ಸುವಾರ್ತೆಯನ್ನು ನೀಡುವದು—ವಿವೇಚನೆಯೊಂದಿಗೆ
1“ವಿವೇಕವನ್ನು (ವಿವೇಚನೆ, NW) ಕಾಪಾಡುವವನು ಮೇಲನ್ನು ಪಡೆಯುವನು” ಎನ್ನುತ್ತದೆ ಒಂದು ಪ್ರೇರಿತ ಜ್ಞಾನೋಕ್ತಿ. (ಜ್ಞಾನೋ. 19:8) ಈ ಮಾತಿನಲ್ಲಿರುವ ವಿವೇಕವು ನಮ್ಮ ಸಾರುವ ಚಟುವಟಿಕೆಯಲ್ಲಿ ಸತ್ಯವೆಂದು ರುಜುವಾಗಿದೆ. ದೃಷ್ಟಾಂತಕ್ಕಾಗಿ, ವಿವೇಚನೆ ಮತ್ತು ಜಾಣ್ಮೆಯನ್ನು ಉಪಯೋಗಿಸುವ ಮೂಲಕ, ಅನೇಕ ಪ್ರಚಾರಕರು ಸಂಭಾವ್ಯ ಸಂಭಾಷಣಾ ತಡೆಗಟ್ಟುಗಳನ್ನು ಅಧಿಕ ಸಾಕ್ಷಿ ನೀಡುವ ಸಂದರ್ಭಗಳಾಗಿ ಮಾರ್ಪಡಿಸಿದ್ದಾರೆ. ಇಲ್ಲವೇ, ಕಡಿಮೆಪಕ್ಷ ಇನ್ನೊಂದು ಸಲದ ಸಾಕ್ಷಿಗಾಗಿ ಅಸ್ತಿವಾರವನ್ನಾದರೂ ಹಾಕಿದ್ದಾರೆ. ಇದನ್ನು ಮಾಡುವುದು ಹೇಗೆ?
ಸಂಭಾಷಣೆ ತಡೆಗಟ್ಟುಗಳನ್ನು ನೀಗಿಸುವುದು
2“ನಾನು ಬಹಳ ಕೆಲಸದಲ್ಲಿದ್ದೇನೆ” ಎಂದು ಹೇಳುವ ಜನರು ಆಗಿಂದಾಗ್ಯೆ ನಮಗೆ ಸಿಗುತ್ತಾರೆ. ಮನೆಯವನು ನಿಜವಾಗಿಯೂ ಕಾರ್ಯಮಗ್ನನೋ ಅಥವಾ ಒಂದು ಉದ್ದ ಚರ್ಚೆಯಲ್ಲಿ ಒಳಗೂಡುವದನ್ನು ತಪ್ಪಿಸಲಿಕ್ಕಾಗಿ ಅವನು ಹಾಗನ್ನುತ್ತಾನೋ? ವಿವೇಚನೆಯು ಅತ್ಯಾವಶ್ಯಕ. ಅವನು ನಿಜವಾಗಿ ಕಾರ್ಯಮಗ್ನನಿಲ್ಲ ಎಂದು ತೋರುವುದಾದರೆ, ಈ ಸಂಭಾಷಣಾ ತಡೆಗಟ್ಟನ್ನು ನಾವು ಪರಿಹರಿಸ ಪ್ರಯತ್ನಿಸಬಹುದು. “ಹಾಗಾದರೆ ನಾನು ಸಂಕ್ಷೇಪವಾಗಿ ಹೇಳುತ್ತೇನೆ” ಎಂದು ನಾವನ್ನಬಹುದು. ಆನಂತರ, ನಾವು ಮಾತುಕೊಟ್ಟ ಪ್ರಕಾರವೇ, ಚರ್ಚಿಸುವ ವಿಷಯದ ಸಾರಾಂಶವನ್ನು ಸಂಕ್ಷೇಪವಾಗಿ ತಿಳಿಸಬೇಕು. ನಮ್ಮ ಪರಿಗಣನೆ ಮತ್ತು ಅಭಿರುಚಿಯೆಬ್ಬಿಸುವ ಹೇಳಿಕೆಗಳ ಫಲಿತಾಂಶವಾಗಿ, ಆ ವ್ಯಕ್ತಿ ಚರ್ಚೆಯನ್ನು ಆಗಲೇ ಮುಂದರಿಸುವ ಅಪೇಕ್ಷೆಯನ್ನು ತೋರಿಸಲೂಬಹುದು.
