಯ ಮಾಡಬಹುದೆಂದು ಅಪೊಸ್ತಲ ಪೌಲನನ್ನು ಕೇಳಿದರು. ಆತನು ಇದರ ಬಗ್ಗೆ ಸಭೆಗೆ ಸಲಹೆ-ಸೂಚನೆಗಳನ್ನು ಕಳುಹಿಸಿದನು ಮತ್ತು ಹಣ ಸಂಗ್ರಹಣೆಗಾಗಿ ತೀತನನ್ನು ನೇಮಿಸಿದನು. (1 ಕೊರಿಂ. 16:1; 2 ಕೊರಿಂ. 8:6) ಆದರೆ ಕೆಲವು ತಿಂಗಳ ನಂತರ ಯೆರೂಸಲೇಮಿಗೆ ಬೇರೆ ಸಭೆಗಳ ಕಾಣಿಕೆಗಳನ್ನು ತಗೊಂಡು ಹೋಗುವಾಗ ಕೊರಿಂಥದವರ ಕಾಣಿಕೆ ಇನ್ನೂ ಸಿದ್ಧವಾಗಿರಲಿಲ್ಲ. ಅವರು ನಿರ್ಣಯಿಸಿದಂತೆ ಮಾಡಿಲ್ಲ ಅಂತ ಪೌಲನಿಗೆ ಗೊತ್ತಾಯಿತು.—2 ಕೊರಿಂ. 9:4, 5.

4. ಎರಡನೇ ಕೊರಿಂಥ 8:7, 10, 11 ರಲ್ಲಿ ತಿಳಿಸಿರುವಂತೆ ಕೊರಿಂಥದವರು ಏನು ಮಾಡಬೇಕೆಂದು ಪೌಲನು ಉತ್ತೇಜಿಸಿದನು?

4 ಕೊರಿಂಥದವರು ಒಳ್ಳೇ ನಿರ್ಣಯ ಮಾಡಿದ್ದರು. ಅವರ ಅಚಲ ನಂಬಿಕೆ ಮತ್ತು ಕಷ್ಟದಲ್ಲಿರುವವರಿಗೆ ಸಹಾಯ ಮಾಡಲು ಅವರಿಗಿರುವ ಬಯಕೆ ನೋಡಿ ಪೌಲನು ಅವರನ್ನು ಶ್ಲಾಘಿಸಿದನು. ಆದರೆ ಅವರು ಏನು ಮಾಡಲು ನಿರ್ಣಯಿಸಿದ್ದರೋ ಅದನ್ನು ಮಾಡಿ ಮುಗಿಸುವುದಕ್ಕೂ ಅವರನ್ನು ಉತ್ತೇಜಿಸಿದನು. (2 ಕೊರಿಂಥ 8:7, 10, 11 ಓದಿ.) ಅವರ ಅನುಭವದಿಂದ ನಾವೇನು ಕಲಿಯಬಹುದೆಂದರೆ ಕೆಲವೊಮ್ಮೆ ನಂಬಿಗಸ್ತ ಕ್ರೈಸ್ತರು ಸಹ ನಿರ್ಣಯಿಸಿದಂತೆ ನಡಕೊಳ್ಳಲು ತಪ್ಪಿಹೋಗುತ್ತಾರೆ.

5. ನಾವು ಯಾವ ಪ್ರಶ್ನೆಗಳಿಗೆ ಉತ್ತರ ತಿಳಿಯಲಿದ್ದೇವೆ?

5 ಕೊರಿಂಥದವರಂತೆ ನಾವೂ ಕೆಲವೊಮ್ಮೆ ನಿರ್ಣಯಿಸಿದ್ದನ್ನು ಮಾಡಲು ತಪ್ಪಿಹೋಗಬಹುದು. ಯಾಕೆ? ಯಾಕೆಂದರೆ ನಾವು ಅಪರಿಪೂರ್ಣರು, ಮುಂದೂಡುವ ಸ್ವಭಾವದವರು ಆಗಿದ್ದೇವೆ. ಅಥವಾ ಕೆಲವೊಮ್ಮೆ ಅನಿರೀಕ್ಷಿತ ವಿಷಯಗಳು ನಡೆಯುವುದರಿಂದ ನಾವು ನಿರ್ಣಯಿಸಿದ್ದನ್ನು ಮಾಡೋಕಾಗದೇ ಇರಬಹುದು. (ಪ್ರಸಂ. 9:11; ರೋಮ. 7:18) ಒಂದು ನಿರ್ಣಯ ಮಾಡೋಕೆ ಅಥವಾ ಮಾಡಿರುವ ನಿರ್ಣಯ ಸರಿ ಇದೆಯಾ ಇಲ್ವಾ ಎಂದು ಪರೀಕ್ಷಿಸೋಕೆ ನಾವೇನು ಮಾಡಬಹುದು? ನಾವು ಆರಂಭಿಸಿದ್ದನ್ನು ಚೆನ್ನಾಗಿ ಮಾಡಿ ಮುಗಿಸಲು ಯಾವ ಹೆಜ್ಜೆಗಳು ಸಹಾಯ ಮಾಡುತ್ತವೆ?

ಒಳ್ಳೇ ನಿರ್ಣಯಗಳನ್ನು ಹೇಗೆ ಮಾಡಬಹುದು?

6. ನಮ್ಮ ನಿರ್ಣಯಗಳಲ್ಲಿ ಬದಲಾವಣೆ ಮಾಡಿಕೊಳ್ಳುವ ಅವಶ್ಯಕತೆ ಯಾವಾಗ ಬರುತ್ತದೆ?

