ನಮ್ಮ ಬೆಳಕನ್ನು ನಿರಂತರವಾಗಿ ಪ್ರಕಾಶಿಸುವಂತೆ ಬಿಡುವುದು
1 ಬೆಳಕು ಎಂದರೇನು? ಶಬ್ದಕೋಶವು ಅದನ್ನು “ದೃಷ್ಟಿಯನ್ನು ಸಾಧ್ಯಮಾಡುವ ಯಾವುದೋ ವಿಷಯ”ದೋಪಾದಿ ಅರ್ಥವಿವರಣೆಮಾಡುತ್ತದೆ. ಆದರೆ ನಿಜವಾಗಿಯೂ, ತನ್ನ ಮುಂದುವರಿದ ತಂತ್ರಜ್ಞಾನದ ಹೊರತೂ, ಯೋಬ 38:24 ರಲ್ಲಿ ದಾಖಲಿಸಲ್ಪಟ್ಟಿರುವಂತಹ, ಯೆಹೋವನು ಎಬ್ಬಿಸಿದ ಪ್ರಶ್ನೆಗೆ ಉತ್ತರವನ್ನು ಮನುಷ್ಯನು ಇನ್ನೂ ಸಂಪೂರ್ಣವಾಗಿ ತಿಳಿದಿಲ್ಲ. ನಾವು ಬೆಳಕಿಲ್ಲದೆ ಮುಂದುವರಿಯಬಲ್ಲೆವೊ? ಬೆಳಕಿಲ್ಲದೆ ನಾವು ಅಸ್ತಿತ್ವದಲ್ಲಿರಸಾಧ್ಯವಾಗುತ್ತಿರಲಿಲ್ಲ. ಭೌತಿಕ ದೃಷ್ಟಿಗಾಗಿ ಬೆಳಕು ಅತ್ಯಗತ್ಯವಾಗಿದೆ, ಮತ್ತು ಆತ್ಮಿಕ ಅರ್ಥದಲ್ಲಿ “ದೇವರು ಬೆಳಕಾಗಿದ್ದಾನೆ” ಎಂದು ಬೈಬಲು ನಮಗೆ ಹೇಳುತ್ತದೆ. (1 ಯೋಹಾ. 1:5) “ನಮಗೆ ಬೆಳಕನ್ನು ಕೊಡು”ವಾತನ ಮೇಲೆ ನಾವು ಸಂಪೂರ್ಣವಾಗಿ ಅವಲಂಬಿತರಾಗಿದ್ದೇವೆ.—ಕೀರ್ತ. 118:27, NW.
2 ಭೌತಿಕ ಅರ್ಥದಲ್ಲಿ ಇದು ಸತ್ಯವಾಗಿದೆ, ಆದರೆ ಆತ್ಮಿಕ ರೀತಿಯಲ್ಲಿ ಇದು ಇನ್ನೂ ಹೆಚ್ಚು ಸತ್ಯವಾಗಿದೆ. “ಕುರುಡರಂತೆ ಗೋಡೆಯನ್ನು ತಡವರಿಸು”ವಂತೆ ಅವರನ್ನು ಆತ್ಮಿಕ ಅಂಧಕಾರದಲ್ಲಿ ಬಿಡುತ್ತಾ, ಸುಳ್ಳು ಧರ್ಮವು ಅಧಿಕ ಸಂಖ್ಯೆಯ ಜನರನ್ನು ತಪ್ಪುದಾರಿಗೆ ನಡೆಸಿದೆ. (ಯೆಶಾ. 59:9, 10) ತನ್ನ ಅತಿಶಯಿಸಲಸಾಧ್ಯವಾದ ಪ್ರೀತಿ ಮತ್ತು ಅನುಕಂಪದಿಂದ ಪ್ರಚೋದಿಸಲ್ಪಟ್ಟು, ಯೆಹೋವನು ‘ತನ್ನ ಸತ್ಯಪ್ರಸನ್ನತೆ [“ಬೆಳಕು,” NW]ಗಳನ್ನು ಕಳುಹಿಸು’ತ್ತಾನೆ. (ಕೀರ್ತ. 43:3) ‘ಕತ್ತಲೆಯೊಳಗಿಂದ . . . ಆತನ ಆಶ್ಚರ್ಯಕರವಾದ ಬೆಳಕಿ’ಗೆ ಬರುವ ಮೂಲಕ, ಗುಣಗ್ರಾಹಿಗಳಾದ ಅಕ್ಷರಶಃ ಲಕ್ಷಾಂತರ ಮಂದಿ ಪ್ರತಿಕ್ರಿಯಿಸಿದ್ದಾರೆ.—1 ಪೇತ್ರ 2:9.
3 ಈ ಬೆಳಕನ್ನು ಲೋಕಕ್ಕೆ ತರುವುದರಲ್ಲಿ ಯೇಸು ಕ್ರಿಸ್ತನು ಅತ್ಯಂತ ಪ್ರಮುಖವಾದ ಒಂದು ಪಾತ್ರವನ್ನು ವಹಿಸುತ್ತಾನೆ. ಆತನು ಹೇಳಿದ್ದು: “ನನ್ನನ್ನು ನಂಬುವ ಒಬ್ಬನಾದರೂ ಕತ್ತಲಲ್ಲಿ ಇರಬಾರದೆಂದು ನಾನು ಬೆಳಕಾಗಿ ಲೋಕಕ್ಕೆ ಬಂದಿದ್ದೇನೆ.” (ಯೋಹಾ. 12:46) ಆತನ ಸಮಯ, ಶಕ್ತಿ, ಮತ್ತು ಸಂಪನ್ಮೂಲಗಳೆಲ್ಲವೂ, ಸತ್ಯದ ಬೆಳಕನ್ನು ತಿಳಿಯಪಡಿಸುವುದರ ಕಡೆಗೆ ನಿರ್ದೇಶಿಸಲ್ಪಟ್ಟಿದ್ದವು. ಕಾರ್ಯತಃ ಆತನು ಪ್ರತಿಯೊಂದು ನಗರ ಮತ್ತು ಹಳ್ಳಿಯಲ್ಲಿ ಸಾರುತ್ತಾ, ಕಲಿಸುತ್ತಾ, ತನ್ನ ಸ್ವದೇಶದಾದ್ಯಂತ ಪ್ರಯಾಣಿಸಿದನು. ಪ್ರತಿಯೊಂದು ಕಡೆಯಿಂದ ಬಂದಂತಹ ನಿಷ್ಕರುಣ ಹಿಂಸೆಯನ್ನು ಆತನು ತಾಳಿಕೊಂಡನು, ಆದರೆ ಸತ್ಯದ ಬೆಳಕನ್ನು ಹಬ್ಬಿಸಲಿಕ್ಕಾಗಿ ಆತನು ತನ್ನ ನೇಮಕದಲ್ಲಿ ದೃಢನಿಷ್ಠನಾಗಿ ಉಳಿದನು.