3 ನೀವು ಗೋಚರಿಸಿದ ವ್ಯಕ್ತಿಯು ನಿಜವಾಗಿ ಕಾರ್ಯಮಗ್ನನೆಂದೆಣಿಸುವ. ಸುಲಭವಾಗಿ ಹೋಗಿಬಿಡಲು ನಾವು ಬಯಸುವುದಿಲ್ಲವಾದರೂ, ಹಟಹಿಡಿದು ಅಥವಾ ಒತ್ತಾಯದಿಂದ ಮುಂದೊತ್ತಿದ್ದರೆ, ಒಂದು ಕಹಿಯಾದ ಅಭಿಪ್ರಾಯವನ್ನು ಬಿಟ್ಟು ಹೋಗುವೆವು. ಮನೆಯವಳು ಅಡಿಗೆ ಪಾತ್ರೆಯೊಂದಿಗೆ ಬಾಗಲಿಗೆ ಬಂದರೆ ಮತ್ತು ಊಟ ಬೇಯುವ ಪರಿಮಳ ಅಲ್ಲಿದ್ದರೆ, ಆಕೆ ನಿಜವಾಗಿಯೂ ಕಾರ್ಯಮಗ್ನಳಿರಬೇಕು. ಆಗ ವಿವೇಚನೆ ಮತ್ತು ಒಳ್ಳೇ ತೀರ್ಮಾನ ಅವಶ್ಯಕ. ಆ ಸಮಯದಲ್ಲಿ ಒತ್ತಾಯದಿಂದ ಸಂಭಾಷಣೆಯನ್ನು ಮುಂದರಿಸುವದು ಪರಿಗಣನೆಯಲ್ಲ. ಪರಿಸ್ಥಿತಿಗಳಿಗೆ ಹೊಂದಿಕೊಂಡು, ಮನೆಯವರಿಗೆ ಒಂದು ಪತ್ರಿಕೆಯನ್ನು ಯಾ ಟ್ರೇಕ್ಟನ್ನು ನೀಡಿ, ಇನ್ನೊಮ್ಮೆ ಬರುತ್ತೇನೆ ಎಂದು ಹೇಳಿ ಹೋಗುವದೆಷ್ಟು ಒಳ್ಳೆಯದು! ಇದು ಹೆಚ್ಚು ಹಿತಕರ ಪ್ರಭಾವವನ್ನು ಬೀರುವದು ಮತ್ತು ಇನ್ನೊಂದು ಸಾರಿ ಒಬ್ಬ ಸಾಕ್ಷಿಯು ಸಂದರ್ಶಿಸುವಾಗ ಒಳ್ಳೇ ಸಾಕ್ಷಿಯಲ್ಲಿ ಫಲಿಸಬಹುದು.
ವ್ಯಕ್ತಿಯ ಮನೋಧರ್ಮಕ್ಕೆ ಪ್ರತಿಕ್ರಿಯಿಸುವುದು
4 ಕೆಲವು ಸಾರಿ ಮನೆ ಮನೆಯ ಸೇವೆಯಲ್ಲಿ ಥಟ್ಟನೆ ಕೆದರಿ ಮಾತಾಡುವ ಜನರು ನಮಗೆ ಭೇಟಿಯಾಗುತ್ತಾರೆ. ಆಗ ನಾವೇನು ಮಾಡಬೇಕು? ಜ್ಞಾನೋಕ್ತಿ 17:27 ಸೂಚಿಸುವುದು: “ಹಿಡಿದು ಮಾತಾಡುವವನು ಜ್ಞಾನಿ, ಶಾಂತಾತ್ಮನು ವಿವೇಕಿ.” ಎಂಥ ಉತ್ತಮ ಸಲಹೆ! ಚಿಂತನೆಯನ್ನು ತೋರಿಸುವ ಮೃದು ಮಾತು ಹೆಚ್ಚಾಗಿ ಅಂಥ ವ್ಯಕ್ತಿಯನ್ನು ಶಾಂತಪಡಿಸಲು ನೆರವಾಗುತ್ತದೆ. ಅಷ್ಟಲ್ಲದೆ, ಅವನ ಚಿಂತೆಗೆ ಕಾರಣವಾದ ವಿಷಯವನ್ನು ನಾವು ಜಾಣತನದಿಂದ ಹೊರತೆಗೆಯ ಶಕ್ತರಾದರೆ, ಒಂದುವೇಳೆ ಅವನು ಕಡಿಮೆ ಸಮರ್ಥಿಸ್ಯಾನು. ಸಂಭಾಷಣೆಯನ್ನು ನಿಲ್ಲಿಸಿಬಿಟ್ಟರೂ, ನಮ್ಮ ಶಾಂತ ಪ್ರತಿವರ್ತನೆಯು ಅವನನ್ನು ಯೆಹೋವನ ಸಾಕ್ಷಿಗಳ ಕೆಲಸದ ಬಗ್ಗೆ ಒಳ್ಳೇ ಮನೋಭಾವದಲ್ಲಿ ಬಿಡಬಹುದು. ಇದು ಒಂದು ಒಳ್ಳೇ ಪೂರೈಕೆಯು. ಮನೆಯವನು ಮನಕಲಕಿಸಿಕೊಂಡರೆ ಮತ್ತು ಕೋಪ ತೋರಿಸಿದರೆ, ಸುಮ್ಮನೆ ಬಿಟ್ಟುಹೋಗುವುದು ಒಳ್ಳೆಯದು, ಪ್ರಾಯಶಃ ಇನ್ನೊಂದು ಸಾರಿ ಬಂದಾಗ ನಾವು ಅವನಿಗೆ ಸಾಕ್ಷಿ ನೀಡ ಪ್ರಯತ್ನಿಸಬಹುದು.