6 ಕೆಲವು ಪ್ರಾಮುಖ್ಯ ನಿರ್ಣಯಗಳನ್ನು ನಾವು ಯಾವತ್ತಿಗೂ ಬದಲಾಯಿಸಲ್ಲ. ಉದಾಹರಣೆಗೆ, ಯೆಹೋವನ ಸೇವೆ ಮಾಡಬೇಕೆಂಬ ನಿರ್ಣಯವನ್ನು, ನಮ್ಮ ವಿವಾಹ ಸಂಗಾತಿಗೆ ನಂಬಿಗಸ್ತರಾಗಿರಬೇಕೆಂಬ ನಿರ್ಣಯವನ್ನು ನಾವು ಯಾವತ್ತಿಗೂ ಬದಲಾಯಿಸಲ್ಲ. (ಮತ್ತಾ. 16:24; 19:6) ಆದರೆ ಕೆಲವು ನಿರ್ಣಯಗಳಲ್ಲಿ ಬದಲಾವಣೆ ಮಾಡಿಕೊಳ್ಳುವ ಅವಶ್ಯಕತೆ ಇರುತ್ತದೆ. ಯಾಕೆಂದರೆ ಸನ್ನಿವೇಶಗಳು ಬದಲಾಗುತ್ತಿರುತ್ತವೆ. ಹಾಗಾದರೆ, ಒಳ್ಳೇ ನಿರ್ಣಯಗಳನ್ನು ಮಾಡಲು ಯಾವ ಹೆಜ್ಜೆಗಳು ಸಹಾಯ ಮಾಡುತ್ತವೆ?

7. ನಾವು ಯಾವುದಕ್ಕಾಗಿ ಪ್ರಾರ್ಥಿಸಬೇಕು? ಯಾಕೆ?

7 ವಿವೇಕಕ್ಕಾಗಿ ಪ್ರಾರ್ಥಿಸಿ. “ನಿಮ್ಮಲ್ಲಿ ಯಾವನಿಗಾದರೂ ವಿವೇಕದ ಕೊರತೆಯಿರುವಲ್ಲಿ ಅವನು ದೇವರನ್ನು ಕೇಳಿಕೊಳ್ಳುತ್ತಾ ಇರಲಿ, . . . ಏಕೆಂದರೆ ದೇವರು ಎಲ್ಲರಿಗೆ ಉದಾರವಾಗಿ ಕೊಡುವವನಾಗಿದ್ದಾನೆ” ಎಂದು ಯಾಕೋಬನು ಬರೆಯುವಂತೆ ಯೆಹೋವನು ಪ್ರೇರಿಸಿದನು. (ಯಾಕೋ. 1:5) ಕೆಲವೊಂದು ವಿಷಯಗಳಲ್ಲಿ ‘ನಮ್ಮೆಲ್ಲರಿಗೂ ವಿವೇಕದ ಕೊರತೆ ಇದೆ.’ ಹಾಗಾಗಿ ಒಂದು ನಿರ್ಣಯ ಮಾಡುವಾಗ ಮತ್ತು ಮಾಡಿರುವ ನಿರ್ಣಯ ಬದಲಾಯಿಸಬೇಕಾಗಿ ಬಂದಾಗ ಯೆಹೋವನ ಸಹಾಯಕ್ಕಾಗಿ ಪ್ರಾರ್ಥಿಸಿ. ಆಗ ಸರಿಯಾದ ನಿರ್ಣಯಗಳನ್ನು ಮಾಡಲು ಯೆಹೋವನು ಸಹಾಯ ಮಾಡುತ್ತಾನೆ.

8. ಒಂದು ನಿರ್ಣಯ ಮಾಡುವ ಮುಂಚೆ ನಾವು ಹೇಗೆಲ್ಲಾ ಸಂಶೋಧನೆ ಮಾಡಬೇಕು?

8 ಚೆನ್ನಾಗಿ ಸಂಶೋಧನೆ ಮಾಡಿ. ಇದಕ್ಕಾಗಿ ದೇವರ ವಾಕ್ಯ ನೋಡಿ, ಯೆಹೋವನ ಸಂಘಟನೆಯಿಂದ ಬಂದಿರುವ ಪ್ರಕಾಶನಗಳನ್ನು ಓದಿ ಮತ್ತು ಯಾರು ನಿಮಗೆ ಒಳ್ಳೇ ಸಲಹೆ ಕೊಡುತ್ತಾರೋ ಅಂಥವರ ಹತ್ತಿರ ಮಾತಾಡಿ. (ಜ್ಞಾನೋ. 20:18) ಅದರಲ್ಲೂ, ಉದ್ಯೋಗ ಬದಲಾಯಿಸುವುದರ ಬಗ್ಗೆ, ಬೇರೊಂದು ಪ್ರದೇಶಕ್ಕೆ ಸ್ಥಳಾಂತರಿಸುವುದರ ಬಗ್ಗೆ ಅಥವಾ ಯಾವ ವಿದ್ಯಾಭ್ಯಾಸ ಮಾಡಿದರೆ ಯೆಹೋವನ ಸೇವೆನೂ ಮಾಡಿಕೊಂಡು ಜೀವನ ನಡೆಸುವಷ್ಟು ಹಣನೂ ಸಂಪಾದಿಸಬಹುದು ಅನ್ನುವುದರ ಬಗ್ಗೆ ನಿರ್ಣಯ ಮಾಡುವ ಮುಂಚೆ ಇಂಥ ಸಂಶೋಧನೆ ತುಂಬ ಪ್ರಾಮುಖ್ಯ.

