‘ಯಾರಾದರೂ ನನಗೆ ಅರ್ಥ ತಿಳಿಸಿಕೊಟ್ಟ ಹೊರತು ಅದು ನನಗೆ ಹೇಗೆ ತಿಳಿದೀತು?’
1 ಐಥಿಯೋಪ್ಯ ದೇಶದ ಕಂಚುಕಿಯು ರಥದಲ್ಲಿ ಕುಳಿತುಕೊಂಡು ಯೆಶಾಯ ಪ್ರವಾದಿಯ ಗ್ರಂಥವನ್ನು ಓದುತ್ತಿದ್ದನು. ಆಗ, ದೇವರ ವಾಕ್ಯದಿಂದ ಆ ಕಂಚುಕಿಯು ಓದುತ್ತಿರುವ ವಿಷಯವು ಅವನಿಗೆ ಅರ್ಥವಾಗುತ್ತಿದೆಯೋ ಎಂದು ಸೌವಾರ್ತಿಕನಾದ ಫಿಲಿಪ್ಪನು ಅವನನ್ನು ಕೇಳಿದನು. ಅದಕ್ಕೆ ಅವನು ‘ಯಾರಾದರೂ ನನಗೆ ಅರ್ಥ ತಿಳಿಸಿಕೊಟ್ಟ ಹೊರತು ಅದು ನನಗೆ ಹೇಗೆ ತಿಳಿದೀತು?’ ಎಂದು ಹೇಳಿದನು. ಆಗ ಫಿಲಿಪ್ಪನು ಯೇಸುವಿನ ಕುರಿತಾದ ಸುವಾರ್ತೆಯನ್ನು ಅರ್ಥಮಾಡಿಕೊಳ್ಳಲು ಅವನಿಗೆ ಸಹಾಯ ಮಾಡಿದನು. ಇದರ ಫಲಿತಾಂಶವಾಗಿ ಐಥಿಯೋಪ್ಯ ದೇಶದ ಕಂಚುಕಿಯು ಆ ಕೂಡಲೆ ದೀಕ್ಷಾಸ್ನಾನವನ್ನು ಪಡೆದುಕೊಂಡನು. (ಅ. ಕೃ. 8:26-38) ‘ಎಲ್ಲಾ ದೇಶಗಳ ಜನರನ್ನು ಶಿಷ್ಯರನ್ನಾಗಿ ಮಾಡಿರಿ, ಅವರಿಗೆ ದೀಕ್ಷಾಸ್ನಾನ ಮಾಡಿಸಿರಿ, ಮತ್ತು ಅವರಿಗೆ ಉಪದೇಶಮಾಡಿರಿ’ ಎಂಬ ಆಜ್ಞೆಯು ಯೇಸುವಿನಿಂದ ಕೊಡಲ್ಪಟ್ಟಿತ್ತು. ಮತ್ತು ಈ ಕಂಚುಕಿಗೆ ಸಹಾಯ ಮಾಡುವ ಮೂಲಕ ಫಿಲಿಪ್ಪನು ಆ ಆಜ್ಞೆಗೆ ವಿಧೇಯತೆ ತೋರಿಸಿದನು.—ಮತ್ತಾ. 28:19, 20.
