ಏಪ್ರಿಲ್—ಸತ್ಕಾರ್ಯಗಳಿಗಾಗಿ ಹುರುಪುಳ್ಳವರಾಗಿರುವ ಸಮಯ!
1 ಒಂದು ಚಂಡಮಾರುತವು ಜನನಿಬಿಡವಾದ ಕ್ಷೇತ್ರವನ್ನು ಸಮೀಪಿಸಿದಂತೆ, ಸನ್ನಿಹಿತವಾದ ಅಪಾಯದ ಬಗ್ಗೆ ಜನರಿಗೆ ಎಚ್ಚರಿಕೆ ನೀಡುವ ಅಗತ್ಯ ತುರ್ತಿನದ್ದಾಗಿರುತ್ತದೆ. ಚಂಡಮಾರುತವು ಎಷ್ಟು ಹತ್ತಿರವಾಗುತ್ತದೊ, ನೀಡಲ್ಪಡುವ ಎಚ್ಚರಿಕೆಗಳು ಸಹ ಅಷ್ಟೇ ಬಲಯುತವಾಗಿರಬೇಕು. ಏಕೆ? ಏಕೆಂದರೆ ಜೀವಗಳು ಗಂಡಾಂತರದಲ್ಲಿವೆ! ಈ ಮೊದಲು ಕೊಡಲ್ಪಟ್ಟ ಎಚ್ಚರಿಕೆಗಳನ್ನು ಕೆಲವರು ಕೇಳಿಸಿಕೊಂಡಿರಲಿಕ್ಕಿಲ್ಲ. ಇತರರು ಕೇಳಿಸಿಕೊಂಡಿದ್ದರೂ, ಕ್ರಿಯೆಗೈಯಲು ಉದಾಸೀನರಾಗಿದ್ದಿರಬಹುದು. ದೇವರ ನೀತಿಯುತ ಕೋಪದ ‘ಬಿರುಗಾಳಿಯು’ ಈ ದುಷ್ಟ ಲೋಕದ ಎಲ್ಲ ಅವಶೇಷಗಳನ್ನು ಅಳಿಸಿಹಾಕುವ ಮುಂಚೆ, ನಾವು ನೀಡಬೇಕಾಗಿ ಆದೇಶಿಸಲ್ಪಟ್ಟಿರುವ ದೈವಿಕ ಎಚ್ಚರಿಕೆಯ ವಿಷಯದಲ್ಲೂ ಇದು ಸತ್ಯವಾಗಿದೆ. (ಜ್ಞಾನೋ. 10:25) ಕೋಟ್ಯಂತರ ಜನರ ಅನಂತ ಜೀವಿತಗಳು ಗಂಡಾಂತರದಲ್ಲಿವೆ! ಆದಕಾರಣ ಎಚ್ಚರಿಕೆಯು ಕೊಡಲ್ಪಡಲೇಬೇಕು. ನಾವು ‘ಸತ್ಕಾರ್ಯಗಳಿಗಾಗಿ ಹುರುಪುಳ್ಳವರು’ ಆಗಿರಲೇಬೇಕು.—ತೀತ 2:11-14, NW.
2 ಅನೇಕ ದಶಕಗಳಿಂದ ಯೆಹೋವನ ಜನರು, ಜ್ಞಾಪಕಾಚರಣೆಯ ಕಾಲವನ್ನು, ಶುಶ್ರೂಷೆಯಲ್ಲಿ ವಿಶೇಷ ಹುರುಪವನ್ನು ತೋರಿಸುವ ಸಮಯವನ್ನಾಗಿ ಮಾಡುವಂತೆ ಪ್ರಚೋದಿಸಲ್ಪಟ್ಟಿದ್ದಾರೆ. 1939ರ ವಸಂತಕಾಲದಲ್ಲಿ, ನಮ್ಮ ರಾಜ್ಯದ ಸೇವೆಯ ಮುನ್ಸೂಚಕನಂತಿದ್ದ ಇನ್ಫಾರ್ಮಂಟ್ ಈ ಉತ್ತೇಜನವನ್ನು ನೀಡಿತು: “ವಸಂತ ಕಾಲವನ್ನೂ ಒಳ್ಳೆಯ ಹವಾಮಾನವನ್ನೂ ನಾವು ಎದುರುನೋಡುತ್ತಿರುವುದರಿಂದ, ಕಂಪನಿಯ ಪ್ರಚಾರಕರು