9. ನಿರ್ಣಯಗಳನ್ನು ಮಾಡುವಾಗ ನಮ್ಮ ಉದ್ದೇಶಗಳನ್ನು ಪರೀಕ್ಷಿಸಿಕೊಳ್ಳುವುದರಿಂದ ಯಾವ ಪ್ರಯೋಜನ ಸಿಗುತ್ತದೆ?

9 ನಿಮ್ಮ ಉದ್ದೇಶಗಳನ್ನು ಪರೀಕ್ಷಿಸಿ. ನಾವು ಒಂದು ವಿಷಯವನ್ನು ಯಾಕೆ ಮಾಡುತ್ತೇವೆ ಅನ್ನುವುದು ಯೆಹೋವನಿಗೆ ಮುಖ್ಯ. (ಜ್ಞಾನೋ. 16:2) ನಾವು ಎಲ್ಲಾ ವಿಷಯಗಳಲ್ಲಿ ಪ್ರಾಮಾಣಿಕರಾಗಿರಬೇಕು ಅಂತ ಆತನು ಬಯಸುತ್ತಾನೆ. ಹಾಗಾಗಿ ನಾವು ನಿರ್ಣಯಗಳನ್ನು ಮಾಡುವಾಗ ಅದರ ಹಿಂದಿರುವ ನಿಜವಾದ ಉದ್ದೇಶ ಏನು ಅಂತ ಯೋಚಿಸಬೇಕು. ನಮ್ಮ ಉದ್ದೇಶ ಸರಿ ಇಲ್ಲದಿದ್ದರೆ ನಾವು ನಿರ್ಣಯಿಸಿದ ಪ್ರಕಾರ ನಡಕೊಳ್ಳೋಕೆ ಆಗಲ್ಲ. ಉದಾಹರಣೆಗೆ, ಒಬ್ಬ ಯುವ ಸಹೋದರ ಪಯನೀಯರ್‌ ಸೇವೆ ಮಾಡಬೇಕೆಂದು ನಿರ್ಣಯ ಮಾಡುತ್ತಾನೆ. ಆದರೆ ಸ್ವಲ್ಪ ಸಮಯದ ನಂತರ, ಪ್ರತಿ ತಿಂಗಳು 70 ತಾಸು ಸೇವೆ ಮಾಡಲು ಅವನಿಗೆ ಕಷ್ಟವಾಗುತ್ತದೆ. ಇದರಿಂದ ಪಯನೀಯರ್‌ ಸೇವೆಯಲ್ಲಿ ಅವನು ಸಂತೋಷ ಕಳಕೊಳ್ಳಬಹುದು. ಯೆಹೋವನನ್ನು ಸಂತೋಷಪಡಿಸುವ ಉದ್ದೇಶದಿಂದಲೇ ತಾನು ಪಯನೀಯರ್‌ ಸೇವೆ ಮಾಡುವ ನಿರ್ಣಯ ಮಾಡಿದೆ ಅಂತ ಅವನು ಅಂದುಕೊಂಡಿರಬಹುದು. ಆದರೆ ಅವನ ನಿಜವಾದ ಉದ್ದೇಶ ಅವನ ಹೆತ್ತವರನ್ನೋ ಅಥವಾ ಬೇರೆ ಯಾರನ್ನೋ ಮೆಚ್ಚಿಸುವುದಾಗಿರಬಹುದು.

10. ಬದಲಾವಣೆ ಮಾಡಿಕೊಳ್ಳಲು ಏನು ಅಗತ್ಯ?

10 ಸಿಗರೇಟ್‌ ಸೇದುವುದನ್ನು ಬಿಟ್ಟುಬಿಡಬೇಕು ಎಂದು ನಿರ್ಣಯಿಸಿರುವ ಒಬ್ಬ ಬೈಬಲ್‌ ವಿದ್ಯಾರ್ಥಿಯ ಸನ್ನಿವೇಶ ಪರಿಗಣಿಸಿ. ಮೊದಲಿಗೆ ಕಷ್ಟವಾದರೂ ಅವನು ಒಂದೆರಡು ವಾರ ಸಿಗರೇಟ್‌ ಸೇದುವುದಿಲ್ಲ. ನಂತರ ಅದನ್ನು ಕಂಟ್ರೋಲ್‌ ಮಾಡೋಕ್ಕಾಗದೆ ಮತ್ತೆ ಸೇದಿಬಿಡುತ್ತಾನೆ. ಆದರೆ ಯೆಹೋವನ ಮೇಲಿರುವ ಪ್ರೀತಿ ಮತ್ತು ಆತನನ್ನು ಸಂತೋಷಪಡಿಸಬೇಕೆಂಬ ಬಯಕೆಯಿಂದ ಅವನು ಕೊನೆಗೂ ಆ ದುಶ್ಚಟವನ್ನು ಬಿಟ್ಟುಬಿಡುತ್ತಾನೆ.—ಕೊಲೊ. 1:10; 3:23.

11. ಯಾಕೆ ನಿರ್ದಿಷ್ಟ ಗುರಿಗಳನ್ನು ಇಡಬೇಕು?

