ಯೇಸುವನ್ನು ನಿರಂತರವಾಗಿ ಹಿಂಬಾಲಿಸಿರಿ
1 ಒಂದು ಸಂದರ್ಭದಲ್ಲಿ ಯೇಸು ಹೇಳಿದ್ದು: “ಯಾವನಿಗಾದರೂ ನನ್ನ ಹಿಂದೆ ಬರುವದಕ್ಕೆ ಮನಸ್ಸಿದ್ದರೆ ಅವನು ತನ್ನನ್ನು ನಿರಾಕರಿಸಿ ತನ್ನ ಹಿಂಸಾಕಂಭವನ್ನು ಹೊತ್ತುಕೊಂಡು ನನ್ನನ್ನು ನಿರಂತರವಾಗಿ ಹಿಂಬಾಲಿಸಲಿ.” (ಮತ್ತಾ. 16:24, NW) ಯೇಸುವಿನ ಮಾತುಗಳಿಗೆ ನಾವು ನಿಶ್ಚಯವಾಗಿಯೂ ಸಕಾರಾತ್ಮಕವಾಗಿ ಪ್ರತಿಕ್ರಿಯಿಸಲು ಬಯಸುತ್ತೇವೆ. ಅವನ ಆಮಂತ್ರಣದ ಪ್ರತಿಯೊಂದು ವಾಕ್ಸರಣಿಯಲ್ಲಿ ಏನು ಒಳಗೂಡಿದೆಯೆಂಬುದನ್ನು ನಾವು ಪರೀಕ್ಷಿಸೋಣ.
2 ‘ಅವನು ತನ್ನನ್ನು ನಿರಾಕರಿಸಲಿ’: ನಾವು ನಮ್ಮ ಜೀವಗಳನ್ನು ಯೆಹೋವನಿಗೆ ಸಮರ್ಪಿಸುವಾಗ, ನಾವು ನಮ್ಮನ್ನೇ ನಿರಾಕರಿಸುತ್ತೇವೆ. ‘ನಿರಾಕರಿಸು’ ಎಂಬುದಾಗಿ ಭಾಷಾಂತರಿಸಲ್ಪಟ್ಟಿರುವ ಗ್ರೀಕ್ ಶಬ್ದದ ಮೂಲಾರ್ಥವು, “ಬೇಡವೆನ್ನುವುದು” ಎಂದಾಗಿದೆ. ಅದರ ಅರ್ಥ, ಎಲ್ಲಾ ನಿತ್ಯತೆಯಾದ್ಯಂತ ಯೆಹೋವನನ್ನು ಸಂತೋಷಪಡಿಸಲು ದೃಢಚಿತ್ತರಾಗಿದ್ದು, ನಾವು ನಮ್ಮ ಸ್ವಂತ ಹೆಬ್ಬಯಕೆಗಳನ್ನು, ಅಪೇಕ್ಷೆಗಳನ್ನು, ಸುಖಗಳನ್ನು ಮತ್ತು ಸ್ವಾರ್ಥ ಸುಖಭೋಗಗಳನ್ನು ಸ್ವಇಚ್ಛೆಯಿಂದ ಬಿಟ್ಟುಕೊಡುತ್ತೇವೆ.—ರೋಮಾ. 14:8; 15:3.
3 ‘ತನ್ನ ಹಿಂಸಾಕಂಭವನ್ನು ಹೊತ್ತುಕೊಳ್ಳಲಿ’: ಕ್ರೈಸ್ತನ ಜೀವಿತವು, ಯೆಹೋವನಿಗೆ ಸಲ್ಲಿಸುವ ತ್ಯಾಗಮಯ ಸೇವೆಯ ಹಿಂಸಾಕಂಭವನ್ನು ಎತ್ತಿಕೊಂಡು ಹೋಗುವ ಒಂದು ಜೀವಿತವಾಗಿದೆ. ಸ್ವತ್ಯಾಗದ ಆತ್ಮವನ್ನು ಪ್ರತಿಫಲಿಸಬಹುದಾದ ಒಂದು ವಿಧವು, ಶುಶ್ರೂಷೆಯಲ್ಲಿ ತನ್ನನ್ನು ಶ್ರಮಿಸಿಕೊಳ್ಳುವುದರ ಮೂಲಕವೇ ಆಗಿದೆ. ಈ ವರ್ಷ ಇಷ್ಟರ ವರೆಗೆ, ಅನೇಕ ಪ್ರಚಾರಕರು ಆಕ್ಸಿಲಿಯರಿ ಪಯನೀಯರ್ ಕಾರ್ಯದಲ್ಲಿ ಆನಂದಿಸುತ್ತಿದ್ದಾರೆ. ಪ್ರಾಯಶಃ ನೀವು ಅವರಲ್ಲಿ ಒಬ್ಬರಾಗಿದ್ದೀರಿ ಮತ್ತು ನಿಮಗೆ ಸಿಗುವಂತಹ ಆಶೀರ್ವಾದಗಳು, ನೀವು ಮಾಡುವಂತಹ ತ್ಯಾಗಗಳ ನಷ್ಟಭರ್ತಿಗಿಂತಲೂ ಹೆಚ್ಚಾಗಿವೆಯೆಂಬುದನ್ನು ದೃಢೀಕರಿಸಬಲ್ಲಿರಿ. ಆಕ್ಸಿಲಿಯರಿ ಪಯನೀಯರರಾಗಿ ಸೇವೆ ಸಲ್ಲಿಸಲು ಅಶಕ್ತರಾಗಿರುವವರು, ಸಭಾ ಪ್ರಚಾರಕರಾಗಿ ಸಾರುವಿಕೆಯ ಕಾರ್ಯದಲ್ಲಿ ಹೆಚ್ಚು ಸಮಯವನ್ನು ಕಳೆಯಲು ಆಗಿಂದಾಗ್ಗೆ ಏರ್ಪಾಡನ್ನು ಮಾಡಿದ್ದಾರೆ. ಆ ಗುರಿಯೊಂದಿಗೆ, ಕೆಲವು ಸಭೆಗಳು ಒಂದು ಕಾಲದಲ್ಲಿ ಕ್ಷೇತ್ರ ಸೇವೆಗಾಗಿ ಕೂಟಗಳನ್ನು ಮಾಡುತ್ತಿದ್ದ ಸಮಯಕ್ಕಿಂತ ಕೆಲವು ನಿಮಿಷ ಬೇಗ ಆರಂಭಿಸಲು ನಿಗದಿಪಡಿಸುತ್ತಿವೆ. ವಿಶೇಷವಾಗಿ ಬೇಸಗೆ ಕಾಲದಲ್ಲಿ ಅನೇಕ ಪ್ರಚಾರಕರು ಬೇಗನೆ ಆರಂಭಿಸಿ, ಕ್ಷೇತ್ರ ಸೇವೆಗಾಗಿ ಈ ಹೆಚ್ಚು ದೀರ್ಘವಾದ ಅವಧಿಯನ್ನು ಹೊಂದುವುದನ್ನು ಗಣ್ಯಮಾಡುತ್ತಾರೆ. ಕೆಲವರು ‘ಕೇವಲ ಇನ್ನೊಂದು ಮನೆಯನ್ನು’ ಸಂದರ್ಶಿಸಲು ಅಥವಾ ‘ಕೇವಲ ಕೆಲವು ನಿಮಿಷ ಹೆಚ್ಚು’ ಸೇವೆ ಮಾಡಲು ನಿರ್ಧರಿಸಿದಾಗಲೂ ಉತ್ಕೃಷ್ಟ ಫಲಿತಾಂಶಗಳನ್ನು ಪಡೆದಿದ್ದಾರೆ.
