ನಿಮ್ಮ ಶುಶ್ರೂಷೆಯಲ್ಲಿ ಪರಿಣಾಮಕಾರಿಯಾಗಿರ್ರಿ
1 ಆಕಾಶವು ಕಪ್ಪಾಗುತ್ತದೆ ಮತ್ತು ವಿಕಟವಾದ ಶಬ್ದವು ಕಿವುಡಾಗಿಸುವಂತೆ ಹೆಚ್ಚುತ್ತದೆ. ಹೊಗೆಯಂತಹ ಮೋಡವೊಂದು ಕೆಳಗಿಳಿಯುತ್ತದೆ. ಅದೇನು? ಭೂಮಿಯನ್ನು ಸಂಪೂರ್ಣವಾಗಿ ನಾಶಮಾಡಲು ಬರುತ್ತಿರುವ ಕೋಟಿಗಟ್ಟಲೆ ಸಂಖ್ಯೆಯ ಮಿಡತೆಗಳ ಒಂದು ಸೈನ್ಯವಾಗಿದೆ! ಪ್ರವಾದಿ ಯೋವೇಲನಿಂದ ವರ್ಣಿಸಲ್ಪಟ್ಟ ಈ ದೃಶ್ಯವು, ಇಂದು ದೇವರ ಅಭಿಷಿಕ್ತ ಸೇವಕರು ಮತ್ತು ಅವರ ಸಂಗಾತಿಗಳಾದ ಮಹಾಸಮೂಹದ ಪ್ರಚಾರ ಕಾರ್ಯದಲ್ಲಿ ನೆರವೇರಿಕೆಯನ್ನು ಹೊಂದಿದೆ.
2 ಮೇ 1, 1998ರ ಕಾವಲಿನಬುರುಜು, ಪುಟ 11, ಪ್ಯಾರಗ್ರಾಫ್ 19 ಹೀಗೆ ಹೇಳುತ್ತದೆ: “ದೇವರ ಆಧುನಿಕ ದಿನದ ಮಿಡತೆ ಸೈನ್ಯವು, ಕ್ರೈಸ್ತಪ್ರಪಂಚದ “ಪಟ್ಟಣ”ದಲ್ಲಿ ಒಂದು ಸಂರ್ಪೂಣ ಸಾಕ್ಷಿಯನ್ನು ಕೊಟ್ಟಿದೆ. (ಯೋವೇಲ2:9) . . . ಯೆಹೋವನ ಸಂದೇಶವನ್ನು ಘೋಷಿಸುತ್ತಿರುವಾಗ, ಕೋಟಿಗಟ್ಟಲೆ ಮನೆಗಳನ್ನು ಪ್ರವೇಶಿಸುತ್ತಾ, ಬೀದಿಯಲ್ಲಿ ಜನರನ್ನು ಸಮೀಪಿಸುತ್ತಾ, ಅವರೊಂದಿಗೆ ಫೋನ್ ಮೂಲಕ ಮಾತಾಡುತ್ತ ಮತ್ತು ಸಾಧ್ಯವಿರುವ ಯಾವುದೇ ವಿಧದಲ್ಲಿ ಅವರನ್ನು ಸಂರ್ಪಕಿಸಿಸುತ್ತಾ ಅವರು ಈಗಲೂ ಎಲ್ಲ ಅಡಚಣೆಗಳನ್ನೂ ದಾಟುತ್ತಿದ್ದಾರೆ.” ದೇವರು ನೇಮಿಸಿರುವ ಈ ಕೆಲಸದಲ್ಲಿ ಪಾಲ್ಗೊಳ್ಳುವುದು ಒಂದು ಮಹಾ ಸುಯೋಗವಾಗಿರುವುದಿಲ್ಲವೋ?
3 ಕೇವಲ ತಿನ್ನುವುದಕ್ಕೆ ಪ್ರಾಮುಖ್ಯವನ್ನು ಕೊಡುವ ಅಕ್ಷರಾರ್ಥ ಮಿಡತೆಗಳಂತಿರದೆ, ಯೆಹೋವನ ಸೇವಕರಾದ ನಾವು ಪ್ರಚಾರಮಾಡುವವರ ಜೀವಗಳಿಗಾಗಿ ಚಿಂತೆಯನ್ನು ತೋರಿಸುತ್ತೇವೆ. ದೇವರ ವಾಕ್ಯದಲ್ಲಿರುವ ಮಹಾ ಸತ್ಯಗಳನ್ನು ಇತರರು ಕಲಿತುಕೊಳ್ಳುವಂತೆ ಅವರಿಗೆ ಸಹಾಯಮಾಡಲು ಮತ್ತು ಅನಂತಕಾಲದ ರಕ್ಷಣೆಗೆ ನಡೆಸುವ ಹೆಜ್ಜೆಗಳನ್ನು ಅವರು ತೆಗೆದುಕೊಳ್ಳುವಂತೆ ಪ್ರಚೋದಿಸಲು ನಾವು ಬಯಸುತ್ತೇವೆ. (ಯೋಹಾ. 17:3; 1ತಿಮೊ. 4:16) ಆದಕಾರಣ, ನಾವು ನಮ್ಮ ಶುಶ್ರೂಷೆಯಲ್ಲಿ ಪರಿಣಾಮಕಾರಿಯಾಗಿರಬೇಕು. ನಾವು ಪ್ರಚಾರಮಾಡುವ ವಿಧಾನವು ಯಾವುದೇ ಆಗಿರಲಿ, ಉತ್ತಮ ಫಲಿತಾಂಶಗಳನ್ನು ತರುವಂತಹ ರೀತಿಯಲ್ಲಿ ಮತ್ತು ಸರಿಯಾದ ಸಮಯದಲ್ಲಿ ಅದನ್ನು ನಾವು ಮಾಡುತ್ತೀದ್ದೇವೋ ಎಂಬುದನ್ನು ನೋಡುವ ಅಗತ್ಯವಿದೆ. “ಈ ಪ್ರಪಂಚದ ತೋರಿಕೆಯು ಗತಿಸಿಹೋಗುತ್ತಾ” ಇರುವುದರಿಂದ, ನಾವು ಆದಷ್ಟು ಫಲಪ್ರದರಾಗುವುದನ್ನು ಖಚಿತಪಡಿಸಿಕೊಳ್ಳಲಿಕ್ಕಾಗಿ, ನಾವು ನಮ್ಮ ವಿಧಾನಗಳನ್ನು ಮತ್ತು ಪ್ರಸ್ತಾವನೆಯನ್ನು ಚೆನ್ನಾಗಿ ಪರಿಶೀಲಿಸಬೇಕು.— 1ಕೊರಿಂ. 7:31.
