ಇಂಟರ್ನೆಟ್ನ ಉಪಯೋಗ—ಅಪಾಯಗಳ ಕುರಿತು ಎಚ್ಚರಿಕೆ!
1 ಯೆಹೋವನ ಜನರು ಪರಸ್ಪರ ಹಿತಕರವಾದ ಸಹವಾಸದಲ್ಲಿ ಆನಂದಿಸುತ್ತಾರೆ. ಕ್ಷೇತ್ರ ಸೇವೆಯ ಅನುಭವಗಳನ್ನು ಹಂಚಿಕೊಳ್ಳುವುದರಲ್ಲಿಯೂ ಅವರು ಆನಂದಿಸುತ್ತಾರೆ ಮತ್ತು ಯೆಹೋವನ ಸಾಕ್ಷಿಗಳ ಕುರಿತು ಹಾಗೂ ಭೂಗೋಲದಾದ್ಯಂತ ನಡೆಯುತ್ತಿರುವ ರಾಜ್ಯ ಕೆಲಸದ ಸಂಬಂಧದಲ್ಲಿ ಸಂಭವಿಸುವ ಘಟನೆಗಳ ಕುರಿತು ಕೇಳಿಸಿಕೊಳ್ಳುವುದನ್ನು ಗಣ್ಯಮಾಡುತ್ತಾರೆ. ಸಂಕಟದ ಸಮಯ ಅಥವಾ ನೈಸರ್ಗಿಕ ವಿಪತ್ತಿನಂತಹ ಯಾವುದೇ ಅಸಾಮಾನ್ಯ ಘಟನೆಗೆ ನಮ್ಮ ಸಹೋದರರು ಈಡಾಗಿದ್ದರೆ ಅದರ ಕುರಿತು ತಮಗೆ ಇತರರು ತಿಳಿಯಪಡಿಸಬೇಕೆಂದು ಬಯಸುತ್ತಾರೆ ಮತ್ತು ಸಹಾಯಮಾಡಲು ತಾವೇನಾದರೂ ಮಾಡಬಹುದೊ ಎಂಬುದನ್ನು ತಿಳಿದುಕೊಳ್ಳಲು ಬಯಸುತ್ತಾರೆ. ಇಂತಹ ಆಸಕ್ತಿಯು ಸಹೋದರತ್ವದ ಐಕ್ಯವನ್ನು ತೋರಿಸುತ್ತಾ, ನಾವು ಒಬ್ಬರನ್ನೊಬ್ಬರು ನಿಜವಾಗಿಯೂ ಪ್ರೀತಿಸುತ್ತೇವೆಂಬುದನ್ನು ರುಜುಪಡಿಸುತ್ತದೆ.—ಯೋಹಾ. 13:34, 35
2 ಇಂದು, ಲೋಕದಲ್ಲಿರುವ ಘಟನೆಗಳ ಕುರಿತಾಗಿ ನಾವು ಅತಿ ಶೀಘ್ರವಾಗಿ ಕೇಳಿಸಿಕೊಳ್ಳುತ್ತೇವೆ. ರೆಡಿಯೋ ಮತ್ತು ಟೆಲಿವಿಷನ್ ಪ್ರಸಾರಮಾಧ್ಯಮಗಳು ಲೋಕದ ಸುತ್ತಲಿನ ವೀಕ್ಷಕರಿಗೆ ಘಟನೆಗಳ ಪೂರ್ಣ ವಿವರದೊಂದಿಗೆ ಅವುಗಳನ್ನು ನೇರವಾಗಿ ಪ್ರಸಾರ ಮಾಡುತ್ತವೆ. ಟೆಲಿಫೋನು ಸಹ ಲೋಕದ ಸುತ್ತಲೂ ಇರುವ ಜನರೊಂದಿಗೆ ತತ್ಕ್ಷಣವೇ ಸಂಪರ್ಕವನ್ನಿಟ್ಟುಕೊಳ್ಳುವಂತೆ ಸಾಧ್ಯಮಾಡುತ್ತದೆ. ಇತ್ತೀಚೆಗಿನ ಅದ್ಭುತಕರವಾದ ಸಂಪರ್ಕ ಮಾಧ್ಯಮವಾಗಿರುವ ಇಂಟರ್ನೆಟ್, ಲೋಕದಲ್ಲಿ ಹೆಚ್ಚೆಚ್ಚು ಜನಪ್ರಿಯವಾಗುತ್ತಿದೆ.—ಆಗಸ್ಟ್ 8, 1997ರ ಎಚ್ಚರ! ಪತ್ರಿಕೆಯನ್ನು ನೋಡಿರಿ.
3 ಟೆಲಿಫೋನಿನ ಆವಿಷ್ಕಾರವು, ಲೋಕವ್ಯಾಪಕವಾಗಿ ತ್ವರಿತ ವ್ಯಕ್ತಿಗತ ಸಂಪರ್ಕಕ್ಕೆ ದಾರಿಯನ್ನು ತೆರೆಯಿತು. ಟೆಲಿಫೋನು ಬಹಳ ಪ್ರಯೋಜನಕಾರಿಯಾಗಿದೆ. ಆದರೂ, ಅದನ್ನು ಉಪಯೋಗಿಸುವ ವಿಧದಲ್ಲಿ ಎಚ್ಚರವಹಿಸುವ ಅಗತ್ಯವಿದೆ, ಯಾಕಂದರೆ ಅದು ಅಯೋಗ್ಯ ಸಹವಾಸ ಅಥವಾ ಚಟುವಟಿಕೆಗಳಿಗಾಗಿ ಒಂದು ಸಾಧನವಾಗಿರಬಲ್ಲದು ಮಾತ್ರವಲ್ಲ, ಟೆಲಿಫೋನಿನ ತೀರ ಹೆಚ್ಚಿನ ಉಪಯೋಗವು ದುಬಾರಿಯಾಗಬಲ್ಲದು. ಟೆಲಿವಿಷನ್ ಮತ್ತು ರೆಡಿಯೋವನ್ನು ಶಿಕ್ಷಣದ ಕ್ಷೇತ್ರದಲ್ಲಿ ಉಪಯೋಗಿಸುವ ಸಾಧ್ಯತೆಯಿದೆ. ಆದರೂ ದುಃಖಕರವಾಗಿ, ಹೆಚ್ಚಿನ ಕಾರ್ಯಕ್ರಮಗಳು ನೈತಿಕವಾಗಿ ಭ್ರಷ್ಟವಾದದ್ದಾಗಿದೆ, ಮತ್ತು ಅದಕ್ಕೆ ಗಮನವನ್ನು ಕೊಡುವುದು ಸಮಯವನ್ನು ಹಾಳುಮಾಡುತ್ತದೆ. ಟೆಲಿವಿಷನ್ ಮತ್ತು ರೆಡಿಯೋವನ್ನು ಉಪಯೋಗಿಸುವಾಗ, ನಾವು ಯಾವ ಕಾರ್ಯಕ್ರಮಗಳನ್ನು ನೋಡುವೆವು ಮತ್ತು ಆಲಿಸುವೆವು ಎಂಬುದನ್ನು ಜಾಗರೂಕತೆಯಿಂದ ಆಯ್ಕೆಮಾಡುವುದನ್ನು ವಿವೇಕವು ಕೇಳಿಕೊಳ್ಳುತ್ತದೆ.
4 ಇಂಟರ್ನೆಟ್ನ ಮೂಲಕ ಒಬ್ಬ ವ್ಯಕ್ತಿಯು ಕಡಿಮೆ ಬೆಲೆಯಲ್ಲಿ ಲೋಕದ ಸುತ್ತಲಿರುವ ಇತರ ಕೋಟಿಗಟ್ಟಲೆ ಜನರನ್ನು ಸಂಪರ್ಕಿಸಬಹುದು ಮತ್ತು ಇದರಿಂದ ಹೇರಳ ಮಾಹಿತಿಯನ್ನು ಸಹ ಪಡೆದುಕೊಳ್ಳಬಹುದು. (ಜನವರಿ 8, 1998ರ ಅವೇಕ್!) ಆದರೂ, ಇಂಟರ್ನೆಟ್ ಅನ್ನು ವಿವೇಚನೆಯಿಲ್ಲದೇ ಉಪಯೋಗಿಸುವುದು, ಒಬ್ಬ ವ್ಯಕ್ತಿಯನ್ನು ಬಹಳಷ್ಟು ಆತ್ಮಿಕ ಮತ್ತು ನೈತಿಕ ಅಪಾಯಗಳಿಗೆ ಒಡ್ಡಬಲ್ಲದು. ಅದು ಹೇಗೆ?
5 ಬಾಂಬುಗಳನ್ನು ಸೇರಿಸಿ, ಶಸ್ತ್ರಾಸ್ತ್ರಗಳನ್ನು ಹೇಗೆ ತಯಾರಿಸುವುದು ಎಂಬುದನ್ನು ತೋರಿಸುವ, ಸುಲಭವಾಗಿ ಲಭ್ಯವಿರುವ ಮಾಹಿತಿಯ ಕುರಿತು ಅನೇಕರು ಚಿಂತಿತರಾಗಿದ್ದಾರೆ. ಇಂಟರ್ನೆಟ್ ಅನ್ನು ಉಪಯೋಗಿಸುತ್ತಾ, ಕಾರ್ಮಿಕರು ವ್ಯಯಮಾಡುವ ಸಮಯದ ಕುರಿತು ಕೈಗಾರಿಕಾ ಘಟಕಗಳು ದೂರು ಹೇಳುತ್ತಿರುತ್ತವೆ. ಇಂಟರ್ನೆಟ್ನಲ್ಲಿ ಸ್ಪಷ್ಟವಾಗಿ ಎದುರಾಗುವ ಆತ್ಮಿಕ ಅಪಾಯಗಳ ಕುರಿತು ನಮ್ಮ ಪ್ರಕಾಶನಗಳಲ್ಲಿ ಬಹಳಷ್ಟು ವಿಷಯಗಳು ತಿಳಿಸಲ್ಪಟ್ಟಿವೆ. ಕ್ರೈಸ್ತರಿಗೆ ಪೂರ್ಣವಾಗಿ ಅಯೋಗ್ಯವಾಗಿರುವ ಹಿಂಸಾತ್ಮಕ ಮತ್ತು ಅಶ್ಲೀಲ ವಿಷಯವನ್ನು ಅಸಂಖ್ಯಾತ ವೆಬ್ ಸೈಟ್ಗಳು ಸಾದರಪಡಿಸುತ್ತವೆ. (ಕೀರ್ತ. 119:37) ಈ ಅಪಾಯಗಳಿಗೆ ಕೂಡಿಸಿ, ಯೆಹೋವನ ಸಾಕ್ಷಿಗಳು ಎಚ್ಚರದಿಂದಿರಬೇಕಾದ ಒಂದು ಅಪಾಯವಿದೆ. ವಿಶೇಷವಾಗಿ ಅದು ಹೆಚ್ಚು ಮೋಸಕರವಾದದ್ದಾಗಿದೆ. ಅದು ಯಾವ ಅಪಾಯ?
