ಭಕ್ತಿವೃದ್ಧಿ ಮಾಡುವವರಾಗಿರ್ರಿ
1 ‘ನಿಭಾಯಿಸಲು ಕಠಿನವಾದ ಸಮಯಗಳಲ್ಲಿ’ ನಾವು ಜೀವಿಸುತ್ತಿರುವುದರಿಂದ, ನಮಗೆಲ್ಲರಿಗೂ ಉತ್ತೇಜನದ ಅಗತ್ಯವಿದೆ. (2 ತಿಮೊ. 3:1, NW) ತನ್ನ ದಿನದಲ್ಲಿಯೂ ಈ ಅಗತ್ಯದ ಕುರಿತು ತೀಕ್ಷ್ಣವಾಗಿ ಅರಿವುಳ್ಳವನಾಗಿದ್ದು, ಪೌಲನು ತನ್ನ ಸಹೋದರರೊಂದಿಗಿನ ಸಹವಾಸವನ್ನು ‘ಉತ್ತೇಜನದ ಪರಸ್ಪರ ವಿನಿಮಯ’ ಕ್ಕಾಗಿ ಅವಕಾಶಗಳಂತೆ ಬಳಸಲು ತವಕಿಸಿದನು. “ಪರಸ್ಪರ ಭಕ್ತಿವೃದ್ಧಿಗೂ ಅನುಕೂಲವಾಗಿರುವವುಗಳನ್ನು ಸಾಧಿಸಿಕೊಳ್ಳು” ವಂತೆ ಅವನು ತನ್ನ ಸಹೋದರರನ್ನು ಪ್ರೇರೇಪಿಸಿದನು. (ರೋಮಾ. 1:11, 12; 14:19) ಈ ಪ್ರಯತ್ನಗಳು ‘ನಂಬಿಕೆಯಲ್ಲಿ ಉಳಿಯುವಂತೆ ಅವರನ್ನು ಉತ್ತೇಜಿಸುತ್ತಾ, ಶಿಷ್ಯರ ಆತ್ಮಗಳನ್ನು ಬಲಪಡಿಸುವುದರಲ್ಲಿ’ ಯಶಸ್ವಿಯಾದವು. (ಅಕೃ. 14:22) ಇಂದು ಆ ರೀತಿಯ ಉತ್ತೇಜನದ ಅಗತ್ಯ ನಮಗೆ ತೀವ್ರವಾಗಿದೆ.
2 ನಾವು ಹೇಳುವ ವಿಷಯಗಳ ಮೂಲಕ ನಾವು ಇತರರ ಭಕ್ತಿವೃದ್ಧಿ ಮಾಡಸಾಧ್ಯವಿದೆ. ಯೋಗ್ಯವಾಗಿ ಉಪಯೋಗಿಸಲ್ಪಟ್ಟಾಗ ನಮ್ಮ ಮಾತುಗಳು “ಬೆಳ್ಳಿಯ ನಕಾಸಿಯಲ್ಲಿ ಖಚಿತವಾದ ಬಂಗಾರದ ಹಣ್ಣುಗಳಿಗೆ ಸಮಾನ” ವಾಗಿರಬಲ್ಲವು. (ಜ್ಞಾನೋ. 25:11) ಕೂಟಗಳಲ್ಲಿ ಭಾಗವಹಿಸುವ ಮೂಲಕ, ನಾವು “ಒಬ್ಬರನ್ನೊಬ್ಬರು ಎಚ್ಚರಿಸು” ತ್ತೇವೆ. (ಇಬ್ರಿ. 10:25) ನಾವು ಅನುಭವಗಳನ್ನು ಹಂಚಿಕೊಳ್ಳುವಾಗ, ಪ್ರಶಂಸೆಯನ್ನು ನೀಡುವಾಗ, ಅಥವಾ ಆತ್ಮಿಕ ವಿಷಯಗಳನ್ನು ಚರ್ಚಿಸುವಾಗ ನಮ್ಮ ನಾಲಿಗೆಯನ್ನು ಸಕಾರಾತ್ಮಕ ವಿಧದಲ್ಲಿ ಬಳಸಬಲ್ಲೆವು. ನಾಲಿಗೆಯ ಇಂತಹ ಆರೋಗ್ಯಕರ ಬಳಕೆಯು ‘ಕೇಳುವವರಿಗೆ ಹಿತಕರವಾಗಿರುವುದನ್ನು ನೀಡುತ್ತಾ, ಭಕ್ತಿವೃದ್ಧಿ ಮಾಡಲು ಒಳ್ಳೆಯದ್ದಾಗಿದೆ.’—ಎಫೆ. 4:29.
