ನಮ್ಮ ವೈಯಕ್ತಿಕ ಪ್ರಯತ್ನಕ್ಕೆ ಅನುಗುಣ ಪ್ರಮಾಣದಲ್ಲಿ ಕೊಯ್ಯುವುದು
1 ಯೆಹೋವ ದೇವರು ಮಾನವ ಕುಲಕ್ಕೆ ತನ್ನ ಪ್ರೀತಿಯನ್ನು ಅನೇಕ ವಿಧಗಳಲ್ಲಿ ಪ್ರದರ್ಶಿಸಿದ್ದಾನೆ. ಯೇಸು ದೇವರ ಅತಿಶಯ ಪ್ರೀತಿಯನ್ನು ಎತ್ತಿಹೇಳುತ್ತಾ, ಕೂಡಿಬಂದ ಜನ ಸಮುದಾಯಕ್ಕೆ ಅಂದದ್ದು: “ಆತನು ಕೆಟ್ಟವರ ಮೇಲೆಯೂ ಒಳ್ಳೆಯವರ ಮೇಲೆಯೂ ತನ್ನ ಸೂರ್ಯನು ಮೂಡುವಂತೆ ಮಾಡುತ್ತಾನೆ; ನೀತಿವಂತರ ಮೇಲೆಯೂ ಅನೀತಿವಂತರ ಮೇಲೆಯೂ ಮಳೆ ಸುರಿಸುತ್ತಾನೆ.” (ಮತ್ತಾ. 5:43-48) ಇನ್ನೊಂದು ಸಂದರ್ಭದಲ್ಲಿ ಯೇಸು, ತನ್ನ ತಂದೆಯ ಅತಿ ಮಹತ್ತಾದ ಪ್ರೀತಿಯ ಸೂಚಕವನ್ನು—ನಮ್ಮ ರಕ್ಷಣೆಗಾಗಿ ಆತನು ಕೊಟ್ಟ ತನ್ನ ಏಕಜಾತ ಪುತ್ರನ ಬಲಿದಾನವನ್ನು—ಗುರುತಿಸಿಕೊಟ್ಟನು. (ಯೋಹಾ. 3:16) ತನ್ನನ್ನು ಆಲೈಸುವವರು ಯೆಹೋವನ ಪ್ರೀತಿಗೆ ಗಣ್ಯತೆಯಿಂದ ಪ್ರತಿಕ್ರಿಯಿಸುವಂತೆ ಯೇಸು ಬೋಧಿಸಿದನು. ನಾವು ಅದನ್ನು ಮಾಡಲು ಪ್ರಯತ್ನ ಮಾಡುತ್ತೇವೂ?
2 ಪೂರ್ಣ ಗಣ್ಯತೆಯನ್ನು ವ್ಯಕ್ತಪಡಿಸಬೇಕಾದರೆ ಮತ್ತು ಯೆಹೋವನ ಪ್ರೀತಿಯಿಂದ ಬಾಳುವ ಪ್ರಯೋಜನವನ್ನು ಹೊಂದಬೇಕಾದರೆ, ನಾವಾತನನ್ನು ತಿಳಿಯಲೇಬೇಕು. (ಯೋಹಾ. 17:3) ಆತನನ್ನು ಸ್ವೀಕರಣೀಯವಾಗಿ ಸೇವಿಸುವ ವಿಧಾನದ ಕುರಿತು ನಮಗೆ ಸೂಚನೆಯೂ ಮಾರ್ಗದರ್ಶನೆಯೂ ಬೇಕು. ತನ್ನ ಪ್ರೇರಿತ ವಾಕ್ಯವಾದ ಬೈಬಲನ್ನು ಕೊಟ್ಟ ಮೂಲಕ ಯೆಹೋವನು ನಮ್ಮೆಡೆಗೆ ತನ್ನ ಪ್ರೀತಿಯನ್ನು ಪ್ರದರ್ಶಿಸಿದ್ದಾನೆ ಮತ್ತು ಆತನು ಎಬ್ಬಿಸಿರುವ ಆಶ್ಚರ್ಯಕರ ಸಂಸ್ಥೆಯ ಮೂಲಕ ನಾವು ಸೂಚನೆಯನ್ನೂ ಉಪದೇಶವನ್ನೂ ಪಡೆಯುತ್ತೇವೆ. (ಮತ್ತಾ. 24:45-47; 2 ತಿಮೊ. 3:16, 17) ಯೆಹೋವನ ಸಮರ್ಪಿತ ಜನರೋಪಾದಿ ನಾವಾತನ ಮಾರ್ಗದ ಕುರಿತು ಕಲಿಸಲ್ಪಟ್ಟಿದ್ದೇವೆ. ಆದರೆ ನಮ್ಮ ವೈಯಕ್ತಿಕ ಪ್ರಯತ್ನದ ಮೂಲಕ ನಾವು ಯೆಹೋವನ ಪ್ರೀತಿಯನ್ನು ಗಣ್ಯಮಾಡುತ್ತೇವೆಂದು ತೋರಿಸಿ ಕೊಡುತ್ತೇವೋ? ಆತನನ್ನು ಮೆಚ್ಚಿಸುವುದಕ್ಕಾಗಿ ನಾವಾತನ ಸೂಚನೆಯನ್ನು ಪಾಲಿಸುತ್ತಾ, ಆ ಮೂಲಕ ನಮಗೂ ಪ್ರಯೋಜನ ತರುತ್ತಿದ್ದೇವೋ? (ಯೆಶಾ. 48:17; ಯಾಕೋ. 1:22) 1 ಕೊರಿಂಥ 3:8ರಲ್ಲಿ ಅಪೊಸ್ತಲ ಪೌಲನು ಬರೆದದ್ದು: “ನೆಡುವವನೂ ನೀರು ಹೊಯ್ಯುವನೂ ಒಂದೇ ಆಗಿದ್ದಾರೆ. ಆದರೂ ಪ್ರತಿಯೊಬ್ಬನಿಗೆ ಅವನವನ ಕಷ್ಟಕ್ಕೆ ತಕ್ಕ ಹಾಗೆ ಕೂಲಿಯು ದೊರೆಯುವದು.”
