ಕೂಟಗಳಿಗೆ “ಮತ್ತಷ್ಟು” ಹಾಜರಾಗಿರಿ
1 ಜೊತೆಯಾಗಿ ಕೂಡಿಬರುವುದು ಯೆಹೋವನ ಜನರಿಗೆ ಯಾವಾಗಲೂ ಅತಿಪ್ರಮುಖವಾದ ಸಂಗತಿಯಾಗಿ ಪರಿಣಮಿಸಿದೆ. ಇಸ್ರಾಯೇಲ್ಯರಿಗೆ, ಸತ್ಯಾರಾಧನೆ, ದೈವಿಕ ಶಿಕ್ಷಣ, ಮತ್ತು ಆನಂದಭರಿತ ಸಹವಾಸದ ಕೇಂದ್ರಗಳಾಗಿ ದೇವಾಲಯ ಮತ್ತು ಅವರ ಸಭಾಮಂದಿರಗಳಿದ್ದವು. ತದ್ರೀತಿಯಲ್ಲಿ, ಆದಿ ಕ್ರೈಸ್ತರು ಜೊತೆಯಾಗಿ ಸೇರಿಬರುವುದನ್ನು ಬಿಟ್ಟುಬಿಡಲಿಲ್ಲ. ಈ ಕಠಿನವಾದ ಕಡೇ ದಿವಸಗಳಲ್ಲಿ ಒತ್ತಡಗಳು ಮತ್ತು ಸಂಕಷ್ಟಗಳು ಹೆಚ್ಚಾದಂತೆ, ನಮ್ಮ ಸಭಾ ಕೂಟಗಳು ಒದಗಿಸುವಂತಹ ಆತ್ಮಿಕ ಬಲಪಡಿಸುವಿಕೆಯ ಅಗತ್ಯ ನಮಗೂ ಇದೆ—ಮತ್ತು ಅದು ನಮಗೆ “ಮತ್ತಷ್ಟು” ಅಗತ್ಯವಾಗಿದೆ. (ಇಬ್ರಿ. 10:25) ನಾವು ಕೂಟಗಳಿಗೆ ಹಾಜರಾಗುವ ಮೂರು ಕಾರಣಗಳನ್ನು ಗಮನಿಸಿರಿ.
2 ಸಹವಾಸಕ್ಕಾಗಿ: “ಒಬ್ಬರನ್ನೊಬ್ಬರು ಸಂತೈಸಿಕೊಳ್ಳುತ್ತಾ ಒಬ್ಬರ ಭಕ್ತಿಯನ್ನೊಬ್ಬರು ವೃದ್ಧಿಪಡಿಸುತ್ತಾ ಇರ್ರಿ” ಎಂದು ಶಾಸ್ತ್ರಗಳು ನಮಗೆ ಬುದ್ಧಿಹೇಳುತ್ತವೆ. (1 ಥೆಸ. 5:11) ದೈವಭಕ್ತಿಯ ಸಹವಾಸವು ನಮ್ಮ ಮನಸ್ಸುಗಳನ್ನು ಒಳ್ಳೆಯ ವಿಚಾರಗಳೊಂದಿಗೆ ತುಂಬಿಸಿ, ನಮ್ಮನ್ನು ಒಳ್ಳೆಯ ಕಾರ್ಯಗಳನ್ನು ಮಾಡುವಂತೆ ಪ್ರಚೋದಿಸುತ್ತದೆ. ಆದರೆ ನಾವು ನಮ್ಮನ್ನೇ ಬೇರ್ಪಡಿಸಿಕೊಳ್ಳುವುದಾದರೆ, ನಾವು ಮೂರ್ಖ, ಸ್ವಾರ್ಥಪರ ಅಥವಾ ಅನೈತಿಕವೂ ಆದ ವಿಚಾರಗಳನ್ನು ಪೋಷಿಸುವ ಸ್ವಭಾವದವರಾಗುವೆವು.—ಜ್ಞಾನೋ. 18:1.
