ಬೇರೆಯವರನ್ನು ಒಡಂಬಡಿಸುವ ವಿಧ
1 ಅಪೊಸ್ತಲ ಪೌಲನು ಒಬ್ಬ ಒಡಂಬಡಿಸುವ ಶುಶ್ರೂಷಕನೆಂಬ ಸತ್ಕೀರ್ತಿಯನ್ನು ಸಂಪಾದಿಸಿದ್ದನು. (ಅ. ಕೃ. 19:26) ರಾಜ ಅಗ್ರಿಪ್ಪನು ಕೂಡ ಅವನಿಗೆ ಹೀಗೆ ಹೇಳಿದನು: “ಅಲ್ಪಪ್ರಯತ್ನದಿಂದ ನನ್ನನ್ನು ಕ್ರೈಸ್ತನಾಗುವದಕ್ಕೆ ಒಡಂಬಡಿಸುತ್ತೀಯಾ?” (ಅ. ಕೃ. 26:28) ಪೌಲನ ಶುಶ್ರೂಷೆಯು ಇಷ್ಟು ಒಡಂಬಡಿಸುವಂಥ ರೀತಿಯದ್ದಾಗಿ ಪರಿಣಮಿಸಿದ್ದು ಹೇಗೆ? ಅವನು ಶಾಸ್ತ್ರವಚನಗಳಿಂದ ನ್ಯಾಯಬದ್ಧವಾಗಿ ತರ್ಕಿಸುತ್ತಿದ್ದನು ಮತ್ತು ಅವನು ತನ್ನ ವಾದವಿವಾದಗಳನ್ನು ತನ್ನ ಕೇಳುಗರಿಗನುಸಾರ ಸರಿಹೊಂದಿಸುತ್ತಿದ್ದನು.—ಅ. ಕೃ. 28:23.
2 ಪೌಲನನ್ನು ಅನುಕರಿಸುತ್ತಾ ನಾವೂ ನಮ್ಮ ಶುಶ್ರೂಷೆಯಲ್ಲಿ ಒಡಂಬಡಿಸುವವರಾಗಿರಬೇಕು. ಹೇಗೆ? ಬೇರೆಯವರೊಂದಿಗೆ ಮಾತಾಡುತ್ತಿರುವಾಗ ಮತ್ತು ಅವರು ಮಾತಾಡುತ್ತಿರುವಾಗ ನಾವು ಕಿವಿಗೊಡುತ್ತಿರುವ ಸಮಯದಲ್ಲಿ ಒಳನೋಟವನ್ನು ಉಪಯೋಗಿಸುವುದರ ಮೂಲಕವೇ. (ಜ್ಞಾನೋ. 16:23, NW) ಇದನ್ನು ಸಾಧಿಸಲು ಮೂರು ಮುಖ್ಯ ಹೆಜ್ಜೆಗಳು ಸಹಾಯಮಾಡುವವು.
3 ಜಾಗರೂಕತೆಯಿಂದ ಕಿವಿಗೊಡಿ: ಇನ್ನೊಬ್ಬ ವ್ಯಕ್ತಿಯು ಮಾತಾಡುತ್ತಿರುವಾಗ ಗಮನಕೊಟ್ಟು ಕೇಳಿ. ಆಗ ನೀವು ಚರ್ಚೆಯನ್ನು ಮುಂದುವರಿಸಲಿಕ್ಕಾಗಿ ಒಂದು ಸಾಮಾನ್ಯ ವಿಷಯವನ್ನು ಕಂಡುಹಿಡಿಯಬಹುದು. ಅವನು ಒಂದು ಆಕ್ಷೇಪಣೆಯನ್ನು ಎತ್ತುವುದಾದರೆ, ಅದರ ಹಿಂದೆ ಇರುವ ತರ್ಕವನ್ನು ಗ್ರಹಿಸಲು ಪ್ರಯತ್ನಿಸಿ. ನಿರ್ದಿಷ್ಟವಾಗಿ ಅವನು ಏನನ್ನು ನಂಬುತ್ತಾನೆ, ಅದನ್ನು ಯಾಕೆ ನಂಬುತ್ತಾನೆ ಮತ್ತು ಹಾಗೆ ಮಾಡಲು ಅವನನ್ನು ಯಾವುದು ಮನವೊಪ್ಪಿಸಿತು ಎಂಬ ವಿಷಯಗಳನ್ನು ತಿಳಿದುಕೊಳ್ಳುವುದರಿಂದಲೂ ಸಹಾಯ ಸಿಗಬಹುದು. (ಜ್ಞಾನೋ. 18:13) ಆದುದರಿಂದ ಜಾಣ್ಮೆಯಿಂದ ಅವನನ್ನು ಮಾತಾಡುವಂತೆ ಪ್ರೇರೇಪಿಸಿರಿ.