2 ಫಿಲಿಪ್ಪನಂತೆಯೇ ನಾವು ಸಹ ಶಿಷ್ಯರನ್ನಾಗಿ ಮಾಡುವ ಆಜ್ಞೆಗೆ ವಿಧೇಯರಾಗಬೇಕು. ಆದರೂ, ಇಂದು ನಾವು ಯಾರೊಂದಿಗೆ ಬೈಬಲ್ ಅಭ್ಯಾಸ ಮಾಡುತ್ತೇವೋ ಅವರು, ಐಥಿಯೋಪ್ಯ ದೇಶದ ಕಂಚುಕಿಯು ಮಾಡಿದಂತಹ ರೀತಿಯ ತೀವ್ರಗತಿಯ ಆತ್ಮಿಕ ಪ್ರಗತಿಯನ್ನು ಮಾಡುವುದಿಲ್ಲ ಎಂಬುದು ಒಪ್ಪತಕ್ಕದ್ದೇ. ಯಾಕೆಂದರೆ ಆ ಕಂಚುಕಿಯು ಯೆಹೂದಿ ಮತಾಂತರಿಯಾಗಿದ್ದರಿಂದ ಅವನಿಗೆ ಶಾಸ್ತ್ರವಚನಗಳ ಪರಿಚಯವಿತ್ತು ಹಾಗೂ ಆತ್ಮಿಕ ವಿಷಯಗಳನ್ನು ಸ್ವೀಕರಿಸುವ ಮನೋಭಾವವಿತ್ತು. ಯೇಸುವೇ ವಾಗ್ದತ್ತ ಮೆಸ್ಸೀಯನಾಗಿದ್ದನು ಎಂಬುದನ್ನು ಅವನು ಅಂಗೀಕರಿಸಬೇಕಿತ್ತಷ್ಟೇ. ನಾವು ಯಾರೊಂದಿಗೆ ಬೈಬಲ್ ಅಭ್ಯಾಸ ಮಾಡುತ್ತೇವೋ ಅವರಿಗೆ ಬೈಬಲಿನ ಬಗ್ಗೆ ಮುಂಚೆಯೇ ಗೊತ್ತಿಲ್ಲದಿರುವಲ್ಲಿ, ಸುಳ್ಳು ಧಾರ್ಮಿಕ ಬೋಧನೆಗಳಿಂದ ಅವರು ತಪ್ಪುದಾರಿ ಹಿಡಿದಿರುವಲ್ಲಿ, ಅಥವಾ ಬಗೆಹರಿಸಲು ಕಷ್ಟಕರವಾಗಿರುವ ವೈಯಕ್ತಿಕ ಸಮಸ್ಯೆಗಳ ಗೊಂದಲದಲ್ಲಿ ಸಿಕ್ಕಿಕೊಂಡು ಕಷ್ಟಪಡುತ್ತಿರುವಲ್ಲಿ, ಅವರೊಂದಿಗೆ ಅಭ್ಯಾಸ ಮಾಡುವುದು ಒಂದು ಪಂಥಾಹ್ವಾನವಾಗಿರುತ್ತದೆ. ಸಮರ್ಪಣೆ ಮತ್ತು ದೀಕ್ಷಾಸ್ನಾನದ ಹೆಜ್ಜೆಯನ್ನು ತೆಗೆದುಕೊಳ್ಳುವಂತೆ ಬೈಬಲ್ ವಿದ್ಯಾರ್ಥಿಗಳಿಗೆ ಸಹಾಯ ಮಾಡುವುದರಲ್ಲಿ ನಾವು ಹೇಗೆ ಸಫಲರಾಗುವೆವು?
3 ಬೈಬಲ್ ವಿದ್ಯಾರ್ಥಿಯ ಆತ್ಮಿಕ ಆವಶ್ಯಕತೆಗಳನ್ನು ವಿವೇಚಿಸಿ ತಿಳಿದುಕೊಳ್ಳಿರಿ: ಬೈಬಲ್ ಅಭ್ಯಾಸಕ್ಕಾಗಿ ನಾವು ಅಪೇಕ್ಷಿಸು ಬ್ರೋಷರ್ ಅಥವಾ ಜ್ಞಾನ ಪುಸ್ತಕವನ್ನು ಉಪಯೋಗಿಸಬಹುದು. ಈ ಪ್ರಕಾಶನಗಳಲ್ಲಿ ಎಷ್ಟು ಸಮಯದ ತನಕ ಅಭ್ಯಾಸ ಮಾಡಬಹುದು ಎಂಬುದರ ಬಗ್ಗೆ ಆಗಸ್ಟ್ 1998ರ ನಮ್ಮ ರಾಜ್ಯದ ಸೇವೆಯ ಪುರವಣಿಯು ಚರ್ಚಿಸಿತ್ತು. ಅದು ಈ ಸಲಹೆಯನ್ನು ನೀಡಿತ್ತು: “ವಿದ್ಯಾರ್ಥಿಯ ಸಂದರ್ಭಗಳು ಮತ್ತು ಸ್ವಾಭಾವಿಕ ಕೌಶಲಕ್ಕನುಸಾರ ಅಭ್ಯಾಸದ ಗತಿಯನ್ನು ಗೊತ್ತುಮಾಡುವುದು ಆವಶ್ಯಕ. . . . ಕೇವಲ ಪುಸ್ತಕವನ್ನು ಬೇಗನೆ ಮುಗಿಸಲಿಕ್ಕೋಸ್ಕರ, ವಿದ್ಯಾರ್ಥಿಯು ನಿಷ್ಕೃಷ್ಟ ಜ್ಞಾನದಿಂದ ವಂಚಿತನಾಗುವಂತಹ ರೀತಿಯಲ್ಲಿ ನಾವು ಅಭ್ಯಾಸಿಸಲು ಬಯಸುವುದಿಲ್ಲ. ಪ್ರತಿಯೊಬ್ಬ ವಿದ್ಯಾರ್ಥಿಗೆ, ದೇವರ ವಾಕ್ಯದಲ್ಲಿನ ಅವನ ಹೊಸ ನಂಬಿಕೆಗೆ ಒಂದು ದೃಢವಾದ ಆಧಾರದ ಅಗತ್ಯವಿದೆ.” ಆದುದರಿಂದ, ಜ್ಞಾನ ಪುಸ್ತಕವನ್ನು ಆರು ತಿಂಗಳುಗಳಲ್ಲೇ ಮುಗಿಸುವ ಉದ್ದೇಶದಿಂದ ಅದರ ಅಭ್ಯಾಸವನ್ನು ಅವರಸ ಅವಸರವಾಗಿ ಮಾಡಲು ಪ್ರಯತ್ನಿಸುವುದು ಒಳ್ಳೇದಲ್ಲ. ಕೆಲವು ವ್ಯಕ್ತಿಗಳಿಗೆ ದೀಕ್ಷಾಸ್ನಾನದ ಹಂತಕ್ಕೆ ಮುಟ್ಟುವಷ್ಟು ಪ್ರಗತಿಯನ್ನು ಮಾಡಲು ಆರು ತಿಂಗಳುಗಳಿಗಿಂತಲೂ ಹೆಚ್ಚು ಸಮಯ ಬೇಕಾಗಬಹುದು. ಪ್ರತಿವಾರ ನೀವು ಅಭ್ಯಾಸ ಮಾಡುತ್ತಿರುವಾಗ, ದೇವರ ವಾಕ್ಯದಿಂದ ನಿಮ್ಮ ವಿದ್ಯಾರ್ಥಿಯು ಏನನ್ನು ಕಲಿಯುತ್ತಿದ್ದಾನೋ ಅದನ್ನು ಅರ್ಥಮಾಡಿಕೊಳ್ಳುವಂತೆ ಮತ್ತು ಅಂಗೀಕರಿಸುವಂತೆ ಅವನಿಗೆ ಸಹಾಯ ಮಾಡಲು ಅಗತ್ಯವಿರುವಷ್ಟು ಸಮಯವನ್ನು ವ್ಯಯಿಸಿರಿ. ಕೆಲವರು ಜ್ಞಾನ ಪುಸ್ತಕದಲ್ಲಿರುವ ಒಂದು ಅಧ್ಯಾಯವನ್ನು ಅಭ್ಯಾಸಿಸಲು ಎರಡು ಅಥವಾ ಮೂರು ವಾರಗಳನ್ನು ತೆಗೆದುಕೊಳ್ಳಬಹುದು. ಹೀಗೆ ಮಾಡುವಾಗ ಆ ಅಧ್ಯಾಯಗಳಲ್ಲಿ ಕೊಡಲ್ಪಟ್ಟಿರುವ ಶಾಸ್ತ್ರವಚನಗಳನ್ನು ಓದಲು ಮತ್ತು ಅದರ ಬಗ್ಗೆ ಹೆಚ್ಚಿನ ವಿಷಯಗಳನ್ನು ತಿಳಿಸಲು ಸಾಕಷ್ಟು ಸಮಯವು ಸಿಗುವುದು.—ರೋಮಾ. 12:2.
