ಹೃದಮನಗಳನ್ನು ಆಕರ್ಷಿಸಲು ಬ್ರೋಷರುಗಳನ್ನು ಉಪಯೋಗಿಸಿರಿ
1 ಬೈಬಲ್ ಸತ್ಯವು, ಹೃದಮನಗಳನ್ನು ಆಕರ್ಷಿಸುವಂತಹ ರೀತಿಯಲ್ಲಿ ಪ್ರಸ್ತುತಪಡಿಸಲ್ಪಡಬೇಕು. ಯೇಸು ತನ್ನ ಕೇಳುಗರಿಗೆ ಸತ್ಯವನ್ನು ವಿವರಿಸಿದಾಗ, ಅವರಿಗೆ ಆಸಕ್ತಿದಾಯಕವಾಗಿದ್ದ ಮತ್ತು ಅವರನ್ನು ಪ್ರಚೋದಿಸಿದಂತಹ ವಿಷಯಗಳನ್ನು ಅವನು ಆರಿಸಿಕೊಂಡನು. (ಲೂಕ 24:17, 27, 32, 45) ನಮ್ಮ ಕೇಳುಗರ ಆತ್ಮಿಕ ಅಗತ್ಯಗಳನ್ನು ಗುರುತಿಸಲು ನಾವು ಮಾಡುವ ಪ್ರಯತ್ನದ ಮೇಲೆ ನಮ್ಮ ಶುಶ್ರೂಷೆಯ ಯಶಸ್ಸು ಮಹತ್ತರವಾಗಿ ಅವಲಂಬಿಸುತ್ತದೆ.
2 ನಾವು ಶುಶ್ರೂಷೆಯಲ್ಲಿ ಭೇಟಿಯಾಗುವವರ ಹೃದಮನಗಳನ್ನು ತಲಪಲು ಬ್ರೋಷರುಗಳು ಪರಿಣಾಮಕಾರಿಯಾಗಿರಬಲ್ಲವು. ಆಗಸ್ಟ್ ತಿಂಗಳಿನಲ್ಲಿ ನೀಡಲಾಗುವ ಪ್ರತಿಯೊಂದು ಬ್ರೋಷರಿನಲ್ಲಿರುವ ಸಂದೇಶಕ್ಕೆ ಯಾರು ಪ್ರತಿಕ್ರಿಯಿಸಬಹುದೆಂಬುದನ್ನು ಮುಂಚಿತವಾಗಿಯೇ ಆಲೋಚಿಸಿರಿ:
—ದೇವರು ನಮ್ಮ ಕುರಿತು ನಿಜವಾಗಿಯೂ ಚಿಂತಿಸುತ್ತಾನೋ? ಆರ್ಥಿಕವಾಗಿ ಕುಸಿತದಿಂದ ಕಷ್ಟಾನುಭವಿಸುತ್ತಿರುವ ಅಥವಾ ದುರಂತವನ್ನು ಅನುಭವಿಸಿರುವ ಜನರು, ಕಷ್ಟಾನುಭವದಿಂದ ಮುಕ್ತವಾಗಿರುವ ಒಂದು ಭವಿಷ್ಯತ್ತಿನ ಕುರಿತಾದ ಈ ಸಾಂತ್ವನದಾಯಕ ಸಂದೇಶವನ್ನು ಗಣ್ಯಮಾಡುವರು.
—ಜೀವಿತದ ಉದ್ದೇಶವೇನು—ನೀವು ಅದನ್ನು ಹೇಗೆ ಕಂಡುಹಿಡಿಯಬಲ್ಲಿರಿ? ತಮ್ಮ ಭವಿಷ್ಯತ್ತಿನ ಕುರಿತು ಗಂಭೀರವಾಗಿ ಯೋಚಿಸುತ್ತಿರುವ ಯುವ ಜನರು, ಈ ಬ್ರೋಷರಿನಲ್ಲಿ ಕಂಡುಬರುವ ಬೈಬಲ್ ಆಧಾರಿತ ಉತ್ತರಗಳಿಂದ ಪ್ರಯೋಜನವನ್ನು ಪಡೆದುಕೊಳ್ಳುವರು.
—ಭೂಮಿಯಲ್ಲಿ ಸದಾಜೀವನವನ್ನು ಆನಂದಿಸಿರಿ! ಅನೇಕ ಚಿತ್ರಗಳು ಮತ್ತು ಉಲ್ಲೇಖಿತ ವಚನಗಳು, ಎಳೆಯ ಮಕ್ಕಳು ಮತ್ತು ಓದಲು ಸೀಮಿತ ಸಾಮರ್ಥ್ಯವುಳ್ಳ ಜನರು ದೇವರ ಉದ್ದೇಶಗಳನ್ನು ಅರ್ಥಮಾಡಿಕೊಳ್ಳುವಂತೆ ಸಹಾಯಮಾಡುವುದು.