ಕ್ಷೇತ್ರದಲ್ಲಿ ಕಳೆಯುವ ತಾಸುಗಳು ಇಮ್ಮಡಿಯಾಗುವುದನ್ನು ಮತ್ತು ಪಯನೀಯರರ ಸಮಯವು ಮಹತ್ತರವಾಗಿ ಹೆಚ್ಚಾಗುವುದನ್ನು ನಾವು ನಿರೀಕ್ಷಿಸುತ್ತೇವೆ. ಏಪ್ರಿಲ್ ತಿಂಗಳಿನಲ್ಲಿ ಐದು ಭಾನುವಾರಗಳು ಮತ್ತು ಐದು ಶನಿವಾರಗಳೂ ಇವೆ. ಏಪ್ರಿಲ್ ತಿಂಗಳಿನ ಪ್ರತಿಯೊಂದು ಶನಿವಾರ ಮತ್ತು ಭಾನುವಾರವನ್ನು . . . ವಿಶೇಷ ಸಾಕ್ಷಿಕಾರ್ಯದ ಸಮಯವನ್ನಾಗಿ ಮಾಡಿರಿ.” ಸುಮಾರು 60 ವರ್ಷಗಳ ಹಿಂದೆ ಸಹೋದರರ ಮುಂದಿಡಲ್ಪಟ್ಟ ಆ ಗುರಿಯು ಒಂದು ಸವಾಲಾಗಿತ್ತು! ಈ ವರ್ಷ, 1939ನೇ ವರ್ಷದಂತೆಯೇ, ಏಪ್ರಿಲ್ ತಿಂಗಳಿನಲ್ಲಿ ಪೂರ್ಣವಾದ ಐದು ವಾರಾಂತ್ಯಗಳಿವೆ. ಈ ತಿಂಗಳಿಗಾಗಿ ನೀವು ಯಾವ ಯೋಜನೆಗಳನ್ನು ಮಾಡಿದ್ದೀರಿ? ಏಪ್ರಿಲ್ 2000ಕ್ಕಾಗಿ ನೀವು ನಿಮ್ಮ ಕ್ಯಾಲೆಂಡರಿನ ಮೇಲೆ ಯಾವ ಟಿಪ್ಪಣಿಗಳನ್ನು ಬರೆದಿಟ್ಟುಕೊಂಡಿದ್ದೀರಿ? ತ್ವರಿತಗೊಳಿಸಲ್ಪಟ್ಟಿರುವ ಆತ್ಮಿಕ ಚಟುವಟಿಕೆಯ ಈ ವಿಶೇಷ ತಿಂಗಳಿನಲ್ಲಿ, ಯೆಹೋವನ ಇನ್ನುಳಿದ ಜನರೊಂದಿಗೆ ಸತ್ಕಾರ್ಯಗಳಲ್ಲಿ ಅರ್ಥಭರಿತವಾದ ರೀತಿಯಲ್ಲಿ ಪಾಲ್ಗೊಳ್ಳಲು ಯೋಜಿಸಿರಿ.
3 ನಾವು ಏನನ್ನು ಸಾಧಿಸಲು ನಿರೀಕ್ಷಿಸುತ್ತೇವೆ? ಇಸವಿ 2000ದ ಅತಿ ಪ್ರಾಮುಖ್ಯ ದಿನವು ಈ ತಿಂಗಳಿನಲ್ಲೇ ಇದೆ. ಅದು ಏಪ್ರಿಲ್ 19, ಅಂದರೆ ಯೇಸುವಿನ ಮರಣದ ವಾರ್ಷಿಕೋತ್ಸವದ ದಿನವಾಗಿದೆ. ಸಾಧ್ಯವಾದಷ್ಟು ಹೆಚ್ಚಿನ ಜನರನ್ನು ಜ್ಞಾಪಕಾಚರಣೆಗೆ ಆಮಂತ್ರಿಸಲು ನಾವು ವಿಶೇಷ ಪ್ರಯತ್ನವನ್ನು ಮಾಡೋಣ. ಕಳೆದ ತಿಂಗಳು ಸೂಚಿಸಲ್ಪಟ್ಟಂತೆ, ಜ್ಞಾಪಕಾಚರಣೆಗೆ ಹಾಜರಾಗಬಹುದಾದವರ ಒಂದು ಪಟ್ಟಿಯನ್ನು ಮಾಡಿ, ಯಾರೊಬ್ಬರನ್ನೂ ಮರೆಯಲಾಗಿಲ್ಲ ಎಂಬುದನ್ನು ಖಚಿತಪಡಿಸಿಕೊಳ್ಳಿರಿ. ಆಮಂತ್ರಿಸಲ್ಪಟ್ಟವರಲ್ಲಿ ನಿಷ್ಕ್ರಿಯರಾಗಿರುವ ಪ್ರಚಾರಕರು, ಎಲ್ಲ ಬೈಬಲ್ ವಿದ್ಯಾರ್ಥಿಗಳು, ಪುನರ್ಭೇಟಿಗಳು, ಈ ಮೊದಲು ಬೈಬಲ್ ಅಧ್ಯಯನಮಾಡಿರುವವರು, ಜೊತೆ ಕೆಲಸಗಾರರು, ಸಹಪಾಠಿಗಳು, ನೆರೆಯವರು, ಸಂಬಂಧಿಕರು, ಮತ್ತು ಇತರ ಪರಿಚಯಸ್ಥರು ಸೇರಿರತಕ್ಕದ್ದು. ತಮ್ಮದೇ ವಾಹನವಿರುವವರು ಸಹಾಯದ ಅಗತ್ಯವಿರುವವರಿಗೆ ಪ್ರೀತಿಯಿಂದ ನೆರವಾಗಲು ಶಕ್ತರಾಗಿರಬಹುದು. ಜ್ಞಾಪಕಾಚರಣೆಯ ರಾತ್ರಿಯಂದು, ಹಾಜರಾಗುವವರನ್ನು ಸ್ವಾಗತಿಸುವ ಸುಯೋಗ ನಮಗೆಲ್ಲರಿಗಿರುವುದು. ಜ್ಞಾಪಕಾಚರಣೆಯ ನಂತರ, ಇಂತಹ ಆಸಕ್ತ ವ್ಯಕ್ತಿಗಳಿಗೆ ಬೇಕಾದ ಹೆಚ್ಚಿನ ಆತ್ಮಿಕ ನೆರವನ್ನು ನಾವು ಕೊಡಸಾಧ್ಯವಿದೆ.
4 ಜ್ಞಾಪಕಾಚರಣೆಯ ಮುಂಚಿನ ಮತ್ತು ಅನಂತರದ ದಿನಗಳಲ್ಲಿ ‘ಸತ್ಕಾರ್ಯಗಳಿಗಾಗಿ ಹುರುಪುಳ್ಳವರಾಗಿರುವುದು,’ ಯೆಹೋವನು ನಮಗಾಗಿ ಮಾಡಿರುವ ಎಲ್ಲ ವಿಷಯಗಳನ್ನು ನಾವು ನಿಜವಾಗಿಯೂ ಗಣ್ಯಮಾಡುತ್ತೇವೆಂಬುದನ್ನು ಆತನಿಗೆ ತೋರಿಸುವ ಒಂದು ಅತ್ಯುತ್ತಮ ವಿಧಾನವಾಗಿದೆ. ಹಗಲಿನ ಸಮಯವು ಹೆಚ್ಚಾಗಿರುವುದರಿಂದ, ನಮ್ಮಲ್ಲಿ ಅನೇಕರು ಸೌವಾರ್ತಿಕ ಚಟುವಟಿಕೆಯಲ್ಲಿ ನಮ್ಮ ಪ್ರಯತ್ನಗಳನ್ನು ಹೆಚ್ಚಿಸಲು ಶಕ್ತರಾಗಿರುವೆವು. ನೀವು ಆಕ್ಸಿಲಿಯರಿ ಪಯನೀಯರ್ ಸೇವೆಯನ್ನು ಮಾಡುತ್ತಿರುವುದಾದರೆ, ಶುಶ್ರೂಷೆಯಲ್ಲಿ 50 ಇಲ್ಲವೆ ಹೆಚ್ಚಿನ ತಾಸುಗಳನ್ನು ವ್ಯಯಿಸಲು ನಿಮ್ಮ ಕೈಲಾದುದನ್ನೆಲ್ಲ ಮಾಡಲು ಬಯಸುವಿರಿ. (ಮತ್ತಾ. 5:37) ತಿಂಗಳಿನ ಆರಂಭದಲ್ಲಿ ನೀವು ತಯಾರಿಸಿದ ಶೆಡ್ಯೂಲನ್ನು ಪಟ್ಟುಬಿಡದೆ ಅನುಸರಿಸಿರಿ. (ಪ್ರಸಂ. 