4 ನಿರ್ದಿಷ್ಟವಾದ ಗುರಿಯನ್ನು ಮನಸ್ಸಿನಲ್ಲಿಟ್ಟವನಾಗಿ ಯೇಸು, ಶಿಷ್ಯರನ್ನು ಆರಿಸುವುದು, ತರಬೇತಿ ನೀಡುವುದು, ಮತ್ತು ವ್ಯವಸ್ಥಾಪಿಸುವುದರ ಮೇಲೆ ಮನಸ್ಸನ್ನು ಕೇಂದ್ರೀಕರಿಸಿದನು. ಮತ್ತಾಯ 5:14-16 ರಲ್ಲಿ ಆತನು ಅವರಿಗೆ ಕೊಟ್ಟ ಉಪದೇಶಗಳನ್ನು ನಾವು ಹೀಗೆ ಓದುತ್ತೇವೆ: “ನೀವು ಲೋಕಕ್ಕೆ ಬೆಳಕಾಗಿದ್ದೀರಿ. . . . ನಿಮ್ಮ ಬೆಳಕು ಜನರ ಮುಂದೆ ಪ್ರಕಾಶಿಸಲಿ. ಹೀಗಾದರೆ ಅವರು ನಿಮ್ಮ ಒಳ್ಳೇ ಕ್ರಿಯೆಗಳನ್ನು ನೋಡಿ ಪರಲೋಕದಲ್ಲಿರುವ ನಿಮ್ಮ ತಂದೆಯನ್ನು ಕೊಂಡಾಡುವರು.” ಯೇಸುವಿನಂತೆಯೇ, ದೂರವಾಗಿಯೂ ವಿಸ್ತಾರವಾಗಿಯೂ ಸತ್ಯದ ಬೆಳಕನ್ನು ಪ್ರಸರಿಸುತ್ತಾ, ಅವರು “ಲೋಕದೊಳಗೆ . . . ಜ್ಯೋತಿರ್ಮಂಡಲ”ಗಳಾಗಿರಬೇಕಿತ್ತು. (ಫಿಲಿ. 2:15) ಆ ಜವಾಬ್ದಾರಿಯನ್ನು ತಮ್ಮ ಜೀವಿತದಲ್ಲಿನ ಪ್ರಧಾನ ಉದ್ದೇಶವಾಗಿ ವೀಕ್ಷಿಸುತ್ತಾ, ಅವರು ಅದನ್ನು ಸಂತೋಷದಿಂದ ಸ್ವೀಕರಿಸಿದರು. ಸ್ವಲ್ಪ ಸಮಯದ ಬಳಿಕ, ಸುವಾರ್ತೆಯು “ಆಕಾಶದ ಕೆಳಗಿರುವ ಸರ್ವಸೃಷ್ಟಿಗೆ ಸಾರಲ್ಪ”ಟ್ಟಿತೆಂದು ಹೇಳಲು ಪೌಲನು ಶಕ್ತನಾಗಿದ್ದನು. (ಕೊಲೊ. 1:23) ಆ ಮಹಾನ್ ಕೆಲಸವನ್ನು ಪೂರೈಸುವುದರಲ್ಲಿ ಇಡೀ ಕ್ರೈಸ್ತ ಸಭೆಯು ಐಕ್ಯಗೊಂಡಿತ್ತು.
5 “ಕತ್ತಲೆಗೆ ಅನುಗುಣವಾದ ಕೃತ್ಯಗಳನ್ನು ಬಿಟ್ಟು”ಬಿಟ್ಟಿರುವವರೊಳಗೆ ಸೇರಿರುವುದಕ್ಕಾಗಿ ನಾವು ಇಂದು ಕೃತಜ್ಞರಾಗಿರಬೇಕು. (ರೋಮಾ. 13:12, 13) ಯೇಸುವಿನಿಂದ ಮತ್ತು ಗತಕಾಲದಲ್ಲಿನ ನಂಬಿಗಸ್ತ ಕ್ರೈಸ್ತರಿಂದ ಇಡಲ್ಪಟ್ಟ ಮಾದರಿಯನ್ನು ಅನುಕರಿಸುವ ಮೂಲಕ ನಾವು ನಮ್ಮ ಗಣ್ಯತೆಯನ್ನು ತೋರಿಸಬಲ್ಲೆವು. ಇತರರಿಗೆ ಸತ್ಯವನ್ನು ಆಲಿಸುವ ಅಗತ್ಯವು, ಮಾನವ ಇತಿಹಾಸದಲ್ಲಿನ ಯಾವುದೇ ಸಮಯಕ್ಕಿಂತಲೂ ಈಗ ಹೆಚ್ಚು ತ್ವರಿತವಾಗಿದೆ ಮತ್ತು ಸಂದಿಗ್ಧವಾಗಿದೆ. ಈ ಸಾರುವ ಕೆಲಸದಷ್ಟು ತ್ವರಿತವಾದ ಮತ್ತು ಅದರಷ್ಟು ವಿಶೇಷ ಪರಿಣಾಮಕಾರಿಯಾದ ಪ್ರಯೋಜನಗಳನ್ನು ತರುವ ಚಟುವಟಿಕೆಯು ಬೇರೊಂದಿಲ್ಲ.