6 ಒಬ್ಬ ಅಪರಿಚಿತನು ನಿಮ್ಮ ಮನೆಬಾಗಿಲಿಗೆ ಬಂದಾಗ, ಅವನು ಎಂತಹ ಗುಣಲಕ್ಷಣಗಳುಳ್ಳ ವ್ಯಕ್ತಿಯಾಗಿದ್ದಾನೆಂಬುದನ್ನು ಮೊದಲು ತಿಳಿದುಕೊಳ್ಳದೆ ನೀವು ಅವನನ್ನು ಮನೆಯೊಳಗೆ ಬರುವಂತೆ ಆಮಂತ್ರಿಸುವಿರೋ? ಅವನ ಕುರಿತಾಗಿ ತಿಳಿದುಕೊಳ್ಳುವ ಬೇರೆ ಯಾವ ಮಾರ್ಗವೂ ಇರದಿದ್ದರೆ ಆಗೇನು? ನಿಮ್ಮ ಮಕ್ಕಳು ಇಂತಹ ಒಬ್ಬ ಅಪರಿಚಿತನೊಂದಿಗೆ ಒಬ್ಬೊಂಟಿಗರಾಗಿರುವಂತೆ ನೀವು ಬಿಡುವಿರೋ? ಇಂಟರ್ನೆಟ್ನಲ್ಲಿ ಇದು ಆಗುವ ಸಾಧ್ಯತೆಯನ್ನು ಅಲ್ಲಗಳೆಯಲಾಗುವುದಿಲ್ಲ.
7 ನಿಮಗೆ ಪರಿಚಯವಿಲ್ಲದ ವ್ಯಕ್ತಿಗಳಿಗೆ ನೀವು ಇಲೆಕ್ಟ್ರಾನಿಕ್ ಮೆಯ್ಲ್ ಅನ್ನು ಕಳುಹಿಸಬಹುದು ಮತ್ತು ಅವರಿಂದ ಪಡೆದುಕೊಳ್ಳಬಹುದು. ನೀವು ಇಲೆಕ್ಟ್ರಾನಿಕ್ ಮಾಧ್ಯಮದ ಮೂಲಕ ಮುಕ್ತ ಚರ್ಚೆಯಲ್ಲಿ ಒಳಗೂಡುವಾಗ ಅಥವಾ ಚ್ಯಾಟ್ ರೂಮ್ನಲ್ಲಿ ಸಂಭಾಷಣೆ ನಡೆಸುವಾಗಲೂ ಇದು ಸತ್ಯ. ಇದರಲ್ಲಿ ಭಾಗವಹಿಸುವವರು ತಾವು ಯೆಹೋವನ ಸಾಕ್ಷಿಗಳಾಗಿದ್ದೇವೆಂದು ಕೆಲವೊಮ್ಮೆ ಹೇಳಿಕೊಳ್ಳಬಹುದಾದರೂ ಹೆಚ್ಚಾಗಿ ಅವರು ಸಾಕ್ಷಿಗಳಾಗಿರುವುದಿಲ್ಲ. ವಾಸ್ತವದಲ್ಲಿ ಯುವಕನಾಗಿರದ ವ್ಯಕ್ತಿಯು ಕೆಲವೊಮ್ಮೆ ತಾನು ಯುವಕನೆಂದು ಹೇಳಿಕೊಳ್ಳಬಹುದು ಅಥವಾ ಒಬ್ಬ ವ್ಯಕ್ತಿಯು ತಾನು ನಿರ್ದಿಷ್ಟ ಲಿಂಗದವನೆಂದು ಸಹ ಸುಳ್ಳಾಗಿ ಹೇಳಿಕೊಳ್ಳಬಹುದು.
8 ನಿಮಗೆ ದೊರಕುವ ಮಾಹಿತಿಯು ಅನುಭವಗಳ ರೂಪದಲ್ಲಿ ಅಥವಾ ನಮ್ಮ ನಂಬಿಕೆಗಳ ಕುರಿತಾದ ಹೇಳಿಕೆಗಳ ರೂಪದಲ್ಲಿಯೂ ಬರಬಹುದು. ಈ ಮಾಹಿತಿಯು ಬೇರೆಯವರಿಗೆ ದಾಟಿಸಲ್ಪಡುತ್ತದೆ ಮತ್ತು ಇವರು ಪ್ರತಿಯಾಗಿ ಇನ್ನೂ ಇತರರಿಗೆ ದಾಟಿಸುತ್ತಾರೆ. ಆ ಮಾಹಿತಿಯು ನಿಜವಾಗಿದೆಯೊ ಎಂದು ಸಾಮಾನ್ಯವಾಗಿ ದೃಢೀಕರಿಸಲು ಸಾಧ್ಯವಿರುವುದಿಲ್ಲ ಮತ್ತು ಅದು ಅಸತ್ಯವೂ ಆಗಿರಬಹುದು. ಆ ಹೇಳಿಕೆಗಳು ಧರ್ಮಭ್ರಷ್ಟ ತರ್ಕಸರಣಿಗಳನ್ನು ಹಬ್ಬಿಸುವುದಕ್ಕಾಗಿ ಒಂದು ಸೋಗು ಸಹ ಆಗಿರಬಹುದು.—2 ಥೆಸ. 2:1-3.
9 ನೀವು ಇಂಟರ್ನೆಟ್ ಅನ್ನು ಉಪಯೋಗಿಸುತ್ತಿರುವುದಾದರೆ, ಈ ಅಪಾಯವನ್ನು ಮನಸ್ಸಿನಲ್ಲಿಟ್ಟುಕೊಂಡು, ನಿಮ್ಮನ್ನು ಹೀಗೆ ಕೇಳಿಕೊಳ್ಳಿರಿ: ‘ನಾನದನ್ನು ಯಾವುದಕ್ಕಾಗಿ ಉಪಯೋಗಿಸುತ್ತಿದ್ದೇನೆ? ನಾನದನ್ನು ಉಪಯೋಗಿಸುವ ವಿಧದಿಂದ ನನ್ನ ಆತ್ಮಿಕತೆಗೆ ಹಾನಿಯಾಗುವ ಸಾಧ್ಯತೆಯಿದೆಯೋ? ಇತರರ ಆತ್ಮಿಕ ಹಾನಿಗೆ ನಾನು ನೆರವನ್ನು ನೀಡುತ್ತಿರಬಹುದೊ?’
10 “ಯೆಹೋವನ ಸಾಕ್ಷಿಗಳ” ವೆಬ್ ಸೈಟ್ಗಳು: ದೃಷ್ಟಾಂತಕ್ಕಾಗಿ, ಯೆಹೋವನ ಸಾಕ್ಷಿಗಳೆಂದು ಹೇಳಿಕೊಳ್ಳುವ ವ್ಯಕ್ತಿಗಳಿಂದ ಸ್ಥಾಪಿಸಲಾಗಿರುವ ಕೆಲವು ವೆಬ್ ಸೈಟ್ಗಳನ್ನು ಪರಿಗಣಿಸಿರಿ. ತಮ್ಮ ಸೈಟ್ಗೆ ಹೋಗಿ, ಸಾಕ್ಷಿಗಳೆಂದು ಹೇಳಿಕೊಳ್ಳುವ ಇತರರಿಂದ ಕೊಡಲ್ಪಟ್ಟಿರುವ ಅನುಭವಗಳನ್ನು ಓದುವಂತೆ ಅವರು ನಿಮ್ಮನ್ನು ಆಮಂತ್ರಿಸುತ್ತಾರೆ. ಸೊಸೈಟಿಯ ಸಾಹಿತ್ಯದ ಬಗ್ಗೆ ನಿಮಗಿರುವ ಅಭಿಪ್ರಾಯಗಳನ್ನು ಮತ್ತು ದೃಷ್ಟಿಕೋನಗಳನ್ನು ಹಂಚಿಕೊಳ್ಳುವಂತೆ ನಿಮ್ಮನ್ನು ಉತ್ತೇಜಿಸಲಾಗುತ್ತದೆ. ಕ್ಷೇತ್ರ ಸೇವೆಯಲ್ಲಿ ಉಪಯೋಗಿಸಲು ಸಾಧ್ಯವಿರಬಹುದಾದ ನಿರೂಪಣೆಗಳ ಕುರಿತು ಸಹ ಕೆಲವರು ಶಿಫಾರಸ್ಸುಗಳನ್ನು ನೀಡುತ್ತಾರೆ. ಈ ಸೈಟ್ಗಳಲ್ಲಿ ಚ್ಯಾಟ್ ರೂಮ್ಗಳಿದ್ದು, ಇತರರೊಂದಿಗೆ ನೇರವಾಗಿ ಸಂವಾದಮಾಡಸಾಧ್ಯವಿದೆ. ಮತ್ತು ಇದು ಟೆಲಿಫೋನಿನಲ್ಲಿ ಮಾತಾಡುವಂತೆಯೇ ಇರುತ್ತದೆ. ನೀವು ಕಂಪ್ಯೂಟರ್ ಮೂಲಕವೇ ಲೋಕದ ಸುತ್ತಲೂ ಇರುವ ಯೆಹೋವನ ಸಾಕ್ಷಿಗಳೊಂದಿಗೆ ಸಂಪರ್ಕವನ್ನಿಟ್ಟುಕೊಳ್ಳಲು ಸಾಧ್ಯಮಾಡಬಲ್ಲ ಬೇರೆ ಕೆಲವು ಸೈಟ್ಗಳಿಗೆ ಅವು ನಿರ್ದೇಶಿಸುತ್ತವೆ. ಆದರೆ ಈ ಸಂಪರ್ಕಸ್ಥಾನಗಳನ್ನು ಧರ್ಮಭ್ರಷ್ಟರೇ ಕುತಂತ್ರದಿಂದ ಸ್ಥಾಪಿಸಿರಲಿಕ್ಕಿಲ್ಲವೆಂದು ನೀವು ಖಡಾಖಂಡಿತವಾಗಿ ಹೇಳಸಾಧ್ಯವಿದೆಯೊ?