11 ನಿರ್ದಿಷ್ಟ ಗುರಿಗಳನ್ನಿಡಿ. ಮಾಡಿದ ನಿರ್ಣಯವನ್ನು ಕ್ರಿಯೆಯಲ್ಲಿ ಹಾಕಲು ನಿರ್ದಿಷ್ಟ ಗುರಿಗಳು ಸಹಾಯ ಮಾಡುತ್ತವೆ. ಉದಾಹರಣೆಗೆ, ಪ್ರತಿ ದಿನ ಬೈಬಲನ್ನು ಓದಬೇಕು ಅಂತ ನಿರ್ಣಯ ಮಾಡಿದ್ದೀರೆಂದು ನೆನಸಿ. ಆದರೆ ಸರಿಯಾಗಿ ಶೆಡ್ಯೂಲ್‌ ಮಾಡದಿದ್ದರೆ ಅದನ್ನು ಮಾಡಕ್ಕಾಗದಿರಬಹುದು.b ಹಿರಿಯರು ಸಭೆಯಲ್ಲಿರುವವರಿಗೆ ಆಗಾಗ ಪರಿಪಾಲನಾ ಭೇಟಿ ಮಾಡಬೇಕು ಅಂತ ನಿರ್ಧರಿಸಿರಬಹುದು. ಆದರೆ ತುಂಬ ಸಮಯವಾದರೂ ಅವರದನ್ನು ಮಾಡಕ್ಕಾಗದೇ ಇರಬಹುದು. ಅವರದನ್ನು ಮಾಡಬೇಕಂದರೆ ಇಂಥ ಪ್ರಶ್ನೆಗಳನ್ನು ಕೇಳಿಕೊಳ್ಳಬೇಕು: “ನಮ್ಮ ಭೇಟಿಯಿಂದ ಹೆಚ್ಚು ಪ್ರಯೋಜನ ಪಡಕೊಳ್ಳುವಂಥ ಸಹೋದರ-ಸಹೋದರಿಯರನ್ನು ನಾವು ಗುರುತಿಸಿದ್ದೇವಾ? ಅವರನ್ನು ಭೇಟಿ ಮಾಡಕ್ಕೆ ನಿರ್ದಿಷ್ಟ ಸಮಯವನ್ನು ಬದಿಗಿಟ್ಟಿದ್ದೇವಾ?”

12. ನಾವು ಏನು ಮಾಡಬೇಕಾಗಬಹುದು ಮತ್ತು ಯಾಕೆ?

12 ಅಸಾಧ್ಯವಾದುದನ್ನು ಬಯಸಬೇಡಿ. ನಮಗಿಷ್ಟ ಆಗಿರೋ ಎಲ್ಲವನ್ನು ಮಾಡುವಷ್ಟು ಸಮಯ ಆಗಲಿ, ಸಂಪತ್ತಾಗಲಿ, ಸಾಮರ್ಥ್ಯವಾಗಲಿ ನಮ್ಮಲ್ಲಿ ಯಾರ ಹತ್ರನೂ ಇಲ್ಲ. ಹಾಗಾಗಿ ಅಸಾಧ್ಯವಾದುದನ್ನು ಬಯಸುವುದು ಬೇಡ, ನ್ಯಾಯಸಮ್ಮತತೆ ತೋರಿಸೋಣ. ನೀವು ಮಾಡಿದ ನಿರ್ಣಯವನ್ನು ಕ್ರಿಯೆಯಲ್ಲಿ ಹಾಕುವುದಕ್ಕೆ ಆಗುತ್ತಿಲ್ಲ ಅಂತ ಗೊತ್ತಾದರೆ ಆ ನಿರ್ಣಯವನ್ನು ಬದಲಾಯಿಸಿ, ಪರವಾಗಿಲ್ಲ. (ಪ್ರಸಂ. 3:6) ನಿರ್ಣಯ ಸರಿ ಇದೆಯಾ ಇಲ್ವಾ ಎಂದು ಪರೀಕ್ಷಿಸಿ, ಅದನ್ನು ಅಗತ್ಯಕ್ಕೆ ತಕ್ಕ ಹಾಗೆ ಹೊಂದಿಸಿಕೊಂಡಾಗ ಅದನ್ನು ಕಾರ್ಯರೂಪಕ್ಕೆ ಹಾಕಬಹುದು ಅಂತ ಅನಿಸಿದರೆ ಮುಂದೆ ಏನು ಮಾಡಬೇಕು? 5 ವಿಷಯಗಳನ್ನು ಮಾಡಬೇಕು. ಅವನ್ನು ಈಗ ನೋಡೋಣ.

ಒಂದು ನಿರ್ಣಯ ಮಾಡುವ ಮುಂಚೆ

  1. ಒಬ್ಬ ಸಹೋದರನು ಬೈಬಲನ್ನು ಮತ್ತು ಕ್ರೈಸ್ತ ಪ್ರಕಾಶನಗಳನ್ನು ಉಪಯೋಗಿಸಿ ಸಂಶೋಧನೆ ಮಾಡುತ್ತಿದ್ದಾನೆ

    1. ವಿವೇಕಕ್ಕಾಗಿ ಪ್ರಾರ್ಥಿಸಿ

  2. 2. ಚೆನ್ನಾಗಿ ಸಂಶೋಧನೆ ಮಾಡಿ

  3. 3. ನಿಮ್ಮ ಉದ್ದೇಶಗಳನ್ನು ಪರೀಕ್ಷಿಸಿ

  4. 4. ನಿರ್ದಿಷ್ಟ ಗುರಿಗಳನ್ನಿಡಿ

  5. 5. ಅಸಾಧ್ಯವಾದುದನ್ನು ಬಯಸಬೇಡಿ

ಒಂದು ನಿರ್ಣಯ ಮಾಡಿದ ನಂತರ

  1. ಒಬ್ಬ ಸಹೋದರನು ತಾನು ಮಾಡಿದ ನಿರ್ಣಯವನ್ನು ಕಾರ್ಯರೂಪಕ್ಕೆ ತರಲು ಬೇಕಾದ ಬಲಕ್ಕಾಗಿ ಪ್ರಾರ್ಥಿಸುತ್ತಿದ್ದಾನೆ