6 ನಾವು ಜ್ಯೋತಿರ್ಮಂಡಲಗಳಂತೆ ಹೇಗೆ ಪ್ರಕಾಶಿಸಸಾಧ್ಯವಿದೆ? ನಮ್ಮ ಬೆಳಕನ್ನು ಪ್ರಕಾಶಿಸುವಂತೆ ಬಿಡುವ ಪ್ರಧಾನ ರೀತಿಯು, ರಾಜ್ಯ ಸಾರುವಿಕೆಯ ಕೆಲಸದಲ್ಲಿ ಪಾಲ್ಗೊಳ್ಳುವುದೇ ಆಗಿದೆ. ಪ್ರತಿಯೊಂದು ಸಭೆಗೆ ತನ್ನ ನೇಮಿತ ಟೆರಿಟೊರಿಯಲ್ಲಿ, ಸಾರುವುದಕ್ಕಾಗಿ ಕ್ರಮವಾದ, ವ್ಯವಸ್ಥಾಪಿತ ಏರ್ಪಾಡುಗಳು ಇವೆ. ಸಾಹಿತ್ಯದ ಬೃಹತ್ ಪ್ರಮಾಣಗಳು, ಮಹತ್ತಾದ ವೈವಿಧ್ಯದಲ್ಲಿ ಮತ್ತು ಅನೇಕ ಭಾಷೆಗಳಲ್ಲಿ ದೊರೆಯುವಂತೆ ಮಾಡಲ್ಪಟ್ಟಿವೆ. ಕೂಟಗಳ ಮೂಲಕ ವ್ಯಾಪಕವಾದ ಶಿಕ್ಷಣವು ಒದಗಿಸಲ್ಪಡುತ್ತದೆ, ಮತ್ತು ಅನುಭವಸ್ಥರಾಗಿರುವವರಿಂದ ವೈಯಕ್ತಿಕವಾಗಿ ಇತರರಿಗೆ ತರಬೇತಿ ನೀಡುವುದರಲ್ಲಿ ಸಹಾಯವು ನೀಡಲ್ಪಡುತ್ತದೆ. ಅದರಲ್ಲಿ ಭಾಗವಹಿಸಲು ಪುರುಷರು, ಸ್ತ್ರೀಯರು, ವೃದ್ಧರು ಮತ್ತು ಮಕ್ಕಳಿಗೆ ಸಹ ಅವಕಾಶಗಳು ತೆರೆಯಲ್ಪಟ್ಟಿವೆ. ಅವನ ಸಾಮರ್ಥ್ಯಗಳು ಮತ್ತು ಪರಿಸ್ಥಿತಿಗಳು ಅನುಮತಿಸುವಂತಹ ಯಾವುದೇ ಮಟ್ಟದಲ್ಲಿ, ಸಭೆಯಲ್ಲಿರುವ ಪ್ರತಿಯೊಬ್ಬ ವ್ಯಕ್ತಿಯೂ ಭಾಗವಹಿಸುವಂತೆ ಆಮಂತ್ರಿಸಲ್ಪಡುತ್ತಾನೆ. ಪ್ರತಿಯೊಬ್ಬ ಸದಸ್ಯನು ಯಾವುದೋ ವಿಧದಲ್ಲಿ ಪಾಲ್ಗೊಳ್ಳುವಂತೆ ಸಹಾಯ ಮಾಡುವ ಒದಗಿಸುವಿಕೆಗಳೊಂದಿಗೆ, ಸಭೆಯ ಎಲ್ಲಾ ಕಾರ್ಯಕಲಾಪಗಳು ಸಾರುವಿಕೆಯ ಮೇಲೆ ಕೇಂದ್ರೀಕರಿಸಿವೆ. ಸಭೆಯೊಂದಿಗೆ ಕ್ರಮವಾದ, ಆಪ್ತ ಸಹವಾಸವು, ನಮ್ಮ ಬೆಳಕು ಪ್ರಕಾಶಿಸುತ್ತಾ ಇದೆ ಎಂಬುದನ್ನು ಖಚಿತಪಡಿಸಿಕೊಳ್ಳಲು ಅತ್ಯುತ್ತಮವಾದ ಮಾರ್ಗವಾಗಿದೆ.
7 ಒಂದು ಶಾಬ್ದಿಕ ಸಾಕ್ಷಿಯನ್ನು ಒಳಗೂಡದಿರಬಹುದಾದ ರೀತಿಗಳಲ್ಲಿ ನಾವು ಪ್ರಕಾಶಿಸಬಲ್ಲೆವು. ಕೇವಲ ನಮ್ಮ ನಡತೆಯ ಮೂಲಕವಾಗಿ ನಾವು ಇತರರ ಗಮನವನ್ನು ಆಕರ್ಷಿಸಬಲ್ಲೆವು. “ನಿಮ್ಮ ನಡವಳಿಕೆಯು ಅನ್ಯಜನರ ಮಧ್ಯದಲ್ಲಿ ಯೋಗ್ಯವಾಗಿರಲಿ; . . . ನಿಮ್ಮ ಸತ್ಕ್ರಿಯೆಗಳನ್ನು ಕಣ್ಣಾರೆ ಕಂಡು ವಿಚಾರಣೆಯ ದಿನದಲ್ಲಿ ದೇವರನ್ನು ಕೊಂಡಾಡುವರು” ಎಂದು ಪೇತ್ರನು ಪ್ರಚೋದಿಸಿದಾಗ, ಅವನ ಮನಸ್ಸಿನಲ್ಲಿದ್ದದ್ದು ಅದೇ. (1 ಪೇತ್ರ 2:12) ಅನೇಕರು ಒಂದು ಕೆಲಸವನ್ನು ಅಥವಾ ಒಂದು ಸಂಸ್ಥೆಯ ಯೋಗ್ಯತೆಯನ್ನು, ಅದರೊಂದಿಗೆ ಸಹವಾಸಿಸುವವರ ನಡತೆಯಿಂದ ನಿರ್ಣಯಿಸುತ್ತಾರೆ. ನೈತಿಕವಾಗಿ ಶುದ್ಧರೂ, ಪ್ರಾಮಾಣಿಕರೂ, ಶಾಂತಿಪ್ರಿಯರೂ, ನಿಯಮ ಪರಿಪಾಲಕರೂ ಆಗಿರುವ ಜನರನ್ನು ಪ್ರೇಕ್ಷಕರು ಗಮನಿಸುವಾಗ, ಅವರು ಅಂತಹ ಜನರನ್ನು ವಿಭಿನ್ನರೆಂದು ದೃಷ್ಟಿಸುತ್ತಾರೆ ಮತ್ತು ಅಧಿಕಾಂಶ ಜನರಿಂದ ಅನುಸರಿಸಲ್ಪಡುವ ಮಟ್ಟಗಳಿಗಿಂತಲೂ ಹೆಚ್ಚು ಉತ್ತಮವಾದ ಮಟ್ಟಗಳಿಗನುಸಾರ ಅವರು ಜೀವಿಸುತ್ತಾರೆಂದು ನಿರ್ಣಯಿಸುತ್ತಾರೆ. ಆದುದರಿಂದ ಒಬ್ಬ ಗಂಡನು ತನ್ನ ಹೆಂಡತಿಗೆ ಮಾನವನ್ನು ಸಲ್ಲಿಸಿ, ಪ್ರೀತಿಪೂರ್ವಕವಾದ ವಿಧದಲ್ಲಿ ಅವಳನ್ನು ಸಲಹುವಾಗ, ಅವನು ತನ್ನ ಬೆಳಕನ್ನು ಪ್ರಕಾಶಿಸುವಂತೆ ಬಿಡುತ್ತಿದ್ದಾನೆ; ಹೆಂಡತಿಯು ತನ್ನ ಗಂಡನ ತಲೆತನಕ್ಕೆ ಗೌರವವನ್ನು ತೋರಿಸುವ ಮೂಲಕ ಅದನ್ನೇ ಮಾಡುತ್ತಾಳೆ. ಮಕ್ಕಳು ತಮ್ಮ ಹೆತ್ತವರಿಗೆ ವಿಧೇಯರಾಗುವಾಗ ಮತ್ತು ಲೈಂಗಿಕ ಅನೈತಿಕತೆ ಹಾಗೂ ಅಮಲೌಷಧಗಳ ಉಪಯೋಗದಿಂದ ದೂರವಿರುವಾಗ, ಅವರು ಭಿನ್ನರಾಗಿರುತ್ತಾರೆ. ತನ್ನ ಕೆಲಸದ ಕುರಿತು ನ್ಯಾಯನಿಷ್ಠನಾಗಿರುವ, ಪ್ರಾಮಾಣಿಕನಾದ, ಮತ್ತು ಇತರರ ಕುರಿತು ಪರಿಗಣನೆಯುಳ್ಳ ಒಬ್ಬ ನೌಕರನು ಬಹಳ ಅಮೂಲ್ಯವೆಂದೆಣಿಸಲ್ಪಡುತ್ತಾನೆ. ಈ ಕ್ರೈಸ್ತ ಗುಣಗಳನ್ನು ಪ್ರದರ್ಶಿಸುವ ಮೂಲಕ, ನಮ್ಮ ಜೀವನದ ರೀತಿಯನ್ನು ಇತರರಿಗೆ ಶಿಫಾರಸ್ಸು ಮಾಡುತ್ತಾ ನಾವು ನಮ್ಮ ಬೆಳಕನ್ನು ಪ್ರಕಾಶಿಸುವಂತೆ ಬಿಡುತ್ತಿದ್ದೇವೆ.
