ಕ್ರಿಸ್ತನ ಮರಣದ ಲೋಕವ್ಯಾಪಕ ಜ್ಞಾಪಕಾಚರಣೆ
1 ಯೆಹೋವನು ನಮ್ಮ ಮೇಲೆ ಉಡುಗೊರೆಗಳ ಸುರಿಮಳೆಗೈದಿದ್ದಾನೆ. ಆತನ ಒಳ್ಳೆಯತನ ಮತ್ತು ಪ್ರೀತಿಪರ ದಯೆಯ ಸಂಪೂರ್ಣತೆಯು, “ಆತನ ವರ್ಣನಾತೀತ ಉಚಿತ ಕೊಡುಗೆ”ಯಾಗಿ ಕಣ್ಣಿಗೆ ಕಟ್ಟುವಂತಹ ರೀತಿಯಲ್ಲಿ ವರ್ಣಿಸಲ್ಪಟ್ಟಿದೆ. ‘ದೇವರ ಅಪಾತ್ರ ದಯೆಯು’ ಎಷ್ಟೊಂದು ಅದ್ಭುತಕರವಾಗಿದೆಯೆಂದರೆ, ಅದನ್ನು ನಾವು ವರ್ಣಿಸುವುದಕ್ಕೆ ಸಾಧ್ಯವಿಲ್ಲ.—2 ಕೊರಿಂ. 9:14, 15, NW.
2 ಆತನ ಅತ್ಯುತ್ಕೃಷ್ಟ ಕೊಡುಗೆ: ಮಾನವಕುಲದ ರಕ್ಷಕನೋಪಾದಿ ಯೇಸು ಕ್ರಿಸ್ತನು, ಎಲ್ಲದಕ್ಕಿಂತಲೂ ಅತ್ಯಂತ ದೊಡ್ಡ ಕೊಡುಗೆಯಾಗಿದ್ದಾನೆ. ಮಾನವಕುಲದ ಮೇಲೆ ತನಗಿರುವ ಮಹಾ ಪ್ರೀತಿಯನ್ನು ವ್ಯಕ್ತಪಡಿಸುತ್ತಾ, ಯೆಹೋವನು ತನ್ನ ಅಚ್ಚುಮೆಚ್ಚಿನ ಮತ್ತು ಏಕಜಾತ ಪುತ್ರನನ್ನು ಕೊಟ್ಟನು. (ಯೋಹಾ. 3:16) ದೇವರಿಂದ ಬಂದ ಅಂತಹ ಒಂದು ಅಪಾತ್ರ ಆಶೀರ್ವಾದವನ್ನು, ಲೋಕವ್ಯಾಪಕವಾಗಿ ಜ್ಞಾಪಿಸಿಕೊಳ್ಳುವುದು ಯೋಗ್ಯವಾಗಿದೆ. ಯಾವಾಗ ಮತ್ತು ಹೇಗೆ? ಏಪ್ರಿಲ್ 1, 1999ರ ಗುರುವಾರ ಸಂಜೆ, ಲೋಕದ ಎಲ್ಲೆಡೆಯೂ ಇರುವ ಕ್ರೈಸ್ತರು, ಅತ್ಯಂತ ದೊಡ್ಡ ತ್ಯಾಗವಾದ ಕರ್ತನ ಸಂಧ್ಯಾ ಭೋಜನದ ಜ್ಞಾಪಕಾಚರಣೆಯನ್ನು ಆಚರಿಸುವರು.—1 ಕೊರಿಂ. 11:20, 23-26.
3 “ನಾವು ಪಾಪಿಗಳಾಗಿದ್ದಾಗಲೇ” ಕ್ರಿಸ್ತನು ನಮಗಾಗಿ ತನ್ನ ಪ್ರಾಣವನ್ನು ಕೊಟ್ಟನು. ಇದಕ್ಕಾಗಿ ನಾವು ಅವನ ಮರಣದ ಜ್ಞಾಪಕಾಚರಣೆಯನ್ನು ಆಚರಿಸುವ ಮೂಲಕ ಮತ್ತು ಅತ್ಯಂತ ಪ್ರಾಮುಖ್ಯವಾದ ಆ ಸಂದರ್ಭದಲ್ಲಿ, ಇತರರು ಸಹ ಅಲ್ಲಿ ಉಪಸ್ಥಿತರಿರುವಂತೆ ಆಮಂತ್ರಿಸುವ ಮೂಲಕ, ನಾವು ನಮ್ಮ ವೈಯಕ್ತಿಕ ಕೃತಜ್ಞತೆಯನ್ನು ತೋರಿಸಸಾಧ್ಯವಿದೆ.—ರೋಮಾ. 5:8.