4 ನಾವು ಜನರನ್ನು ಅನೇಕ ವಿಧಗಳಲ್ಲಿ ಸಂಪರ್ಕಿಸಲು ಪ್ರಯತ್ನಿಸುವುದಾದರೂ, ಮನೆಮನೆಯ ಸಾಕ್ಷಿಕಾರ್ಯವು ಈಗಲೂ ನಮ್ಮ ಶುಶ್ರೂಷೆಯ ಬೆನ್ನೆಲುಬು ಆಗಿದೆ. ನೀವು ಭೇಟಿಮಾಡುವಾಗ ಅನೇಕ ವೇಳೆ ಜನರು ಮನೆಯಲ್ಲಿರುವುದನ್ನು ಅಥವಾ ನಿದ್ರಿಸುತ್ತಿರುವುದನ್ನು ನೀವು ಕಂಡುಕೊಳ್ಳುತ್ತೀರೋ? ಅವರೊಂದಿಗೆ ನೀವು ಸುವಾರ್ತೆಯ ಸಂದೇಶವನ್ನು ಹಂಚಿಕೊಳ್ಳಲು ಸಾಧ್ಯವಾಗದೇ ಇದ್ದುದರಿಂದ ನಿಮಗೆಷ್ಟು ನಿರಾಶೆಯಾಗುತ್ತದೆ! ಈ ಸಮಸ್ಯೆಯನ್ನು ನೀವು ಹೇಗೆ ಜಯಿಸಬಲ್ಲಿರಿ?
5 ಹೊಂದಿಕೊಳ್ಳುವವರೂ ವಿವೇಚನಾಶಕ್ತಿಯನ್ನು ತೋರಿಸುವವರೂ ಆಗಿರ್ರಿ: ಪ್ರಥಮ ಶತಮಾನದ ಇಸ್ರಾಯೇಲಿನಲ್ಲಿ, ಬೆಸ್ತರು ರಾತ್ರಿಯ ಹೊತ್ತಿನಲ್ಲಿ ಮೀನುಹಿಡಿಯುತ್ತಿದ್ದರು. ರಾತ್ರಿಯಲ್ಲೇ ಏಕೆ? ಆ ಸಮಯವು ಅವರಿಗೆ ಅಷ್ಟೇನೂ ಹೆಚ್ಚು ಅನುಕೂಲಕರವಾಗಿರದಿದ್ದರೂ, ಹೆಚ್ಚು ಮೀನುಗಳನ್ನು ಹಿಡಿಯಲು ಅದು ಒಳ್ಳೆಯ ಸಮಯವಾಗಿತ್ತು. ಅದು ಹೆಚ್ಚು ಉತ್ಪಾದಕ ಸಮಯವಾಗಿತ್ತು. ಇದರ ಬಗ್ಗೆ ಹೇಳಿಕೆಯನ್ನೀಡುತ್ತಾ, ಜೂನ್ 15, 1992ರ ದ ವಾಚ್ಟವರ್ ಪತ್ರಿಕೆ ಹೇಳಿದ್ದು: “ನಿವಾ ಸಹ ನಮ್ಮ ಟೆರಿಟೊರಿಯನ್ನು ಚೆನ್ನಾಗಿ ತಿಳಿದುಕೊಳ್ಳಬೇಕು. ಮತ್ತು ಹೆಚ್ಚಿನ ಜನರು ಮನೆಯಲ್ಲಿದ್ದು, ಕಿವಿಗೊಡುವವರಾಗಿರುವಾಗ ನಾವು ಅವರನ್ನು ಸಂದರ್ಶಿಸಬೇಕು.” ಸಮಾಜದಲ್ಲಿನ ಆಗುಹೋಗುಗಳನ್ನು ತುಂಬ ಸೂಕ್ಷ್ಮರೀತಿಯಲ್ಲಿ ಗಮನಿಸಿದ ಮೂಲಕ ಈ ವಿಷಯ ತಿಳಿದುಬಂದಿದೆ ಏನೆಂದರೆ, ಅನೇಕ ಹೊರವಲಯದ ಸಮುದಾಯ ಮತ್ತು ವಾಸಸ್ಥಾನಗಳಲ್ಲಿ, ಶನಿವಾರ ಮತ್ತು ಭಾನುವಾರದ ಮುಂಜಾನೆಯಲ್ಲಿ ನಾವು ಭೇಟಿಮಾಡುವಾಗ ಅವರು ಮನೆಯಲ್ಲಿರುತ್ತಾರಾದರೂ, ಆ ಸಮಯದಲ್ಲಿ ಸಾಮಾನ್ಯವಾಗಿ ಕಿವಿಗೊಡುವವರಾಗಿರುವುದಿಲ್ಲ. ನಿಮ್ಮ ಕ್ಷೇತ್ರದಲ್ಲಿ ವಿಷಯವು ಹೀಗಿರುವದಾದರೆ, ನಿಮ್ಮ ಭೇಟಿಗಳ ಸಮಯವನ್ನು, ಬೆಳಿಗ್ಗೆ ಬೇರೊಂದು ಸಮಯಕ್ಕೆ ಅಥವಾ ಸಾಧ್ಯವಾದರೆ ಮಧ್ಯಾಹ್ನಕ್ಕೆ ನೀವು ಹೊಂದಿಸಿಕೊಳ್ಳಸಾಧ್ಯವಿದೆಯೋ? ಇದು ನಮ್ಮ ಶುಶ್ರೂಷೆಯ ಪರಿಣಾಮಕಾರಿತ್ವವನ್ನು ಹೆಚ್ಚಿಸುವುದಲ್ಲದೆ, ನಮ್ಮ ನೆರೆಯವರಿಗಾಗಿ ಪರಿಗಣನೆಯನ್ನು ತೋರಿಸಲು ಸಹ ಒಂದು ಉತ್ತಮ ವಿಧವಾಗಿದೆ. ಇದು ನಮ್ಮ ಕ್ರೈಸ್ತ ಪ್ರೀತಿಯ ಒಂದು ಪ್ರಮಾಣವಾಗಿದೆ.–ಮತ್ತಾ. 7:12.
6 ‘ನಮ್ಮ ಸೈರಣೆಯು[“ವಿವೇಚನೆಯು” NW]ಎಲ್ಲಾ ಮನುಷ್ಯರಿಗೆ ಗೊತ್ತಾಗಲಿ’ ಎಂದು ಫಿಲಿಪ್ಪಿ 4:5ರಲ್ಲಿ ಅಪೊಸ್ತಲ ಪೌಲನು ನಮಗೆ ಜ್ಞಾಪಿಸುತ್ತಾನೆ. ಈ ಪ್ರೇರಿತ ನಿರ್ದೇಶನಕ್ಕೆ ಹೊಂದಿಕೆಯಲ್ಲಿ, ನಾವು ನಮ್ಮ ಸಾಕ್ಷಿಕಾರ್ಯದ ನೇಮಕವನ್ನು ಹುರುಪಿನಿಂದಲೂ ಉಲ್ಲಾಸದಿಂದಲೂ ಮಾಡಿದಂತೆ, ನಾವು ನಮ್ಮ ವಿಧಾನಗಳಲ್ಲಿ ಸಮತೆಯುಳ್ಳವರೂ, ವಿವೇಚನೆಯುಳ್ಳವರೂ ಆಗಿರತಕ್ಕದು. ನಾವು ‘ಸಾರ್ವಜನಿಕವಾಗಿ ಮತ್ತು ಮನೆಮನೆಯ ಸಾಕ್ಷಿಕಾರ್ಯದಲ್ಲಿ ಕಲಿಸುವುದರಿಂದ ಹಿಂದೇಟುಹಾಕಲು’ ಬಯಸುವುದಿಲ್ಲವಾದರೂ, ನಾವು ನಮ್ಮ ಮನೆಮನೆಯ ಶುಶ್ರೂಷೆಯನ್ನು ವಿವೇಚನೆಯುಳ್ಳ ಹಾಗೂ ಫಲಕಾರಿಯಾದ ರೀತಿಯಲ್ಲಿ ಮಾಡುತ್ತೀದ್ದೇವೆಂಬುದನ್ನು ಖಚಿತಪಡಿಸಿಕೊಳ್ಳಬೇಕು. (ಅ. ಕೃ. 20:20, NW) ಪ್ರಥಮ ಶತಮಾನದ ಇಸ್ರಾಯೇಲಿನಲ್ಲಿದ್ದ ಬೆಸ್ತರಂತೆ, ನಾವು ಫಲಕಾರಿಯಾಗಿರಲು ಸಾಧ್ಯವಿರುವ ಸಮಯಗಳಲ್ಲಿ ‘ಮೀನುಹಿಡಿಯುವುದರ’ ಕುರಿತಾಗಿ ಆಸ್ಥೆಯನ್ನು ವಹಿಸುತ್ತೇವೆ. ಹೊರತು, ನಮಗೆ ಹೆಚ್ಚು ಅನುಕೂಲಕರವಾಗಿರುವ ಸಮಯದ ಕುರಿತಾಗಿ ಚಿಂತಿಸುವುದಿಲ್ಲ.