8 ದೇವರ ವಾಕ್ಯದಿಂದ ನಾವು ಕಲಿತಿರುವ ವಿಷಯಗಳ ಕುರಿತು ಇತರರೊಂದಿಗೆ ಮಾತಾಡುವುದು ಸಾರುವಿಕೆಯಾಗಿದೆ. ಅದನ್ನು ಸಾರ್ವಜನಿಕ ವೇದಿಕೆಯಿಂದ ಅಥವಾ ಮನೆಬಾಗಿಲುಗಳಲ್ಲಿ ಮಾಡಲಾಗುತ್ತದಾದರೂ, ಯಾವುದೇ ರೀತಿಯಲ್ಲಿ ಅದು ಅಂತಹ ಸಂದರ್ಭಗಳಿಗೆ ಮಾತ್ರವೇ ಸೀಮಿತವಾಗಿರುವುದಿಲ್ಲ. ನಮ್ಮ ದೈನಂದಿನ ಚಟುವಟಿಕೆಗಳು ನಮ್ಮನ್ನು ನೂರಾರು ಜನರೊಂದಿಗೆ ಸಂಪರ್ಕಿಸುವಂತೆ ಮಾಡುತ್ತವೆ. ನಿಮ್ಮ ಪಕ್ಕದ ಮನೆಯ ನೆರೆಯವರೊಂದಿಗೆ ನೀವು ದಿನವೊಂದಕ್ಕೆ ಎಷ್ಟು ಬಾರಿ ಮಾತಾಡುತ್ತೀರಿ? ಯಾರಾದರೊಬ್ಬರು ನಿಮ್ಮ ಮನೆಬಾಗಿಲನ್ನು ಎಷ್ಟು ಸಲ ತಟ್ಟುತ್ತಾರೆ? ನೀವು ನಿಮ್ಮ ಶಾಪಿಂಗ್ ಮಾಡುವಾಗ, ಬಸ್ಸಿನಲ್ಲಿ ಪ್ರಯಾಣಿಸುವಾಗ, ಅಥವಾ ನಿಮ್ಮ ಐಹಿಕ ಉದ್ಯೋಗದಲ್ಲಿ ಕೆಲಸ ಮಾಡುವಾಗ, ನೀವು ಎಷ್ಟು ಮಂದಿ ಭಿನ್ನ ಜನರಿಂದ ಸಂಪರ್ಕಿಸಲ್ಪಡುತ್ತೀರಿ? ಶಾಲೆಯಲ್ಲಿರುವ ಒಬ್ಬ ಎಳೆಯ ವ್ಯಕ್ತಿ ನೀವಾಗಿರುವಲ್ಲಿ, ಪ್ರತಿ ದಿನ ನೀವು ಮಾತಾಡುವಂತಹ ವ್ಯಕ್ತಿಗಳ ಸಂಖ್ಯೆಯನ್ನು ನೀವು ಲೆಕ್ಕಿಸಬಲ್ಲಿರೊ? ಇತರರೊಂದಿಗೆ ಮಾತಾಡುವ ಸಂದರ್ಭಗಳು ಕಾರ್ಯತಃ ಅಪರಿಮಿತವಾಗಿವೆ. ನೀವು ಮಾಡಬೇಕಾದ ವಿಷಯಗಳಾವುವೆಂದರೆ, ಕೆಲವು ಶಾಸ್ತ್ರೀಯ ವಿಚಾರಗಳನ್ನು ಮನಸ್ಸಿನಲ್ಲಿಡುವುದು, ಒಂದು ಬೈಬಲನ್ನು ಮತ್ತು ಕೆಲವು ಕಿರುಹೊತ್ತಗೆಗಳನ್ನು ಕೈಗೆಟುಕುವಂತೆ ಇಡುವುದು, ಮತ್ತು ನಿಮಗೆ ಅವಕಾಶವು ದೊರೆತಾಗ ಮಾತಾಡಲು ಆರಂಭದ ಹೆಜ್ಜೆಯನ್ನು ತೆಗೆದುಕೊಳ್ಳುವುದೇ.