3 ಹೌದು, ದೇವರು ನಮ್ಮಿಂದ ಮಾಡಲು ಬಯಸುವುದನ್ನು ನಡಿಸಲು ನಾವು ಕೆಲಸ ಮಾಡಬೇಕು. ಎಲ್ಲರೂ ಒಂದೇ ಗತಿಯಲ್ಲಿ ಆತ್ಮಿಕ ಪ್ರಗತಿಯನ್ನು ಮಾಡುವುದಿಲ್ಲ. ನಮ್ಮ ಪ್ರಗತಿಯ ಮೇಲೆ ಪ್ರಭಾವ ಬೀರುವ ಅನೇಕ ಸಂಗತಿಗಳು ಅಲ್ಲಿವೆ, ಮತ್ತು ನಿರಾಶಕರ ಹೋಲಿಕೆಗಳನ್ನು ಮಾಡುವುದು ಅವಿವೇಕತನ. ಆದರೂ, ನಾವು ಮಾಡುವ ವೈಯಕ್ತಿಕ ಪ್ರಯತ್ನವು ಅತ್ಯಂತ ಮಹತ್ವದ್ದು. ಸಂಸ್ಥೆಗೆ ಹತ್ತಿರವಾಗಿ ಎಳೆಯುವಂತೆ ನಾವೇನು ಮಾಡಸಾಧ್ಯವಿದೆ? ಕ್ರೈಸ್ತರಾದ ನಮ್ಮ ವೈಯಕ್ತಿಕ ಜವಾಬ್ದಾರಿಕೆಗಳನ್ನು ಸ್ವೀಕರಿಸುವುದರಲ್ಲಿ ಪ್ರಗತಿ ಮಾಡುವ ಕ್ಷೇತ್ರಗಳಿವೆಯೋ? ಸಭಾ ಚಟುವಟಿಕೆಗಳಿಗೆ ಒಳ್ಳೇ ಬೆಂಬಲವನ್ನು ಕೊಡುವರೇ ಯಾವ ಪ್ರಯತ್ನಗಳು ಬೇಕಾಗಿವೆ? ಸಂಸ್ಥೆಯು ನಮಗೆ ಉಪದೇಶಿಸುವ ವಿಷಯಗಳನ್ನು ಅನ್ವಯಿಸಿಕೊಳ್ಳುವ ಅಗತ್ಯವು ನಮಗಿದೆಯೇ?—1 ತಿಮೊ. 4:16.
ನಂಬಿಗಸ್ತರನ್ನು ಅನುಕರಿಸು
4 ನಂಬಿಗಸ್ತ ಸಹೋದರ ಮತ್ತು ಸಹೋದರಿಯರಿಂದ ರಾಜ್ಯದ ಸುವಾರ್ತೆಯು ದಶಮಾನಗಳಿಂದ ಸಾರಲ್ಪಟ್ಟಿದೆ. ಈ ನಂಬಿಗಸ್ತರು, ಪೌಲನಂತೆ, ಅನುಕರಣಾ ಪಾತ್ರರು. (1 ಕೊರಿ: 11:1) ಅವರು ದೇವರ ಪ್ರೀತಿಗೆ ಪ್ರತಿಕ್ರಿಯೆ ತೋರಿಸಿದ್ದರು ಮತ್ತು ತಮ್ಮ ಪರಿಶ್ರಮದ ಕೆಲಸದಿಂದಾಗಿ ಮತ್ತು ಬೈಬಲ್ ಸೂಚನೆಗಳನ್ನು ಅನುಸರಿಸುವ ವೈಯಕ್ತಿಕ ಯತ್ನಗಳಿಂದಾಗಿ ಅನೇಕ ಪ್ರಯೋಜನಗಳನ್ನು ಕೊಯ್ದಿದ್ದಾರೆ. ಸಭೆಯಲ್ಲಿನ ಕ್ರಿಯಾಶೀಲ ಕೆಲಸಗಾರರ ಒಂದು ದೃಢವಾದ ತಿರುಳಾಗಿರುವ ಅವರು, ವೈಯಕ್ತಿಕ ಜವಾಬ್ದಾರಿಕೆಯಿಂದ ಜಾರಿಕೊಳ್ಳದವರಾಗಿದ್ದಾರೆ. ಅವರ ವ್ಯಕ್ತಿಪರ ದುಡಿಮೆಗಳ ಫಲಗಳನ್ನು ನಾವು ಕಾಣ ಸಾಧ್ಯವಿದೆ.—ರೋಮಾ. 1:13; 2 ಕೊರಿ. 3:1-3.
5 ಈಗ ಸಾವಿರಾರು ಸಂಖ್ಯೆಯಲ್ಲಿ ಹೊಸಬರು ಪ್ರತಿ ವರ್ಷ ಸಂಸ್ಥೆಯೊಳಗೆ ಬರುತ್ತಿದ್ದಾರೆ. (ಯೆಶಾ. 60:8) ಆತ್ಮಿಕ ರೀತಿಯಲ್ಲಿ ಬಲಿತವರಾಗುವಂತೆ ಕೆಲಸ ನಡಿಸಲು ಅವರೂ ಗಂಭೀರ ಪ್ರಯತ್ನ ಮಾಡುತ್ತಾರೆ ಮತ್ತು ಸಾರುವ ಕಾರ್ಯದಲ್ಲಿ ಅವರ ಹುರುಪು ಪ್ರಶಂಸೆಗೆ ಯೋಗ್ಯವು. ಅವರು, ಯೆಹೋವನ ಸೇವೆಯಲ್ಲಿ ಕಷ್ಟಪಟ್ಟು ದುಡಿಯುವವರನ್ನು ಆತನು ಹೇಗೆ ಆಶೀರ್ವದಿಸುತ್ತಾನೆಂದು ಕಾಣುವುದರಿಂದ, ಪ್ರಯೋಜನ ಹೊಂದುತ್ತಾರೆ. ಬಲಿತ ಸಹೋದರ ಮತ್ತು ಸಹೋದರಿಯರ ಮಾದರಿಯು ಹೊಸಬರಿಗೆ, ಇದು ಕೈಯನ್ನು ಸಡಿಲು ಬಿಡುವ ಅಥವಾ ದೇವರಿಗೆ ನಮ್ಮ ಸೇವೆಯನ್ನು ನಿಲ್ಲಿಸುವ ಸಮಯವಲ್ಲವೆಂಬದನ್ನು ಗಣ್ಯಮಾಡಲು ನೆರವಾಗುತ್ತದೆ. ಹೊಸಬರಾಗಲಿ, ಅನುಭವಸ್ಥ ಪ್ರಚಾರಕರಾಗಿರಲಿ, ವೈಯಕ್ತಿಕ ಕ್ರೈಸ್ತ ಜವಾಬ್ದಾರಿಕೆಗಳನ್ನು ಸ್ವೀಕರಿಸುತ್ತಾ ಮತ್ತು ಎಲ್ಲಾ ದೇವಪ್ರಭುತ್ವ ಒದಗಿಸುವಿಕೆಗಳ ಪ್ರಯೋಜನವನ್ನು ತಕ್ಕೊಳ್ಳುತ್ತಾ, ನಾವು ಆತ್ಮಿಕವಾಗಿ ಬೆಳೆಯುವುದನ್ನು ಮುಂದರಿಸುತ್ತೇವೋ?
ನಾವು ಕಲಿಯುವುದನ್ನು ಅನ್ವಯಿಸುವುದು
6 ನಾವು ‘ಕೆಲಸವನ್ನು ನಡಿಸುವವ’ ರಾಗಿರಬೇಕೆಂದು ಯಾಕೋಬನು ಬರೆದ ಬಹು ಮುಂಚೆಯೇ, ಮೋಶೆ ಯೆಹೂದ್ಯರಿಗೆ ಅಂದದ್ದು: “ಈ ಮಾತುಗಳನ್ನು ನೀವು ಅನ್ವಯಿಸಿಕೊಳ್ಳಬೇಕು.” (ಯಾಕೋ. 1:25; ಧರ್ಮೋ. 11:18) ಹೀಗೆ, ವಾಕ್ಯದ ಜ್ಞಾನವು ಮಾತ್ರವೇ ಸಾಲದು. ಯೆಹೋವನಿಗೆ ವಿಧೇಯತೆಯಲ್ಲಿ ಧರ್ಮಶಾಸ್ತ್ರದ ಮಾತುಗಳನ್ನು ಅನ್ವಯಿಸುವ ಅಗತ್ಯ ಯೆಹೂದ್ಯರಿಗಿತ್ತು. ಈ ಮೂಲ ತತ್ವವು ಒಂದೇ ಅಗಿ ಇನ್ನೂ ಉಳಿದದೆ. ದೇವ ಪುತ್ರನಾದ ಯೇಸುವಿಗೆ ವಿಧೇಯತೆಯ ಮಹತ್ವ ತಿಳಿದಿತ್ತು ನಿಶ್ಚಯ. (ಯೋಹಾ. 8:28) ಅವನು ಮತ್ತಾಯ 7:24ರಲ್ಲಿ ಹೇಳಿದ್ದು: “ನನ್ನ ಮಾತುಗಳನ್ನು ಕೇಳಿ ಅವುಗಳಂತೆ ನಡಿಯುವವನು ಬುದ್ಧಿಯುಳ್ಳ ಮನುಷ್ಯನನ್ನು ಹೋಲುವನು.”