    1. ಬಲಕ್ಕಾಗಿ ಪ್ರಾರ್ಥಿಸಿ

  2. 2. ಯೋಜನೆ ಮಾಡಿ

  3. 3. ನಿಮ್ಮಿಂದಾಗುವಷ್ಟು ಪ್ರಯತ್ನ ಹಾಕಿ

  4. 4. ಸಮಯವನ್ನು ಚೆನ್ನಾಗಿ ಉಪಯೋಗಿಸಿಕೊಳ್ಳಿ

  5. 5. ಪ್ರತಿಫಲದ ಮೇಲೆ ಗಮನ ಇಡಿ

ನಿರ್ಣಯಗಳನ್ನು ಕಾರ್ಯರೂಪಕ್ಕೆ ಹಾಕಲು ಸಹಾಯ ಮಾಡುವ ಹೆಜ್ಜೆಗಳು

13. ನಿರ್ಣಯವನ್ನು ಕಾರ್ಯರೂಪಕ್ಕೆ ಹಾಕಲು ಬೇಕಾದ ಬಲವನ್ನು ಹೇಗೆ ಪಡಕೊಳ್ಳಬಹುದು?

13 ಬಲಕ್ಕಾಗಿ ಪ್ರಾರ್ಥಿಸಿ. ನಿಮ್ಮ ನಿರ್ಣಯವನ್ನು ಕಾರ್ಯರೂಪಕ್ಕೆ ಹಾಕಲು ಬೇಕಾದ “ಬಲವನ್ನು” ದೇವರು ನಿಮಗೆ ಕೊಡುತ್ತಾನೆ. (ಫಿಲಿ. 2:13, NW) ಹಾಗಾಗಿ ಬಲ ಪಡಕೊಳ್ಳಲು ಯೆಹೋವನ ಪವಿತ್ರಾತ್ಮಕ್ಕಾಗಿ ಪ್ರಾರ್ಥಿಸಿ. ನಿಮಗೆ ಉತ್ತರ ಸಿಗುವುದು ತಡವಾಗುತ್ತಿದೆ ಅಂತ ಅನಿಸಿದರೂ ಪ್ರಾರ್ಥನೆ ಮಾಡುವುದನ್ನು ಮುಂದುವರಿಸಿ. ಯಾಕೆಂದರೆ “ಕೇಳುತ್ತಾ ಇರಿ, ಅದು [ಪವಿತ್ರಾತ್ಮ] ನಿಮಗೆ ಕೊಡಲ್ಪಡುವುದು” ಎಂದು ಯೇಸು ಹೇಳಿದ್ದಾನೆ.—ಲೂಕ 11:9, 13.

14. ಜ್ಞಾನೋಕ್ತಿ 21:5 ರಲ್ಲಿರುವ ತತ್ವ ನಿಮ್ಮ ನಿರ್ಣಯವನ್ನು ಕಾರ್ಯರೂಪಕ್ಕೆ ಹಾಕಲು ಹೇಗೆ ಸಹಾಯ ಮಾಡುತ್ತದೆ?

14 ಯೋಜನೆ ಮಾಡಿ. (ಪಾದಟಿಪ್ಪಣಿಯಲ್ಲಿರುವ ಜ್ಞಾನೋಕ್ತಿ 21:5 ಓದಿ.c) ನೀವು ಆರಂಭಿಸಿದ ಯಾವುದೇ ಪ್ರಾಜೆಕ್ಟನ್ನು ಮುಗಿಸಬೇಕಂದರೆ ಅದಕ್ಕಾಗಿ ಒಂದು ಯೋಜನೆ ಮಾಡಬೇಕು. ನಂತರ ಆ ಯೋಜನೆ ಪ್ರಕಾರ ನಡಕೊಳ್ಳಬೇಕು. ಅದೇರೀತಿಯಲ್ಲಿ, ನೀವು ಒಂದು ನಿರ್ಣಯ ಮಾಡಿದಾಗ ಆ ನಿರ್ಣಯವನ್ನು ಕಾರ್ಯರೂಪಕ್ಕೆ ಹಾಕಲು ಏನೇನು ಮಾಡಬೇಕೆಂದು ಪಟ್ಟಿಮಾಡಿ. ದೊಡ್ಡ ಕೆಲಸಗಳನ್ನು ಸಣ್ಣ-ಸಣ್ಣ ಕೆಲಸಗಳಾಗಿ ಭಾಗ ಮಾಡಿ. ಈ ಸಣ್ಣ ಕೆಲಸಗಳನ್ನು ಮಾಡುತ್ತಾ ಹೋದಂತೆ ನಿಮ್ಮ ನಿರ್ಣಯವನ್ನು ಎಷ್ಟರ ಮಟ್ಟಿಗೆ ಕಾರ್ಯರೂಪಕ್ಕೆ ಹಾಕಿದ್ದೀರಿ ಅನ್ನುವುದು ಗೊತ್ತಾಗುತ್ತದೆ. ಪೌಲನು ಕೊರಿಂಥದವರಿಗೆ ತಾನು ಬಂದ ಮೇಲೆ ಒಂದೇ ಸಲಕ್ಕೆ ಹಣ ಸಂಗ್ರಹಿಸಿ ಅಂತ ಹೇಳಲಿಲ್ಲ. ಬದಲಿಗೆ “ಪ್ರತಿ ವಾರದ ಮೊದಲನೆಯ ದಿನದಲ್ಲಿ” ತಮ್ಮ ಕಾಣಿಕೆಯನ್ನು ತೆಗೆದಿಡಲು ಅವರಿಗೆ ಉತ್ತೇಜಿಸಿದನು. (1 ಕೊರಿಂ. 16:2) ದೊಡ್ಡ ಕೆಲಸಗಳನ್ನು ಸಣ್ಣ-ಸಣ್ಣ ಕೆಲಸಗಳಾಗಿ ಭಾಗ ಮಾಡಿದರೆ ನೀವು ಮಾಡಿರುವ ನಿರ್ಣಯವನ್ನು ಸಾಧಿಸಬಹುದು ಎಂಬ ಭರವಸೆಯೂ ಸಿಗುತ್ತದೆ.