9 ಅನೌಪಚಾರಿಕ ಸಾಕ್ಷಿಕಾರ್ಯವು ಬಹಳ ಸರಳವಾಗಿರುವುದಾದರೂ, ಅದನ್ನು ಪ್ರಯತ್ನಿಸಲು ಕೆಲವರು ಒಲವಿಲ್ಲದ ಅನಿಸಿಕೆಯುಳ್ಳವರಾಗಿರುತ್ತಾರೆ. ಅಪರಿಚಿತರನ್ನು ಸಮೀಪಿಸಲು ತಾವು ತೀರ ನಾಚಿಕೆ ಸ್ವಭಾವದವರೂ ತೀರ ಉದ್ವಿಗ್ನರೂ ಆಗಿದ್ದೇವೆಂದು ಹೇಳುವ ಮೂಲಕ ಅವರು ಮೌನ ಪ್ರವೃತ್ತಿಯುಳ್ಳವರಾಗಿರಬಹುದು. ಸ್ವತಃ ತಮ್ಮ ಕಡೆಗೆ ಗಮನವನ್ನು ಸೆಳೆದುಕೊಳ್ಳುವುದರ ಕುರಿತು ಅಥವಾ ಬಿರುಸಾದ ಪ್ರತ್ಯುತ್ತರವನ್ನು ಪಡೆದುಕೊಳ್ಳುವುದರ ಕುರಿತು ಅವರು ಭಯಪಡುವ ಭಾವನೆಯುಳ್ಳವರಾಗಿರಬಹುದು. ಅನೌಪಚಾರಿಕ ಸಾಕ್ಷಿಕಾರ್ಯದ ಅನುಭವಪಡೆದಿರುವವರು, ಚಿಂತೆಗೆ ಯಾವುದೇ ಕಾರಣವಿಲ್ಲವೆಂದು ನಿಮಗೆ ಹೇಳಬಲ್ಲರು. ಇತರರು ಮೂಲತಃ ನಮ್ಮ ಹಾಗೆಯೇ ಇದ್ದಾರೆ; ಅವರಿಗೆ ಅದೇ ರೀತಿಯ ಆವಶ್ಯಕತೆಗಳಿವೆ, ಅದೇ ರೀತಿಯ ಚಿಂತೆಗಳ ಅನಿಸಿಕೆ ಅವರಿಗಾಗುತ್ತದೆ ಮತ್ತು ತಮಗಾಗಿ ಮತ್ತು ತಮ್ಮ ಕುಟುಂಬಗಳಿಗಾಗಿ ಅದೇ ರೀತಿಯ ವಿಷಯಗಳನ್ನು ಬಯಸುತ್ತಾರೆ. ಹರ್ಷಚಿತ್ತದ ಒಂದು ನಸುನಗೆ ಅಥವಾ ಸ್ನೇಹಭಾವದ ಒಂದು ಅಭಿವಂದನೆಗೆ ಅಧಿಕಾಂಶ ಮಂದಿ ದಯಾಪೂರ್ಣವಾದ ರೀತಿಯಲ್ಲಿ ಪ್ರತಿಕ್ರಿಯಿಸುವರು. ಆರಂಭಿಸಲಿಕ್ಕಾಗಿ, ನೀವು ‘ಧೈರ್ಯತಂದುಕೊಳ್ಳ’ಬೇಕಾಗಬಹುದು. (1 ಥೆಸ. 2:2, NW) ಹಾಗಿದ್ದರೂ, ಒಮ್ಮೆ ನೀವು ಮುಂದುವರಿಯುವುದಾದರೆ, ಬರುವ ಫಲಿತಾಂಶಗಳಿಂದ ನೀವು ಆಶ್ಚರ್ಯಗೊಳ್ಳಬಹುದು ಮತ್ತು ಹರ್ಷಗೊಳ್ಳಬಹುದು.
10 ನಾವು ನಮ್ಮ ಬೆಳಕನ್ನು ಪ್ರಕಾಶಿಸುವಂತೆ ಬಿಡುವಾಗ ಆಶೀರ್ವದಿಸಲ್ಪಡುತ್ತೇವೆ: ಅನೌಪಚಾರಿಕ ಸಾಕ್ಷಿಕಾರ್ಯದಿಂದ ಫಲಿಸುವ ಚೈತನ್ಯದಾಯಕ ಅನುಭವಗಳಲ್ಲಿ ಕೆಲವು ಇಲ್ಲಿವೆ: 55 ವರ್ಷ ಪ್ರಾಯದ ಹೆಂಗಸೊಬ್ಬಳು ಬೀದಿಯನ್ನು ದಾಟಲು ಪ್ರಯತ್ನಿಸುತ್ತಿದ್ದಳು. ಆಗಲೇ ಒಂದು ಕಾರು ಅವಳನ್ನು ಬಡಿಯಲಿಕ್ಕಿರುವಾಗ, ಒಬ್ಬ ಸಹೋದರಿಯು ಅವಳ ತೋಳನ್ನು ಹಿಡಿದುಕೊಂಡು ಅವಳನ್ನು ಸುರಕ್ಷಿತತೆಗೆ ಎಳೆಯುತ್ತಾ ಹೇಳಿದ್ದು: “ದಯವಿಟ್ಟು ಜಾಗ್ರತೆ ವಹಿಸಿ. ನಾವು ಗಂಡಾಂತರದ ಸಮಯಗಳಲ್ಲಿ ಜೀವಿಸುತ್ತಿದ್ದೇವೆ!” ತದನಂತರ ಅವಳು ಈ ಸಮಯಗಳು ಇಷ್ಟು ಅಪಾಯಕರವಾಗಿರುವುದರ ಕಾರಣವನ್ನು ವಿವರಿಸಿದಳು. “ನೀನು ಯೆಹೋವನ ಸಾಕ್ಷಿಗಳಲ್ಲಿ ಒಬ್ಬಳಾಗಿದ್ದೀಯೊ?” ಎಂದು ಆ ಹೆಂಗಸು ಕೇಳಿದಳು. ನಮ್ಮ ಪುಸ್ತಕಗಳಲ್ಲಿ ಒಂದನ್ನು ತನ್ನ ಅಕ್ಕನಿಂದ ಪಡೆದುಕೊಂಡವಳಾಗಿದ್ದು, ಈ ಹೆಂಗಸು ಯೆಹೋವನ ಸಾಕ್ಷಿಗಳಲ್ಲಿ ಒಬ್ಬರನ್ನು ಭೇಟಿಮಾಡಲು ಬಯಸಿದ್ದಳು ಮತ್ತು ಈ ಸಂಧಿಸುವಿಕೆಯು ಅದನ್ನು ಸಾಧ್ಯಮಾಡಿತ್ತು.
