ಬೈಬಲ್ ವಿದ್ಯಾರ್ಥಿಗಳನ್ನು ಶುಶ್ರೂಷೆಗಾಗಿ ತಯಾರಿಸಿರಿ
1 ಬೈಬಲ್ ಅಧ್ಯಯನಗಳನ್ನು ನಡೆಸುವ ಅಂತಿಮ ಗುರಿಯು, ಇತರರಿಗೆ ಕಲಿಸುವುದರಲ್ಲಿ ನಮ್ಮೊಂದಿಗೆ ಜೊತೆಸೇರುವ ಕೆಲಸಗಾರರನ್ನು—ಹೊಸ ಶಿಷ್ಯರನ್ನು—ಮಾಡುವುದೇ ಆಗಿದೆ. (ಮತ್ತಾ. 28:19, 20) ಆದುದರಿಂದ ಅಧ್ಯಯನದ ಉದ್ದೇಶವು ಕೇವಲ ಜ್ಞಾನವನ್ನು ನೀಡುವುದು ಆಗಿಲ್ಲ; ಅದು ನಮ್ಮ ವಿದ್ಯಾರ್ಥಿಗಳಲ್ಲಿ ಹೃತ್ಪೂರ್ವಕವಾದ ನಂಬಿಕೆಯನ್ನು ತುಂಬಬೇಕು ಮತ್ತು ಇತರರೊಂದಿಗೆ ತಮ್ಮ ನಿರೀಕ್ಷೆಯನ್ನು ಹಂಚಿಕೊಳ್ಳಲು ಅವರನ್ನು ಸಿದ್ಧಗೊಳಿಸಬೇಕು. (2 ಕೊರಿಂ. 4:13) ಇತರರಿಗೆ ಕಲಿಸುವಂತೆ ಅರ್ಹರಾಗಲು ಅವರಿಗೆ ಯಾವ ಪ್ರಾಯೋಗಿಕ ವಿಧಗಳಲ್ಲಿ ನಾವು ಸಹಾಯ ಮಾಡಬಲ್ಲೆವು?—2 ತಿಮೊ. 2:2.
2 ಶುಶ್ರೂಷೆಯನ್ನು ಒಂದು ಗುರಿಯೋಪಾದಿ ಇರಿಸಿರಿ: ಆರಂಭದಿಂದಲೇ, ಸತ್ಯ ಆರಾಧನೆಯು “ರಕ್ಷಣೆಗಾಗಿ ಬಹಿರಂಗ ಘೋಷಣೆಯನ್ನು” ಒಳಗೊಂಡಿದೆ ಎಂಬುದನ್ನು ಸೃಷ್ಟಗೊಳಿಸಿರಿ. (ರೋಮಾ. 10:10, NW) ನಾವು ಇತರರೊಂದಿಗೆ ಮಾತಾಡಬೇಕೆಂಬುದನ್ನು, ಯೆಹೋವನ ಸಾಕ್ಷಿಗಳು ಎಂಬ ನಮ್ಮ ಹೆಸರೇ ಸೂಚಿಸುತ್ತದೆ. ಅವರ ಕಲಿಸಲ್ಪಡುವಿಕೆಯು ಕೇವಲ ಅವರ ಸ್ವಂತ ರಕ್ಷಣೆಗಾಗಿ ಅಲ್ಲ ಎಂಬುದನ್ನು ಅವರು ಮನಗಾಣುವಂತೆ ಸಹಾಯ ಮಾಡಿರಿ. ಅವರು ಸ್ವತಃ ಬೋಧಕರಾದಾಗ, ಅವರಿಗೆ ಕಿವಿಗೊಡುವವರೂ ಕೂಡ ರಕ್ಷಣೆಗಾಗಿ ಅವಕಾಶವನ್ನು ಹೊಂದಿರುತ್ತಾರೆ.—1 ತಿಮೊ. 4:16.