3:1; 1 ಕೊರಿಂ. 14:40) ಎಲ್ಲ ಪಯನೀಯರರಿಗೆ ಬೇಕಾದ ಉತ್ತೇಜನವನ್ನು ಕೊಡುವ ಮೂಲಕ ಮತ್ತು ಅವರೊಂದಿಗೆ ಕ್ಷೇತ್ರದಲ್ಲಿ ಕೆಲಸಮಾಡುವ ಮೂಲಕ, ನಮ್ಮಲ್ಲಿ ಉಳಿದವರೆಲ್ಲರೂ ಅವರಿಗೆ ಬೆಂಬಲದ ಹಸ್ತವನ್ನೀಡಲು ನಮ್ಮಿಂದ ಸಾಧ್ಯವಾದುದೆಲ್ಲವನ್ನೂ ಮಾಡೋಣ. (ಹೋಲಿಸಿ 2 ಅರಸು 10:15, 16.) ಏಪ್ರಿಲ್ ತಿಂಗಳಿನಲ್ಲಿ ನಾವು ಹುರುಪಿನಿಂದ ಬಿತ್ತುವುದಾದರೆ, ನಾವು ಅತ್ಯಾನಂದವನ್ನೂ, ಯೆಹೋವನಿಂದ ಆಶೀರ್ವಾದವನ್ನೂ ಪಡೆದುಕೊಳ್ಳಲು ನಿರೀಕ್ಷಿಸಸಾಧ್ಯವಿದೆ. (ಮಲಾ. 3:10) ಇದು ಸತತವಾದ ಆಕ್ಸಿಲಿಯರಿ ಪಯನೀಯರ್ ಸೇವೆಗೆ ಇಲ್ಲವೆ ರೆಗ್ಯುಲರ್ ಪಯನೀಯರ್ ಸೇವೆಗೆ ಒಂದು ಮೆಟ್ಟುಗಲ್ಲಾಗಿ ಕಾರ್ಯಮಾಡಬಹುದು. ಏಪ್ರಿಲ್ ತಿಂಗಳಿನಲ್ಲಿನ ನಮ್ಮ ಈ ತೀವ್ರವಾದ ಆತ್ಮಿಕ ಚಟುವಟಿಕೆಯು, ನಾವು ಕ್ರಮವಾದ ರಾಜ್ಯ ಪ್ರಚಾರಕರೋಪಾದಿ ಮುಂದುವರಿದಂತೆ ಮುಂಬರುವ ತಿಂಗಳುಗಳಿಗೂ ವಿಸ್ತರಿಸಲಿ.
5 ಈ ತಿಂಗಳು ಯೆಹೋವನ ಜನರಲ್ಲಿ ಸಾವಿರಾರು ಮಂದಿ ಹೆಚ್ಚಿನ ಮನೆ ಬೈಬಲ್ ಅಭ್ಯಾಸಗಳನ್ನು ಆರಂಭಿಸುವರು ಎಂಬುದರಲ್ಲಿ ಸಂದೇಹವೇ ಇಲ್ಲ. ಒಂದು ಅಭ್ಯಾಸವನ್ನು ಆರಂಭಿಸಲು ನೀವು ಬಯಸುವಿರೊ? ನಿರ್ದಿಷ್ಟವಾಗಿ ಒಂದು ಅಭ್ಯಾಸಕ್ಕಾಗಿ ಪ್ರಾರ್ಥನೆಮಾಡಿ, ನಿಮ್ಮ ಪ್ರಾರ್ಥನೆಗಳಿಗನುಸಾರ ಕ್ರಿಯೆಗೈಯಿರಿ. ಯಾರೊಂದಿಗೆ ನೀವು ಅಭ್ಯಾಸವನ್ನು ನಡೆಸಬಲ್ಲಿರೊ ಅಂತಹ ಒಬ್ಬ ಪ್ರಾಮಾಣಿಕ ಹೃದಯದ ವ್ಯಕ್ತಿಯನ್ನು ಕಂಡುಹಿಡಿಯಲು ನೀವು ಮಾಡುವ ದೀನ ವಿನಂತಿಗಳನ್ನು ಯೆಹೋವನು ಉತ್ತರಿಸುವನೆಂಬ ಖಾತ್ರಿ ನಿಮಗಿರಸಾಧ್ಯವಿದೆ.—1 ಯೋಹಾ. 3:22.
