ಅಪೇಕ್ಷಿಸು ಬ್ರೋಷರಿನಿಂದ ಅಭ್ಯಾಸಗಳನ್ನು ಆರಂಭಿಸುವುದು
1 ದೇವರು ನಮ್ಮಿಂದ ಏನನ್ನು ಅಪೇಕ್ಷಿಸುತ್ತಾನೆ? ಎಂಬ ಬ್ರೋಷರ್, ಜನರಿಗೆ ಸತ್ಯವನ್ನು ಕಲಿಸಲು ಒಂದು ಪ್ರಭಾವಶಾಲಿ ಸಾಧನವಾಗಿದೆಯೆಂದು ಲೋಕದ ಸುತ್ತುಮುತ್ತಲಿನಿಂದ ಬರುವ ವರದಿಗಳು ತೋರಿಸುತ್ತವೆ. ಈ ಬ್ರೋಷರಿನಿಂದ ಪ್ರತಿ ವಾರ ಸಾವಿರಾರು ಬೈಬಲ್ ಅಭ್ಯಾಸಗಳನ್ನು ಆರಂಭಿಸಲಾಗುತ್ತಿದೆ. ಅಪೇಕ್ಷಿಸು ಬ್ರೋಷರಿನಿಂದ ನೀವು ಒಂದು ಬೈಬಲ್ ಅಭ್ಯಾಸವನ್ನು ಆರಂಭಿಸಿ, ಅದನ್ನು ನಡೆಸಲು ಶಕ್ತರಾಗಿದ್ದೀರೊ?
2 ಬ್ರೋಷರನ್ನು ಜನರಿಗೆ ನೀಡುವುದು ಸುಲಭವೆಂದು ಅನೇಕರು ಕಂಡುಕೊಳ್ಳುತ್ತಾರೆ. ಆದರೆ ಅಭ್ಯಾಸವನ್ನು ಆರಂಭಿಸಲು ಏನು ಹೇಳಬೇಕೆಂಬುದನ್ನು ತಿಳಿಯುವುದು ಕೆಲವರಿಗೆ ಕಷ್ಟವಾಗಿರುತ್ತದೆ. ಅಪೇಕ್ಷಿಸು ಬ್ರೋಷರನ್ನು ಉಪಯೋಗಿಸಿ ಬೈಬಲ್ ಅಭ್ಯಾಸಗಳನ್ನು ಆರಂಭಿಸುವುದರಲ್ಲಿ ಯಾವ ವಿಧಾನಗಳು ಪರಿಣಾಮಕಾರಿಯಾಗಿವೆಯೆಂದು ಇತರರು ಕಂಡುಕೊಂಡಿದ್ದಾರೆ? ಈ ಕೆಳಗಿನ ಸಲಹೆಗಳು ಸಹಾಯಕಾರಿಯಾಗಿರಬೇಕು.
3 ಅಭ್ಯಾಸವನ್ನು ಪ್ರತ್ಯಕ್ಷಾಭಿನಯಿಸುವ ನೀಡಿಕೆಯನ್ನು ಮಾಡಿರಿ: ಪ್ರಥಮ ಭೇಟಿ ಅಥವಾ ಪುನರ್ಭೇಟಿಯನ್ನು ಮಾಡುತ್ತಿರುವಾಗ, ಮನೆಯವನಿಗೆ ಕೇವಲ ಬೈಬಲ್ ಅಭ್ಯಾಸವೊಂದನ್ನು ನೀಡುವ ಬದಲು ಬೈಬಲ್ ಅಭ್ಯಾಸ ಕ್ರಮವು ಹೇಗೆ ನಡಿಸಲ್ಪಡುತ್ತದೆಂಬುದನ್ನು ನಾವು ಪ್ರತ್ಯಕ್ಷಾಭಿನಯಿಸಿ ತೋರಿಸಬಹುದು. “ಅಭ್ಯಾಸ” ಎಂಬ ಪದದ ಕುರಿತು ಅನೇಕ ಮನೆಯವರಿಗಿರುವ ತಪ್ಪಭಿಪ್ರಾಯಗಳನ್ನು ಮತ್ತು ಕಳವಳವನ್ನು ಕೂಡ ತೆಗೆದುಹಾಕಲು ಇದು ಸಾಧ್ಯಮಾಡುತ್ತದೆ. ಒಮ್ಮೆ ನಾವು ಅದನ್ನು ಪ್ರತ್ಯಕ್ಷಾಭಿನಯಿಸಲು ಕಲಿತುಕೊಂಡರೆ, ಒಂದು ಸರಳ ಪೀಠಿಕೆಯೊಂದಿಗೆ ನೇರವಾಗಿ ಒಂದು ಅಭ್ಯಾಸವನ್ನು ಆರಂಭಿಸಬಹುದೆಂಬುದನ್ನು ನಾವು ಕಂಡುಕೊಳ್ಳುವೆವು.