7 ಯಾವ ಹೊಂದಾಣಿಕೆಗಳನ್ನು ಮಾಡಸಾಧ್ಯವಿದೆ? ಹೆಚ್ಚಿನ ವೇಳೆ, ಶನಿವಾರ ಮತ್ತು ಭಾನುವಾರದಂದು ಬೆಳಗ್ಗೆ 9:00 ಅಥವಾ 9:30ರ ಸಮಯದಲ್ಲಿ ಕ್ಷೇತ್ರ ಸೇವೆಗಾಗಿ ಕೂಟಗಳು ನಡೆಸಲ್ಪಡುತ್ತವೆ. ಆಮೇಲೆ ಗುಂಪು ತಕ್ಷಣವೇ ಮನೆಯಿಂದ ಮನೆಗೆ ಸಾಕ್ಷಿ ನೀಡಲು ಟೆರಿಟೊರಿಗೆ ತೆರಳುತ್ತದೆ. ಆದರೆ, ಹಿರಿಯರ ಕೆಲವು ಮಂಡಳಿಗಳು, ಗುಂಪು ಶುಶ್ರೂಷೆಯ ಮತ್ತು ಇತರ ವಿಧಗಳಲ್ಲಿಯೂ ಪಾಲ್ಗೊಳ್ಳುವಂತೆ ಏರ್ಪಡಿಸಿವೆ. ಅಂದರೆ, ನಿವಾಸಸ್ಥಾನಗಳಲ್ಲಿ ಮನೆಯಿಂದ ಮನೆಗೆ ಸಾಕ್ಷಿನೀಡುವ ಮುಂಚೆ, ರಸ್ತೆಬದಿಯ ಸಾಕ್ಷಿ, ವ್ಯಾಪಾರ ಕ್ಷೇತ್ರದಲ್ಲಿ ಸಾಕ್ಷಿ ಅಥವಾ ಪುನರ್ಭೇಟಿಗಳನ್ನು ಮಾಡುವಂತೆ ಏರ್ಪಡಿಸಿವೆ. ಇತರ ಸಭೆಗಳು ಕ್ಷೇತ್ರ ಸೇವೆಗಾಗಿ ಕೂಟದ ಸಮಯಗಳನ್ನು ಬೆಳಗ್ಗೆ 10:00 ಗಂಟೆ, ಅಥವಾ ಅಪರಾಹ್ಣ 12:00 ಗಂಟೆಗೆ ಇಟ್ಟಿವೆ. ಆಮೇಲೆ ಗುಂಪು ನೇರವಾಗಿ ಮನೆಮನೆಯ ಸಾಕ್ಷಿಕಾರ್ಯದಲ್ಲಿ ತೊಡಗುತ್ತದೆ ಮತ್ತು ಸಂಜೆಯ ತನಕ ಅಲ್ಲಿ ಸೇವೆ ಮಾಡುತ್ತದೆ. ಕೆಲವೊಂದು ಟೆರಿಟೊರಿಗಳಲ್ಲಿ, ಬೆಳಗ್ಗಿನ ಸಮಯಕ್ಕಿಂತಲೂ ಮಧ್ಯಾಹ್ನದ ಸಮಯವು ಕ್ಷೇತ್ರ ಸೇವೆಗೆ ಉಪಯುಕ್ತವಾದ ಸಮಯವಾಗಿರುತ್ತದೆ. ಅಂತಹ ಹೊಂದಾಣಿಗಳು ಮನೆಮನೆಯ ಸಾಕ್ಷಿಕಾರ್ಯದಲ್ಲಿ ಫಲವನ್ನು ತರಲು ನೆರವು ನೀಡಬಹದು.
8 ಅರಿವುಳ್ಳವರೂ ಜಾಣ್ಮೆಯುಳ್ಳವರೂ ಆಗಿರ್ರಿ: ನಾವು ಜನರನ್ನು ಮನೆಯಿಂದ ಮನೆಯಲ್ಲಿ ಭೇಟಿಯಾಗುವಾಗ, ನಮ್ಮ ಸಂದೇಶಕ್ಕೆ ವಿವಿಧ ರೀತಿಯ ಪ್ರತಿಕ್ರಿಯೆಗಳು ಸಿಗುತ್ತವೆ. ಕೆಲವು ಮನೆಯವರು ಕಿವಿಗೊಡುತ್ತಾರೆ. ಇತರರು ಉದಾಸೀನರಾಗಿರುತ್ತಾರೆ ಮತ್ತು ಕೆಲವರು ವಾದಮಾಡುವವರೂ ಅಥವಾ ಜಗಳಮಾಡುವವರೂ ಆಗಿರಬಹುದು. ಕೊನೆಯಲ್ಲಿ ಹೇಳಿರುವಂತಹ ಜನರ ವಿಷಯದಲ್ಲಿ, ರೀಸನಿಂಗ್ ಫ್ರಮ್ ದ ಸ್ಕ್ರಿಪ್ಚರ್ಸ್ ಪುಸ್ತಕದ 7ನೇ ಪುಟದಲ್ಲಿ, ನಮಗೆ ಈ ರೀತಿಯಲ್ಲಿ ಜ್ಞಾಪಿಸಲಾಗಿದೆ. “ಸತ್ಯಕ್ಕಾಗಿ ಗೌರವವನ್ನು ತೋರಿಸದ ಜನರೊಂದಿಗೆ ‘ವಾದಗಳನ್ನು ಗೆಲ್ಲುವುದು’” ನಮ್ಮ ಉದ್ದೇಶವಾಗಿರುವುದಿಲ್ಲ. ಮನೆಯವನು ವಿರೋಧಿಸುವಲ್ಲಿ, ನಾವು ಅಲ್ಲಿಂದ ಹೊರಟುಹೋಗುವುದು ಉತ್ತಮವಾಗಿರುವುದು. ಜನರು ನಮ್ಮೊಂದಿಗೆ ಮಾತಾಡುವಂತೆ ಅಥವಾ ನಮ್ಮ ದೃಷ್ಟಿಕೋನವನ್ನು ಅವರು ಸ್ವೀಕರಿಸುವಂತೆ ಒತ್ತಾಯಿಸುವುದರಿಂದ, ನಾವು ವಿನಾ ಕಾರಣ ಎಂದೂ ವೈರತ್ವಕಟ್ಟಿಕೊಳ್ಳಬಾರದು. ನಾವು ನಮ್ಮ ಸಂದೇಶವನ್ನು ಬಲವಂತದಿಂದ ಜನರಿಗೆ ಹೇಳುವುದಿಲ್ಲ. ಹಾಗೆ ಮಾಡುವುದು ವಿವೇಚನೆಯಿಲ್ಲದ್ದಾಗಿರುವುದು ಮತ್ತು ಇತರ ಸಾಕ್ಷಿಗಳಿಗೆ ಸಮಸ್ಯೆಗಳನ್ನು ಉಂಟುಮಾಡಸಾಧ್ಯವಿದೆ. ಒಂದು ರೀತಿಯಲ್ಲಿ ಹೇಳಬೇಕಾದರೆ, ಅದು ಸಾಕ್ಷಿಕಾರ್ಯಕ್ಕೂ ತಡೆಯಾಗಸಾಧ್ಯವಿದೆ.