5 ಅದಲ್ಲದೆ, ವಾದವಿವಾದ ನಡಿಸಿದರೂ, ಪ್ರಾಮಾಣಿಕರಾಗಿರಬಹುದಾದ ಜನರೂ ಇದ್ದಾರೆ. ಈ ಪರಿಸ್ಥಿತಿಗಳಲ್ಲಿ, ಅವರೊಡನೆ ಸಂಭಾಷಣೆ ಮುಂದರಿಸುವದು ನಮ್ಮ ತಾಳ್ಮೆಗೆ ನಿಜ ಪರೀಕ್ಷೆಯಾಗಿರಬಹುದು. ಆದರೆ ನಾವು ವಿವೇಚಿಸುವವರಾಗಿದ್ದಲ್ಲಿ, ಒಂದು ಬೇರೆ ದೃಷ್ಟಿಕೋನವನ್ನು ಮನೆಯವನು ಬಲವಾಗಿ ವ್ಯಕ್ತಪಡಿಸುವ ಕಾರಣಮಾತ್ರದಿಂದ ಅವನಿಗೆ ಅಭಿರುಚಿ ಇಲ್ಲವೆಂಬ ತೀರ್ಮಾನಕ್ಕೆ ಬರುವ ಅಗತ್ಯವಿಲ್ಲ. ಅವನು ಆ ರೀತಿಯಲ್ಲಿ ನಂಬುವದೇಕೆ ಎಂಬದನ್ನು ನಾವು ಜಾಣತನದ ಪ್ರಶ್ನೆಗಳಿಂದ ತಿಳಿಯಲು ಇಚ್ಛಿಸಬಹುದು ಮತ್ತು ಬೈಬಲ್ ಆ ಕುರಿತೇನು ಹೇಳುತ್ತದೆಂದು ತೋರಿಸಬಹುದು. (ಜ್ಞಾನೋ. 20:5) ಅವನ ಪ್ರತಿಕ್ರಿಯೆಯ ಮೇಲೆ ಆಧರಿಸಿ, ಸಂಭಾಷಣೆಯನ್ನು ಮುಂದರಿಸುವುದು ಉಚಿತವೂ ಅಲ್ಲವೋ ಎಂಬದನ್ನು ನಿರ್ಧರಿಸಬಹುದು.
6 ವಿವೇಚನೆಯುಳ್ಳ ಪ್ರಚಾರಕನಿಗೆ ತಿಳಿದಿರುತ್ತದೆ ಏನಂದರೆ ಸಮಯ ಮತ್ತು ಪರಿಸ್ಥಿತಿಗಳು ರಾಜ್ಯದ ಸಂದೇಶದೆಡೆಗೆ ಮನೆಯವನ ಮನೋಭಾವವನ್ನು ಬದಲಾಯಿಸುತ್ತದೆ ಎಂಬದಾಗಿ. ಇನ್ನೊಂದು ಸಲ ಬರುವಾಗ ಅವನ ಪ್ರತಿವರ್ತನೆ ತೀರಾ ಬದಲಾಗಿರಬಹುದು. ಕಳೆದ ಬಾರಿ ನಾವು ಆ ಮನೆಯವನು ತೋರಿಸಿದ ಪ್ರತಿಕ್ರಿಯೆಯ ಕಾರಣ ಈ ಸಲವೂ ನಕಾರಾತ್ಮಕ ಪ್ರತಿಕ್ರಿಯೆ ಇರುವದೆಂದು ತೀರ್ಮಾನಿಸದಂತೆ ಜಾಗ್ರತೆ ವಹಿಸಬೇಕು.
7 ಸಂಭಾಷಣೆ ಮುಂದರಿಸಬೇಕೋ ಬಾರದೋ ಎಂದು ತೀರ್ಮಾನಿಸುವದು ಸುಲಭವಲ್ಲ. ಆದರೂ, ನಮ್ಮ ಪ್ರಯತ್ನಗಳನ್ನು ಆಶೀರ್ವದಿಸಲು ಯೆಹೋವನ ಕಡೆಗೆ ನೋಡುತ್ತಾ ಇದ್ದು ಕಲಿಸುವ ಕಲೆಯನ್ನು ವಿಕಾಸಿಸುತ್ತಾ ಇದ್ದರೆ, ವಿವೇಚನೆಯಿಂದ ಸುವಾರ್ತೆ ನೀಡುವದರಲ್ಲಿ ಹೆಚ್ಚು ಪರಿಣಾಮಕಾರಿಯಾಗುವೆವು.—1 ಕೊರಿ. 3:6; ತೀತ 1:9.