4 ತಯಾರಿಯು ಕೀಲಿಕೈಯಾಗಿರುತ್ತದೆ: ಬೈಬಲ್ ಅಭ್ಯಾಸಗಳನ್ನು ಆರಂಭಿಸಲು ನಮಗಿರುವ ಉತ್ಸಾಹವು, ನಾವು ಎಷ್ಟು ಉತ್ತಮವಾಗಿ ತಯಾರಿಸಿದ್ದೇವೆಂಬುದರೊಂದಿಗೆ ನೇರವಾಗಿ ಸಂಬಂಧಿಸಿರುತ್ತದೆ. ಬೈಬಲ್ ಅಭ್ಯಾಸದ ಕೆಲಸದಲ್ಲಿ ಪಾಲ್ಗೊಳ್ಳಲು ನಮಗಿರಬಹುದಾದ ಯಾವುದೇ ಹಿಂಜರಿಕೆಯನ್ನು ಜಯಿಸುವಂತೆ ಇದು ನಮಗೆ ಸಹಾಯಮಾಡುವುದು. ನಮ್ಮ ನಿರೂಪಣೆಯನ್ನು ಹಲವಾರು ಬಾರಿ ಅಭ್ಯಾಸಿಸುವ ಮೂಲಕ ನಾವು ಸಹಜ ರೀತಿಯಲ್ಲಿ ಮತ್ತು ನಮ್ಮ ಸ್ವಂತ ಮಾತುಗಳಲ್ಲಿ ವಿಚಾರವನ್ನು ವ್ಯಕ್ತಪಡಿಸಲು ಶಕ್ತರಾಗುತ್ತಾ, ಹೆಚ್ಚು ಸಂಭಾಷಣಾತ್ಮಕರು ಆಗುವೆವು.
5 ಪೂರ್ವಾಭಿನಯವನ್ನು ಮಾಡುವಾಗ, ನಿಮ್ಮ ನಿರೂಪಣೆಯು ಎಷ್ಟು ಸಮಯವನ್ನು ತೆಗೆದುಕೊಳ್ಳುತ್ತದೆಂಬುದನ್ನು ನೋಡುವುದು ಸಹಾಯಕಾರಿಯಾಗಿರುತ್ತದೆ. ಹೀಗೆ ಮಾಡುವುದಾದರೆ, ಅಭ್ಯಾಸವನ್ನು ಪ್ರತ್ಯಕ್ಷಾಭಿನಯಿಸಲು ಎಷ್ಟು ಸಮಯ ಹಿಡಿಯುವುದೆಂದು ನೀವು ಮನೆಯವನಿಗೆ ಹೇಳಲು ಶಕ್ತರಾಗುವಿರಿ. ಒಬ್ಬ ಸಹೋದರನು ತನ್ನನ್ನು ಪರಿಚಯಿಸಿಕೊಂಡ ನಂತರ, ಹೀಗೆ ಹೇಳುತ್ತಾನೆ: “ನಮ್ಮ ಉಚಿತ ಬೈಬಲ್ ಅಭ್ಯಾಸ ಕ್ರಮವನ್ನು ಪ್ರತ್ಯಕ್ಷಾಭಿನಯಿಸಲು ನಾನು ನಿಮ್ಮನ್ನು ಸಂದರ್ಶಿಸುತ್ತಿದ್ದೇನೆ. ಇದನ್ನು ತೋರಿಸಲು ಸುಮಾರು ಐದು ನಿಮಿಷಗಳು ಹಿಡಿಯುತ್ತವೆ. ಐದು ನಿಮಿಷಗಳಷ್ಟು ಸಮಯವನ್ನು ನೀವು ಕೊಡಬಹುದೋ?” ಅಪೇಕ್ಷಿಸು ಬ್ರೋಷರಿನ ಪಾಠ 1ನ್ನು