7 ಸರ್ಕಿಟ್ ಸಮ್ಮೇಳನಗಳಲ್ಲಿ ನಾವೇನನ್ನು ಕಲಿಯುತ್ತೇವೋ ಅವನ್ನು ಅನ್ವಯಿಸುತ್ತೇವೋ? ಎಚ್ಚರವಾಗಿದ್ದು, ಸ್ವಸ್ಥಚಿತ್ತರಾಗಿ ಉಳಿಯುವುದು ಅಷೇಕ್ಟೆ ಮಹತ್ವವೆಂಬದನ್ನು ನಾವು ಗಣ್ಯಮಾಡುತ್ತೇವೋ? ಸೈತಾನನಿಂದ ಹಾಕಲ್ಪಡುವ ಕುಶಲ ಪಾಶಗಳಿಗೆ ಮತ್ತು ಹಲ್ಲೆಗಳಿಗೆ ನಾವು ಎಚ್ಚತ್ತಿರುವೆವೋ? ಸಭೆಯಲ್ಲಿ ಆತ್ಮಿಕ ಮತ್ತು ನೈತಿಕ ಶುದ್ಧತೆಯ ಅಗತ್ಯದ ಕುರಿತು ಸಂಸ್ಥೆಯಿಂದ ನಮಗೆ ಪದೇಪದೇ ಕೊಡಲ್ಪಡುವ ಸೂಚನೆ ಮತ್ತು ಎಚ್ಚರಗಳನ್ನು ನಾವು ಗಣ್ಯಮಾಡುತ್ತೇವೋ? ನಾವೇನನ್ನು ಕೇಳುತ್ತೇವೋ ಅದನ್ನು ನಾವು ವೈಯಕ್ತಿಕವಾಗಿ ಎಷ್ಟರ ಮಟ್ಟಿಗೆ ಅನ್ವಯಿಸಿಕೊಳ್ಳುತ್ತೇವೆ?—ಯಾಕೋ. 1:23-25.
8 ಸದ್ಯದ ವಿಶೇಷ ಸಮ್ಮೇಳನ ದಿನದ ಕಾರ್ಯಕ್ರಮವು, ಯೆಹೋವನು ಪರಿಶುದ್ಧನಿರುವಂತೆ ನಾವೂ ಪರಿಶುದ್ಧರಾಗಿರುವ ಅಗತ್ಯವನ್ನು ಒತ್ತಿಹೇಳುತ್ತದೆ. (1 ಪೇತ್ರ 1:14-16) ಪರಿಶುದ್ಧತೆ ಎಂದರೆ ಧಾರ್ಮಿಕ ಶುದ್ಧತೆ ಅಥವಾ ನೈರ್ಮಲ್ಯ, ಪಾವಿತ್ರ್ಯತೆ ಆಗಿದೆ. ಅದು ದೇವರ ಸೇವೆಗಾಗಿ ಮೀಸಲಾಗಿಡಲ್ಪಟ್ಟ ಒಂದು ಸ್ಥಿತಿಯನ್ನು ಸೂಚಿಸುತ್ತದೆ. ಸುವಾರ್ತೆಯ ಶುಶ್ರೂಷೆಯು ನಮ್ಮ ವಶಕ್ಕೆ ಕೊಡಲ್ಪಟ್ಟಿದೆ. ಆದ್ದರಿಂದ, ದೇವರ ಪವಿತ್ರ ಸತ್ಯ ವಾಕ್ಯವನ್ನು ಒಯ್ಯಲು ಯೋಗ್ಯರಾಗಿರುವಂತೆ ನಾವು ಆತ್ಮಿಕವಾಗಿ, ನೈತಿಕವಾಗಿ ಮತ್ತು ದೈಹಿಕವಾಗಿ ಶುದ್ಧರಾಗಿರತಕ್ಕದ್ದು. ಇದಕ್ಕಾಗಿ, ಎಂದಿಗಿಂತ ಹೆಚ್ಚಿನ ಲಕ್ಷ್ಯವನ್ನು ನಮ್ಮ ಕಡೆಗೆ ಕೊಡುವ ಅಗತ್ಯ ಅಲ್ಲಿದೆ. (ಇಬ್ರಿ. 2:1) ಹೀಗೆ ಮಾಡಿದರೆ, ನಮ್ಮ ವೈಯಕ್ತಿಕ ಪ್ರಯತ್ನಕ್ಕೆ ಅನುಗುಣ ಪ್ರಮಾಣದಲ್ಲಿ, ಆಶೀರ್ವಾದಗಳನ್ನು ಕೊಯ್ಯುವೆವು.
ವೈಯಕ್ತಿಕ ಅಧ್ಯಯನದಿಂದ ಪ್ರಯೋಜನ
9 ವೈಯಕ್ತಿಕ ಅಧ್ಯಯನವು ಒಂದು ಬಲವಾದ ನಂಬಿಕೆಯನ್ನು ಕಟ್ಟಲು ನಮಗೆ ನೆರವಾಗುತ್ತದೆ ಮತ್ತು ಸತ್ಯಕ್ಕಾಗಿ ನಮ್ಮ ಗಣ್ಯತೆಯನ್ನು ಆಳಗೊಳಿಸುತ್ತದೆ. ಅದು ನಮಗೆ ಆತ್ಮ ವಿಶ್ವಾಸವನ್ನು ಕೊಡುತ್ತದೆ ಮತ್ತು ಅಧಿಕಾರದಿಂದ ಮಾತಾಡಲು ಸನ್ನದ್ಧಗೊಳಿಸುತ್ತದೆ. ನಮಗೆ ಒಳನೋಟವನ್ನೂ ವಿವೇಚನೆಯನ್ನೂ ಕೊಟ್ಟು, ಹೊಸ ವ್ಯಕ್ತಿತ್ವವನ್ನು ಧರಿಸಿಕೊಳ್ಳಲು ಅದು ಸಹಾಯ ಮಾಡುತ್ತದೆ. (ಕೊಲೊ. 1:9-11) ಆದರೂ, ಫಲದಾಯಕ ಅಧ್ಯಯನಕ್ಕೆ ಸಮಯ ಮತ್ತು ಪ್ರಯತ್ನ ಬೇಕು, ಮತ್ತು ನಿಷ್ಕೃಷ್ಟ ಜ್ಞಾನ ಮತ್ತು ಆತ್ಮಿಕ ಗಹನತೆಯನ್ನು ಗಳಿಸಲು ಯಾವ ಸೀಳುದಾರಿಯೂ ಇಲ್ಲ. ಅಧ್ಯಯನಕ್ಕೆ ನಾವೆಷ್ಟು ಪ್ರಯತ್ನ ಹಾಕುತ್ತೇವೋ ಅಷ್ಟೇ ಫಲವನ್ನು ಹೊರತೆಗೆಯುತ್ತೇವೆ.—2 ಕೊರಿ. 9:6, 7; ಗಲಾ. 6:7.