4 ಪ್ರಶ್ನೆಗಳನ್ನು ಕೇಳಿರಿ: ಒಬ್ಬ ವ್ಯಕ್ತಿಯು ತ್ರಯೈಕ್ಯದಲ್ಲಿ ನಂಬಿಕೆಯನ್ನು ವ್ಯಕ್ತಪಡಿಸುವುದಾದರೆ ನೀವು ಹೀಗೆ ಕೇಳಬಹುದು: “ನೀವು ಮೊದಲಿನಿಂದಲೂ ತ್ರಯೈಕ್ಯವನ್ನು ನಂಬುತ್ತಿದ್ದೀರೋ?” ಮುಂದುವರಿಸುತ್ತಾ, “ಈ ವಿಷಯದ ಕುರಿತು ಬೈಬಲ್ ಏನು ಹೇಳುತ್ತದೆಂಬುದನ್ನು ನೀವು ಎಂದಾದರೂ ಸಂಪೂರ್ಣವಾಗಿ ಅಭ್ಯಾಸಮಾಡಿ ನೋಡಿದ್ದೀರೋ?” ನೀವು ಹೀಗೂ ಕೇಳಬಹುದು: “ದೇವರು ತ್ರಯೈಕ್ಯದ ಭಾಗವಾಗಿದ್ದಿದ್ದರೆ ಅದನ್ನು ಬೈಬಲ್ ಸ್ಪಷ್ಟವಾಗಿ ತಿಳಿಸುತ್ತಿತ್ತು ಅಲ್ಲವೋ?” ಆ ವ್ಯಕ್ತಿಯು ಕೊಡುವ ಉತ್ತರಗಳು, ನೀವು ಶಾಸ್ತ್ರವಚನಗಳ ಆಧಾರದ ಮೇಲೆ ಅವನೊಂದಿಗೆ ತರ್ಕಿಸುವಂತೆ ಸಹಾಯಮಾಡುವವು.
5 ಸಮಂಜಸವಾದ ತರ್ಕವನ್ನು ಮಾಡಿರಿ: ಯೇಸುವೇ ದೇವರೆಂದು ನಂಬುತ್ತಿದ್ದ ಒಂದು ಮಹಿಳೆಯನ್ನು ಒಬ್ಬ ಸಾಕ್ಷಿಯು ಹೀಗೆ ಕೇಳಿದರು: ‘ಎರಡು ವ್ಯಕ್ತಿಗಳು ಸರಿಸಮಾನರಾಗಿದ್ದಾರೆಂಬುದನ್ನು ದೃಷ್ಟಾಂತಿಸಲು ನೀವು ಪ್ರಯತ್ನಿಸುವುದಾದರೆ, ಕುಟುಂಬದ ಯಾವ ಸಂಬಂಧಗಳನ್ನು ನೀವು ಉಪಯೋಗಿಸಿ ಹೇಳಬಹುದು?’ ಅವಳು ಉತ್ತರಿಸಿದ್ದು: “ಎರಡು ಸಹೋದರರ ಸಂಬಂಧವನ್ನು ಉಪಯೋಗಿಸುವೆ.” ಅದಕ್ಕೆ ಆ ಸಾಕ್ಷಿ ಕೂಡಿಸಿ ಹೇಳಿದ್ದು: “ಬಹುಶಃ ತದ್ರೂಪವಾದ ಅವಳಿಜವಳಿಗಳನ್ನು ಸಹ ಉಪಯೋಗಿಸಬಹುದು. ಆದರೆ ದೇವರನ್ನು ತಂದೆ ಎಂದು ಹಾಗೂ ತನ್ನನ್ನು ಮಗ ಎಂದು ಬೋಧಿಸುತ್ತಿದ್ದ ಯೇಸು ಯಾವ ವಿಚಾರವನ್ನು ತಿಳಿಸುತ್ತಾ ಇದ್ದನು?” ಒಬ್ಬನು ಇನ್ನೊಬ್ಬನಿಗಿಂತ ದೊಡ್ಡವನಾಗಿದ್ದು, ಹೆಚ್ಚು ಅಧಿಕಾರವುಳ್ಳವನಾಗಿದ್ದಾನೆ ಎಂಬ ವಿಷಯವನ್ನು ಆ ಮಹಿಳೆ ಗ್ರಹಿಸಿಕೊಂಡಳು. (ಮತ್ತಾ. 20:23; ಯೋಹಾ. 14:28; 20:17) ಒಡಂಬಡಿಸುವ ಕಲೆಯಿಂದಾಗಿ ಆ ಮಹಿಳೆಯ ಮನಸ್ಸು ಹಾಗೂ ಹೃದಯವನ್ನು ಸ್ಪರ್ಶಿಸಲು ಸಾಧ್ಯವಾಯಿತು.
6 ನಮ್ಮ ನಿರೂಪಣೆಯು ಎಷ್ಟೇ ತರ್ಕಬದ್ಧವಾಗಿಯೂ ನಿಷ್ಕೃಷ್ಟವಾಗಿಯೂ ಇರಲಿ, ಸತ್ಯಕ್ಕೆ ಎಲ್ಲರೂ ಕಿವಿಗೊಡುವುದಿಲ್ಲ ನಿಜ. ಆದರೂ ಪೌಲನಂತೆಯೇ, ಶ್ರದ್ಧೆಯಿಂದ ನಮ್ಮ ಟೆರಿಟೊರಿಯಲ್ಲಿರುವ ಸಹೃದಯದ ಜನರನ್ನು ಕಂಡುಹಿಡಿದು, ಅವರು ರಾಜ್ಯದ ಸಂದೇಶವನ್ನು ಸ್ವೀಕರಿಸುವಂತೆ ಒಡಂಬಡಿಸೋಣ.—ಅ. ಕೃ. 19:8.