4 ಸ್ವತ್ಯಾಗದ ಆತ್ಮವು ಪ್ರದರ್ಶಿಸಲ್ಪಡುವ ಇನ್ನೊಂದು ವಿಧವು, ವೈಯಕ್ತಿಕ ಗುರಿಗಳನ್ನು ಇಡುವುದರ ಮೂಲಕವೇ. ಜಾಗರೂಕ ಯೋಜನೆ ಮತ್ತು ತಮ್ಮ ಕಾರ್ಯತಖ್ತೆಯನ್ನು ಅಳವಡಿಸಿಕೊಳ್ಳುವ ಮೂಲಕ ಕೆಲವರು ಕ್ರಮದ ಪಯನೀಯರರಾಗಿದ್ದಾರೆ. ಇನ್ನಿತರರು ಬೆತೆಲ್ ಅಥವಾ ಮಿಷನೆರಿ ಸೇವೆಗಾಗಿ ತಮ್ಮನ್ನು ದೊರಕಿಸಿಕೊಳ್ಳುವಂತೆ, ತಮ್ಮ ವ್ಯವಹಾರಗಳನ್ನು ಹೊಂದಿಸಲು ಶಕ್ತರಾಗಿರುತ್ತಾರೆ. ಕೆಲವರು, ರಾಜ್ಯ ಪ್ರಚಾರಕರಿಗಾಗಿ ಹೆಚ್ಚು ಅಗತ್ಯವಿರುವ ಒಂದು ಕ್ಷೇತ್ರಕ್ಕೆ ಸ್ಥಳಾಂತರಿಸಿದ್ದಾರೆ.
5 “ನನ್ನನ್ನು ನಿರಂತರವಾಗಿ ಹಿಂಬಾಲಿಸಲಿ”: ಯೇಸುವಿನ ಶಿಷ್ಯರು ಅನೇಕ ಸಂಕಷ್ಟಗಳನ್ನು ಅನುಭವಿಸಿದರೂ, ಶುಶ್ರೂಷೆಯಲ್ಲಿನ ಅವನ ಹುರುಪು ಮತ್ತು ತಾಳ್ಮೆಯಿಂದ ಅವರು ಉತ್ತೇಜಿಸಲ್ಪಟ್ಟರು. (ಯೋಹಾ. 4:34) ಅವನ ಉಪಸ್ಥಿತಿ ಮತ್ತು ಸಂದೇಶದಿಂದ ಅವರಿಗೆ ನವಚೈತನ್ಯಪಡೆದ ಅನಿಸಿಕೆ ಆಗುತ್ತಿತ್ತು. ಆದುದರಿಂದಲೇ ಅವನನ್ನು ಹಿಂಬಾಲಿಸಿದವರು ನಿಜವಾದ ಆನಂದವನ್ನು ಹೊರಸೂಸಿದರು. (ಮತ್ತಾ. 11:29) ಅದೇ ರೀತಿಯಲ್ಲಿ ನಾವು ರಾಜ್ಯ ಸಾರುವಿಕೆ ಮತ್ತು ಶಿಷ್ಯರನ್ನಾಗಿ ಮಾಡುವ ಸರ್ವ ಪ್ರಮುಖ ಕಾರ್ಯದಲ್ಲಿ ತಾಳಿಕೊಳ್ಳುವಂತೆ ಒಬ್ಬರನ್ನೊಬ್ಬರು ಉತ್ತೇಜಿಸೋಣ.
6 ಸ್ವತ್ಯಾಗದ ಆತ್ಮವನ್ನು ವಿಕಸಿಸುವ ಮೂಲಕ, ತನ್ನನ್ನು ನಿರಂತರವಾಗಿ ಹಿಂಬಾಲಿಸುವ ಯೇಸುವಿನ ಆಮಂತ್ರಣಕ್ಕೆ ನಾವೆಲ್ಲರೂ ಸಕಾರಾತ್ಮಕವಾಗಿ ಪ್ರತಿಕ್ರಿಯೆ ತೋರಿಸೋಣ. ನಾವು ಹಾಗೆ ಮಾಡಿದಂತೆ, ನಮಗೆ ಈಗ ಮಹಾ ಆನಂದವು ಇರುವುದು ಮತ್ತು ಭವಿಷ್ಯತ್ತಿನಲ್ಲಿ ಇನ್ನೂ ಶ್ರೇಷ್ಠವಾದ ಆಶೀರ್ವಾದಗಳನ್ನು ನಾವು ಮುನ್ನೋಡಸಾಧ್ಯವಿದೆ.