10 ಸಭಾ ಕೂಟಗಳನ್ನು ತಯಾರಿಸಲು ಪ್ರತೀ ವಾರ ನಾವು ಸಾಕಷ್ಟು ಸಮಯವನ್ನು ಬದಿಗಿಡುತ್ತೇವೋ? ಯೆಹೋವನು ನಂಬಿಗಸ್ತನೂ ವಿವೇಕಿಯೂ ಆದ ಆಳಿನ ಮೂಲಕ ಒದಗಿಸುವ ಆತ್ಮಿಕ ಆಹಾರಕ್ಕಾಗಿ ನಾವು ಗಣ್ಯತೆ ತೋರಿಸುವ ಒಂದು ಮಾರ್ಗವು ಇದಾಗಿದೆ. ಕೂಟಗಳಿಗಾಗಿ ಯೋಗ್ಯ ತಯಾರಿಯು, ದೇವರ ವಾಕ್ಯದ ವಾಚನ ಮತ್ತು ಅಧ್ಯಯನದ ಕಾಲತಖ್ತೆಗೆ ಅಂಟಿಕೊಳ್ಳಲು ನಮಗೆ ಸಹಾಯ ಮಾಡುತ್ತದೆ. ದೇವಪ್ರಭುತ್ವ ಶುಶ್ರೂಷೆ ಶಾಲೆಯ ಕಾರ್ಯಕ್ರಮದಲ್ಲಿ ಕೊಡಲಾದ ಬೈಬಲ್ ವಾಚನವನ್ನು ಮಾಡಲು ನಾವು ಪ್ರತೀ ವಾರ ಸಮಯವನ್ನು ಬದಿಗಿಡುತ್ತೇವೋ? ಆ ಸಮಾಚಾರವನ್ನು ಓದಲು ಮತ್ತು ಮನನ ಮಾಡಲು ಪ್ರತಿ ದಿನ ತಗಲುವ ಸಮಯ ಕೆಲವು ನಿಮಿಷ ಮಾತ್ರ. ಸೇವಾ ಕೂಟವು, ನಮ್ಮ ಬಹಿರಂಗ ಶುಶ್ರೂಷೆಯನ್ನು ಪರಿಣಾಮಕಾರಿ ಮಾಡುವ ವಿಧಾನಗಳಿಗೆ, ನಮ್ಮನ್ನು ಎಚ್ಚರವಿರುವಂತೆ ಮಾಡುತ್ತದೆ. ಈ ಸಮಾಚಾರವನ್ನು ಶುಶ್ರೂಷೆಯಲ್ಲಿ ಹೇಗೆ ಉಪಯೋಗಿಸ ಬಹುದೆಂಬದಕ್ಕೆ ವಿಶೇಷ ಲಕ್ಷ್ಯಕೊಡುತ್ತಾ, ನಾವು ತಯಾರಿಸುತ್ತೇವೋ? ಮತ್ತು ಅದನ್ನು ಆ ಕೂಡಲೇ ಕಾರ್ಯರೂಪಕ್ಕೆ ಹಾಕಲು ಪ್ರಯತ್ನಿಸುತ್ತೇವೋ? ಕಾವಲಿನಬುರುಜು ಅಭ್ಯಾಸಕ್ಕೆ ಮತ್ತು ಸಭಾ ಪುಸ್ತಕಭ್ಯಾಸಕ್ಕೆ ತಯಾರು ಮಾಡಲು ವಿಶಿಷ್ಟ ಏರ್ಪಾಡುಗಳನ್ನು ಮಾಡತಕ್ಕದ್ದು. ನಾವದನ್ನು ಮಾಡುತ್ತೇವೋ?