4 ಅತ್ಯಂತ ಪ್ರಾಮುಖ್ಯವಾದ ಸಂದರ್ಭ: ಕ್ರಿಸ್ತನ ಮರಣದ ಜ್ಞಾಪಕಾಚರಣೆಯು, ಅವನು ದೇವರ ಪರಮಾಧಿಕಾರವನ್ನು ಕುಂದಿಲ್ಲದೇ ಎತ್ತಿಹಿಡಿದನು ಎಂಬುದನ್ನು ಎತ್ತಿತೋರಿಸುತ್ತದೆ. ಯೇಸುವಿನ ಯಜ್ಞಾರ್ಪಣೆಯಲ್ಲಿ ನಂಬಿಕೆಯನ್ನಿಡುವ ಮೂಲಕ ನಾವು ಯೆಹೋವನ ಮುಂದೆ ಒಂದು ಶುದ್ಧವಾದ ನಿಲುವನ್ನು ಪಡೆದುಕೊಳ್ಳಬಲ್ಲೆವು ಎಂಬುದನ್ನು ಸಹ ಅದು ಮರುಜ್ಞಾಪಿಸುತ್ತದೆ. ಮತ್ತು ಅದು ನಮಗೆ ರಕ್ಷಣೆಯ ಖಾತ್ರಿಯನ್ನು ಸಹ ಕೊಡುತ್ತದೆ. (ಅ. ಕೃ. 4:12) ನಿಜವಾಗಿಯೂ, ಈ ವರ್ಷದ ಅತ್ಯಂತ ಪ್ರಾಮುಖ್ಯವಾದ ಸಂದರ್ಭವು ಇದೇ ಆಗಿದೆ!
5 ನಮ್ಮೊಂದಿಗೆ ಕರ್ತನ ಸಂಧ್ಯಾ ಭೋಜನವನ್ನು ಆಚರಿಸಲಿಕ್ಕಾಗಿ ನಮ್ಮ ನೆರೆಹೊರೆಯವರನ್ನು ಆಮಂತ್ರಿಸುವಾಗ, ಅವರ ಕಡೆಗಿರುವ ಪ್ರೀತಿಯು ತೋರಿಸಲ್ಪಡುತ್ತದೆ. ಪ್ರಾಯಶ್ಚಿತ್ತದ ಅತ್ಯುತ್ಕೃಷ್ಟವಾದ ಮೌಲ್ಯವನ್ನು ಕಲಿತುಕೊಳ್ಳುವ ಲಕ್ಷಾಂತರ ಜನರಿಗೆ ಅದರ ಪ್ರಯೋಜನಗಳು ಇನ್ನೂ ಲಭ್ಯ ಇವೆ. (ಫಿಲಿ. 3:8) ಕ್ರಿಸ್ತನ ಯಜ್ಞಾರ್ಪಣೆಯಲ್ಲಿ ನಂಬಿಕೆಯನ್ನಿಡುವವರು, ನಿತ್ಯ ಜೀವದ ಮೇಲೆ ದೃಢವಾದ ನಿರೀಕ್ಷೆಯನ್ನು ಪಡೆದುಕೊಳ್ಳಸಾಧ್ಯವಿದೆ.—ಯೋಹಾ. 17:3.
6 ದೇವರು ತೋರಿಸುವ ಅತಿಶಯವಾದ ಅಪಾತ್ರ ದಯೆಗಾಗಿ ಗಣ್ಯತೆಯನ್ನು ತೋರಿಸುವಂತೆ, ಈ ಜ್ಞಾಪಕಾಚರಣೆಯ ಸಮಯವು ವಿಶೇಷ ಅವಕಾಶಗಳನ್ನು ನೀಡುತ್ತದೆ. ದೇವರ ರಾಜ್ಯದ ಸುವಾರ್ತೆಯನ್ನು ಸಾರುವುದರಲ್ಲಿ ಹುರುಪಿನಿಂದ ಪಾಲ್ಗೊಳ್ಳುವುದಕ್ಕೆ ಇದೇ ಸುಸಮಯವಾಗಿದೆ. ಯೆಹೋವನು ಒದಗಿಸಿರುವ ವರ್ಣನಾತೀತ ಉಚಿತ ಕೊಡುಗೆಯ ಕುರಿತು ಪ್ರಾರ್ಥನಾಪೂರ್ವಕವಾಗಿ ಚಿಂತನೆಮಾಡುವವರಿಗೆ ಮತ್ತು ಈ ವರ್ಷದ ಕರ್ತನ ಸಂಧ್ಯಾ ಭೋಜನದ ಆಚರಣೆಗೆ ಉಪಸ್ಥಿತರಿರಲು ಏರ್ಪಾಡನ್ನು ಮಾಡುವವರಿಗೆ ಅನೇಕ ಪ್ರಯೋಜನಗಳು ಕಾದಿವೆ!