11 ಇಂಟರ್ನೆಟ್ನ ಮೂಲಕ ಸಹವಾಸ ಮಾಡುವುದು ಎಫೆಸದವರಿಗೆ 5:15-17ರಲ್ಲಿ ಕೊಡಲಾಗಿರುವ ಸಲಹೆಯೊಂದಿಗೆ ಹೊಂದಿಕೆಯಲ್ಲಿರಲಿಕ್ಕಿಲ್ಲ. ಅಪೊಸ್ತಲ ಪೌಲನು ಬರೆದದ್ದು: “ಆದಕಾರಣ ನೀವು ನಡಕೊಳ್ಳುವ ರೀತಿಯನ್ನು ಕುರಿತು ಚೆನ್ನಾಗಿ ನೋಡಿಕೊಳ್ಳಿರಿ. ಜ್ಞಾನವಿಲ್ಲದವರಾಗಿರದೆ ಜ್ಞಾನವಂತರಾಗಿರ್ರಿ. ಈ ದಿನಗಳು ಕೆಟ್ಟವುಗಳಾಗಿವೆ; ಆದದರಿಂದ ಕಾಲವನ್ನು ಸುಮ್ಮನೆ ಕಳಕೊಳ್ಳದೆ ಅದನ್ನು ಬೆಲೆಯುಳ್ಳದ್ದೆಂದು ಉಪಯೋಗಿಸಿಕೊಳ್ಳಿರಿ. ಮತ್ತು ಬುದ್ಧಿಹೀನರಾಗಿ ನಡೆಯದೆ ಕರ್ತನ [“ಯೆಹೋವನ,” NW] ಚಿತ್ತವೇನೆಂಬದನ್ನು ವಿಚಾರಿಸಿ ತಿಳಿದವರಾಗಿರ್ರಿ.”
12 “ನಂಬಿಗಸ್ತನೂ ವಿವೇಕಿಯೂ ಆದಂಥ ಆಳು” ನಮ್ಮನ್ನು ಆತ್ಮಿಕವಾಗಿ ಉಣಿಸಲು ಉಪಯೋಗಿಸುವ ದೇವಪ್ರಭುತ್ವ ಮಾಧ್ಯಮವು ಕ್ರೈಸ್ತ ಸಭೆಯಾಗಿದೆ. (ಮತ್ತಾ. 24:45-47) ದೇವರ ಸಂಸ್ಥೆಯಲ್ಲಿ, ಲೋಕದಿಂದ ನಮ್ಮನ್ನು ಪ್ರತ್ಯೇಕರಾಗಿರಿಸಿಕೊಳ್ಳಲು ಮಾರ್ಗದರ್ಶನೆ ಮತ್ತು ಸಂರಕ್ಷಣೆಯು ಸಿಗುತ್ತದೆ ಮಾತ್ರವಲ್ಲ, ಕರ್ತನ ಕೆಲಸದಲ್ಲಿ ಕಾರ್ಯಮಗ್ನರಾಗಿರಲು ಬೇಕಾಗಿರುವ ಉತ್ತೇಜನವು ಸಹ ನೀಡಲ್ಪಡುತ್ತದೆ. (1 ಕೊರಿಂ. 15:58) ಸಭೆಯಾಗಿ ಕೂಡಿರುವ ದೇವರ ಜನರ ಮಧ್ಯೆ ಸಂತೋಷವನ್ನು ಮತ್ತು ಭದ್ರತೆಯ ಅನಿಸಿಕೆಯನ್ನು ಅನುಭವಿಸುತ್ತೇನೆಂದು ಕೀರ್ತನೆಗಾರನು ಸೂಚಿಸಿದನು. (ಕೀರ್ತ. 27:4, 5; 55:14; 122:1) ಸಭೆಯು, ಅದರೊಂದಿಗೆ ಸಹವಾಸಿಸುತ್ತಿರುವವರಿಗೆ ಆತ್ಮಿಕ ಬೆಂಬಲ ಮತ್ತು ಸಹಾಯವನ್ನು ಸಹ ಒದಗಿಸುತ್ತದೆ. ಪ್ರೀತಿಪರ, ಆಸಕ್ತಿಯನ್ನು ತೋರಿಸುವ ಮತ್ತು ಪರಾಮರಿಸುವ ಸ್ನೇಹಿತರ ಗುಂಪನ್ನು ನೀವು ಸಭೆಯಲ್ಲಿ ಕಂಡುಕೊಳ್ಳಬಹುದು. ಇವರು, ಸಂಕಷ್ಟದ ಸಮಯಗಳಲ್ಲಿ ಇತರರಿಗೆ ಸಹಾಯನೀಡಲು ಹಾಗೂ ಸಾಂತ್ವನಪಡಿಸಲು ಸಿದ್ಧರೂ, ಮನಸ್ಸುಳ್ಳವರೂ ಮತ್ತು ನಿಮಗೆ ವೈಯಕ್ತಿಕವಾಗಿ ಪರಿಚಿತರಾಗಿರುವ ಜನರೂ ಆಗಿದ್ದಾರೆ. (2 ಕೊರಿಂ. 7:5-7) ಪಶ್ಚಾತ್ತಾಪಪಡದೇ ಪಾಪಮಾಡುತ್ತಿರುವವರನ್ನು ಮತ್ತು ಧರ್ಮಭ್ರಷ್ಟ ಆಲೋಚನೆಯನ್ನು ಪ್ರವರ್ಧಿಸುವವರನ್ನು ಬಹಿಷ್ಕರಿಸುವ ಶಾಸ್ತ್ರೀಯ ಏರ್ಪಾಡಿನಿಂದ ಸಭೆಯ ಸದಸ್ಯರು ಸಂರಕ್ಷಿಸಲ್ಪಡುತ್ತಾರೆ. (1 ಕೊರಿಂ. 5:9-13; ತೀತ 3:10, 11) ಇಂಟರ್ನೆಟ್ನ ಮೂಲಕ ಇತರರೊಂದಿಗೆ ಸಹವಾಸಿಸುವಾಗ ಇದೇ ರೀತಿಯ ಪ್ರೀತಿಪರ ಏರ್ಪಾಡುಗಳನ್ನು ನಾವು ಕಂಡುಕೊಳ್ಳಬಹುದೊ?
13 ಇದರ ವಿರುದ್ಧವಾದದ್ದೇ ಸತ್ಯವೆಂದು ಸ್ಪಷ್ಟವಾಗಿ ತೋರಿಬಂದಿದೆ. ಕೆಲವು ವೆಬ್ ಸೈಟ್ಗಳು ಸುಸ್ಪಷ್ಟವಾಗಿ ಧರ್ಮಭ್ರಷ್ಟ ಪ್ರಚಾರಕಾರ್ಯದ ಮಾಧ್ಯಮಗಳಾಗಿವೆ. ಇಂತಹ ವೆಬ್ ಸೈಟ್ಗಳು, ತಾವು ಅಂತಹ ರೀತಿಯಲ್ಲಿ ಕಾರ್ಯನಡೆಸುತ್ತಿಲ್ಲವೆಂದು ಹೇಳಿಕೊಳ್ಳಬಹುದು ಮತ್ತು ಸೈಟ್ ಅನ್ನು ನಡೆಸುತ್ತಿರುವ ಧರ್ಮಭ್ರಷ್ಟರು ತಾವು ನಿಜವಾಗಿಯೂ ಯೆಹೋವನ ಸಾಕ್ಷಿಗಳು ಆಗಿದ್ದೇವೆಂಬುದನ್ನು ದೃಢೀಕರಿಸಲು ಸವಿಸ್ತಾರವಾದ ವಿವರಣೆಯನ್ನೂ ಸಹ ಕೊಡಬಹುದು. ನೀವು ಯೆಹೋವನ ಸಾಕ್ಷಿಗಳಲ್ಲಿ ಒಬ್ಬರಾಗಿದ್ದೀರೆಂಬುದನ್ನು ರುಜುಪಡಿಸಿಕೊಳ್ಳುವುದಕೋಸ್ಕರ ಅವರು ನಿಮ್ಮಿಂದಲೂ ಮಾಹಿತಿಯನ್ನು ವಿನಂತಿಸಿಕೊಳ್ಳಬಹುದು.
14 ನೀವು ವಿವೇಚನಾಶಕ್ತಿಯನ್ನು ಉಪಯೋಗಿಸುವಂತೆ ಯೆಹೋವನು ಬಯಸುತ್ತಾನೆ. ಯಾಕೆ? ಯಾಕಂದರೆ ಅದು ನಿಮ್ಮನ್ನು ಬೇರೆ ಬೇರೆ ಅಪಾಯಗಳಿಂದ ಸಂರಕ್ಷಿಸುತ್ತದೆಂಬುದು ಆತನಿಗೆ ಗೊತ್ತಿದೆ. ಜ್ಞಾನೋಕ್ತಿ 2:10-19 ಮುಚ್ಚುಮರೆಯಿಲ್ಲದೆ ಹೀಗೆ ಹೇಳುತ್ತದೆ: “ಜ್ಞಾನವು ನಿನ್ನ ಹೃದಯದೊಳಗೆ ಪ್ರವೇಶಿಸುವದು, ತಿಳುವಳಿಕೆಯು ನಿನ್ನ ಆತ್ಮಕ್ಕೆ ಅಂದವಾಗಿರುವದು. ಬುದ್ಧಿಯು ನಿನಗೆ ಕಾವಲಾಗಿರುವದು, ವಿವೇಕವು [“ವಿವೇಚನಾಶಕ್ತಿಯು,” NW] ನಿನ್ನನ್ನು ಕಾಪಾಡುವದು.” ಯಾವುದರಿಂದ ಕಾಪಾಡುವುದು? “ದುರ್ಮಾರ್ಗದಿಂದ,” ಯಥಾರ್ಥ ಮಾರ್ಗಗಳನ್ನು ಬಿಟ್ಟುಹೋಗುವವರಿಂದ, ಮತ್ತು ತಮ್ಮ ಸಾಮಾನ್ಯ ಜೀವಿತಕ್ರಮದಲ್ಲಿ ಅನೈತಿಕರೂ, ವಂಚಕರೂ ಆಗಿರುವ ಜನರಿಂದ ಕಾಪಾಡುತ್ತದೆ.