9 ಟೆರಿಟೊರಿಯಲ್ಲಿ ಸಾಕ್ಷಿನೀಡಲು ಪ್ರಾರಂಭಿಸುವ ಮೊದಲು, ನಾವು ಭೇಟಿನೀಡಬಾರದೆಂದು ಹೇಳಿರುವ ನಿವಾಸಿಗಳ ವಿಳಾಸಗಳಿಗಾಗಿ ಟೆರಿಟೊರಿ ಕಾರ್ಡುಗಳನ್ನು ಪರಿಶೀಲಿಸುವುದು ಸೂಕ್ತ. ಅಂಥ ವಿಳಾಸಗಳು ಇರುವಲ್ಲಿ, ಆ ರಸ್ತೆಯಲ್ಲಿ ಸಾಕ್ಷಿನೀಡುತ್ತಿರುವ ಪ್ರತಿಯೊಬ್ಬ ಪ್ರಚಾರಕನಿಗೂ ಅಲ್ಲಿ ಭೇಟಿನೀಡಬಾರದೆಂದು ಹೇಳತಕ್ಕದ್ದು. ಸೇವಾ ಮೇಲ್ವೀಚಾರಕನ ಮಾರ್ಗದರ್ಶನವಿಲ್ಲದೆ ಈ ಮನೆಗಳನ್ನು ಭೇಟಿಮಾಡಲು ಯಾರೊಬ್ಬರೂ ತಾವೇ ನಿರ್ಧರಿಸಬಾರದು,–ಜನವರಿ 1994ರ ನಮ್ಮ ರಾಜ್ಯದ ಸೇ, ಪ್ರಶ್ನಾ ರೇಖಾಚೌಕವನ್ನು ನೋಡಿರಿ.
10 ನಾವು ಮನೆಯಿದ ಮನೆಗೆ ಸಾರುವಾಗ ಅರಿವುಳ್ಳವರಾಗಿರುವ ಮೂಲಕ ನಮ್ಮ ಪರಿಣಾಮಕಾರಿತ್ವವನ್ನು ಹೆಚ್ಚಿಸ ಸಾಧ್ಯವಿದೆ. ಮನೆಯೊಂದನ್ನು ನೀವು ಸಮೀಪಿಸುವಾಗ ಗಮನಿಸುವವರಾಗಿರಿ. ಪರದೆಗಳೆಲ್ಲವೂ ಇಳಿಬಿಟ್ಟಿವೆಯೋ? ಒಳಗಿನಿಂದ ಯಾವುದೇ ಶಬ್ದವು ಕೇಳಿಬರುತ್ತಿಲ್ಲವೋ? ಇದು ಮನೆಯಲ್ಲಿರುವವರು ಮಲಗಿದ್ದಾರೆ ಎಂಬುದನ್ನು ಸೂಚಿಸಬಹುದು. ಸ್ವಲ್ಪ ಸಮಯದ ನಂತರ ಭೇಟಿಮಾಡುವುದಾದರೆ, ನಾವು ಆ ಮನೆಯವನೊಂದಿಗೆ ಹೆಚ್ಚು ಪರಿಣಾಮಕಾರಿಯಾದ ರೀತಿಯಲ್ಲಿ ಸಂಭಾಷಿಸಸಾಧ್ಯವಿದೆ. ಸದ್ಯಕ್ಕೆ ಆ ಮನೆಯನ್ನು ಆ ಸಮಯದಲ್ಲಿ ಭೇಟಿಯಾಗದೇ, ನಂಬರ್ ಅನ್ನು ಬರೆದಿಟ್ಟುಕೊಳ್ಳುವುದು ಒಳ್ಳೆಯದಾಗಿರಬಹುದು. ಟೆರಿಟೊರಿಯನ್ನು ಬಿಟ್ಟುಬರುವ ಮುಂಚೆ ಇಲ್ಲವೆ ಅದೇ ದಿನದ ಯಾವುದೋ ಬೇರೆ ಸಮಯದಲ್ಲಿ ಪುನಃ ಆ ಮನೆಯನ್ನು ಭೇಟಿಮಾಡಲಾಗುವಂತೆ ಖಚಿತಪಡಿಸಿಕೊಳ್ಳಿರಿ.