ಪ್ರತ್ಯಕ್ಷಾಭಿನಯಿಸಲು ಸುಮಾರು ಐದು ನಿಮಿಷಗಳು ಬೇಕಾಗಬಹುದು. ನಿಜ, ಈ ಸೀಮಿತ ಸಮಯದಲ್ಲಿ ಕೇವಲ ಆಯ್ದ ಶಾಸ್ತ್ರವಚನಗಳನ್ನು ಓದಲು ಸಾಧ್ಯವಾಗುವುದು, ಆದರೆ ಮೊದಲ ಪಾಠವನ್ನು ಕೆಲವೇ ನಿಮಿಷಗಳಲ್ಲಿ ಪೂರ್ಣಗೊಳಿಸುವ ಮೂಲಕ ಮನೆಯವನು ತನ್ನ ಪ್ರಥಮ ಅಭ್ಯಾಸದ ರುಚಿಯನ್ನು ಸವಿಯಲು ಶಕ್ತನಾಗುವನು. ಅನಂತರ ಪಾಠ 2ನ್ನು ಅಭ್ಯಾಸ ಮಾಡುವುದಕ್ಕಾಗಿ ಪುನಃ ಒಮ್ಮೆ ಬಂದಾಗ, ನೀವು ಕೇವಲ 15 ನಿಮಿಷಗಳನ್ನು ತೆಗೆದುಕೊಳ್ಳುವಿರೆಂಬುದನ್ನು ಅವರಿಗೆ ತಿಳಿಯಪಡಿಸಿರಿ.
6 ಈ ಕೆಳಗಿನ ನಿರೂಪಣೆಯು ಪರಿಣಾಮಕಾರಿಯಾಗಿ ರುಜುವಾಗಿದೆ:
◼“ದೇವರು ನಮ್ಮಿಂದ ಏನನ್ನು ಅಪೇಕ್ಷಿಸುತ್ತಾನೆ? ಎಂಬ ಈ ಬ್ರೋಷರನ್ನು ಉಪಯೋಗಿಸುವುದರ ಮೂಲಕ, ಸರಳವಾದರೂ ತ್ವರಿತವಾದ ಮನೆ ಬೈಬಲ್ ಅಭ್ಯಾಸ ಕ್ರಮವನ್ನು ನಾನು ನಿಮಗೆ ಪ್ರತ್ಯಕ್ಷಾಭಿನಯಿಸಲು ಇಚ್ಛಿಸುತ್ತೇನೆ. ಪ್ರತಿ ವಾರ 15 ನಿಮಿಷಕ್ಕಿಂತಲೂ ಕಡಿಮೆ ಸಮಯದಲ್ಲಿ 16 ವಾರಗಳಲ್ಲಿಯೇ ಪ್ರಾಮುಖ್ಯ ಬೈಬಲ್ ಪ್ರಶ್ನೆಗಳಿಗೆ ತೃಪ್ತಿದಾಯಕವಾಗಿರುವ ಶಾಸ್ತ್ರೀಯ ಉತ್ತರಗಳನ್ನು ಕಂಡುಕೊಳ್ಳಸಾಧ್ಯವಿದೆ ಎಂಬುದನ್ನು ಅನೇಕರು ಕಂಡುಕೊಂಡಿದ್ದಾರೆ.” ಪರಿವಿಡಿಯನ್ನು ಸಂಕ್ಷಿಪ್ತವಾಗಿ ತೋರಿಸಿರಿ. ಪಾಠ 1ಕ್ಕೆ ಗಮನವನ್ನು ಹರಿಸುತ್ತಾ, ಹೀಗನ್ನಿರಿ: “ನೀವು ನಮಗೆ ಸುಮಾರು ಐದು ನಿಮಿಷಗಳನ್ನು ಕೊಡುವುದಾದರೆ, ಇದನ್ನು ಹೇಗೆ ಮಾಡಲಾಗುತ್ತದೆಂಬುದನ್ನು ನಿಮಗೆ ತೋರಿಸಿಕೊಡಲು ಬಯಸುತ್ತೇವೆ. ಪಾಠ 1ರ ಶೀರ್ಷಿಕೆಯು, ‘ದೇವರು ಅಪೇಕ್ಷಿಸುವುದನ್ನು ನೀವು ಕಂಡುಕೊಳ್ಳಸಾಧ್ಯವಿರುವ ವಿಧ’ ಎಂದಾಗಿದೆ.” ಅನಂತರ ಆ ಮೂರು ಪ್ರಶ್ನೆಗಳನ್ನು ಓದಿರಿ ಮತ್ತು ಆವರಣದಲ್ಲಿರುವ ಸಂಖ್ಯೆಗಳೇನಾಗಿವೆ ಎಂಬುದನ್ನು ವಿವರಿಸಿರಿ. ಮೊದಲ ಪ್ಯಾರಗ್ರಾಫನ್ನು ಓದಿರಿ ಮತ್ತು ಉತ್ತರವನ್ನು ಹೇಗೆ ಕಂಡುಹಿಡಿಯುವುದು ಎಂಬುದನ್ನು ಮನೆಯವನಿಗೆ ತೋರಿಸಿರಿ. ಮನೆಯವನಿಗೆ ಪ್ಯಾರಗ್ರಾಫ್ 2ನ್ನು ಓದಲು ಹೇಳಬಹುದು. ಅನಂತರ ಹೀಗೆ ಹೇಳಿ: “ಈ ಮಾಹಿತಿಯ ಆಧಾರದ ಮೇಲೆ, ನೀವು ಈ ಪ್ರಶ್ನೆಗೆ ಹೇಗೆ ಉತ್ತರವನ್ನು ಕೊಡುವಿರಿ? [ಪ್ರಶ್ನೆಯನ್ನು ಪುನಃ ಒಮ್ಮೆ ಓದಿರಿ ಮತ್ತು ಮನೆಯವನು ಹೇಳಿಕೆಯನ್ನು ನೀಡುವಂತೆ ಅನುಮತಿಸಿರಿ.] ಪ್ರತಿಯೊಂದು ಪ್ಯಾರಗ್ರಾಫ್ನಲ್ಲಿ ಶಾಸ್ತ್ರವಚನಗಳು ಕೊಡಲ್ಪಟ್ಟಿರುವುದನ್ನು ನೀವು ಗಮನಿಸುತ್ತೀರಿ. ಈ ಪ್ರಶ್ನೆಗಳಿಗೆ ಬೈಬಲ್ ನೀಡುವ ಉತ್ತರದ ಕಡೆಗೆ ಇವು ನಮ್ಮ ಗಮನವನ್ನು ಸೆಳೆಯುತ್ತವೆ. ಉದಾಹರಣೆಗೆ, ನಾವು 2 ತಿಮೊಥೆಯ 3:16, 17ನ್ನು ಓದೋಣ ಮತ್ತು ಬೈಬಲಿನ ಗ್ರಂಥಕರ್ತನು ಯಾರು ಎಂಬುದರ ಸಂಬಂಧದಲ್ಲಿ ನೀವು ಕೊಟ್ಟಿರುವ ಉತ್ತರವನ್ನು ಅದು ಬೆಂಬಲಿಸುತ್ತದೊ ಎಂಬುದನ್ನು ನೋಡೋಣ.” ಪ್ಯಾರಗ್ರಾಫ್ 3ನ್ನು ಓದಿ, ಪ್ರಶ್ನೆಯನ್ನು ಪರಿಗಣಿಸಿ, ಯೋಹಾನ 17:3ನ್ನು ಓದಿದ ಅನಂತರ, ಪಾಠ 