11 ವೈದ್ಯರ ಚಿಕಿತ್ಸಾಲಯದಲ್ಲಿನ ಕಾಯುವ ಕೋಣೆಯೊಂದರಲ್ಲಿ, ಒಬ್ಬ ಸಹೋದರಿಯು ಸ್ತ್ರೀಯೊಬ್ಬಳೊಂದಿಗೆ ಒಂದು ಸಂಭಾಷಣೆಯನ್ನು ಆರಂಭಿಸಿದಳು. ಆ ಸ್ತ್ರೀಯು ಗಮನಕೊಟ್ಟು ಕೇಳಿ, ತದನಂತರ ಹೇಳಿದ್ದು: “ಸ್ವಲ್ಪ ಸಮಯದಿಂದ ನಾನು ಯೆಹೋವನ ಸಾಕ್ಷಿಗಳನ್ನು ಸಂಧಿಸಿದ್ದೇನೆ; ಆದರೆ ಭವಿಷ್ಯತ್ತಿನಲ್ಲಿ ಯಾವಾಗಲಾದರೂ ನಾನು ವಾಸ್ತವವಾಗಿ ಸ್ವತಃ ಯೆಹೋವನ ಸಾಕ್ಷಿಗಳಲ್ಲಿ ಒಬ್ಬಳಾಗುವುದಾದರೆ, ಅದು ಕೇವಲ ನೀನು ಈಗ ನನಗೆ ಹೇಳಿದ ವಿಷಯದ ಕಾರಣದಿಂದಲೇ. ನಿನಗೆ ಕಿವಿಗೊಡುವುದು, ಒಂದು ಕತ್ತಲಾದ ಸ್ಥಳದಲ್ಲಿ ಬೆಳಕನ್ನು ನೋಡಲಾರಂಭಿಸುವಂತಿದೆ.”
12 ಇತರರು ಸತ್ಯವನ್ನು ಕಲಿಯುವಂತೆ ಸಹಾಯ ಮಾಡಲು, ಉಪಕಾರದ ಒಂದು ಕೃತ್ಯವು ಮೆಟ್ಟುಗಲ್ಲಾಗಿರಸಾಧ್ಯವಿದೆ. ಕ್ಷೇತ್ರ ಸೇವೆಯಿಂದ ಮನೆಗೆ ಹಿಂದಿರುಗಿ ಹೋಗುತ್ತಿರುವಾಗ, ಬಸ್ಸಿನಿಂದ ಇಳಿದಂತೆ ಅಸ್ವಸ್ಥಳಾಗಿ ಕಂಡುಬಂದ ಒಬ್ಬ ವೃದ್ಧ ಮಹಿಳೆಯನ್ನು ಇಬ್ಬರು ಸಹೋದರಿಯರು ಗಮನಿಸಿದರು. ಅವರು ನಿಂತು, ಆ ವೃದ್ಧ ಮಹಿಳೆಗೆ ಸಹಾಯದ ಅಗತ್ಯವಿದೆಯೇ ಎಂದು ಕೇಳಿದರು. ಸಂಪೂರ್ಣ ಅಪರಿಚಿತರಿಬ್ಬರು ತನ್ನಲ್ಲಿ ಆಸಕ್ತಿಯನ್ನು ತೋರಿಸುವರು ಎಂಬುದನ್ನು ಕಂಡು ಅವಳು ಎಷ್ಟು ಆಶ್ಚರ್ಯಚಕಿತಳಾದಳೆಂದರೆ, ಅಂತಹ ದಯೆಯ ವರ್ತನೆಯನ್ನು ಯಾವುದು ಕೆರಳಿಸಿತ್ತು ಎಂಬುದನ್ನು ತಿಳಿದುಕೊಳ್ಳಲು ಆಕೆ ಪಟ್ಟುಹಿಡಿದಳು. ಇದು ಒಂದು ಸಾಕ್ಷಿ ನೀಡುವಿಕೆಗೆ ಸಂದರ್ಭವನ್ನು ಒದಗಿಸಿತು. ಕೂಡಲೆ ಆ ಮಹಿಳೆಯು ತನ್ನ ವಿಳಾಸವನ್ನು ಕೊಟ್ಟಳು ಮತ್ತು ತನ್ನನ್ನು ಭೇಟಿಮಾಡುವಂತೆ ಅವರನ್ನು ಆದರದಿಂದ ಆಮಂತ್ರಿಸಿದಳು. ಒಂದು ಅಭ್ಯಾಸವು ಆರಂಭಿಸಲ್ಪಟ್ಟಿತು. ಬೇಗನೆ ಆ ಮಹಿಳೆಯು ಕೂಟಗಳಿಗೆ ಹಾಜರಾಗಲಾರಂಭಿಸಿದಳು ಮತ್ತು ಈಗ ಅವಳು ಸತ್ಯವನ್ನು ಇತರರೊಂದಿಗೆ ಹಂಚಿಕೊಳ್ಳುತ್ತಿದ್ದಾಳೆ.
13 ಒಬ್ಬ ವೃದ್ಧ ಸಹೋದರಿಯು, ಸಮುದ್ರತೀರದಲ್ಲಿ ಮುಂಜಾವಿನ ಸಾಕ್ಷಿಕಾರ್ಯದ ಪ್ರಯೋಜನವನ್ನು ಪಡೆದುಕೊಳ್ಳುತ್ತಾಳೆ. ಕಡಲ ತೀರದ ಮೇಲೆ ತಮ್ಮ ಬೆಳಗ್ಗಿನ ತಿರುಗಾಟಕ್ಕೆ ಬರುವ ಮನೆಗೆಲಸದವರು, ಶಿಶುಪಾಲಕರು, ಬ್ಯಾಂಕ್ ನೌಕರರು, ಮತ್ತು ಇತರರನ್ನು ಅವಳು ಸಂಧಿಸುತ್ತಾಳೆ. ಅವಳು ಮರಳಿನ ಬಳಿಯಲ್ಲಿರುವ ಬೆಂಚುಗಳ ಮೇಲೆ ಕುಳಿತುಕೊಂಡು ಬೈಬಲ್ ಅಭ್ಯಾಸಗಳನ್ನು ನಡೆಸುತ್ತಾಳೆ. ಅನೇಕ ಜನರು ಅವಳಿಂದ ಸತ್ಯವನ್ನು ಕಲಿತಿದ್ದಾರೆ ಮತ್ತು ಈಗ ಯೆಹೋವನ ಸಾಕ್ಷಿಗಳಾಗಿದ್ದಾರೆ.
14 ತನ್ನ ಐಹಿಕ ಉದ್ಯೋಗದ ಸ್ಥಳದಲ್ಲಿ, ಲೋಕದ ಸಮಸ್ಯೆಗಳನ್ನು ಬಗೆಹರಿಸುವುದೆಂದು ಅವಳು ನಂಬಿದ್ದ ಒಂದು ರಾಜಕೀಯ ಪಕ್ಷದ ಕುರಿತಾಗಿ ಒಬ್ಬ ಜೊತೆ ಕೆಲಸಗಾರ್ತಿಯು ಮಾತಾಡುವುದನ್ನು ಒಬ್ಬ ಸಹೋದರಿಯು ಕೇಳಿಸಿಕೊಂಡಳು. ದೇವರ ರಾಜ್ಯವು ಮಾಡಲಿರುವ ವಿಷಯಗಳ ಕುರಿತಾದ ವಾಗ್ದಾನಗಳನ್ನು ಹೇಳುತ್ತಾ, ಆ ಸಹೋದರಿಯು ಮಾತಾಡಿದಳು. ಕೆಲಸದ ಸ್ಥಳದಲ್ಲಿ ಮಾಡಿದ ಈ ಚರ್ಚೆಯು, ಮನೆಯಲ್ಲಿ ಒಂದು ಕ್ರಮವಾದ ಬೈಬಲ್ ಅಭ್ಯಾಸಕ್ಕೆ ನಡಿಸಿತು, ಮತ್ತು ಕ್ರಮೇಣ ಆ ಸ್ತ್ರೀಯೂ ಅವಳ ಗಂಡನೂ ಸಾಕ್ಷಿಗಳಾಗಿ ಪರಿಣಮಿಸಿದರು.