6 ಕೆಳಗೆ ಕೊಡಲ್ಪಟ್ಟಿರುವ ಈ ವಿಧಾನವು ಕ್ಷೇತ್ರದಲ್ಲಿ ಪರೀಕ್ಷಿಸಲ್ಪಟ್ಟು, ಸಂಭಾಷಣೆಗಳನ್ನು ಆರಂಭಿಸುವುದರಲ್ಲಿ ಸಫಲತೆಯನ್ನು ಪಡೆದಿದೆ. ಹೀಗೆ ಕೇಳುವ ಮೂಲಕ ನೀವು ಆರಂಭಿಸಿ: “ಈಗಿನ ಕಾಲದಲ್ಲಿ ಕೆಲವು ಯುವ ಜನರು ಮಾಡುವ ಹಿಂಸಾಕೃತ್ಯಗಳು ಪೈಶಾಚಿಕ ಚಟುವಟಿಕೆಯ ಪರಿಣಾಮವೆಂದು ನೀವು ನೆನಸುತ್ತೀರೊ ಅಥವಾ ಅದು ಹೆತ್ತವರು ನೀಡಬೇಕಾದ ತರಬೇತಿಯ ಕೊರತೆಯಿಂದ ಆಗುತ್ತಿದೆಯೆಂದು ನಿಮಗನಿಸುತ್ತದೊ?” ಪ್ರತಿಕ್ರಿಯೆಗಾಗಿ ಅನುಮತಿಸಿರಿ. ವ್ಯಕ್ತಿಯು “ಪೈಶಾಚಿಕ ಚಟುವಟಿಕೆ” ಎಂದು ಹೇಳಿದರೆ, ಪ್ರಕಟನೆ 12:9, 12ನ್ನು ಓದಿ, ಲೋಕದಲ್ಲಿ ಗಲಭೆಯನ್ನು ಪ್ರವರ್ಧಿಸುವ ವಿಷಯದಲ್ಲಿ ಪಿಶಾಚನು ವಹಿಸುವ ಪಾತ್ರವನ್ನು ಎತ್ತಿತೋರಿಸಿರಿ. ತದನಂತರ, ಅಪೇಕ್ಷಿಸು ಬ್ರೋಷರನ್ನು ಪಾಠ 4ಕ್ಕೆ ತಿರುಗಿಸಿ, ಪಿಶಾಚನು ಎಲ್ಲಿಂದ ಬಂದನೆಂಬುದರ ಬಗ್ಗೆ ಆ ವ್ಯಕ್ತಿ ಎಂದಾದರೂ ಯೋಚಿಸಿದ್ದಾನೊ ಎಂದು ಕೇಳಿರಿ. ತರುವಾಯ, ಮೊದಲಿನ ಎರಡು ಪ್ಯಾರಗಳನ್ನು ಓದಿ, ಚರ್ಚಿಸಿರಿ. ಆದರೆ ವ್ಯಕ್ತಿಯು, ಶಾಲೆಯಲ್ಲಿ ನಡೆಯುತ್ತಿರುವ ಹಿಂಸಾಚಾರಕ್ಕೆ “ಹೆತ್ತವರು ನೀಡಬೇಕಾದ ತರಬೇತಿಯ ಕೊರತೆ”ಯೇ ಕಾರಣವೆಂದು ಹೇಳಿದರೆ, 2 ತಿಮೊಥೆಯ 3:1-3ನ್ನು ಓದಿ, ಈ ಸಮಸ್ಯೆಗೆ ಹೆಚ್ಚನ್ನು ಕೂಡಿಸುವ ಗುಣಗಳ ಕಡೆಗೆ ಸೂಚಿಸಿರಿ. ತರುವಾಯ ಅಪೇಕ್ಷಿಸು ಬ್ರೋಷರನ್ನು ಪಾಠ 8ಕ್ಕೆ ತಿರುಗಿಸಿ, ಪ್ಯಾರ 5ನ್ನು ಓದಿ, ಚರ್ಚೆಯನ್ನು ಮುಂದುವರಿಸಿರಿ. ಆ ವ್ಯಕ್ತಿಯನ್ನು ಪುನಃ ಭೇಟಿಮಾಡಲು ನೀವು ನಿಶ್ಚಿತ ಸಮಯವನ್ನು ಗೊತ್ತುಪಡಿಸಸಾಧ್ಯವಿರುವಲ್ಲಿ, ಅವನೊಂದಿಗೆ ಒಂದು ಕ್ರಮವಾದ ಬೈಬಲ್ ಅಧ್ಯಯನವನ್ನು ನಡೆಸಲು ನೀವು ಮಾರ್ಗವನ್ನು ಸಿದ್ಧಪಡಿಸುತ್ತಿರುವಿರಿ. ತದನಂತರದ ಒಂದು ಭೇಟಿಯಲ್ಲಿ, ಅವನು ಕಲಿಯುತ್ತಿರುವ ವಿಷಯಗಳಿಗೆ ಕಿವಿಗೊಡಲು ಇಷ್ಟಪಡುವ ಬೇರೆ ಯಾರಾದರೂ ಇದ್ದಾರೊ ಎಂದು ಆ ವ್ಯಕ್ತಿಯನ್ನು ಕೇಳಿರಿ.