11 ಆದರೂ, ನಾವು ತಿಳಿಯದೇ ಒಬ್ಬ ವ್ಯಕ್ತಿಯನ್ನು ನಿದ್ರೆಯಿಂದ ಎಬ್ಬಿಸುವ ಅಥವಾ ತೊಂದರೆಪಡಿಸುವ ಪರಿಸ್ಥಿತಿಗಳು ಏಳಬಹುದು. ಆಗ ಅವನು ಕೆರಳಿದವನಂತೆ ಅಥವಾ ಕೋಪಗೊಂಡವನಂತೆ ಸಹ ತೋರಬಹುದು. ಆ ಸಮಯದಲ್ಲಿ ನಾವು ಹೇಗೆ ಪ್ರತಿಕ್ರಿಯಿಸಬೇಕು? ಜ್ಞಾನೋಕ್ತ 17:27 ಸಲಹೆನೀಡುವುದು: “ಶಾಂತಾತ್ಮನು ವಿವೇಕಿ.” ನಾವು ಸಾರಲು ಬಂದದ್ದಕ್ಕೆ ಕ್ಷಮಾಪಣೆ ಕೇಳದಿದ್ದರೂ, ಆ ಅನುಚಿತ ಸಮಯದಲ್ಲಿ ಭೇಟಿಮಾಡಿದ್ದಕ್ಕೆ ಖಂಡಿತವಾಗಿಯೂ ಕ್ಷಮೆಯನ್ನು ಕೇಳಿಕೊಳ್ಳಸಾಧ್ಯವಿದೆ. ಪುನಃ ಯಾವಾಗಲಾದರೂ ಉಚಿತವಾದ ಸಮಯದಲ್ಲಿ ಭೇಟಿನೀಡುವುದು ಹೆಚ್ಚು ಒಳ್ಳೆಯದಾಗಿರುವುದೋ ಎಂದು ನಾವು ವಿನಯದಿಂದ ಅವರನ್ನು ಕೇಳಸಾಧ್ಯವಿದೆ. ಆನಂತರ, ಪುನಃ ಅವರನ್ನು ಸಂದರ್ಶಿಸುವಿರೆಂದು ಹೇಳಿರಿ. ಒಂದು ಶಾಂತ ಸ್ವರದಲ್ಲಿ ವೈಯಕ್ತಿಕ ಹಿತಾಸಕ್ತಿಯ ನಿಷ್ಕಪಟ ಮಾತುಗಳನ್ನಾಡುವುದು ಅಂತಹ ವ್ಯಕ್ತಿಯನ್ನು ಶಾಂತಗೊಳಿಸುವುದು. (ಜ್ಞಾನೋ. 15:1) ಮನೆಯವನು ತಾನೂ ಯಾವಾಗಲೂ ರಾತ್ರಿಯ ಶಿಫ್ಟ್ನಲ್ಲಿ ಕೆಲಸಮಾಡುತ್ತೇನೆಂದು ಹೇಳುವುದಾದರೆ, ಟಿಪ್ಪಣಿಯನ್ನು ಟೆರಿಟೊರಿ ಕಾರ್ಯನಲ್ಲಿ ಬರೆದುಕೊಳ್ಳಸಾಧ್ಯವಿದೆ. ಹೀಗೆ ಮುಂದೆ ಒಂದು ಸೂಕ್ತವಾದ ಸಮಯದಲ್ಲಿ ಭೇಟಿಗಳನ್ನು ಮಾಡಬಹುದು.
12 ನಮ್ಮ ಟೆರಿಟೊರಿಯನ್ನು ಸಂಪೂರ್ಣವಾಗಿ ಆವರಿಸಲು ಪ್ರಯತ್ನಿಸುವಾಗ ವಿವೇಚನಾಶಕ್ತಿಯು ಸಹ ಉಚಿತವಾಗಿರುತ್ತದೆ. ನಾವು ಮೊದಲು ಭೇಟಿಮಾಡುವಾಗ ಅನೇಕ ಜನರು ಮನೆಯಲ್ಲಿ ಸಿಗದೇ ಹೋಗುವ ಕಾರಣ, ರಕ್ಷಣೆಯ ಸಂದೇಶವನ್ನು ಹಂಚಿಕೊಳ್ಳಲಿಕ್ಕಾಗಿ ಅವರನ್ನು ಸಂಪರ್ಕಿಸಲು ನಾವು ಹೆಚ್ಚಿನ ಪ್ರಯತ್ನಗಳನ್ನು ಮಾಡುವ ಅಗತ್ಯವಿದೆ. (ರೋಮಾ. 10:13) ಜನರು ಮನೆಯಲ್ಲಿದ್ದಾರೋ ಇಲ್ಲವೋ ಎಂಬುದನ್ನು ನೋಡಲು, ಕೆಲವೊಮ್ಮೆ ಪ್ರಚಾರಕನು ಅದೇ ಮನೆಗೆ ಒಂದೇ ದಿನದಲ್ಲಿ ಹಲವಾರು ಬಾರಿ ಹೋಗುತ್ತಾರೆಂದು ವರದಿಗಳು ಸಿಕ್ಕಿವೆ. ಇದನ್ನು ನೆರೆಯವರು ಖಂಡಿತವಾಗಿಯೂ ಗಮನಿಸುತ್ತಾರೆ. ಇದು ಯೆಹೋವನ ಸಾಕ್ಷಿಗಳು ತಮ್ಮ ಬೀದಿಗೆ ‘ಯಾವಾಗಲೂ ಬರುತ್ತಾರೆ’ ಎಂಬ ಒಂದು ತಪ್ಪಾದ ಅಭಿಪ್ರಾಯವನ್ನು ಕೊಡಬಹುದು. ಇದರಿಂದ ನಾವು ಹೇಗೆ ದೂರವಿರಸಾಧ್ಯವಿದೆ
13 ವಿವೇಚನಾಶಕ್ತಿಯನ್ನು ಉಪಯೋಗಿಸಿ ಮನೆಯಲ್ಲಿರುವವರನ್ನು ಭೇಟಿಮಾಡುವಾಗ, ಈಗ ಮನೆಯಲ್ಲಿ ಯಾರಾದರೂ ಇದ್ದಾರೆಂದೂ ಸೂಚನೆಗಳೇನಾದರೂ ಇವೆಯೋ? ಪತ್ರ ಅಥವಾ ಕರಪತ್ರಗಳು ಹೊರಗೆ ಪತ್ರದ ಡಬ್ಬದಲ್ಲಿ ಇನ್ನೂ ಹಾಗೇ ಇರುವುದಾದರೆ, ವ್ಯಕ್ತಿಯು ಇನ್ನೂ ಮನೆಗೆ ಹಿಂದಿರುಗಿಲ್ಲ ಮತ್ತು ಮುಂದೆ ಇದೇ ಸಮಯದಲ್ಲಿ ಬರುವುದು ಅಷ್ಟೇನೂ ಪ್ರಯೋಜನವಾಗಿರುವುದಿಲ್ಲ. ದಿನದ ಬೇರೆ ಬೇರೆ ಸಮಯಗಳಲ್ಲಿ, ಅಂದರೆ ಸಾಯಂಕಾಲದಂತಹ ಸಮಯಗಳಲ್ಲಿ ಪ್ರಯತ್ನಿಸಿದ ಅನಂತರವೂ, ಆ ವ್ಯಕ್ತಿಯನ್ನು ಸಂಪರ್ಕಿಸಲು ಆಗದೇ ಹೋದರೆ, ಮನೆಯವನನ್ನು ಟೆಲಿಫೋನ್ ಮೂಲಕ ಸಂಪರ್ಕಿಸಸಾಧ್ಯವಿರಬಹುದು. ಇಲ್ಲದಿದ್ದರೆ, ಕಿರುಹೊತ್ತಗೆ ಅಥವಾ ಕರಪತ್ರವನ್ನು ಬಾಗಿಲಿನಲ್ಲಿ ಇತರರಿಗೆ ಕಾಣಿಸದಂತೆ ಬಿಟ್ಟು ಬರಸಾಧ್ಯವಿದೆ. ವಿಶೇಷವಾಗಿ ಟೆರಿಟೊರಿಯನ್ನು ಅನೇಕ ವೇಳೆ ಆವರಿಸಲಾಗುತ್ತದಾದರೆ, ಆಗ ಈ ರೀತಿಯಲ್ಲಿ ಮಾಡಸಾಧ್ಯವಿದೆ. ಮತ್ತೊಮ್ಮೆ ಆ ಟೆರಿಟೊರಿಯಲ್ಲಿ ಕೆಲಸಮಾಡುವಾಗ ಆ ವ್ಯಕ್ತಿಯನ್ನು ಸಂಪರ್ಕಿಸುವುದು ಒಳ್ಳೆಯದಾಗಿರಬಹುದು.