15 ನೀವು ಒಬ್ಬ ಸಾಕ್ಷಿಯಾಗಿದ್ದೀರೆಂಬುದನ್ನು ಎಂದಿಗೂ ಮರೆಯಬೇಡಿ! ಯೇಸು ತನ್ನ ಶಿಷ್ಯರನ್ನು ‘ಲೋಕದ ಬೆಳಕಿ’ನೋಪಾದಿ ವರ್ಣಿಸಿದಾಗ, ದೇವರ ವಾಕ್ಯದ ಆತ್ಮಿಕ ಜ್ಞಾನೋದಯದಿಂದ ಪ್ರಯೋಜನ ಪಡೆದುಕೊಳ್ಳುವಂತೆ ಇತರರಿಗೆ ಅವರು ಸಹಾಯ ಮಾಡುತ್ತಿರಬೇಕೆಂದು ಆತನು ತರ್ಕಿಸಿದನು. ಯೇಸುವಿನ ಸಲಹೆಯನ್ನು ನಾವು ಅನ್ವಯಿಸುವುದಾದರೆ, ನಾವು ನಮ್ಮ ಶುಶ್ರೂಷೆಯನ್ನು ಹೇಗೆ ವೀಕ್ಷಿಸುವೆವು?
16 ಉದ್ಯೋಗಕ್ಕಾಗಿ ಹುಡುಕುವಾಗ, ಕೆಲವು ಜನರು ಒಂದು ಅಂಶಕಾಲಿಕ ಕೆಲಸವನ್ನು ಆರಿಸಿಕೊಳ್ಳುತ್ತಾರೆ. ತಾವು ಅದರಲ್ಲಿ ಎಷ್ಟು ಸಮಯ ಮತ್ತು ಪ್ರಯತ್ನವನ್ನು ಪ್ರಯೋಗಿಸುವೆವು ಎಂಬುದರ ಮೇಲೆ ಅವರು ಪರಿಮಿತಿಗಳನ್ನಿಡುತ್ತಾರೆ, ಯಾಕೆಂದರೆ ಅವರು ಹೆಚ್ಚು ಪ್ರತಿಫಲದಾಯಕವಾಗಿ ಕಂಡುಕೊಳ್ಳುವ ಚಟುವಟಿಕೆಗಳನ್ನು ಬೆನ್ನಟ್ಟುವುದರಲ್ಲಿ ತಮ್ಮ ಅಧಿಕಾಂಶ ಸಮಯವನ್ನು ಉಪಯೋಗಿಸಲು ಇಷ್ಟಪಡುತ್ತಾರೆ. ನಮ್ಮ ಶುಶ್ರೂಷೆಯ ಕುರಿತಾಗಿ ನಾವು ತದ್ರೀತಿಯ ನೋಟವನ್ನು ತೆಗೆದುಕೊಳ್ಳುತ್ತಿದ್ದೇವೊ? ಶುಶ್ರೂಷೆಗಾಗಿ ನಾವು ಹಂಗುಳ್ಳವರಾಗಿದ್ದೇವೆ ಎಂದು ನಾವು ಭಾವಿಸಬಹುದಾದರೂ, ಅದಕ್ಕಾಗಿ ಸ್ವಲ್ಪ ಸಮಯವನ್ನು ಬದಿಗಿರಿಸಲು ಮನಸ್ಸುಳ್ಳವರಾಗಿರುವುದಾದರೂ, ನಮ್ಮ ಪ್ರಧಾನ ಅಭಿರುಚಿಗಳು ಬೇರೆ ಕಡೆ ಇರಬೇಕೊ?
17 ಅಂಶಕಾಲಿಕ ಕ್ರೈಸ್ತರಾಗಿರುವಂತಹ ಯಾವುದೇ ವಿಷಯವು ಇಲ್ಲ ಎಂಬುದನ್ನು ಗ್ರಹಿಸುತ್ತಾ, ‘ನಮ್ಮನ್ನು ನಿರಾಕರಿಸು’ವ ಮೂಲಕ ಮತ್ತು ಯೇಸುವನ್ನು “ನಿರಂತರವಾಗಿ” ಹಿಂಬಾಲಿಸಲು ಒಪ್ಪಿಕೊಳ್ಳುವ ಮೂಲಕ, ನಾವು ನಮ್ಮ ಸಮರ್ಪಣೆಯನ್ನು ಮಾಡಿದೆವು. (ಮತ್ತಾ. 16:24, NW) ಜನರು ಇರುವ ಸ್ಥಳದಲ್ಲೆಲ್ಲಾ ಅವರನ್ನು ತಲಪಲು ನಮ್ಮ ಬೆಳಕನ್ನು ಪ್ರಕಾಶಿಸುವಂತೆ ಬಿಡಲಿಕ್ಕಾಗಿರುವ ಪ್ರತಿಯೊಂದು ಸಂದರ್ಭದ ಪ್ರಯೋಜನವನ್ನು ಪಡೆದುಕೊಂಡು, “ಮನಃಪೂರ್ವಕವಾಗಿ”ರುತ್ತಾ ಮುಂದುವರಿಯುವುದು ನಮ್ಮ ಅಪೇಕ್ಷೆಯಾಗಿದೆ. (ಕೊಲೊ. 3:23, 24) ಲೌಕಿಕ ಮನೋಭಾವಗಳನ್ನು ನಾವು ಪ್ರತಿರೋಧಿಸಬೇಕು, ಆರಂಭದಲ್ಲಿದ್ದಂತೆಯೇ ನಮ್ಮ ಹುರುಪನ್ನು ಕಾಪಾಡಿಕೊಳ್ಳಬೇಕು, ಮತ್ತು ನಮ್ಮ ಬೆಳಕು ಹೆಚ್ಚು ಉಜ್ವಲವಾಗಿ ಪ್ರಕಾಶಿಸುತ್ತಾ ಮುಂದುವರಿಯುವುದನ್ನು ಖಚಿತಪಡಿಸಿಕೊಳ್ಳಬೇಕು. ಕೆಲವರು ತಮ್ಮ ಹುರುಪನ್ನು ಆರಿಹೋಗುವಂತೆ ಮತ್ತು ತಮ್ಮ ಬೆಳಕನ್ನು ಒಂದು ಮಂದ ಕಾಂತಿಯಾಗಿ—ಸ್ವಲ್ಪ ದೂರದ ಅಂತರದಿಂದ ದೃಷ್ಟಿಸಲಸಾಧ್ಯವಾದದ್ದಾಗಿ—ಪರಿಣಮಿಸುವಂತೆ ಅನುಮತಿಸಿರಬಹುದು. ಅಂತಹ ಒಬ್ಬನಿಗೆ, ಶುಶ್ರೂಷೆಗಾಗಿ ಕಳೆದುಕೊಂಡಿರುವಂತಹ ಹುರುಪನ್ನು ಮರಳಿಪಡೆಯಲು ಸಹಾಯದ ಅಗತ್ಯವಿರಬಹುದು.