15 ನಾವು ರಾಜ್ಯ ಸಭಾಗೃಹಕ್ಕೆ ಹೋಗುವಾಗ, ನಮ್ಮ ಸಹೋದರರೊಂದಿಗೇ ಇದ್ದೇವೆಂಬುದಕ್ಕೆ ಯಾವ ಸಂದೇಹವೂ ಇಲ್ಲ. ನಮಗೆ ಅವರ ಪರಿಚಯವಿದೆ. ಇದರ ಬಗ್ಗೆ ಯಾರಿಗೂ ದೃಢೀಕರಣ ಬೇಕಾಗಿಲ್ಲ, ಯಾಕಂದರೆ ತೋರಿಸಲ್ಪಡುವ ಸಹೋದರ ಪ್ರೀತಿಯಿಂದ ಇದು ವ್ಯಕ್ತವಾಗುತ್ತದೆ. ನಾವು ನಿಜವಾಗಿಯೂ ಯೆಹೋವನ ಸಾಕ್ಷಿಗಳಲ್ಲಿ ಒಬ್ಬರಾಗಿದ್ದೇವೆಂಬುದನ್ನು ರುಜುಪಡಿಸುವುದಕ್ಕೆ ವೈಯಕ್ತಿಕವಾಗಿ ಸಾಕ್ಷ್ಯವನ್ನು ಒದಗಿಸುವ ಆವಶ್ಯಕತೆಯಿಲ್ಲ. ಪೌಲನು ಇಬ್ರಿಯರಿಗೆ 10:24, 25ರಲ್ಲಿ ತಿಳಿಸಿದಂತಹ ಪರಸ್ಪರ ಉತ್ತೇಜನದ ನಿಜವಾದ ವಿನಿಮಯವು ಇಲ್ಲಿ ನಡೆಯುತ್ತದೆ. ಕಂಪ್ಯೂಟರ್ ಮೂಲಕ ಸಹವಾಸ ಮಾಡುವುದನ್ನು ಪ್ರೋತ್ಸಾಹಿಸುವ ವೆಬ್ ಸೈಟ್ಗಳು ಇದನ್ನು ಒದಗಿಸುವವು ಎಂದು ನಾವು ಅದರ ಮೇಲೆ ಅವಲಂಬಿಸಲು ಸಾಧ್ಯವಿಲ್ಲ. ಕೀರ್ತನೆ 26:4, 5ರ ಮಾತುಗಳನ್ನು ಮನಸ್ಸಿನಲ್ಲಿಟ್ಟುಕೊಳ್ಳುವುದರಿಂದ, ಇಂಟರ್ನೆಟ್ನಲ್ಲಿ ವೆಬ್ ಸೈಟ್ಗಳನ್ನು ಉಪಯೋಗಿಸುವಾಗ ಸುಲಭವಾಗಿ ಎದುರಾಗುವಂತಹ ಅಪಾಯಗಳ ಕುರಿತು ನಾವು ಎಚ್ಚರವಾಗಿರುವೆವು.
16 ಇಂಟರ್ನೆಟ್ ಅನ್ನು ಉಪಯೋಗಿಸುವವರು ಯಾವ ರೀತಿಯ ಮಾಹಿತಿಯನ್ನು ಇಟ್ಟುಕೊಂಡಿದ್ದಾರೆ ಮತ್ತು ಸುಲಭವಾಗಿ ಪಡೆದುಕೊಳ್ಳಬಹುದಾದ ಅಂತಹ ಮಾಹಿತಿಗೆ ಯಾವುದೇ ಮಿತಿ ಅಥವಾ ತಡೆಗಳಿಲ್ಲ. ಅನೇಕವೇಳೆ, ಈ ಪರಿಸ್ಥಿತಿಯಲ್ಲಿ ಮಕ್ಕಳು ಮತ್ತು ಹದಿವಯಸ್ಕರು ಸುಲಭವಾಗಿ ಪಾತಕ ಮತ್ತು ಶೋಷಣೆಯ ಗುರಿಹಲಗೆಗಳಾಗಿದ್ದಾರೆ. ಮಕ್ಕಳು ಭರವಸೆಯಿಡುವವರು, ಕುತೂಹಲಿಗಳು ಮತ್ತು ಸೈಬರ್ಸ್ಪೇಸ್ ಎಂಬ ತುಲನಾತ್ಮಕವಾಗಿ ಹೊಸದಾಗಿರುವ ಜಗತ್ತನ್ನು ಪರೀಕ್ಷಿಸಲು ಕಾತುರರಾಗಿರುತ್ತಾರೆ. ಆದುದರಿಂದಲೇ, ಹೆತ್ತವರು ತಮ್ಮ ಮಕ್ಕಳಿಗೆ ಸಂಗೀತ ಅಥವಾ ಚಲನಚಿತ್ರಗಳ ಆಯ್ಕೆಯನ್ನು ಮಾಡಲು ಮಾರ್ಗದರ್ಶನೆಯನ್ನು ಕೊಡುವಂತೆಯೇ, ಇಂಟರ್ನೆಟ್ ಅನ್ನು ಉಪಯೋಗಿಸುವ ವಿಷಯದಲ್ಲಿಯೂ ಅವರು ಮೇಲ್ವಿಚಾರಣೆಯನ್ನು ಮಾಡಿ, ಸ್ವಸ್ಥಕರವಾದ ಶಾಸ್ತ್ರೀಯ ಮಾರ್ಗದರ್ಶನೆಯನ್ನು ನೀಡುವ ಅಗತ್ಯವಿದೆ.—1 ಕೊರಿಂ. 15:33.
17 ಇಂಟರ್ನೆಟ್ನ ಚ್ಯಾಟ್ ರೂಮುಗಳಲ್ಲಿ ಲೌಕಿಕ ವ್ಯಕ್ತಿಗಳನ್ನು ಭೇಟಿಯಾಗುವ ಮೂಲಕ ಆರಂಭವಾದ ಸಹವಾಸವು, ಕಟ್ಟಕಡೆಗೆ ಅನೈತಿಕತೆಗೆ ನಡಿಸಿದ್ದರಿಂದ, ಒಂದು ಸಮಯದಲ್ಲಿ ನಮ್ಮ ಸಹೋದರರು ಮತ್ತು ಸಹೋದರಿಯರಾಗಿದ್ದವರನ್ನು ಬಹಿಷ್ಕರಿಸಬೇಕಾಯಿತು ಎಂಬುದು ದುಃಖಕರವಾದ ಸಂಗತಿಯಾಗಿದೆ. ಖೇದಕರವಾಗಿ, ಕೆಲವರು ಇಂಟರ್ನೆಟ್ನಲ್ಲಿ ಆರಂಭಿಸಿದಂತಹ ಸಂಬಂಧವನ್ನು ಮುಂದುವರಿಸಿಕೊಂಡು ಹೋಗಲಿಕ್ಕಾಗಿ ತಮ್ಮ ಸ್ವಂತ ಗಂಡಂದಿರನ್ನು ಅಥವಾ ಹೆಂಡತಿಯರನ್ನು ಬಿಟ್ಟುಹೋಗಿದ್ದಾರೆಂಬ ವಿಷಯದ ಕುರಿತಾಗಿ ಹಿರಿಯರು ಪತ್ರ ಬರೆದಿದ್ದಾರೆ. (2 ತಿಮೋ. 3:6) ಧರ್ಮಭ್ರಷ್ಟರಿಂದ ಒದಗಿಸಲ್ಪಟ್ಟ ಮಾಹಿತಿಯನ್ನು ನಂಬಿದ ಕಾರಣ ಇನ್ನಿತರ ವ್ಯಕ್ತಿಗಳು ಸತ್ಯವನ್ನೇ ತೊರೆದಿದ್ದಾರೆ. (1 ತಿಮೋ. 4:1, 2) ಅತ್ಯಂತ ಗಂಭೀರವಾಗಿರುವ ಇಂತಹ ಅಪಾಯಗಳನ್ನು ಪರಿಗಣಿಸುವಾಗ, ಇಂಟರ್ನೆಟ್ನ ಮೂಲಕ ಚ್ಯಾಟ್ ಸೆಷನ್ಗಳಲ್ಲಿ ಒಳಗೂಡುವುದರ ಕುರಿತು ಜಾಗರೂಕರಾಗಿರುವುದು ನ್ಯಾಯಸಮ್ಮತವಲ್ಲವೋ? ನಿಶ್ಚಯವಾಗಿಯೂ, ಜ್ಞಾನೋಕ್ತಿ 2:10-19ರಲ್ಲಿ ತಿಳಿಸಲಾಗಿರುವ ಜ್ಞಾನ, ತಿಳಿವಳಿಕೆ, ಬುದ್ಧಿ ಮತ್ತು ವಿವೇಚನಾಶಕ್ತಿಯ ಪ್ರಯೋಗವು ನಮ್ಮನ್ನು ಈ ವಿಷಯಗಳಿಂದ ಸಂರಕ್ಷಿಸಬೇಕು.