14 ಅತಿಶೀತವಾದ ಹವಾಮಾನವಿರುವುದಾದರೆ, ಮನೆಯವನೊಂದಿಗೆ ನಾವು ಹೊರಗೆ ಬಾಗಿಲಿನಲ್ಲಿ ತುಂಬ ಹೊತ್ತಿನ ವರೆಗೆ ಸಂಭಾಷಿಸುವುದನ್ನು ತಡೆಯಬೇಕು. ಒಳಗೆ ಆಮಂತ್ರಿಸಲ್ಪಡುವಾಗ, ನೆಲವನ್ನು ಕೊಳೆಮಾಡದಂತೆ ಎಚ್ಚರಿಕೆ ವಹಿಸಬೇಕು. ಒಂದು ನಾಯಿಯು ಬೊಗಳುತ್ತಾ ನಿಮ್ಮ ಹತ್ತಿರ ಬರುವಾಗ ವಿವೇಚನೆಯನ್ನು ಉಪಯೋಗಿಸಿರಿ. ಅಪಾರ್ಟ್ಮೆಂಟ್ಗಳಲ್ಲಿ ಸಾಕ್ಷಿ ನೀಡುತ್ತಿರುವಾಗ, ಸ್ವಲ್ಪ ಮೆತ್ತಗೆ ಮಾತಾಡಿರಿ ಮತ್ತು ಅಲ್ಲಿ ವಾಸಿಸುತ್ತಿರುವ ಇತತರಿಗೆ ತೊಂದರೆಕೊಡುವ ರೀತಿಯಲ್ಲಿ ಮತ್ತು ನಿಮ್ಮ ಇರುವಿಕೆಯನ್ನು ತಿಳಿಸುವ ರೀತಿಯಲ್ಲಿ ಗದ್ಧಲ ಮಾಡುವುದರಿಂದ ದೂರವಿರಿ.
15 ಸುವ್ಯವಸ್ಥಿತರೂ ಘನಗಾಂಬೀರ್ಯತೆಯುಳ್ಳವರೂ ಆಗಿರ್ರಿ: ಒಳ್ಳೆಯ ರೀತಿಯಲ್ಲಿ ಸಂಘಟಿಸುವಾಗ, ನಾವು ಟೆರಿಟೊರಿಯಲ್ಲಿ ಒಟ್ಟುಗೂಡುವಾಗ ದೊಡ್ಡದಾದ ಮತ್ತು ಎಲ್ಲರಿಗೂ ಎದ್ದುಕಾಣುವಂತಹ ರೀತಿಯಲ್ಲಿ ಗುಂಪುಗಟ್ಟಿಕೊಳ್ಳುವುದನ್ನು ತಪ್ಪಿಸಸಾಧ್ಯವಿದೆ. ಪ್ರಚಾರಕನ ಒಂದು ದೊಡ್ಡ ಗುಂಪು ತಮ್ಮ ಮನೆಯ ಮುಂದೆ ಹಲವಾರು ಕಾರುಗಳು, ಮೋಟಾರುಸೈಕಲುಗಳು, ಸ್ಕೂಟರುಗಳು, ಅಥವಾ ವ್ಯಾನ್ಗಳಲ್ಲಿ ಬಂದಿಳಿಯುವಾಗ ಕೆಲವು ಮನೆಯವರು ಭಯಭೀತರಾಗಬಹುದು. ನಾವು ನಿವಾಸಸ್ಥಾನಗಳ ಮೇಲೆ ‘ದಾಳಿಮಾಡು’ತ್ತೀದ್ದೇವೆ ಎಂಬ ಅಭಿಪ್ರಾಯವನ್ನು ಅವರಿಗೆ ಕೊಡಬಾರದು. ಕ್ಷೇತ್ರ ಸೇವೆಗಾಗಿ ಕೂಟಗಳನ್ನು ನಡೆಸುವಾಗಲೇ, ಟೆರಿಟೊರಿಯಲ್ಲಿ ಯಾರ್ಯಾರು ಕೆಲಸಮಾಡುತ್ತಾರೆ ಎಂಬುದನ್ನು ಗೊತ್ತುಪಡಿಸುವುದು ಉತ್ತಮ. ಒಂದು ಕುಟುಂಬದಂತೆ ತೋರಿಬರುವ ಪ್ರಚಾರಕರ ಚಿಕ್ಕ ಗುಂಪುಗಳನ್ನು ನೋಡುವಾಗ, ಮನೆಯವರು ಅಷ್ಟೇನೂ ಭಯಪಡುವುದಿಲ್ಲ ಮತ್ತು ಇದು ಟೆರಿಟೊರಿಯಲ್ಲಿ ಕೆಲಸಮಾಡುವಾಗ, ಮತ್ತೇ ಸಂಘಟಿಸುವದನ್ನು ಅವಶ್ಯಪಡಿಸುವದಿಲ್ಲ.
16 ಟೆರಿಟೊರಿಯಲ್ಲಿ ಕೆಲಸಮಾಡುತ್ತಿರುವಾಗ ಹೆತ್ತವರು ತಮ್ಮ ಮಕ್ಕಳ ಚಲನವಲನಗಳ ಮೇಲೆ ನಿಗಾ ಇಡುವುದನ್ನು ಸುವ್ಯವಸ್ಥೆಯು ಕೇಳಿಕೊಳ್ಳುತ್ತದೆ. ಮನೆಯಿಂದ ಮನೆಗೆ ಸಾಕ್ಷಿನೀಡುತ್ತಿರುವಾಗ ವಯಸ್ಕರನ್ನು ಜೊತೆಗೂಡುವ ಮಕ್ಕಳು ಒಳ್ಳೆಯ ರೀತಿಯಲ್ಲಿ ನಡೆದುಕೊಳ್ಳಬೇಕು. ನಿವಾಸಿಗಳ ಇಲ್ಲವೇ ಹಾದುಹೋಗುವವರ ಗಮನವನ್ನು ವಿನಾಕಾರಣ ಆಕರ್ಷಿಸದಂತೆ, ಎಳೆಯರನ್ನು ಆಟವಾಡಲು ಅಥವಾ ಅಲ್ಲಿ ಇಲ್ಲಿ ತಿರುಗಾಡಲು ಬಿಡಬಾರದು.