18 ನಮ್ಮ ಸಂದೇಶವು ಅನೇಕರಿಗೆ ಜನಪ್ರಿಯವಲ್ಲದ್ದಾಗಿರುವ ಕಾರಣದಿಂದಾಗಿ ಕೆಲವರು ಹಿಂಜರಿಯುವ ಪ್ರವೃತ್ತಿಯುಳ್ಳವರಾಗಿರಬಹುದು. ಕ್ರಿಸ್ತನ ಕುರಿತಾದ ಸಂದೇಶವು “ನಾಶನದ ಮಾರ್ಗದಲ್ಲಿರುವವರಿಗೆ ಹುಚ್ಚುಮಾತಾಗಿ”ತ್ತು ಎಂದು ಪೌಲನು ಹೇಳಿದನು. (1 ಕೊರಿಂ. 1:18) ಹಾಗಿದ್ದರೂ, ಇತರರು ಏನೇ ಹೇಳಿದರೂ ಅವನು ಒತ್ತಯಾಪೂರ್ವಕವಾಗಿ ಘೋಷಿಸಿದ್ದು: “ಸುವಾರ್ತೆಯ ವಿಷಯದಲ್ಲಿ ನಾನು ನಾಚಿಕೊಳ್ಳುವವನಲ್ಲ.” (ರೋಮಾ. 1:16) ನಾಚಿಕೆಪಟ್ಟುಕೊಳ್ಳುವವನು ತಾನು ಕೀಳಾದವನು ಅಥವಾ ಅನರ್ಹನೆಂದು ಭಾವಿಸಿಕೊಳ್ಳುತ್ತಾನೆ. ವಿಶ್ವದ ಶ್ರೇಷ್ಠ ಪರಮಾಧಿಕಾರಿಯ ಕುರಿತು ಮತ್ತು ನಮ್ಮ ನಿತ್ಯ ಸಂತೋಷಕ್ಕಾಗಿ ಆತನು ಮಾಡಿರುವ ಅದ್ಭುತಕರವಾದ ಒದಗಿಸುವಿಕೆಗಳ ಕುರಿತು ಮಾತಾಡುವಾಗ, ನಾವು ಹೇಗೆ ನಾಚಿಕೆಪಟ್ಟುಕೊಳ್ಳಸಾಧ್ಯವಿದೆ? ಈ ಸತ್ಯತೆಗಳನ್ನು ಇತರರಿಗೆ ಹೇಳುವಾಗ, ನಮಗೆ ಕೀಳಾದ ಅಥವಾ ಅನರ್ಹರೆಂಬ ಅನಿಸಿಕೆಯಾಗುತ್ತದೆಂಬುದು ಯೋಚಿಸಲಸಾಧ್ಯವಾದ ವಿಷಯವಾಗಿದೆ. ಅದಕ್ಕೆ ಬದಲಾಗಿ, ನಮಗೆ “ನಾಚಿಕೆಪಟ್ಟುಕೊಳ್ಳುವುದಕ್ಕೆ ಯಾವ ಕಾರಣವೂ ಇಲ್ಲ” ಎಂಬ ನಮ್ಮ ನಿಶಿತ್ಚಾಭಿಪ್ರಾಯವನ್ನು ಪ್ರದರ್ಶಿಸುತ್ತಾ, ನಮ್ಮ ಕೈಲಾದದ್ದೆಲ್ಲವನ್ನು ಮಾಡಲು ನಿರ್ಬಂಧಿಸಲ್ಪಡುವಂತಹ ಅನಿಸಿಕೆ ನಮಗಿರಬೇಕು.—2 ತಿಮೊ. 2:15, NW.
19 ಭೂಮಿಯಾದ್ಯಂತ ಇರುವ ಎಲ್ಲಾ ದೇಶಗಳಲ್ಲಿ ಈಗ ಪ್ರಕಾಶಿಸುತ್ತಿರುವ ಸತ್ಯದ ಬೆಳಕು, ನೂತನ ಲೋಕದ ಪ್ರಮೋದವನವೊಂದರಲ್ಲಿ ಸದಾಕಾಲ ಜೀವಿಸುವ ನಿರೀಕ್ಷೆಯನ್ನು ಹೃತ್ಪೂರ್ವಕವಾಗಿ ನೀಡುತ್ತದೆ. ನಮ್ಮ ಬೆಳಕನ್ನು ನಿರಂತರವಾಗಿ ಪ್ರಕಾಶಿಸುವಂತೆ ಬಿಡಲಿಕ್ಕಾಗಿ ಕೊಡಲ್ಪಟ್ಟಿರುವ ಬುದ್ಧಿವಾದವನ್ನು ನಾವು ಹೃದಯಕ್ಕೆ ತೆಗೆದುಕೊಂಡಿದ್ದೇವೆ ಎಂಬುದನ್ನು ನಾವು ತೋರಿಸೋಣ! ನಮ್ಮ ಬೆಳಕನ್ನು ಪ್ರಕಾಶಿಸುವಂತೆ ನಾವು ಬಿಡುವುದಾದರೆ, ಪ್ರತಿ ದಿನ “ಕ್ರಿಸ್ತನಾದ ಯೇಸುವಿನ ಕುರಿತಾದ ಶುಭವರ್ತಮಾನವನ್ನು ಬೋಧಿಸುವುದು ಮತ್ತು ಘೋಷಿಸುವುದನ್ನು ಎಡೆಬಿಡದೆ ಮುಂದುವರಿಸಿದ” ಶಿಷ್ಯರಂತೆಯೇ, ನಮಗೆ ಹರ್ಷಾನಂದಪಡಲು ಕಾರಣವಿರುವುದು.—ಅ. ಕೃ. 5:42, NW.