18 ಗಮನಾರ್ಹವಾಗಿ, ಅನೇಕ ವ್ಯಕ್ತಿಗಳು ಸುವಾರ್ತೆಯನ್ನು ಸಾರಲಿಕ್ಕಾಗಿಯೋ ಎಂಬಂತೆ ವೆಬ್ ಸೈಟ್ಗಳನ್ನು ರಚಿಸಿದ್ದಾರೆ. ಇವುಗಳಲ್ಲಿ ಅನೇಕ ಸೈಟ್ಗಳು ವಿವೇಚನೆಯನ್ನು ತೋರಿಸದಿರುವ ಸಹೋದರರಿಂದ ನಿರ್ವಹಿಸಲ್ಪಡುತ್ತವೆ. ಬೇರೆ ಕೆಲವು ಸೈಟ್ಗಳು, ಸಂದೇಹಪಡದಿರುವ ವ್ಯಕ್ತಿಗಳನ್ನು ಸೆಳೆಯಲು ಬಯಸುವ ಧರ್ಮಭ್ರಷ್ಟರಿಂದ ನಿರ್ವಹಿಸಲ್ಪಡುತ್ತಿರಬಹುದು. (2 ಯೋಹಾ. 9-11) ನಮ್ಮ ಸಹೋದರರು ಇಂತಹ ವೆಬ್ ಸೈಟ್ಗಳನ್ನು ರಚಿಸುವ ಅಗತ್ಯವಿದೆಯೋ ಎಂಬುದರ ಕುರಿತು ಹೇಳಿಕೆಯನ್ನೀಯುತ್ತಾ, ನವೆಂಬರ್ 1997ರ ನಮ್ಮ ರಾಜ್ಯದ ಸೇವೆಯ, ಪುಟ 3 ಹೇಳಿದ್ದು: “ಯಾವುದೇ ವ್ಯಕ್ತಿ, ಯೆಹೋವನ ಸಾಕ್ಷಿಗಳ, ನಮ್ಮ ಚಟುವಟಿಕೆಗಳ ಅಥವಾ ನಂಬಿಕೆಗಳ ಕುರಿತಾಗಿ ಇಂಟರ್ನೆಟ್ ಪೇಜ್ (ಪುಟ)ಗಳನ್ನು ತಯಾರಿಸುವ ಅಗತ್ಯವಿರುವುದಿಲ್ಲ. ಇದನ್ನು ತಿಳಿದುಕೊಳ್ಳಲು ಬಯಸುವ ಯಾರಿಗೇ ಆದರೂ ನಮ್ಮ ಅಧಿಕೃತ ವೆಬ್ ಸೈಟ್ [www.watchtower.org] ನಿಷ್ಕೃಷ್ಟ ಮಾಹಿತಿಯನ್ನು ನೀಡುತ್ತದೆ.”
19 ಇಂಟರ್ನೆಟ್ನ ಮೂಲಕ ಅಭ್ಯಾಸ ಸಹಾಯಕಗಳನ್ನು ದಾಟಿಸುವುದರ ಕುರಿತೇನು? ವಿಭಿನ್ನ ದೇವಪ್ರಭುತ್ವ ಚಟುವಟಿಕೆಗಳ ಸಂಬಂಧದಲ್ಲಿ ಸಂಶೋಧಿತ ಮಾಹಿತಿಯನ್ನು ಕಳುಹಿಸುವ ಮೂಲಕ ಸಹೋದರರಿಗೆ ಸಹಾಯಮಾಡುತ್ತಿದ್ದೇವೆಂದು ಕೆಲವರು ಭಾವಿಸಿದ್ದಾರೆ. ಉದಾಹರಣೆಗೆ, ಒಬ್ಬ ವ್ಯಕ್ತಿಯು ಬಹಿರಂಗ ಭಾಷಣದ ಹೊರಮೇರೆಯ ಮೇಲಾಧಾರಿಸಿ ಸಂಶೋಧನೆಯನ್ನು ಮಾಡಬಹುದು ಮತ್ತು ಇದಾದ ನಂತರ ಅದೇ ಹೊರಮೇರೆಯಿಂದ ಭಾಷಣವನ್ನು ತಯಾರಿಸುವ ಅಗತ್ಯವಿರುವವರಿಗೆ ಇಂತಹ ಮಾಹಿತಿಯು ಪ್ರಯೋಜನಕಾರಿಯಾಗಬಹುದೆಂದು ನೆನಸಿ ಅದನ್ನು ಕಳುಹಿಸಬಹುದು. ಇನ್ನು ಕೆಲವರು ಮುಂಬರುತ್ತಿರುವ ಕಾವಲಿನಬುರುಜು ಅಭ್ಯಾಸಕ್ಕಾಗಿ ಎಲ್ಲ ಶಾಸ್ತ್ರವಚನಗಳನ್ನು ಅಥವಾ ದೇವಪ್ರಭುತ್ವ ಶುಶ್ರೂಷಾ ಶಾಲೆಗಾಗಿ ಇಲ್ಲವೇ ಸಭಾ ಪುಸ್ತಕ ಅಭ್ಯಾಸಕ್ಕಾಗಿ ಮೂಲ ಸಮಾಚಾರವನ್ನು ಒದಗಿಸಲೂಬಹುದು. ಕೆಲವರು ಕ್ಷೇತ್ರ ಸೇವಾ ನಿರೂಪಣೆಗಳಿಗಾಗಿ ಸೂಚನೆಗಳನ್ನೂ ಕೊಡಬಹುದು. ಇವೆಲ್ಲವೂ ನಿಜವಾಗಿಯೂ ಸಹಾಯಕಾರಿಯಾಗಿವೆಯೋ?
20 ಯೆಹೋವನ ಸಂಸ್ಥೆಯಿಂದ ಒದಗಿಸಲ್ಪಡುವ ಪ್ರಕಾಶನಗಳು ಭಕ್ತಿವರ್ಧಕವಾದ ವಿಚಾರಗಳಿಂದ ನಮ್ಮ ಮನಸ್ಸುಗಳನ್ನು ಪ್ರಚೋದಿಸಿ, ‘ಇದು ಒಳ್ಳೇದು ಅದು ಕೆಟ್ಟದ್ದು ಎಂಬ ಭೇದವನ್ನು ತಿಳಿಯುವಂತೆ’ ನಮ್ಮನ್ನು ತರಬೇತುಗೊಳಿಸುತ್ತವೆ. (ಇಬ್ರಿ. 5:14) ನಮಗಾಗಿ ಇತರರು ಸಂಶೋಧನೆಯನ್ನು ಮಾಡುವುದಾದರೆ ಈ ಉದ್ದೇಶವು ಸಾಧಿಸಲ್ಪಡುತ್ತದೆಂದು ನಾವು ಹೇಳಬಲ್ಲೆವೋ?
21 ಬೆರೋಯದಲ್ಲಿದ್ದ ಕ್ರೈಸ್ತರು ‘ಥೆಸಲೊನೀಕದವರಿಗಿಂತ ಸದ್ಗುಣವುಳ್ಳವರಾಗಿದ್ದರು’ ಎಂದು ಹೇಳಲಾಗಿದೆ. ಯಾಕೆ? ಯಾಕಂದರೆ ಅವರು “ದೇವರ ವಾಕ್ಯವನ್ನು ಸಿದ್ಧಮನಸ್ಸಿನಿಂದ ಅಂಗೀಕರಿಸಿ ಇವರು ಹೇಳುವ ಮಾತು ಹೌದೋ ಏನೋ ಎಂಬ ವಿಷಯದಲ್ಲಿ ಪ್ರತಿದಿನವೂ ಶಾಸ್ತ್ರಗ್ರಂಥಗಳನ್ನು ಶೋಧಿಸುತ್ತಿದ್ದರು.” (ಅ. ಕೃ. 17:11) ಪೌಲ ಮತ್ತು ಸೀಲರು ಅವರಿಗೆ ಸಾರಿದ್ದರಾದರೂ, ವೈಯಕ್ತಿಕ ಶ್ರಮವಿಲ್ಲದೆ ಅವರು ಸತ್ಯವನ್ನು ತಮ್ಮದ್ದಾಗಿ ಮಾಡಿಕೊಳ್ಳಲಿಲ್ಲ.
22 ಭಾಷಣಕ್ಕಾಗಿ ಅಥವಾ ಬೇರೆ ಯಾವುದೇ ಕೂಟದ ತಯಾರಿಗೆ ಇನ್ನೊಬ್ಬ ವ್ಯಕ್ತಿಯು ಮಾಡಿರುವ ಸಂಶೋಧನೆಯನ್ನು ಉಪಯೋಗಿಸುವುದು ನಿಜವಾಗಿಯೂ ವೈಯಕ್ತಿಕ ಅಭ್ಯಾಸದ ಉದ್ದೇಶವನ್ನೇ ಸೋಲಿಸುತ್ತದೆ. ದೇವರ ವಾಕ್ಯದಲ್ಲಿ ನಿಮ್ಮ ಸ್ವಂತ ನಂಬಿಕೆಯನ್ನು ಕಟ್ಟುವ ಆಕಾಂಕ್ಷೆ ನಿಮಗಿಲ್ಲವೋ? ಆಗ ನಿಮ್ಮ ವೈಯಕ್ತಿಕ ದೃಢನಿಶ್ಚಯದ ಮೇಲಾಧರಿಸಿ, ನೀವು ನಿಮ್ಮ ಭಾಷಣಗಳಲ್ಲಿ, ಕೂಟಗಳಲ್ಲಿ ಕೊಡುವ ಉತ್ತರಗಳಲ್ಲಿ ಮತ್ತು ಕ್ಷೇತ್ರ ಸೇವೆಯಲ್ಲಿ ನಿಮ್ಮ ನಂಬಿಕೆಯನ್ನು ಬಹಿರಂಗವಾಗಿ ವ್ಯಕ್ತಪಡಿಸಸಾಧ್ಯವಿದೆ. (ರೋಮಾ. 10:10) ಇನ್ನೊಬ್ಬ ವ್ಯಕ್ತಿಯು ಮಾಡಿರುವ ಸಂಶೋಧನೆಯ ವಿಷಯವನ್ನು ಉಪಯೋಗಿಸುವುದು, ಜ್ಞಾನೋಕ್ತಿ 2:4, 5ರಲ್ಲಿ ನೀಡಲಾಗಿರುವ ವರ್ಣನೆಯೊಂದಿಗೆ ಹೊಂದಿಕೊಳ್ಳುವುದಿಲ್ಲ. ಆ ವಚನಗಳಲ್ಲಿ, ವೈಯಕ್ತಿಕವಾಗಿ ‘ದೈವಜ್ಞಾನವನ್ನು ಬೆಳ್ಳಿಯಂತೆಯೂ ನಿಕ್ಷೇಪದಂತೆಯೂ ಹುಡುಕು’ವಂತೆ ಉತ್ತೇಜಿಸಲಾಗಿದೆ.