7 ಏಪ್ರಿಲ್ ತಿಂಗಳಿನಲ್ಲಿ ‘ಸತ್ಕಾರ್ಯಗಳಿಗಾಗಿ ಹುರುಪುಳ್ಳವರಾಗಿರುವ’ ಮತ್ತೊಂದು ವಿಧಾನವು, ಸಾಕ್ಷಿಕಾರ್ಯದ ವಿವಿಧ ರೂಪಗಳಲ್ಲಿ ಭಾಗವಹಿಸುವುದೇ ಆಗಿದೆ. ಒಂದು ಪಾರ್ಕಿನಲ್ಲಿ ಅಥವಾ ವಾಹನ ನಿಲ್ಲಿಸುವ ಸ್ಥಳದಲ್ಲಿ ಇಲ್ಲವೆ ಒಂದು ಬಸ್ ನಿಲ್ದಾಣದಲ್ಲಿಯೊ ರೇಲ್ವೆ ಸ್ಟೇಷನಿನಲ್ಲಿಯೊ ಸಾಕ್ಷಿನೀಡುವುದರ ಬಗ್ಗೆ ನೀವು ಯೋಚಿಸಿದ್ದೀರೊ? ಟೆಲಿಫೋನ್ ಮೂಲಕ ಸಾಕ್ಷಿನೀಡುವುದನ್ನು, ಇಲ್ಲವೆ ಬೀದಿಗಳಲ್ಲಿ ಅಥವಾ ವ್ಯಾಪಾರಿ ಟೆರಿಟೊರಿಗಳಲ್ಲಿ ಸಾಕ್ಷಿನೀಡುವುದನ್ನು ಪ್ರಯತ್ನಿಸಲು ನೀವು ಇಷ್ಟಪಡುವಿರೊ? ಏಪ್ರಿಲ್ ತಿಂಗಳಿನಲ್ಲಿ ನೀವು ಈ ವಿಚಾರಗಳನ್ನೆಲ್ಲ ಏಕೆ ಕಾರ್ಯರೂಪಕ್ಕೆ ಹಾಕಬಾರದು? ಅಗತ್ಯವಾದ ಧೈರ್ಯವನ್ನು ಒಟ್ಟುಗೂಡಿಸಲು ಯೆಹೋವನು ನಿಮಗೆ ಸಹಾಯಮಾಡುವನು. (ಅ.ಕೃ. 4:31; 1 ಥೆಸ. 2:2) ಬಹುಶಃ ಶುಶ್ರೂಷೆಯ ಈ ವಿವಿಧ ರೂಪಗಳಲ್ಲಿ ಅನುಭವಸ್ಥನಾಗಿರುವ ಒಬ್ಬ ಪಯನೀಯರ್ ಇಲ್ಲವೆ ಪ್ರಚಾರಕನೊಂದಿಗೆ ಕೆಲಸಮಾಡುವ ಏರ್ಪಾಡನ್ನು ನೀವು ಮಾಡಸಾಧ್ಯವಿದೆ.
8 ಸಾಕ್ಷಿಕಾರ್ಯದಲ್ಲಿ ತನ್ನ ಪಾಲನ್ನು ಹೆಚ್ಚಿಸಲು ಇಷ್ಟಪಡುವ ಯಾರೇ ಆಗಲಿ, ಅನೌಪಚಾರಿಕ ಸಾಕ್ಷಿಕಾರ್ಯದಲ್ಲಿ ಭಾಗವಹಿಸಲು ಇಷ್ಟಪಡುವರು. ಇದನ್ನು ಮಾಡಲಿಕ್ಕಾಗಿ ಒಬ್ಬ ವ್ಯಕ್ತಿಯನ್ನು ಒಂದು ಸ್ನೇಹಪರ ಸಂಭಾಷಣೆಯಲ್ಲಿ ತೊಡಗಿಸಿರಿ. 6ನೆಯ ಪ್ಯಾರದಲ್ಲಿ ಸೂಚಿಸಲ್ಪಟ್ಟ ನಿರೂಪಣೆಯನ್ನು ಉಪಯೋಗಿಸುವ ಮೂಲಕ, ಸಾಮಾನ್ಯ ಅಭಿರುಚಿಯ ಒಂದು ವಿಷಯದ ಕುರಿತು ಮಾತಾಡಲಾರಂಭಿಸಿರಿ. ಸಮಯದ ಚಿಕ್ಕ ಚಿಕ್ಕ ಅವಧಿಗಳನ್ನು ಸಹ ಸದುಪಯೋಗಿಸಲು ಪ್ರಯತ್ನಿಸಿರಿ, ಇಲ್ಲದಿದ್ದರೆ ಅದು ವ್ಯರ್ಥವಾಗಿ ಕಳೆದುಹೋಗಬಲ್ಲದು. ಅನೌಪಚಾರಿಕ ಸಾಕ್ಷಿಕಾರ್ಯದಲ್ಲಿ ಐದು, ಹತ್ತು ಇಲ್ಲವೆ ಹದಿನೈದು ನಿಮಿಷಗಳನ್ನಾದರೂ ಏಕೆ ಪ್ರಯೋಜನಕರವಾಗಿ ಉಪಯೋಗಿಸಬಾರದು?