15. ಮಾಡಿರುವ ಯೋಜನೆಯನ್ನು ಬರೆದಿಡುವುದರಿಂದ ಏನು ಪ್ರಯೋಜನ ಆಗುತ್ತದೆ?

15 ನೀವು ಮಾಡಿರುವ ಯೋಜನೆಯನ್ನು ಬರೆದಿಟ್ಟುಕೊಂಡರೆ ಅದನ್ನು ಮಾಡಿ ಮುಗಿಸಲು ನಿಮಗೆ ಸುಲಭವಾಗುತ್ತದೆ. (1 ಕೊರಿಂ. 14:40) ಉದಾಹರಣೆಗೆ, ಹಿರಿಯರ ಮಂಡಲಿಯು ತಮ್ಮಲ್ಲೇ ಒಬ್ಬ ಹಿರಿಯನನ್ನು ಆರಿಸಿ, ತಾವು ತೆಗೆದುಕೊಳ್ಳುವ ಎಲ್ಲಾ ನಿರ್ಣಯಗಳನ್ನು, ಅವುಗಳನ್ನು ಕಾರ್ಯರೂಪಕ್ಕೆ ಹಾಕಲು ನೇಮಿಸಲಾದ ಹಿರಿಯರ ಹೆಸರುಗಳನ್ನು ಮತ್ತು ಅದನ್ನು ಮಾಡಿ ಮುಗಿಸಬೇಕಾಗಿರುವ ದಿನಾಂಕವನ್ನು ಬರೆಯಲು ನೇಮಿಸಬೇಕು. ಹಿರಿಯರ ಮಂಡಲಿಗೆ ಕೊಡಲಾಗಿರುವ ಈ ನಿರ್ದೇಶನವನ್ನು ಪಾಲಿಸುವ ಹಿರಿಯರಿಗೆ ತಾವು ಮಾಡುವ ನಿರ್ಣಯಗಳನ್ನು ಕಾರ್ಯರೂಪಕ್ಕೆ ಹಾಕಲು ಸುಲಭವಾಗುತ್ತದೆ. (1 ಕೊರಿಂ. 9:26) ನೀವು ಸಹ ನಿಮ್ಮ ವೈಯಕ್ತಿಕ ಕೆಲಸಗಳಲ್ಲಿ ಇದೇ ರೀತಿ ಮಾಡಬಹುದು. ಉದಾಹರಣೆಗೆ, ಪ್ರತಿದಿನ ಮಾಡಬೇಕಾಗಿರುವ ವಿಷಯಗಳನ್ನು ಪಟ್ಟಿ ಮಾಡಿ ಮತ್ತು ಮೊದಲು ಮಾಡಬೇಕಾಗಿರುವ ವಿಷಯವನ್ನು ಪಟ್ಟಿಯಲ್ಲಿ ಮೊದಲಿಗೆ ಬರೆಯಿರಿ. ಈ ವಿಧಾನ ನೀವು ಆರಂಭಿಸಿದ್ದನ್ನು ಮಾಡಿ ಮುಗಿಸಲಿಕ್ಕೆ ಮತ್ತು ಸ್ವಲ್ಪ ಸಮಯದಲ್ಲೇ ಹೆಚ್ಚು ಮಾಡಲಿಕ್ಕೆ ಸಹಾಯ ಮಾಡುತ್ತದೆ.

16. (ಎ) ನಿಮ್ಮ ನಿರ್ಣಯವನ್ನು ಕಾರ್ಯರೂಪಕ್ಕೆ ಹಾಕಲು ಯಾವುದರ ಅಗತ್ಯವಿದೆ? (ಬಿ) ಈ ವಿಷಯವನ್ನು ರೋಮನ್ನರಿಗೆ 12:11 ಹೇಗೆ ಒತ್ತಿಹೇಳುತ್ತದೆ?

16 ನಿಮ್ಮಿಂದಾಗುವಷ್ಟು ಪ್ರಯತ್ನ ಹಾಕಿ. ನಿಮ್ಮ ಯೋಜನೆಗಳನ್ನು ಕಾರ್ಯರೂಪಕ್ಕೆ ಹಾಕಲು ಮತ್ತು ಅವನ್ನು ಮಾಡಿ ಮುಗಿಸಲು ಸಾಕಷ್ಟು ಪ್ರಯತ್ನ ಹಾಕಬೇಕು. (ರೋಮನ್ನರಿಗೆ 12:11 ಓದಿ.) ಪೌಲನು ತಿಮೊಥೆಯನಿಗೆ, ಉತ್ತಮ ಬೋಧಕನಾಗುವುದರಲ್ಲಿ ‘ತೊಡಗಿಸಿಕೊಳ್ಳುತ್ತಾ ಇರಲು’ ಮತ್ತು ಅದರಲ್ಲಿ ‘ನಿರತನಾಗಿರಲು’ ಸಲಹೆ ಕೊಟ್ಟನು. ಪೌಲನು ಕೊಟ್ಟ ಈ ಸಲಹೆಯನ್ನು ಯೆಹೋವನಿಗಾಗಿ ನಾವು ಮಾಡುವ ಯಾವುದೇ ವಿಷಯದಲ್ಲೂ ಅನ್ವಯಿಸಿಕೊಳ್ಳಬಹುದು.—1 ತಿಮೊ. 4:13, 16.