23 ದೃಷ್ಟಾಂತಕ್ಕೆ, ನೀವು ನಿಮ್ಮ ಸ್ವಂತ ಬೈಬಲಿನಿಂದ ಶಾಸ್ತ್ರವಚನಗಳನ್ನು ತೆರೆದು ನೋಡುವಾಗ, ಪ್ರತಿಯೊಂದು ವಚನದ ಪೂರ್ವಾಪರವನ್ನು ಚುಟುಕಾಗಿ ಪುನರ್ವಿಮರ್ಶಿಸಲು ನಿಮಗೆ ಸಾಧ್ಯವಾಗುತ್ತದೆ. ಲೂಕನು ತನ್ನ ಸುವಾರ್ತೆಯನ್ನು ಬರೆಯುವಾಗ ಮಾಡಿದಂತೆಯೇ, ನೀವು ಸಹ ‘ಬುಡದಿಂದ ಎಲ್ಲವನ್ನೂ ಚೆನ್ನಾಗಿ ವಿಚಾರಿಸಲು’ ಸಾಧ್ಯವಾಗುತ್ತದೆ. (ಲೂಕ 1:3) ನೀವು ಹಾಕುವ ಹೆಚ್ಚಿನ ಪರಿಶ್ರಮವು, ಶುಶ್ರೂಷೆಯಲ್ಲಿ ಮತ್ತು ಭಾಷಣಗಳನ್ನು ಕೊಡುವಾಗ ಶಾಸ್ತ್ರವಚನಗಳನ್ನು ನಿಪುಣತೆಯಿಂದ ತೆರೆದು ತೋರಿಸುವಂತೆ ನಿಮಗೆ ಸಹಾಯಮಾಡಬಲ್ಲದು. ತಮ್ಮ ಬೈಬಲುಗಳನ್ನು ಚೆನ್ನಾಗಿ ಉಪಯೋಗಿಸುವುದು ಹೇಗೆಂಬುದು ಯೆಹೋವನ ಸಾಕ್ಷಿಗಳಿಗೆ ತಿಳಿದಿದೆ ಎಂಬುದರಿಂದ ತಾವು ಪ್ರಭಾವಿತರಾಗಿದ್ದೇವೆಂದು ಅನೇಕರು ಹೇಳಿದ್ದಾರೆ. ನಮ್ಮ ಸ್ವಂತ ಬೈಬಲುಗಳಲ್ಲಿ ನಾವು ವೈಯಕ್ತಿಕವಾಗಿ ವಚನಗಳನ್ನು ತೆರೆದು ನೋಡುವ ಅಭ್ಯಾಸವನ್ನು ಮಾಡುವಲ್ಲಿ ಮಾತ್ರ, ಆ ಮಾತು ನಮಗೂ ಅನ್ವಯವಾಗಬಲ್ಲದು.
24 ನಮ್ಮ ಸಮಯವನ್ನು ವಿವೇಕಯುತವಾಗಿ ಉಪಯೋಗಿಸಿಕೊಳ್ಳುವುದು: ಈ ವಿಷಯದಲ್ಲಿ ಪರಿಗಣಿಸಬೇಕಾದ ಇನ್ನೊಂದು ಅಂಶವು, ಇಂಟರ್ನೆಟ್ನಲ್ಲಿ ಕೊಡಲಾಗುವ ಮಾಹಿತಿಯನ್ನು ತಯಾರಿಸಲು, ಓದಲು ಮತ್ತು ಅದಕ್ಕೆ ಪ್ರತಿಕ್ರಿಯಿಸಲು ವ್ಯಯಿಸುವ ಸಮಯವೇ ಆಗಿದೆ. ಕೀರ್ತನೆ 90:12 ನಮಗೆ ಹೀಗೆ ಪ್ರಾರ್ಥಿಸುವಂತೆ ಉತ್ತೇಜಿಸುತ್ತದೆ: “ನಮ್ಮ ದಿನಗಳು ಕೊಂಚವೇ ಎಂದು ಎಣಿಸಿಕೊಳ್ಳುವ ಹಾಗೆ ನಮಗೆ ಕಲಿಸು; ಆಗ ಜ್ಞಾನದ ಹೃದಯವನ್ನು ಪಡಕೊಳ್ಳುವೆವು.” ಪೌಲನು ತಿಳಿಸಿದ್ದು: ‘ಸಮಯವು ಸಂಕೋಚವಾಗಿದೆ.’ (1 ಕೊರಿಂ. 7:29) ಮತ್ತು ಇನ್ನೂ ಮುಂದುವರಿಸಿ ಹೀಗೆ ಹೇಳಲಾಗಿದೆ: “ಆದದರಿಂದ ಸಮಯವಿರಲಾಗಿ ಎಲ್ಲರಿಗೆ ಒಳ್ಳೇದನ್ನು ಮಾಡೋಣ; ಮುಖ್ಯವಾಗಿ ಒಂದೇ ಮನೆಯವರಂತಿರುವ ಕ್ರಿಸ್ತನಂಬಿಕೆಯುಳ್ಳವರಿಗೆ ಮಾಡೋಣ.”—ಗಲಾ. 6:10.
25 ನಾವು ಸಮಯವನ್ನು ವಿವೇಕಯುತವಾಗಿ ಉಪಯೋಗಿಸುವ ಅಗತ್ಯವಿದೆ ಎಂಬುದನ್ನು ಇಂತಹ ಸಲಹೆಯು ಎತ್ತಿತೋರಿಸುತ್ತದೆ. ದೇವರ ವಾಕ್ಯವನ್ನು ಓದುವುದರಲ್ಲಿ ಸಮಯವನ್ನು ಉಪಯೋಗಿಸುವುದು ಅದೆಷ್ಟು ಲಾಭದಾಯಕವಾಗಿರುತ್ತದೆ! (ಕೀರ್ತ. 1:1, 2) ನಾವು ಮಾಡಬಹುದಾದ ಅತ್ಯುತ್ತಮ ಸಹವಾಸವು ಇದಾಗಿರುತ್ತದೆ. (2 ತಿಮೋ. 3:16, 17) ಹೆತ್ತವರೇ, ನಿಮ್ಮ ಮಕ್ಕಳು ರಾಜ್ಯದ ಅಭಿರುಚಿಗಳನ್ನು ಬೆನ್ನಟ್ಟುವುದರಲ್ಲಿ ತಮ್ಮ ಸಮಯವನ್ನು ವಿವೇಕಯುತವಾಗಿ ಉಪಯೋಗಿಸಬೇಕಾಗಿರುವ ಮೌಲ್ಯವನ್ನು ಅವರಿಗೆ ಕಲಿಸುತ್ತಿದ್ದೀರೋ? (ಪ್ರಸಂ. 12:1) ವೈಯಕ್ತಿಕ ಮತ್ತು ಕುಟುಂಬ ಬೈಬಲ್ ಅಭ್ಯಾಸ, ಕೂಟಕ್ಕೆ ಹಾಜರಾಗುವುದರಲ್ಲಿ ಮತ್ತು ಕ್ಷೇತ್ರ ಸೇವೆಯಲ್ಲಿ ಕಳೆಯಲಾಗುವ ಸಮಯವು, ಪ್ರಯೋಜನಗಳನ್ನು ಪಡೆದುಕೊಳ್ಳಲು ನಿರೀಕ್ಷಿಸುತ್ತಾ ಇಂಟರ್ನೆಟ್ ಅನ್ನು ವ್ಯಯಿಸುವ ಸಮಯಕ್ಕಿಂತಲೂ ಎಷ್ಟೋ ಹೆಚ್ಚು ಮಹತ್ವಪೂರ್ಣವಾದದ್ದಾಗಿದೆ.
26 ಈ ವಿಷಯದಲ್ಲಿ, ಆತ್ಮಿಕ ಅಭಿರುಚಿಗಳ ಮೇಲೆ ಮತ್ತು ನಮ್ಮ ಕ್ರೈಸ್ತ ಜೀವಿತಕ್ಕೆ ಸಂಬಂಧಿಸುವ ಮತ್ತು ಅವಶ್ಯವಾಗಿರುವ ಸಂಗತಿಗಳ ಮೇಲೆ ಗಮನವನ್ನು ಕೇಂದ್ರೀಕರಿಸುವುದು ವಿವೇಕದ ಮಾರ್ಗವಾಗಿದೆ. ನಮ್ಮ ಸಮಯ ಮತ್ತು ಗಮನವನ್ನು ಕೇಳಿಕೊಳ್ಳುವ ಮಾಹಿತಿಯ ಸಂಬಂಧದಲ್ಲಿ ಚೆನ್ನಾಗಿ ಯೋಚಿಸಿ ಮಾಡಲ್ಪಟ್ಟಿರುವ ಆಯ್ಕೆಗಳಿಗೆ ಇದು ಕರೆನೀಡುತ್ತದೆ. ಕ್ರೈಸ್ತರೋಪಾದಿ, ನಮ್ಮ ಜೀವಿತಕ್ಕೆ ಸಂಬಂಧಿಸುವ ವಿಷಯವನ್ನು ಕ್ರಿಸ್ತನು ಹೀಗೆ ಸಾರಾಂಶಿಸಿದನು: “ಹೀಗಿರುವದರಿಂದ, ನೀವು ಮೊದಲಾಗಿ ದೇವರ ರಾಜ್ಯಕ್ಕಾಗಿಯೂ ನೀತಿಗಾಗಿಯೂ ತವಕಪಡಿರಿ. ಇವುಗಳ ಕೂಡ ಅವೆಲ್ಲವೂ ನಿಮಗೆ ದೊರಕುವವು.” (ಮತ್ತಾ. 6:33) ನಿಮ್ಮ ಜೀವಿತವು ಬೇರೆ ಯಾವುದೇ ಚಟುವಟಿಕೆಗಳಿಗೆ ಅವಕಾಶವನ್ನು ಕೊಡದೆ, ರಾಜ್ಯಕ್ಕೆ ಸಂಬಂಧಿಸಿದ ಕೆಲಸಗಳಿಂದ ತುಂಬಿರುವುದಾದರೆ, ನೀವು ಅತ್ಯಂತ ಸಂತೋಷಿಗಳಾಗಿರುವುದಿಲ್ಲವೊ?