1ನ್ನು ಪುನರ್ವಿಮರ್ಶಿಸುವುದರ ಮೂಲಕ ಮನೆಯವನು ಅಥವಾ ಮನೆಯವಳು ಪಡೆದುಕೊಂಡಿರುವ ಜ್ಞಾನದ ಕಡೆಗೆ ಅವರ ಗಮನವನ್ನು ಸೆಳೆಯಿರಿ. ಈ ಸಮಯದಲ್ಲಿ, ನೀವು ಪಾಠ 2ಕ್ಕೆ ಗಮನವನ್ನು ಸೆಳೆದು, “ದೇವರ ಕುರಿತು ನಾವು ಕಲಿಯಸಾಧ್ಯವಿರುವ ಎರಡು ವಿಧಗಳಾವುವು?” ಎಂಬ ಕೊನೆಯ ಪ್ರಶ್ನೆಯನ್ನು ಓದಿ, ಅನಂತರ ಹೀಗೆ ಕೇಳಬಹುದು: “ಪಾಠ 2ನ್ನು ಆರಂಭಿಸಿ, ಅದಕ್ಕೆ ಉತ್ತರವನ್ನು ಕಂಡುಕೊಳ್ಳಲಿಕ್ಕಾಗಿ, ಸುಮಾರು 15 ನಿಮಿಷಗಳಷ್ಟು ಬಿಡುವು ನಿಮಗೆ ಯಾವಾಗ ಸಿಗಬಹುದು?”
7 ಚರ್ಚೆಯನ್ನು ಸರಳವಾಗಿಟ್ಟು, ಸಾಧ್ಯವಿರುವಾಗಲೆಲ್ಲಾ ಮನೆಯವನನ್ನು ಪ್ರಶಂಸಿಸುವುದು ಪ್ರಾಮುಖ್ಯ. ಇನ್ನೊಂದು ಭೇಟಿಯನ್ನು ಏರ್ಪಡಿಸುವಾಗ, ಅವನು ಮುಂದುವರಿಸಲು ಬಯಸುತ್ತಾನೋ ಎಂಬುದನ್ನು ಕೇಳುವ ಬದಲು, ಮುಂದಿನ ಪಾಠಕ್ಕೆ ಇದೇ ವಿಧಾನವನ್ನು ಅನುಸರಿಸಲು ಅವನಿಗೆ ಉತ್ತೇಜನವನ್ನು ಕೊಡಿರಿ. ನೀವು ಹಿಂದಿರುಗಿ ಬರಲು ಆಶಿಸುತ್ತೀರೆಂಬುದು ಅವನಿಗೆ ತಿಳಿದುಬರಲಿ. ಸಮಯವನ್ನು ತೆಗೆದುಕೊಳ್ಳುವುದು ಕಷ್ಟವಾಗಿರುವ ಸಂದರ್ಭಗಳಲ್ಲಿ ಫೋನಿನ ಮೂಲಕ ಪಾಠವನ್ನು ಅಭ್ಯಸಿಸುವ ನೀಡಿಕೆಯನ್ನು ಕೆಲವು ಪ್ರಚಾರಕರು ಮಾಡಿದ್ದಾರೆ. ನಿಮ್ಮ ಮುಂದಿನ ಭೇಟಿಯಲ್ಲಿ ಬ್ರೋಷರು ಸುಲಭವಾಗಿ ಕೈಗೆ ಸಿಗುವಂತೆ, ಸುರಕ್ಷಿತವಾಗಿರುವ ಅನುಕೂಲಕರವಾದ ಸ್ಥಳದಲ್ಲಿ ಇಡುವಂತೆ ನೀವು ವಿದ್ಯಾರ್ಥಿಯನ್ನು ಉತ್ತೇಜಿಸಬಹುದು.