4 ನೀವು ವಿದ್ಯಾರ್ಥಿಯೊಂದಿಗೆ ಜ್ಞಾನ ಪುಸ್ತಕವನ್ನು ಸಂಪೂರ್ಣವಾಗಿ ಅಭ್ಯಾಸಿಸಿ ಮುಗಿಸುತ್ತೀರಿ ಎಂದಿಟ್ಟುಕೊಳ್ಳಿ. ಈ ಪುಸ್ತಕವನ್ನು ಮುಗಿಸಿದರೂ ಸತ್ಯದ ಕುರಿತು ವಿದ್ಯಾರ್ಥಿಗೆ ಅಷ್ಟೇನೂ ತಿಳುವಳಿಕೆಯಿಲ್ಲ ಎಂದು ನಿಮಗನಿಸುವಲ್ಲಿ ಆಗೇನು? ಅಥವಾ ಅವನು ಈಗಲೂ ಸತ್ಯಕ್ಕಾಗಿ ನಿಲುವನ್ನು ತೆಗೆದುಕೊಂಡು, ದೇವರಿಗೆ ತನ್ನನ್ನು ಸಮರ್ಪಿಸಿಕೊಳ್ಳುವ ನಿರ್ಧಾರಕ್ಕೆ ಬಂದಿಲ್ಲ ಎಂಬುದನ್ನು ನೀವು ಗ್ರಹಿಸುವಲ್ಲಿ ಆಗೇನು? (1 ಕೊರಿಂ. 14:20) ಜೀವಿತದ ಮಾರ್ಗದಲ್ಲಿ ನಡೆಯುವಂತೆ ಅವನನ್ನು ಮಾರ್ಗದರ್ಶಿಸಲಿಕ್ಕಾಗಿ ನೀವು ಇನ್ನೇನು ಮಾಡಸಾಧ್ಯವಿದೆ?—ಮತ್ತಾ. 7:14.
5 ಬೈಬಲ್ ವಿದ್ಯಾರ್ಥಿಯ ಆತ್ಮಿಕ ಆವಶ್ಯಕತೆಗಳನ್ನು ಪೂರೈಸಿರಿ: ಒಬ್ಬ ವ್ಯಕ್ತಿಯು ನಿಧಾನವಾಗಿ ಪ್ರಗತಿಯನ್ನು ಮಾಡುತ್ತಿದ್ದಾನೆ ಮತ್ತು ತಾನು ಕಲಿಯುತ್ತಿರುವ ವಿಷಯದ ಬಗ್ಗೆ ಗಣ್ಯತೆಯನ್ನು ಬೆಳೆಸಿಕೊಳ್ಳುತ್ತಿದ್ದಾನೆ ಎಂಬುದು ನಿಮಗೆ ಸ್ಪಷ್ಟವಾಗಿ ಕಂಡುಬರುತ್ತದೆ ಎಂದಿಟ್ಟುಕೊಳ್ಳಿ. ಆಗ ನೀವು ಅಪೇಕ್ಷಿಸು ಬ್ರೋಷರ್ ಮತ್ತು ಜ್ಞಾನ ಪುಸ್ತಕವನ್ನು ಅಭ್ಯಾಸಿಸಿದ ಬಳಿಕ ಇನ್ನೊಂದು ಪುಸ್ತಕವನ್ನು ಉಪಯೋಗಿಸಿ ಅಭ್ಯಾಸವನ್ನು ಮುಂದುವರಿಸಿರಿ. ಎಲ್ಲ ವಿದ್ಯಾರ್ಥಿಗಳೊಂದಿಗೆ ಹೀಗೆ ಅಭ್ಯಾಸಿಸಬೇಕೆಂದಿಲ್ಲ. ಆದರೆ ಯಾರೊಂದಿಗಾದರೂ ಅಭ್ಯಾಸ ಮಾಡುವ ಅಗತ್ಯವುಂಟಾಗುವಲ್ಲಿ, “ನಿನ್ನ ರಾಜ್ಯವು ಬರಲಿ” ಎಂಬ ಪುಸ್ತಕವನ್ನು ಉಪಯೋಗಿಸಿ ಅಭ್ಯಾಸವನ್ನು ಮುಂದುವರಿಸಿರಿ. ಸಭೆಯಲ್ಲಿ ಈ ಪುಸ್ತಕವು ದೊರಕದಿದ್ದಲ್ಲಿ, ಅನೇಕ ಪ್ರಚಾರಕರ ಬಳಿ ಈ ಪುಸ್ತಕಗಳ ವೈಯಕ್ತಿಕ ಪ್ರತಿಗಳಿವೆ ಮತ್ತು ನೀವು ಅವುಗಳನ್ನು ಉಪಯೋಗಿಸಬಹುದು. ಆದರೆ ಇದಕ್ಕೆ ಮೊದಲು ಅಪೇಕ್ಷಿಸು