3 ಉಪದೇಶಕ್ಕಾಗಿ: ದೇವರ ಪ್ರೀತಿಯನ್ನು ನಮ್ಮ ಹೃದಯಗಳಲ್ಲಿ ಸಜೀವವಾಗಿಡಲಿಕ್ಕಾಗಿ ರಚಿಸಲ್ಪಟ್ಟಿರುವ ಬೈಬಲ್ ಉಪದೇಶದ ಸತತವಾದ ಕಾರ್ಯಕ್ರಮವನ್ನು ಕ್ರೈಸ್ತ ಕೂಟಗಳು ಒದಗಿಸುತ್ತವೆ. “ದೇವರ ಎಲ್ಲ ಸಲಹೆ”ಯನ್ನು (NW) ಅನ್ವಯಿಸಿಕೊಳ್ಳಲು ಅವು ಪ್ರಾಯೋಗಿಕ ನಿರ್ದೇಶನವನ್ನು ಕೊಡುತ್ತವೆ. (ಅ. ಕೃ. 20:27) ಸುವಾರ್ತೆಯನ್ನು ಸಾರುವ ಮತ್ತು ಕಲಿಸುವ ಕಲೆಯಲ್ಲಿ ಕೂಟಗಳು ನಮ್ಮನ್ನು ತರಬೇತುಗೊಳಿಸುತ್ತವೆ. ಈ ಕೌಶಲಗಳು, ಬೈಬಲ್ ಸತ್ಯವನ್ನು ಸ್ವೀಕರಿಸುವವರನ್ನು ಕಂಡುಹಿಡಿದು, ಅವರಿಗೆ ನೆರವನ್ನು ನೀಡುವ ವರ್ಣಿಸಲಸಾಧ್ಯವಾದ ಆನಂದವನ್ನು ಅನುಭವಿಸಲಿಕ್ಕಾಗಿ ಈಗ ಮತ್ತಷ್ಟು ಅಗತ್ಯವಾಗಿವೆ.
4 ಸಂರಕ್ಷಣೆಗಾಗಿ: ಈ ದುಷ್ಟ ಲೋಕದಲ್ಲಿ, ಸಭೆಯು ಒಂದು ನಿಜವಾದ ಆತ್ಮಿಕ ಆಶ್ರಯಸ್ಥಾನ—ಶಾಂತಿ ಮತ್ತು ಪ್ರೀತಿಯ ನೆಲೆ—ಆಗಿದೆ. ಸಭಾ ಕೂಟಗಳಲ್ಲಿ ನಾವು ಹಾಜರಿರುವಾಗ, ದೇವರ ಪವಿತ್ರಾತ್ಮವು, ನಮ್ಮಲ್ಲಿ “ಪ್ರೀತಿ ಸಂತೋಷ ಸಮಾಧಾನ ದೀರ್ಘಶಾಂತಿ ದಯೆ ಉಪಕಾರ ನಂಬಿಕೆ ಸಾಧುತ್ವ ಶಮೆದಮೆ”ಯ ಫಲಗಳನ್ನು ಉತ್ಪಾದಿಸುತ್ತಾ, ನಮ್ಮ ಮೇಲೆ ಒಂದು ಬಲವಾದ ಪ್ರಭಾವವನ್ನು ಬೀರುತ್ತದೆ. (ಗಲಾ. 5:22, 23) ನಂಬಿಕೆಯಲ್ಲಿ ಸ್ಥಿರರೂ ಭದ್ರರೂ ಆಗಿ ನಿಲ್ಲುವಂತೆ ಕೂಟಗಳು ನಮ್ಮನ್ನು ಬಲಪಡಿಸುತ್ತವೆ. ಮುಂದಿರುವ ಸಂಕಷ್ಟಗಳಿಗಾಗಿ ಸಿದ್ಧರಿರುವಂತೆ ಅವು ನಮ್ಮನ್ನು ತಯಾರಿಸುತ್ತವೆ.
5 ಕ್ರಮವಾದ ಕೂಟದ ಹಾಜರಿಯ ಮೂಲಕ, ಕೀರ್ತನೆ 133:1, 3ರಲ್ಲಿ ದಾಖಲಿಸಲ್ಪಟ್ಟಿರುವಂತೆ, ಕೀರ್ತನೆಗಾರನು ಏನನ್ನು ವರ್ಣಿಸಿದನೊ ಅದನ್ನು ನಾವು ಅನುಭವಿಸುತ್ತೇವೆ: “ಆಹಾ, ಸಹೋದರರು ಒಂದಾಗಿರುವದು ಎಷ್ಟೋ ಒಳ್ಳೇದು, ಎಷ್ಟೋ ರಮ್ಯವಾದದ್ದು!” ದೇವರ ಜನರು ಇಂದು ಎಲ್ಲಿಯೇ ಸೇವಿಸುತ್ತಿರಲಿ ಮತ್ತು ಜೊತೆಯಾಗಿ ಕೂಡಿಬರುತ್ತಿರಲಿ, “ಅಲ್ಲಿ ಆಶೀರ್ವಾದವೂ ಜೀವವೂ ಸದಾಕಾಲ ಇರಬೇಕೆಂದು ಯೆಹೋವನು ಆಜ್ಞಾಪಿಸಿದ್ದಾನೆ.” (ಓರೆಅಕ್ಷರಗಳು ನಮ್ಮವು.)