9 ಪುನರಾಲೋಚನೆಗಾಗಿರುವ ಸಮಯ: ಇಸವಿ 1999-2000ದ “ದೇವರ ಪ್ರವಾದನ ವಾಕ್ಯ” ಜಿಲ್ಲಾ ಅಧಿವೇಶನದ ಡ್ರಾಮದಲ್ಲಿ ತಿಳಿಯಪಡಿಸಲಾದ ಪ್ರಭಾವಯುತ ವಿಷಯಗಳ ಕುರಿತು ಪುನರಾಲೋಚಿಸಿರಿ. ನಮ್ಮ ಆತ್ಮಿಕ ಪರಂಪರೆಯನ್ನು ಗಣ್ಯಮಾಡುವುದು ಎಂಬ ಶೀರ್ಷಿಕೆಯ ಆ ಡ್ರಾಮವು, ಯಾಕೋಬ ಮತ್ತು ಏಸಾವರ ಮಧ್ಯದಲ್ಲಿದ್ದ ವ್ಯತ್ಯಾಸದ ಕುರಿತು ನಾವು ಜಾಗರೂಕವಾಗಿ ಆಲೋಚಿಸುವಂತೆ ಮಾಡಿತು. ಯಾಕೋಬನಂತೆ ತನಗೂ ಆತ್ಮಿಕ ವಿಷಯಗಳಲ್ಲಿ ಆಸಕ್ತಿಯಿದೆ ಎಂದು ಏಸಾವ ಹೇಳಿದನಾದರೂ, ಅವನ ಕ್ರಿಯೆಗಳು ಅದನ್ನು ತೋರಿಸಲಿಲ್ಲ. (ಆದಿ. 25:29-34) ನಮಗೆಂತಹ ಪ್ರಭಾವಯುತವಾದ ಎಚ್ಚರಿಕೆ! ಯಾಕೋಬನಂತೆ, ಯೆಹೋವನ ಆಶೀರ್ವಾದಕ್ಕಾಗಿ ನಾವು ಹೆಣಗಾಡಲು, ಅಷ್ಟೇಕೆ ಅದಕ್ಕಾಗಿ ಹೋರಾಡಲು ಸಹ ಸಿದ್ಧರಾಗಿರೋಣ. (ಆದಿ. 32:24-29) ನಮ್ಮ ಅದ್ಭುತಕರವಾದ ಆತ್ಮಿಕ ಪರಂಪರೆಯನ್ನು ಕ್ಷುಲ್ಲಕವೆಂದೆಣಿಸದೆ, ನಮ್ಮ ಹುರುಪನ್ನು ನವೀಕರಿಸಲು ನಾವು ಏಪ್ರಿಲ್ ಮತ್ತು ಮುಂಬರುವ ಎಲ್ಲ ತಿಂಗಳುಗಳನ್ನು ಏಕೆ ಉಪಯೋಗಿಸಿಕೊಳ್ಳಬಾರದು?
10 “ಯೆಹೋವನ ಮಹಾದಿನವು ಹತ್ತಿರವಾಯಿತು, ಸಮೀಪಿಸಿತು, ಬಹು ತ್ವರೆಯಾಗಿ ಬರುತ್ತಿದೆ.” (ಚೆಫ. 1:14) ರಾಜ್ಯದ ಸುವಾರ್ತೆಯನ್ನು ಪ್ರಕಟಪಡಿಸಲೇಬೇಕು. ಜೀವಗಳು ಗಂಡಾಂತರದಲ್ಲಿವೆ! ನಾವು ‘ಸತ್ಕಾರ್ಯಗಳಿಗಾಗಿ ಹುರುಪುಳ್ಳವರೆಂದು’ ಐಕ್ಯರಾಗಿ ತೋರಿಸುವಾಗ, ಯೆಹೋವನ ಎಲ್ಲ ಜನರಿಗೆ ಈ ತಿಂಗಳು ವಿಶೇಷವಾಗಿ ಆಶೀರ್ವದಿಸಲ್ಪಟ್ಟ ತಿಂಗಳಾಗಿ ರುಜುವಾಗಲಿ.