ಬ್ರೋಷರನ್ನು ಮತ್ತು ಜ್ಞಾನ ಪುಸ್ತಕವನ್ನು ಅಭ್ಯಾಸಿಸಬೇಕು. ಈಗ ನೀವು ಬೈಬಲ್ ವಿದ್ಯಾರ್ಥಿಯೊಂದಿಗೆ ಎರಡನೆಯ ಪುಸ್ತಕವನ್ನು ಅಭ್ಯಾಸಿಸುತ್ತಿದ್ದೀರಿ ಎಂದಿಟ್ಟುಕೊಳ್ಳಿ. ಈ ಮಧ್ಯೆ ಎರಡನೆಯ ಪುಸ್ತಕವನ್ನು ಪೂರ್ಣಗೊಳಿಸುವ ಮುಂಚೆಯೇ ಆ ವ್ಯಕ್ತಿಯು ದೀಕ್ಷಾಸ್ನಾನ ಪಡೆದುಕೊಂಡರೂ, ಆಗಲೂ ಬೈಬಲ್ ಅಭ್ಯಾಸ, ಪುನರ್ಭೇಟಿಗಳು, ಮತ್ತು ಅಭ್ಯಾಸವನ್ನು ಮುಂದುವರಿಸಲಿಕ್ಕಾಗಿ ವ್ಯಯಿಸಲ್ಪಟ್ಟ ಸಮಯವನ್ನು ಲೆಕ್ಕಹಾಕಿ, ಅದನ್ನು ವರದಿಸಬೇಕು.
6 ಯಾರು ಒಂದೇ ಒಂದು ಪುಸ್ತಕವನ್ನು ಅಭ್ಯಾಸಿಸಿದ್ದು, ಇತ್ತೀಚೆಗೆ ದೀಕ್ಷಾಸ್ನಾನ ಪಡೆದುಕೊಂಡಿದ್ದಾರೋ ಅವರಿಗೆ ಈಗ ಎರಡನೆಯ ಪುಸ್ತಕವನ್ನು ಅಭ್ಯಾಸಿಸಿ ಪುನಃ ಸಹಾಯವು ಕೊಡಲ್ಪಡಬೇಕೆಂಬುದು ಇದರ ಅರ್ಥವೋ? ಹಾಗಿರಬೇಕೆಂದೇನಿಲ್ಲ. ಆದರೂ, ಅವರು ಅಕ್ರಿಯ ಪ್ರಚಾರಕರಾಗಿ ಪರಿಣಮಿಸಿರಬಹುದು ಅಥವಾ ಸತ್ಯದಲ್ಲಿ ಪ್ರಗತಿಯನ್ನು ಮಾಡುತ್ತಿಲ್ಲದಿರಬಹುದು. ಮತ್ತು ಸತ್ಯವನ್ನು ತಮ್ಮ ಜೀವಿತದಲ್ಲಿ ಅನ್ವಯಿಸಿಕೊಳ್ಳಲಿಕ್ಕಾಗಿ ತಮಗೆ ವೈಯಕ್ತಿಕ ಸಹಾಯದ ಅಗತ್ಯವಿದೆ ಎಂದು ಅವರಿಗನಿಸಬಹುದು. ದೀಕ್ಷಾಸ್ನಾನ ಪಡೆದುಕೊಂಡಿರುವ ಒಬ್ಬ ಪ್ರಚಾರಕನೊಂದಿಗೆ ಬೈಬಲ್ ಅಭ್ಯಾಸವನ್ನು ಪುನಃ ಆರಂಭಿಸುವುದಕ್ಕೆ ಮುಂಚೆ ಸೇವಾ ಮೇಲ್ವಿಚಾರಕರ ಬಳಿ ಮಾತಾಡುವುದು ಒಳ್ಳೇದು. ಆದರೆ, ಈ ಮುಂಚೆ ಜ್ಞಾನ ಪುಸ್ತಕವನ್ನು ಅಭ್ಯಾಸಿಸಿರುವುದಾದರೂ, ಸಮರ್ಪಣೆ ಮತ್ತು ದೀಕ್ಷಾಸ್ನಾನ ಹಂತದ ವರೆಗೆ ಪ್ರಗತಿಯನ್ನು ಮಾಡದಿರುವಂತಹ ವ್ಯಕ್ತಿಗಳು ನಿಮಗೆ ಗೊತ್ತಿರಬಹುದು. ಈಗ, ಅವರು ಪುನಃ ತಮ್ಮ ಬೈಬಲ್ ಅಭ್ಯಾಸವನ್ನು ಮುಂದುವರಿಸಲು ಇಷ್ಟಪಡುತ್ತಾರೋ ಇಲ್ಲವೋ ಎಂಬುದು ತಿಳಿದುಕೊಳ್ಳಲು ನೀವೇ ಅವರ ಬಳಿಗೆ ಹೋಗಿ ಕೇಳಬಹುದು.