3 ಕಲಿತ ವಿಷಯವನ್ನು ಪುನರ್ವಿಮರ್ಶಿಸಿರಿ: ಈಗಾಗಲೇ ಕಲಿತಿರುವ ವಿಷಯಗಳ ಸಾಮಯಿಕ ಪುನರ್ವಿಮರ್ಶೆಗಳು ಬಹುಬೆಲೆಯುಳ್ಳ ಕಲಿಕೆಯ ಸಹಾಯಕಗಳಾಗಿವೆ. ಹೊಸದಾಗಿ ಕಲಿತ ಸತ್ಯಗಳು ವಿದ್ಯಾರ್ಥಿಯ ಮನಸ್ಸು ಹಾಗೂ ಹೃದಯದಲ್ಲಿ ಹುದುಗಿದಂತೆ, ಆತ್ಮಿಕವಾಗಿ ಬೆಳೆಯಲು ಅವು ಅವನಿಗೆ ಸಹಾಯ ಮಾಡುತ್ತವೆ. ಕಾವಲಿನಬುರುಜು ಅಭ್ಯಾಸದಲ್ಲಿ ಸೇರಿಸಿರುವ ಪುನರ್ವಿಮರ್ಶೆ ಪ್ರಶ್ನೆಗಳನ್ನು ಉತ್ತರಿಸುವಾಗ, ನಾವು ಸ್ವತಃ ಇದನ್ನು ಅನುಭವಿಸಿದ್ದೇವೆ. ತನ್ನ ಸ್ವಂತ ಮಾತುಗಳಲ್ಲಿ ಉತ್ತರಿಸುವಂತೆ, ನಿಮ್ಮ ವಿದ್ಯಾರ್ಥಿಗಾಗಿ ಸರಳ, ನೇರವಾದ ಪ್ರಶ್ನೆಗಳನ್ನು ತಯಾರಿಸಿರಿ.
4 ನಿಮ್ಮ ಪುನರ್ವಿಮರ್ಶೆಯು ಕ್ಷೇತ್ರ ಸೇವಾ ಸನ್ನಿವೇಶದ ರೂಪವನ್ನು ತೆಗೆದುಕೊಳ್ಳಬಹುದು. ಒಂದು ಪ್ರಶ್ನೆಯನ್ನು ಹಾಕಿರಿ ಅಥವಾ ಇತರರಿಗೆ ಸಾಕ್ಷಿನೀಡುವಾಗ ಸಾಮಾನ್ಯವಾಗಿ ಎದುರಿಸುವ ಒಂದು ಸನ್ನಿವೇಶವನ್ನು ವರ್ಣಿಸಿರಿ. ನೀವು ಮನೆಯವನಂತೆ ನಟಿಸುತ್ತಾ, ಅವನು ಏನು ಹೇಳುವನೆಂದು ನಿಮ್ಮ ವಿದ್ಯಾರ್ಥಿಯು ಪ್ರತ್ಯಕ್ಷಾಭಿನಯಿಸುವಂತೆ ಬಿಡಿರಿ. ಅವನು ಚೆನ್ನಾಗಿ ಮಾಡಿದ ವಿಷಯಕ್ಕಾಗಿ ಅವನನ್ನು ಪ್ರಶಂಸಿಸಿರಿ, ಮತ್ತು ಮುಂದಿನ ಸಮಯ ಇನ್ನೂ ಹೆಚ್ಚು ಪರಿಣಾಮಕಾರಿಯಾಗಿರುವಂತೆ ಅವನಿಗೆ ಸಹಾಯ ಮಾಡುವ ಪ್ರಾಯೋಗಿಕ ಸಲಹೆಗಳನ್ನು ನೀಡಿರಿ. ಅವನು ಕಲಿತಿರುವ ವಿಷಯವನ್ನು ಹೇಗೆ ಉಪಯೋಗಿಸಬೇಕೆಂದು ಈ ತರಬೇತಿಯು ಅವನಿಗೆ ಕಲಿಸುವುದು ಮತ್ತು ಬೈಬಲನ್ನು ಉಪಯೋಗಿಸುವುದರಲ್ಲಿ ಅವನ ಕೌಶಲವನ್ನು ವಿಕಸಿಸುವುದು.
5 ರೀಸನಿಂಗ್ ಪುಸ್ತಕ: ನಿಮ್ಮ ವಿದ್ಯಾರ್ಥಿಯ ಬಳಿಯಲ್ಲಿ ರೀಸನಿಂಗ್ ಪುಸ್ತಕದ ಪ್ರತಿ ಇರುವುದನ್ನು ಖಚಿತ ಪಡಿಸಿಕೊಳ್ಳಿ, ಮತ್ತು ಅದನ್ನುಪಯೋಗಿಸಲು ಅವನನ್ನು ತರಬೇತಿಗೊಳಿಸಿರಿ. ಸಂಭಾಷಣೆಗಳನ್ನು ಆರಂಭಿಸುವುದು, ಬೈಬಲ್ ಪ್ರಶ್ನೆಗಳನ್ನು ಉತ್ತರಿಸುವುದು, ಅಥವಾ ಆಕ್ಷೇಪಣೆಗಳನ್ನು ನಿಭಾಯಿಸುವುದರ ಕುರಿತು ಸಲಹೆಗಳನ್ನು ಅದು ಹೇಗೆ ಒದಗಿಸುತ್ತದೆ ಎಂಬುದನ್ನು ತೋರಿಸಿರಿ. ಮನಗಾಣಿಸುವ ವಿಧಾನದಲ್ಲಿ ಇತರರೊಂದಿಗೆ ಮಾತಾಡುವ ವಿಧಗಳನ್ನು ಪ್ರತ್ಯಕ್ಷಾಭಿನಯಿಸಲು, ಅಧ್ಯಯನದಲ್ಲಿ ಆ ಪುಸ್ತಕವನ್ನು ಉಪಯೋಗಿಸಿರಿ. ರಾಜ್ಯ ಸಂದೇಶವನ್ನು ಘೋಷಿಸಲು ಅವನ ಆರಂಭ ಶಕ್ತಿಯನ್ನು ಹೆಚ್ಚಿಸುತ್ತಾ, ಈ ಪುಸ್ತಕವು ಅವನ ಭರವಸೆಯನ್ನು ವೃದ್ಧಿಸಬಲ್ಲದು.