17 ಟೀ ಮತ್ತು ಕಾಫಿಯ ವಿರಾಮದ ವೇಳೆಯ ವಿಷಯದಲ್ಲಿ ಸಮತೆಯು ಅವಶ್ಯಕ. ಜೂನ್ 1995, ನಮ್ಮ ರಾಜ್ಯದ ಸೇಯ 3ನೇ ಪುಟವು ಹೇಳಿದ್ದು: “ನಾವು ಕ್ಷೇತ್ರ ಸೇವೆಯಲ್ಲಿ ಹೊರಗಿರುವಾಗ, ವಿರಾಮವೊಂದು ನಮ್ಮ ದಣಿವನ್ನಾವರಿಸುವುದು ಮತ್ತು ನಾವು ಮುಂದುವರಿಸಿಕೊಂಡು ಹೋಗಲು ಸಹಾಯ ಮಾಡುವುದು ಅಥವಾ ಅನೇಕರು, ಜನರಿಗೆ ಸಾಕ್ಷಿಕೊಡುವುದರಲ್ಲಿ ನಿರತರಾಗಿರಲು ಇಷ್ಟಪಡುತ್ತಾರೆ ಮತ್ತು ಶುಶ್ರೂಷೆಯ ಸಮಯದಲ್ಲಿ ಬದಿಗಿರಿಸಿದ ಟೀ [ಅಥವಾ ಕಾಫಿ]ವಿರಾಮಗಳಲ್ಲಿ, ಸಹೋದರರೊಂದಿಗಿನ ಸಂತೋಷಕೂಟಗಳನ್ನು ತೊರೆದಿದ್ದಾರೆ.” ಉಪಾಹಾರಗಳನ್ನು ತಿನ್ನಲಿಕ್ಕಾಗಿ ಹೋಗುವುದು ಒಂದು ವೈಯಕ್ತಿಕ ನಿರ್ಣಯವಾಗಿರುವುದಾದರೂ, ಕೆಲವೊಮ್ಮೆ ಸಹೋದರ ಸಹೋದರಿಯರ ಒಂದು ದೊಡ್ಡ ಗುಂಪು ಟೀ ಅಂಗಡಿ ಅಥವಾ ಒಂದು ರೆಸ್ಟೊರೆಂಟ್ನಲ್ಲಿ ಜೊತೆಗೂಡುವುದನ್ನು ನೋಡಲಾಗಿದೆ. ಅಷ್ಟೂ ಜನರಿಗೂ ಬೇಕಾದ ತಿಂಡಿಯನ್ನು ಕೊಡಲು ಸಮಯವು ತಗಲುವುದಲ್ಲದೆ, ಇತರ ಗಿರಾಕಿಗಳು ದೊಡ್ಡ ಗುಂಪನ್ನು ನೋಡಿ ಭಯಭೀತರಾಗಬಹುದು. ಕೆಲವೊಮ್ಮೆ ಬೆಳಗ್ಗಿನ ಕ್ಷೇತ್ರ ಸೇವೆಯ ಅನುಭವಗಳನ್ನು ಜೋರಾಗಿ ಚರ್ಚಿಸಲಾಗುತ್ತದೆ. ಇದು ನಮ್ಮ ಶುಶ್ರೂಷೆಯ ಘನತೆಯನ್ನು ಕಡಿಮೆಗೊಳಿಸಿ, ಅದರ ಪರಿಣಾಮಕಾರಿತ್ವವನ್ನು ಕುಂದಿಸಸಾಧ್ಯವಿದೆ. ಆದುದರಿಂದ ವಿವೇಚನಾಶಕ್ತಿಯನ್ನು ಉಪಯೋಗಿಸುತ್ತಾ, ಪ್ರಚಾರಕರು ಒಂದು ಸ್ಥಳದಲ್ಲಿ ಜನಜಂಗುಳಿಯನ್ನು ಉಂಟುಮಾಡುವುದು ಮತ್ತು ಸೇವೆಗೆ ಹೋದಾಗ ಅನಾವಶ್ಯಕವಾಗಿ ಸಮಯವನ್ನು ಕಳೆಯುವುದರಿಂದ ದೂರವಿರಸಾಧ್ಯವಿದೆ.
18 ಜನರು ಎಲ್ಲೆಲ್ಲಿರುತ್ತಾರೋ ಅಲ್ಲಿ–ರಸ್ತೆಗಳಲ್ಲಿ ಪಾರ್ಕಿಂಗ್ ಜಾಗದಲ್ಲಿ, ಮತ್ತು ಇನ್ನಿತರ ಸಾರ್ವಜನಿಕ ಸ್ಥಳಗಳಲ್ಲಿ–ಅವರನ್ನು ಸಮೀಪಿಸುವ ಮೂಲಕ ಕೆಲವರಿಗೆ ಉತ್ತಮ ಫಲಿತಾಂಶಗಳು ಸಿಕ್ಕಿವೆ. ಇಲ್ಲಿಯೂ ಸಹ, ಕೇವಲ ನಮ್ಮ ನುಡಿಗಳಿಂದಲ್ಲ ಬದಲಾಗಿ, ನಮ್ಮ ವಿವೇಚನೆಯಿಂದಲೂ ಸಹ ನಾವು ಒಂದು ಉತ್ತಮ ಸಾಕ್ಷಿಯನ್ನು ನೀಡಲು ಬಯಸಬೇಕು. ಪ್ರತಿಯೊಂದು ಸಭೆಯಲ್ಲಿರುವ ಪ್ರಚಾರಕರು ತಮಗೆ ನೇಮಿಸಿರುವ ಟೆರಿಟೊರಿಯೊಳಗೇ ಸೇವೆಮಾಡತಕ್ಕದ್ದು. ಇಲ್ಲದಿದ್ದರೆ, ಬೇರೆಯವರ ಟೆರಿಟೊರಿಯಾಗಿರುವ ಮಾರುಕಟ್ಟೆಗಳಲ್ಲಿ, ಬಸ್ ಸ್ಟ್ಯಾಂಡ್ ಅಥವಾ ರೇಲ್ವೆ ಸ್ಟೇಶನ್ನ ದ್ವಾರಗಳಲ್ಲಿ ಓಡಾಡುತ್ತಿರುವ ಪಾರಾಚಾರಿಗಳು, ಇಲ್ಲವೇ 24 ತಾಸು ತೆರೆದಿರುವ ಪೆಟ್ರೊಲು ಬಂಕ್ಗಳಂತಹ ವ್ಯಾಪಾರದ ಸ್ಥಳಗಳಲ್ಲಿ ನೌಕರರಿಗೆ ತೊಂದರೆಕೊಡುವೆವು. ನಮ್ಮ ಶುಶ್ರೂಷೆಯನ್ನು ನಾವು ಸುವ್ಯವಸ್ಥಿತವೂ ಘನಗಾಭೀರ್ಯವುಳ್ಳದಾದ ರೀತಿಯಲ್ಲಿ ಮಾಡುತ್ತಿದ್ದೇವೆಂಬುದನ್ನು ಖಚಿತಪಡಿಸಿಕೊಳ್ಳಲಿಕ್ಕಾಗಿ, ನಾವು ನಮ್ಮ ಸ್ವಂತ ಟೆರಿಟೊರಿಯೊಳಗೆ ಮಾತ್ರ ಕೆಲಸಮಾಡುವೆವು. ಸ್ವಲ್ಪ ನೆರವನ್ನು ನೀಡುವಂತೆ ಮತ್ತೊಂದು ಸಭೆಯ, ಸಭಾ ಸೇವಾ ಕಮಿಟಿಯ ಯಾವುದಾದರೂ ನಿರ್ದಿಷ್ಟ ಏರ್ಪಾಡುಗಳನ್ನು ಮಾಡಿರುವುದಾದರೆ ಆಗ ನಾವು ಟೆರಿಟೊರಿಯ ಹೊರಗೆ ಕೆಲಸಮಾಡಬಹುದು.–2 ಕೊರಿಂಥ 10-13ನ್ನು ಹೋಲಿಸಿರಿ.