7 ನಾವು ಯಾರೊಂದಿಗೆ ಅಭ್ಯಾಸ ಮಾಡುತ್ತಿದ್ದೇವೋ ಆ ಆಸಕ್ತ ಜನರಿಗೆ ತುಂಬ ನಿಕಟವಾದ, ವೈಯಕ್ತಿಕ ಗಮನವನ್ನು ಕೊಡುವುದು ಕ್ರೈಸ್ತ ಪ್ರೀತಿಯ ಒಂದು ಗುರುತಾಗಿದೆ. ದೇವರ ವಾಕ್ಯದ ಸತ್ಯದ ಬಗ್ಗೆ ಇನ್ನೂ ಹೆಚ್ಚಿನ ಒಳನೋಟವನ್ನು ಪಡೆದುಕೊಳ್ಳುವಂತೆ ವಿದ್ಯಾರ್ಥಿಗೆ ಸಹಾಯ ಮಾಡುವುದೇ ನಮ್ಮ ಉದ್ದೇಶವಾಗಿದೆ. ಆಮೇಲೆ ಆ ವಿದ್ಯಾರ್ಥಿಯು ಸತ್ಯಕ್ಕೋಸ್ಕರ ನಿಶ್ಚಿತವಾದ ಹಾಗೂ ತಿಳುವಳಿಕೆಯಿಂದ ಕೂಡಿದ ನಿಲುವನ್ನು ತೆಗೆದುಕೊಳ್ಳಸಾಧ್ಯವಿದೆ. ಅಷ್ಟುಮಾತ್ರವಲ್ಲದೆ, ತನ್ನ ಜೀವಿತವನ್ನು ಯೆಹೋವನಿಗೆ ಸಮರ್ಪಿಸಿಕೊಂಡು, ಆ ಸಮರ್ಪಣೆಯನ್ನು ನೀರಿನ ದೀಕ್ಷಾಸ್ನಾನದ ಮೂಲಕ ವ್ಯಕ್ತಪಡಿಸಸಾಧ್ಯವಿದೆ.—ಕೀರ್ತ. 40:8; ಎಫೆ. 3:17-19.
8 ಐಥಿಯೋಪ್ಯ ದೇಶದ ಕಂಚುಕಿಯು ದೀಕ್ಷಾಸ್ನಾನ ಪಡೆದುಕೊಂಡ ಬಳಿಕ ಏನು ನಡೆಯಿತು ಎಂಬುದು ನಿಮಗೆ ನೆನಪಿದೆಯೊ? ಯೇಸು ಕ್ರಿಸ್ತನ ಹೊಸ ಶಿಷ್ಯನೋಪಾದಿ ಅವನು ‘ಸಂತೋಷವುಳ್ಳವನಾಗಿ ತನ್ನ ದಾರಿಯನ್ನು ಹಿಡಿದುಹೋದನು.’ (ಅ. ಕೃ. 8:39, 40) ನಾವು ಮತ್ತು ನಾವು ಯಾರನ್ನು ಸತ್ಯದ ಮಾರ್ಗದಲ್ಲಿ ಸಫಲದಾಯಕವಾಗಿ ಮಾರ್ಗದರ್ಶಿಸುತ್ತೇವೋ ಅವರು, ಈಗ ಮತ್ತು ಸದಾಕಾಲಕ್ಕೂ ಯೆಹೋವ ದೇವರ ಸೇವೆಮಾಡುವುದರಲ್ಲಿ ಇನ್ನೂ ಹೆಚ್ಚಿನ ಸಂತೋಷವನ್ನು ಕಂಡುಕೊಳ್ಳುವಂತಾಗಲಿ!