6 ಕೂಟಗಳ ಮಹತ್ವವನ್ನು ಒತ್ತಿಹೇಳಿರಿ: ಸಭಾ ಕೂಟಗಳು, ವಿಶೇಷವಾಗಿ ಸೇವಾ ಕೂಟ ಮತ್ತು ದೇವಪ್ರಭುತ್ವ ಶುಶ್ರೂಷಾ ಶಾಲೆ, ನಮ್ಮನ್ನು ಕ್ಷೇತ್ರ ಸೇವೆಗಾಗಿ ತಯಾರಿಸಲು ರಚಿಸಲ್ಪಟ್ಟಿವೆ. ಪರಿಣಾಮಕಾರಿ ಸಾಕ್ಷಿಕಾರ್ಯಕ್ಕಾಗಿರುವ ಎಲ್ಲ ಮೂಲಭೂತ ವಿಷಯಗಳು, ಅನುಭವಸ್ಥರೂ ನಿಪುಣರೂ ಆದವರಿಂದ ಪುನರ್ವಿಮರ್ಶಿಸಲ್ಪಡುತ್ತವೆ ಮತ್ತು ಪ್ರತ್ಯಕ್ಷಾಭಿನಯಿಸಲ್ಪಡುತ್ತವೆ. ಕೂಟಗಳ ಮಹತ್ವವನ್ನು ಒತ್ತಿಹೇಳಿರಿ, ಮತ್ತು ಅವನು ಹಾಜರಾಗುವಂತೆ ಸಹಾಯ ಮಾಡಲು, ನಿಮ್ಮಿಂದ ಸಾಧ್ಯವಾದದ್ದನ್ನು ಮಾಡಿರಿ. ಯೇಸುವಿನ ನಿಜ ಶಿಷ್ಯನಾಗಲು ನಿಮ್ಮ ವಿದ್ಯಾರ್ಥಿಗೆ ಬೇಕಾಗಿರುವ ಪ್ರಚೋದನೆಯನ್ನು ಕ್ರಮವಾದ ಹಾಜರಿಯು ಒದಗಿಸಬಲ್ಲದು.
7 ಉಪೇಕ್ಷಿಸಬಾರದಂಥ ಸಂಗತಿಯು ನಿಮ್ಮ ಸ್ವಂತ ವೈಯಕ್ತಿಕ ಮಾದರಿಯಾಗಿದೆ. ಸಾರುವ ಕಾರ್ಯದಲ್ಲಿ ನಿಮ್ಮ ಸ್ವಸಂತೋಷ ಮತ್ತು ನಿಯಮಿತತನವು ಸತ್ಯಕ್ಕಾಗಿ ನಿಮ್ಮ ಆಳವಾದ ಗಣ್ಯತೆಯನ್ನು ತೋರಿಸುತ್ತವೆ. ಅಂತಹ ಕ್ರಮವು, ತನ್ನ ನಂಬಿಕೆಯನ್ನು ಪ್ರದರ್ಶಿಸಲು ಹೆಚ್ಚಿನದನ್ನು ಮಾಡುವಂತೆ ನಿಮ್ಮ ವಿದ್ಯಾರ್ಥಿಯನ್ನು ಉತ್ತೇಜಿಸುತ್ತದೆ. (ಲೂಕ 6:40) ಶುಶ್ರೂಷೆಯನ್ನು ಒಂದು ಸುಯೋಗದೋಪಾದಿ ವೀಕ್ಷಿಸುವಂತೆ ಮತ್ತು ಅದರಲ್ಲಿ ಒಂದು ಪಾಲನ್ನು ಹೊಂದಿರಲು ಕೃತಜ್ಞನಾಗಿರುವಂತೆ, ಇವೆಲ್ಲವು ಒಬ್ಬ ಹೊಸ ವ್ಯಕ್ತಿಗೆ ಸಹಾಯ ಮಾಡಬಲ್ಲವು.—1 ತಿಮೊ. 1:12.