27 ಇಂಟರ್ನೆಟ್ ಇ-ಮೆಯ್ಲ್: ದೂರದಲ್ಲಿ ವಾಸಿಸುತ್ತಿರುವ ಕುಟುಂಬ ಸದಸ್ಯರು ಅಥವಾ ಸ್ನೇಹಿತರೊಂದಿಗೆ ವೈಯಕ್ತಿಕ ಅನುಭವಗಳನ್ನು ಅಥವಾ ವಿಚಾರಗಳನ್ನು ಹಂಚಿಕೊಳ್ಳುವುದು ತಕ್ಕದ್ದಾಗಿರುವುದಾದರೂ, ನಿಮ್ಮ ಕುಟುಂಬ ಅಥವಾ ಸ್ನೇಹಿತರ ಪರಿಚಯವಿಲ್ಲದವರಿಗೆ ಇಂತಹ ವಿಷಯಗಳನ್ನು ದಾಟಿಸುವುದು ನಿಜವಾಗಿಯೂ ಪ್ರೀತಿಪರ ಸಂಗತಿಯಾಗಿದೆಯೋ? ಅಥವಾ ಇವುಗಳನ್ನು ಬೇರೆ ಯಾವುದೇ ವ್ಯಕ್ತಿಯು ಓದುವಂತೆ ವೆಬ್ ಪೇಜಿನ ಮೇಲೆ ಹಾಕಬೇಕೋ? ಈ ವೈಯಕ್ತಿಕ ಸಂದೇಶಗಳು, ನಿಮಗೆ ಪರಿಚಯವಿರುವ ಅಥವಾ ಪರಿಚಯವಿಲ್ಲದಿರುವ ವ್ಯಕ್ತಿಗಳಿಗೆ ನಕಲುಮಾಡಿ ಗೊತ್ತುಗುರಿಯಿಲ್ಲದೆ ಕಳುಹಿಸಲಿಕ್ಕಾಗಿವೆಯೋ? ತದ್ರೀತಿಯಲ್ಲಿ, ನಿಮಗಾಗಿ ಉದ್ದೇಶಿಸಲ್ಪಟ್ಟಿರದ ಸಂದೇಶಗಳನ್ನು ನೀವು ಪಡೆದುಕೊಳ್ಳುವುದಾದರೆ, ನೀವದನ್ನು ಇನ್ನಿತರರಿಗೆ ದಾಟಿಸುವುದು ಪ್ರೀತಿಪರವೊ?
28 ನೀವು ದಾಟಿಸುವ ಅನುಭವವು ನಿಷ್ಕೃಷ್ಟವಾಗಿರದಿದ್ದರೆ ಆಗೇನು? ಇದು, ಅಸತ್ಯವನ್ನು ಮುಂದುವರಿಸಿಕೊಂಡು ಹೋಗುವುದರಲ್ಲಿ ನಿಮ್ಮನ್ನೇ ಭಾಗಿಗಳಾಗಿ ಮಾಡುವುದಿಲ್ಲವೋ? (ಜ್ಞಾನೋ. 12:19; 21:28; 30:8; ಕೊಲೊ. 3:9) ನಿಶ್ಚಯವಾಗಿಯೂ, ‘[ನಾವು] ನಡಕೊಳ್ಳುವ ರೀತಿಯನ್ನು ಕುರಿತು ಚೆನ್ನಾಗಿ ನೋಡಿಕೊಳ್ಳಬೇಕು. ಜ್ಞಾನವಿಲ್ಲದವರಾಗಿರದೆ ಜ್ಞಾನವಂತರಾಗಿರುವುದು,’ ನಾವು ಇದನ್ನು ಪರಿಗಣಿಸುವಂತೆ ಪ್ರೇರೇಪಿಸುವುದು. (ಎಫೆ. 5:15) ನಾವು ನಡೆಯಬೇಕಾದ “ಮಾರ್ಗ”ದಲ್ಲಿ ನಡೆಯುತ್ತಾ ಇರಲು ನಮ್ಮನ್ನು ಪ್ರೋತ್ಸಾಹಿಸುವ ಮತ್ತು ಪ್ರಚೋದಿಸುವಂತಹ, ಮತ್ತು ನಿಜವೆಂದು ದೃಢೀಕರಿಸಬಹುದಾದಂತಹ ಅನುಭವಗಳಿಂದ ವರ್ಷಪುಸ್ತಕ, ಕಾವಲಿನಬುರುಜು ಮತ್ತು ಎಚ್ಚರ! ಪತ್ರಿಕೆಗಳು ತುಂಬಿರುವುದರಿಂದ ನಾವೆಷ್ಟು ಸಂತೋಷಿತರಾಗಿದ್ದೇವೆ!—ಯೆಶಾ. 30:20, 21.
29 ಇನ್ನೊಂದು ಅಪಾಯವು ಕೂಡ ಇದೆ. ಅಪೊಸ್ತಲ ಪೌಲನು ಕೆಲವರ ಕುರಿತು ಹೀಗೆ ಹೇಳಿದ್ದು: “ಇದಲ್ಲದೆ ಅವರು ಮನೆಮನೆಗೆ ತಿರುಗಾಡುತ್ತಾ ಮೈಗಳ್ಳತನವನ್ನು ಕಲಿಯುತ್ತಾರೆ; ಮೈಗಳ್ಳರಾಗುವದಲ್ಲದೆ ಹರಟೆಮಾತಾಡುವವರೂ ಇತರರ ಕೆಲಸಲ್ಲಿ ಕೈಹಾಕುವವರೂ ಆಗಿ ಆಡಬಾರದ ಮಾತುಗಳನ್ನಾಡುತ್ತಾರೆ.” (1 ತಿಮೊ. 5:13) ಇದು ನಮ್ಮ ಸಹೋದರರಿಗೆ ನಿಷ್ಪ್ರಯೋಜಕವಾದ ಮಾಹಿತಿಯನ್ನು ದಾಟಿಸುವುದರಲ್ಲಿ ಸಮಯ ಮತ್ತು ಪ್ರಯತ್ನವನ್ನು ಹಾಳುಮಾಡುವುದರಲ್ಲಿ ಫಲಿಸುತ್ತದೆ.
30 ಇ-ಮೆಯ್ಲ್ನ ಧಾರಾಳ ಪ್ರಮಾಣದ ಸಮಾಚಾರಗಳಿಗೆ ಬೇಕಾಗುವ ಸಮಯದ ಕುರಿತು ಯೋಚಿಸಿರಿ. ಆಸಕ್ತಿಕರವಾಗಿ, ಡೇಟ ಸ್ಮಾಗ್ ಎಂಬ ಪುಸ್ತಕದಲ್ಲಿ ಹೀಗೆ ತಿಳಿಸಲಾಗಿದೆ: “ಇದರಲ್ಲಿ ಒಬ್ಬನು ಹೆಚ್ಚೆಚ್ಚು ಸಮಯವನ್ನು ವ್ಯಯಿಸಿದಂತೆ, ಇ-ಮೆಯ್ಲ್ ವ್ಯವಸ್ಥೆಯು ಹೆಚ್ಚು ಆಕರ್ಷಕವಾದ ನವೀನತೆಯಿಂದ, ಸಮಯವನ್ನು ನುಂಗುವ ಹೊರೆಯಾಗಿ ಬೇಗನೆ ಬದಲಾಗುತ್ತದೆ. ಏಕೆಂದರೆ ಪ್ರತಿದಿನ ಜೊತೆ ಕೆಲಸಗಾರರಿಂದ, ಸ್ನೇಹಿತರಿಂದ, ಕುಟುಂಬದವರಿಂದ ಬಂದಿರುವ ನೂರಾರು ಸಂದೇಶಗಳನ್ನು ಓದಿ, ಉತ್ತರಿಸಬೇಕಾಗುತ್ತದೆ. . . . ಮತ್ತು ವಿನಂತಿಸಲ್ಪಡದ ಮಾರಾಟ ಜಾಹೀರಾತುಗಳಿರುತ್ತವೆ.” ಅದು ಇನ್ನೂ ತಿಳಿಸುವುದು: “ಅನೇಕ ಇಲೆಕ್ಟ್ರಾನಿಕ್ ಭೋಗಾತಿರೇಕರು ತಮಗೆ ಸಿಗುವ ಪ್ರತಿಯೊಂದು ಮನೋರಂಜನಾತ್ಮಕ ಸಮಾಚಾರವನ್ನು ಇತರರಿಗೆ ದಾಟಿಸುವ ಕೆಟ್ಟ ಚಾಳಿಯನ್ನು ಹೊಂದಿರುತ್ತಾರೆ. ಇದರಲ್ಲಿ ಜೋಕುಗಳು, ನಗರ ಕಲ್ಪನಾಕಥೆಗಳು, ಇಲೆಕ್ಟ್ರಾನಿಕ್ ಸರಪಣಿ ಪತ್ರ ಮತ್ತು ಇನ್ನೂ ಎಷ್ಟೋ ವಿಷಯಗಳು ಸೇರಿದ್ದು, ಇವುಗಳನ್ನು ತಮ್ಮ ಇಲೆಕ್ಟ್ರಾನಿಕ್ ವಿಳಾಸ ಪುಸ್ತಕದಲ್ಲಿರುವ ಪ್ರತಿಯೊಬ್ಬರಿಗೂ ಇವರು ಕಳುಹಿಸುತ್ತಾರೆ.”