ಕೂಟಗಳಲ್ಲಿ ಪಾಲಿಗರಾಗಿರಿ
11 ಕೂಟಗಳಲ್ಲಿ ಪಾಲಿಗರಾಗುವ ಮೂಲಕ ನಾವದರಿಂದ ಹೆಚ್ಚು ಪ್ರಯೋಜನ ಹೊಂದುತ್ತೇವೆ. ಕೂಟಗಳಿಗಾಗಿ ತಯಾರಿ ಮತ್ತು ಅನಂತರ ಅದರಲ್ಲಿ ಭಾಗವಹಿಸಲು ಪ್ರಯತ್ನವು, ಕೂಟಗಳಲ್ಲಿ ಲಕ್ಷ್ಯಕೊಟ್ಟು ಕೇಳುವಂತೆ ಮತ್ತು ಇತರರ ಉತ್ತರಗಳಿಂದ ಸುಲಭವಾಗಿ ಪ್ರಯೋಜನ ಪಡೆಯುವಂತೆ ಸಹಾಯಕಾರಿಯು. ಒಂದು ಕೂಟದಲ್ಲಿ ತಮ್ಮ ಮೊದಲನೆ ಉತ್ತರ ಹೇಳಲು ಅಥವಾ ದೇವ ಪ್ರಭುತ್ವ ಶಾಲೆಯಲ್ಲಿ ತಮ್ಮ ಮೊದಲನೆ ಭಾಷಣ ಕೊಡಲು, ತಾವು ಮಾಡಿದ್ದ ಪರಿಶ್ರಮದ ಕೆಲಸವನ್ನು ಅನೇಕರು ಇನ್ನೂ ನೆನಪಿಸಶಕ್ತರು. ಅವರ ಬಹಳಷ್ಟು ಗಾಬರಿಯು ಈಗ ಹೋಗಿದೆಯಾದರೂ, ನಮ್ಮ ಆತ್ಮಿಕ ಬೆಳವಣಿಗೆ ಎಲ್ಲರಿಗೆ ತೋರಿಬರುವಂತೆ ನಾವಿನ್ನೂ ಕಷ್ಟಪಟ್ಟು ಕೆಲಸ ಮಾಡುತ್ತೇವೋ? (1 ತಿಮೊ. 4:15) ಅದರಿಂದ ಇತರರು ಪ್ರಯೋಜನ ಹೊಂದುತ್ತಾರೆ ಮತ್ತು ನಮ್ಮ ಉತ್ತರಗಳಿಂದ ಉತ್ತೇಜನ ಪಡೆಯುತ್ತಾರೆ. ಕೂಟಗಳಲ್ಲಿ ಚರ್ಚಿಸಲಾಗುವ ಸಮಾಚಾರವನ್ನು ನಾವು ಅಭ್ಯಾಸ ಮಾಡಿ, ಚೆನ್ನಾಗಿ ತಯಾರಿಸಿದಾದ್ದರೆ, ಅವುಗಳಲ್ಲಿ ನಮ್ಮ ಅರ್ಥಭರಿತ ಪಾಲು, ಇತರರನ್ನು ಪ್ರೀತಿ ಮತ್ತು ಸತ್ಕಾರ್ಯಗಳಿಗೆ ಪ್ರೇರೇಪಿಸುವುದು.—ಇಬ್ರಿ. 10:23-25.
12 ನಮ್ಮ ಉತ್ತರಗಳು ಉದ್ದವಾಗಿಯೂ ಜಟಿಲವಾಗಿಯೂ ಇರಬಾರದು. ಹಾಕಲ್ಪಟ್ಟ ಪ್ರಶ್ನೆಗಳನ್ನುತ್ತರಿಸುವ ಸಂಕ್ಷಿಪ್ತ ಉತ್ತರಗಳನ್ನು ಕೊಡುವುದು ಅಥವಾ ಒಂದು ವಚನದ ಅನ್ವಯವನ್ನು ಸ್ಪಷ್ಟಗೊಳಿಸಲು ಸಹಾಯವಾಗುವ ಉತ್ತರ, ಸಾಮಾನ್ಯವಾಗಿ ಉತ್ತಮ. ನಾವು ಚೆನ್ನಾಗಿ ತಯಾರಿಸಿದ್ದರೆ, ನಮ್ಮ ಸ್ವಂತ ಮಾತುಗಳಲ್ಲಿ ಉತ್ತರ ಕೊಡಲು ಶಕ್ತರಾಗುವೆವು. ನಾವು ಹೀಗೆ ಮಾಡಿದರೆ, ನಮಗೂ ಇತರರಿಗೂ ಆಗುವ ಪ್ರಯೋಜನ ಎಷ್ಟೋ ಹೆಚ್ಚು. ಏಕೆ? ಏಕಂದರೆ ನಾವೇನನ್ನುತ್ತೇವೋ ಅದರ ಕುರಿತು ಯೋಚಿಸುವಂತೆ ಮತ್ತು ನಮ್ಮ ತಿಳುವಳಿಕೆಯ ಮೇರೆಗೆ ಆ ವಿಷಯವನ್ನು ವಿವರಿಸುವಂತೆ ಅದು ಕೇಳಿಕೊಳ್ಳುತ್ತದೆ. ಇದು, ಇತರರಿಗೆ ಆ ಸಮಾಚಾರವನ್ನು ತಿಳುಕೊಳ್ಳಲು ಸುಲಭವನ್ನಾಗಿಯೂ ಮಾಡೀತು. ಅಲ್ಲದೆ, ಆ ಸಮಾಚಾರವನ್ನು ಇನ್ನೊಂದು ಸಂದರ್ಭದಲ್ಲಿ ಉಪಯೋಗಿಸುವಂತೆ ನೆನಪಿಡಲೂ ಅದು ಸಹಾಯಕಾರಿ.