19 ಸಾರ್ವಜನಿಕ ಸಾಕ್ಷಿಕಾರ್ಯವು ಎಲ್ಲಿ ಮಾಡಸಾಧ್ಯವಿದೆಯೋ ಅಂತಹ ಅನೇಕ ಕ್ಷೇತ್ರಗಳನ್ನು ಹೊಂದಿರುವ ಕೆಲವು ಸಭೆಗಳು, ಈ ಕ್ಷೇತ್ರಗಳನ್ನು ಟೆರಿಟೊರಿಗಳನ್ನಾಗಿ ಸಂಘಟಿಸಿವೆ. ಅನಂತರ ಒಂದು ಟೆರಿಟೊರಿ ಕಾರ್ಡ್ ಅನ್ನು ವ್ಯಕ್ತಿಗತ ಪ್ರಚಾರಕನಿಗೆ ಅಥವಾ ಒಂದು ಗುಂಪಿಗೆ ನೀಡಲಾಗುತ್ತದೆ. 1 ಕೊರಿಂಥ 14:40ರಲ್ಲಿರುವ “ಎಲ್ಲವೂ ಮರ್ಯಾದೆಯಿಂದಲೂ ಕ್ರಮದಿದಲೂ ನಡೆಯಲಿ” ಎಂಬ ಸಿದ್ಧಾಂತಕ್ಕೆ ಹೊಂದಿಕೆಯಲ್ಲಿ, ಇದು ಹೆಚ್ಚು ಪರಿಣಾಮಕಾರಿಯಾದ ರೀತಿಯಲ್ಲಿ ಟೆರಿಟೊರಿಯನ್ನು ಆವರಿಸುವುದನ್ನು ಸುಲಭವನ್ನಾಗಿ ಮಾಡುತ್ತದೆ ಮತ್ತು ಅನೇಕ ಪ್ರಚಾರಕರು ಒಂದೇ ಸಮಯದಲ್ಲಿ ಒಂದೇ ಸ್ಥಳದಲ್ಲಿ ಕೆಲಸಮಾಡುವುದನ್ನು ತಡೆಯುತ್ತದೆ.
20 ನಮ್ಮ ವೈಯಕ್ತಿಕ ತೋರಿಕೆಯು ಯಾವಾಗಲೂ ಗಾಂಭೀರ್ಯವುಳ್ಳದ್ದೂ ಯೆಹೋವನ ಹೆಸರನ್ನು ಹೊತ್ತುಕೊಂಡಿರುವ ಶುಶ್ರೂಷಕರೋಪಾದಿ ನಮ್ಮನ್ನು ಪ್ರತಿನಿಧಿಸುವಂತೆ ಇರಬೇಕು. ಇದು ನಾವು ಉಪಯೋಗಿಸುವಂತಹ ವಸ್ತುಗಳಿಗೂ ಅನ್ವಯಿಸುತ್ತದೆ. ಹರಿದುಹೋಗಿರುವ ಬ್ಯಾಗುಗಳು ಮ್ತತು ಮುದುರಿಹೋಗಿರುವ ಅಥವಾ ಕೊಳೆಯಾಗಿರುವ ಬೈಬಲ್ ಬೈಬಲು, ಜನರ ಮನಸ್ಸನ್ನು ರಾಜ್ಯದ ಸಂದೇಶದಿಂದ ಅಪಕರ್ಷಿಸುವುದು. ಧರಿಸುವ ಬಟ್ಟೆ ಮತ್ತು ಬಾಚುವ ಶೈಲಿ, “ಸುತ್ತಮುತ್ತಲಿರುವ ಜನರಿಗೆ ನೀವು ಯಾರು ಮತ್ತು ಯಾವ ರೀತಿಯ ವ್ಯಕ್ತಿಯಾಗಿದ್ದೀರಿ ಮತ್ತು ನೀವು ಯಾವ ವರ್ಗಕ್ಕೆ ಸೇರುತ್ತೀರೆಂಬ ಮಾಹಿತಿಯನ್ನು ತುಂಬ ಶೀಘ್ರವಾಗಿ ಕೊಡುವಂತಹ ಒಂದು ಸಂವಾದದ ವಿಧವಾಗಿದೆ” ಎಂದು ಹೇಳಲಾಗಿದೆ. ಆದುದರಿಂದ ನಮ್ಮ ತೋರಿಕೆಯು, ಕೊಳಕು ಅಥವಾ ಕೆದರಿದ, ಇಲ್ಲವೇ ಆಡಂಬರದ್ದೂ ಅಥವಾ ದುಬಾರಿಯಾದದ್ದು ಆಗಿರಬಾರದು. ಇದಕ್ಕೆ ಬದಲಾಗಿ ಯಾವಾಗಲೂ “ಸುವಾರ್ತೆಗೆ ಯೋಗ್ಯ”ವಾಗಿರಬೇಕು.–ಫಿಲಿ. 1: 27; ಹೋಲಿಸಿ. 1 ತಿಮೋಥೆಯ 2:9, 10.
21 ಅಪೊಸ್ತಲ ಪೌಲನು 1 ಕೊರಿಂಥ 9:26ರಲ್ಲಿ ಹೇಳಿದ್ದು: “ಹೀಗಿರಲಾಗಿ ನಾನು ಸಹ ಗುರಿಗೊತ್ತಿಲ್ಲದವನಾಗಿ ಓಡದೆ ಗೆಲ್ಲಬೇಕೆಂದಿರುವ ಅವರಂತೆಯೇ ಓಡುತ್ತೇನೆ. ನಾನು ಗಾಳಿಯನ್ನು ಗುದ್ದುವವನಾಗಿರದೆ ಗೆಲ್ಲಬೇಕೆಂದವನಾಗಿ ಗುದ್ದಾಡುತ್ತೇನೆ.” ನಾವು ಪೌಲನನ್ನು ಅನುಕರಿಸುತ್ತಾ ಪರಿಣಾಮಕಾರಿಯೂ ಫಲಪ್ರದವೂ ಆದಂತಹ ಶುಶ್ರೂಷೆಯನ್ನು ಹೊಂದಿರಲು ದೃಢನಿಶ್ಚಯವನ್ನು ಮಾಡಿದ್ದೇವೆ. ಇಂದು ಯೆಹೋವನ “ಮಿಡತೆಗಳ ಸೈನ್ಯ”ದ ಒಂದು ಭಾಗವಾಗಿ ಸಾಕ್ಷಿಕಾರ್ಯದಲ್ಲಿ ನಾವು ಹುರುಪಿನಿಂದ ಪಾಲ್ಗೊಂಡಂತೆ, ನಮ್ಮ ಟೆರಟೊರಿಯಲ್ಲೆಲ್ಲ, ರಕ್ಷಣೆಯ ಸಂದೇಶವನ್ನು ಹಬ್ಬಿಸುವಾಗ ನಾವು ಕ್ಷೇತ್ರ ವಿವೇಚನಾಶಕ್ತಿಯನ್ನೂ ಬುದ್ಧಿಯನ್ನೂ ಉಪಯೋಗಿಸೋಣ.