[ಪುಟ 4ರಲ್ಲಿರುವಚೌಕ]
ಜ್ಞಾಪಕಾಚರಣೆಯ ಮರುಜ್ಞಾಪನಗಳು
ಈ ವರ್ಷದ ಜ್ಞಾಪಕಾಚರಣೆಯನ್ನು ಬುಧವಾರ, ಏಪ್ರಿಲ್ 19ರಂದು ಆಚರಿಸಲಾಗುವುದು. ಹಿರಿಯರು ಈ ಕೆಳಕಂಡ ವಿಷಯಗಳಿಗೆ ಗಮನವನ್ನು ಕೊಡಬೇಕು:
◼ ಕೂಟಕ್ಕಾಗಿ ಸಮಯವನ್ನು ನಿಗದಿಪಡಿಸುವಾಗ, ಸೂರ್ಯಾಸ್ತಮಾನಕ್ಕಿಂತ ಮುಂಚೆ ಕುರುಹುಗಳು ದಾಟಿಸಲ್ಪಡಬಾರದು ಎಂಬುದನ್ನು ಖಚಿತಪಡಿಸಿಕೊಳ್ಳಿರಿ.
◼ ಭಾಷಣಕರ್ತನನ್ನು ಸೇರಿಸಿ, ಪ್ರತಿಯೊಬ್ಬರಿಗೂ ಆಚರಣೆಯ ಸರಿಯಾದ ಸಮಯ ಮತ್ತು ಸ್ಥಳದ ಕುರಿತು ತಿಳಿಸಬೇಕು.
◼ ಸರಿಯಾದ ರೀತಿಯ ರೊಟ್ಟಿ ಮತ್ತು ದ್ರಾಕ್ಷಾರಸವನ್ನು ಪಡೆದು, ಅದನ್ನು ಸಿದ್ಧಪಡಿಸಿರಬೇಕು.—ಮಾರ್ಚ್ 1, 1985ರ ಕಾವಲಿನಬುರುಜು ಪತ್ರಿಕೆಯ 21ನೆಯ ಪುಟವನ್ನು ನೋಡಿರಿ.
◼ ತಟ್ಟೆಗಳು, ಲೋಟಗಳು, ಯೋಗ್ಯವಾದ ಮೇಜು ಹಾಗೂ ಮೇಜಿನ ಬಟ್ಟೆಯನ್ನು ಸಭಾಗೃಹಕ್ಕೆ ತಂದು, ಅದರ ಸ್ಥಾನದಲ್ಲಿ ಮುಂಚಿತವಾಗಿಯೇ ಇಡಬೇಕು.
◼ ರಾಜ್ಯ ಸಭಾಗೃಹವನ್ನು ಅಥವಾ ಕೂಟವನ್ನು ನಡೆಸುವ ಬೇರೆ ಸ್ಥಳವನ್ನು ಮುಂಚಿತವಾಗಿಯೇ ಚೆನ್ನಾಗಿ ಶುಚಿಮಾಡಬೇಕು.
◼ ಅಟೆಂಡೆಂಟರನ್ನು ಮತ್ತು ಕುರುಹುಗಳನ್ನು ದಾಟಿಸುವವರನ್ನು ಆಯ್ಕೆಮಾಡಿ, ಅವರ ಕೆಲಸಗಳನ್ನು ಮತ್ತು ಸೂಕ್ತವಾದ ಕಾರ್ಯವಿಧಾನವನ್ನು ಮುಂಚಿತವಾಗಿಯೇ ಅವರಿಗೆ ಹೇಳಬೇಕು.
◼ ಅಶಕ್ತರೂ ಅಲ್ಲಿ ಉಪಸ್ಥಿತರಿರಲು ಅಸಮರ್ಥರೂ ಆಗಿರುವ ಅಭಿಷಿಕ್ತರಿಗೆ ಕುರುಹುಗಳನ್ನು ಕೊಡಲು ಏರ್ಪಾಡುಗಳನ್ನು ಮಾಡಬೇಕು.
◼ ಒಂದಕ್ಕಿಂತ ಹೆಚ್ಚಿನ ಸಭೆಗಳು ಒಂದೇ ಸಭಾಗೃಹವನ್ನು ಉಪಯೋಗಿಸುವಲ್ಲಿ, ಸಭೆಗಳ ಮಧ್ಯೆ ಒಳ್ಳೆಯ ಸಹಕಾರವಿರಬೇಕು. ಇದು ಸಭಾಗೃಹದ ಪ್ರವೇಶದ್ವಾರದಲ್ಲಿ ಇಲ್ಲವೆ ರಸ್ತೆಗಳಲ್ಲಿ, ಮತ್ತು ಪಾರ್ಕಿಂಗ್ ಸ್ಥಳಗಳಲ್ಲಿ ಅನಾವಶ್ಯಕ ಜನಸಂದಣಿಯನ್ನು ತಪ್ಪಿಸುವುದು.