“ಅರ್ಹತೆಯ ಪರೀಕ್ಷೆಗೊಳಗಾಗುವುದು”—ಹೇಗೆ?
1 ಯೆಹೋವನ ಸಂಸ್ಥೆಯು ಸತತವಾಗಿ ಅಭಿವೃದ್ಧಿಹೊಂದುತ್ತಿರುವುದರಿಂದ, ಶುಶ್ರೂಷಾ ಸೇವಕರಾಗಿ ಸೇವೆಮಾಡಲಿಕ್ಕಾಗಿ ಅರ್ಹ ಸಹೋದರರ ಅಗತ್ಯವು ಕೂಡ ಹೆಚ್ಚುತ್ತಿದೆ. ಹದಿವಯಸ್ಕರನ್ನೂ ಒಳಗೊಂಡು ಇಷ್ಟರ ತನಕ ನೇಮಕವನ್ನು ಪಡೆದುಕೊಂಡಿರದ ಅನೇಕ ಸಹೋದರರಿಗೆ, ಸಭೆಯಲ್ಲಿ ಸೇವೆ ಸಲ್ಲಿಸುವ ಬಯಕೆಯಿದೆ. ಅವರಿಗೆ ಹೆಚ್ಚಿನ ಕೆಲಸಗಳು ಕೊಡಲ್ಪಡುವಾಗ, ತಾವು ಪ್ರಯೋಜನಾರ್ಹರು ಮತ್ತು ತಮಗೆ ನೇಮಿಸಿದ ಕೆಲಸವನ್ನು ಪೂರೈಸಿದ್ದೇವೆ ಎಂಬ ಅನಿಸಿಕೆ ಅವರಿಗಾಗುತ್ತದೆ. ಅವರ ಮುಂದಿನ ಪ್ರಗತಿಯು, ಅವರು “ಅರ್ಹತೆಯ ಪರೀಕ್ಷೆಗೊಳಗಾಗುವುದರ” ಮೇಲೆ ಹೊಂದಿಕೊಂಡಿದೆ. (1 ತಿಮೊ. 3:10, NW) ಇದನ್ನು ಹೇಗೆ ಮಾಡಲಾಗುತ್ತದೆ?
2 ಹಿರಿಯರ ಪಾತ್ರ: 1 ತಿಮೊಥೆಯ 3:8-13ರಲ್ಲಿ ಕಂಡುಬರುವ ಶುಶ್ರೂಷಾ ಸೇವಕರಿಗಾಗಿರುವ ಶಾಸ್ತ್ರೀಯ ಅರ್ಹತೆಗಳಿಗನುಸಾರ ಒಬ್ಬ ಸಹೋದರನನ್ನು ಪರೀಕ್ಷಿಸುವುದರ ಒಂದು ಭಾಗದೋಪಾದಿ, ಜವಾಬ್ದಾರಿಯನ್ನು ಹೊರುವ ವಿಷಯದಲ್ಲಿ ಆ ಸಹೋದರನು ಯಾವ ಅರ್ಹತೆಯನ್ನು ಪಡೆದಿದ್ದಾನೆ ಎಂಬುದನ್ನು ಹಿರಿಯರು ಪರೀಕ್ಷಿಸುವರು. ಪತ್ರಿಕೆಗಳು ಮತ್ತು ಸಾಹಿತ್ಯವನ್ನು ಹಂಚುವ, ಮೈಕ್ರೋಫೋನ್ಗಳನ್ನು ನಿರ್ವಹಿಸುವ, ರಾಜ್ಯ ಸಭಾಗೃಹವನ್ನು ಸುಸ್ಥಿತಿಯಲ್ಲಿಡುವುದಕ್ಕೆ ಸಂಬಂಧಿಸಿದ ಕೆಲಸಗಳಲ್ಲಿ ಸಹಾಯ ಮಾಡುವಂತೆ ಹಿರಿಯರು ಆ ಸಹೋದರರನ್ನು ನೇಮಿಸಬಹುದು. ತನ್ನ ನೇಮಕಗಳಿಗೆ ಅವನು ಹೇಗೆ ಪ್ರತಿಕ್ರಿಯಿಸುತ್ತಾನೆ ಮತ್ತು ಅವುಗಳನ್ನು ಹೇಗೆ ಪೂರೈಸುತ್ತಾನೆ ಎಂಬುದನ್ನು ಹಿರಿಯರು ಗಮನಿಸುವರು. ವಿಶ್ವಾಸಾರ್ಹತೆ, ಸಮಯನಿಷ್ಠೆ, ಕಾರ್ಯತತ್ಪರತೆ, ವಿನಯಶೀಲತೆ, ಸಿದ್ಧಮನಸ್ಕತೆ, ಮತ್ತು ಇತರರೊಂದಿಗೆ ಚೆನ್ನಾಗಿ ಹೊಂದಿಕೊಂಡುಹೋಗುವ ಗುಣಗಳನ್ನು ಅವರು ನಿರೀಕ್ಷಿಸುವರು. (ಫಿಲಿ. 2:20) ತನ್ನ ಉಡುಪು ಮತ್ತು ಕೇಶಾಲಂಕಾರದ ವಿಷಯದಲ್ಲಿ ಅವನು ಆದರ್ಶಪ್ರಾಯನಾಗಿದ್ದಾನೋ? ಅವನಿಗೆ ಜವಾಬ್ದಾರಿಯ ಮನೋಭಾವವಿದೆಯೋ? ಅವರು “ಅವನ ಒಳ್ಳೆಯ ನಡತೆಯಲ್ಲಿ ವಿವೇಕದ ಲಕ್ಷಣವಾಗಿರುವ ಮೃದುಸ್ವಭಾವದಿಂದ ಕೂಡಿದ ಕೆಲಸಗಳನ್ನು” ನೋಡಲು ಬಯಸುತ್ತಾರೆ. (ಯಾಕೋ. 3:13, NW) ಸಭೆಯಲ್ಲಿ ಸಹಾಯಮಾಡಲಿಕ್ಕಾಗಿ ಅವನು ನಿಜವಾಗಿಯೂ ತನ್ನನ್ನು ಎಟುಕಿಸಿಕೊಳ್ಳುತ್ತಿದ್ದಾನೋ? ಕ್ಷೇತ್ರ ಸೇವೆಯಲ್ಲಿ ಹುರುಪಿನಿಂದ ಭಾಗವಹಿಸುವ ಮೂಲಕ, “ಜನರನ್ನು ಶಿಷ್ಯರನ್ನಾಗಿ ಮಾಡುವ” ಯೇಸುವಿನ ಆಜ್ಞೆಯನ್ನು ಅವನು ಪೂರೈಸುತ್ತಿದ್ದಾನೋ?—ಮತ್ತಾ. 28:19; 1991, ಮೇ 1ರ ಕಾವಲಿನಬುರುಜು ಪತ್ರಿಕೆಯ 10-20ನೆಯ ಪುಟಗಳನ್ನು ನೋಡಿರಿ.
3 ಒಬ್ಬನು ಶುಶ್ರೂಷಾ ಸೇವಕನಾಗಿ ನೇಮಿಸಲ್ಪಡಲು ಯಾವುದೇ ಕನಿಷ್ಠ ಪ್ರಾಯವು ನಿಗದಿಪಡಿಸಲ್ಪಟ್ಟಿಲ್ಲವಾದರೂ, ಬೈಬಲು ಅಂತಹ ಸಹೋದರರನ್ನು “ಶುಶ್ರೂಷೆಮಾಡುವ ಪುರುಷರು” ಎಂದು ಸಂಬೋಧಿಸುತ್ತದೆ. ಒಬ್ಬ ಪತ್ನಿ ಹಾಗೂ ಮಕ್ಕಳನ್ನು ಪಡೆದಿರುವ ಸಾಧ್ಯತೆಯ ಕುರಿತು ಉಲ್ಲೇಖಿಸಲ್ಪಟ್ಟಿರುವುದರಿಂದ, ತಮ್ಮ ಹದಿಪ್ರಾಯದ ಆರಂಭದಲ್ಲೋ ಅಥವಾ ಹದಿಪ್ರಾಯದ ಮಧ್ಯಭಾಗದಲ್ಲೋ ಇರುವವರನ್ನು ನಾವು ಆ ಸ್ಥಾನದಲ್ಲಿ ನಿರೀಕ್ಷಿಸಲಾರೆವು. (1 ತಿಮೊ. 3:12, 13, NW) ಇಂತಹ ಪುರುಷರು “ಯೌವನದ ಇಚ್ಛೆಗಳಿಗೆ” ಒಳಗಾಗದವರಾಗಿರಬೇಕು, ಆದರೆ ದೇವರ ಮುಂದೆ ಹಾಗೂ ಜನರ ಮುಂದೆ ಒಂದು ಅತ್ಯುತ್ತಮ ನಿಲುವು ಹಾಗೂ ಶುದ್ಧ ಮನಸ್ಸಾಕ್ಷಿಯುಳ್ಳವರಾಗಿದ್ದು, ತಮ್ಮನ್ನು ಗಂಭೀರವಾದ ರೀತಿಯಲ್ಲಿ ನಡೆಸಿಕೊಳ್ಳಬೇಕು.—2 ತಿಮೊ. 2:22.
4 ಒಬ್ಬನಲ್ಲಿರುವ ಸಹಜ ಪ್ರತಿಭೆಯು ಪ್ರಯೋಜನಕರವಾಗಿರುವುದಾದರೂ, ನಿಜವಾಗಿಯೂ ಮಹತ್ವವುಳ್ಳ ಸಂಗತಿಯು, ಒಬ್ಬನ ಮನೋಭಾವ ಮತ್ತು ನಡತೆಯಾಗಿದೆ. ದೇವರನ್ನು ಸ್ತುತಿಸಲು ಮತ್ತು ತನ್ನ ಸಹೋದರರ ಸೇವೆಯನ್ನು ಮಾಡಲು ಒಬ್ಬ ಸಹೋದರನು ದೀನಮನಸ್ಸಿನಿಂದ ಬಯಸುತ್ತಾನೋ? ಹಾಗೆ ಬಯಸುವಲ್ಲಿ, ಸಭೆಯಲ್ಲಿ ಪ್ರಗತಿ ಮಾಡಲಿಕ್ಕಾಗಿ ಅವನು ಮಾಡುವ ಪ್ರಯತ್ನಗಳನ್ನು ಯೆಹೋವನು ಆಶೀರ್ವದಿಸುವನು.