ಹೊಲದಲ್ಲಿ ಉದಾರವಾಗಿ ಬಿತ್ತಿರಿ
13 ನಮ್ಮ ಕ್ರೈಸ್ತ ಶುಶ್ರೂಷೆಯು ಒಂದು ಸೇವಾ ನಿಕ್ಷೇಪವು. (2 ಕೊರಿ. 4:7) ನೀವದನ್ನು ಆ ರೀತಿಯಲ್ಲಿ ನೋಡುತ್ತೀರೋ? ಶುಶ್ರೂಷೆಯ ಮೂಲಕ, ನಮ್ಮ ನಂಬಿಕೆಯನ್ನು ವ್ಯಕ್ತಪಡಿಸುವ ಸುಯೋಗವು ನಮಗಿದೆ. ಹೃದಯದ ಸಮೃದ್ಧಿಯಿಂದಲೇ ಬಾಯಿ ಮಾತಾಡುವುದೆಂದು ಯೇಸುವಂದನು. (ಲೂಕ 6:45) ಕ್ಷೇತ್ರ ಸೇವೆಯಲ್ಲಿ ಪೂರ್ಣ ಪಾಲನ್ನು ತಕ್ಕೊಳ್ಳಲು ನಾವು ಮಾಡುವ ವೈಯಕ್ತಿಕ ಪ್ರಯತ್ನವು, ಅನೇಕ ಪ್ರಯೋಜನಗಳನ್ನು ಕೊಯ್ಯುವ ಅವಕಾಶವನ್ನು ನಮಗೆ ಕೊಡುತ್ತದೆ. ಸತ್ಯದ ನಮ್ಮ ತಿಳುವಳಿಕೆಯು ಚೂಪಾಗುತ್ತದೆ, ಮತ್ತು ಬೈಬಲನ್ನುಪಯೋಗಿಸುವ ನಮ್ಮ ಸಾಮರ್ಥ್ಯವು ಹೆಚ್ಚುತ್ತದೆ. ಇತರರನ್ನು ಸತ್ಯಕ್ಕೆ ತರುವ ಮತ್ತು ತಮ್ಮ ಮಹಾ ನಿರ್ಮಾಣಿಕನನ್ನು ತಿಳಿಯಲು ನೆರವಾಗುವ ಸಂತೋಷವು ನಮ್ಮದಾಗುತ್ತದೆ. ದೇವರ ಆಡಳಿತದ ಮತ್ತು ಆತನ ಮಹಾಧಿಪತ್ಯದ ಹಕ್ಕಿಗೆ ನಾವು ಸಾಕ್ಷಿಗಳಾಗಿ ನಿಂತಿದ್ದೇವೆ. ನಾವು ಸಂತೋಷಿತರು ಯಾಕೆಂದರೆ ಆತನ ಸ್ವರೂಪದಲ್ಲಿ ಮಾಡಲ್ಪಟ್ಟವರೂ ಆತನ ಚಿತ್ತವನ್ನು ಮಾಡುವವರೂ ಆಗಿರುವುದರಿಂದ, ನಾವು ಯೆಹೋವನನ್ನು ಮೆಚ್ಚಿಸುತ್ತೇವೆಂದು ನಮಗೆ ಗೊತ್ತಿದೆ.—ಮತ್ತಾ. 5:48.
14 ನಾವು ಸದಾ ನಮ್ಮ ವೈಯಕ್ತಿಕ ಪ್ರಯತ್ನಗಳನ್ನು ಅಳೆಯತ್ತಿರುವುದಾದರೆ, ಯೆಹೋವನಿಗೆ ನಮ್ಮ ಭಕ್ತಿಯು ಎಂದೂ ನಾಮಮಾತ್ರದ ಸೇವೆಯಾಗದು. ಅದರ ಅರ್ಥವೇನು? ಏನಂದರೆ ದೇವರ ಚಿತ್ತವನ್ನು ಮಾಡುವುದರಲ್ಲಿ ನಾವು ಅರೆ ಮನಸ್ಸಿನವರಾಗಿದ್ದು, ಸೇವೆಯ ಬಾಹ್ಯ ತೋರಿಕೆಯನ್ನು ಮಾತ್ರವೇ ಸಲ್ಲಿಸಲಾರೆವು ಅಥವಾ ನಿಜವಾದ ಹೃದಯಪೂರ್ವಕ ಭಕ್ತಿ ಮತ್ತು ಪ್ರಯತ್ನವಿಲ್ಲದ ಒಂದು ಕನಿಷ್ಟತಮ ಸೇವೆಯು ಅದಾಗದು. ಯೆಹೋವನಿಗೆ ನಮ್ಮ ಸೇವೆಯು ಪೂರ್ಣ ಹೃದಯದ್ದಾಗಿರಲೇಬೇಕು. ಸೇವೆಯಲ್ಲಿ ನಮ್ಮೆಲ್ಲವನ್ನು ಕೊಡುವ ಶಾಸ್ತ್ರೀಯ ಹಂಗು ನಮಗಿದೆ. (ಕೊಲೊ. 3:23, 24) ಪರಿಸ್ಥಿತಿಗಳು ವಿವಿಧವಾಗಿವೆ ನಿಜ. ಮತ್ತು ನಾವು ಮಾಡಶಕ್ತರಾಗುವುದಕ್ಕಿಂತ ಹೆಚ್ಚನ್ನು ಯೆಹೋವನು ನಮ್ಮಿಂದ ಕೇಳಲಾರನು. ಆದರೆ ನಾವೇನು ಮಾಡ ಶಕ್ತರೋ, ಅದನ್ನು ನಾವು ಮಾಡುವಂತೆ ಆತನು ಅಪೇಕ್ಷಿಸುತ್ತಾನೆ! (ಮತ್ತಾ. 22:37) ಪತಿತ ಮಾನವ ಸ್ವಭಾವವು ಅದಷ್ಟು ಕಡಿಮೆ ಮಾಡುವ ಪ್ರವೃತ್ತಿಯದ್ದಾಗಿರುವುದರಿಂದ, ನಮ್ಮನ್ನು ಆಗಿಂದಾಗ್ಯೆ ಪರೀಕ್ಷಿಸಿಕೊಂಡು, ನಮ್ಮ ದೇವರ ಸೇವೆಯಲ್ಲಿ ನಾವೆಲ್ಲಿ ಪ್ರಗತಿಯನ್ನು ಮಾಡಬಹುದೆಂದು ನೋಡುವುದು ಒಳ್ಳೆಯದು. ಅದನ್ನು ಮಾಡುವ ಹವ್ಯಾಸವು ನಮಗಿದೆಯೇ?