3 ಭಕ್ತಿವೃದ್ಧಿ ಮಾಡುವಂತಹ ವಿಷಯಗಳ ಕುರಿತು ಮಾತಾಡಿರಿ: ಫಿಲಿಪ್ಪಿ 4:8 ರಲ್ಲಿ, ನಮ್ಮ ಮಾತಿಗೆ ಉಪಯುಕ್ತ ಮಾರ್ಗದರ್ಶನಗಳನ್ನು ಪೌಲನು ಒದಗಿಸಿದನು. ಯಾವ ವಿಷಯಗಳು ಸತ್ಯವೂ, ಗಂಭೀರ ಚಿಂತೆಯದ್ದೂ, ನ್ಯಾಯವೂ, ಶುದ್ಧವೂ, ಪ್ರೀತಿಕರವೂ, ಮನೋಹರವೂ, ಸದ್ಗುಣವುಳ್ಳದ್ದೂ, ಮತ್ತು ಕೀರ್ತಿಗೆ ಯೋಗ್ಯವಾದದ್ದೂ ಆಗಿವೆಯೊ, ಅಂತಹ ವಿಷಯಗಳನ್ನು ನಾವು ಪರಿಗಣಿಸಬೇಕೆಂದು ಅವನು ಹೇಳಿದನು. ನಾವು ಹೇಳುವಂತಹ ವಿಷಯವು ದೇವರ ವಾಕ್ಯದ ಮೇಲೆ ಆಧರಿತವಾಗಿದ್ದರೆ, ಅದು ಸತ್ಯವೂ ಇತರರಿಗೆ ಪ್ರಯೋಜನಕರವಾಗಿಯೂ ಇರುವುದೆಂದು ನಾವು ಯಾವಾಗಲೂ ಖಚಿತವಾಗಿರಬಲ್ಲೆವು. (ಯೋಹಾನ 17:17) ನಮ್ಮ ಕ್ರೈಸ್ತ ಸಮರ್ಪಣೆಯು, ಸಭಾ ಕೂಟಗಳಲ್ಲಿ ನಾವು ಕಲಿಯುವಂತಹ ವಿಷಯಗಳು, ನಮ್ಮ ಶುಶ್ರೂಷೆಯನ್ನು ನಾವು ಪೂರ್ಣವಾಗಿ ನೆರವೇರಿಸುವ ವಿಧ, ಮತ್ತು ಇಂತಹ ಇತರ ವಿಷಯಗಳು ಗಂಭೀರ ಚಿಂತೆಯ ವಿಷಯಗಳಾಗಿವೆ. ದೇವರ ವಾಕ್ಯದ ಮಟ್ಟಗಳ ಮತ್ತು ಮೂಲಸೂತ್ರಗಳ ಕುರಿತಾದ ಸಕಾರಾತ್ಮಕ ಸಂಭಾಷಣೆಗಳು, ‘ರಕ್ಷಣೆಯನ್ನು ಪಡೆಯಲು ವಿವೇಕಿಗಳಾಗುವಂತೆ’ ನಮಗೆ ಖಂಡಿತವಾಗಿ ಸಹಾಯಮಾಡುವುವು. (2 ತಿಮೊ. 3:15) ಯೆಹೋವನ ಶುದ್ಧ ಸಂಸ್ಥೆಯಲ್ಲಿರುವವರ ಮೂಲಕ ಆಚರಿಸಲ್ಪಡುವ ಶುದ್ಧ ನಡತೆಗಾಗಿ ನಮ್ಮ ಗಣ್ಯತೆಯನ್ನು ನಾವು ವ್ಯಕ್ತಪಡಿಸಬಲ್ಲೆವು. ನಮ್ಮ ಸಹೋದರರ ಪ್ರೀತಿಕರ ದಯೆಯ ಕ್ರಿಯೆಗಳನ್ನು ನಾವು ಉತ್ಸಾಹಪೂರ್ವಕವಾಗಿ ಹೊಗಳಬಲ್ಲೆವು. (ಯೋಹಾನ 13:34, 35) ಮನೋಹರವಾಗಿರುವ ಸಂಗತಿಗಳು ನಮ್ಮ ಸಹೋದರರಲ್ಲಿ ನಾವು ಗಮನಿಸುವ ಹಿತಕರ ಕ್ರೈಸ್ತ ಗುಣಗಳಾದ ನಂಬಿಕೆ, ಆನಂದ, ಸಮಾಧಾನ, ಮತ್ತು ದೀರ್ಘಶಾಂತಿಯನ್ನು ಒಳಗೊಳ್ಳುತ್ತವೆ. ಸದ್ಗುಣವುಳ್ಳ ಹಾಗೂ ಕೀರ್ತಿಗೆ ಯೋಗ್ಯವಾಗಿರುವ ವಿಷಯಗಳ ಸಂಭಾಷಣೆಯು ಇತರರ ‘ಭಕ್ತಿವೃದ್ಧಿಗೆ ಒಳ್ಳೆಯದು.’—ರೋಮಾ. 15:2.
4 ಪ್ರತಿದಿನ ನಾವು ಲೋಕದ ನಿರಾಶೆಗೊಳಿಸುವ ಚಿಂತೆಗಳಿಂದ ಎದುರಿಸಲ್ಪಡುತ್ತೇವೆ. ಇವುಗಳನ್ನು ಬದಿಗಿಟ್ಟು ನಮ್ಮ ಸಹೋದರರೊಂದಿಗೆ ಪ್ರೀತಿಯ ಸಹವಾಸದಲ್ಲಿ ಪಾಲಿಗರಾಗುವುದು ಎಷ್ಟು ಚೈತನ್ಯದಾಯಕ! ನಾವು ಒಟ್ಟಿಗೆ ವ್ಯಯಿಸಲು ಶಕ್ತರಾಗುವ ಅಮೂಲ್ಯ ಸಮಯವು, ಮಾನ್ಯಮಾಡಬೇಕಾದ ನಿಧಿಯಾಗಿದೆ. ನಾವು ಯಾವಾಗಲೂ ಉತ್ತೇಜಿಸುವವರು ಹಾಗೂ ಭಕ್ತಿವೃದ್ಧಿ ಮಾಡುವವರು ಆಗಿರುವುದಾದರೆ, ಇತರರು ನಮ್ಮ ವಿಷಯದಲ್ಲಿ “ಅವರು ನನ್ನ ಆತ್ಮವನ್ನೂ ಉಪಶಮನಮಾಡಿದರು” ಎಂದು ಸತ್ಯವಾಗಿ ಹೇಳುವರು.—1 ಕೊರಿಂ. 16:18.