8 ದೃಢನಿಶ್ಚಯವುಳ್ಳವರಾಗಿರಿ: ತಯಾರಿಯು ಯಶಸ್ಸಿನ ಕೀಲಿಕೈಯಾಗಿರುವುದಾದರೂ, ಅದನ್ನು ಮಾಡುತ್ತಾ ಇರಲು ನಾವು ದೃಢನಿಶ್ಚಯವುಳ್ಳವರಾಗಿರಲೇಬೇಕು. ಕೆಲವೇ ನಿಮಿಷಗಳಲ್ಲಿ ಪಾಠವೊಂದನ್ನು ಕಲಿಸುವುದು ಕಷ್ಟಕರವಾಗಿರಬಹುದು, ಆದುದರಿಂದ ನೀವು ಅಭ್ಯಾಸವನ್ನು ಸರಾಗವಾಗಿ ಪ್ರತ್ಯಕ್ಷಾಭಿನಯಿಸಲು ಸಾಧ್ಯವಾಗುವಂತೆ ಸಾಧ್ಯವಿರುವಷ್ಟು ಸಲ ಆ ನಿರೂಪಣೆಯನ್ನು ಅಭ್ಯಾಸ ಮಾಡಲು ದೃಢನಿಶ್ಚಯವುಳ್ಳವರಾಗಿರಿ. ಮನೆಬಾಗಿಲಿನಲ್ಲಿ, ಅನೌಪಚಾರಿಕವಾಗಿ ಮತ್ತು ಟೆಲಿಫೋನು ಸಾಕ್ಷಿಕಾರ್ಯದಲ್ಲಿ ನೀವು ಸಂಪರ್ಕಿಸುವ ಪ್ರತಿಯೊಬ್ಬರಿಗೂ ಒಂದು ಅಭ್ಯಾಸವನ್ನು ಪ್ರತ್ಯಕ್ಷಾಭಿನಯಿಸಲು ಪ್ರಯತ್ನಿಸಿರಿ. ಬೈಬಲ್ ಅಭ್ಯಾಸವೊಂದನ್ನು ಆರಂಭಿಸಲು ನಿಮಗೆ ಕಷ್ಟವಾಗಿರುವುದಾದರೆ, ನಿರುತ್ತೇಜಿತರಾಗಬೇಡಿ. ಬೈಬಲ್ ಅಭ್ಯಾಸಗಳನ್ನು ಆರಂಭಿಸುವುದರಲ್ಲಿ ಯಶಸ್ಸನ್ನು ಗಳಿಸಲಿಕ್ಕಾಗಿ, ದೃಢನಿಶ್ಚಯತೆ ಮತ್ತು ಇತರರಿಗೆ ಸತ್ಯವನ್ನು ನೀಡಬೇಕೆನ್ನುವ ಯಥಾರ್ಥ ಅಪೇಕ್ಷೆಯು ಆವಶ್ಯಕ.—ಗಲಾ. 6:9.
9 ಈ ಸಲಹೆಗಳನ್ನು ಅನ್ವಯಿಸುವ ಮೂಲಕ, ಅಪೇಕ್ಷಿಸು ಬ್ರೋಷರ್ನಿಂದ ಬೈಬಲ್ ಅಭ್ಯಾಸವೊಂದನ್ನು ಆರಂಭಿಸಿ, ಅದನ್ನು ನಡೆಸುವ ಮೂಲಕ ಒಬ್ಬ ವ್ಯಕ್ತಿಯನ್ನು ಜೀವಕ್ಕೆ ನಡೆಸುವ ದಾರಿಯಲ್ಲಿ ಸಾಗುವಂತೆ ಸಹಾಯಮಾಡುವ ಸುಯೋಗವು ನಿಮಗೂ ಸಿಗಬಹುದು.—ಮತ್ತಾ. 7:14.