15 ನಮ್ಮ ವೈಯಕ್ತಿಕ ವೃತ್ತಿಗಳು ಮತ್ತು ಅಪೇಕ್ಷೆಗಳು ಯೆಹೋವನ ಸೇವೆಯಲ್ಲಿ ನಮ್ಮ ಅತ್ಯುತ್ತಮತೆಯನ್ನು ಕೊಡುವುದರಿಂದ ನಮ್ಮನ್ನು ತಡೆಯದಂತೆ ಮಾಡಬೇಕಾದರೆ, ಎಚ್ಚರಿಕೆಯನ್ನು ವಹಿಸಬೇಕು. ಸುಖವಿಲಾಸಗಳು, ಕಸುಬುಗಳು ಮತ್ತು ಮನೋರಂಜನೆಗಳನ್ನು ಅದರದರ ಸ್ಥಾನದಲ್ಲಿಡಬೇಕು. ಅಲ್ಲದೆ, ಐಹಿಕ ಚಟುವಟಿಕೆಗಳಲ್ಲಿ ಅತಿರೇಕವಾಗಿ ಒಳಗೂಡುವ ವಿರುದ್ಧವಾಗಿ ನಾವು ಜಾಗ್ರತೆ ವಹಿಸಬೇಕು. ಮತ್ತಾಯ 6:22, 23ರಲ್ಲಿ ಯೇಸುವಿನ ಸೂಚನೆಯನ್ನು ಪಾಲಿಸುವುದಾದರೆ, ಆತ್ಮಿಕ ಅಭಿರುಚಿಗಳನ್ನು ಬೆನ್ನಟ್ಟುವುದರಲ್ಲಿ ಹೆಚ್ಚು ಪ್ರಯತ್ನವನ್ನು ಹಾಕುತ್ತಾ, ಅದಕ್ಕನುಗುಣವಾಗಿ ಕೊಯ್ಯಲು ಶಕ್ತರಾಗುವೆವು.
16 ಹೊಸ ವ್ಯಕ್ತಿತ್ವವನ್ನು ಧರಿಸಲು ನಾವು ಪರಿಶ್ರಮಪಟ್ಟು ಕೆಲಸ ಮಾಡುತ್ತಾ ಇರುವಾಗ, ಸಭಾ ಕೂಟಗಳಲ್ಲಿ, ಸಮ್ಮೇಳನಗಳಲ್ಲಿ, ಅಧಿವೇಶನಗಳಲ್ಲಿ ಮತ್ತು ಪ್ರಕಾಶನಗಳ ಮೂಲಕವಾಗಿ ನಮಗೆ ಸಿಗುವ ಸೂಚನೆ ಮತ್ತು ಸಲಹೆಗಳನ್ನು ಅನ್ವಯಿಸಿಕೊಳ್ಳುವ ನಮ್ಮ ಸ್ವಂತ ಜವಾಬ್ದಾರಿಕೆಯನ್ನೂ ಸ್ವೀಕರಿಸುವೆವು. ಹೀಗೆ, ನಮ್ಮಲ್ಲಿ ಪ್ರತಿಯೊಬ್ಬರು ಶ್ರದ್ಧೆಯಿಂದ ಅಭ್ಯಾಸ ಮಾಡುತ್ತಾ, ಕೂಟಗಳಲ್ಲಿ ಕ್ರಿಯಾಶೀಲತೆಯಿಂದ ಪಾಲಿಗರಾಗುತ್ತಾ, ಶಿಷ್ಯರನ್ನಾಗಿ ಮಾಡುವ ಮಹಾ ಕಾರ್ಯದಲ್ಲಿ ನಮ್ಮ ವೈಯಕ್ತಿಕ ಪರಿಸ್ಥಿತಿಗಳು ಅನುಮತಿಸುವಷ್ಟರ ಮಟ್ಟಿಗೆ ಭಾಗವಹಿಸುತ್ತಾ ಇರುವಂತಾಗಲಿ. ದೇವರ ಪ್ರೀತಿಗೆ ಹೀಗೆ ಗಣ್ಯತೆಯಿಂದ ಪ್ರತಿಕ್ರಿಯೆ ತೋರಿಸುವ ಮೂಲಕ, ಆತ್ಮಿಕ ಬಹುಮಾನಗಳನ್ನು ಈಗಲೇ ಸಮೃದ್ಧವಾಗಿ ಕೊಯ್ಯುವೆವು ಮತ್ತು ಯೆಹೋವನ ಹೊಸ ಲೋಕದಲ್ಲಿ ನಿತ್ಯ ಜೀವದ ದೃಢ ನಿರೀಕ್ಷೆಯನ್ನು ಕಾಪಾಡಿಕೊಳ್ಳುವೆವು.