17. ನಾವು ಮಾಡಬೇಕು ಅಂದುಕೊಂಡಿದ್ದನ್ನು ಮಾಡಿಮುಗಿಸಲು ಎಫೆಸ 5:15, 16 ರಲ್ಲಿರುವ ತತ್ವ ಹೇಗೆ ಸಹಾಯ ಮಾಡುತ್ತದೆ?

17 ಸಮಯವನ್ನು ಚೆನ್ನಾಗಿ ಉಪಯೋಗಿಸಿಕೊಳ್ಳಿ. (ಎಫೆಸ 5:15, 16 ಓದಿ.) ನೀವು ಮಾಡಬೇಕು ಅಂದುಕೊಂಡಿರುವ ಕೆಲಸಕ್ಕೆ ಒಂದು ಸಮಯ ನಿಗದಿಪಡಿಸಿ ಮತ್ತು ಆ ಸಮಯವನ್ನು ಬದಲಿಸಬೇಡಿ. ನಿಮ್ಮ ಕೆಲಸ ಮಾಡಲು ಸೂಕ್ತ ಸಮಯ ಬರಲಿ ಅಂತ ಕಾಯಬೇಡಿ. ಯಾಕೆಂದರೆ ಯಾವತ್ತಿಗೂ ಆ ಸೂಕ್ತ ಸಮಯ ಬರದೇ ಇರಬಹುದು. (ಪ್ರಸಂ. 11:4) ನಿಮ್ಮ ಸಮಯವನ್ನೆಲ್ಲಾ ಅಷ್ಟೇನೂ ಪ್ರಾಮುಖ್ಯವಲ್ಲದ ವಿಷಯಗಳಿಗೆ ಉಪಯೋಗಿಸಬೇಡಿ. ಈ ರೀತಿ ಸಮಯನೆಲ್ಲಾ ಹಾಳುಮಾಡಿದರೆ ಹೆಚ್ಚು ಪ್ರಾಮುಖ್ಯ ವಿಷಯಗಳನ್ನು ಮಾಡಲು ನಿಮಗೆ ಬೇಕಾದಷ್ಟು ಸಮಯ-ಶಕ್ತಿ ಇರಲ್ಲ. (ಫಿಲಿ. 1:10) ನಿಮ್ಮ ಕೆಲಸಕ್ಕೆ ಯಾರೂ ಅಡಚಣೆ ಮಾಡದಂಥ ಸಮಯವನ್ನು ಆರಿಸಿಕೊಳ್ಳಿ. ನೀವು ಕೆಲಸ ಮಾಡುವಾಗ ಮಧ್ಯದಲ್ಲಿ ಅಡಚಣೆ ಮಾಡಬಾರದೆಂದು ಬೇರೆಯವರಿಗೆ ತಿಳಿಸಿ. ನಿಮ್ಮ ಮೊಬೈಲ್‌ ಆಫ್‌ ಮಾಡಿದರೆ ಅಥವಾ ನಿಮಗೆ ಬಂದ ಮೆಸೆಜ್‌ ಅಥವಾ ಇ-ಮೇಲನ್ನು ಆಮೇಲೆ ನೋಡಕ್ಕೆ ಸಮಯ ಮಾಡಿಕೊಂಡರೆ ಚೆನ್ನಾಗಿರುತ್ತದೆ.d

18-19. ನೀವು ಅಂದುಕೊಂಡಿದ್ದನ್ನು ಸಾಧಿಸುವುದಕ್ಕೆ ಕಷ್ಟವಾದರೂ ಅದನ್ನು ಬಿಟ್ಟುಬಿಡದೆ ಪ್ರಯತ್ನವನ್ನು ಮುಂದುವರಿಸುವುದಕ್ಕೆ ಯಾವುದು ಸಹಾಯ ಮಾಡುತ್ತದೆ?

18 ಪ್ರತಿಫಲದ ಮೇಲೆ ಗಮನ ಇಡಿ. ನೀವು ತಗೊಂಡ ನಿರ್ಣಯದ ಪ್ರತಿಫಲವನ್ನು ಪ್ರಯಾಣ ಮಾಡಿ ಗುರಿ ತಲುಪುವುದಕ್ಕೆ ಹೋಲಿಸಬಹುದು. ನೀವು ಗುರಿಯನ್ನು ಮುಟ್ಟಲೇಬೇಕು ಅಂತಿದ್ದರೆ, ಹೋಗುವ ದಾರಿಯಲ್ಲಿ ತಡೆಗಳಿದ್ದರೂ ಬೇರೊಂದು ದಾರಿ ಹಿಡಿದು ನಿಮ್ಮ ಗುರಿ ಮುಟ್ಟುತ್ತೀರಿ. ಅದೇರೀತಿ, ನಾವು ತಗೊಂಡ ನಿರ್ಣಯದಿಂದ ಸಿಗುವ ಪ್ರತಿಫಲದ ಮೇಲೆ ಗಮನ ಇಟ್ಟರೆ ಅದನ್ನು ಕಾರ್ಯರೂಪಕ್ಕೆ ಹಾಕಲು ಪ್ರಯತ್ನಿಸುವಾಗ ಯಾವುದೇ ಅಡ್ಡಿ-ತಡೆ ಬಂದರೂ ಆ ನಿರ್ಣಯವನ್ನು ಕೈಬಿಡುವುದಿಲ್ಲ.—ಗಲಾ. 6:9.