31 ನಮ್ಮ ಸಹೋದರರ ನಡುವೆ ಕಳುಹಿಸಲಾಗುವ ಇ-ಮೆಯ್ಲ್ನಲ್ಲಿ ಇವೆಲ್ಲವು ಸ್ಪಷ್ಟವಾಗಿ ಕಂಡುಬರುತ್ತದೆ. ಇದರಲ್ಲಿ, ನಮ್ಮ ಶುಶ್ರೂಷೆಯ ಕುರಿತಾಗಿರುವ ಜೋಕುಗಳು ಅಥವಾ ಹಾಸ್ಯಕರ ಕಥೆಗಳು, ನಮ್ಮ ನಂಬಿಕೆಗಳ ಮೇಲಾಧರಿಸಿವೆಯೆಂದು ಹೇಳಲಾಗುವ ಕವಿತೆಗಳು, ಸಮ್ಮೇಳನಗಳಲ್ಲಿ, ಅಧಿವೇಶನಗಳಲ್ಲಿ ಅಥವಾ ರಾಜ್ಯ ಸಭಾಗೃಹದಲ್ಲಿ ಕೇಳಿಸಿಕೊಂಡ ಬೇರೆ ಬೇರೆ ಭಾಷಣಗಳಿಂದ ತೆಗೆದಿರುವ ದೃಷ್ಟಾಂತಗಳು, ಕ್ಷೇತ್ರ ಸೇವೆ ಅನುಭವಗಳು, ಮುಂತಾದವುಗಳಂತಹ ನಿರಪಾಯಕಾರಿಯೆಂದು ತೋರುವ ವಿಷಯಗಳು ಇರುತ್ತವೆ. ಹೆಚ್ಚಿನವರು ಕ್ರಮವಾಗಿ ಇಂತಹ ಇ-ಮೆಯ್ಲ್ ಅನ್ನು, ಮೂಲವನ್ನು ಪರೀಕ್ಷಿಸದೇ ಮುಂದೆ ಕಳುಹಿಸುತ್ತಾರೆ. ಇದು, ಇದರ ಮೂಲನು ಯಾರೆಂಬುದನ್ನು ತಿಳಿಯಲು ಕಷ್ಟಕರವಾಗಿ ಮಾಡುತ್ತದೆ. ಮತ್ತು ಇದು, ಈ ಮಾಹಿತಿಯು ನಿಜವಾಗಿಯೂ ಸತ್ಯವೋ ಎಂದು ಒಬ್ಬನು ಕುತೂಹಲಪಡುವಂತೆ ಮಾಡಬೇಕು.—ಜ್ಞಾನೋ. 22:20, 21.
32 ಅನೇಕವೇಳೆ ನಿಷ್ಪ್ರಯೋಜಕವಾಗಿರುವ ಅಂತಹ ಸಂದೇಶಗಳು, ಪೌಲನು ತಿಮೋಥೆಯನಿಗೆ ಪತ್ರ ಬರೆದಾಗ ಅವನ ಮನಸ್ಸಿನಲ್ಲಿದ್ದ ಸ್ವಸ್ಥಕರವಾದ ಮಾತುಗಳಂತೆ ಇರುವುದಿಲ್ಲ. ಅವನು ಹೀಗಂದದ್ದು: “ನೀನು ಕ್ರಿಸ್ತ ಯೇಸುವಿನಲ್ಲಿ ನಂಬಿಕೆಯೂ ಪ್ರೀತಿಯೂ ಉಳ್ಳವನಾಗಿ ನನ್ನಿಂದ ಕೇಳಿದ ಸ್ವಸ್ಥಬೋಧನಾವಾಕ್ಯಗಳನ್ನು ಮಾದರಿಮಾಡಿಕೊಂಡು ಅನುಸರಿಸು.” (ಓರೆ ಅಕ್ಷರಗಳು ನಮ್ಮವು.) (2 ತಿಮೊ. 1:13) ರಾಜ್ಯದ ಮೂಲಕ ಯೆಹೋವನ ಪರಮಾಧಿಕಾರದ ನಿರ್ದೋಷೀಕರಣವೆಂಬ ಬೈಬಲಿನ ಮುಖ್ಯ ವಿಷಯಕ್ಕನುಗುಣವಾಗಿರುವ “ಸ್ವಸ್ಥಬೋಧನಾವಾಕ್ಯಗಳು,” ಶಾಸ್ತ್ರೀಯ ಸತ್ಯದ “ಶುದ್ಧ ಭಾಷೆ”ಯಲ್ಲಿವೆ. (ಚೆಫ. 3:9, NW) ಯೆಹೋವನ ಪರಮಾಧಿಕಾರದ ನಿರ್ದೋಷೀಕರಣವನ್ನು ಬೆಂಬಲಿಸಲು ನಮ್ಮಿಂದ ಸಾಧ್ಯವಿರುವಷ್ಟು ಸಮಯ ಮತ್ತು ಶಕ್ತಿಯನ್ನು ಕೊಡಲು ನಾವು ಸರ್ವ ಪ್ರಯತ್ನವನ್ನೂ ಮಾಡಬೇಕು.
33 ಈ ವಿಷಯಗಳ ವ್ಯವಸ್ಥೆಯ ಅಂತ್ಯವು ತೀರಾ ಹತ್ತಿರವಾಗಿರುವುದರಿಂದ, ನಾವು ಯಾವಾಗಲೂ ಎಚ್ಚರವಾಗಿರಬೇಕು. ಬೈಬಲು ನಮ್ಮನ್ನು ಎಚ್ಚರಿಸುವುದು: “ಸ್ವಸ್ಥಚಿತ್ತರಾಗಿರಿ, ಎಚ್ಚರವಾಗಿರಿ; ನಿಮ್ಮ ವಿರೋಧಿಯಾಗಿರುವ ಸೈತಾನನು ಗರ್ಜಿಸುವ ಸಿಂಹದೋಪಾದಿಯಲ್ಲಿ ಯಾರನ್ನು ನುಂಗಲಿ ಎಂದು ಹುಡುಕುತ್ತಾ ತಿರುಗುತ್ತಾನೆ.” (1 ಪೇತ್ರ 5:8) ಅದು ಇನ್ನೂ ತಿಳಿಸುವುದು: “ಸೈತಾನನ ತಂತ್ರೋಪಾಯಗಳನ್ನು ನೀವು ಎದುರಿಸಿ ನಿಲ್ಲುವದಕ್ಕೆ ಶಕ್ತರಾಗುವಂತೆ ದೇವರು ದಯಪಾಲಿಸುವ ಸರ್ವಾಯುಧಗಳನ್ನು ಧರಿಸಿಕೊಳ್ಳಿರಿ.”—ಎಫೆ. 6:11.
34 ಇಂಟರ್ನೆಟ್ ಅನ್ನು ದುರುಪಯೋಗಿಸುವಲ್ಲಿ, ಅದು ಅದರ ಸಾಮರ್ಥ್ಯದಿಂದ ಆಕರ್ಷಿಸಲ್ಪಟ್ಟಿರುವವರನ್ನು ಸೈತಾನನ ಪಾಶದಲ್ಲಿ ಸಿಲುಕಿಸುವ ಒಂದು ಮಾಧ್ಯಮವಾಗಿರಸಾಧ್ಯವಿದೆ. ಅದಕ್ಕೆ ಸೀಮಿತವಾದ ಉಪಯೋಗಗಳು ಇದೆ ಎಂಬುದು ನಿಜವಾಗಿರಬಹುದಾದರೂ, ಅದನ್ನು ಜಾಗ್ರತೆಯಿಂದ ವೀಕ್ಷಿಸದಿರುವುದಾದರೆ ಅಪಾಯವಿದೆ. ವಿಶೇಷವಾಗಿ ಹೆತ್ತವರು ತಮ್ಮ ಮಕ್ಕಳು ಇಂಟರ್ನೆಟ್ ಅನ್ನು ಹೇಗೆ ಬಳಸುತ್ತಾರೆಂಬುದರ ಕುರಿತು ಚಿಂತಿತರಾಗಿರಬೇಕು.
35 ಇಂಟರ್ನೆಟ್ನ ಕುರಿತು ಸಮತೋಲನದ ದೃಷ್ಟಿಕೋನವನ್ನು ಇಡುವುದು ಸಂರಕ್ಷಣೆಯಾಗಿರುತ್ತದೆ. ಪೌಲನು ನೀಡಿದ ಸಮಯೋಚಿತ ಮರುಜ್ಞಾಪನವನ್ನು ನಾವು ಗಣ್ಯಮಾಡುತ್ತೇವೆ: “ಲೋಕವನ್ನು ಅನುಭೋಗಿಸುವವರು ಅದನ್ನು ಪರಿಪೂರ್ಣವಾಗಿ ಅನುಭೋಗಿಸದವರಂತೆಯೂ ಇರಬೇಕು; ಯಾಕಂದರೆ ಈ ಪ್ರಪಂಚದ ತೋರಿಕೆಯು ಗತಿಸಿಹೋಗುತ್ತಾ ಅದೆ.” (1 ಕೊರಿಂ. 7:29-31) ಈ ವಿಷಯಗಳನ್ನು ಮನಸ್ಸಿನಲ್ಲಿಟ್ಟುಕೊಳ್ಳುವುದು ಲೋಕವು ನೀಡುವಂಥದ್ದೆಲ್ಲದ್ದರಿಂದ, ಹೌದು, ಇಂಟರ್ನೆಟ್ನಲ್ಲಿ ಲಭ್ಯವಿರುವುದೆಲ್ಲವನ್ನೂ ಸೇರಿಸಿ, ಅಪಕರ್ಷಿತರಾಗದೆ ಉಳಿಯುವಂತೆ ನಮಗೂ ನಮ್ಮ ಕುಟುಂಬಗಳಿಗೂ ಸಹಾಯಮಾಡುವುದು.
36 ನಾವು ಸಭೆಯಲ್ಲಿರುವ ನಮ್ಮ ಸಹೋದರರೊಂದಿಗೆ ನಿಕಟರಾಗಿರುವುದು ಮತ್ತು ಉಳಿದಿರುವ ಸಮಯವನ್ನು ವಿವೇಕಯುತವಾಗಿ ಉಪಯೋಗಿಸಿಕೊಳ್ಳುವುದು ತೀರ ಆವಶ್ಯಕವಾಗಿರುತ್ತದೆ. ಹೀಗೆ ನಾವು ರಾಜ್ಯದ ಅಭಿರುಚಿಗಳನ್ನು ಬೆನ್ನಟ್ಟುವುದರಲ್ಲಿ ನಮ್ಮನ್ನು ನಾವು ನೀಡಿಕೊಳ್ಳುತ್ತೇವೆ. ಈ ವ್ಯವಸ್ಥೆಯು ತನ್ನ ಕೊನೆಯನ್ನು ತಲಪುತ್ತಿರುವಂತೆ, ‘ಅನ್ಯಜನರು ನಡೆದುಕೊಳ್ಳುವ ಪ್ರಕಾರ ನಾವು ಇನ್ನು ಮೇಲೆ ನಡೆದುಕೊಳ್ಳದೇ’ ಇರೋಣ. ಆದರೆ ‘ಕರ್ತನ [“ಯೆಹೋವನ,” NW] ಚಿತ್ತವೇನೆಂಬದನ್ನು ವಿಚಾರಿಸಿ ತಿಳಿದವರಾಗಿರೋಣ.’—ಎಫೆ. 4:17; 5:17.