—ಪ್ರಮೋದವನವನ್ನು ತರುವ ಸರಕಾರ. (ಇಂಗ್ಲಿಷ್) ಸರಕಾರದೊಂದಿಗೆ ಸಂಬಂಧಿಸಿರುವ ಯಾವನೇ ವ್ಯಕ್ತಿಯು, ದೇವರ ರಾಜ್ಯವು ಮಾನವಕುಲದ ಕಷ್ಟಕರವಾದ ಸಮಸ್ಯೆಗಳನ್ನು ಬಗೆಹರಿಸುವ ವಿಧದ ಕುರಿತಾದ ಈ ಸಂದೇಶಕ್ಕೆ ಪ್ರತಿಕ್ರಿಯಿಸಬಹುದು.
—ನೀವು ಪ್ರೀತಿಸುವ ಯಾರಾದರೊಬ್ಬರು ಸಾಯುವಾಗ. ಚಿತಾಗಾರಗಳನ್ನು ನೋಡಿಕೊಳ್ಳುವವರಲ್ಲಿ ಅನೇಕರು, ವಿಯೋಗಿ ಕುಟುಂಬಗಳಿಗಾಗಿ ಈ ಬ್ರೋಷರಿನ ಪ್ರತಿಗಳು ಇರುವುದನ್ನು ಗಣ್ಯಮಾಡುತ್ತಾರೆ. ಸ್ಮಶಾನಗಳ ಬಳಿ ಸಾಕ್ಷಿನೀಡುವ ಪ್ರಚಾರಕರು, ಶೋಕಿಸುವವರಿಗೆ ಸಾಂತ್ವನ ನೀಡಲು ಈ ಬ್ರೋಷರನ್ನು ಉಪಯೋಗಿಸುತ್ತಾರೆ. ಒಂದು ಸಮಾಧಿಯ ಬಳಿ ಪ್ರಾರ್ಥಿಸುತ್ತಿದ್ದ ಏಳು ಮಂದಿಯಿದ್ದ ಒಂದು ಕುಟುಂಬವನ್ನು ಇಬ್ಬರು ಸಹೋದರಿಯರು ಸಮೀಪಿಸಿದರು. ಈ ಬ್ರೋಷರಿನಿಂದ ಸಾಂತ್ವನದಾಯಕ ಸಂದೇಶವನ್ನು ಹಂಚಿಕೊಂಡದ್ದರ ಫಲಿತಾಂಶವಾಗಿ, ಮರುದಿನವೇ ತಾಯಿಯೊಂದಿಗೆ ಒಂದು ಬೈಬಲ್ ಅಭ್ಯಾಸವು ಆರಂಭಿಸಲ್ಪಟ್ಟಿತು!
—ನೀವು ತ್ರೈಯೈಕ್ಯವನ್ನು ನಂಬ ಬೇಕೋ? ಕ್ರೈಸ್ತಪ್ರಪಂಚದ ಮೂಲಭೂತ ಸಿದ್ಧಾಂತದ ಈ ಸಪ್ರಮಾಣದ ನಿರೂಪಣೆಯಲ್ಲಿರುವ ಸತ್ಯಕ್ಕೆ, ಬಲವಾದ ಧಾರ್ಮಿಕ ಮನಸ್ಸುಳ್ಳ ವ್ಯಕ್ತಿಯೊಬ್ಬನು ಪ್ರತಿಕ್ರಿಯಿಸಬಹುದು.
3 ಪ್ರತಿಯೊಂದು ಬ್ರೋಷರಿನೊಂದಿಗೆ ಚಿರಪರಿಚಿತರಾಗಿರಿ, ಮತ್ತು ಅದನ್ನು ನಿಮ್ಮ ಟೆರಿಟೊರಿಯಲ್ಲಿ ಅತ್ಯುತ್ತಮವಾಗಿ ಹೇಗೆ ಉಪಯೋಗಿಸುವುದೆಂಬುದನ್ನು ನಿರ್ಧರಿಸಿರಿ. ಸೂಚಿಸಲ್ಪಟ್ಟಿರುವ ನಿರೂಪಣೆಗಳಿಗಾಗಿ, ನಮ್ಮ ರಾಜ್ಯದ ಸೇವೆಯ ಜುಲೈ 1998ರ ಸಂಚಿಕೆಯ ಕೊನೆಯ ಪುಟವನ್ನು ನೋಡಿರಿ. ಜನರ ಹೃದಮನಗಳನ್ನು ತಲಪಲು ನೀವು ಮಾಡುವ ಪ್ರಯತ್ನಗಳನ್ನು ಯೆಹೋವನು ಆಶೀರ್ವದಿಸಲಿ.—ಮಾರ್ಕ 6:34.