19 ಒಳ್ಳೇ ನಿರ್ಣಯಗಳನ್ನು ಮಾಡುವುದು ಕಷ್ಟ ಮತ್ತು ಅವುಗಳನ್ನು ಕಾರ್ಯರೂಪಕ್ಕೆ ಹಾಕುವುದಂತೂ ಒಂದು ದೊಡ್ಡ ಸವಾಲೇ. ಆದರೆ ಯೆಹೋವನ ಸಹಾಯದಿಂದ ನೀವು ಆರಂಭಿಸಿದ್ದನ್ನು ಮಾಡಿ ಮುಗಿಸಕ್ಕೆ ಬೇಕಾದ ವಿವೇಕ ಮತ್ತು ಬಲ ನಿಮಗೆ ಸಿಗುತ್ತದೆ.

ನಿಮ್ಮ ಉತ್ತರವೇನು?

  • ನಾವು ಒಂದು ನಿರ್ಣಯ ಮಾಡಿದ ಮೇಲೆ ಯಾವ ಸವಾಲು ನಮಗೆ ಎದುರಾಗಬಹುದು?

  • ನಿರ್ಣಯಗಳನ್ನು ಮಾಡಲು ಮತ್ತು ಮಾಡಿದ ನಿರ್ಣಯಗಳನ್ನು ಪರೀಕ್ಷಿಸಲು ಯಾವ ಹೆಜ್ಜೆಗಳು ಸಹಾಯ ಮಾಡುತ್ತವೆ?

  • ನಾವು ಆರಂಭಿಸಿದ್ದನ್ನು ಚೆನ್ನಾಗಿ ಮಾಡಿ ಮುಗಿಸಲು ಯಾವ ಹೆಜ್ಜೆಗಳು ಸಹಾಯ ಮಾಡುತ್ತವೆ?

ಗೀತೆ 45 ಮುನ್ನಡೆ!

a ನೀವು ಯಾವುದಾದರೂ ನಿರ್ಣಯ ಮಾಡಿದ ನಂತರ ‘ಯಾಕಪ್ಪಾ ಇಂಥ ನಿರ್ಣಯ ಮಾಡಿದೆ?’ ಅಂತ ಪಶ್ಚಾತ್ತಾಪಪಟ್ಟಿದ್ದೀರಾ? ಅಥವಾ ಕೆಲವೊಮ್ಮೆ ಒಳ್ಳೇ ನಿರ್ಣಯಗಳನ್ನು ಮಾಡಲು ಮತ್ತು ಅದನ್ನು ಕ್ರಿಯೆಯಲ್ಲಿ ಹಾಕಲು ನಿಮಗೆ ಕಷ್ಟ ಆಗಿದೆಯಾ? ಇಂಥ ಸವಾಲುಗಳನ್ನು ನಿಭಾಯಿಸಲು ಮತ್ತು ಆರಂಭಿಸಿದ ಕೆಲಸವನ್ನು ಮಾಡಿ ಮುಗಿಸಲು ಈ ಲೇಖನ ಸಹಾಯ ಮಾಡುತ್ತದೆ.

b ಬೈಬಲನ್ನು ಪ್ರತಿದಿನ ಓದಲು ನೀವು ಯೋಜನೆ ಮಾಡಿದ್ದರೆ ಅದಕ್ಕೆ ಸಹಾಯ ಮಾಡುವಂಥ “ಬೈಬಲ್‌ ವಾಚನದ ಶೆಡ್ಯೂಲ್‌” jw.org®ನಲ್ಲಿ ಲಭ್ಯವಿದೆ. ಇದಕ್ಕಾಗಿ ಪ್ರಕಾಶನಗಳು > ಪುಸ್ತಕಗಳು ಮತ್ತು ಕಿರುಹೊತ್ತಗೆಗಳು ನೋಡಿ.

c “ಶ್ರಮಶೀಲರಿಗೆ ತಮ್ಮ ಯೋಜನೆಗಳಿಂದ ಸಮೃದ್ಧಿ.”—ಜ್ಞಾನೋಕ್ತಿ 21:5 NW.

d ಸಮಯವನ್ನು ಚೆನ್ನಾಗಿ ಉಪಯೋಗಿಸಿಕೊಳ್ಳುವುದು ಹೇಗೆಂದು ತಿಳಿಯಲು 2014 ರ ಏಪ್ರಿಲ್‌-ಜೂನ್‌ ಎಚ್ಚರ! ಪತ್ರಿಕೆಯಲ್ಲಿರುವ “ನಿಮ್ಮ ಸಮಯ ನಿಮ್ಮ ಕೈಯಲ್ಲಿ” ಎಂಬ ಲೇಖನ ಮತ್ತು ಏಪ್ರಿಲ್‌ 2010 ರ ಎಚ್ಚರ! ಪತ್ರಿಕೆಯಲ್ಲಿ ಬಂದಿರುವ “20 ವೇಸ್‌ ಟು ಕ್ರಿಯೇಟ್‌ ಮೋರ್‌ ಟೈಮ್‌” (ಇಂಗ್ಲಿಷ್‌) ಲೇಖನ ನೋಡಿ.

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